Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಗಲಿಲಾಯದಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಗಲಿಲಾಯದಲ್ಲಿ

ಪಾರ್ಶ್ವವಾಯುರೋಗಿ ಗುಣಹೊಂದುತ್ತಾನೆ

ಮತ್ತಾ 9:1–8 · ಮಾರ್ಕ 2:1–12 · ಲೂಕ 5:17–26

ಮತ್ತಾಯನು

ಮತ್ತಾ 9:1–8

1ಯೇಸು ದೋಣಿಯನ್ನು ಹತ್ತಿ ಸಮುದ್ರವನ್ನು ದಾಟಿ ತನ್ನ ಊರಿಗೆ ಬಂದನು.

2ಅಲ್ಲಿಗೆ ಯೇಸು ಬಂದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ರೋಗಿಯನ್ನು ಹೊತ್ತುಕೊಂಡು ಬಂದವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯು ರೋಗಿಗೆ, “ಮಗನೇ ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

3ಅಲ್ಲಿದ್ದ ಶಾಸ್ತ್ರಿಗಳಲ್ಲಿ ಕೆಲವರು, “ಇವನು ದೇವದೂಷಣೆ ಮಾಡುತ್ತಾನೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು.

4ಯೇಸು ಅವರ ಆಲೋಚನೆಗಳನ್ನು ತಿಳಿದು, “ನೀವು ಏಕೆ ನಿಮ್ಮ ಮನಸ್ಸಿನಲ್ಲಿ ದುರಾಲೋಚನೆಯನ್ನು ಮಾಡುತ್ತಿದ್ದೀರಿ?

5ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಅನ್ನುವುದೋ?

6ಅಥವಾ ‘ಎದ್ದು ನಡೆ’ ಅನ್ನುವದೋ? ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಅಂದನು.

7ಆಗ ಅವನು ಎದ್ದು ತನ್ನ ಮನೆಗೆ ಹೊರಟುಹೋದನು.

8ಜನರು ಇದನ್ನು ನೋಡಿ ಆಶ್ಚರ್ಯಚಕಿತರಾಗಿ, ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು.

ಮಾರ್ಕನು

ಮಾರ್ಕ 2:1–12

1ಕೆಲವು ದಿನಗಳಾದ ಮೇಲೆ ಯೇಸು ಕಪೆರ್ನೌಮಿಗೆ ಹಿಂತಿರುಗಿ ಬಂದನು. ಆತನು ಮನೆಯಲ್ಲಿದ್ದಾನೆಂಬ ವರ್ತಮಾನವು ಜನರಲ್ಲಿ ಹಬ್ಬಿತ್ತು.

2ಆಗ ಬಹು ಜನರು ಅಲ್ಲಿ ಕೂಡಿಬಂದಿದ್ದರಿಂದ ಬಾಗಿಲಿನ ಬಳಿಯಲ್ಲಿಯೂ ಕೂಡ ಸ್ಥಳವಿರಲಿಲ್ಲ. ಯೇಸು ಅವರಿಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು.

3ಅಷ್ಟರಲ್ಲಿ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ತಂದರು; ನಾಲ್ಕು ಮಂದಿಯು ಆತನನ್ನು ಹೊತ್ತುಕೊಂಡಿದರು.

4ಜನರು ಗುಂಪಾಗಿದ್ದುದರಿಂದ ಅವರು ಆತನ ಹತ್ತಿರಕ್ಕೆ ಬರಲು ಸಾಧ್ಯವಾಗದೆ ಆತನು ನಿಂತ ಸ್ಥಳಕ್ಕೆ ಸರಿಯಾಗಿ ಮನೆಯ ಮೇಲ್ಛಾವಣಿಯನ್ನು ತೆರೆದು ಕಿಂಡಿಯೊಂದನ್ನು ಮಾಡಿ ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು.

5ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ, “ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

6ಆದರೆ ಶಾಸ್ತ್ರಿಗಳಲ್ಲಿ ಕೆಲವರು ಅಲ್ಲಿ ಕುಳಿತುಕೊಂಡಿದ್ದು;

7“ಈತನು ಯಾಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ. ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು?” ಎಂದು ತಮ್ಮ ಮನಸ್ಸಿನಲ್ಲಿ ಆಲೋಚಿಸಿಕೊಳ್ಳುತ್ತಿದ್ದರು.

8ಹೀಗೆ ಆಲೋಚಿಸಿಕೊಳ್ಳುತ್ತಿದ್ದುದನ್ನು ಕೂಡಲೆ ಯೇಸು ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಯಾಕೆ ಹೀಗೆ ಯೋಚಿಸುತ್ತೀರಿ?

9ಯಾವುದು ಸುಲಭ? ಪಾರ್ಶ್ವವಾಯು ರೋಗಿಗೆ ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವುದೋ’ ಅಥವಾ ‘ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ’ ಅನ್ನುವುದೋ?

10ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದನ್ನು ನೀವು ತಿಳಿಯಬೇಕು” ಎಂದು ಹೇಳಿ ಪಾರ್ಶ್ವವಾಯು ರೋಗಿಯನ್ನು ನೋಡಿ

11“ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗೆಂದು ನಿನಗೆ ಹೇಳುತ್ತೇನೆ” ಅಂದನು.

12ಅವನು ಕೂಡಲೆ ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಅದನ್ನು ನೋಡಿದವರೆಲ್ಲರು ಆಶ್ಚರ್ಯಚಕಿತರಾದರು, “ಇದುವರೆಗೆ ನಾವು ಇಂಥದನ್ನು ಎಂದಿಗೂ ನೋಡಿದ್ದೇ” ಇಲ್ಲವೆಂದು ಹೇಳುತ್ತಾ ದೇವರಿಗೆ ಮಹಿಮೆ ಸಲ್ಲಿಸಿದರು.

ಲೂಕನು

ಲೂಕ 5:17–26

17ಒಮ್ಮೆ ಆತನು ಉಪದೇಶಮಾಡುತ್ತಿರಲು ಗಲಿಲಾಯ ಮತ್ತು ಯೂದಾಯದ ಎಲ್ಲಾ ಗ್ರಾಮಗಳಿಂದಲೂ ಯೆರೂಸಲೇಮಿನಿಂದಲೂ ಬಂದಿದ್ದ ಫರಿಸಾಯರೂ ಧರ್ಮೋಪದೇಶಕರೂ ಆತನ ಹತ್ತಿರ ಕುಳಿತುಕೊಂಡಿದ್ದರು. ಮತ್ತು ಅವರನ್ನು ಗುಣಮಾಡುವ ದೇವರ ಶಕ್ತಿಯು ಆತನಲ್ಲಿತ್ತು.

18ಹೀಗಿರುವಲ್ಲಿ ಕೆಲವು ಮಂದಿ ಗಂಡಸರು ಒಬ್ಬ ಪಾರ್ಶ್ವವಾಯು ರೋಗಿಯನ್ನು ದೋಲಿಯಲ್ಲಿ ಹೊತ್ತುಕೊಂಡು ಬಂದರು. ಅವನನ್ನು ಒಳಗೆ ತೆಗೆದುಕೊಂಡು ಹೋಗಿ ಆತನ ಮುಂದೆ ಇರಿಸಬೇಕೆಂದು ಪ್ರಯತ್ನಿಸಿದರು.

19ಜನರ ಗುಂಪು ದಟ್ಟವಾಗಿದ್ದ ಕಾರಣ ಅವನನ್ನು ಒಳಗೆ ತೆಗೆದುಕೊಂಡುಹೋಗುವ ಮಾರ್ಗವನ್ನು ಕಾಣದೆ ಮನೆಯ ಮೇಲೆ ಹತ್ತಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯ ಸಹಿತವಾಗಿ ಜನರ ನಡುವೆ ಯೇಸುವಿನ ಮುಂದೆ ಇಳಿಸಿದರು.

20ಯೇಸು ಅವರ ನಂಬಿಕೆಯನ್ನು ನೋಡಿ, “ಸ್ನೇಹಿತನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಅಂದನು.

21ಅದಕ್ಕೆ ಆ ಶಾಸ್ತ್ರಿಗಳೂ ಮತ್ತು ಫರಿಸಾಯರೂ, “ದೇವದೂಷಣೆಯ ಮಾತನಾಡುವ ಇವನು ಎಷ್ಟರವನು? ಪಾಪಗಳನ್ನು ಕ್ಷಮಿಸಲು ದೇವರೊಬ್ಬನಿಂದ ಹೊರತು ಮತ್ತಾರಿಂದಾದೀತು?” ಎಂದು ಅಂದುಕೊಳ್ಳುತ್ತಿದ್ದರು.

22ಆದರೆ ಅವರು ಹಾಗಂದುಕೊಳ್ಳುವುದನ್ನು ಯೇಸುವು ತಿಳಿದುಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುವುದೇನು?

23ಯಾವುದು ಸುಲಭ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವುದೋ? ಎದ್ದು ನಡೆ ಅನ್ನುವುದೋ?

24ಆದರೆ ಪಾಪಗಳನ್ನು ಕ್ಷಮಿಸುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಎಂದು ಹೇಳಿದನು.

25ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ಮನೆಗೆ ಹೋದನು.

26ನೋಡಿದವರೆಲ್ಲರೂ ಬೆರಗಾಗಿ ದೇವರನ್ನು ಕೊಂಡಾಡಿದರು ಮತ್ತು ಅವರು ಭಯ ಹಿಡಿದವರಾಗಿ, “ನಾವು ಈ ಹೊತ್ತು ಅಪೂರ್ವ ಸಂಗತಿಯನ್ನು ಕಂಡೆವು” ಅಂದರು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು