20ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡನು.
21ಅವರು ಊಟಮಾಡುತ್ತಿರುವಾಗ ಆತನು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು” ಅಂದನು.
22ಆಗ ಅವರು ಬಹಳ ದುಃಖಪಟ್ಟು, “ಕರ್ತನೇ, ನಾನಲ್ಲವಲ್ಲಾ?” ಎಂದು ಪ್ರತಿಯೊಬ್ಬರು ಕೇಳತೊಡಗಿದರು.
23ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಬಟ್ಟಲಲ್ಲಿ ನನ್ನ ಸಂಗಡ ಕೈ ಅದ್ದಿದವನೇ ನನ್ನನ್ನು ಹಿಡಿದುಕೊಡುವವನು.
24ಮನುಷ್ಯಕುಮಾರನು ಆತನ ವಿಷಯವಾಗಿ ಬರೆದಿರುವ ಹಾಗೆ ಹೊರಟುಹೋಗುತ್ತಾನೆ; ಆದರೆ ಯಾವನು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ಗತಿಯನ್ನು ಏನೆಂದು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು” ಅಂದನು.
25ಆಗ ಆತನನ್ನು ಹಿಡಿದುಕೊಡಬೇಕೆಂದಿದ್ದ ಯೂದನು, “ಗುರುವೇ, ನಾನೋ?” ಎಂದು ಕೇಳಲು ಯೇಸು ಅವನಿಗೆ, “ನೀನೇ ಹಾಗೆ ಹೇಳಿದ್ದೀ” ಎಂದು ಹೇಳಿದನು.