ಕ್ಲೌದಿಯನು ಸಾಮ್ರಾಜ್ಯವನ್ನು ಆಳಿದನು ಮತ್ತು ಕ್ರಿ.ಶ. 43ರ ದಾಳಿಯ ನಂತರ ಬ್ರಿಟನನ್ನು ಅದಕ್ಕೆ ಸೇರಿಸಿದನು. ಯೆಹೂದ್ಯರೆಲ್ಲರೂ ರೋಮನ್ನು ಬಿಟ್ಟುಹೋಗಬೇಕೆಂದು ಅವನು ಆಜ್ಞೆ ವಿಧಿಸಿದ್ದನು ಎಂದು ಅಪೊಸ್ತಲರ ಕೃತ್ಯಗಳು 18:2 ಹೇಳುತ್ತದೆ; ರೋಮನ್ ಲೇಖಕ ಸ್ವೆಟೋನಿಯಸ್ ಸಹ ಒಂದು ಹೊರದೂಡುವಿಕೆಯನ್ನು ಉಲ್ಲೇಖಿಸುತ್ತಾನೆ.
ವಿಶ್ವಕೋಶ › ಅದೇ ಸಮಯದಲ್ಲಿ ಜಗತ್ತಿನಲ್ಲಿ
ಬೈಬಲಿನಲ್ಲಿ · ಸುಮಾರು ಕ್ರಿ.ಶ. 50 · ಅಥೇನೆ
ಅಥೇನೆಯಲ್ಲಿ ಪೌಲನು
ಅಥೇನೆಯ ದೇವಾಲಯಗಳ ಮತ್ತು ತತ್ವಜ್ಞಾನಿಗಳ ನಡುವೆ, ಪೌಲನು ಅರಿಯೊಪಾಗದಲ್ಲಿ “ತಿಳಿಯದ ದೇವರ” ಕುರಿತು ಮಾತನಾಡುತ್ತಾನೆ.
ಪೌಲನು ಅವರಿಗೋಸ್ಕರ ಅಥೇನೆಯಲ್ಲಿ ಕಾದುಕೊಂಡಿರುವಾಗ ಆ ಪಟ್ಟಣದಲ್ಲಿ ಎಲ್ಲೆಲ್ಲಿಯೂ ವಿಗ್ರಹಗಳೇ ಇರುವುದನ್ನು ನೋಡಿ ಅವನ ಆತ್ಮವು ಕುದಿಯಿತು. ಆದುದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರ ಮತ್ತು ಯೆಹೂದ್ಯ ಮತಾವಲಂಬಿಗಳೊಂದಿಗೆ ಮತ್ತು ಪ್ರತಿದಿನ ಪೇಟೆಯಲ್ಲಿ ಕಂಡುಬಂದವರ ಸಂಗಡಲೂ ಚರ್ಚಿಸಿದನು. ಇದಲ್ಲದೆ ಎಪಿಕೂರಿಯನ್ನರು, ಸ್ತೋಯಿಕರು ಎಂಬ ತತ್ವವಿಚಾರಕರಲ್ಲಿ ಕೆಲವರು ಅವನ ಸಂಗಡ ಚರ್ಚೆಮಾಡಿದರು. ಅವರಲ್ಲಿ ಕೆಲವರು; “ಈ ವಾಚಾಳಿ ಏನು ಹೇಳ ಬೇಕೆಂದಿದ್ದಾನೆ?” ಅಂದರು. ಅವನು ಯೇಸುವಿನ ವಿಷಯವಾಗಿ ಮತ್ತು ಸತ್ತವರು ಎದ್ದು ಬರುವರೆಂಬುದರ ಕುರಿತು ಸಾರುತ್ತಿದ್ದುದರಿಂದ; “ಇವನು ಅನ್ಯದೇಶದ ದೇವರುಗಳನ್ನು ಪ್ರಚಾರಮಾಡುವವನಾಗಿ ಕಂಡುಬರುತ್ತಾನೆಂದು” ಬೇರೆ ಕೆಲವರು ಹೇಳಿದರು. ಅವರು ಅವನನ್ನು ಹಿಡಿದು ಅರಿಯೊಪಾಗಕ್ಕೆ ಕರೆದುಕೊಂಡು ಹೋಗಿ; “ನೀನು ಹೇಳುವ ಈ ಹೊಸ ಉಪದೇಶವನ್ನು ನಾವು ತಿಳಿದುಕೊಳ್ಳಬಹುದೇ? ಅಪೂರ್ವವಾದ ಸಂಗತಿಗಳನ್ನು ನಮಗೆ ತಿಳಿಸುತ್ತಿದ್ದೀಯಲ್ಲಾ; ಆದಕಾರಣ ಅದೇನು ಎಂಬುದರ ಕುರಿತು ತಿಳಿಯಬೇಕೆಂದು ನಮಗೆ ಅಪೇಕ್ಷೆಯಿದೆ” ಅಂದರು. ಅಥೇನೆಯರೂ ಅಲ್ಲಿ ವಾಸವಾಗಿದ್ದ ಪರಸ್ಥಳದವರೂ ಹೊಸ ಹೊಸ ಸಂಗತಿಗಳನ್ನು ಹೇಳುವುದನ್ನೂ, ಕೇಳುವುದನ್ನೂ ಬಿಟ್ಟು, ಬೇರೆ ಯಾವುದಕ್ಕೂ ಸಮಯ ಕೊಡುತ್ತಿರಲಿಲ್ಲ. ಪೌಲನು ಅರಿಯೊಪಾಗದ ಮಧ್ಯದಲ್ಲಿ ನಿಂತುಕೊಂಡು ಹೇಳಿದ್ದೇನಂದರೆ; “ಅಥೇನೆಯ ಜನರೇ, ನೀವು ಎಲ್ಲಾದರಲ್ಲಿಯೂ ಅತಿ ದೈವಭಕ್ತಿವಂತರೆಂದು ನನಗೆ ತೋರುತ್ತಿದೆ. ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನೀವು ಪೂಜಿಸುವ ದೇವತಾ ಪ್ರತಿಮೆಗಳನ್ನು ಚೆನ್ನಾಗಿ ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ ‘ತಿಳಿಯದ ದೇವರಿಗೆ’ ಎಂದು ಬರೆದಿತ್ತು; ಆದಕಾರಣ ನೀವು ಯಾವುದನ್ನು ತಿಳಿಯದೆ ಪೂಜಿಸುತ್ತಿದ್ದೀರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ, ಕೇಳಿರಿ ಅಂದನು. “ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ, ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವುದರಿಂದ ಆತನು ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವವನಲ್ಲ; ತಾನೇ ಎಲ್ಲರಿಗೂ ಜೀವಶ್ವಾಸ ಹಾಗೂ ಜೀವಿಸುವುದಕ್ಕೆ ಬೇಕಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಸೇವೆಹೊಂದುವವನೂ ಅಲ್ಲ. ದೇವರು ಒಬ್ಬ ಮನುಷ್ಯನಿಂದ ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ, ಅವರವರು ಇರತಕ್ಕ ಕಾಲಗಳನ್ನೂ ಹಾಗು ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ಅವರನ್ನು ಇರಿಸಿ, ಒಂದು ವೇಳೆ ಅವರು ತಡವಾಗಿಯಾದರೂ ತನ್ನನ್ನು ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ. ಏಕೆಂದರೆ ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಇರುತ್ತೇವೆ. ನಿಮ್ಮ ಕವಿಗಳಲ್ಲಿ ಕೆಲವರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ. “ನಾವು ದೇವರ ಸಂತಾನದವರಾದ ಮೇಲೆ ದೇವರು ಮನುಷ್ಯನ ಶಿಲ್ಪವಿದ್ಯೆಯಿಂದಲೂ, ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ, ಬೆಳ್ಳಿ ಮತ್ತು ಕಲ್ಲುಗಳಿಗೆ ಸಮಾನವೆಂದು ನಾವು ಭಾವಿಸಬಾರದು. ಆ ಆಜ್ಞಾನದ ಕಾಲಗಳನ್ನು ದೇವರು ಗಣನೆಗೆ ತೆಗೆದುಕೊಳ್ಳಲಿಲ್ಲ; ಈಗಲಾದರೋ ಆತನು ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ಪಶ್ಚಾತ್ತಾಪಪಟ್ಟು ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಿದ್ದಾನೆ. ಏಕೆಂದರೆ, ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವುದಕ್ಕೆ ಒಂದು ದಿನವನ್ನು ಗೊತ್ತು ಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವುದಕ್ಕೆ ಎಲ್ಲರಿಗೂ ದೃಷ್ಟಾಂತವನ್ನು ಕೊಟ್ಟಿದ್ದಾನೆ” ಅಂದನು. ಸತ್ತವರು ಎದ್ದುಬರುವ ವಿಷಯವನ್ನು ಕೇಳಿದಾಗ ಕೆಲವರು ಪೌಲನನ್ನು ಅಪಹಾಸ್ಯಮಾಡಿದರು, ಬೇರೆ ಕೆಲವರು; “ನೀನು ಈ ವಿಷಯದಲ್ಲಿ ಹೇಳುವುದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ” ಅಂದರು. ಹೀಗಿರಲು ಪೌಲನು ಅವರ ಮಧ್ಯದಿಂದ ಹೊರಟುಹೋದನು. ಕೆಲವರು ಅವನನ್ನು ಸೇರಿಕೊಂಡು ನಂಬಿದರು; ನಂಬಿದವರಲ್ಲಿ ಅರಿಯೊಪಾಗದ ಸಭೆಯವನಾದ ದಿಯೊನುಸ್ಯನೂ, ದಾಮರಿಯೆಂಬಾಕೆಯೂ ಹಾಗು ಇನ್ನೂ ಕೆಲವರೂ ಇದ್ದರು.ಅದೇ ಸಮಯದಲ್ಲಿ ಜಗತ್ತಿನಲ್ಲಿ
ಪೌಲನು ಸುಮಾರು ಕ್ರಿ.ಶ. 50ರಲ್ಲಿ ಅಥೇನೆಗೆ ಬಂದನು; ಆ ಪ್ರಯಾಣ ಅವನನ್ನು ಮುಂದೆ ಕೊರಿಂಥಕ್ಕೆ ಕರೆದೊಯ್ದಿತು, ಮತ್ತು ಡೆಲ್ಫಿಯಲ್ಲಿ ಸಿಕ್ಕಿದ ಒಂದು ಶಾಸನವು ಅಲ್ಲಿನ ಪ್ರಾಂತ್ಯಾಧಿಪತಿ ಗಲ್ಲಿಯೋನನ ಕಾಲವನ್ನು ಸುಮಾರು ಕ್ರಿ.ಶ. 51–52ಕ್ಕೆ ಇಡುತ್ತದೆ (ಅಪೊಸ್ತಲರ ಕೃತ್ಯಗಳು 18:12). ಆಗ ಅಥೇನೆ ರೋಮನ್ ಸಾಮ್ರಾಜ್ಯದ ಒಂದು ಸಾಧಾರಣ ಪಟ್ಟಣವಾಗಿತ್ತು, ಆದರೂ ತನ್ನ ತತ್ತ್ವಜ್ಞಾನಿಗಳಿಗಾಗಿ ಇನ್ನೂ ಪ್ರಸಿದ್ಧವಾಗಿತ್ತು. ಸುಮಾರು ಕ್ರಿ.ಶ. 50ರ ಜಗತ್ತು ಇಲ್ಲಿದೆ.
ಯುವ ನೀರೊನ ಗುರುವಾಗಿದ್ದ ಸ್ತೋಯಿಕ ತತ್ತ್ವಜ್ಞಾನಿ ಸೆನೆಕಾ ಕೋಪದ ಬಗ್ಗೆ, ಜೀವನದ ಅಲ್ಪತ್ವದ ಬಗ್ಗೆ ಮತ್ತು ಮನಸ್ಸಿನ ಶಾಂತಿಯ ಬಗ್ಗೆ ಪ್ರಬಂಧಗಳನ್ನು ಬರೆದನು. ಅವನ ಅಣ್ಣನೇ ಗಲ್ಲಿಯೋನ — ಕೊರಿಂಥದಲ್ಲಿ ಪೌಲನನ್ನು ಯಾರ ಮುಂದೆ ತರಲಾಯಿತೋ ಆ ಪ್ರಾಂತ್ಯಾಧಿಪತಿ (ಅಪೊಸ್ತಲರ ಕೃತ್ಯಗಳು 18:12).
ಚಕ್ರವರ್ತಿ ಗ್ವಾಂಗ್ವು ಹಾನ್ ರಾಜವಂಶವನ್ನು ಪುನಃಸ್ಥಾಪಿಸಿ ಅದರ ರಾಜಧಾನಿಯನ್ನು ಲುವೊಯಾಂಗ್ಗೆ ಸ್ಥಳಾಂತರಿಸಿದನು. ಅವನ ಕೊನೆಯ ವರ್ಷವಾದ ಕ್ರಿ.ಶ. 57ರಲ್ಲಿ ಜಪಾನಿನ ವಾ ಎಂಬಲ್ಲಿಂದ ರಾಯಭಾರಿಗಳು ಬಂದರು; 1784ರಲ್ಲಿ ಜಪಾನಿನಲ್ಲಿ ಸಿಕ್ಕಿದ ಒಂದು ಚಿನ್ನದ ಮುದ್ರೆಯೇ ಅವನು ಅವರಿಗೆ ಕೊಟ್ಟ ಮುದ್ರೆ ಎಂದು ಭಾವಿಸಲಾಗಿದೆ.
ಕೇರಳದ ಸಂತ ತೋಮನ ಕ್ರೈಸ್ತರ ಸಂಪ್ರದಾಯದ ಪ್ರಕಾರ, ಅಪೊಸ್ತಲನಾದ ತೋಮನು ಕ್ರಿ.ಶ. 52ರಲ್ಲಿ ಮುಜಿರಿಸ್ ಬಳಿ ಬಂದಿಳಿದನು. ಇದಕ್ಕಿಂತ ಹಳೆಯ ಒಂದು ವೃತ್ತಾಂತವಾದ ‘ತೋಮನ ಕೃತ್ಯಗಳು’ ಅವನನ್ನು ವಾಯವ್ಯ ಭಾರತದ ಅರಸನಾದ ಗೊಂಡೊಫರೆಸ್ನ ಆಸ್ಥಾನದಲ್ಲಿ ಇಡುತ್ತದೆ; ಈ ಅರಸನ ನಾಣ್ಯಗಳು ಸಿಕ್ಕಿವೆ.
ಅಲೆಕ್ಸಾಂದ್ರಿಯದಲ್ಲಿ ಯೆಹೂದ್ಯ ತತ್ತ್ವಜ್ಞಾನಿ ಫಿಲೋ ಮೋಶೆಯ ಪುಸ್ತಕಗಳನ್ನು ಗ್ರೀಕ್ ತತ್ತ್ವಶಾಸ್ತ್ರದ ಭಾಷೆಯಲ್ಲಿ ವಿವರಿಸಿದನು. ಕ್ರಿ.ಶ. 40ರಲ್ಲಿ, ಯೆಹೂದ್ಯರ ವಿರುದ್ಧ ನಡೆದ ಗಲಭೆಗಳ ನಂತರ, ಅವನು ಪಟ್ಟಣದ ಯೆಹೂದ್ಯರ ಪರವಾಗಿ ಚಕ್ರವರ್ತಿ ಕಲಿಗುಲಾನ ಬಳಿಗೆ ಒಂದು ನಿಯೋಗವನ್ನು ನಡೆಸಿದನು.
ಇಂದಿನ ಸುಡಾನಿನಲ್ಲಿ ನೈಲ್ ನದಿಯ ತೀರದ ಮೆರೊಯೆಯಲ್ಲಿ, ಕೂಷ್ ರಾಜ್ಯವನ್ನು ಆಗಾಗ kandake ಎಂಬ ಬಿರುದಿನ ರಾಣಿಯರು ಆಳುತ್ತಿದ್ದರು — ಅಪೊಸ್ತಲರ ಕೃತ್ಯಗಳು 8:27ರ “ಕಂದಾಕೆ” ಇದೇ. ಅದರ ಆಡಳಿತಗಾರರನ್ನು ಸಣ್ಣ, ಕಡಿದಾದ ಪಿರಮಿಡ್ಗಳ ಕೆಳಗೆ ಹೂಳಲಾಗುತ್ತಿತ್ತು.
ದಕ್ಷಿಣ ಪೆರುವಿನ ಮರುಭೂಮಿ ಬಯಲಿನಲ್ಲಿ ನಾಸ್ಕಾ ಜನರು ನೆಲದ ಮೇಲಿನ ಕಪ್ಪು ಕಲ್ಲುಗಳನ್ನು ಸರಿಸಿ ಬೃಹತ್ ರೇಖೆಗಳನ್ನು ಮತ್ತು ಆಕೃತಿಗಳನ್ನು — ಹಮ್ಮಿಂಗ್ಬರ್ಡ್, ಕೋತಿ, ಜೇಡ — ಬಿಡಿಸಿದರು. ಅವುಗಳಲ್ಲಿ ಅನೇಕವು ಆಕಾಶದಿಂದ ಅಥವಾ ಹತ್ತಿರದ ಬೆಟ್ಟಗಳಿಂದ ಚೆನ್ನಾಗಿ ಕಾಣುತ್ತವೆ.
ಮೂಲಗಳು: Theographic Bible Metadata, CC BY-SA 4.0 · OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು