Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಪುನರುತ್ಥಾನ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಪುನರುತ್ಥಾನ

ಬರಿದಾದ ಸಮಾಧಿ

ಮತ್ತಾ 28:1–10 · ಮಾರ್ಕ 16:1–8 · ಲೂಕ 24:1–6, 8–12 · ಯೋಹಾ 20:1–10

ಮತ್ತಾಯನು

ಮತ್ತಾ 28:1–10

1ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿನ ಬೆಳಗಾಗುತ್ತಿರುವಾಗಲೇ ಮಗ್ದಲದ ಮರಿಯಳೂ ಮತ್ತು ಆ ಬೇರೆ ಮರಿಯಳೂ ಸಮಾಧಿಯನ್ನು ನೋಡಲು ಬಂದರು.

2ಇಗೋ, ಮಹಾ ಭೂಕಂಪವುಂಟಾಯಿತು, ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕುಳಿತುಕೊಂಡಿದ್ದನು.

3ಅವನ ಮುಖಭಾವವು ಮಿಂಚಿನಂತೆ ಇತ್ತು. ಅವನ ಉಡುಪು ಹಿಮದಂತೆ ಬೆಳ್ಳಗಿತ್ತು;

4ಕಾವಲುಗಾರರು ಹೆದರಿ ನಡುಗಿ ಸತ್ತವರ ಹಾಗಾದರು.

5ಆಗ ದೂತನು ಆ ಹೆಂಗಸರಿಗೆ, “ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು;

6ಆತನು ಇಲ್ಲಿ ಇಲ್ಲ, ತಾನು ಹೇಳಿದಂತೆಯೇ ಎದ್ದಿದ್ದಾನೆ. ಬನ್ನಿ, ಕರ್ತನು ಮಲಗಿದ್ದ ಸ್ಥಳವನ್ನು ನೋಡಿರಿ;

7ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ, ‘ಆತನು ಸತ್ತವರೊಳಗಿಂದ ಎದ್ದಿದ್ದಾನೆಂದು, ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ’ ಎಂದು ತಿಳಿಸಿರಿ; ನೋಡಿರಿ, ನಾನು ನಿಮಗೆ ಹೇಳಿದ್ದೇನೆ,” ಎಂದು ಹೇಳಿದನು.

8ಅವರು ಭಯದಿಂದಲೂ, ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ಅದನ್ನು ತಿಳಿಸುವುದಕ್ಕೆ ಓಡಿಹೋದರು.

9ಆಗ ಯೇಸು ಅವರನ್ನು ಭೇಟಿಯಾಗಿ, “ನಿಮಗೆ ಶುಭವಾಗಲಿ” ಅಂದನು. ಅವರು ಹತ್ತಿರಕ್ಕೆ ಬಂದು ಆತನ ಪಾದಗಳಿಗೆ ಅಡ್ಡಬಿದ್ದು ಆತನನ್ನು ಆರಾಧಿಸಿದರು.

10ಆಗ ಯೇಸು ಅವರಿಗೆ, “ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ಅವರು ನನ್ನನ್ನು ನೋಡುವರು” ಎಂದು ಹೇಳಿದನು.

ಮಾರ್ಕನು

ಮಾರ್ಕ 16:1–8

1ಸಬ್ಬತ್ ದಿನ ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಮತ್ತು ಸಲೋಮಿಯೂ ಯೇಸುವಿನ ದೇಹಕ್ಕೆ ಹಚ್ಚುವುದಕ್ಕಾಗಿ ಸುಗಂಧ ದ್ರವ್ಯಗಳನ್ನು ಕೊಂಡರು.

2ಮತ್ತು ವಾರದ ಮೊದಲನೆಯ ದಿನದ ಬೆಳಿಗ್ಗೆ ಹೊತ್ತು ಮೂಡುವಾಗ ಅವರು ಸಮಾಧಿಯ ಬಳಿಗೆ ಬಂದರು.

3“ಸಮಾಧಿಯ ಬಾಗಿಲಿನಿಂದ ಕಲ್ಲನ್ನು ನಮಗೋಸ್ಕರ ಉರುಳಿಸುವವರು ಯಾರು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.

4ಸಮಾಧಿಯ ಕಡೆಗೆ ನೋಡಿದಾಗ ಆ ದೊಡ್ಡ ಕಲ್ಲು ಉರುಳಿಸಲ್ಪಟ್ಟಿರುವುದನ್ನು ಕಂಡರು.

5ಅವರು ಸಮಾಧಿಯೊಳಗೆ ಹೋಗಿ, ಒಬ್ಬ ಯೌವನಸ್ಥನು ಬಿಳಿ ನಿಲುವಂಗಿಯನ್ನು ಧರಿಸಿಕೊಂಡು ಬಲ ಭಾಗದಲ್ಲಿ ಕುಳಿತಿರುವುದನ್ನು ಕಂಡು ಬೆಚ್ಚಿಬೆರಗಾದರು.

6ಅವನು ಅವರಿಗೆ, “ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟಿದ್ದ ನಜರೇತಿನ ಯೇಸುವನ್ನು ಹುಡುಕುತ್ತಿರಲ್ಲವೇ. ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ; ಆತನನ್ನು ಇಟ್ಟಿದ್ದ ಸ್ಥಳ ಇದೇ ನೋಡಿರಿ,

7ಆದರೆ ನೀವು ಹೋಗಿ ಆತನ ಶಿಷ್ಯರಿಗೂ ಪೇತ್ರನಿಗೂ ಆತನು ನಿಮಗೆ ಹೇಳಿದಂತೆ ನಿಮಗಿಂತ ಮೊದಲು ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ” ಎಂದು ಹೇಳಿದನು.

8ಅವರು ವಿಸ್ಮಯಗೊಂಡು ನಡುಗುತ್ತಾ ಹೊರಕ್ಕೆ ಬಂದು ಸಮಾಧಿಯ ಬಳಿಯಿಂದ ಓಡಿಹೋದರು; ಅವರು ಹೆದರಿಕೊಂಡಿದ್ದರಿಂದ ಯಾರಿಗೂ ಏನೂ ಹೇಳಲಿಲ್ಲ.

ಲೂಕನು

ಲೂಕ 24:1–6, 8–12

1ಆ ಸ್ತ್ರೀಯರು ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ ಎದ್ದು, ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು.

2ಸಮಾಧಿಗೆ ಮುಚ್ಚಿದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವುದನ್ನು ಕಂಡು,

3ಒಳಕ್ಕೆ ಹೋಗಿ ನೋಡಿದಾಗ ಯೇಸು ಕರ್ತನ ದೇಹವು ಅಲ್ಲಿ ಕಾಣಲಿಲ್ಲ.

4ಈ ವಿಷಯವಾಗಿ ಅವರಿಗೆ ಗಲಿಬಿಲಿ ಉಂಟಾದಾಗ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿಯಲ್ಲಿ ನಿಂತುಕೊಂಡರು.

5ಆ ಸ್ತ್ರೀಯರು ಭಯಹಿಡಿದವರಾಗಿ ತಲೆ ತಗ್ಗಿಸಿಕೊಂಡು ನಿಂತಿರುವಾಗ ಆ ಪುರುಷರು ಅವರಿಗೆ, “ಸತ್ತವರೊಳಗೆ ಬದುಕಿರುವವನನ್ನು ಹುಡುಕುವುದೇನು?

6ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ. ಆತನು ಇನ್ನೂ ಗಲಿಲಾಯದಲ್ಲಿದ್ದಾಗ, ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು, ಶಿಲುಬೆಗೆ ಹಾಕಲ್ಪಟ್ಟು, ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವುದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದನು.

8ಸ್ತ್ರೀಯರು ಆತನ ಮಾತುಗಳನ್ನು ನೆನಪಿಗೆ ತಂದುಕೊಂಡು,

9ಸಮಾಧಿಯ ಬಳಿಯಿಂದ ಹಿಂತಿರುಗಿ ಹೋಗಿ ಆ ಸಂಗತಿಗಳನ್ನೆಲ್ಲಾ ಹನ್ನೊಂದು ಮಂದಿ ಶಿಷ್ಯರಿಗೂ ಉಳಿದವರೆಲ್ಲರಿಗೂ ತಿಳಿಸಿದರು.

10ಆ ಸ್ತ್ರೀಯರು ಯಾರಾರೆಂದರೆ ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಇವರೇ. ಇವರ ಜೊತೆಯಲ್ಲಿದ್ದ ಬೇರೆ ಸ್ತ್ರೀಯರು ಸಹ ಅಪೊಸ್ತಲರಿಗೆ ಆ ಸಂಗತಿಗಳನ್ನು ಹೇಳಿದರು.

11ಅವರು ನಂಬಲಿಲ್ಲ ಏಕೆಂದರೆ ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು.

12ಆದರೆ ಪೇತ್ರನು ಎದ್ದು ಸಮಾಧಿ ಬಳಿಗೆ ಓಡಿಹೋಗಿ, ಬೊಗ್ಗಿ ನೋಡಿ, ನಾರುಬಟ್ಟೆಗಳನ್ನು ಮಾತ್ರ ಕಂಡು, ನಡೆದ ಸಂಗತಿಗೆ ತನ್ನಲ್ಲಿ ಆಶ್ಚರ್ಯಪಡುತ್ತಾ ಹೊರಟು ಹೋದನು.

ಯೋಹಾನನು

ಯೋಹಾ 20:1–10

1ವಾರದ ಮೊದಲನೆಯ ದಿನದಲ್ಲಿ ಮಗ್ದಲದ ಮರಿಯಳು ಬೆಳಿಗ್ಗೆ ಇನ್ನೂ ಕತ್ತಲೆ ಇರುವಾಗಲೇ ಸಮಾಧಿಯ ಬಳಿಗೆ ಬಂದು ಸಮಾಧಿಯ ಕಲ್ಲು ಅಲ್ಲಿಂದ ಉರುಳಿ ಹೋಗಿರುವುದನ್ನು ಕಂಡಳು.

2ಆಗ ಆಕೆಯು ಸೀಮೋನ್ ಪೇತ್ರನ ಬಳಿಗೂ ಮತ್ತು ಯೇಸುವಿಗೆ ಪ್ರಿಯನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೂ ಓಡಿಬಂದು ಅವರಿಗೆ, “ಕರ್ತನನ್ನು ಅವರು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿದ್ದಾರೆ; ಅವರು ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲವೆಂದು” ಹೇಳಿದಳು

3ಆಗ ಪೇತ್ರನೂ ಮತ್ತು ಇನ್ನೊಬ್ಬ ಶಿಷ್ಯನೂ ಹೊರಟು ಸಮಾಧಿಯ ಕಡೆಗೆ ಹೋದರು.

4ಅವರಿಬ್ಬರೂ ಜೊತೆಯಾಗಿ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ವೇಗವಾಗಿ ಓಡಿ ಮೊದಲೇ ಸಮಾಧಿಗೆ ಬಂದನು.

5ಅವನು ಬಗ್ಗಿ ನೋಡಿದಾಗ ನಾರುಬಟ್ಟೆಗಳು ಬಿದ್ದಿರುವುದನ್ನು ಕಂಡನು. ಆದರೂ ಅವನು ಒಳಗೆ ಹೋಗಲಿಲ್ಲ.

6ಸೀಮೋನ್ ಪೇತ್ರನು ಅವನ ಹಿಂದೆ ಬಂದು ಸಮಾಧಿಯೊಳಕ್ಕೆ ಹೋಗಿ, ಆ ನಾರುಬಟ್ಟೆಗಳು ಬಿದ್ದಿರುವುದನ್ನೂ

7ಆತನ ತಲೆಯ ಮೇಲಿದ್ದ ಕೈವಸ್ತ್ರವು, ಆ ನಾರು ಬಟ್ಟೆಗಳೊಂದಿಗೆ ಇರದೇ, ಸುತ್ತಿ ಒಂದು ಕಡೆಯಲ್ಲಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ನೋಡಿದನು.

8ಆಗ ಸಮಾಧಿಯ ಬಳಿಗೆ ಮೊದಲು ಬಂದಿದ್ದ ಆ ಮತ್ತೊಬ್ಬ ಶಿಷ್ಯನು ಸಹ ಒಳಗೆ ಹೋಗಿ ಬಗ್ಗಿ ನೋಡಿ ನಂಬಿದನು.

9ಆತನು ಸತ್ತ ಮೇಲೆ ಜೀವದಿಂದೆದ್ದು ಬರಬೇಕೆಂಬುದಾಗಿ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ಅವರಿಗೆ ಇನ್ನೂ ತಿಳಿದಿರಲಿಲ್ಲ.

10ತರುವಾಯ ಆ ಶಿಷ್ಯರು ಪುನಃ ತಮ್ಮ ಮನೆಗೆ ಹೋದರು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು