Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೆರೂಸಲೇಮಿನಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೆರೂಸಲೇಮಿನಲ್ಲಿ

ಗೇಣಿದಾರರ ಸಾಮ್ಯ

ಮತ್ತಾ 21:33–46 · ಮಾರ್ಕ 12:1–12 · ಲೂಕ 20:9–19

ಮತ್ತಾಯನು

ಮತ್ತಾ 21:33–46

33“ಮತ್ತೊಂದು ಸಾಮ್ಯವನ್ನು ಕೇಳಿರಿ, ಒಬ್ಬ ಮನೆಯ ಯಜಮಾನನಿದ್ದನು. ಅವನು ಒಂದು ದ್ರಾಕ್ಷಾತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿಸಿ, ಅದರಲ್ಲಿ ದ್ರಾಕ್ಷಿಯ ಗಾಣವನ್ನು ಹಾಕಿಸಿ, ಕಾವಲು ಗೋಪುರವನ್ನು ಕಟ್ಟಿಸಿ, ದ್ರಾಕ್ಷಿಯ ತೋಟಗಾರರಿಗೆ ಅದನ್ನು ಗುತ್ತಿಗೆಗೆ ಕೊಟ್ಟು, ಅವನು ಬೇರೊಂದು ದೇಶಕ್ಕೆ ಹೋದನು.

34ಫಲಕಾಲ ಹತ್ತಿರವಾದಾಗ ತನಗೆ ಬರಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಆ ತೋಟಗಾರರ ಬಳಿಗೆ ತನ್ನ ಆಳುಗಳನ್ನು ಕಳುಹಿಸಲು,

35ತೋಟಗಾರರು ಅವನ ಆಳುಗಳನ್ನು ಹಿಡಿದು ಒಬ್ಬನನ್ನು ಹೊಡೆದರು, ಮತ್ತೊಬ್ಬನನ್ನು ಕಡಿದು ಹಾಕಿದರು, ಇನ್ನೊಬ್ಬನನ್ನು ಕಲ್ಲೆಸೆದು ಕೊಂದರು.

36ಆ ಯಜಮಾನನು ಪುನಃ ಮೊದಲಿನವರಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದನು, ಅವರು ಅವರಿಗೂ ಹಾಗೆಯೇ ಮಾಡಿದರು.

37ಕಡೆಯಲ್ಲಿ ‘ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು.

38ಆದರೆ ಆ ತೋಟಗಾರರು ಅವನ ಮಗನನ್ನು ಕಂಡು, ‘ಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣ’ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು

39ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು.

40ಹಾಗಾದರೆ ದ್ರಾಕ್ಷಾತೋಟದ ಧಣಿಯು ಬಂದಾಗ ಆ ತೋಟಗಾರರಿಗೆ ಏನು ಮಾಡುವನು?” ಅಂದನು.

41ಅವರು ಆತನಿಗೆ, “ಆ ಕೆಡುಕರನ್ನು ಕ್ರೂರವಾಗಿ ಸಂಹರಿಸಿ ತಕ್ಕಕಾಲಕ್ಕೆ ಹಣ್ಣುಗಳನ್ನು ತನಗೆ ಸಲ್ಲಿಸುವಂಥ ಬೇರೆ ತೋಟಗಾರರಿಗೆ ತನ್ನ ತೋಟವನ್ನು ಗುತ್ತಿಗೆಗೆ ಕೊಡುವನು” ಎಂದು ಹೇಳಿದರು.

42ಯೇಸು ಅವರಿಗೆ, “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ಮತ್ತು ನಮ್ಮ ಕಣ್ಣುಗಳಿಗೆ ಅದು ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ?’

43ಆದುದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲಾಗುವುದು.

44ಈ ಕಲ್ಲಿನ ಮೇಲೆ ಬೀಳುವವನು ತುಂಡು ತುಂಡಾಗುವನು; ಇದು ಯಾರ ಮೇಲೆ ಬೀಳುತ್ತದೋ ಅದು ಅವನನ್ನು ಪುಡಿಪುಡಿ ಮಾಡುವುದು” ಎಂದು ಹೇಳಿದನು.

45ಮುಖ್ಯಯಾಜಕರೂ ಫರಿಸಾಯರೂ ಆತನ ಸಾಮ್ಯಗಳನ್ನು ಕೇಳಿ ತಮ್ಮನ್ನೇ ಕುರಿತು ಮಾತನಾಡುತ್ತಿದ್ದಾನೆಂದು ತಿಳಿದುಕೊಂಡು. ಯೇಸುವನ್ನು ಬಂಧಿಸಲು ಸಂದರ್ಭ ನೋಡುತ್ತಿದ್ದರು;

46ಆದರೆ ಅವರು ಆತನನ್ನು ಬಂಧಿಸುವುದಕ್ಕೆ ಪ್ರಯತ್ನಿಸಿದರೂ ಜನರು ಆತನನ್ನು ಪ್ರವಾದಿಯೆಂದು ಎಣಿಸಿದ್ದರಿಂದ ಅವರಿಗೆ ಭಯಪಟ್ಟರು.

ಮಾರ್ಕನು

ಮಾರ್ಕ 12:1–12

1ಆಗ ಯೇಸು ಅವರೊಂದಿಗೆ ಸಾಮ್ಯಗಳಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು, “ಒಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ ಸುತ್ತಲೂ ಬೇಲಿ ಹಾಕಿಸಿ ದ್ರಾಕ್ಷಿಯ ಆಲೆಗಾಗಿ ಒಂದು ಗುಂಡಿಯನ್ನು ತೆಗೆಸಿ ಕಾವಲು ಗೋಪುರವನ್ನು ಕಟ್ಟಿಸಿದನು. ಬಳಿಕ ಆ ತೋಟವನ್ನು ದ್ರಾಕ್ಷಿಯ ತೋಟಗಾರರಿಗೆ ಗುತ್ತಿಗೆಗೆ ಕೊಟ್ಟು, ಹೊರದೇಶಕ್ಕೆ ಹೊರಟು ಹೋದನು.

2ಫಲಕಾಲವು ಬಂದಾಗ ತನಗೆ ಬರತಕ್ಕ ಪಾಲನ್ನು ತೆಗೆದುಕೊಳ್ಳುವುದಕ್ಕಾಗಿ ಒಬ್ಬ ಸೇವಕನನ್ನು ಗುತ್ತಿಗೆದಾರರ ಬಳಿಗೆ ಕಳುಹಿಸಿದನು.

3ಆದರೆ ಅವರು ಅವನನ್ನು ಹಿಡಿದುಕೊಂಡು ಹೊಡೆದು ಏನೂ ಕೊಡದೆ ಬರಿಗೈಯಲ್ಲಿ ಕಳುಹಿಸಿಬಿಟ್ಟರು.

4ಆ ತೋಟದ ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಲು ಅವರು ಅವನ ತಲೆಯ ಮೇಲೆ ಹೊಡೆದು ಗಾಯಗೊಳಿಸಿ ಅಪಮಾನಮಾಡಿ ಕಳುಹಿಸಿಬಿಟ್ಟರು.

5ಆದರೂ ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ಇವನನ್ನು ಅವರು ಕೊಂದು ಹಾಕಿದರು. ಇನ್ನೂ ಅನೇಕರಿಗೆ ಅವರು ಹಾಗೆಯೇ ಮಾಡಿ, ಅವರಲ್ಲಿ ಕೆಲವರನ್ನು ಹೊಡೆದರು ಮತ್ತು ಕೆಲವರನ್ನು ಕೊಂದು ಹಾಕಿದರು.

6ಅವನಿಗೆ ಕಳುಹಿಸಲು ಇನ್ನು ಒಬ್ಬನಿದ್ದನು. ಯಾರೆಂದರೆ ತನಗೆ ಪ್ರಿಯನಾಗಿದ್ದ ಒಬ್ಬನೇ ಮಗನು. ತನ್ನ ಮಗನಿಗೆ ಅವರು ಮರ್ಯಾದೆ ಕೊಡಬಹುದೆಂದು ಯಜಮಾನನು ಕೊನೆಗೆ ಅವನನ್ನು ಅವರ ಬಳಿಗೆ ಕಳುಹಿಸಿದನು.

7ಆದರೆ ಆ ಗುತ್ತಿಗೆದಾರರು, ‘ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು’ ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡು,

8ಅವರು ಅವನನ್ನು ಹಿಡಿದು ಕೊಂದು ಹಾಕಿ ದ್ರಾಕ್ಷಿಯ ತೋಟದಿಂದ ಹೊರಗೆ ಬಿಸಾಡಿದರು.

9ಹಾಗಾದರೆ ಆ ದ್ರಾಕ್ಷಾ ತೋಟದ ಯಜಮಾನನು ಏನು ಮಾಡುವನು? ಅವನು ಬಂದು ಆ ಗುತ್ತಿಗೆದಾರರನ್ನು ಸಂಹರಿಸಿ ತನ್ನ ದ್ರಾಕ್ಷಾತೋಟವನ್ನು ಬೇರೆಯವರಿಗೆ ಒಪ್ಪಿಸುವನು.

10“‘ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.

11ಇದು ಕರ್ತನಿಂದಲೇ ಆಯಿತು, ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿ ತೋರುತ್ತದೆ ಎಂಬ ಶಾಸ್ತ್ರವಚನಗಳನ್ನೂ ನೀವು ಓದಲಿಲ್ಲವೇ?’” ಎಂದನು.

12ಯೇಸು ತಮ್ಮನ್ನೇ ಕುರಿತು ಈ ಸಾಮ್ಯವನ್ನು ಹೇಳಿದ್ದಾನೆ ಎಂದು ಅವರು ತಿಳಿದುಕೊಂಡು ಆತನನ್ನು ಹಿಡಿಯುವುದಕ್ಕೆ ಸಂದರ್ಭನೋಡುತ್ತಿದ್ದರು. ಆದರೆ ಜನರಿಗೆ ಭಯಪಟ್ಟು ಆತನನ್ನು ಬಿಟ್ಟುಹೋದರು.

ಲೂಕನು

ಲೂಕ 20:9–19

9ಆಗ ಆತನು ಜನರಿಗೆ ಒಂದು ಸಾಮ್ಯವನ್ನು ಹೇಳುವುದಕ್ಕೆ ತೊಡಗಿದನು. ಅದೇನೆಂದರೆ, “ಒಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ, ಆದನ್ನು ಒಕ್ಕಲಿಗರಿಗೆ ಗುತ್ತಿಗೆಗೆ ಕೊಟ್ಟು, ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು.

10ಫಲಕಾಲ ಬಂದಾಗ ದ್ರಾಕ್ಷಿಯ ತೋಟದ ಪಾಲನ್ನು ತೆಗೆದುಕೊಳ್ಳುವುದಕ್ಕಾಗಿ ಒಬ್ಬ ಆಳನ್ನು ಒಕ್ಕಲಿಗರ ಬಳಿಗೆ ಕಳುಹಿಸಿದನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು.

11ಆ ಧಣಿಯು ಬೇರೊಬ್ಬ ಆಳನ್ನು ಕಳುಹಿಸಲಾಗಿ ಅವರು ಅವನನ್ನೂ ಹೊಡೆದು ಅವಮಾನಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು.

12ಆ ಮೇಲೆ ಮೂರನೆಯವನನ್ನು ಕಳುಹಿಸಲು ಅವರು ಅವನನ್ನೂ ಗಾಯಗೊಳಿಸಿ ಹೊರಕ್ಕೆ ಅಟ್ಟಿದರು.

13ಆಗ ಆ ದ್ರಾಕ್ಷಿಯ ತೋಟದ ಧಣಿಯು, ‘ನಾನೇನು ಮಾಡಲಿ? ನನ್ನ ಮುದ್ದುಮಗನನ್ನು ಕಳುಹಿಸುತ್ತೇನೆ, ಒಂದು ವೇಳೆ ಅವನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡನು.

14ಆದರೆ ಆ ಒಕ್ಕಲಿಗರು ದ್ರಾಕ್ಷಿಯ ತೋಟದ ಯಜಮಾನನ ಮಗನನ್ನು ಕಂಡು, ‘ಇವನೇ ಬಾಧ್ಯಸ್ಥನು; ಇವನನ್ನು ಕೊಂದು ಹಾಕೋಣ, ಇವನ ಪಿತ್ರಾರ್ಜಿತವೆಲ್ಲಾ ನಮ್ಮದಾಗುವುದು’ ಎಂದು ಒಬ್ಬರ ಸಂಗಡಲೊಬ್ಬರು ಮಾತನಾಡಿಕೊಂಡು,

15ಅವನನ್ನು ದ್ರಾಕ್ಷಿಯ ತೋಟದಿಂದ ಹೊರಕ್ಕೆ ದೊಬ್ಬಿ, ಕೊಂದು ಹಾಕಿದರು. ಹಾಗಾದರೆ ದ್ರಾಕ್ಷಿಯ ತೋಟದ ಧಣಿಯು ಅವರಿಗೆ ಏನು ಮಾಡಿಯಾನು?

16ಅವನು ಬಂದು ಆ ಒಕ್ಕಲಿಗರನ್ನು ಸಂಹರಿಸಿ ತನ್ನ ತೋಟವನ್ನು ಬೇರೆ ಜನರಿಗೆ ಮಾಡುವುದಕ್ಕೆ ಕೊಡುವನು” ಅಂದನು. ಇದನ್ನು ಜನರು ಕೇಳಿ, “ಹಾಗಾಗಬಾರದು” ಅಂದರು.

17ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, ಹಾಗಾದರೆ “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು’ ಎಂದು ಬರೆದಿರುವ ಮಾತೇನು?

18“ಈ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡುತುಂಡಾಗುವನು. ಆ ಕಲ್ಲು ಯಾರ ಮೇಲೆ ಬೀಳುವುದೋ ಅದು ಅವನನ್ನು ಪುಡಿಪುಡಿ ಮಾಡುವುದು” ಅಂದನು.

19ಶಾಸ್ತ್ರಿಗಳೂ ಮುಖ್ಯಯಾಜಕರೂ ಈ ಮಾತುಗಳನ್ನು ಕೇಳಿ ತಮ್ಮನ್ನೇ ಕುರಿತು ಈ ಸಾಮ್ಯವನ್ನು ಹೇಳಿದನು ಎಂದು ತಿಳಿದುಕೊಂಡು ಅದೇ ಗಳಿಗೆಯಲ್ಲಿ ಆತನನ್ನು ಹಿಡಿಯುವುದಕ್ಕೆ ಸಂದರ್ಭನೋಡಿದರು. ಆದರೆ ಜನರಿಗೆ ಭಯಪಟ್ಟರು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು