Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೆರೂಸಲೇಮಿನಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೆರೂಸಲೇಮಿನಲ್ಲಿ

ಯೇಸು ದೇವಾಲಯವನ್ನು ಶುದ್ಧೀಕರಿಸುತ್ತಾನೆ

ಮತ್ತಾ 21:12–17 · ಮಾರ್ಕ 11:15–19 · ಲೂಕ 19:45–48 · ಯೋಹಾ 2:13–22

ಮತ್ತಾಯನು

ಮತ್ತಾ 21:12–17

12ಬಳಿಕ ಯೇಸು ದೇವಾಲಯದೊಳಗೆ ಹೋಗಿ ಅದರಲ್ಲಿ ಮಾರುವ ಕೊಳ್ಳುವ ಎಲ್ಲರನ್ನೂ ಹೊರಡಿಸಿಬಿಟ್ಟು ಹಣ ವಿನಿಮಯದಾರರ ಮೇಜುಗಳನ್ನೂ ಪಾರಿವಾಳ ಮಾರುವವರ ಕಾಲ್ಮಣೆಗಳನ್ನೂ ಕೆಡವಿಹಾಕಿದನು.

13ಆತನು ಅವರಿಗೆ, “‘ನನ್ನ ಮನೆಯು ಪ್ರಾರ್ಥನಾಲಯವಾಗಿದೆ’ ಎಂದು ಬರೆದಿದೆ; ಆದರೆ ನೀವು ಅದನ್ನು ಕಳ್ಳರ ಗವಿ ಮಾಡುತ್ತಿದ್ದೀರಿ” ಎಂದು ಹೇಳಿದನು.

14ಆಗ ಅಲ್ಲಿದ್ದ ಕುರುಡರೂ ಕುಂಟರೂ ದೇವಾಲಯದಲ್ಲಿ ಆತನ ಬಳಿಗೆ ಬರಲು ಆತನು ಅವರನ್ನು ಸ್ವಸ್ಥಮಾಡಿದನು.

15ಆದರೆ ಮುಖ್ಯಯಾಜಕರೂ ಶಾಸ್ತ್ರಿಗಳೂ ಆತನು ಮಾಡಿದ ಆಶ್ಚರ್ಯಕರವಾದ ಕಾರ್ಯಗಳನ್ನು ನೋಡಿ ಹಾಗು “ದಾವೀದನ ಕುಮಾರನಿಗೆ ಹೊಸನ್ನ” ಎಂದು ದೇವಾಲಯದಲ್ಲಿ ಹುಡುಗರು ಕೂಗುತ್ತಿರುವುದನ್ನು ಕೇಳಿ ಕೋಪಗೊಂಡರು.

16ಆತನಿಗೆ, “ಇವರು ಹೇಳುವುದನ್ನು ಕೇಳುತ್ತಿರುವೆಯಾ” ಎಂದು ಹೇಳಲು ಯೇಸು, “ಹೌದು, ಕೇಳುತ್ತಿದ್ದೇನೆ, ಆದರೆ ‘ಸಣ್ಣ ಮಕ್ಕಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿರುವಿ’ ಎಂಬುದನ್ನು ನೀವು ಎಂದಾದರೂ ಓದಲಿಲ್ಲವೋ?” ಎಂದು ಕೇಳಿದನು.

17ಬಳಿಕ ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಬಂದು ಅಲ್ಲಿ ರಾತ್ರಿ ಮಲಗಿದನು.

ಮಾರ್ಕನು

ಮಾರ್ಕ 11:15–19

15ಅವರು ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯಕ್ಕೆ ಹೋಗಿ ಅದರಲ್ಲಿ ಮಾರುತ್ತಿದ್ದವರನ್ನೂ, ಕೊಳ್ಳುತ್ತಿದ್ದವರನ್ನೂ ಹೊರಡಿಸಿಬಿಡುವುದಕ್ಕೆ ತೊಡಗಿದನು; ನಾಣ್ಯಗಳನ್ನು ವಿನಿಮಯಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿಹಾಕಿದನು; ಪಾರಿವಾಳಗಳನ್ನು ಮಾರುವವರ ಮಣೆಗಳನ್ನು ಉರುಳಿಸಿದನು;

16ಒಬ್ಬನನ್ನಾದರೂ ಸಾಮಾನುಗಳನ್ನು ಹೊತ್ತುಕೊಂಡು ದೇವಾಲಯದೊಳಕ್ಕೆ ಹಾದು ಹೋಗಗೊಡಿಸಲಿಲ್ಲ.

17ಮತ್ತು ಆತನು ಉಪದೇಶಮಾಡಿ, “‘ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವುದು’ ಎಂದು ಬರೆದಿದೆಯಲ್ಲಾ? ಆದರೆ ‘ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ’” ಎಂದು ಹೇಳಿದನು.

18ಅದನ್ನು ಮುಖ್ಯಯಾಜಕರೂ, ಶಾಸ್ತ್ರಿಗಳೂ ಕೇಳಿ ಅವನನ್ನು ಯಾವ ಉಪಾಯದಿಂದ ಕೊಲ್ಲೋಣ ಎಂದು ಕಾದು ನೋಡುತ್ತಿದ್ದರು; ಏಕೆಂದರೆ ಜನರೆಲ್ಲರೂ ಆತನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟಿದ್ದರಿಂದ ಅವರು ಆತನಿಗೆ ಹೆದರುತ್ತಿದ್ದರು.

19ಸಂಜೆಯಾದಾಗ ಯೇಸುವೂ, ಆತನ ಶಿಷ್ಯರೂ ಪಟ್ಟಣವನ್ನು ಬಿಟ್ಟು ಹೊರಗೆ ಹೋಗುತ್ತಿದ್ದರು.

ಲೂಕನು

ಲೂಕ 19:45–48

45ಬಳಿಕ ಆತನು ದೇವಾಲಯಕ್ಕೆ ಹೋಗಿ ವ್ಯಾಪಾರಮಾಡುವವರನ್ನು ಹೊರಹಾಕುವುದಕ್ಕೆ ಪ್ರಾರಂಭಿಸಿ ಅವರಿಗೆ,

46“‘ನನ್ನ ಆಲಯವು ಪ್ರಾರ್ಥನಾಲಯವಾಗಿರುವುದು’ ಎಂದು ಬರೆಯಲ್ಪಟ್ಟಿದೆಯಲ್ಲಾ, ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ” ಎಂದು ಹೇಳಿ ಅವರನ್ನು ಹೊರಗೆ ಅಟ್ಟಿದನು.

47ಅಲ್ಲದೆ ಆತನು ಪ್ರತಿದಿನ ದೇವಾಲಯದಲ್ಲಿ ಬಂದು ಬೋಧನೆ ಮಾಡುತ್ತಿದ್ದನು. ಅಷ್ಟರಲ್ಲಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಪ್ರಜೆಗಳಲ್ಲಿ ನಾಯಕರೂ ಆತನನ್ನು ಕೊಲ್ಲುವುದಕ್ಕೆ ಸಂದರ್ಭನೋಡುತ್ತಿದ್ದರು.

48ಆದರೆ ಜನರೆಲ್ಲರು ಆತನ ಹತ್ತಿರದಲ್ಲಿದ್ದುಕೊಂಡು ಬೋಧನೆಯನ್ನು ಗಮನಿಸಿ ಕೇಳುತ್ತಿದ್ದುದರಿಂದ ಏನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ.

ಯೋಹಾನನು

ಯೋಹಾ 2:13–22

13ಆಗ ಯೆಹೂದ್ಯರ ಪಸ್ಕ ಹಬ್ಬವು ಹತ್ತಿರ ಬಂದುದರಿಂದ ಯೇಸು ಯೆರೂಸಲೇಮಿಗೆ ಹೋದನು.

14ಆತನು ದೇವಾಲಯದಲ್ಲಿ ದನ, ಕುರಿ, ಪಾರಿವಾಳಗಳನ್ನು ಮಾರುವವರೂ, ನಾಣ್ಯ ವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತಿರುವುದನ್ನು ಕಂಡನು.

15ಆತನು ಹಗ್ಗದಿಂದ ಚಾವಟಿ ಮಾಡಿ ಕುರಿ, ದನ ಸಹಿತ ಎಲ್ಲವನ್ನೂ, ದೇವಾಲಯದ ಹೊರಕ್ಕೆ ಅಟ್ಟಿ, ನಾಣ್ಯವಿನಿಮಯ ಮಾಡುವವರ ಮೇಜುಗಳನ್ನು ಉರುಳಿಸಿ, ನಾಣ್ಯಗಳನೆಲ್ಲ ಚೆಲ್ಲಿದನು.

16ಪಾರಿವಾಳ ಮಾರುವವರಿಗೆ ಸಿಟ್ಟಿನಿಂದ “ಇವುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಿರಿ. ನನ್ನ ತಂದೆಯ ಮನೆಯನ್ನು ವ್ಯಾಪಾರದ ಸ್ಥಳವನ್ನಾಗಿ ಮಾಡುವುದನ್ನು ನಿಲ್ಲಿಸಿರಿ” ಎಂದು ಗದರಿಸಿದನು.

17ಆಗ “ನಿನ್ನ ಆಲಯದ ಮೇಲಿನ ಅಭಿಮಾನವು ಬೆಂಕಿಯಂತೆ ನನ್ನನ್ನು ದಹಿಸುತ್ತಿದೆ” ಎಂದು ಬರೆದಿರುವುದನ್ನು ಆತನ ಶಿಷ್ಯರು ನೆನಪುಮಾಡಿಕೊಂಡರು.

18ಆಗ ಅಲ್ಲಿದ್ದ ಯೆಹೂದ್ಯರು ಆತನಿಗೆ “ಇದನ್ನೆಲ್ಲಾ ಮಾಡುವ ಅಧಿಕಾರ ನಿನಗಿದೆ ಎಂಬುದಕ್ಕೆ ಯಾವ ಸೂಚಕಕಾರ್ಯವನ್ನು ತೋರಿಸುತ್ತೀ?” ಎಂದು ಕೇಳಿದರು.

19ಅದಕ್ಕೆ ಯೇಸು “ಈ ದೇವಾಲಯವನ್ನು ಕೆಡವಿರಿ, ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು” ಎಂದು ಉತ್ತರಕೊಟ್ಟನು.

20ಅದಕ್ಕೆ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟುವುದಕ್ಕೆ ನಲವತ್ತಾರು ವರ್ಷಗಳು ಹಿಡಿದವು. ನೀನು ಮೂರು ದಿನಗಳಲ್ಲಿ ಇದನ್ನು ಎಬ್ಬಿಸುವಿಯೋ?” ಎಂದರು.

21ಆದರೆ ಆತನು ತನ್ನ ದೇಹವೆಂಬ ದೇವಾಲಯದ ಕುರಿತು ಆ ಮಾತನ್ನು ಹೇಳಿದನು.

22ಆದುದರಿಂದ ಆತನು ಸತ್ತವರೊಳಗಿಂದ ಎದ್ದ ಮೇಲೆ ಈ ಮಾತು ಆತನ ಶಿಷ್ಯರ ನೆನಪಿಗೆ ಬಂದು ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನೂ, ಮತ್ತು ಯೇಸು ತಮಗೆ ಹೇಳಿದ ಮಾತನ್ನೂ ಅವರು ನಂಬಿದರು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು