ಅಶ್ಶೂರದ ಮೂರನೆಯ ಶಲ್ಮನೆಸೆರ್ ಸಿರಿಯಾದ ಓರೊಂಟೀಸ್ ನದಿಯ ಬಳಿಯ ಕರ್ಕರ್‌ನಲ್ಲಿ ಅರಸರ ಒಂದು ಮೈತ್ರಿಕೂಟದೊಂದಿಗೆ ಯುದ್ಧಮಾಡಿದನು. ಈಗ ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಕುರ್ಖ್ ಏಕಶಿಲಾಸ್ತಂಭದ ಮೇಲಿನ ಅವನ ಶಾಸನವು “ಇಸ್ರಾಯೇಲ್ಯನಾದ ಅಹಾಬ”ನನ್ನು 2,000 ರಥಗಳು ಮತ್ತು 10,000 ಸೈನಿಕರೊಂದಿಗೆ ಪಟ್ಟಿಮಾಡುತ್ತದೆ. ಶಲ್ಮನೆಸೆರ್ ವಿಜಯವನ್ನು ಸಾರಿದನು, ಆದರೆ ಅನೇಕ ವರ್ಷಗಳವರೆಗೆ ಮುಂದಕ್ಕೆ ಸಾಗಲಿಲ್ಲ.
ವಿಶ್ವಕೋಶ › ಅದೇ ಸಮಯದಲ್ಲಿ ಜಗತ್ತಿನಲ್ಲಿ
ಬೈಬಲಿನಲ್ಲಿ · ಸುಮಾರು ಕ್ರಿ.ಪೂ. 860 · ಕರ್ಮೆಲ್ ಬೆಟ್ಟ
ಕರ್ಮೆಲ್ ಬೆಟ್ಟದಲ್ಲಿ ಎಲೀಯನು
ಅರಸನಾದ ಅಹಾಬನ ದಿನಗಳಲ್ಲಿ, ಮೆಡಿಟರೇನಿಯನ್ ತೀರದ ಮೇಲಿರುವ ಕರ್ಮೆಲ್ ಬೆಟ್ಟದಲ್ಲಿ ಎಲೀಯನು ಬಾಳನ ಪ್ರವಾದಿಗಳಿಗೆ ಸವಾಲು ಹಾಕುತ್ತಾನೆ.
ಅಹಾಬನು ಇಸ್ರಾಯೇಲರನ್ನೂ ಎಲ್ಲಾ ಪ್ರವಾದಿಗಳನ್ನೂ ಅಲ್ಲಿಗೆ ಕರೆಯಿಸಿದನು. ಎಲೀಯನು ಎಲ್ಲಾ ಜನರ ಹತ್ತಿರ ಹೋಗಿ ಅವರಿಗೆ, “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ. ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿರುವುದನ್ನು ಕಂಡನು. ಮತ್ತು ಎಲೀಯನು ಅವರಿಗೆ, “ಯೆಹೋವನ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ, ಬಾಳನ ಪ್ರವಾದಿಗಳಲ್ಲಿ ನಾನೂರೈವತ್ತು ಜನರಿದ್ದಾರೆ. ಅವರು ಎರಡು ಹೋರಿಗಳನ್ನು ನಮ್ಮ ಬಳಿಗೆ ತರಲಿ ಅವುಗಳಲ್ಲಿ ಒಂದನ್ನು ಆರಿಸಿಕೊಂಡು ಕಡಿದು, ತುಂಡು ಮಾಡಿ, ಕಟ್ಟಿಗೆಯ ಮೇಲಿಡಲಿ. ಆದರೆ ಬೆಂಕಿಹೊತ್ತಿಸಬಾರದು. ನಾನೂ ಇನ್ನೊಂದನ್ನು ಹಾಗೆಯೇ ಮಾಡಿ ಬೆಂಕಿಹೊತ್ತಿಸದೆ ಕಟ್ಟಿಗೆಯ ಮೇಲಿಡುವೆನು ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ, ಅನಂತರ ನಾನು ಯೆಹೋವನ ಹೆಸರು ಹೇಳಿ ಪ್ರಾರ್ಥಿಸುವೆನು. ಆ ಇಬ್ಬರಲ್ಲಿ ಯಾವನು ಲಾಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ ದೇವರೆಂದೂ ನಿರ್ಣಯಿಸೋಣ” ಅಂದನು. ಎಲ್ಲಾ ಜನರು, “ಸರಿ ನೀನು ಹೇಳಿದಂತೆಯೇ ಆಗಲಿ” ಎಂದು ಉತ್ತರಕೊಟ್ಟರು. ಆಗ ಅವನು ಬಾಳನ ಪ್ರವಾದಿಗಳಿಗೆ, “ನೀವು ಹೆಚ್ಚು ಜನ ಇರುವುದರಿಂದ ಮೊದಲು ನೀವೇ ಒಂದು ಹೋರಿಯನ್ನು ಆರಿಸಿಕೊಂಡು ಅದನ್ನು ಸಿದ್ಧಪಡಿಸಿ, ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ. ಆದರೆ ಬೆಂಕಿಯನ್ನು ಹೊತ್ತಿಸಬಾರದು” ಅಂದನು. ಅವರು ತರಲ್ಪಟ್ಟ ಹೋರಿಗಳಲ್ಲಿ ಒಂದನ್ನು ತೆಗೆದುಕೊಂಡು ಸಿದ್ಧಪಡಿಸಿ, ತಮ್ಮ ದೇವರಾದ ಬಾಳನ ಹೆಸರು ಹೇಳಿ, “ಬಾಳನೇ ನಮಗೆ ಕಿವಿಗೊಡು” ಎಂದು ಹೊತ್ತಾರೆಯಿಂದ ಮಧ್ಯಾಹ್ನದವರೆಗೆ ಕೂಗಿದರೂ ಆಕಾಶವಾಣಿಯಾಗಲಿಲ್ಲ. ಅವರು ಯಜ್ಞವೇದಿಯ ಸುತ್ತಲೂ ಕುಣಿದಾಡಿದರೂ ಯಾರೂ ಉತ್ತರ ದಯಪಾಲಿಸಲಿಲ್ಲ. ಮಧ್ಯಾಹ್ನವಾದನಂತರ ಎಲೀಯನು ಅವರನ್ನು ಪರಿಹಾಸ್ಯ ಮಾಡಿ, “ಗಟ್ಟಿಯಾಗಿ ಕೂಗಿರಿ, ಅವನು ದೇವರಾಗಿರುತ್ತಾನಲ್ಲಾ. ಈಗ ಒಂದು ವೇಳೆ ಅವನು ಧ್ಯಾನದಲ್ಲಿರಬಹುದು, ಇಲ್ಲವೇ ಯಾವುದೋ ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಇರಬೇಕು. ಅದೂ ಇಲ್ಲದಿದ್ದರೆ ನಿದ್ರೆಮಾಡುತ್ತಿದ್ದಾನು, ಎಚ್ಚರವಾಗಬೇಕು” ಎಂದು ಹೇಳಿದನು. ಅವರು ಗಟ್ಟಿಯಾಗಿ ಕೂಗಿ ತಮ್ಮ ಪದ್ದತಿಯ ಪ್ರಕಾರ ಈಟಿ ಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡರು. ಮಧ್ಯಾಹ್ನದಿಂದ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಪರವಶರಾಗಿ ಕೂಗುತ್ತಾ ಇದ್ದರು. ಆದರೂ ಆಕಾಶವಾಣಿಯಾಗಲಿಲ್ಲ. ಯಾರೂ ಅವರಿಗೆ ಉತ್ತರಕೊಡಲಿಲ್ಲ ಅವರನ್ನು ಲಕ್ಷಿಸಲಿಲ್ಲ. ಅನಂತರ ಎಲೀಯನು ಎಲ್ಲಾ ಜನರನ್ನು ಹತ್ತಿರಕ್ಕೆ ಕರೆಯಲು ಅವರು ಬಂದರು. ಅವನು ಹಾಳಾಗಿದ್ದ ಅಲ್ಲಿ ಯೆಹೋವನ ಯಜ್ಞವೇದಿಯನ್ನು ತಿರುಗಿ ಕಟ್ಟಿಸಿದನು. ಯೆಹೋವನಿಂದ ಇಸ್ರಾಯೇಲನೆಂಬ ಹೆಸರು ಹೊಂದಿದ ಯಾಕೋಬನ ಮಕ್ಕಳಿಂದ ಉತ್ಪತ್ತಿಯಾದ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಯೆಹೋವನ ಹೆಸರಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸಿ, ಅದರ ಸುತ್ತಲೂ ಇಪ್ಪತ್ತು ಸೇರು ಬೀಜಬಿತ್ತುವಷ್ಟು ನೆಲವನ್ನು ಅಗೆಸಿ ಕಾಲುವೆ ಮಾಡಿಸಿದನು. ಇದಲ್ಲದೆ ಕಟ್ಟಿಗೆಯನ್ನು ಯಜ್ಞವೇದಿಯ ಮೇಲೆ ಕ್ರಮಪಡಿಸಿ, ಹೋರಿಯನ್ನು ವಧಿಸಿ ತುಂಡು ಮಾಡಿ ಅದರ ಮೇಲಿಟ್ಟನು. ಅನಂತರ ಜನರಿಗೆ, “ನಾಲ್ಕು ಕೊಡ ನೀರು ತಂದು ಯಜ್ಞಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಸುರಿಯಿರಿ” ಎಂದು ಆಜ್ಞಾಪಿಸಿದನು. ಅವರು ತೆಗೆದುಕೊಂಡು ಬರಲು, “ಇನ್ನೊಂದು ಸಾರಿ ತನ್ನಿರಿ” ಎಂದು ಹೇಳಿದನು. ತಿರುಗಿ ತಂದರು. ಅವನು ಮೂರನೆಯ ಸಾರಿ ಅದೇ ಪ್ರಕಾರವಾಗಿ ಆಜ್ಞಾಪಿಸಿಲು ಅವರು ಮತ್ತೊಮ್ಮೆ ತಂದು ಸುರಿದರು ನೀರು ಯಜ್ಞವೇದಿಯ ಸುತ್ತಲೂ ತುಂಬಿ ಹರಿಯಿತು. ಇದಲ್ಲದೆ ಅವನು ಕಾಲುವೆಯನ್ನು ನೀರಿನಿಂದ ತುಂಬಿಸಿದನು. ಸಂಧ್ಯಾನೈವೇದ್ಯದ ಹೊತ್ತಿಗೆ ಪ್ರವಾದಿಯಾದ ಎಲೀಯನು ಯಜ್ಞವೇದಿಯ ಹತ್ತಿರ ಬಂದು, “ಅಬ್ರಹಾಮ, ಇಸಾಕ ಇಸ್ರಾಯೇಲರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲರ ದೇವರಾಗಿರುತ್ತೀ ಎಂಬುದನ್ನೂ, ನಾನು ನಿನ್ನ ಸೇವಕನಾಗಿರುತ್ತೇನೆ ಎಂಬುದನ್ನೂ ಮತ್ತು ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನೂ ಈ ಹೊತ್ತು ತೋರಿಸಿಕೊಡು. ಕಿವಿಗೊಡು, ಯೆಹೋವನೇ ಕಿವಿಗೊಡು, ಯೆಹೋವನಾದ ನೀನೊಬ್ಬನೇ ದೇವರೂ! ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ನೀನೇ ಆಗಿರುತ್ತೀ ಎಂಬುದನ್ನು ಇವರಿಗೆ ತಿಳಿಯಪಡಿಸು” ಎಂದು ಪ್ರಾರ್ಥಿಸಿದನು. ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಮಾಂಸವನ್ನೂ, ಕಟ್ಟಿಗೆ, ಕಲ್ಲು ಮಣ್ಣುಗಳನ್ನೂ ದಹಿಸಿಬಿಟ್ಟು ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು. ಜನರೆಲ್ಲರೂ ಅದನ್ನು ಕಂಡು ಬೋರ್ಲಬಿದ್ದು, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು. ಆಗ ಎಲೀಯನು ಅವರಿಗೆ, “ಬಾಳನ ಪ್ರವಾದಿಗಳೆಲ್ಲರನ್ನು ಹಿಡಿಯಿರಿ. ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು” ಎಂದು ಆಜ್ಞಾಪಿಸಲು ಅವರು ಹಿಡಿದರು. ಅವನು ಅವರನ್ನು ಕೀಷೋನ್ ಹಳ್ಳಕ್ಕೆ ಒಯ್ದು ಅಲ್ಲಿ ಕೊಲ್ಲಿಸಿದನು.ಅದೇ ಸಮಯದಲ್ಲಿ ಜಗತ್ತಿನಲ್ಲಿ
ಕರ್ಮೆಲ್ ಬೆಟ್ಟದ ಮೇಲೆ ಎಲೀಯನ ಸ್ಪರ್ಧೆಯು ಇಸ್ರಾಯೇಲರ ಅರಸನಾದ ಅಹಾಬನ ಆಳ್ವಿಕೆಯಲ್ಲಿ (ಸುಮಾರು ಕ್ರಿ.ಪೂ. 874–853) ನಡೆಯುತ್ತದೆ. ಬೈಬಲಿನ ಹೊರಗಿನ ಒಂದು ಬರಹದಲ್ಲಿ ಹೆಸರಿಸಲ್ಪಟ್ಟ ಇಸ್ರಾಯೇಲಿನ ಮೊದಲ ಅರಸನು ಅಹಾಬನೇ: ಅಶ್ಶೂರ್ಯ ಶಾಸನವೊಂದು ಕರ್ಕರ್ ಯುದ್ಧದಲ್ಲಿ ಅವನ ರಥಗಳನ್ನು ಪಟ್ಟಿಮಾಡುತ್ತದೆ. ಕ್ರಿ.ಪೂ. 9ನೇ ಶತಮಾನದ ಮಧ್ಯಭಾಗದ ಜಗತ್ತು ಇಲ್ಲಿದೆ.
ಮೋವಾಬಿನ ಅರಸನಾದ ಮೇಷನು ದೀಬೋನಿನಲ್ಲಿ ಒಂದು ಶಿಲೆಯನ್ನು ನಿಲ್ಲಿಸಿದನು; ಇಸ್ರಾಯೇಲರ ಅರಸನಾದ ಒಮ್ರಿ ಮತ್ತು ಅವನ ಮಗನು ಮೋವಾಬನ್ನು ಹೇಗೆ ಪೀಡಿಸಿದರು ಮತ್ತು ತಾನು ಅದನ್ನು ಹೇಗೆ ಬಿಡುಗಡೆಮಾಡಿದೆನು ಎಂಬುದನ್ನು ಅದು ಹೇಳುತ್ತದೆ. 2 ಅರಸುಗಳು 3 ಮೇಷನೊಂದಿಗಿನ ಒಂದು ಯುದ್ಧವನ್ನು ಇಸ್ರಾಯೇಲಿನ ಕಡೆಯಿಂದ ವಿವರಿಸುತ್ತದೆ. ಆ ಶಿಲೆ ಲೂವ್ರ್‌ನಲ್ಲಿದೆ.
ಸಂಪ್ರದಾಯದ ಪ್ರಕಾರ, ಡೈಡೋ ಎಂದು ಹೆಚ್ಚು ಪ್ರಸಿದ್ಧಳಾದ ರಾಜಕುಮಾರಿ ಎಲಿಸ್ಸಾಳ ನೇತೃತ್ವದಲ್ಲಿ ತೂರಿನಿಂದ ಬಂದ ವಸಾಹತುಗಾರರು ಕ್ರಿ.ಪೂ. 814ರಲ್ಲಿ ಇಂದಿನ ಟ್ಯುನೀಷಿಯದಲ್ಲಿ ಕಾರ್ತೇಜನ್ನು ಸ್ಥಾಪಿಸಿದರು. ಅಹಾಬನ ರಾಣಿ ಈಜೆಬೆಲಳು ಅದೇ ಫೊನೀಷಿಯ ಕರಾವಳಿಯಿಂದ ಬಂದವಳು: ಅವಳು ಚೀದೋನ್ಯರ ಅರಸನಾದ ಎತ್ಬಾಳನ ಮಗಳು (1 ಅರಸುಗಳು 16:31).
ಅಥೇನೆಯಲ್ಲಿ ಕುಂಬಾರರು ಹೂಜಿಗಳ ಮೇಲೆ ಸುರುಳಿ ಮಾದರಿ, ಅಂಕುಡೊಂಕು ಗೆರೆಗಳು ಮತ್ತು ವೃತ್ತಗಳ ಪಟ್ಟಿಗಳನ್ನು ಬಿಡಿಸಿದರು, ನಂತರ ಶೋಕಿಸುವವರ, ಕುದುರೆಗಳ ಮತ್ತು ರಥಗಳ ಸಣ್ಣ ಆಕೃತಿಗಳನ್ನೂ ಬಿಡಿಸಿದರು. ಈ ಶೈಲಿಯ ದೊಡ್ಡ ಹೂಜಿಗಳು ಸಮಾಧಿಗಳ ಮೇಲೆ ಗುರುತುಗಳಾಗಿ ನಿಲ್ಲುತ್ತಿದ್ದವು.
ಐಗುಪ್ತವನ್ನು ಟಾನಿಸ್ ಮತ್ತು ಬುಬಾಸ್ಟಿಸ್‌ನಿಂದ ಲಿಬಿಯಾ ಮೂಲದ ಅರಸರು ಆಳುತ್ತಿದ್ದರು. ಎರಡನೆಯ ಒಸೊರ್ಕೊನ್ ಬುಬಾಸ್ಟಿಸ್‌ನ ದೇವಾಲಯದಲ್ಲಿ ಹಬ್ಬದ ಸಭಾಂಗಣವನ್ನು ಕಟ್ಟಿಸಿದನು; ಅವನ ಹೆಸರಿರುವ ಅಲಬಾಸ್ಟರ್ ಜಾಡಿಯ ಒಂದು ತುಂಡು ಅಹಾಬನು ಆಳುತ್ತಿದ್ದ ಸಮಾರ್ಯದ ರಾಜಮಹಲಿನಲ್ಲಿ ಸಿಕ್ಕಿತು.
ಜೌ ರಾಜಧಾನಿಯ ಜನರು ಕ್ರೂರ ಅರಸ ಲಿ ವಿರುದ್ಧ ದಂಗೆಯೆದ್ದು ಅವನನ್ನು ಓಡಿಸಿದರು. ಇತಿಹಾಸಕಾರ ಸಿಮಾ ಚಿಯಾನ್ ಚೀನೀ ಇತಿಹಾಸದ ತನ್ನ ವರ್ಷವಾರು ಕೋಷ್ಟಕಗಳನ್ನು ಈ ವರ್ಷದಿಂದ ಆರಂಭಿಸುತ್ತಾನೆ; ಚೀನೀ ದಾಖಲೆಗಳಲ್ಲಿ ಇದು ಮೊದಲ ನಿಖರ ದಿನಾಂಕ.
ಪೆರುವಿನ ಆಂಡೀಸ್ ಪರ್ವತಗಳ ಎತ್ತರದಲ್ಲಿ ಚಾವಿನ್ ದೆ ವಾಂತಾರ್‌ನ ಜನರು ಒಳಗೆ ಕತ್ತಲೆಯ ಸುರಂಗ ಹಾದಿಗಳಿರುವ ಕಲ್ಲಿನ ದೇವಾಲಯವನ್ನು ಕಟ್ಟಿ, ಅದರ ಹೊರಗೋಡೆಗಳ ಮೇಲೆ ಭಯಾನಕ ಜೀವಿಗಳ ಕೆತ್ತಿದ ತಲೆಗಳನ್ನು ಇರಿಸಿದರು; ದೂರದೂರದಿಂದ ಯಾತ್ರಿಕರು ಅಲ್ಲಿಗೆ ಬರುತ್ತಿದ್ದರು.
ಮೂಲಗಳು: Theographic Bible Metadata, CC BY-SA 4.0 · OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು