Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೇಸುವಿನ ಶ್ರಮೆಗಳು

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೇಸುವಿನ ಶ್ರಮೆಗಳು

ಗೆತ್ಸೇಮನೆ

ಮತ್ತಾ 26:36–46 · ಮಾರ್ಕ 14:32–42 · ಲೂಕ 22:39–46

ಮತ್ತಾಯನು

ಮತ್ತಾ 26:36–46

36ಅನಂತರ ಯೇಸು ತನ್ನ ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ತೋಟಕ್ಕೆ ಬಂದು ಅವರಿಗೆ, “ಇಲ್ಲೇ ಕುಳಿತುಕೊಳ್ಳಿರಿ, ನಾನು ಅತ್ತ ಹೋಗಿ ಪ್ರಾರ್ಥಿಸುತ್ತೇನೆ” ಎಂದು ಹೇಳಿ,

37ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುಂದಕ್ಕೆ ಹೋಗಿ ದುಃಖಪಟ್ಟು ಮನಗುಂದಿದವನಾದನು.

38ಮತ್ತು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರಿ” ಎಂದು ಹೇಳಿದನು.

39ಆತನು ಸ್ವಲ್ಪ ಮುಂದೆ ಹೋಗಿ ಬೋರಲು ಬಿದ್ದು, “ನನ್ನ ತಂದೆಯೇ, ಸಾಧ್ಯವಾದರೆ ಈ ಪಾನಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು.

40ಅನಂತರ ಆತನು ಶಿಷ್ಯರ ಬಳಿಗೆ ಬರಲು ಅವರು ನಿದ್ದೆಮಾಡುವುದನ್ನು ಕಂಡು ಪೇತ್ರನಿಗೆ, “ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ?

41ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ಸಿದ್ಧವಾಗಿದೆ ಆದರೆ ದೇಹವು ಬಲಹೀನವಾಗಿದೆ” ಎಂದು ಹೇಳಿದನು.

42ತಿರುಗಿ ಎರಡನೇ ಸಾರಿ ಹೋಗಿ, “ನನ್ನ ತಂದೆಯೇ, ನಾನು ಕುಡಿಯದ ಹೊರತು ಈ ಪಾತ್ರೆ ಬಿಟ್ಟುಹೋಗಲಾರದು ಎಂದಿದ್ದರೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು.

43ಆತನು ತಿರುಗಿ ಬಂದಾಗಲೂ ಅವರು ನಿದ್ದೆಮಾಡುವುದನ್ನು ಕಂಡನು; ಅವರ ಕಣ್ಣುಗಳು ಭಾರವಾಗಿದ್ದವು.

44ಅನಂತರ ಮತ್ತೆ ಅವರನ್ನು ಬಿಟ್ಟು ಹೊರಟುಹೋಗಿ ತಿರುಗಿ ಅದೇ ಮಾತುಗಳನ್ನು ಹೇಳುತ್ತಾ ಮೂರನೆಯ ಸಾರಿಯೂ ಪ್ರಾರ್ಥಿಸಿದನು.

45ತರುವಾಯ ಆತನು ಶಿಷ್ಯರ ಬಳಿಗೆ ಬಂದು ಅವರಿಗೆ, “ನೀವು ಇನ್ನು ನಿದ್ದೆ ಮಾಡಿ ವಿಶ್ರಮಿಸಿಕೊಳ್ಳುತ್ತಿದ್ದೀರೋ; ಇಗೋ, ಅ ಗಳಿಗೆ ಸಮೀಪಿಸಿತು, ಈಗ ಮನುಷ್ಯಕುಮಾರನು ಪಾಪಿಷ್ಠರ ಕೈಗೆ ಒಪ್ಪಿಸಲ್ಪಡುತ್ತಾನೆ.

46ಏಳಿರಿ, ಹೋಗೋಣ; ನನ್ನನ್ನು ಹಿಡಿದುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ ನೋಡಿರಿ” ಎಂದು ಹೇಳಿದನು.

ಮಾರ್ಕನು

ಮಾರ್ಕ 14:32–42

32ಅವರು ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದರು. ಆತನು ತನ್ನ ಶಿಷ್ಯರಿಗೆ, “ನಾನು ಪ್ರಾರ್ಥನೆ ಮಾಡುವ ತನಕ, ನೀವು ಇಲ್ಲೇ ಕುಳಿತುಕೊಂಡಿರಿ” ಎಂದು ಹೇಳಿದನು.

33ಪೇತ್ರ, ಯಾಕೋಬ, ಯೋಹಾನರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ಬಹು ಬೆಚ್ಚಿಬೆರಗಾಗಿ ಮನಗುಂದಿದವನಾದನು.

34ಮತ್ತು ಆತನು ಅವರಿಗೆ “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ ನೀವು ಇಲ್ಲೇ ಕಾದುಕೊಂಡಿದ್ದು ಎಚ್ಚರವಾಗಿರಿ” ಎಂದು ಹೇಳಿದನು.

35ಆತನು ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಬಿದ್ದು ಸಾಧ್ಯವಾದರೆ ಆ ಗಳಿಗೆಯು ತನ್ನಿಂದ ದಾಟಿಹೋಗುವಂತೆ ಪ್ರಾರ್ಥಿಸಿದನು.

36“ಅಪ್ಪಾ, ತಂದೆಯೇ, ನಿನಗೆ ಎಲ್ಲವೂ ಸಾಧ್ಯ. ಈ ಪಾನಪಾತ್ರೆಯನ್ನು ನನ್ನಿಂದ ತೆಗೆದುಬಿಡು ಆದರೂ ಇದು ನನ್ನ ಚಿತ್ತದಂತಲ್ಲ ನಿನ್ನ ಚಿತ್ತದಂತೆಯೇ ಆಗಲಿ” ಎಂದನು.

37ಆ ಮೇಲೆ ಆತನು ಬಂದು ಶಿಷ್ಯರು ನಿದ್ರೆ ಮಾಡುವುದನ್ನು ಕಂಡು ಪೇತ್ರನಿಗೆ, “ಸೀಮೋನನೇ, ನೀನು ನಿದ್ರೆಮಾಡುತ್ತಿರುವೆಯಾ? ಒಂದು ಗಳಿಗೆಯಾದರೂ ಎಚ್ಚರವಾಗಿರಲಾರೆಯಾ?

38ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಆತ್ಮವು ಸಿದ್ಧವಾಗಿದೆ; ಆದರೆ ದೇಹಕ್ಕೆ ಬಲ ಸಾಲದು” ಎಂದು ಹೇಳಿದನು.

39ಆ ಮೇಲೆ ಪುನಃ ಹೋಗಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದನು.

40ಯೇಸು ಹಿಂತಿರುಗಿ ಬಂದಾಗ ಅವರು ಪುನಃ ನಿದ್ರೆ ಮಾಡುವುದನ್ನು ಕಂಡನು ಯಾಕೆಂದರೆ ಅವರ ಕಣ್ಣುಗಳು ಭಾರವಾಗಿದ್ದವು. ಮತ್ತು ಆತನಿಗೆ ಏನು ಉತ್ತರ ಕೊಡಬೇಕೆಂದು ಅವರಿಗೆ ತಿಳಿಯಲಿಲ್ಲ.

41ಆತನು ಮೂರನೆಯ ಸಾರಿ ಅವರ ಬಳಿಗೆ ಬಂದು, “ನೀವು ಇನ್ನು ನಿದ್ರಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಿರಾ? ಸಾಕು, ಆ ಗಳಿಗೆ ಸಮೀಪಿಸಿದೆ; ಮನುಷ್ಯಕುಮಾರನು ಪಾಪಿಗಳ ಕೈಗೆ ಒಪ್ಪಿಸಲ್ಪಡುತ್ತಾನೆ.

42ಏಳಿರಿ, ಹೋಗೋಣ. ಇಗೋ, ನನ್ನನ್ನು ಪಾಪಿಗಳ ಕೈಗೆ ಹಿಡಿದುಕೊಡುವವನು ಸಮೀಪಕ್ಕೆ ಬಂದಿದ್ದಾನೆ ನೋಡಿರಿ” ಎಂದು ಹೇಳಿದನು.

ಲೂಕನು

ಲೂಕ 22:39–46

39ತರುವಾಯ ಆತನು ಪ್ರತಿದಿನದಂತೆ ಹೊರಟು ಎಣ್ಣೆಮರಗಳ ಗುಡ್ಡಕ್ಕೆ ಹೋದನು. ಶಿಷ್ಯರೂ ಆತನ ಹಿಂದೆ ಹೋದರು.

40ಆತನು ಆ ಕ್ಲುಪ್ತ ಸ್ಥಳಕ್ಕೆ ಬಂದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.

41ಆ ಮೇಲೆ ಆತನು ಅವರನ್ನು ಬಿಟ್ಟು ಕಲ್ಲೆಸೆತದಷ್ಟು ದೂರ ಹೋಗಿ, ಮೊಣಕಾಲೂರಿ,

42“ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತದಂತೆಯೇ ಆಗಲಿ” ಪ್ರಾರ್ಥಿಸಿದನು.

43ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು, ಆತನನ್ನು ಬಲಪಡಿಸಿದನು.

44ಯೇಸು ತೀವ್ರವಾದ ಮನೋವ್ಯಥೆಯುಳ್ಳವನಾಗಿ, ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ, ಆತನ ಬೆವರು ರಕ್ತದ ಹನಿಗಳೋಪಾದಿಯಲ್ಲಿ ನೆಲಕ್ಕೆ ಬೀಳುತ್ತಿತ್ತು.

45ಆತನು ಪ್ರಾರ್ಥನೆ ಮುಗಿಸಿ ಎದ್ದು ಶಿಷ್ಯರ ಬಳಿಗೆ ಬಂದು, ಅವರು ದುಃಖದಿಂದ ಬಳಲಿಹೋದವರಾಗಿ ನಿದ್ರೆಹತ್ತಿರುವುದನ್ನು ಕಂಡು,

46ಅವರಿಗೆ, “ನೀವು ನಿದ್ರೆಮಾಡುವುದೇನು? ಏಳಿರಿ, ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು