Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೇಸುವಿನ ಶ್ರಮೆಗಳು

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೇಸುವಿನ ಶ್ರಮೆಗಳು

ಸಮಾಧಿ

ಮತ್ತಾ 27:57–61 · ಮಾರ್ಕ 15:42–47 · ಲೂಕ 23:50, 52–56 · ಯೋಹಾ 19:38–42

ಮತ್ತಾಯನು

ಮತ್ತಾ 27:57–61

57ಸಂಜೆಯಾದಾಗ ಅರಿಮಥಾಯ ಊರಿನ ಯೋಸೇಫನೆಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಇವನು ಸಹ ಯೇಸುವಿನ ಶಿಷ್ಯನಾಗಿದ್ದನು.

58ಇವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಳ್ಳಲು ಪಿಲಾತನು ಅದನ್ನು ಆತನಿಗೆ ಕೊಡಬೇಕೆಂದು ಅಪ್ಪಣೆಮಾಡಿದನು.

59ಯೋಸೇಫನು ದೇಹವನ್ನು ತೆಗೆದುಕೊಂಡು ಅದನ್ನು ಶುದ್ಧವಾದ ನಾರುಮಡಿಯಲ್ಲಿ ಸುತ್ತಿ

60ಬಂಡೆಯಲ್ಲಿ ತೋಡಿದ್ದ ಹೊಸ ಸಮಾಧಿಯಲ್ಲಿ ಇಟ್ಟು ಸಮಾಧಿಯ ಬಾಗಿಲಿಗೆ ದೊಡ್ಡ ಕಲ್ಲನ್ನು ಉರುಳಿಸಿ ಹೊರಟುಹೋದನು.

61ಮಗ್ದಲದ ಮರಿಯಳೂ ಮತ್ತು ಆ ಇನ್ನೊಬ್ಬ ಮರಿಯಳೂ ಅಲ್ಲಿ ಸಮಾಧಿಗೆ ಎದುರಾಗಿ ಕುಳಿತಿದ್ದರು.

ಮಾರ್ಕನು

ಮಾರ್ಕ 15:42–47

42ಆಗಲೇ ಸಂಜೆಯಾಗಿತ್ತು; ಮತ್ತು ಆ ದಿನವು ‘ಸಿದ್ಧತೆಯ’ ದಿನ, ಅಂದರೆ ಸಬ್ಬತ್ ದಿನದ ಹಿಂದಿನ ದಿನವಾಗಿತ್ತು.

43ಹೀಗಿರಲಾಗಿ ಅರಿಮಥಾಯದ ಯೋಸೇಫನೆಂಬುವನು ಅಲ್ಲಿಗೆ ಬಂದನು. ಅವನು ಯೆಹೂದ್ಯರ ಹಿರೀಸಭೆಯ ಗೌರವಸ್ಥನಾದ ಸದ್ಯಸನೂ, ದೇವರ ರಾಜ್ಯವನ್ನು ಎದುರುನೋಡುತ್ತಿದ್ದವನು ಆಗಿದ್ದನು. ಅವನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡನು.

44ಪಿಲಾತನು, ಅವನು ಇಷ್ಟು ಬೇಗ ಸತ್ತು ಹೋದನೋ ಎಂದು ಹೇಳಿ ಆಶ್ಚರ್ಯಪಟ್ಟು ಶತಾಧಿಪತಿಯನ್ನು ಕರೆಸಿ, ಅವನು ಆಗಲೇ ಸತ್ತನೋ ಎಂದು ಅವನನ್ನು ಕೇಳಿದನು.

45ಆತನು ಸತ್ತದ್ದನ್ನು ಶತಾಧಿಪತಿಯಿಂದ ತಿಳಿದುಕೊಂಡು ಅವನ ಪಾರ್ಥಿವ ಶರೀರವನ್ನು ಯೋಸೇಫನಿಗೆ ಕೊಡಿಸಿದನು.

46ಯೋಸೇಫನು ನಾರುಮಡಿಯನ್ನು ಕೊಂಡುತಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು.

47ಮಗ್ದಲದ ಮರಿಯಳೂ ಮತ್ತು ಯೋಸೆಯನ ತಾಯಿ ಮರಿಯಳೂ ಯೇಸುವನ್ನಿಟ್ಟಿದ್ದ ಸ್ಥಳವನ್ನು ನೋಡಿದರು.

ಲೂಕನು

ಲೂಕ 23:50, 52–56

50ಅರಿಮಥಾಯ ಎಂಬ ಯೆಹೂದ್ಯರದೊಂದು ಪಟ್ಟಣದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಯೋಸೇಫನ. ಆತನು ಹಿರೀಸಭೆಯವನು, ಉತ್ತಮನು, ಸತ್ಪುರುಷನು ಹಾಗೂ ದೇವರ ರಾಜ್ಯವನ್ನು ಎದುರು ನೋಡುತ್ತಿದ್ದವನೂ ಆಗಿದ್ದನಲ್ಲದೆ ಮಂತ್ರಿಯೂ ಆಗಿದ್ದನು. ಅವನು ಹಿರೀಸಭೆಯವರ ಆಲೋಚನೆಗೂ ಕೃತ್ಯಗಳಿಗೂ ಅನುಮತಿಸಿರಲಿಲ್ಲ.

52ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡು,

53ಅದನ್ನು ಇಳಿಸಿ ನಾರುಮಡಿಯಲ್ಲಿ ಸುತ್ತಿ, ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿ ಇಟ್ಟನು. ಅದರಲ್ಲಿ ಅದುವರೆಗೆ ಯಾರನ್ನು ಇಟ್ಟಿರಲಿಲ್ಲ.

54ಆ ದಿನವು ಸಿದ್ಧತೆಯ ದಿನವಾಗಿತ್ತು. ಮತ್ತು ಸಬ್ಬತ್ ದಿನ ಪ್ರಾರಂಭವಾಗುವುದಕ್ಕೆ ಸ್ವಲ್ಪ ಹೊತ್ತು ಮಾತ್ರ ಇತ್ತು.

55ಹೀಗಿರುವಲ್ಲಿ ಗಲಿಲಾಯದಿಂದ ಯೇಸುವಿನ ಸಂಗಡ ಬಂದಿದ್ದ ಸ್ತ್ರೀಯರು, ಯೋಸೇಫನ ಹಿಂದೆಯೇ ಹೋಗಿ ಆ ಸಮಾಧಿಯನ್ನೂ, ಯೇಸುವಿನ ದೇಹವನ್ನಿಟ್ಟ ರೀತಿಯನ್ನೂ ನೋಡಿ,

56ಹಿಂತಿರುಗಿ ಬಂದು ಪರಿಮಳದ್ರವ್ಯಗಳನ್ನೂ ಸುಗಂಧ ತೈಲವನ್ನೂ ಸಿದ್ಧಮಾಡಿಕೊಂಡರು. ಆ ಸ್ತ್ರೀಯರು ಸಬ್ಬತ್ ದಿನದಲ್ಲಿ ಧರ್ಮನಿಯಮದ ಪ್ರಕಾರ ವಿಶ್ರಮಿಸಿಕೊಂಡರು.

ಯೋಹಾನನು

ಯೋಹಾ 19:38–42

38ಇದಾದ ಮೇಲೆ ಯೆಹೂದ್ಯರ ಭಯದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವುದಕ್ಕೆ ಅಪ್ಪಣೆಯಾಗಬೇಕೆಂದು ಪಿಲಾತನನ್ನು ಕೇಳಿಕೊಂಡನು. ಆಗ ಪಿಲಾತನು ಅಪ್ಪಣೆ ಕೊಡಲಾಗಿ, ಅವನು ಬಂದು ಆತನ ದೇಹವನ್ನು ತೆಗೆದುಕೊಂಡು ಹೋದನು.

39ಇದಲ್ಲದೆ ಮೊದಲು ಒಂದು ಸಾರಿ ರಾತ್ರಿ ವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ ಅಗರುಗಳನ್ನು ಕಲಸಿದ ಚೂರ್ಣವನ್ನು ನೂರು ಸೇರಿನಷ್ಟು ತೆಗೆದುಕೊಂಡು ಅಲ್ಲಿಗೆ ಬಂದನು.

40ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧ ದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು.

41ಆತನನ್ನು ಶಿಲುಬೆಗೆ ಹಾಕಿದ ಸ್ಥಳದಲ್ಲಿ ಒಂದು ತೋಟವಿತ್ತು ಮತ್ತು ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು. ಅದರಲ್ಲಿ ಅದುವರೆಗೂ ಯಾರನ್ನೂ ಇಟ್ಟಿರಲಿಲ್ಲ.

42ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದ್ದುದರಿಂದಲೂ ಆ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವಿನ ದೇಹವನ್ನು ಅಲ್ಲಿ ಸಮಾಧಿಯಲ್ಲಿಟ್ಟರು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು