ನವ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಫರೋಹನು ಅಬು ಸಿಂಬೆಲ್‌ನ ದೇವಾಲಯಗಳನ್ನು ಮತ್ತು ಮುಖಜ ಭೂಮಿಯಲ್ಲಿ ಪಿ-ರಾಮ್ಸೇಸ್ ಎಂಬ ಹೊಸ ರಾಜಧಾನಿಯನ್ನು ಕಟ್ಟಿಸಿದನು. ಒಂದು ಅಭಿಪ್ರಾಯದ ಪ್ರಕಾರ ಅವನೇ ವಿಮೋಚನೆಯ ಕಾಲದ ಫರೋಹನು; ಬೈಬಲ್ ಆ ಫರೋಹನ ಹೆಸರನ್ನು ಕೊಡುವುದಿಲ್ಲ.
ವಿಶ್ವಕೋಶ › ಅದೇ ಸಮಯದಲ್ಲಿ ಜಗತ್ತಿನಲ್ಲಿ
ಬೈಬಲಿನಲ್ಲಿ · ಕ್ರಿ.ಪೂ. 15ನೇ ಅಥವಾ 13ನೇ ಶತಮಾನ (ಕಾಲನಿರ್ಣಯ ವಿವಾದಿತ) · ನೈಲ್ ಮುಖಜಭೂಮಿಯ ರಾಮ್ಸೇಸ್
ವಿಮೋಚನೆ
ಪಸ್ಕದ ರಾತ್ರಿಯ ನಂತರ ಇಸ್ರಾಯೇಲ್ಯರು ರಾಮ್ಸೇಸಿನಿಂದ ಹೊರಡುತ್ತಾರೆ. ವಿದ್ವಾಂಸರು ವಿಮೋಚನೆಯನ್ನು ಸುಮಾರು ಕ್ರಿ.ಪೂ. 1446ಕ್ಕೆ ಅಥವಾ ಕ್ರಿ.ಪೂ. 13ನೇ ಶತಮಾನಕ್ಕೆ ಗುರುತಿಸುತ್ತಾರೆ.
ಮಧ್ಯರಾತ್ರಿಯಲ್ಲಿ ಯೆಹೋವನು ಸಿಂಹಾಸನದಲ್ಲಿರುವ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಐಗುಪ್ತ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಸಂಹಾರ ಮಾಡಿದನು. ಪಶುಗಳ ಚೊಚ್ಚಲು ಮರಿಗಳನ್ನೂ ಸಂಹಾರಮಾಡಿದನು. ಆ ರಾತ್ರಿಯಲ್ಲಿ ಫರೋಹನೂ, ಅವನ ಪರಿವಾರದವರೂ, ಐಗುಪ್ತ್ಯರೆಲ್ಲರೂ ಎದ್ದು ನೋಡಲಾಗಿ ಸಾವಿಲ್ಲದ ಮನೆ ಒಂದೂ ಇರಲಿಲ್ಲ. ಐಗುಪ್ತ ದೇಶದಲ್ಲಿ ದೊಡ್ಡ ಗೋಳಾಟವಾಯಿತು. ಫರೋಹನು ಆ ರಾತ್ರಿಯಲ್ಲೇ ಮೋಶೆ ಮತ್ತು ಆರೋನರನ್ನು ಕರೆಯಿಸಿ ಅವರಿಗೆ, “ನೀವು ಎದ್ದು ನನ್ನ ಜನರ ಮಧ್ಯದಿಂದ ಹೊರಟುಹೋಗಿರಿ. ನೀವು ಕೇಳಿಕೊಂಡ ಮೇರೆಗೆ ಯೆಹೋವನನ್ನು ಆರಾಧಿಸುವುದಕ್ಕೆ ನೀವು ಮತ್ತು ಇಸ್ರಾಯೇಲರು ಹೊರಟುಹೋಗಿರಿ. ನೀವು ಕೇಳಿಕೊಂಡಂತೆ ನಿಮ್ಮ ಕುರಿದನಗಳ ಹಿಂಡುಗಳನ್ನು ತೆಗೆದುಕೊಂಡು ಹೋಗಿರಿ. ಅದಲ್ಲದೆ ನನ್ನನ್ನೂ ಸಹ ಆಶೀರ್ವದಿಸಿರಿ” ಎಂದನು. ಐಗುಪ್ತರು, “ನಾವೆಲ್ಲರು ಸಾಯುತ್ತೇವೆ” ಎಂದುಕೊಂಡು ಇಸ್ರಾಯೇಲರನ್ನು ತಮ್ಮ ದೇಶದಿಂದ ಬೇಗನೇ ಕಳುಹಿಸಿಬಿಡುವುದಕ್ಕೆ ಅಪೇಕ್ಷೆಪಟ್ಟು ಅವರನ್ನು ಬಲವಂತಮಾಡಿದರು. ಆದುದರಿಂದ ಜನರು ಹಿಟ್ಟಿಗೆ ಹುಳಿಹಾಕುವುದಕ್ಕಿಂತ ಮೊದಲೇ ನಾದುವ ಪಾತ್ರೆಗಳ ಸಂಗಡ ಕಣಕದ ಮುದ್ದೆಯನ್ನು ಬಟ್ಟೆಯಲ್ಲಿ ಗಂಟುಕಟ್ಟಿ ಹೆಗಲಿನ ಮೇಲೆ ಹಾಕಿಕೊಂಡು ಹೊರಟುಹೋದರು. ಇಸ್ರಾಯೇಲರು ಮೋಶೆಯ ಮಾತಿನ ಮೇರೆಗೆ ಐಗುಪ್ತ್ಯರಿಂದ ಬೆಳ್ಳಿ ಬಂಗಾರದ ಒಡವೆಗಳನ್ನು, ಬಟ್ಟೆಗಳನ್ನು ಕೇಳಿ ಪಡೆದುಕೊಂಡರು. ಯೆಹೋವನು ಅವರ ಮೇಲೆ ಐಗುಪ್ತ್ಯರಲ್ಲಿ ದಯೆಯನ್ನು ಹುಟ್ಟಿಸಿದ್ದರಿಂದ ಅವರು ಕೇಳಿಕೊಂಡದ್ದೆಲ್ಲವನ್ನು ಐಗುಪ್ತರು ಕೊಟ್ಟರು. ಹೀಗೆ ಇಸ್ರಾಯೇಲರು ಐಗುಪ್ತ್ಯರ ಸೊತ್ತನ್ನು ಸುಲಿದುಕೊಂಡರು. ಇಸ್ರಾಯೇಲರು ರಾಮ್ಸೇಸ್ ಪಟ್ಟಣದಿಂದ ಹೊರಟು ಸುಕ್ಕೋತಿಗೆ ಬಂದರು. ಹೆಂಗಸರು ಮಕ್ಕಳು ಅಲ್ಲದೆ ಗಂಡಸರು ಮಾತ್ರ ಸುಮಾರು ಆರುಲಕ್ಷ ಮಂದಿ ಇದ್ದರು. ಅವರೊಂದಿಗೆ ಬಹು ಮಂದಿ ಅನ್ಯರೂ ಹೊರಟುಬಂದಿದ್ದರು. ಕುರಿದನಗಳ ಹಿಂಡೂ ಪಶುಗಳೂ ಅವರ ಸಂಗಡ ಹೊರಟುಹೋದವು. ಅವರು ಐಗುಪ್ತ ದೇಶದಿಂದ ತಂದ ನಾದಿದ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಕೊಂಡರು. ಅವರು ಐಗುಪ್ತ ದೇಶದಿಂದ ಹೊರಡಿಸಲ್ಪಟ್ಟು ಸ್ವಲ್ಪವಾದರೂ ಸಮಯ ಸಿಕ್ಕದೆ ಹೋದದರಿಂದ ಕಣಕದಲ್ಲಿ ಹುಳಿಯನ್ನು ಕಲಸಿರಲಿಲ್ಲ ಮತ್ತು ಬೇರೆ ಯಾವ ಆಹಾರವನ್ನೂ ಸಿದ್ಧಪಡಿಸಿಕೊಂಡಿರಲಿಲ್ಲ. ಇಸ್ರಾಯೇಲರು ಐಗುಪ್ತ ದೇಶದಲ್ಲಿ ಸುಮಾರು ನಾನೂರಮೂವತ್ತು ವರ್ಷ ವಾಸವಾಗಿದ್ದರು. ನಾನೂರಮೂವತ್ತು ವರ್ಷಗಳು ಕಳೆದನಂತರ ಅದೇ ದಿನದಲ್ಲಿಯೇ ಯೆಹೋವನ ಸೈನ್ಯಗಳೆಲ್ಲಾ ಐಗುಪ್ತ ದೇಶವನ್ನು ಬಿಟ್ಟು ಹೊರಟುಹೋದವು. ಯೆಹೋವನು ಆ ರಾತ್ರಿಯಲ್ಲಿಯೇ ಅವರನ್ನು ಐಗುಪ್ತ ದೇಶದಿಂದ ಹೊರಗೆ ಬರಮಾಡಿದ್ದರಿಂದ ಅವರು ಈ ರಾತ್ರಿಯಲ್ಲಿ ಆತನ ಘನಕ್ಕಾಗಿ ಜಾಗರಣೆಯನ್ನು ಮಾಡಿದರು. ಇಸ್ರಾಯೇಲರೆಲ್ಲರೂ ತಲತಲಾಂತರಕ್ಕೂ ಯೆಹೋವನಿಗೆ ಜಾಗರಣೆಯನ್ನು ಆಚರಿಸಬೇಕಾದ ರಾತ್ರಿಯು ಇದೇ ಆಗಿದೆ.ಅದೇ ಸಮಯದಲ್ಲಿ ಜಗತ್ತಿನಲ್ಲಿ
ವಿಮೋಚನೆ (ಐಗುಪ್ತದಿಂದ ಹೊರಬರುವಿಕೆ) ಯಾವಾಗ ನಡೆಯಿತು ಎಂಬುದರ ಬಗ್ಗೆ ಚರ್ಚೆಯಿದೆ. ಒಂದು ಅಭಿಪ್ರಾಯದ ಪ್ರಕಾರ ಅದು 1 ಅರಸುಗಳು 6:1ರಿಂದ ಹಿಂದಕ್ಕೆ ಲೆಕ್ಕಿಸಿದರೆ ಕ್ರಿ.ಪೂ. 15ನೇ ಶತಮಾನದಲ್ಲಿ ನಡೆಯಿತು; ಇನ್ನೊಂದರ ಪ್ರಕಾರ, ಎರಡನೆಯ ರಾಮ್ಸೇಸ್ ನೈಲ್ ಮುಖಜ ಭೂಮಿಯಲ್ಲಿ ಪಟ್ಟಣಗಳನ್ನು ಕಟ್ಟಿದ ಕ್ರಿ.ಪೂ. 13ನೇ ಶತಮಾನದಲ್ಲಿ (ವಿಮೋಚನಕಾಂಡ 1:11 ರಾಮ್ಸೇಸ್ ಪಟ್ಟಣವನ್ನು ಹೆಸರಿಸುತ್ತದೆ). ಕೆಲವು ಇತಿಹಾಸಕಾರರು ಅದರ ಕಾಲವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ. ಆ ಶತಮಾನಗಳ ಜಗತ್ತು ಇಲ್ಲಿದೆ.
ಎರಡನೆಯ ರಾಮ್ಸೇಸನ ಮಗನಾದ ಫರೋಹ ಮೆರ್ನೆಪ್ತಾನ ವಿಜಯ ಶಿಲಾಸ್ತಂಭವು ಕಾನಾನಿನಲ್ಲಿ ಅವನು ಸೋಲಿಸಿದ ಜನಾಂಗಗಳಲ್ಲಿ “ಇಸ್ರಾಯೇಲ್” ಅನ್ನು ಪಟ್ಟಿಮಾಡುತ್ತದೆ — ಬೈಬಲಿನ ಹೊರಗೆ ಸಿಕ್ಕಿರುವ ಇಸ್ರಾಯೇಲಿನ ಅತ್ಯಂತ ಹಳೆಯ ಉಲ್ಲೇಖ. ಅದು ಈಗ ಕೈರೋದ ಐಗುಪ್ತ ವಸ್ತುಸಂಗ್ರಹಾಲಯದಲ್ಲಿದೆ.
ಗ್ರೀಸ್‌ನಲ್ಲಿ ಮೈಸೀನಿಯ ಯೋಧ ಅರಸರು ತಮ್ಮ ಕೋಟೆಯ ಸಿಂಹ ದ್ವಾರವನ್ನು ಕಟ್ಟಿದರು. ಅರಮನೆಗಳ ಮತ್ತು ಯುದ್ಧಗಳ ಈ ಯುಗವನ್ನು ನಂತರ ಟ್ರಾಯ್ ಯುದ್ಧದ ಕುರಿತಾದ ಹೋಮರನ ಕಥೆಗಳಲ್ಲಿ ಸ್ಮರಿಸಲಾಯಿತು.
ಶಾಂಗ್ ರಾಜವಂಶದ ಕೊನೆಯ ರಾಜಧಾನಿ ಆನ್ಯಾಂಗ್‌ನಲ್ಲಿ ಅರಸರು ಎತ್ತಿನ ಎಲುಬುಗಳನ್ನು ಮತ್ತು ಆಮೆಯ ಚಿಪ್ಪುಗಳನ್ನು ಶಾಖದಿಂದ ಬಿರುಕುಗೊಳಿಸಿ ತಮ್ಮ ಪೂರ್ವಜರಿಗೆ ಪ್ರಶ್ನೆ ಕೇಳುತ್ತಿದ್ದರು, ಮತ್ತು ಉತ್ತರಗಳನ್ನು ಅವುಗಳ ಮೇಲೆಯೇ ಬರೆಯುತ್ತಿದ್ದರು. ಈ “ಭವಿಷ್ಯವಾಣಿ ಎಲುಬುಗಳು” ತಿಳಿದಿರುವ ಅತ್ಯಂತ ಹಳೆಯ ಚೀನೀ ಬರಹ.
ವಾಯವ್ಯ ಭಾರತದಲ್ಲಿ ಕವಿಗಳು ಸಂಸ್ಕೃತದಲ್ಲಿ ಋಗ್ವೇದದ ಸೂಕ್ತಗಳನ್ನು ರಚಿಸಿದರು — ಹಿಂದೂ ಧರ್ಮದ ಅತ್ಯಂತ ಹಳೆಯ ಪವಿತ್ರ ಗ್ರಂಥಗಳು. ಅನೇಕ ಶತಮಾನಗಳ ಕಾಲ ಅವುಗಳನ್ನು ಬರೆಯದೆ ನೆನಪಿನ ಮೂಲಕವೇ ಮುಂದಿನ ತಲೆಮಾರಿಗೆ ದಾಟಿಸಲಾಯಿತು.
ಮೆಕ್ಸಿಕೊದ ಕೊಲ್ಲಿ ತೀರದಲ್ಲಿ ಸ್ಯಾನ್ ಲೊರೆಂಜೊದ ಓಲ್ಮೆಕ್ ಜನರು ಕಲ್ಲಿನ ಬೃಹತ್ ತಲೆಗಳನ್ನು ಕೆತ್ತಿದರು, ಕೆಲವು ಸುಮಾರು 3 ಮೀಟರ್ ಎತ್ತರವಿವೆ. ಅವರು ಮೆಸೊಅಮೆರಿಕದ ಮೊದಲ ಮಹಾ ನಾಗರಿಕತೆ.
ಡ್ನಿಪ್ರೊ ನದಿಯಿಂದ ಉರಲ್ ಪರ್ವತಗಳವರೆಗೆ, ಮರದ ದಿಮ್ಮಿಗಳಿಂದ ಒಳಪದರ ಮಾಡಿದ ಸಮಾಧಿಗಳಿಂದ ಹೆಸರು ಪಡೆದ ‘ಮರದ ಸಮಾಧಿ’ ಸಂಸ್ಕೃತಿಯ ಕಂಚಿನ ಯುಗದ ಪಶುಪಾಲಕರು ಹುಲ್ಲುಗಾವಲಿನಲ್ಲಿ ದನಕರುಗಳನ್ನು ಮತ್ತು ಕುರಿಗಳನ್ನು ಸಾಕಿದರು ಹಾಗೂ ನದಿಗಳ ದಡದ ಸಣ್ಣ ಹಳ್ಳಿಗಳಲ್ಲಿ ವಾಸಿಸಿದರು.
ಮೂಲಗಳು: Theographic Bible Metadata, CC BY-SA 4.0 · OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು