Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೆರೂಸಲೇಮಿನಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೆರೂಸಲೇಮಿನಲ್ಲಿ

ಯಾವ ಅಧಿಕಾರದಿಂದ?

ಮತ್ತಾ 21:23–27 · ಮಾರ್ಕ 11:27–33 · ಲೂಕ 20:1–8

ಮತ್ತಾಯನು

ಮತ್ತಾ 21:23–27

23ತರುವಾಯ ಯೇಸು ದೇವಾಲಯಕ್ಕೆ ಬಂದು ಬೋಧಿಸುತ್ತಿರುವಾಗ ಮುಖ್ಯಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು, “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಕೇಳಿದರು.

24ಯೇಸು ಅವರಿಗೆ ಹೇಳಿದ್ದೇನೆಂದರೆ, “ನಾನೂ ಸಹ ನಿಮ್ಮನ್ನು ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ನನಗೆ ಉತ್ತರಿಸಿದರೆ ಆಗ ನಾನು ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ.

25ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂದಿತು ಪರಲೋಕದಿಂದಲೋ ಅಥವಾ ಮನುಷ್ಯರಿಂದಲೋ?” ಅಂದನು. ಆಗ ಅವರು, “‘ಪರಲೋಕದಿಂದ ಬಂದಿತೆಂದು’ ನಾವು ಹೇಳಿದರೆ, ‘ಹಾಗಾದರೆ ನೀವು ಅವನನ್ನು ಏಕೆ ನಂಬಲಿಲ್ಲ’ ಎಂದು ನಮಗೆ ಕೇಳಿಯಾನು;

26‘ಮನುಷ್ಯರಿಂದ ಬಂದಿತೆಂದು’ ಹೇಳಿದರೆ, ನಮಗೆ ಜನರ ಭಯವಿದೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಒಪ್ಪಿಕೊಂಡಿದ್ದಾರಲ್ಲಾ” ಎಂಬುದಾಗಿ ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.

27ಅನಂತರ ಅವರು, “ನಾವರಿಯೆವು” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಆತನು ಅವರಿಗೆ, “ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೋ ಅದನ್ನು ನಾನು ಸಹ ನಿಮಗೆ ಹೇಳುವುದಿಲ್ಲ.

ಮಾರ್ಕನು

ಮಾರ್ಕ 11:27–33

27ಅವರು ಪುನಃ ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯದ ಆವರಣದಲ್ಲಿ ನಡೆದಾಡುತ್ತಿರಲಾಗಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಹಿರಿಯರೂ ಆತನ ಬಳಿಗೆ ಬಂದು,

28“ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಇದನ್ನು ಮಾಡುವುದಕ್ಕೆ ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಆತನನ್ನು ಕೇಳಿದರು.

29ಯೇಸು ಅವರಿಗೆ, “ನಾನೂ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ, ನನಗೆ ಉತ್ತರ ಹೇಳಿದರೆ ನಾನೂ ಸಹ ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ.

30ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ?” ಉತ್ತರಕೊಡಿರಿ ಅಂದನು.

31ಆಗ ಅವರು, “‘ಪರಲೋಕದಿಂದ ಬಂದಿತೆಂದು’ ನಾವು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ’ ಅಂದಾನು;

32‘ಮನುಷ್ಯರಿಂದ ಬಂದಿತು’” ಎಂದು ಹೇಳಿದರೆ ಏನಾಗುವುದೋ ಎಂಬುದಾಗಿ ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಳ್ಳುತ್ತಿದ್ದರು. ಯೋಹಾನನು ನಿಜವಾದ ಪ್ರವಾದಿಯೆಂದು ಜನರೆಲ್ಲರೂ ಅನುಮಾನವಿಲ್ಲದೆ ತಿಳಿದುಕೊಂಡಿದ್ದರಿಂದ ಇವರಿಗೆ ಜನರ ಭಯವಿತ್ತು.

33ಹೀಗಿರಲಾಗಿ ಅವರು, “ನಮಗೆ ಗೊತ್ತಿಲ್ಲ” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು ಅವರಿಗೆ, “ನಾನೂ ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ” ಅಂದನು.

ಲೂಕನು

ಲೂಕ 20:1–8

1ಆ ದಿನಗಳಲ್ಲಿ ಒಂದು ದಿನ ಆತನು ದೇವಾಲಯದಲ್ಲಿ ಜನರಿಗೆ ಉಪದೇಶಮಾಡುತ್ತಾ ಸುವಾರ್ತೆಯನ್ನು ಸಾರುತ್ತಿರಲಾಗಿ ಮುಖ್ಯಯಾಜಕರೂ ಶಾಸ್ತ್ರಿಗಳೂ ಸಭೆಯ ಹಿರಿಯರನ್ನು ಕೂಡಿಸಿಕೊಂಡು ಫಕ್ಕನೆ ಬಂದು,

2“ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ಹೇಳು” ಎಂದು ಆತನನ್ನು ಕೇಳಲು,

3ಯೇಸು ಅವರಿಗೆ, “ನಾನು ಸಹ ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ನನಗೆ ಹೇಳಿರಿ.

4ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ?” ಎಂದು ಅವರನ್ನು ಕೇಳಿದನು.

5ಆಗ ಅವರು, “‘ಪರಲೋಕದಿಂದ ಬಂದಿತೆಂದು ನಾವು ಹೇಳಿದರೆ ಮತ್ತೆ ನೀವು ಅವನನ್ನು ಯಾಕೆ ನಂಬಲಿಲ್ಲ ಅಂದಾನು,

6ಮನುಷ್ಯರಿಂದ ಬಂದಿತೆಂದು ಹೇಳಿದರೆ ಜನರೆಲ್ಲರೂ ಯೋಹಾನನನ್ನು ಪ್ರವಾದಿಯೆಂದು ನಂಬಿರುವುದರಿಂದ ಅವರು ನಮ್ಮನ್ನು ಕಲ್ಲೆಸೆದು ಕೊಂದಾರು’” ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡು,

7ಅದು ಎಲ್ಲಿಂದ ಬಂದಿತೋ ನಾವರಿಯೆವು ಎಂದು ಉತ್ತರಕೊಟ್ಟರು.

8ಆಗ ಯೇಸು ಅವರಿಗೆ, “ಇದನ್ನೆಲ್ಲಾ ಯಾವ ಅಧಿಕಾರದಿಂದ ಮಾಡುತ್ತೇನೋ ಅದನ್ನು ನಾನೂ ನಿಮಗೆ ಹೇಳುವುದಿಲ್ಲ” ಎಂದು ಹೇಳಿದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು