1ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿಗೆ ಸಮೀಪಿಸಿ ಆಲಿವ್ ಎಣ್ಣೆಯ ಮರಗಳ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೆ ಬಂದಾಗ
2ಆತನು ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಹೋದಕೂಡಲೆ ಅಲ್ಲಿ ಕಟ್ಟಿರುವ ಕತ್ತೆಯನ್ನೂ ಅದರೊಂದಿಗೆ ಇರುವ ಮರಿಯನ್ನೂ ಕಾಣುವಿರಿ; ಅವುಗಳನ್ನು ಬಿಚ್ಚಿ ನನ್ನ ಹತ್ತಿರಕ್ಕೆ ತನ್ನಿರಿ.
3ಯಾವನಾದರೂ ನಿಮಗೆ ಏನಾದರೂ ಹೇಳಿದರೆ, ‘ಇವು ನಮ್ಮ ಕರ್ತನಿಗೆ ಬೇಕಾಗಿವೆ’ ಎಂದು ನೀವು ಹೇಳಿರಿ; ಅವನು ಕೂಡಲೆ ಅವುಗಳನ್ನು ಬಿಟ್ಟು ಕೊಡುವನು” ಎಂದು ಹೇಳಿ ಕಳುಹಿಸಿದನು.
4ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದಾಯಿತು; ಅದೇನೆಂದರೆ,
5“ಚೀಯೋನ್ ಪುತ್ರಿಯೇ, ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಿದ್ದಾನೆ; ಆತನು ಸಾತ್ವಿಕ ಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆಂದು” ಹೇಳಿರಿ ಎಂಬುದು.
6ಆಗ ಶಿಷ್ಯರು ಹೋಗಿ ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿದರು.
7ಕತ್ತೆಯನ್ನೂ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಲು ಯೇಸು ಹತ್ತಿ ಕುಳಿತುಕೊಂಡನು.
8ಆಗ ಜನರ ಗುಂಪಿನಲ್ಲಿ ಬಹಳ ಮಂದಿ ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು; ಬೇರೆ ಕೆಲವರು ಮರಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು.
9ಆತನ ಹಿಂದೆ ಮುಂದೆ ಗುಂಪಾಗಿ ಹೋಗುತ್ತಿದ್ದ ಜನರು, “ದಾವೀದನ ಕುಮಾರನಿಗೆ ಹೊಸನ್ನ! ಕರ್ತನ ಹೆಸರಿನಲ್ಲಿ ಬರುವವನು ಧನ್ಯನು! ಮೇಲಣ ಲೋಕಗಳಲ್ಲಿ ಹೊಸನ್ನ!” ಎಂದು ಆರ್ಭಟಿಸಿದರು.
10ಯೇಸು ಯೆರೂಸಲೇಮನ್ನು ಪ್ರವೇಶಿಸಲು ಪಟ್ಟಣದಲ್ಲೆಲ್ಲಾ ಗದ್ದಲವಾಗಿ, “ಈತನು ಯಾರು?” ಅಂದರು.
11ಅದಕ್ಕೆ ಆ ಗುಂಪಿನ ಜನರು, “ಈತನು ಗಲಿಲಾಯದ ನಜರೇತಿನ ಪ್ರವಾದಿಯಾದ ಯೇಸು” ಅಂದರು.