Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಗಲಿಲಾಯದಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಗಲಿಲಾಯದಲ್ಲಿ

ಕಾನಾನ್ಯ ಸ್ತ್ರೀಯ ನಂಬಿಕೆ

ಮತ್ತಾ 15:21–28 · ಮಾರ್ಕ 7:24–30

ಮತ್ತಾಯನು

ಮತ್ತಾ 15:21–28

21ಅನಂತರ ಯೇಸು ಅಲ್ಲಿಂದ ಹೊರಟು ತೂರ್ ಸೀದೋನ್ ಪಟ್ಟಣಗಳ ಪ್ರಾಂತ್ಯಗಳಿಗೆ ಹೋದನು.

22ಆ ಸೀಮೆಯಿಂದ ಕಾನಾನ್ಯಳಾದ ಸ್ತ್ರೀಯೊಬ್ಬಳು ಹೊರಟು ಬಂದು, “ಕರ್ತನೇ, ದಾವೀದನ ಕುಮಾರನೇ, ನನ್ನ ಮೇಲೆ ಕರುಣೆಯಿಡು, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಯಾತನೆಪಡುತ್ತಿದ್ದಾಳೆ” ಎಂದು ಕೂಗಿಕೊಂಡಳು.

23ಆದರೆ ಆತನು ಆಕೆಗೆ ಏನೂ ಉತ್ತರ ಕೊಡಲಿಲ್ಲ. ಆಗ ಆತನ ಶಿಷ್ಯರು ಬಂದು, “ಅವಳು ನಮ್ಮ ಹಿಂದೆ ಕೂಗಿಕೊಂಡು ಬರುತ್ತಿದ್ದಾಳೆ. ಆಕೆಯನ್ನು ಕಳುಹಿಸಿಬಿಡು” ಎಂದು ಆತನನ್ನು ಬೇಡಿಕೊಂಡರು.

24ಆದರೆ ಯೇಸು ಹೇಳಿದ್ದೇನೆಂದರೆ “ಕಳೆದುಹೋದ ಕುರಿಗಳಂತಿರುವ ಇಸ್ರಾಯೇಲ್ ಮನೆತನದವರ ಬಳಿಗೇ ಹೊರತು ಮತ್ತಾರ ಬಳಿಗೂ ನಾನು ಕಳುಹಿಸಲ್ಪಟ್ಟವನಲ್ಲ” ಅಂದನು.

25ಆಗ ಆಕೆ ಬಂದು ಆತನ ಮುಂದೆ ಅಡ್ಡ ಬಿದ್ದು, “ಕರ್ತನೇ ನನಗೆ ಸಹಾಯಮಾಡು” ಅಂದಳು.

26ಅದಕ್ಕಾತನು, “ಮಕ್ಕಳ ರೊಟ್ಟಿಯನ್ನು ತೆಗೆದುಕೊಂಡು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಉತ್ತರಕೊಟ್ಟನು.

27ಆಕೆಯು, “ಹೌದು, ಕರ್ತನೇ, ಆದರೆ ನಾಯಿಮರಿಗಳಂತೂ ತಮ್ಮ ಯಜಮಾನನ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ” ಅಂದಳು.

28ಆಗ ಯೇಸು ಆಕೆಗೆ, “ಸ್ತ್ರೀಯೇ ನಿನ್ನ ನಂಬಿಕೆ ದೊಡ್ಡದು. ನಿನ್ನ ಇಷ್ಟದಂತೆಯೇ ನಿನಗಾಗಲಿ” ಎಂದು ಉತ್ತರಕೊಟ್ಟನು. ಅದೇ ಗಳಿಗೆಯಲ್ಲಿ ಆಕೆಯ ಮಗಳು ಸ್ವಸ್ಥವಾದಳು.

ಮಾರ್ಕನು

ಮಾರ್ಕ 7:24–30

24ಯೇಸು ಅಲ್ಲಿಂದ ಹೊರಟು ತೂರ್ ಪಟ್ಟಣದ ಪ್ರಾಂತ್ಯಗಳಿಗೆ ಹೋಗಿ ಒಂದು ಮನೆಯೊಳಗೆ ಇಳಿದುಕೊಂಡು ಅದು ಯಾರಿಗೂ ತಿಳಿಯಬಾರದೆಂದು ಬಯಸಿದನು; ಆದರೆ ಆತನು ಗುಪ್ತವಾಗಿರುವುದಕ್ಕೆ ಸಾಧ್ಯವಾಗದೆ ಹೋಯಿತು.

25ಕೂಡಲೆ ಒಬ್ಬ ಹೆಂಗಸು ಆತನ ಸುದ್ದಿಯನ್ನು ಕೇಳಿ ಬಂದು ಆತನ ಪಾದಕ್ಕೆ ಬಿದ್ದಳು. ಆಕೆಯ ಮಗಳಿಗೆ ದೆವ್ವ ಹಿಡಿದಿತ್ತು.

26ಆ ಹೆಂಗಸು ಸುರೋಪೊಯಿನಿಕ್ಯದಲ್ಲಿ ಹುಟ್ಟಿದ ಗ್ರೀಕಳಾಗಿದ್ದಳು. ಆಕೆಯು ತನ್ನ ಮಗಳಿಗೆ ಹಿಡಿದಿದ್ದ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿಕೊಂಡಾಗ,

27ಆತನು ಆಕೆಗೆ, “ಮೊದಲು ಮಕ್ಕಳು ತಿಂದು ತೃಪ್ತಿಯಾಗಲಿ; ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಹೇಳಿದನು.

28ಆದರೆ ಅದಕ್ಕೆ ಆಕೆಯು, “ಹೌದು ಕರ್ತನೇ, ಮೇಜಿನ ಕೆಳಗಿರುವ ನಾಯಿಮರಿಗಳಂತೂ ಮಕ್ಕಳ ಕೈಯಿಂದ ಬೀಳುವ ರೊಟ್ಟೀತುಂಡುಗಳನ್ನು ತಿನ್ನುತ್ತವಲ್ಲಾ” ಎಂದು ಉತ್ತರಕೊಡಲು

29ಆತನು, “ಆಕೆಗೆ ನೀನು ಕೊಟ್ಟಿರುವ ಈ ಉತ್ತರದ ನಿಮಿತ್ತ ದೆವ್ವವು ನಿನ್ನ ಮಗಳನ್ನು ಬಿಟ್ಟು ಹೋಗಿದೆ, ನೀನು ಹೋಗು” ಅಂದನು.

30ಆಕೆಯು ತನ್ನ ಮನೆಗೆ ಹೋಗಿ ನೋಡಲಾಗಿ ಆ ಹುಡುಗಿಯು ಹಾಸಿಗೆಯ ಮೇಲೆ ಮಲಗಿದ್ದಳು; ದೆವ್ವ ಅವಳನ್ನು ಬಿಟ್ಟು ಹೋಗಿತ್ತು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು