36ಅವರು ಈ ಸಂಗತಿಗಳನ್ನು ಕುರಿತು ಮಾತನಾಡುತ್ತಿರುವಾಗ ಯೇಸುವೇ ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದು ಅವರಿಗೆ ಹೇಳಿದನು.
37ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದನ್ನು ಭೂತವೆಂದು ಭಾವಿಸಿದರು.
38ಆತನು ಅವರಿಗೆ, “ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಅನುಮಾನಗಳು ಹುಟ್ಟುವುದೇಕೆ?
39ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ. ನಾನೇ ಅಲ್ಲವೇ, ನನ್ನನ್ನು ಮುಟ್ಟಿ ನೋಡಿರಿ. ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು. ಅವು ಭೂತಕ್ಕಿಲ್ಲ” ಎಂದು ಹೇಳಿದನು.
40ಇದನ್ನು ಹೇಳಿದ ಮೇಲೆ ಆತನು ತನ್ನ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದನು.
41ಆದರೆ ಅವರು ಸಂತೋಷಭರಿತರಾಗಿ ಇನ್ನೂ ನಂಬದೇ ಆಶ್ಚರ್ಯಪಡುತ್ತಿರಲಾಗಿ ಆತನು, “ತಿನ್ನತಕ್ಕ ಪದಾರ್ಥವೇನಾದರೂ ನಿಮ್ಮಲ್ಲುಂಟೋ?” ಎಂದು ಅವರನ್ನು ಕೇಳಲು,
42ಅವರು ಸುಟ್ಟ ಮೀನಿನ ಒಂದು ತುಂಡನ್ನು ಆತನಿಗೆ ಕೊಟ್ಟರು.
43ಆತನು ಅದನ್ನು ತೆಗೆದುಕೊಂಡು ಅವರ ಮುಂದೆ ತಿಂದನು.
44ತರುವಾಯ ಯೇಸು, “ನಾನು ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ, ಪ್ರವಾದಿಗಳ ಗ್ರಂಥಗಳಲ್ಲಿಯೂ, ಕೀರ್ತನೆಗಳಲ್ಲಿಯೂ ಬರೆದಿರುವುದೆಲ್ಲಾ ನೆರವೇರುವುದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ?” ಅಂದನು.
45ಆ ಮೇಲೆ ಅವರು ಶಾಸ್ತ್ರ ವಚನಗಳನ್ನು ತಿಳಿದುಕೊಳ್ಳುವಂತೆ ಆತನು ಅವರ ಮನಸ್ಸುಗಳನ್ನು ತೆರೆದನು.
46ಅನಂತರ, “ಮೊದಲೇ ಪ್ರಕಟವಾದ ಪ್ರಕಾರ ‘ಕ್ರಿಸ್ತನು ಕಷ್ಟ ಪಟ್ಟು, ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ,
47ಅದಲ್ಲದೆ ಜನರು ಪಾಪಕ್ಷಮಾಪಣೆಗೋಸ್ಕರ ಪಶ್ಚಾತ್ತಾಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಈ ಸುವಾರ್ತೆಯು ಯೆರೂಸಲೇಮ್ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡಬೇಕು’ ಎಂದು ಬರೆದದೆ.
48ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ.
49ಇಗೋ ನನ್ನ ತಂದೆಯು ವಾಗ್ದಾನ ಮಾಡಿದ ಶಕ್ತಿಯನ್ನು ನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಕೊಡುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರಿ” ಎಂದು ಹೇಳಿದನು.