47ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮುಖ್ಯಯಾಜಕರ ಹಾಗು ಜನರ ಹಿರಿಯರ ಕಡೆಯಿಂದ ಬಹು ಜನರ ಗುಂಪು ಕತ್ತಿ, ದೊಣ್ಣೆಗಳನ್ನು ಹಿಡಿದುಕೊಂಡು ಅವನ ಸಂಗಡ ಬಂದರು.
48ಇದಲ್ಲದೆ ಆತನನ್ನು ಹಿಡಿದುಕೊಡುವವನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿಯಿರಿ” ಎಂದು ಮುನ್ಸೂಚನೆ ನೀಡಿದ್ದನು.
49ಕೂಡಲೇ ಅವನು ಯೇಸುವಿನ ಬಳಿಗೆ ಬಂದು, “ಗುರುವೇ ನಮಸ್ಕಾರ” ಎಂದು ಹೇಳಿ ಆತನಿಗೆ ಮುದ್ದಿಟ್ಟನು.
50ಯೇಸು ಅವನಿಗೆ, “ಗೆಳೆಯನೇ, ನೀನು ಯಾಕೆ ಬಂದಿರುವೇ” ಎಂದು ಹೇಳಿದನು. ಅವರು ಹತ್ತಿರಕ್ಕೆ ಬಂದು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು.
51ಇಗೋ ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ಕೈಚಾಚಿ ತನ್ನ ಕತ್ತಿಯನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿ ಹಾಕಿದನು.
52ಆಗ ಯೇಸು ಅವನಿಗೆ, “ನಿನ್ನ ಕತ್ತಿಯನ್ನು ತಿರುಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರೂ ಕತ್ತಿಯಿಂದ ನಾಶವಾಗುವರು,
53ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆ, ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವುದಿಲ್ಲವೆಂದು ಭಾವಿಸುತ್ತೀಯೋ?
54ಕಳುಹಿಸಿಕೊಟ್ಟರೆ ನನಗೆ ಹೀಗೀಗೆ ಆಗಬೇಕೆಂಬ ಶಾಸ್ತ್ರದ ಮಾತುಗಳು ನೆರವೇರುವುದಾದರೂ ಹೇಗೆ?” ಎಂದು ಹೇಳಿದನು.
55ಅದೇ ಸಮಯದಲ್ಲಿ ಯೇಸು ಗುಂಪಾಗಿ ಕೂಡಿಬಂದಿದ್ದ ಜನರಿಗೆ, “ಕಳ್ಳನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನು ದೊಣ್ಣೆಗಳನ್ನು ತೆಗೆದುಕೊಂಡು ನನ್ನನ್ನು ಹಿಡಿಯುವುದಕ್ಕೆ ಬಂದಿರಾ? ನಾನು ಪ್ರತಿದಿನ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲವಲ್ಲಾ;
56ಆದರೆ ಪ್ರವಾದಿಗಳು ಬರೆದ ವಚನಗಳು ನೆರವೇರುವಂತೆ ಇದೆಲ್ಲಾ ಆಯಿತು” ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.