ಮೊದಲನೆಯ ಜೆರ್ಕ್ಸೀಸ್ (ಕ್ರಿ.ಪೂ. 486–465) ಗ್ರೀಸ್ ಮೇಲೆ ದಾಳಿಮಾಡಿ ಕ್ರಿ.ಪೂ. 480ರಲ್ಲಿ ಸಲಾಮಿಸ್ನಲ್ಲಿ ತನ್ನ ನೌಕಾಪಡೆಯನ್ನು ಕಳೆದುಕೊಂಡನು. ಅವನ ಮಗನಾದ ಮೊದಲನೆಯ ಅರ್ತಷಸ್ತನೇ (ಕ್ರಿ.ಪೂ. 465–424) ನೆಹೆಮೀಯನು ಶೂಷನ್ನಲ್ಲಿ ಸೇವೆ ಮಾಡಿದ ಅರಸನು.
ವಿಶ್ವಕೋಶ › ಅದೇ ಸಮಯದಲ್ಲಿ ಜಗತ್ತಿನಲ್ಲಿ
ಬೈಬಲಿನಲ್ಲಿ · ಕ್ರಿ.ಪೂ. 445 · ಯೆರೂಸಲೇಮ್
ನೆಹೆಮೀಯನು ಮತ್ತು ಗೋಡೆಗಳು
ಪಾರಸಿಯ ಅರಸನ ಪಾನಸೇವಕನಾದ ನೆಹೆಮೀಯನು ಯೆರೂಸಲೇಮಿನ ಹಾಳಾದ ಗೋಡೆಗಳನ್ನು ರಾತ್ರಿಯಲ್ಲಿ ಪರಿಶೀಲಿಸಿ, ಅವುಗಳನ್ನು ಮತ್ತೆ ಕಟ್ಟುವುದರಲ್ಲಿ ಜನರನ್ನು ಮುನ್ನಡೆಸುತ್ತಾನೆ.
ಅನಂತರ ನಾನು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿನಗಳವರೆಗೂ ಇದ್ದೆನು. ಆಮೇಲೆ ಯೆರೂಸಲೇಮಿಗಾಗಿ ಮಾಡತಕ್ಕ ಕಾರ್ಯದ ವಿಷಯವಾಗಿ ನನ್ನ ದೇವರು ನನ್ನಲ್ಲಿ ಯಾವ ಆಲೋಚನೆಯನ್ನು ಹುಟ್ಟಿಸಿದ್ದಾನೆಂಬುದನ್ನು ಯಾರಿಗೂ ತಿಳಿಸದೆ, ರಾತ್ರಿಯಲ್ಲೆದ್ದು ಕೆಲವು ಜನರನ್ನು ಮಾತ್ರ ಕರೆದುಕೊಂಡು ಹೊರಟೆನು. ನನ್ನ ವಾಹನಪಶುವಿನ ಹೊರತು ಬೇರೆ ಯಾವ ಪಶುವೂ ನನ್ನೊಂದಿಗಿರಲಿಲ್ಲ. ನಾನು ರಾತ್ರಿವೇಳೆಯಲ್ಲಿ ತಗ್ಗಿನ ಬಾಗಿಲಿನಿಂದ ಹೊರಟು ಹಾಳುಬಿದ್ದ ಯೆರೂಸಲೇಮಿನ ಗೋಡೆಗಳನ್ನೂ ಬೆಂಕಿಯಿಂದ ಸುಡಲ್ಪಟ್ಟ ಅದರ ಬಾಗಿಲುಗಳನ್ನೂ ನೋಡುತ್ತಾ, ಹೆಬ್ಬಾವು ಬುಗ್ಗೆಯ ಮಾರ್ಗವಾಗಿ ತಿಪ್ಪೆಬಾಗಿಲಿಗೆ ಹೋದೆನು. ಅಲ್ಲಿಂದ ಬುಗ್ಗೆ ಬಾಗಿಲನ್ನು ಹಾದು ಅರಸನ ಕೊಳಕ್ಕೆ ಬಂದೆನು. ನನ್ನ ವಾಹನಪಶುವಿಗೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮಾರ್ಗವಿರಲಿಲ್ಲ. ಅದಕಾರಣ ನಾನು ರಾತ್ರಿಯಲ್ಲಿ ಹಳ್ಳದ ಬದಿಯ ಮಾರ್ಗವಾಗಿ ಹೋಗಿ ಗೋಡೆಯನ್ನು ಪರೀಕ್ಷಿಸಿದೆನು. ಆ ಮೇಲೆ ಪುನಃ ತಗ್ಗಿನ ಬಾಗಿಲಿನಿಂದ ಹಿಂತಿರುಗಿ ಮನೆಗೆ ಬಂದೆನು. ನಾನು ಆ ವರೆಗೆ ಯೆಹೂದ್ಯರಿಗೂ, ಯಾಜಕರಿಗೂ, ಶ್ರೀಮಂತರಿಗೂ, ಅಧಿಕಾರಿಗಳಿಗೂ ಕೆಲಸ ಮಾಡುವ ಇತರರಿಗೂ ಏನೂ ತಿಳಿಸದೆ ಇದ್ದುದರಿಂದ ನಾನು ಎಲ್ಲಿ ಹೋಗಿದ್ದೆನು, ಏನು ಮಾಡಿದೆನು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ನಾನು ಅವರಿಗೆ, “ನಮ್ಮ ದುರಾವಸ್ಥೆ ನಿಮ್ಮ ಕಣ್ಣ ಮುಂದಿರುತ್ತದಲ್ಲವೇ; ಯೆರೂಸಲೇಮ್ ಪಟ್ಟಣವು ಹಾಳು ಬಿದ್ದಿದೆ, ಅದರ ಬಾಗಿಲುಗಳು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ; ಬನ್ನಿರಿ, ಯೆರೂಸಲೇಮಿನ ಗೋಡೆಯನ್ನು ಕಟ್ಟೋಣ. ಹೀಗೆ ಮಾಡಿದರೆ ನಮ್ಮ ಮೇಲಣ ನಿಂದೆಯು ಅಳಿಸಿ ಹೋಗುವುದು” ಎಂದು ಹೇಳಿದೆನು. ಇದಲ್ಲದೆ, ನನ್ನ ದೇವರ ಕೃಪಾಹಸ್ತವು ನನ್ನನ್ನು ಪಾಲಿಸಿದ್ದನ್ನೂ, ಅರಸನು ನನಗೆ ಹೇಳಿದ್ದನ್ನೂ ಅವರಿಗೆ ವಿವರಿಸಿದೆನು. ಆಗ ಅವರು, “ಬನ್ನಿರಿ, ಕಟ್ಟೋಣ” ಎಂದು ಹೇಳಿ ಆ ಒಳ್ಳೇ ಕೆಲಸಕ್ಕೆ ಕೈಹಾಕಲು ಪರಸ್ಪರ ಧೈರ್ಯ ನೀಡಿದರು. ಹೋರೋನಿನವನಾದ ಸನ್ಬಲ್ಲಟನೂ, ಅಮ್ಮೋನ್ ದೇಶದವನಾದ ಟೋಬೀಯ ಎಂಬ ದಾಸನೂ, ಅರಬಿಯನಾದ ಗೆಷೆಮನೂ ಈ ವರ್ತಮಾನವನ್ನು ಕೇಳಿದಾಗ ಅವರು ನಮ್ಮನ್ನು ತಿರಸ್ಕರಿಸಿ ಗೇಲಿಮಾಡಿ, “ನೀವು ಇಲ್ಲಿ ಮಾಡುವುದೇನು? ಅರಸನಿಗೆ ವಿರುದ್ಧವಾಗಿ ತಿರುಗಿ ಬೀಳಬೇಕೆಂದಿದ್ದೀರೋ?” ಎಂದು ಕೇಳಿದರು. ನಾನು ಅವರಿಗೆ, “ಪರಲೋಕದ ದೇವರು ನಮಗೆ ಕಾರ್ಯವನ್ನು ಸಾಧಿಸಿಕೊಡುವನು. ಆದುದರಿಂದ ಆತನ ಸೇವಕರಾದ ನಾವು ಕಟ್ಟುವುದಕ್ಕೆ ಮನಸ್ಸುಮಾಡಿದ್ದೇವೆ. ನಿಮಗಾದರೋ ಯೆರೂಸಲೇಮಿನಲ್ಲಿ ಯಾವ ಪಾಲೂ, ಹಕ್ಕೂ, ಹೆಸರೂ, ಸ್ಮಾರಕವೂ ಇರುವುದಿಲ್ಲ” ಎಂದು ಉತ್ತರಕೊಟ್ಟೆನು.ಅದೇ ಸಮಯದಲ್ಲಿ ಜಗತ್ತಿನಲ್ಲಿ
ಪರ್ಷಿಯದ ಅರಸನಾದ ಮೊದಲನೆಯ ಅರ್ತಷಸ್ತನ ಪಾನದಾಯಕನಾಗಿದ್ದ ನೆಹೆಮೀಯನು ಕ್ರಿ.ಪೂ. 445ರಲ್ಲಿ ಯೆರೂಸಲೇಮಿಗೆ ಬಂದು ಅದರ ಗೋಡೆಗಳನ್ನು ಮತ್ತೆ ಕಟ್ಟಿದನು. ಒಂದು ತಲೆಮಾರಿನ ಮೊದಲು ಆಳಿದ ಎಸ್ತೇರಳ ಗ್ರಂಥದ ಅರಸನಾದ ಅಹಷ್ವೇರೋಷನನ್ನು ಸಾಮಾನ್ಯವಾಗಿ ಮೊದಲನೆಯ ಜೆರ್ಕ್ಸೀಸ್ ಎಂದು ಗುರುತಿಸಲಾಗುತ್ತದೆ. ಕ್ರಿ.ಪೂ. 5ನೇ ಶತಮಾನದ ಜಗತ್ತು ಇಲ್ಲಿದೆ.
ನೆಹೆಮೀಯನು ಯೆರೂಸಲೇಮಿನ ಗೋಡೆಗಳನ್ನು ಮತ್ತೆ ಕಟ್ಟುತ್ತಿದ್ದಾಗ, ಪೆರಿಕ್ಲೀಸ್ನ ಕಾಲದ ಅಥೇನೆ ತನ್ನ ಆಕ್ರೊಪೊಲಿಸ್ನ ಮೇಲೆ ಕ್ರಿ.ಪೂ. 447ರಲ್ಲಿ ಆರಂಭಿಸಿದ ಪಾರ್ಥಿನಾನ್ ಅನ್ನು ಕಟ್ಟುತ್ತಿತ್ತು.
ಗ್ರೀಕ್ ಇತಿಹಾಸಕಾರ ಹೆರೊಡೋಟಸ್ ತನ್ನ ‘ಇತಿಹಾಸಗಳು’ ಎಂಬ ಗ್ರಂಥವನ್ನು ಬರೆದನು — ಪಶ್ಚಿಮದ ಮೊದಲ ಮಹಾ ಇತಿಹಾಸ ಕೃತಿ. 4ನೇ ಪುಸ್ತಕದಲ್ಲಿ ಅವನು ಸಿಥಿಯರನ್ನು ಮತ್ತು ಬೊರಿಸ್ಥನೀಸ್ — ಅಂದರೆ ಡ್ನಿಪ್ರೊ — ನದಿಯನ್ನು ವರ್ಣಿಸುತ್ತಾನೆ; ನೈಲ್ ನಂತರದ ಅತ್ಯಂತ ಫಲವತ್ತಾದ ನದಿ ಅದು ಎನ್ನುತ್ತಾನೆ. ಅವನು ಬಹುಶಃ ಅದರ ಮುಖದ ಬಳಿಯ ಓಲ್ಬಿಯಾಕ್ಕೆ ಭೇಟಿಕೊಟ್ಟಿದ್ದನು.
ಅಸ್ವಾನ್ ಬಳಿಯ ಎಲಿಫೆಂಟೈನ್ ದ್ವೀಪದಲ್ಲಿ ಯೆಹೂದ್ಯ ಸೈನಿಕರು ಪರ್ಷಿಯರ ಸೇವೆಯಲ್ಲಿದ್ದರು ಮತ್ತು ಅವರಿಗೆ ತಮ್ಮದೇ ಆದ ದೇವಾಲಯವಿತ್ತು. ಕ್ರಿ.ಪೂ. 407ರ ಅವರ ಅರಾಮ್ಯ ಭಾಷೆಯ ಪತ್ರಗಳು ಸಮಾರ್ಯದ ದೇಶಾಧಿಪತಿಯಾದ ಸನ್ಬಲ್ಲಟನ ಮಕ್ಕಳನ್ನು ಉಲ್ಲೇಖಿಸುತ್ತವೆ — ಸನ್ಬಲ್ಲಟನು ನೆಹೆಮೀಯನ ವಿರೋಧಿ (ನೆಹೆಮೀಯನು 2:10).
ಚೀನಾದಲ್ಲಿ ಹಳೆಯ ವ್ಯವಸ್ಥೆ ಒಡೆದು ಏಳು ಪ್ರತಿಸ್ಪರ್ಧಿ ರಾಜ್ಯಗಳಾಯಿತು. ಈ ಕ್ಷೋಭೆಯ ಯುಗದಲ್ಲಿ “ನೂರು ಪಂಥಗಳ” ಚಿಂತಕರು — ಕನ್ಫ್ಯೂಷಿಯಸ್ನ, ಮೋಜಿಯ ಮತ್ತು ತಾವೋ ಬೋಧಕರ ಅನುಯಾಯಿಗಳು — ಹೇಗೆ ಬದುಕಬೇಕು ಮತ್ತು ಹೇಗೆ ಆಳಬೇಕು ಎಂಬುದನ್ನು ಚರ್ಚಿಸಿದರು.
ಮೂಲಗಳು: Theographic Bible Metadata, CC BY-SA 4.0 · OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು