ಒಂದು ಬೆಂಕಿ ದಿನಗಟ್ಟಲೆ ಉರಿದು ಪಟ್ಟಣದ ಬಹುಭಾಗವನ್ನು ನಾಶಮಾಡಿತು. ನೀರೊ ಕ್ರೈಸ್ತರ ಮೇಲೆ ಆರೋಪ ಹೊರಿಸಿ ಅವರಲ್ಲಿ ಅನೇಕರನ್ನು ಕೊಲ್ಲಿಸಿದನು ಎಂದು ಇತಿಹಾಸಕಾರ ಟ್ಯಾಸಿಟಸ್ ಬರೆಯುತ್ತಾನೆ — ರೋಮ್ ಕ್ರೈಸ್ತರನ್ನು ಹಿಂಸಿಸಿದ ತಿಳಿದಿರುವ ಅತ್ಯಂತ ಮೊದಲ ಘಟನೆ.
ವಿಶ್ವಕೋಶ › ಅದೇ ಸಮಯದಲ್ಲಿ ಜಗತ್ತಿನಲ್ಲಿ
ಬೈಬಲಿನಲ್ಲಿ · ಸುಮಾರು ಕ್ರಿ.ಶ. 60–62 · ರೋಮಾಪುರ
ರೋಮಾಪುರದಲ್ಲಿ ಪೌಲನು
ಮೆಲೀತೆಯಲ್ಲಿ (ಮಾಲ್ಟಾ) ಹಡಗು ಒಡೆದ ನಂತರ ಪೌಲನು ರೋಮಾಪುರವನ್ನು ತಲುಪುತ್ತಾನೆ; ಅಲ್ಲಿ ಅವನು ಕಾವಲಿನಲ್ಲಿ ಎರಡು ವರ್ಷ ವಾಸಿಸುತ್ತಾ ತನ್ನನ್ನು ನೋಡಬಂದವರನ್ನು ಸ್ವಾಗತಿಸುತ್ತಾನೆ.
ಮೂರು ತಿಂಗಳಾದ ಮೇಲೆ ಅಲೆಕ್ಸಾಂದ್ರಿಯದಿಂದ ಬಂದು, ಆ ದ್ವೀಪದಲ್ಲಿ ಹಿಮಕಾಲವನ್ನು ಕಳೆಯಲು ತಂಗಿದ್ದ ಒಂದು ಹಡಗನ್ನು ಹತ್ತಿ ಹೊರಟೆವು. ಆ ಹಡಗಿಗೆ ಅಶ್ವಿನೀದೇವತೆಗಳೆಂಬ ಚಿಹ್ನೆ ಇತ್ತು. ನಾವು ಸುರಕೂಸಿಗೆ ತಲುಪಿ ಅಲ್ಲಿ ಮೂರು ದಿನ ತಂಗಿದೆವು. ಅಲ್ಲಿಂದ ಮುಂದುವರೆದು ರೇಗಿಯ ಪಟ್ಟಣಕ್ಕೆ ಸೇರಿದೆವು. ಒಂದು ದಿನವಾದ ಮೇಲೆ ತೆಂಕಣ ಗಾಳಿ ಬೀಸಿದ್ದರಿಂದ, ಎರಡನೆಯ ದಿನದಲ್ಲಿ ಪೊತಿಯೋಲಕ್ಕೆ ಬಂದೆವು. ಅಲ್ಲಿ ಕ್ರೈಸ್ತ ಸಹೋದರರನ್ನು ಕಂಡೆವು. ಅವರು ನಮ್ಮನ್ನು ತಮ್ಮ ಬಳಿಯಲ್ಲಿ ಏಳು ದಿನ ಇರಬೇಕೆಂದು ಬೇಡಿಕೊಂಡರು. ತರುವಾಯ ರೋಮಾಪುರಕ್ಕೆ ಬಂದೆವು. ಅಲ್ಲಿದ್ದ ಸಹೋದರರು ನಮ್ಮ ಸಮಾಚಾರವನ್ನು ಕೇಳಿದಾಗ, ನಮ್ಮನ್ನು ಭೇಟಿಮಾಡುವುದಕ್ಕಾಗಿ ಕೆಲವರು ಅಪ್ಪಿಯಪೇಟೆಯ ವರೆಗೂ, ಕೆಲವರು ತ್ರಿಛತ್ರವೆಂಬ ಸ್ಥಳದ ವರೆಗೂ ಬಂದರು. ಪೌಲನು ಅವರನ್ನು ನೋಡಿ ದೇವರಿಗೆ ಸ್ತೋತ್ರವನ್ನು ಸಲ್ಲಿಸಿ ಧೈರ್ಯಗೊಂಡನು. ನಾವು ರೋಮಾಪುರಕ್ಕೆ ಬಂದ ಮೇಲೆ, ಪೌಲನು ತನ್ನನ್ನು ಕಾಯುತ್ತಿದ್ದ ಸಿಪಾಯಿಯೊಂದಿಗೆ ಪ್ರತ್ಯೇಕವಾಗಿರಬಹುದೆಂಬ ಅಪ್ಪಣೆಯನ್ನು ಹೊಂದಿದನು. ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ಪ್ರಮುಖರನ್ನು ತನ್ನ ಬಳಿಗೆ ಕರೆಯಿಸಿಕೊಂಡನು. ಅವರು ಬಂದಾಗ ಅವನು ಅವರಿಗೆ; “ಸಹೋದರರೇ, ನಾನು ನಮ್ಮ ಜನರಿಗೂ, ನಮ್ಮ ಪೂರ್ವಿಕರ ಆಚಾರಗಳಿಗೂ ವಿರುದ್ಧವಾಗಿ ಏನೂ ಮಾಡದವನಾದರೂ ಯೆರೂಸಲೇಮಿನಿಂದ ರೋಮಾಯರ ಕೈಗೆ ಸೆರೆಯವನಾಗಿ ಒಪ್ಪಿಸಲ್ಪಟ್ಟೆನು. ಅವರು ನನ್ನನ್ನು ವಿಚಾರಣೆಮಾಡಿ, ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿದ್ದರು. ಅದಕ್ಕೆ ಯೆಹೂದ್ಯರು ವಿರೋಧಿಸಿದ್ದರಿಂದ, ನಾನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳಬೇಕಾಗಿ ಬಂದಿತು. ನನ್ನ ಸ್ವಂತ ದೇಶದವರ ಮೇಲೆ ದೋಷಾರೋಪಣೆ ಮಾಡಬೇಕೆಂಬ ಅಭಿಪ್ರಾಯದಿಂದ ಅದನ್ನು ಹೇಳಲಿಲ್ಲ. ಈ ಕಾರಣದಿಂದ ನಾನು ನಿಮ್ಮನ್ನು ಕಂಡು ಮಾತನಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲ್ ಜನರ ನಿರೀಕ್ಷೆಯ ನಿಮಿತ್ತವಾಗಿ ಈ ಬೇಡಿಯಿಂದ ಬಂಧಿತನಾಗಿದ್ದೇನೆ” ಎಂದು ಹೇಳಿದನು. ಅದಕ್ಕೆ ಅವರು ಅವನಿಗೆ; “ನಿನ್ನ ವಿಷಯವಾಗಿ ನಮಗೆ ಯೂದಾಯದಿಂದ ವರದಿ ಬರಲಿಲ್ಲ, ಸಹೋದರರಲ್ಲಿ ಒಬ್ಬರೂ ಬಂದು ನಿನ್ನ ವಿಷಯವಾಗಿ ಕೆಟ್ಟದ್ದನ್ನು ತಿಳಿಸಲೂ ಇಲ್ಲ, ಮಾತನಾಡಲೂ ಇಲ್ಲ. ಆದರೆ, ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವುದು ನಮಗೆ ಯುಕ್ತವೆಂದು ತೋರುತ್ತದೆ. ಆ ಪಂಥದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತನಾಡುತ್ತಾರೆಂಬದೊಂದೇ ನಮಗೆ ಗೊತ್ತದೆ” ಅಂದರು. ಅವರು ಅವನಿಗೆ ಒಂದು ದಿನವನ್ನು ಗೊತ್ತುಮಾಡಲು, ಬಹುಮಂದಿ ಅವನ ಬಿಡಾರದಲ್ಲಿ ಅವನ ಬಳಿಗೆ ಬಂದರು. ಅವನು ಬೆಳಗ್ಗಿನಿಂದ ಸಾಯಂಕಾಲದ ವರೆಗೂ ದೇವರ ರಾಜ್ಯವನ್ನು ಕುರಿತು ಪ್ರಾಮಾಣಿಕವಾಗಿ ಸಾಕ್ಷಿಹೇಳುತ್ತಾ, ಮೋಶೆಯ ಧರ್ಮಶಾಸ್ತ್ರವನ್ನೂ, ಪ್ರವಾದಿಗಳ ಗ್ರಂಥಗಳನ್ನೂ, ಆಧಾರಮಾಡಿಕೊಂಡು ಯೇಸುವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಇದ್ದನು. ಅವನು ಹೇಳಿದ ಮಾತುಗಳಿಗೆ ಕೆಲವರು ಒಪ್ಪಿಕೊಂಡರು; ಕೆಲವರು ನಂಬದೆ ಹೋದರು. ಅವರು ಒಮ್ಮತವಿಲ್ಲದೆ ಇರುವಾಗ ಪೌಲನು ಅವರಿಗೆ; “ಪವಿತ್ರಾತ್ಮನು ಪ್ರವಾದಿಯಾದ ಯೆಶಾಯನ ಬಾಯಿಂದ ನಿಮ್ಮ ಪೂರ್ವಿಕರಿಗೆ ವಿವರವಾಗಿ ಹೇಳಿದ್ದೇನೆಂದರೆ; “‘ನೀನು ಈ ಜನರ ಬಳಿಗೆ ಹೋಗಿ ಅವರಿಗೆ; ನೀವು ಕಿವಿಯಿದ್ದು ಕೇಳಿಕೊಂಡರೂ ತಿಳಿದುಕೊಳ್ಳುವುದೇ ಇಲ್ಲ; ಕಣ್ಣಿದ್ದು ನೋಡಿದರೂ ಕಾಣುವುದೇ ಇಲ್ಲ, ಎಂಬುದಾಗಿ ಹೇಳು. ಏಕೆಂದರೆ, ಈ ಜನರ ಹೃದಯವು ಕಲ್ಲಾಗಿದೆ; ಇವರ ಕಿವಿ ಕಿವುಡಾಗಿದೆ; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ; ತಾವು ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ, ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಹೀಗೆ ಮಾಡಿಕೊಂಡಿದ್ದಾರೆ’ ಎಂಬುದೇ. “ಆದಕಾರಣ ದೇವರಿಂದಾದ ಈ ರಕ್ಷಣೆಯು ಅನ್ಯಜನರಿಗೆ ಹೇಳಿಕಳುಹಿಸಲ್ಪಟ್ಟಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರಲಿ; ಅವರಾದರೂ ಕೇಳುವರು” ಎಂದು ಹೇಳಿದನು. ಅವನು ಈ ಮಾತನ್ನು ಹೇಳಿದ ಮೇಲೆ ಅವರು ಹೊರಟುಹೋದರು. ತರುವಾಯ ಅವನು ತಾನೇ ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳ ಕಾಲ ಇದ್ದು, ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದನು. ಯಾವ ಅಡ್ಡಿಯೂ ಇಲ್ಲದೆ, ತುಂಬಾ ಧೈರ್ಯದಿಂದ ದೇವರ ರಾಜ್ಯದ ಕುರಿತು ಬೋಧಿಸುತ್ತಾ, ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು.ಅದೇ ಸಮಯದಲ್ಲಿ ಜಗತ್ತಿನಲ್ಲಿ
ಅಪೊಸ್ತಲರ ಕೃತ್ಯಗಳು ಪೌಲನು ಸುಮಾರು ಕ್ರಿ.ಶ. 60–62ರಲ್ಲಿ ರೋಮಿನಲ್ಲಿ ಎರಡು ವರ್ಷ ಕಾವಲಿನಲ್ಲಿದ್ದು, ಬಾಡಿಗೆ ಮನೆಯಲ್ಲಿ ಬಹಿರಂಗವಾಗಿ ಬೋಧಿಸುತ್ತಿದ್ದನು ಎಂಬಲ್ಲಿಗೆ ಮುಗಿಯುತ್ತದೆ (ಅಪೊಸ್ತಲರ ಕೃತ್ಯಗಳು 28:30–31). ಆಗ ಚಕ್ರವರ್ತಿ ನೀರೊ. ಕ್ರಿ.ಶ. 60ರ ದಶಕದ ಜಗತ್ತು ಇಲ್ಲಿದೆ.
ಬ್ರಿಟನ್ನಲ್ಲಿ ಐಸೀನಿ ಜನರ ರಾಣಿ ಬೌಡಿಕಾ ಒಂದು ಮಹಾ ದಂಗೆಯನ್ನು ನಡೆಸಿ, ಲೊಂಡಿನಿಯಮ್ ಅನ್ನು — ನಂತರ ಲಂಡನ್ ಆದ ಹೊಸ ರೋಮನ್ ಪಟ್ಟಣವನ್ನು — ಸುಟ್ಟುಹಾಕಿದಳು; ನಂತರ ರೋಮನರು ಅವಳನ್ನು ಸೋಲಿಸಿದರು.
ಅಲೆಕ್ಸಾಂದ್ರಿಯದಲ್ಲಿ ಎಂಜಿನಿಯರ್ ಹೀರೊ ಉಗಿಯಿಂದ ತಿರುಗುವ ಒಂದು ಗೋಳವನ್ನು ಮತ್ತು ಗಾಳಿ ಹಾಗೂ ನೀರಿನಿಂದ ನಡೆಯುವ ಯಂತ್ರಗಳನ್ನು ವರ್ಣಿಸಿದನು. ಅವನು ಉಲ್ಲೇಖಿಸುವ ಒಂದು ಚಂದ್ರಗ್ರಹಣ ಕ್ರಿ.ಶ. 62ರ ಗ್ರಹಣಕ್ಕೆ ಹೊಂದುವುದರಿಂದ, ಸಾಮಾನ್ಯವಾಗಿ ಅವನ ಕಾಲವನ್ನು ಅದರಿಂದ ನಿರ್ಧರಿಸಲಾಗುತ್ತದೆ.
ಚೀನೀ ಸಂಪ್ರದಾಯದ ಪ್ರಕಾರ, ಹಾನ್ ಚಕ್ರವರ್ತಿ ಮಿಂಗ್ ಒಂದು ಚಿನ್ನದ ಆಕೃತಿಯ ಕನಸು ಕಂಡು ಪಶ್ಚಿಮಕ್ಕೆ ರಾಯಭಾರಿಗಳನ್ನು ಕಳುಹಿಸಿದನು. ಅವರು ಬೌದ್ಧ ಭಿಕ್ಷುಗಳೊಂದಿಗೆ ಮತ್ತು ಗ್ರಂಥಗಳೊಂದಿಗೆ ಹಿಂದಿರುಗಿದರು, ಮತ್ತು ಅವರಿಗಾಗಿ ಲುವೊಯಾಂಗ್ನಲ್ಲಿ ಬಿಳಿ ಕುದುರೆ ದೇವಾಲಯವನ್ನು ಕಟ್ಟಲಾಯಿತು — ಚೀನಾದ ಮೊದಲ ಬೌದ್ಧ ದೇವಾಲಯ.
ಮಧ್ಯ ಏಷ್ಯಾದಿಂದ ಬಂದ ಕುಶಾನ ಅರಸರು ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಉತ್ತರ ಭಾರತದಾದ್ಯಂತ ಒಂದು ಸಾಮ್ರಾಜ್ಯವನ್ನು ಕಟ್ಟಿದರು. ಅವರ ನಾಡುಗಳು ರೋಮ್, ಭಾರತ ಮತ್ತು ಚೀನಾವನ್ನು ಜೋಡಿಸುತ್ತಿದ್ದ ಮಾರ್ಗಗಳ ಮೇಲಿದ್ದವು.
ಸುಮಾರು 1110ರಲ್ಲಿ ಸಂಕಲಿಸಲಾದ ಕೀವ್ನ ‘ಪ್ರಾಥಮಿಕ ವೃತ್ತಾಂತ’, ಅಪೊಸ್ತಲನಾದ ಅಂದ್ರೆಯನು ಡ್ನಿಪ್ರೊ ನದಿಯಲ್ಲಿ ಮೇಲ್ಮುಖವಾಗಿ ಸಾಗಿ, ಮುಂದೆ ಕೀವ್ ನಿಲ್ಲಲಿರುವ ಬೆಟ್ಟಗಳ ಮೇಲೆ ಶಿಲುಬೆಯನ್ನು ನೆಟ್ಟು, ಅಲ್ಲಿ ಒಂದು ಮಹಾ ಪಟ್ಟಣ ಏಳುವುದೆಂದು ಮುಂತಿಳಿಸಿದನು ಎಂದು ಹೇಳುತ್ತದೆ. ಇತಿಹಾಸಕಾರರು ಇದನ್ನು ಐತಿಹ್ಯವೆಂದು ಕಾಣುತ್ತಾರೆ; ಇದಕ್ಕಿಂತ ಹಳೆಯ ಒಂದು ಸಂಪ್ರದಾಯ ಅಂದ್ರೆಯನ ಸೇವಾಕ್ಷೇತ್ರವಾಗಿ ಸಿಥಿಯಾವನ್ನು ಕೊಡುತ್ತದೆ.
ಮೂಲಗಳು: Theographic Bible Metadata, CC BY-SA 4.0 · OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು