Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಗಲಿಲಾಯದಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಗಲಿಲಾಯದಲ್ಲಿ

ಕುಷ್ಠರೋಗಿ ಶುದ್ಧನಾಗುತ್ತಾನೆ

ಮತ್ತಾ 8:1–4 · ಮಾರ್ಕ 1:40–45 · ಲೂಕ 5:12–16

ಮತ್ತಾಯನು

ಮತ್ತಾ 8:1–4

1“ಯೇಸು ಬೆಟ್ಟದಿಂದ ಕೆಳಗೆ ಇಳಿದು ಬರುವಾಗ ಜನರು ದೊಡ್ಡಗುಂಪು ಆತನ ಹಿಂದೆ ಹೋದರು.

2ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನಿಗೆ ಅಡ್ಡಬಿದ್ದು, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಅಂದನು.

3ಆತನು ಕೈಚಾಚಿ ಆತನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು. ಕೂಡಲೆ ಅವನು ಕುಷ್ಠದಿಂದ ಶುದ್ಧನಾದನು.

4ಆಗ ಯೇಸು ಅವನಿಗೆ; “ನೋಡು, ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಿಸಿದ ಕಾಣಿಕೆಯನ್ನು ಕೊಡು;” ಅದು ಅವರಿಗೆ ಸಾಕ್ಷಿಯಾಗಲಿ ಎಂದು ಹೇಳಿದನು.

ಮಾರ್ಕನು

ಮಾರ್ಕ 1:40–45

40ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿಕೊಂಡು, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು.

41ಯೇಸು ಕನಿಕರಪಟ್ಟು ತನ್ನ ಕೈ ಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು.

42ಕೂಡಲೆ ಅವನ ಕುಷ್ಠವು ಹೋಗಿ, ಅವನು ಶುದ್ಧನಾದನು.

43ಆಗ ಯೇಸು ಅವನಿಗೆ, “ಯಾರಿಗೂ ಏನೂ ಹೇಳಬೇಡ ನೋಡು;

44ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ನಿನ್ನ ಶುದ್ಧಿಗಾಗಿ ಮೋಶೆಯು ಆಜ್ಞಾಪಿಸಿರುವಂಥವುಗಳನ್ನು ಅರ್ಪಿಸು. ಅದು ಜನರಿಗೆ ಸಾಕ್ಷಿಯಾಗಿರಲಿ ಎಂದು ಖಂಡಿತವಾಗಿ” ಹೇಳಿ ಅವನನ್ನು ಕೂಡಲೆ ಕಳುಹಿಸಿ ಬಿಟ್ಟನು.

45ಆದರೆ ಅವನು ಹೊರಟುಹೋಗಿ ಎಲ್ಲಾ ಕಡೆಗೂ ಈ ಸಂಗತಿಯನ್ನು ಬಹಳವಾಗಿ ಸಾರಿ ಹಬ್ಬಿಸುವುದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಬಹಿರಂಗವಾಗಿ ಬೇರೆ ಊರುಗಳಿಗೆ ಹೋಗಲಾರದೆ ನಿರ್ಜನ ಸ್ಥಳಗಳಲ್ಲಿ ಇದ್ದನು. ಆದರೂ ಜನರು ಎಲ್ಲಾ ಕಡೆಯಿಂದಲೂ ಆತನ ಬಳಿಗೆ ಬರುತ್ತಿದ್ದರು.

ಲೂಕನು

ಲೂಕ 5:12–16

12ಆತನು ಒಂದಾನೊಂದು ಊರಿನಲ್ಲಿದ್ದಾಗ ಮೈಯೆಲ್ಲಾ ಕುಷ್ಠರೋಗ ತುಂಬಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಸಾಷ್ಟಾಂಗವೆರಗಿ, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು.

13ಆತನು ಕೈನೀಡಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು, ಶುದ್ಧನಾಗು” ಅಂದನು. ಕೂಡಲೆ ಅವನ ಕುಷ್ಠವು ವಾಸಿಯಾಯಿತು.

14ಆಗ ಆತನು ಅವನಿಗೆ, “ನೀನು ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆಯು ಆಜ್ಞಾಪಿಸಿರುವ ಕಾಣಿಕೆಯನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು, ಅದು ಜನರಿಗೆ ಸಾಕ್ಷಿಯಾಗಲಿ” ಎಂದು ಅಪ್ಪಣೆಕೊಟ್ಟನು.

15ಆದರೂ ಆತನ ಸುದ್ದಿಯು ಮತ್ತಷ್ಟು ಹಬ್ಬಿತು, ಮತ್ತು ಜನರು ಯೇಸುವಿನ ಉಪದೇಶವನ್ನು ಕೇಳುವುದಕ್ಕೂ, ತಮ್ಮ ತಮ್ಮ ರೋಗರುಜಿನಗಳನ್ನು ವಾಸಿಮಾಡಿಸಿಕೊಳ್ಳುವುದಕ್ಕೂ, ಗುಂಪುಗುಂಪಾಗಿ ಬಂದು ಸೇರಿದರು.

16ಆದರೆ ಯೇಸು ಜನರಿಂದ ಪ್ರತ್ಯೇಕಿಸಿಕೊಂಡು ನಿರ್ಜನ ಪ್ರದೇಶಗಳಿಗೆ ಹೋಗಿ ಪ್ರಾರ್ಥನೆಯನ್ನು ಮಾಡುತ್ತಿದ್ದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು