15ಆದರೆ ಆ ಹಬ್ಬದಲ್ಲಿ ಜನರು ಅಪೇಕ್ಷಿಸುವ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವುದು ದೇಶಾಧಿಪತಿಯ ಪದ್ಧತಿಯಾಗಿತ್ತು.
16ಆ ಕಾಲದಲ್ಲಿ ಬರಬ್ಬನೆಂಬ ಕುಖ್ಯಾತನಾದ ಒಬ್ಬ ಸೆರೆಯವನಿದ್ದನು.
17ಹೀಗಿರಲಾಗಿ ಅವರು ಸೇರಿಬಂದಿದ್ದ ಸಮಯದಲ್ಲಿ ಪಿಲಾತನು, “ನಿಮಗೆ ಯಾರನ್ನು ಬಿಟ್ಟುಕೊಡಬೇಕೆನ್ನುತ್ತೀರಿ? ಬರಬ್ಬನನ್ನೋ ಅಥವಾ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನೋ?” ಎಂದು ಅವರನ್ನು ಕೇಳಿದನು.
18ಏಕೆಂದರೆ ಅವರು ಹೊಟ್ಟೆಕಿಚ್ಚಿನಿಂದಲೇ ಈ ರೀತಿಯಾಗಿ ಮಾಡಿದ್ದಾರೆಂದು ಅವನಿಗೆ ತಿಳಿದಿತ್ತು.
19ಇದಲ್ಲದೆ ಅವನು ನ್ಯಾಯಾಸನದಲ್ಲಿ ಕುಳಿತಿರುವಾಗ ಅವನ ಹೆಂಡತಿಯು, “ನೀನು ಆ ನೀತಿವಂತನ ಗೊಡವೆಗೆ ಹೋಗಬೇಡ; ಅವನ ದೆಸೆಯಿಂದ ಈ ಹೊತ್ತು ಕನಸಿನಲ್ಲಿ ಬಹಳ ತೊಂದರೆ ಪಟ್ಟೆನು” ಎಂದು ಅವನ ಬಳಿಗೆ ಸಂದೇಶ ಹೇಳಿಕಳುಹಿಸಿದಳು.
20ಆದರೆ ಮುಖ್ಯಯಾಜಕರೂ ಹಿರಿಯರೂ ಬರಬ್ಬನನ್ನು ಬಿಟ್ಟುಕೊಡಬೇಕೆಂದು ಬೇಡಿಕೊಳ್ಳುವಂತೆಯೂ ಯೇಸುವನ್ನು ಸಾಯಿಸಬೇಕೆಂದು ಕೇಳುವ ಹಾಗೆಯೂ ಜನರನ್ನು ಒಡಂಬಡಿಸಿದ್ದರು.
21ಅದಕ್ಕೆ ದೇಶಾಧಿಪತಿಯು ಅವರನ್ನು, “ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟುಕೊಡಬೇಕನ್ನುತ್ತೀರಿ?” ಎಂದು ಕೇಳಲು ಅವರು “ಬರಬ್ಬನನ್ನು” ಅಂದರು.
22ಪಿಲಾತನು ಅವರನ್ನು, “ಹಾಗಾದರೆ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಲು ಎಲ್ಲರೂ, “ಅವನನ್ನು ಶಿಲುಬೆಗೆ ಹಾಕಿಸು” ಅಂದರು.
23ಅದಕ್ಕವನು “ಏಕೆ? ಈತನು ಮಾಡಿದ ಅಪರಾಧವೇನು?” ಅಂದನು. ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಬಹಳವಾಗಿ ಆರ್ಭಟಿಸಿದರು.
24ಆಗ ಪಿಲಾತನು ತನ್ನ ಯತ್ನ ನಡೆಯುವುದಿಲ್ಲ ಗದ್ದಲ ಮಾತ್ರ ಹೆಚ್ಚಾಗುತ್ತದೆ ಎಂದು ತಿಳಿದು ನೀರನ್ನು ತೆಗೆದುಕೊಂಡು ಜನರ ಮುಂದೆ ಕೈ ತೊಳೆದುಕೊಂಡು, “ಈ ನೀತಿವಂತನನ್ನು ಕೊಲ್ಲಿಸುವುದರಲ್ಲಿ ನಾನು ನಿರಪರಾಧಿ, ನೀವೇ ನೋಡಿಕೊಳ್ಳಿರಿ” ಎನ್ನಲು
25ಜನರೆಲ್ಲಾ, “ಆತನ ರಕ್ತವು ನಮ್ಮ ಮತ್ತು ನಮ್ಮ ಮಕ್ಕಳ ಮೇಲೆ ಬರಲಿ” ಅಂದರು.
26ಆಗ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.