15ಅನಂತರ ಫರಿಸಾಯರು ಹೊರಟು ಯೇಸುವನ್ನು ಮಾತಿನಲ್ಲಿ ಹೇಗೆ ಸಿಕ್ಕಿಸೋಣ ಎಂದು ಕೂಡಿ ಆಲೋಚಿಸಿಕೊಂಡು
16ಆತನ ಬಳಿಗೆ ತಮ್ಮ ಶಿಷ್ಯರನ್ನು ಹೆರೋದ್ಯರ ಜೊತೆಮಾಡಿ ಕಳುಹಿಸಿದರು. ಇವರು ಯೇಸುವಿಗೆ, “ಗುರುವೇ, ನೀನು ಸತ್ಯವಂತನು, ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನು, ಯಾರಿಗೂ ಹೆದರದವನು; ನೀನು ಜನರ ದಾಕ್ಷಿಣ್ಯಕ್ಕೆ ತಕ್ಕಂತೆ ಮಾತನಾಡುವವನಲ್ಲ ಎಂದು ಬಲ್ಲೆವು.
17ಹೀಗಿರಲಾಗಿ ಕೈಸರನಿಗೆ ಸುಂಕ ಕೊಡುವುದು ನಿಯಮ ಬದ್ಧವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು” ಅಂದರು.
18ಯೇಸು ಅವರ ಕೆಡುಕನ್ನು ಅರಿತುಕೊಂಡವನಾಗಿ, “ಕಪಟಿಗಳೇ, ನನ್ನನ್ನು ಏಕೆ ಪರೀಕ್ಷೆಮಾಡುತ್ತೀರಿ?
19ಸುಂಕಕ್ಕೆ ಕೊಡುವ ನಾಣ್ಯವನ್ನು ನನಗೆ ತೋರಿಸಿರಿ” ಅನ್ನಲು ಅವರು ಆತನಿಗೆ ಒಂದು ನಾಣ್ಯವನ್ನು ತಂದು ಕೊಟ್ಟರು.
20ಆತನು, “ಈ ಸ್ವರೂಪವು ಈ ಮುದ್ರೆಯೂ ಯಾರದು?” ಎಂದು ಕೇಳಿದ್ದಕ್ಕೆ
21ಅವರು, “ಕೈಸರನದು” ಅಂದರು. ಆಗ ಆತನು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು.
22ಅವರು ಈ ಮಾತನ್ನು ಕೇಳಿ ಆಶ್ಚರ್ಯಪಟ್ಟು ಆತನನ್ನು ಬಿಟ್ಟು ಹೋದರು.