ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೆರೂಸಲೇಮಿನಲ್ಲಿ
ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೆರೂಸಲೇಮಿನಲ್ಲಿ
ಕ್ರಿಸ್ತನು ಯಾರ ಮಗನು?
ಮತ್ತಾ 22:41–46 · ಮಾರ್ಕ 12:35–37 · ಲೂಕ 20:41–42, 44
ಮತ್ತಾ 22:41–4641ಫರಿಸಾಯರು ಕೂಡಿಬಂದಿರಲಾಗಿ ಯೇಸು ಅವರಿಗೆ,
42“ಬರಬೇಕಾದ ಕ್ರಿಸ್ತನ ವಿಷಯವಾಗಿ ನಿಮಗೆ ಹೇಗೆ ತೋರುತ್ತದೆ? ಆತನು ಯಾರ ಮಗನು?” ಎಂದು ಕೇಳಿದ್ದಕ್ಕೆ
43ಅವರು ಆತನಿಗೆ, “ದಾವೀದನ ಮಗನು” ಎಂದು ಹೇಳಿದರು. ಅದಕ್ಕೆ ಆತನು, “ಹಾಗಾದರೆ, ದಾವೀದನೇ ಪವಿತ್ರಾತ್ಮನ ಪ್ರೇರಣೆಯಿಂದ ಆತನನ್ನು ಕರ್ತನು ಎಂದು ಕರೆದಿದ್ದಾನಲ್ಲಾ, ಅದು ಹೇಗೆ?
44“‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು’ ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು.
45ಈ ಮಾತಿನಲ್ಲಿ ದಾವೀದನೇ ಆತನನ್ನು ‘ಕರ್ತನೆಂದು’ ಕರೆದ ಮೇಲೆ ಆತನು ಅವನಿಗೆ ಮಗನಾಗುವುದು ಹೇಗೆ?” ಅಂದನು.
46ಅದಕ್ಕೆ ಉತ್ತರವಾಗಿ ಯಾರೂ ಒಂದು ಮಾತನ್ನಾದರೂ ಆತನಿಗೆ ಹೇಳಲಾರದೆ ಹೋದರು. ಇದಲ್ಲದೆ ಅಂದಿನಿಂದ ಆತನನ್ನು ಪ್ರಶ್ನಿಸಲು ಯಾರೂ ಧೈರ್ಯಪಡಲಿಲ್ಲ.
ಮಾರ್ಕ 12:35–3735ಯೇಸು ದೇವಾಲಯದಲ್ಲಿ ಉಪದೇಶಮಾಡುತ್ತಿರಲಾಗಿ ಆತನು ಅವರನ್ನು, “ಶಾಸ್ತ್ರಿಗಳು ಕ್ರಿಸ್ತನನ್ನು ದಾವೀದನ ಮಗನೆಂದು ಹೇಳುತ್ತಾರಲ್ಲಾ ಅದು ಹೇಗೆ?
36“‘ನಾನು ನಿನ್ನ ಶತ್ರುಗಳನ್ನು ನಿನ್ನ ಪಾದದಡಿ ಹಾಕುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು’ ಎಂಬುದಾಗಿ ದಾವೀದನೇ ಪವಿತ್ರಾತ್ಮನ ಪ್ರೇರಣೆಯಿಂದ ಹೇಳಿದ್ದಾನೆ.
37ದಾವೀದನೇ ಆತನನ್ನು ‘ಕರ್ತನೆಂದು’ ಹೇಳಿರುವಲ್ಲಿ ಆತನು ಅವನಿಗೆ ಮಗನಾಗುವುದು ಹೇಗೆ?” ಎಂದು ಪ್ರಶ್ನಿಸಿದನು. ಜನರ ದೊಡ್ಡ ಸಮೂಹವು ಆತನ ಮಾತನ್ನು ಸಂತೋಷದಿಂದ ಕೇಳುತ್ತಿತ್ತು.
ಲೂಕ 20:41–42, 4441ಆಗ ಯೇಸು, “ಬರಬೇಕಾದ ಕ್ರಿಸ್ತನು ದಾವೀದನ ಮಗನೆಂದು ಹೇಳುತ್ತಾರಲ್ಲಾ, ಅದು ಹೇಗಾದೀತು?
42“‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳಿಗೆ ಪೀಠವನ್ನಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು’ ಎಂಬುದಾಗಿ ಕೀರ್ತನೆಗಳ ಗ್ರಂಥದಲ್ಲಿ ದಾವೀದನೇ ಹೇಳುತ್ತಾನಲ್ಲಾ.
44“ದಾವೀದನು ಆತನನ್ನು ‘ಒಡೆಯನೆಂದು’ ಹೇಳಿದ ಮೇಲೆ ಆತನು ಅವನಿಗೆ ಮಗನಾಗುವುದು ಹೇಗೆ?” ಎಂದು ಅವರನ್ನು ಕೇಳಿದನು.
ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.