32ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ನಾನು ಈ ಜನರನ್ನು ನೋಡಿ ಕನಿಕರಪಡುತ್ತೇನೆ. ಏಕೆಂದರೆ ಅವರು ಮೂರು ದಿನಗಳಿಂದಲೂ ನನ್ನ ಜೊತೆಯಲ್ಲಿದ್ದಾರೆ. ಅವರಿಗೆ ತಿನ್ನುವುದಕ್ಕೆ ಏನೂ ಇಲ್ಲ. ಅವರನ್ನು ಹಸಿವಿನಿಂದ ಕಳುಹಿಸಿಬಿಡುವುದಕ್ಕೆ ನನಗೆ ಇಷ್ಟವಿಲ್ಲ. ಅವರು ದಾರಿಯಲ್ಲಿ ಬಳಲಿ ಹೋದಾರು” ಎಂದು ಹೇಳಿದನು.
33ಶಿಷ್ಯರು ಆತನಿಗೆ, “ಇಷ್ಟು ದೊಡ್ಡ ಜನರ ಗುಂಪನ್ನು ತೃಪ್ತಿಪಡಿಸಲಾಗುವಷ್ಟು ರೊಟ್ಟಿಯು ಈ ಅಡವಿಯಲ್ಲಿ ನಮಗೆ ಎಲ್ಲಿಂದ ಸಿಕ್ಕೀತು?” ಎಂದು ಹೇಳಿದರು.
34ಅದಕ್ಕೆ ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದ್ದಕ್ಕೆ ಅವರು, “ಏಳು ರೊಟ್ಟಿಗಳಿವೆ ಮತ್ತು ಕೆಲವು ಸಣ್ಣ ಮೀನುಗಳು ಅವೆ” ಅಂದರು.
35ಆಗ ಆತನು ಜನರ ಗುಂಪಿಗೆ, ನೆಲದ ಮೇಲೆ ಕುಳಿತುಕೊಳ್ಳಿರಿ ಎಂದು ಅಪ್ಪಣೆ ಕೊಟ್ಟನು.
36ಆತನು ಆ ಏಳು ರೊಟ್ಟಿಗಳನ್ನೂ ಆ ಮೀನುಗಳನ್ನೂ ತೆಗೆದುಕೊಂಡು ದೇವರಿಗೆ ಸ್ತೋತ್ರ ಮಾಡಿ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಜನರಿಗೆ ಹಂಚಿಕೊಟ್ಟರು.
37ಆ ಜನರೆಲ್ಲರೂ ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಕೂಡಿಸಲಾಗಿ ಏಳು ಪುಟ್ಟಿಗಳು ತುಂಬಿದವು.
38ಊಟಮಾಡಿದವರು ಹೆಂಗಸರು ಮಕ್ಕಳು ಅಲ್ಲದೆ ಗಂಡಸರೇ ನಾಲ್ಕು ಸಾವಿರವಿದ್ದರು.
39ತರುವಾಯ ಆತನು ಆ ಜನರ ಗುಂಪುಗಳನ್ನು ಕಳುಹಿಸಿ ಬಿಟ್ಟು ದೋಣಿಯನ್ನು ಹತ್ತಿ ಮಗದಾನ್ ಸೀಮೆಗೆ ಹೋದನು.