ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಗಲಿಲಾಯದಲ್ಲಿ
ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಗಲಿಲಾಯದಲ್ಲಿ
ಲೇವಿಯ (ಮತ್ತಾಯನ) ಕರೆ
ಮತ್ತಾ 9:9–13 · ಮಾರ್ಕ 2:13–17 · ಲೂಕ 5:27–32
ಮತ್ತಾ 9:9–139ಯೇಸು ಅಲ್ಲಿಂದ ಹಾದು ಹೋಗುತ್ತಿರುವಾಗ, ಸುಂಕ ಸಂಗ್ರಹಣೆ ಕಟ್ಟೆಯಲ್ಲಿ ಕುಳಿತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.
10ಅನಂತರ ಯೇಸು ಅವನ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಬಹು ಮಂದಿ ಸುಂಕದವರೂ ಪಾಪಿಗಳೂ ಬಂದು ಯೇಸುವಿನ ಮತ್ತು ಆತನ ಶಿಷ್ಯರ ಪಂಕ್ತಿಯಲ್ಲೇ ಕುಳಿತುಕೊಂಡರು.
11ಅದನ್ನು ನೋಡಿದ ಫರಿಸಾಯರು ಆತನ ಶಿಷ್ಯರನ್ನು, “ನಿಮ್ಮ ಗುರುವು ಸುಂಕದವರು ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು.
12ಯೇಸು ಅದನ್ನು ಕೇಳಿ, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು.
13ನೀವು ಹೋಗಿ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದವನಲ್ಲ, ಆದರೆ ಪಾಪಿಗಳನ್ನು ಕರೆಯುವುದಕ್ಕೆ ಬಂದವನು” ಅಂದನು.
ಮಾರ್ಕ 2:13–1713ಯೇಸು ಹೊರಟು ತಿರುಗಿ ಸಮುದ್ರದ ಬಳಿಗೆ ಹೋದನು. ಜನರು ಗುಂಪಾಗಿ ಆತನ ಬಳಿಗೆ ಬಂದಾಗ ಆತನು ಅವರಿಗೆ ಉಪದೇಶ ಮಾಡಿದನು.
14ಆತನು ಅಲ್ಲಿಂದ ಹೋಗುತ್ತಿರುವಾಗ ಸುಂಕ ವಸೂಲಿಮಾಡುವ ಸ್ಥಳದಲ್ಲಿ ಕುಳಿತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು, ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.
15ಅನಂತರ ಯೇಸುವು ಆ ಲೇವಿಯನ ಮನೆಯೊಳಗೆ ಊಟಮಾಡುತ್ತಿರುವಾಗ, ಬಹು ಮಂದಿ ಸುಂಕದವರೂ, ಪಾಪಿಗಳೂ ಯೇಸುವಿನ ಮತ್ತು ಆತನ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡರು. ಇಂಥವರಲ್ಲಿ ಬಹು ಮಂದಿ ಯೇಸುವನ್ನು ಹಿಂಬಾಲಿಸಿದವರಾಗಿದ್ದರು.
16ಫರಿಸಾಯರಾದ ಶಾಸ್ತ್ರಿಗಳು ಆತನು ಪಾಪಿಗಳ ಮತ್ತು ಸುಂಕದವರ ಸಂಗಡ ಊಟ ಮಾಡುವುದನ್ನು ಕಂಡು ಆತನ ಶಿಷ್ಯರಿಗೆ, “ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು.
17ಯೇಸು ಅದನ್ನು ಕೇಳಿ ಅವರಿಗೆ, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ; ಕ್ಷೇಮವಿಲ್ಲದವರಿಗೆ ಬೇಕು. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದಾತನಲ್ಲ, ಪಾಪಿಗಳನ್ನು ಕರೆಯುವುದಕ್ಕೆ ಬಂದವನು” ಅಂದನು.
ಲೂಕ 5:27–3227ಅನಂತರ ಯೇಸು ಹೊರಟು ಸುಂಕ ವಸೂಲಿಮಾಡುವ ಸ್ಥಳದಲ್ಲಿ ಕುಳಿತಿದ್ದ ಲೇವಿಯೆಂಬ ಒಬ್ಬ ಸುಂಕದವನನ್ನು ಕಂಡು, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು,
28ಅವನು ಎಲ್ಲವನ್ನೂ ಬಿಟ್ಟು ಎದ್ದು ಆತನ ಹಿಂದೆ ಹೋದನು.
29ತರುವಾಯ ಲೇವಿಯು ತನ್ನ ಮನೆಯಲ್ಲಿ ಯೇಸುವಿಗೆ ಒಂದು ದೊಡ್ಡ ಔತಣವನ್ನು ಏರ್ಪಡಿಸಿರಲು, ಸುಂಕದವರೂ ಇತರರೂ ಗುಂಪಾಗಿ ಕೂಡಿ ಬಂದು ಅವರ ಸಂಗಡ ಊಟಕ್ಕೆ ಕುಳಿತುಕೊಂಡಿದ್ದರು.
30ಅದನ್ನು ಕಂಡು ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗೊಣಗುಟ್ಟುತ್ತಾ, “ನೀವು ಸುಂಕದವರ ಮತ್ತು ಪಾಪಿಗಳ ಸಂಗಡ ಊಟಮಾಡುವುದೇಕೆ?” ಎಂದು ಕೇಳಿದರು.
31ಅದಕ್ಕೆ ಯೇಸು, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು;
32ನಾನು ನೀತಿವಂತರನ್ನಲ್ಲ, ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಪಾಪಿಗಳನ್ನು ಕರೆಯುವುದಕ್ಕೆ ಬಂದಿದ್ದೇನೆ” ಎಂದು ಅವರಿಗೆ ಉತ್ತರಕೊಟ್ಟನು.
ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.