1ತರುವಾಯ ಯೇಸು ಜನರ ಗುಂಪಿಗೂ ಹಾಗು ತನ್ನ ಶಿಷ್ಯರಿಗೂ ಹೇಳಿದ್ದೇನೆಂದರೆ,
2“ಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ;
3ಆದುದರಿಂದ ಅವರು ನಿಮಗೆ ಏನೆಲ್ಲಾ ಆಜ್ಞಾಪಿಸುತ್ತಾರೋ ಅದನ್ನೆಲ್ಲಾ ಕೈಕೊಂಡು ನಡೆಯಿರಿ; ಆದರೆ ಅವರ ಕ್ರಿಯೆಗಳ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೆಯೇ ಹೊರತು ಅದರಂತೆ ನಡೆಯುವುದಿಲ್ಲ.
4ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ; ಆದರೆ ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲೊಲ್ಲರು.
5ಅವರು ತಮ್ಮ ಕೆಲಸಗಳನ್ನೆಲ್ಲಾ ಜನರು ನೋಡಬೇಕೆಂದು ಮಾಡುತ್ತಾರೆ. ತಾವು ಕಟ್ಟಿಕೊಳ್ಳುವ ಜ್ಞಾಪಕಪಟ್ಟಿಗಳನ್ನು ಅಗಲಮಾಡುತ್ತಾರೆ. ತಮ್ಮ ವಸ್ತ್ರಗಳ ಗೊಂಡೆಗಳನ್ನು ಉದ್ದಮಾಡಿಕೊಳ್ಳುತ್ತಾರೆ.
6ಇದಲ್ಲದೆ ಔತಣ ಉತ್ಸವಗಳಲ್ಲಿ ಪ್ರಥಮಸ್ಥಾನ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು;
7ಅಂಗಡಿ ಬೀದಿಗಳಲ್ಲಿ ನಮಸ್ಕಾರಗಳು, ಜನರಿಂದ ‘ಗುರುಗಳೆನ್ನಿಸಿಕೊಳ್ಳುವುದು,’ ಇವುಗಳೇ ಅವರಿಗೆ ಇಷ್ಟ.
8ಆದರೆ ನೀವು ‘ಬೋಧಕರೆನ್ನಿಸಿಕೊಳ್ಳಬೇಡಿರಿ;’ ಏಕೆಂದರೆ ಕ್ರಿಸ್ತನೊಬ್ಬನೇ ನಿಮಗಿರುವ ಬೋಧಕನು ಮತ್ತು ನೀವೆಲ್ಲರೂ ಸಹೋದರರು.
9ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಿಮ್ಮ ತಂದೆ ಎಂದು ಕರೆಯಬೇಡಿರಿ; ಏಕೆಂದರೆ ಪರಲೋಕದಲ್ಲಿರುವಾತನೊಬ್ಬನೇ ನಿಮ್ಮ ತಂದೆ
10ಮತ್ತು ‘ಗುರುವೆಂದು’ ಅನ್ನಿಸಿಕೊಳ್ಳಬೇಡಿರಿ; ಏಕೆಂದರೆ, ಕ್ರಿಸ್ತನೊಬ್ಬನೇ ನಿಮಗಿರುವ ಗುರುವು
11ಆದರೆ ನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು.
12ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.