Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೇಸುವಿನ ಶ್ರಮೆಗಳು

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೇಸುವಿನ ಶ್ರಮೆಗಳು

ಪೇತ್ರನ ನಿರಾಕರಣೆಯ ಮುಂತಿಳಿವಳಿಕೆ

ಮತ್ತಾ 26:31–35 · ಮಾರ್ಕ 14:27–31 · ಲೂಕ 22:31–34 · ಯೋಹಾ 13:36–38

ಮತ್ತಾಯನು

ಮತ್ತಾ 26:31–35

31ಆಗ ಯೇಸು, ಅವರಿಗೆ, “ಕುರುಬನನ್ನು ಹೊಡೆಯುವೆನು; ಹಿಂಡಿನ ಕುರಿಗಳು ಚದರಿಹೋಗುವವು ಎಂದು ಬರೆದಿರುವ ಹಾಗೆ ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಹಿಂಜರಿಯುವಿರಿ.”

32“ಆದರೆ ನಾನು ಜೀವಿತನಾಗಿ ಎದ್ದ ಮೇಲೆ ನಿಮಗಿಂತ ಮೊದಲೇ ಗಲಿಲಾಯಕ್ಕೆ ಹೋಗುವೆನು” ಎಂದು ಹೇಳಿದನು.

33ಆದರೆ ಪೇತ್ರನು ಆತನಿಗೆ, “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಮಾತ್ರ ಎಂದಿಗೂ ಹಿಂಜರಿಯುವುದಿಲ್ಲ” ಎಂದು ಉತ್ತರ ಕೊಟ್ಟನು.

34ಯೇಸು ಪೇತ್ರನಿಗೆ, “ನಿನಗೆ ಸತ್ಯವಾಗಿ ಹೇಳುತ್ತೇನೆ, ಇದೇ ರಾತ್ರಿಯಲ್ಲಿ ಕೋಳಿ ಕೂಗುವುದಕ್ಕಿಂತ ಮೊದಲೇ ನೀನು ನನ್ನನ್ನು ಮೂರು ಸಾರಿ ನಿರಾಕರಿಸುವಿ” ಅಂದನು.

35ಪೇತ್ರನು ಆತನಿಗೆ, “ನಾನು ನಿನ್ನ ಸಂಗಡ ಸಾಯಬೇಕಾಗಿಬಂದರೂ ನಿನ್ನನ್ನು ನಿರಾಕರಿಸುವುದಿಲ್ಲ” ಎಂದು ಹೇಳಿದನು. ಅದರಂತೆ ಶಿಷ್ಯರೆಲ್ಲರೂ ಹೇಳಿದರು.

ಮಾರ್ಕನು

ಮಾರ್ಕ 14:27–31

27ಆಗ ಯೇಸು ಅವರಿಗೆ, “ನೀವೆಲ್ಲರೂ ನನ್ನನ್ನು ಬಿಟ್ಟು ಓಡಿಹೋಗುವಿರಿ. ಏಕೆಂದರೆ; “‘ನಾನು ಕುರುಬನನ್ನು ಹೊಡೆಯುವೆನು; ಕುರಿಗಳು ಚದರಿ ಹೋಗುವವು’ ಎಂದು ಬರೆದಿದೆಯಲ್ಲಾ ಅಂದನು.

28ಆದರೂ ನಾನು ಸತ್ತು ಜೀವಿತನಾಗಿ ಎದ್ದಮೇಲೆ ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುವೆನು” ಎಂದು ಹೇಳಿದನು.

29ಪೇತ್ರನು ಯೇಸುವಿಗೆ, “ಎಲ್ಲರೂ ಬಿಟ್ಟುಹೋದರೂ ನಾನು ನಿನ್ನನ್ನು ಬಿಟ್ಟುಹೋಗುವುದಿಲ್ಲ” ಎಂದು ಹೇಳಿದನು.

30ಯೇಸುವು ಆತನಿಗೆ, “ಸತ್ಯವಾಗಿ ಹೇಳುತ್ತೇನೆ ಇಂದು ಈ ರಾತ್ರಿಯಲ್ಲಿಯೇ ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ” ಎಂದನು.

31ಆದರೆ ಅವನು, “ನಾನು ನಿನ್ನ ಸಂಗಡ ಸಾಯಬೇಕಾಗಿ ಬಂದರೂ ನಿನ್ನನ್ನು ನಿರಾಕರಿಸುವುದೇ ಇಲ್ಲವೆಂದು” ಬಹು ಖಂಡಿತವಾಗಿ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು.

ಲೂಕನು

ಲೂಕ 22:31–34

31“ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿನ್ನನ್ನು ಗೋದಿಯಂತೆ ಕೇರಬೇಕೆಂದು ಅಪ್ಪಣೆ ಕೇಳಿಕೊಂಡನು.

32ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು” ಎಂದು ಹೇಳಿದನು.

33ಆದರೆ ಅವನು, “ಕರ್ತನೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಅನ್ನಲು,

34ಆತನು, “ಪೇತ್ರನೇ, ನನ್ನ ವಿಷಯದಲ್ಲಿ ಇವನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವ ತನಕ ಈಹೊತ್ತು ಕೋಳಿ ಕೂಗುವುದಿಲ್ಲವೆಂದು ನಿನಗೆ ಹೇಳುತ್ತೇನೆ” ಅಂದನು.

ಯೋಹಾನನು

ಯೋಹಾ 13:36–38

36ಸೀಮೋನ್ ಪೇತ್ರನು ಆತನಿಗೆ, “ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ?” ಎಂದು ಕೇಳಿದ್ದಕ್ಕೆ ಯೇಸು ಅವನಿಗೆ, “ನಾನು ಹೋಗುವ ಕಡೆಗೆ, ಈಗ ನೀನು ನನ್ನನ್ನು ಹಿಂಬಾಲಿಸಲಾರೆ. ಅನಂತರ ನೀನು ನನ್ನನ್ನು ಹಿಂಬಾಲಿಸುವೆ” ಎಂದನು.

37ಪೇತ್ರನು ಆತನಿಗೆ, “ಕರ್ತನೇ, ನಾನು ಈಗ ನಿನ್ನನ್ನು ಏಕೆ ಹಿಂಬಾಲಿಸಲಾರೆನು? ನಿನಗಾಗಿ ನನ್ನ ಪ್ರಾಣವನ್ನೇ ಕೊಡುವೆನು” ಎಂದು ಹೇಳಿದನು.

38ಆಗ ಯೇಸು ಅವನಿಗೆ, “ನೀನು ನನಗಾಗಿ ಪ್ರಾಣವನ್ನೇ ಕೊಡುವೆಯಾ? ನಿನಗೆ ನಿಜನಿಜವಾಗಿ ಹೇಳುತ್ತೇನೆ: ನೀನು ನನ್ನನ್ನು ಮೂರು ಸಾರಿ ನಿರಾಕರಿಸುವ ತನಕ ಕೋಳಿಯು ಕೂಗುವುದೇ ಇಲ್ಲ” ಎಂದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು