ನೆಬೂಕದ್ನೆಚ್ಚರನು ಬಾಬಿಲೋನನ್ನು ಭವ್ಯವಾಗಿ ಮರಳಿ ಕಟ್ಟಿಸಿದನು. ನೀಲಿ ಮೆರುಗಿನ ಇಟ್ಟಿಗೆಗಳಿಂದ ಮತ್ತು ಗೂಳಿಗಳ ಹಾಗೂ ಡ್ರ್ಯಾಗನ್ಗಳ ಸಾಲುಗಳಿಂದ ಹೊದಿಸಿದ ಅದರ ಇಷ್ಟಾರ್ ದ್ವಾರವನ್ನು ಉತ್ಖನನದಲ್ಲಿ ಸಿಕ್ಕ ತುಂಡುಗಳಿಂದ ಬರ್ಲಿನ್ನಲ್ಲಿ ಮತ್ತೆ ಕಟ್ಟಲಾಗಿದೆ.
ವಿಶ್ವಕೋಶ › ಅದೇ ಸಮಯದಲ್ಲಿ ಜಗತ್ತಿನಲ್ಲಿ
ಬೈಬಲಿನಲ್ಲಿ · ಕ್ರಿ.ಪೂ. 587/586 · ಯೆರೂಸಲೇಮ್
ಯೆರೂಸಲೇಮಿನ ಪತನ
ನೆಬೂಕದ್ನೆಚ್ಚರನ ಬಾಬಿಲೋನಿನ ಸೈನ್ಯವು ಯೆರೂಸಲೇಮನ್ನು ಭೇದಿಸಿ ಒಳನುಗ್ಗಿ, ದೇವಾಲಯವನ್ನು ಸುಟ್ಟು, ಜನರನ್ನು ಸೆರೆಗೆ ಒಯ್ಯುತ್ತದೆ.
ಚಿದ್ಕೀಯನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹತ್ತನೆಯ ದಿನದಲ್ಲಿ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಸರ್ವಸೈನ್ಯ ಸಹಿತನಾಗಿ ಯೆರೂಸಲೇಮಿಗೆ ಬಂದು, ಅಲ್ಲಿ ಪಾಳೆಯಮಾಡಿಕೊಂಡು ಅದರ ಸುತ್ತಲೂ ಮಣ್ಣಿನ ದಿಬ್ಬವನ್ನು ಮಾಡಿದನು. ಅವನು ಅರಸನಾದ ಚಿದ್ಕೀಯನ ಆಳ್ವಿಕೆಯ ಹನ್ನೊಂದನೆ ವರ್ಷದವರೆಗೆ ಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಘೋರಕ್ಷಾಮದ ದೆಸೆಯಿಂದ ಪಟ್ಟಣದಲ್ಲಿರುವವರಿಗೆ ಆಹಾರ ಸಿಕ್ಕದೇ ಹೋಯಿತು. ಪಟ್ಟಣಕ್ಕೆ ಮುತ್ತಿಗೆ ಹಾಕಿದ್ದ ಕಸ್ದೀಯರು ಅದೇ ವರ್ಷದ ನಾಲ್ಕನೆಯ ತಿಂಗಳಿನ ಒಂಭತ್ತನೆಯ ದಿನ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದ್ದರಿಂದ ಒಳಗಿದ್ದ ಅರಸನೂ ಅವನ ಎಲ್ಲಾ ಸೈನಿಕರೂ ಅದೇ ರಾತ್ರಿಯಲ್ಲಿ ಅರಸನ ತೋಟದ ಗೋಡೆಯ ಬಳಿಯಲ್ಲಿರುವ ಬಾಗಿಲಿನಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯದಲ್ಲಿತ್ತು. ಅರಸನು ಅರಾಬಾ ಎಂಬ ತಗ್ಗಾದ ಪ್ರದೇಶದ ಮಾರ್ಗವಾಗಿ ಓಡಿಹೋದನು. ಕಸ್ದೀಯರ ಸೈನ್ಯದವರು ಅರಸನಾದ ಚಿದ್ಕೀಯನನ್ನು ಹಿಂದಟ್ಟಿ ಯೆರಿಕೋವಿನ ಬಯಲಿನಲ್ಲಿ ಅವನನ್ನು ಹಿಡಿದರು. ಅಷ್ಟರಲ್ಲಿ ಅವನ ಎಲ್ಲಾ ಸೈನಿಕರು ಅವನನ್ನು ಬಿಟ್ಟು ಚದರಿ ಹೋಗಿದ್ದರು. ಅನಂತರ ಕಸ್ದೀಯರು ಬಾಬೆಲಿನ ಅರಸನನ್ನು ಹಿಡಿದು ರಿಬ್ಲದಲ್ಲಿದ್ದ ತಮ್ಮ ಅರಸನ ಬಳಿಗೆ ತೆಗೆದುಕೊಂಡು ಬಂದು ಅವನಿಗೆ ಶಿಕ್ಷೆಯನ್ನು ವಿಧಿಸಿದರು. ಚಿದ್ಕೀಯನ ಇಬ್ಬರು ಮಕ್ಕಳನ್ನು ಅವನ ಎದುರಿನಲ್ಲಿಯೇ ಕೊಂದುಹಾಕಿದರಲ್ಲದೆ ಅವನಿಗೆ ಬೇಡಿಹಾಕಿ, ಅವನ ಎರಡು ಕಣ್ಣುಗಳನ್ನು ಕಿತ್ತು ಬಾಬಿಲೋನಿಗೆ ತೆಗೆದುಕೊಂಡು ಹೋದರು. ಐದನೆಯ ತಿಂಗಳಿನ ಏಳನೆಯ ದಿನದಲ್ಲಿ ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ ಬಾಬೆಲಿನ ಅರಸನ ಸೇವಕನೂ, ಕಾವಲುದಂಡಿನ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬುವವನು ಯೆರೂಸಲೇಮಿಗೆ ಬಂದನು. ಅವನು ಯೆಹೋವನ ಆಲಯವನ್ನೂ, ಅರಸನ ಅರಮನೆಯನ್ನೂ ಯೆರೂಸಲೇಮಿನ ಎಲ್ಲಾ ದೊಡ್ಡ ಮನೆಗಳನ್ನೂ ಹಾಗೂ ಪಟ್ಟಣದ ಮುಖ್ಯ ಕಟ್ಟಡಗಳನ್ನೂ ಸುಟ್ಟುಬಿಟ್ಟನು. ಅವನ ಜೊತೆಯಲ್ಲಿ ಬಂದಿದ್ದ ಕಸ್ದೀಯರ ಸೈನ್ಯದವರು ಯೆರೂಸಲೇಮಿನ ಸುತ್ತುಗೋಡೆಗಳನ್ನು ಕೆಡವಿದರು. ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಪಟ್ಟಣದಲ್ಲಿ ಉಳಿದವರನ್ನೂ ಮೊದಲೇ ಬಾಬೆಲಿನ ಅರಸನ ಮರೆಹೊಕ್ಕವರನ್ನೂ ಒಟ್ಟಾರೆ ಎಲ್ಲಾ ಜನರನ್ನು ಸೆರೆಹಿಡಿದೊಯ್ದನು. ಹೊಲಗಳನ್ನೂ, ದ್ರಾಕ್ಷಿ ತೋಟಗಳನ್ನೂ, ವ್ಯವಸಾಯಮಾಡುವುದಕ್ಕಾಗಿ ದೇಶದ ಜನರಲ್ಲಿ ಕೇವಲ ಬಡವರನ್ನು ಮಾತ್ರ ಬಿಟ್ಟುಹೋದನು. ಕಸ್ದೀಯರು ಯೆಹೋವನ ಆಲಯದಲ್ಲಿದ್ದ ತಾಮ್ರದ ಕಂಬಗಳನ್ನು, ಪೀಠಗಳನ್ನೂ, ಕಡಲಿನ ಆಕಾರದ ಪಾತ್ರೆಯನ್ನೂ ಒಡೆದು ಅವುಗಳ ತಾಮ್ರವನ್ನೂ ಬಾಬಿಲೋನಿಗೆ ತೆಗೆದುಕೊಂಡು ಹೋದರು. ದೇವಾಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಧೂಪಾರತಿ ಮೊದಲಾದ ತಾಮ್ರದ ಸಾಮಾನುಗಳನ್ನೂ ತೆಗೆದುಕೊಂಡು ಹೋದರು. ಕಾವಲುದಂಡಿನ ಅಧಿಪತಿಯು ಬೆಳ್ಳಿಬಂಗಾರದ ಅಗ್ಗಿಷ್ಟಿಕೆ, ಬಟ್ಟಲು ಮೊದಲಾದವುಗಳನ್ನು ತೆಗೆದುಕೊಂಡನು. ಸೊಲೊಮೋನನು ಯೆಹೋವನ ಆಲಯಕ್ಕಾಗಿ ಮಾಡಿಸಿದ ಎರಡು ಕಂಬಗಳು, ಕಡಲೆನಿಸಿಕೊಂಡ ಪಾತ್ರೆಯು, ಪೀಠಗಳು, ಇವುಗಳಿಗೆ ಲೆಕ್ಕವಿಲ್ಲದಷ್ಟು ತಾಮ್ರವನ್ನು ಬಳಸಲಾಗಿತ್ತು. ಪ್ರತಿಯೊಂದು ಕಂಬವು ಹದಿನೆಂಟು ಮೊಳ ಎತ್ತರವಿತ್ತು. ಪ್ರತಿಯೊಂದರ ಮೇಲೆ ಮೂರು ಮೊಳ ಎತ್ತರವಾದ ಒಂದು ತಾಮ್ರದ ಕುಂಭವಿತ್ತು. ಆ ಕುಂಭಗಳ ಮೇಲೆ ಸುತ್ತಲೂ ತಾಮ್ರದ ಜಾಲರಿಯೂ ದಾಳಿಂಬೆ ಹಣ್ಣುಗಳೂ ಇದ್ದವು. ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡು ಹೋಗಿದ್ದ ಜನರಲ್ಲಿ ಮಹಾಯಾಜಕನಾದ ಸೆರಾಯನು, ಎರಡನೆಯ ಯಾಜಕನಾದ ಚೆಫನ್ಯನು ಮೂರು ಮಂದಿ ದ್ವಾರಪಾಲಕರು, ಸೈನ್ಯ ಸಂಬಂಧವಾದ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದ್ದ ಕಂಚುಕಿ, ಪಟ್ಟಣದಲ್ಲಿ ಉಳಿದಿದ್ದ ಅರಸನಿಗೆ ಆಪ್ತರಾಗಿದ್ದ ಐದು ಮಂದಿ ಮಂತ್ರಿಗಳು, ಯುದ್ಧಕ್ಕೆ ಹೋಗತಕ್ಕವರ ಪಟ್ಟಿಯನ್ನು ಮಾಡುವ ಸೇನಾಧಿಪತಿಯ ಲೇಖಕನು, ಪಟ್ಟಣದಲ್ಲಿದ್ದ ಅರುವತ್ತು ಮಂದಿ ಜನರೂ ಇದ್ದರು. ನಂತರ ನೆಬೂಜರದಾನನು, ಇವರನ್ನೆಲ್ಲಾ ಹಿಡಿದುಕೊಂಡು ಹೋಗಿ ಹಮಾತ್ ಪ್ರದೇಶದ ರಿಬ್ಲದಲ್ಲಿದ್ದ ಬಾಬೆಲಿನ ಅರಸನಿಗೆ ಒಪ್ಪಿಸಲು, ಬಾಬೆಲಿನ ಅರಸನು ಹಮಾತ್ ಪ್ರದೇಶದ ಅವರನ್ನು ಕತ್ತಿಯಿಂದ ರಿಬ್ಲದಲ್ಲಿ ಕೊಲ್ಲಿಸಿದನು. ಹೀಗೆ ಯೆಹೂದ್ಯರು ಸೆರೆಯವರಾಗಿ ತಮ್ಮ ದೇಶವನ್ನು ಬಿಟ್ಟು ಹೋಗಬೇಕಾಯಿತು.ಅದೇ ಸಮಯದಲ್ಲಿ ಜಗತ್ತಿನಲ್ಲಿ
ಬಾಬಿಲೋನಿನ ನೆಬೂಕದ್ನೆಚ್ಚರನು ಕ್ರಿ.ಪೂ. 597ರಲ್ಲಿ ಯೆರೂಸಲೇಮನ್ನು ವಶಪಡಿಸಿಕೊಂಡು ಕ್ರಿ.ಪೂ. 587 ಅಥವಾ 586ರಲ್ಲಿ ಅದನ್ನು ನಾಶಮಾಡಿದನು (ಮೂಲಗಳು ಎರಡಕ್ಕೂ ಅವಕಾಶ ಕೊಡುತ್ತವೆ). ಬಾಬಿಲೋನಿನ ಒಂದು ವೃತ್ತಾಂತ ಫಲಕವು ಮೊದಲ ವಶಪಡಿಸಿಕೊಳ್ಳುವಿಕೆಯ ದಿನವನ್ನೂ ಕೊಡುತ್ತದೆ: ಅದಾರ್ ತಿಂಗಳ 2ನೇ ದಿನ, ಅಂದರೆ ಕ್ರಿ.ಪೂ. 597ರ ಮಾರ್ಚ್ ಮಧ್ಯಭಾಗ. ಆ ವರ್ಷಗಳ ಜಗತ್ತು ಇಲ್ಲಿದೆ.
ಮಿಲೇತದ ತತ್ತ್ವಜ್ಞಾನಿ ಥೇಲ್ಸ್ ಒಂದು ಸೂರ್ಯಗ್ರಹಣವನ್ನು ಮುಂತಿಳಿಸಿದನು ಮತ್ತು ಆ ಗ್ರಹಣ ಲಿಡಿಯನ್ನರು ಹಾಗೂ ಮೇದ್ಯರ ನಡುವಿನ ಯುದ್ಧವನ್ನು ನಿಲ್ಲಿಸಿತು ಎಂದು ಹೆರೊಡೋಟಸ್ ಹೇಳುತ್ತಾನೆ; ಖಗೋಳಶಾಸ್ತ್ರಜ್ಞರು ಅದನ್ನು ಕ್ರಿ.ಪೂ. 585ರ ಮೇ 28 ಎಂದು ನಿರ್ಧರಿಸುತ್ತಾರೆ. ಥೇಲ್ಸ್ ನಿಜವಾಗಿಯೂ ಅದನ್ನು ಮುಂತಿಳಿಸಿದನೋ ಎಂಬುದರ ಬಗ್ಗೆ ಚರ್ಚೆಯಿದೆ.
ಇಂದಿನ ಪಶ್ಚಿಮ ಟರ್ಕಿಯಲ್ಲಿದ್ದ ಲಿಡಿಯಾದಲ್ಲಿ ಮೊದಲ ನಾಣ್ಯಗಳನ್ನು ಚಿನ್ನ ಮತ್ತು ಬೆಳ್ಳಿಯ ಸ್ವಾಭಾವಿಕ ಮಿಶ್ರಣವಾದ ಎಲೆಕ್ಟ್ರಮ್ನಿಂದ ಟಂಕಿಸಿ, ಅವುಗಳ ಮೇಲೆ ಸಿಂಹದ ತಲೆಯ ಮುದ್ರೆ ಒತ್ತಲಾಯಿತು. ಅದಕ್ಕೂ ಮೊದಲು ಬೆಳ್ಳಿಯನ್ನು ತೂಗಿ ಕೊಡಲಾಗುತ್ತಿತ್ತು — “ತೂಕ” ಎಂಬರ್ಥದ ಶೆಕೆಲ್ ಎಂಬ ಪದವೇ ಇದನ್ನು ನೆನಪಿಸುತ್ತದೆ.
ಮೆಗಿದ್ದೋವಿನಲ್ಲಿ ಅರಸನಾದ ಯೋಷೀಯನನ್ನು ಕೊಂದ ಫರೋಹ ಎರಡನೆಯ ನೆಕೋ (2 ಅರಸುಗಳು 23:29) ನೈಲ್ ನದಿಯಿಂದ ಕೆಂಪುಸಮುದ್ರದವರೆಗೆ ಒಂದು ಕಾಲುವೆಯನ್ನು ಆರಂಭಿಸಿದನು. ಅವನು ಕಳುಹಿಸಿದ ನಾವಿಕರು ಆಫ್ರಿಕವನ್ನು ಸುತ್ತಿ ಬಂದರು ಎಂದು ಹೆರೊಡೋಟಸ್ ವರದಿಮಾಡುತ್ತಾನೆ.
ಮಿಲೇತದ ಗ್ರೀಕರು ಕಪ್ಪು ಸಮುದ್ರದ ಉತ್ತರ ತೀರದಲ್ಲಿ ವ್ಯಾಪಾರ ಪಟ್ಟಣಗಳನ್ನು ಸ್ಥಾಪಿಸಿದರು: ಸುಮಾರು ಕ್ರಿ.ಪೂ. 600ರಲ್ಲಿ ಕ್ರಿಮಿಯಾದ ಇಂದಿನ ಕೆರ್ಚ್ ಆದ ಪಾಂಟಿಕಾಪಿಯಮ್, ಮತ್ತು ಇಂದಿನ ಯುಕ್ರೇನಿನಲ್ಲಿ ದಕ್ಷಿಣ ಬುಗ್ ನದಿಯ ಮುಖದ ಬಳಿ ಓಲ್ಬಿಯಾ. ಅವರು ಧಾನ್ಯ ಮತ್ತು ಮೀನಿಗೆ ಬದಲಾಗಿ ದ್ರಾಕ್ಷಾರಸ ಮತ್ತು ಆಲಿವ್ ಎಣ್ಣೆಯನ್ನು ವ್ಯಾಪಾರ ಮಾಡುತ್ತಿದ್ದರು.
ಉತ್ತರ ಭಾರತದಲ್ಲಿ ಗಂಗಾ ನದಿ ಮತ್ತು ಅದರ ಉಪನದಿಗಳ ಮೇಲಿನ ಹೊಸ ಪಟ್ಟಣಗಳ ಸುತ್ತ ಹದಿನಾರು ರಾಜ್ಯಗಳು ಮತ್ತು ಗಣರಾಜ್ಯಗಳು — ಮಹಾಜನಪದಗಳು — ಬೆಳೆದವು. ಅವುಗಳಲ್ಲಿ ಒಂದಾದ ಮಗಧವು ನಂತರ ಭಾರತದ ಮೊದಲ ಮಹಾ ಸಾಮ್ರಾಜ್ಯಗಳ ಕೇಂದ್ರವಾಯಿತು.
ಮೂಲಗಳು: Theographic Bible Metadata, CC BY-SA 4.0 · OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು