1ತರುವಾಯ ಫರಿಸಾಯರು ಸದ್ದುಕಾಯರು ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸಿಕೊಡಬೇಕೆಂದು ಕೇಳಿದರು.
2ಆತನು ಅವರಿಗೆ, “‘ನೀವು ಸಂಜೆಯಾದಾಗ ಆಕಾಶವು ಕೆಂಪಾಗಿದ್ದರೆ ಹಿತಕರವಾದ ವಾತಾವರಣವಿರುತ್ತದೆ’ ಅನ್ನುತ್ತೀರಿ.
3ಬೆಳಗ್ಗೆ, ‘ಆಕಾಶವು ಮೋಡ ಕವಿದುಕೊಂಡು ಕೆಂಪಾಗಿದ್ದರೆ ಈಹೊತ್ತು ಗಾಳಿ ಮಳೆ ಬರುತ್ತದೆ’ ಅನ್ನುತ್ತೀರಿ. ಆಕಾಶದಲ್ಲಿ ಕಾಣುವ ಸೂಚನೆಗಳನ್ನು ತಿಳಿದುಕೊಳ್ಳಬಲ್ಲವರಾಗಿದ್ದೀರಿ, ಆದರೆ ಈ ಕಾಲದ ಸೂಚನೆಗಳನ್ನು ತಿಳಿದುಕೊಳ್ಳಲು ನಿಮಗೆ ಸಾಧ್ಯವಿಲ್ಲವೋ?
4ವ್ಯಭಿಚಾರಿಣಿಯಂತಿರುವ ಈ ದುಷ್ಟ ಸಂತತಿಯು ಸೂಚಕಕಾರ್ಯವನ್ನು ನೋಡಬೇಕೆಂದು ಹುಡುಕುತ್ತದೆ. ಆದರೆ ಯೋನನ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಇದಕ್ಕೆ ಸಿಕ್ಕುವುದಿಲ್ಲ” ಎಂದು ಉತ್ತರ ಕೊಟ್ಟನು. ತರುವಾಯ ಆತನು ಅವರನ್ನು ಬಿಟ್ಟು ಹೊರಟು ಹೋದನು.
5ಶಿಷ್ಯರು ರೊಟ್ಟಿ ಬುತ್ತಿ ತೆಗೆದುಕೊಳ್ಳುವುದನ್ನು ಮರೆತು ಆಚೇ ದಡಕ್ಕೆ ಬಂದಿದ್ದರು.
6ಯೇಸು ಅವರಿಗೆ “ಎಚ್ಚರಿಕೆ! ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ” ಎಂದು ಹೇಳಿದನು.
7ಅದಕ್ಕೆ ಅವರು, “ನಾವು ರೊಟ್ಟಿಯನ್ನು ತೆಗೆದುಕೊಳ್ಳದೆ ಬಂದಿದ್ದರಿಂದ” ಹೀಗೆ ಹೇಳಿರಬೇಕು ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
8ಯೇಸು ಅದನ್ನು ತಿಳಿದು, “ಅಲ್ಪ ವಿಶ್ವಾಸಿಗಳೇ, ರೊಟ್ಟಿ ಬುತ್ತಿಯನ್ನು ತಂದಿಲ್ಲವೆಂದು ನಿಮ್ಮಲ್ಲೇ ಏಕೆ ಚರ್ಚೆಮಾಡುತ್ತಿದ್ದೀರಿ?
9ಆ ಐದು ರೊಟ್ಟಿಗಳನ್ನು ಐದು ಸಾವಿರ ಜನರಿಗೆ ಹಂಚಿದ ನಂತರ ಎಷ್ಟು ಪುಟ್ಟಿ ಶೇಖರಿಸಿಕೊಂಡಿದ್ದಿರಿ?
10ಇಲ್ಲವೆ ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರಿಗೆ ಹಂಚಿದ ನಂತರ ಎಷ್ಟು ಪುಟ್ಟಿ ತುಂಬಿಟ್ಟಿರಿ? ನೀವು ಇನ್ನೂ ಗ್ರಹಿಸಲಿಲ್ಲವೇ? ನಿಮಗೆ ನೆನಪಿಲ್ಲವೇ?
11ನಾನು ರೊಟ್ಟಿಯನ್ನು ಕುರಿತು ಮಾತನಾಡಲಿಲ್ಲ, ಎಂಬುದು ನಿಮಗೆ ಹೇಗೆ ತಿಳಿಯದು? ಆದರೆ ನಾನು ನಿಮಗೆ ಹೇಳಿದು ಏನೆಂದರೆ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರ ಬೇಕೆಂದೇ” ಅಂದನು.
12ಆಗ ಅವರು ರೊಟ್ಟಿಯ ಹುಳಿಹಿಟ್ಟನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಆತನು ತಮಗೆ ಹೇಳಲಿಲ್ಲ; ಆದರೆ ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಿದನು ಎಂಬುದಾಗಿ ತಿಳಿದುಕೊಂಡರು.