ಅಶ್ಶೂರದ ಕೊನೆಯ ಮಹಾ ಅರಸನಾದ ಅಶುರ್ಬಾನಿಪಾಲ್ ನಿನೆವೆಯಲ್ಲಿ ಹತ್ತಾರು ಸಾವಿರ ಮಣ್ಣಿನ ಫಲಕಗಳನ್ನು ಸಂಗ್ರಹಿಸಿದನು; ಅವುಗಳಲ್ಲಿ ಪ್ರಳಯದ ಕಥೆಯಿರುವ ಗಿಲ್ಗಮೆಷ್ ಮಹಾಕಾವ್ಯವೂ ಇದೆ. ಕ್ರಿ.ಪೂ. 612ರಲ್ಲಿ ಪಟ್ಟಣ ಸುಟ್ಟುಹೋದಾಗ ಅವು ಮಣ್ಣಿನಲ್ಲಿ ಹೂತುಹೋಗಿ ಉಳಿದು, 1800ರ ದಶಕದ ಮಧ್ಯದಲ್ಲಿ ಅಗೆದು ತೆಗೆಯಲ್ಪಟ್ಟವು.
ವಿಶ್ವಕೋಶ › ಅದೇ ಸಮಯದಲ್ಲಿ ಜಗತ್ತಿನಲ್ಲಿ
ಬೈಬಲಿನಲ್ಲಿ · ಸುಮಾರು ಕ್ರಿ.ಪೂ. 622 · ಯೆರೂಸಲೇಮ್
ಯೋಷೀಯನ ಸುಧಾರಣೆ
ದೇವಾಲಯದಲ್ಲಿ ಧರ್ಮಶಾಸ್ತ್ರದ ಗ್ರಂಥವು ದೊರೆತ ನಂತರ, ಅರಸನಾದ ಯೋಷೀಯನು ಅದನ್ನು ಜನರಿಗೆ ಓದಿಹೇಳಿ ಯೆಹೂದದಿಂದ ವಿಗ್ರಹಗಳನ್ನು ತೆಗೆದುಹಾಕುತ್ತಾನೆ.
ಅನಂತರ ಅರಸನು ದೂತರ ಮುಖಾಂತರವಾಗಿ ಯೆರೂಸಲೇಮಿನ ಮತ್ತು ಯೆಹೂದ ಪ್ರಾಂತ್ಯಗಳಲ್ಲಿರುವ ಎಲ್ಲಾ ಊರುಗಳ ಹಿರಿಯರನ್ನು ತನ್ನ ಬಳಿಗೆ ಕರೆಯಿಸಿದನು. ಅರಸನು ಯೆರೂಸಲೇಮಿನವರನ್ನೂ, ಎಲ್ಲಾ ಯೆಹೂದ್ಯರನ್ನೂ, ಯಾಜಕರನ್ನೂ, ಪ್ರವಾದಿಗಳನ್ನೂ ಕರೆದುಕೊಂಡು ಯೆಹೋವನ ಆಲಯಕ್ಕೆ ಹೋದನು. ಚಿಕ್ಕವರು ಮೊದಲುಗೊಂಡು ದೊಡ್ಡವರವರೆಗೆ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಯೆಹೋವನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ನಿಬಂಧನ ಗ್ರಂಥವನ್ನು ಸಂಪೂರ್ಣವಾಗಿ ಓದಿಸಿದನು. ಅರಸನು ಕಂಬದ ಬಳಿಯಲ್ಲಿ ನಿಂತು, ತಾನು ಯೆಹೋವನ ಮಾರ್ಗದಲ್ಲಿ ನಡೆಯುವುದಾಗಿಯೂ, ಆತನ ಆಜ್ಞಾನಿಯಮ, ವಿಧಿಗಳನ್ನು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ, ಕೈಕೊಳ್ಳುವುದಾಗಿಯೂ ಆ ಒಡಂಬಡಿಕೆಯ ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಯೆಹೋವನಿಗೆ ಎಲ್ಲಾ ಜನರ ಎದುರು ಪ್ರಮಾಣ ಮಾಡಿದನು. ತರುವಾಯ ಅರಸನು ಮಹಾಯಾಜಕನಾದ ಹಿಲ್ಕೀಯನಿಗೆ, ಅವನ ಕೈಕೆಳಗಿರುವ ಯಾಜಕರ ಮತ್ತು ದ್ವಾರಪಾಲಕರ ಮುಖಾಂತರವಾಗಿ ಬಾಳ್, ಅಶೇರ್ ಎಂಬ ದೇವತೆಗಳಿಗಾಗಿಯೂ, ಆಕಾಶಸೈನ್ಯಗಳಿಗಾಗಿಯೂ, ಉಪಯೋಗಿಸುತ್ತಿದ್ದ ಎಲ್ಲಾ ಸಾಮಾನುಗಳನ್ನು ಯೆಹೋವನ ಆಲಯದಿಂದ ತರಿಸಿ ಯೆರೂಸಲೇಮಿನ ಹೊರಗಿರುವ ಕಿದ್ರೋನ್ ಬಯಲಿನಲ್ಲಿ ಅವುಗಳನ್ನು ಸುಟ್ಟು ಬೂದಿಯನ್ನು ಬೇತೇಲಿಗೆ ಕಳುಹಿಸಿದನು. ಇದಲ್ಲದೆ, ಯೆಹೂದ ಪ್ರಾಂತ್ಯದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಸುತ್ತಣ ಪ್ರದೇಶಗಳಲ್ಲಿಯೂ ಇದ್ದ ಪೂಜಾಸ್ಥಳಗಳ ವಿಗ್ರಹಗಳಿಗೂ, ಬಾಳನಿಗೂ, ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳು ಎನಿಸಿಕೊಳ್ಳುವ ಆಕಾಶಸೈನ್ಯಕ್ಕೂ, ಧೂಪಹಾಕುವುದಕ್ಕಾಗಿ ಯೆಹೂದ ರಾಜರಿಂದ ನೇಮಿಸಲ್ಪಟ್ಟ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು. ಯೆಹೋವನ ಆಲಯದಲ್ಲಿದ್ದ ಅಶೇರ್ ವಿಗ್ರಹಸ್ತಂಭವನ್ನು ತರಿಸಿ ಯೆರೂಸಲೇಮಿನ ಹೊರಗಿರುವ ಕಿದ್ರೋನ್ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅದನ್ನು ಸುಟ್ಟು ಪುಡಿಪುಡಿ ಮಾಡಿಸಿ ಆ ಪುಡಿಯನ್ನು ಸಾಮಾನ್ಯ ಜನರ ಸ್ಮಶಾನದಲ್ಲಿ ಹಾಕಿಬಿಟ್ಟನು. ಯೆಹೋವನ ಆಲಯದ ಪ್ರಾಕಾರದೊಳಗಿದ್ದ ದೇವದಾಸ, ವೇಶ್ಯವೃತ್ತಿಯವರ ಮನೆಗಳನ್ನು ಕೆಡವಿಹಾಕಿಸಿದನು. ಆ ಮನೆಗಳಲ್ಲಿ ಸ್ತ್ರೀಯರು ಅಶೇರ್ ದೇವತೆಗಳಿಗಾಗಿ ಗುಡಾರದ ಬಟ್ಟೆಗಳನ್ನು ನೇಯುತ್ತಿದ್ದರು. ಅನಂತರ ಗೆಬದಿಂದ ಬೇರ್ಷೆಬದವರೆಗಿರುವ ಯೆಹೂದ ಪಟ್ಟಣಗಳ ಎಲ್ಲಾ ಯಾಜಕರನ್ನು ಕರೆಯಿಸಿಕೊಂಡು ಅವರು ಧೂಪಹಾಕುತ್ತಿದ್ದ ಪೂಜಾಸ್ಥಳಗಳನ್ನು ನಾಶಮಾಡಿಸಿದನು. ಪುರಾಧಿಕಾರಿಯಾದ ಯೆಹೋಶುವನ ಬಾಗಿಲಿನ ಎಡಗಡೆಯಲ್ಲಿದ್ದ ದ್ವಾರಗಳ ದೇವತೆಯ ಪೂಜಾಸ್ಥಳಗಳನ್ನು ಕೆಡವಿ ಹಾಕಿಸಿದನು. ಪೂಜಾಸ್ಥಳಗಳಿಂದ ಬಂದ ಯಾಜಕರಿಗೆ ಇತರ ಯಾಜಕರೊಡನೆ ಹುಳಿಯಿಲ್ಲದ ರೊಟ್ಟಿಗಳಲ್ಲಿ ಪಾಲುಸಿಕ್ಕಿದರೂ, ಅವರಿಗೆ ಯೆರೂಸಲೇಮಿನಲ್ಲಿದ್ದ ಯೆಹೋವನ ಯಜ್ಞವೇದಿಯ ಸಮೀಪಕ್ಕೆ ಹೋಗುವುದಕ್ಕೆ ಅಪ್ಪಣೆಯಿರಲಿಲ್ಲ. ತಮ್ಮ ಗಂಡುಹೆಣ್ಣು ಮಕ್ಕಳನ್ನು ಮೋಲೆಕನಿಗೋಸ್ಕರ ಆಹುತಿ ಕೊಡದಂತೆ ಬೆನ್ ಹಿನ್ನೋಮ್ ತಗ್ಗಿನಲ್ಲಿದ್ದ “ತೋಫೆತ್” ಎಂಬ ಯಜ್ಞವೇದಿಯ ಸ್ಥಳವನ್ನು ಹೊಲೆಮಾಡಿದನು. ಯೆಹೂದ ರಾಜರು ಸೂರ್ಯದೇವತೆಗೋಸ್ಕರ ಪ್ರತಿಷ್ಠಿಸಿದ ಕುದುರೆಗಳನ್ನು ತೆಗೆದುಹಾಕಿ ರಥಗಳನ್ನು ಸುಟ್ಟುಬಿಟ್ಟನು. ಅವು ಯೆಹೋವನ ಆಲಯದ ಹೆಬ್ಬಾಗಿಲಿನ ಹೊರಗೆ “ಪರ್ವರೀಮ್” ಎಂಬ ಸ್ಥಳದಲ್ಲಿ ಕಂಚುಕಿಯಾದ ನಾತಾನ್ ಮೆಲೆಕನ ಕೋಣೆಯ ಹತ್ತಿರ ಇಡಲ್ಪಟ್ಟಿದ್ದವು. ಇದಲ್ಲದೆ, ಯೆಹೂದ್ಯರ ಅರಸರು ದೇವಸ್ಥಾನದ ಮಾಳಿಗೆಯ ಮೇಲೆ ಆಹಾಜನ ಉಪ್ಪರಿಗೆಯ ಹತ್ತಿರ ಕಟ್ಟಿಸಿದ್ದ ಯಜ್ಞವೇದಿಗಳನ್ನೂ, ಮನಸ್ಸೆಯು ಯೆಹೋವನ ಆಲಯದ ಎರಡು ಪ್ರಾಕಾರಗಳಲ್ಲಿ ಕಟ್ಟಿಸಿದ ಯಜ್ಞವೇದಿಗಳನ್ನೂ ಕೆಡವಿ ಪುಡಿಪುಡಿ ಮಾಡಿ ಅವುಗಳ ಧೂಳನ್ನು ಕಿದ್ರೋನ್ ಹಳ್ಳದಲ್ಲಿ ಹಾಕಿಸಿದನು. ಇಸ್ರಾಯೇಲರ ಅರಸನಾದ ಸೊಲೊಮೋನನು ಚೀದೋನ್ಯರ ಅಷ್ಟೋರೆತ್ ದೇವತೆ, ಮೋವಾಬ್ಯರ ಕೆಮೋಷ್, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹಗಳಿಗಾಗಿ ಯೆರೂಸಲೇಮಿನ ಎದುರಿನಲ್ಲಿಯೂ, ವಿಘ್ನಪರ್ವತದ ದಕ್ಷಿಣದಿಕ್ಕಿನಲ್ಲಿಯೂ ಸ್ಥಾಪಿಸಿದ್ದ ಪೂಜಾಸ್ಥಳಗಳನ್ನು ಅರಸನು ಹೊಲೆ ಮಾಡಿದನು. ಕಲ್ಲು ಕಂಬಗಳನ್ನು ಒಡೆದುಹಾಕಿ ಅಶೇರ ವಿಗ್ರಹ ಸ್ತಂಭಗಳನ್ನು ಕಡಿದುಬಿಟ್ಟು ಅವುಗಳಲ್ಲಿದ್ದ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು. ಇದಲ್ಲದೆ, ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನು ಬೇತೇಲಿನಲ್ಲಿ ನಿರ್ಮಿಸಿದ್ದ ಪೂಜಾಸ್ಥಳವನ್ನೂ, ಅದರಲ್ಲಿದ್ದ ಯಜ್ಞವೇದಿಯನ್ನೂ ಕೆಡವಿಬಿಟ್ಟನು. ಪೂಜಾಸ್ಥಳವನ್ನೂ ಅದರಲ್ಲಿದ್ದ ಅಶೇರ ವಿಗ್ರಹಸ್ತಂಭವನ್ನೂ ಸುಟ್ಟು ಬೂದಿಮಾಡಿನು. ಯೋಷೀಯನು ಹಿಂದಿರುಗಿ ನೋಡಿದಾಗ ಅಲ್ಲಿನ ಗುಡ್ಡಗಳಲ್ಲಿ ಸಮಾಧಿಗಳನ್ನು ಕಂಡು, ಅವುಗಳಲ್ಲಿದ್ದ ಎಲುಬುಗಳನ್ನು ತರಿಸಿ ಆ ಯಜ್ಞವೇದಿಯ ಮೇಲೆ ಸುಟ್ಟು ಅವುಗಳನ್ನು ನಾಶಮಾಡಿದನು. ಹೀಗೆ ದೇವರ ಮನುಷ್ಯನೊಬ್ಬನು ಪ್ರಕಟಿಸಿದ ಯೆಹೋವನ ವಾಕ್ಯವು ನೆರವೇರಿತು. ಇದಲ್ಲದೆ, ಅವನು ಒಂದು ಸಮಾಧಿಶಿಲೆಯನ್ನು ಕಂಡು, ಅದು ಏನು? ಎಂದು ವಿಚಾರಿಸಲು ಆ ಊರಿನವರು, “ನೀನು ಈಗ ಬೇತೇಲಿನ ಯಜ್ಞವೇದಿಗೆ ಮಾಡಿದ್ದನ್ನು ಮುಂತಿಳಿಸಿದ ಯೆಹೂದ ದೇಶದವನಾದ ದೇವರ ಮನುಷ್ಯನ ಸಮಾಧಿ” ಎಂದು ಉತ್ತರಕೊಟ್ಟರು. ಆಗ ಯೋಷೀಯನು, “ಬಿಡಿರಿ, ಆ ಮನುಷ್ಯನ ಎಲುಬುಗಳನ್ನು ಯಾರೂ ಮುಟ್ಟಬಾರದು” ಎಂದು ಹೇಳಿದನು. ಆದುದರಿಂದ ಅವರು ಅವನ ಮತ್ತು ಸಮಾರ್ಯದೇಶದ ಪ್ರವಾದಿಯ ಎಲುಬುಗಳನ್ನು ಮುಟ್ಟಲಿಲ್ಲ. ಇಸ್ರಾಯೇಲ್ ರಾಜರು ಸಮಾರ್ಯದ ಪಟ್ಟಣಗಳಲ್ಲಿ ಪೂಜಾಸ್ಥಳಗಳನ್ನು ಗುಡಿಗಳನ್ನು ಕಟ್ಟಿಸಿ, ಯೆಹೋವನ ಕೋಪಕ್ಕೆ ಕಾರಣವಾದಂಥವುಗಳನ್ನು ಯೋಷೀಯನು ತೆಗೆದುಕೊಂಡು, ಬೇತೇಲಿನಲ್ಲಿ ನಾಶಮಾಡಿದ ಹಾಗೆ ಅವೆಲ್ಲವನ್ನು ನಾಶಮಾಡಿದನು. ಯೋಷೀಯನು ಅವುಗಳನ್ನು ಕೆಡವಿಬಿಟ್ಟು ಅವುಗಳ ಪೂಜಾರಿಗಳನ್ನು ಯಜ್ಞವೇದಿಯ ಮೇಲೆ ವಧಿಸಿ ಆ ಮನುಷ್ಯರ ಎಲುಬುಗಳನ್ನು ಸುಟ್ಟು ಯೆರೂಸಲೇಮಿಗೆ ಹಿಂದಿರುಗಿ ಹೋದನು. ಅನಂತರ ಅರಸನು ಎಲ್ಲಾ ಜನರಿಗೆ, “ಈ ಒಡಂಬಡಿಕೆಯ ಗ್ರಂಥದಲ್ಲಿ ಬರೆದಿರುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನಿಗಾಗಿ ಪಸ್ಕಹಬ್ಬವನ್ನು ಆಚರಿಸಬೇಕು” ಎಂದು ಆಜ್ಞಾಪಿಸಿದನು. ಇಂಥ ಪಸ್ಕಹಬ್ಬವು ಇಸ್ರಾಯೇಲರನ್ನು ಪಾಲಿಸಿದ ನ್ಯಾಯಸ್ಥಾಪಕರ ಕಾಲದಲ್ಲಾಗಲಿ, ಇಸ್ರಾಯೇಲರ ಮತ್ತು ಯೆಹೂದ್ಯರ ಅರಸರ ಕಾಲದಲ್ಲಾಗಲಿ ನಡೆಯಲೇ ಇಲ್ಲ. ಈ ಪಸ್ಕಹಬ್ಬವು ಅರಸನಾದ ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಯೆರೂಸಲೇಮಿನಲ್ಲಿ ಯೆಹೋವನಿಗಾಗಿ ಆಚರಿಸಲ್ಪಟ್ಟಿತು. ಇದಲ್ಲದೆ, ಯೋಷೀಯನು ಸತ್ತವರಲ್ಲಿ ವಿಚಾರಿಸುವವರನ್ನೂ, ಭೂತ ಪ್ರೇತ ಆರಾಧಕರನ್ನೂ, ಯೆರೂಸಲೇಮ್, ಯೆಹೂದ ಪ್ರಾಂತ್ಯ ಇವುಗಳಲ್ಲಿದ್ದ ಎಲ್ಲಾ ತೆರಾಫೀಮ್ ಎಂಬ ಬೊಂಬೆಗಳನ್ನೂ, ಮೂರ್ತಿಗಳನ್ನೂ ಎಲ್ಲಾ ಅಸಹ್ಯ ವಿಗ್ರಹಗಳನ್ನೂ ತೆಗೆದುಹಾಕಿ ಯಾಜಕನಾದ ಹಿಲ್ಕೀಯನಿಗೆ ಯೆಹೋವನ ಆಲಯದಲ್ಲಿ ಸಿಕ್ಕಿದ್ದ ಧರ್ಮೋಪದೇಶಗ್ರಂಥದಲ್ಲಿದ್ದ ಆಜ್ಞೆಗಳನ್ನು ನೆರವೇರಿಸಿದನು. ಯೆಹೋವನ ಕಡೆಗೆ ತಿರುಗಿಕೊಂಡು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣಬಲದಿಂದಲೂ ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಿದ ಯೋಷೀಯನಿಗೆ ಸಮಾನನಾದ ಅರಸನು ಹಿಂದಿನ ಕಾಲದಲ್ಲೂ ಆ ನಂತರದ ಕಾಲದಲ್ಲೂ ಇರಲಿಲ್ಲ.ಅದೇ ಸಮಯದಲ್ಲಿ ಜಗತ್ತಿನಲ್ಲಿ
ಅರಸನಾದ ಯೋಷೀಯನ ಹದಿನೆಂಟನೆಯ ವರ್ಷದಲ್ಲಿ, ಸುಮಾರು ಕ್ರಿ.ಪೂ. 622ರಲ್ಲಿ, ಯೆರೂಸಲೇಮಿನ ದೇವಾಲಯದಲ್ಲಿ ಧರ್ಮೋಪದೇಶಗ್ರಂಥವು ಸಿಕ್ಕಿತು (2 ಅರಸುಗಳು 22:8). ಅದೇ ವರ್ಷಗಳಲ್ಲಿ, ಮೂರು ಶತಮಾನಗಳ ಕಾಲ ಸಮೀಪ ಪೂರ್ವವನ್ನು ಆಳಿದ್ದ ಅಶ್ಶೂರವು ಒಡೆದುಹೋಗುತ್ತಿತ್ತು; ಅದರ ರಾಜಧಾನಿ ನಿನೆವೆ ಕ್ರಿ.ಪೂ. 612ರಲ್ಲಿ ಬಿದ್ದಿತು. ಕ್ರಿ.ಪೂ. 7ನೇ ಶತಮಾನದ ಉತ್ತರಾರ್ಧದ ಜಗತ್ತು ಇಲ್ಲಿದೆ.
ನಬೊಪೊಲಸ್ಸರನ ನೇತೃತ್ವದ ಬಾಬಿಲೋನಿಯರು ಮತ್ತು ಮೇದ್ಯರು ನಿನೆವೆಗೆ ಮುತ್ತಿಗೆ ಹಾಕಿ ಮೂರು ತಿಂಗಳ ನಂತರ ಅದನ್ನು ವಶಪಡಿಸಿಕೊಂಡರು. ಬಾಬಿಲೋನಿನ ಒಂದು ವೃತ್ತಾಂತ ಆ ವರ್ಷವನ್ನು ದಾಖಲಿಸುತ್ತದೆ; ಕೆಲವೇ ವರ್ಷಗಳಲ್ಲಿ ಅಶ್ಶೂರ್ಯ ಸಾಮ್ರಾಜ್ಯ ಇಲ್ಲವಾಯಿತು.
ಅಥೇನೆಯಲ್ಲಿ ಡ್ರೇಕೊ ಪಟ್ಟಣದ ಕಾನೂನುಗಳನ್ನು ಮೊದಲ ಬಾರಿಗೆ ಬರೆದಿಟ್ಟನು, ಇದರಿಂದ ನ್ಯಾಯಾಧೀಶರು ಇನ್ನು ಕೇವಲ ರೂಢಿಯ ಪ್ರಕಾರ ತೀರ್ಮಾನಿಸುವಂತಿರಲಿಲ್ಲ. ಅವು ಎಷ್ಟು ಕಠಿಣವಾಗಿದ್ದವೆಂದರೆ ಇಂಗ್ಲಿಷಿನಲ್ಲಿ draconian ಎಂಬ ಪದಕ್ಕೆ ಇಂದಿಗೂ “ಅತಿ ಕಠೋರ” ಎಂದರ್ಥ.
ಮುಖಜ ಭೂಮಿಯ ಸಾಯಿಸ್ನ ರಾಜಕುಮಾರನಾದ ಮೊದಲನೆಯ ಪ್ಸಾಮ್ಟಿಕ್ ಐಗುಪ್ತವನ್ನು ಅಶ್ಶೂರದ ಹಿಡಿತದಿಂದ ಬಿಡಿಸಿ ದೇಶವನ್ನು ಮತ್ತೆ ಒಂದುಗೂಡಿಸಿದನು. ಅವನು ಗ್ರೀಕ್ ಮತ್ತು ಕ್ಯಾರಿಯನ್ ಸೈನಿಕರನ್ನು ಕೂಲಿಗೆ ಇಟ್ಟುಕೊಂಡನು, ಮತ್ತು ಬೇಗನೆ ಗ್ರೀಕ್ ವ್ಯಾಪಾರಿಗಳು ನೈಲ್ನ ಒಂದು ಕವಲಿನ ಮೇಲಿದ್ದ ನೌಕ್ರಾಟಿಸ್ನಲ್ಲಿ ನೆಲೆಸತೊಡಗಿದರು.
ಚಿ ರಾಜ್ಯದ ಡ್ಯೂಕ್ ಹ್ವಾನ್, ತನ್ನ ಮಂತ್ರಿ ಗ್ವಾನ್ ಜೊಂಗ್ನ ಮಾರ್ಗದರ್ಶನದಲ್ಲಿ, ಚಿಯನ್ನು ಚೀನಾದ ಅತ್ಯಂತ ಬಲಿಷ್ಠ ರಾಜ್ಯವನ್ನಾಗಿ ಮಾಡಿ “ಅಧಿಪತಿ”ಗಳಲ್ಲಿ ಮೊದಲಿಗನಾದನು; ಈ ಅಧಿಪತಿಗಳು ದುರ್ಬಲ ಜೌ ಅರಸನ ಹೆಸರಿನಲ್ಲಿ ಪ್ರತಿಸ್ಪರ್ಧಿ ರಾಜ್ಯಗಳ ನಡುವೆ ಶಿಸ್ತನ್ನು ಕಾಪಾಡುತ್ತಿದ್ದರು.
ಡ್ನಿಪ್ರೊ ಮತ್ತು ದಕ್ಷಿಣ ಬುಗ್ ನದಿಗಳ ಮುಖದ ಬಳಿಯ ಸಣ್ಣ ಬೆರೆಝಾನ್ ದ್ವೀಪದಲ್ಲಿ ಮಿಲೇತದ ಗ್ರೀಕರು ಕಪ್ಪು ಸಮುದ್ರದ ಉತ್ತರ ಕರಾವಳಿಯ ಮೊದಲ ಗ್ರೀಕ್ ವಸಾಹತನ್ನು ಸ್ಥಾಪಿಸಿದರು.
ಮೂಲಗಳು: Theographic Bible Metadata, CC BY-SA 4.0 · OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು