Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ › ಹಿಜ್ಕೀಯನಿಂದ ಯೋಷೀಯನವರೆಗೆ

ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ · ಹಿಜ್ಕೀಯನಿಂದ ಯೋಷೀಯನವರೆಗೆ

ಸನ್ಹೇರೀಬನು ಯೆರೂಸಲೇಮನ್ನು ಬೆದರಿಸುತ್ತಾನೆ

2 ಅರಸು 18:13–37; 19:1–37 · 2 ಪೂರ್ವ 32:1–23 · ಯೆಶಾ 36:1–22; 37:1–38

2 ಅರಸುಗಳು

2 ಅರಸು 18:13–37; 19:1–37

18:13ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಬಂದು ಯೆಹೂದ ಪ್ರಾಂತ್ಯದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.

18:14ಆಗ ಯೆಹೂದ್ಯರ ಅರಸನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಶ್ಶೂರದ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ಅಪರಾಧಿ; ನೀನು ನನ್ನನ್ನು ಬಿಟ್ಟು ಹೋಗು. ನೀನು ನನಗೆ ವಿಧಿಸುವಷ್ಟು ದಂಡವನ್ನು ಕೊಡುತ್ತೇನೆ” ಎಂದು ಹೇಳಿ ಕಳುಹಿಸಿದನು. ಅಶ್ಶೂರದ ಅರಸನು ಮುನ್ನೂರು ತಲಾಂತು ಬೆಳ್ಳಿಯನ್ನೂ, ಮೂವತ್ತು ತಲಾಂತು ಬಂಗಾರವನ್ನೂ ಕೊಡಬೇಕೆಂದು ಆಜ್ಞಾಪಿಸಿದನು.

18:15ಆಗ ಹಿಜ್ಕೀಯನು ಯೆಹೋವನ ಆಲಯದಲ್ಲಿಯೂ, ಅರಸನ ಅರಮನೆಯ ಭಂಡಾರದಲ್ಲಿಯೂ ಸಿಕ್ಕಿದ ಬೆಳ್ಳಿಯನ್ನು ಅವನಿಗೆ ಕೊಟ್ಟನು.

18:16ಅಲ್ಲದೆ ಹಿಜ್ಕೀಯನು ಯೆಹೋವನ ಆಲಯದ ಕದಗಳಿಗೂ, ಕಂಬಗಳಿಗೂ ಹೊದಿಸಿದ್ದ ಬಂಗಾರದ ತಗಡನ್ನೂ ತೆಗೆದು ಅಶ್ಶೂರದ ಅರಸನಿಗೆ ಕಳುಹಿಸಿದನು.

18:17ಆದರೆ ಅಶ್ಶೂರದ ಅರಸನು ಲಾಕೀಷಿನಿಂದ ಮಹಾಸೈನ್ಯ ಸಹಿತವಾಗಿ ತರ್ತಾನ್, ರಬ್ಸಾರೀಸ್, ರಬ್ಷಾಕೆ ಎಂಬುವವರನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಇವರು ಗಟ್ಟಾ ಹತ್ತಿ ಯೆರೂಸಲೇಮಿಗೆ ಬಂದು ಅಗಸರ ಹೊಲದ ಮೇಲೆ ಹೋಗುವ ರಾಜಮಾರ್ಗದ ಹತ್ತಿರ ಇರುವ ಕೆರೆಯ ಕಾಲುವೆಯ ಬಳಿಯಲ್ಲಿ ಪಾಳೆಯ ಮಾಡಿಕೊಂಡರು.

18:18ಅವರು ಅರಸನನ್ನು ಕೂಗಿ ಕರೆದಾಗ, ಹಿಲ್ಕೀಯನ ಮಗನೂ, ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬುವವರು ಅವರ ಬಳಿಗೆ ಬಂದರು.

18:19ರಬ್ಷಾಕೆಯು ಅವರಿಗೆ, ನೀವು ಹೋಗಿ ಹಿಜ್ಕೀಯನಿಗೆ ಮಹಾರಾಜನಾದ ಅಶ್ಶೂರದ ಅರಸನ ಮಾತುಗಳನ್ನು ತಿಳಿಸಿರಿ. ಅವನು, “ನಿನ್ನ ಭರವಸಕ್ಕೆ ಯಾವ ಆಧಾರವುಂಟು?

18:20ಬರೀ ಒಂದು ಬಾಯಿ ಮಾತಿನಲ್ಲಿ ಯುದ್ಧಕ್ಕೆ ಬೇಕಾದ ವಿವೇಕವೂ, ಬಲವೂ ಉಂಟೆಂದು ಅಂದುಕೊಳ್ಳುತ್ತಿರುವೆಯೋ? ನೀನು ಯಾರ ಮೇಲೆ ಭರವಸವಿಟ್ಟು ನನಗೆ ವಿರೋಧವಾಗಿ ತಿರುಗಿ ಬಿದ್ದಿರುವೆ?

18:21ಜಜ್ಜಿದ ದಂಟಿಗೆ ಸಮಾನವಾಗಿರುವ ಐಗುಪ್ತದಲ್ಲಿ ಭರವಸವಿಟ್ಟಿರುವೆಯೋ? ಒಬ್ಬನು ಅಂಥ ದಂಟಿನ ಮೇಲೆ ಕೈಯೂರಿಕೊಳ್ಳುವುದಾದರೆ ಅದು ಅವನ ಕೈಯನ್ನು ತಿವಿದು ಒಳಗೆ ಹೋಗುತ್ತದಲ್ಲವೇ; ಐಗುಪ್ತದ ಅರಸನಾದ ಫರೋಹನನಲ್ಲಿ ಭರವಸವಿಟ್ಟವರಿಗೆ ಇದೇ ಗತಿಯಾಗುವುದು.

18:22ಒಂದು ವೇಳೆ ನೀವು, ‘ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಟ್ಟಿದ್ದೇವೆ’ ಎಂದು ಹೇಳುವುದಾದರೆ ಹಿಜ್ಕೀಯನು, ‘ಯೆರೂಸಲೇಮಿನ ಯಜ್ಞವೇದಿಯ ಮುಂದೆಯೇ ಆರಾಧನೆಮಾಡಬೇಕು’ ಎಂಬುದಾಗಿ ಯೆಹೂದ್ಯರಿಗೂ, ಯೆರೂಸಲೇಮಿನವರಿಗೂ ಆಜ್ಞಾಪಿಸಿ ಆ ಯೆಹೋವನ ಪೂಜಾಸ್ಥಳಗಳನ್ನೂ, ಎಲ್ಲಾ ಯಜ್ಞವೇದಿಗಳನ್ನೂ ಹಾಳುಮಾಡಿದ್ದಾನಲ್ಲಾ,

18:23ನನ್ನ ಒಡೆಯನಾದ ಅಶ್ಶೂರದ ಅರಸನೊಂದಿಗೆ ಸವಾಲು ಮಾಡಿನೋಡು. ಆಗ ಕುದುರೆ ಸವಾರರನ್ನು ಬಳಸಲು ನಿನಗೆ ಸಾಮರ್ಥ್ಯವಿದ್ದರೆ ಆತನು ಎರಡು ಸಾವಿರ ಕುದುರೆಗಳನ್ನು ಕೊಡುತ್ತಾನೆ.

18:24ಹೀಗಿದ್ದಾಗ ನೀನು ನನ್ನ ಒಡೆಯನ ಸೇನಾಧಿಪತಿಗಳಲ್ಲಿ ಅತಿ ಸಣ್ಣವನನ್ನಾದರೂ ಸೋಲಿಸುವುದು ಸಾಧ್ಯವೇ? ರಥಾಶ್ವಬಲಗಳ ವಿಷಯವಾಗಿ ನೀನು ಐಗುಪ್ತರ ಮೇಲೆ ಭರವಸೆಯಿಟ್ಟಿರುವೆ.

18:25ಈ ದೇಶವನ್ನು ಹಾಳುಮಾಡುವುದಕ್ಕೆ ಯೆಹೋವನ ಚಿತ್ತವಿಲ್ಲದೆ ಬಂದೆನೆಂದು ನೆನಸುತ್ತೀಯೋ? ‘ಈ ದೇಶಕ್ಕೆ ಬಂದು, ಇದನ್ನು ಹಾಳುಮಾಡಿಬಿಡು ಎಂದು ಯೆಹೋವನೇ ನನಗೆ ಆಜ್ಞಾಪಿಸಿದ್ದಾನೆ’” ಎಂದನು.

18:26ಆಗ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಶೆಬ್ನ, ಯೋವ ಎಂಬುವವರು ರಬ್ಷಾಕೆಗೆ, “ನೀನು ಮಾತನಾಡುವುದು ಪೌಳಿಗೋಡೆಯ ಮೇಲಿರುವ ಯೆಹೂದ್ಯರಿಗೂ ಕೇಳಿಸುತ್ತದೆ. ಆದುದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು, ಅದು ನಮಗೆ ತಿಳಿಯುತ್ತದೆ. ಆದರೆ ಯೂದಾಯ ಭಾಷೆಯಲ್ಲಿ ಮಾತನಾಡಬೇಡ” ಎಂದು ಹೇಳಿದರು.

18:27ಅದಕ್ಕೆ ರಬ್ಷಾಕೆಯು, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಒಡೆಯನ ಸಂಗಡವಾಗಲಿ ಮಾತನಾಡಬೇಕೆಂದು ನನ್ನನ್ನು ಕಳುಹಿಸಲಿಲ್ಲ. ಈ ಪೌಳಿಗೋಡೆಯ ಮೇಲೆ ಕುಳಿತಿರುವ ಜನರ ಸಂಗಡ ಮಾತನಾಡುವುದಕ್ಕೋಸ್ಕರ ಕಳುಹಿಸಿದ್ದಾನೆ. ಅವರು ನಿಮ್ಮೊಡನೆ ಇದ್ದರೆ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕಾಗುವುದು” ಎಂದು ಉತ್ತರಕೊಟ್ಟನು.

18:28ನಂತರ, ರಬ್ಷಾಕೆಯು ಎದ್ದು ನಿಂತು ಯೂದಾಯ ಭಾಷೆಯಲ್ಲಿ, “ಅಶ್ಶೂರದ ಮಹಾರಾಜನ ಮಾತನ್ನು ಕೇಳಿರಿ.

18:29ಅರಸನು ನಿಮಗೆ, ‘ಹಿಜ್ಕೀಯನಿಂದ ಮೋಸಹೋಗಬೇಡಿರಿ, ಅವನು ನಿಮ್ಮನ್ನು ನನ್ನ ಕೈಯಿಂದ ಬಿಡಿಸಲಾರನು’

18:30ಹಿಜ್ಕೀಯನು ನಿಮಗೆ, ‘ಯೆಹೋವನ ಮೇಲೆ ಭರವಸದಿಂದಿರಿ; ಆತನು ನಿಮ್ಮನ್ನು ಹೇಗೂ ರಕ್ಷಿಸುವನು. ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವುದಿಲ್ಲ’ ಎಂಬುದಾಗಿ ಹೇಳಿದರೆ ಅವನ ಮಾತಿಗೆ ಕಿವಿಗೊಡಬೇಡಿರಿ, ಒಪ್ಪಬೇಡಿರಿ”

18:31ಹಿಜ್ಕೀಯನ ಮಾತನ್ನು ಕೇಳಬೇಡಿರಿ. ಅಶ್ಶೂರದ ಅರಸನಾದ ನನ್ನ ಮಾತನ್ನು ಕೇಳಿರಿ, “ನನ್ನೊಡನೆ ಒಡಂಬಡಿಕೆ ಮಾಡಿಕೊಂಡು ನನ್ನ ಬಳಿಗೆ ಬಂದು ನನ್ನೊಡನೆ ಒಪ್ಪಂದ ಮಾಡಿಕೊಂಡು ನನ್ನ ಆಶ್ರಯಕ್ಕೆ ಬನ್ನಿ ಆಗ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಅಂಜೂರ ಮರ, ದ್ರಾಕ್ಷಾಲತೆ ಇವುಗಳ ಹಣ್ಣುಗಳನ್ನು ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.

18:32ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ ಆಹಾರ, ದ್ರಾಕ್ಷಿತೋಟ, ಎಣ್ಣೆಮರ, ಜೇನುತುಪ್ಪವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು. ನೀವು ಸಾಯುವುದಿಲ್ಲ, ಬದುಕುವಿರಿ. ಯೆಹೋವನು ನಿಮ್ಮನ್ನು ರಕ್ಷಿಸುವನು ಎಂಬ ನಂಬಿಕೆಯನ್ನು ನಿಮ್ಮಲ್ಲಿ ಹುಟ್ಟಿಸುವುದಕ್ಕೆ ಪ್ರಯತ್ನಿಸುವ ಹಿಜ್ಕೀಯನಿಗೆ ಕಿವಿಗೊಡಬೇಡಿರಿ.

18:33ಯಾವ ಜನಾಂಗದ ದೇವತೆಯು ತನ್ನ ದೇಶವನ್ನು ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡಲು ಸಾಧ್ಯ?

18:34ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ ಮತ್ತು ಇವ್ವಾ ಎಂಬ ಪಟ್ಟಣಗಳ ದೇವತೆಗಳೇನಾದವು? ಅವು ಸಮಾರ್ಯವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಲು ಸಾಧ್ಯವಾಯಿತೇ?

18:35ಯಾವ ಜನಾಂಗದ ದೇವತೆಯಾದರೂ ತನ್ನ ದೇಶವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡಲು ಆಗದೆ ಹೋದ ಮೇಲೆ ಯೆಹೋವನು ಯೆರೂಸಲೇಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.

18:36ಆ ಸೇನಾಪತಿಗಳಿಗೆ ಯಾವ ಉತ್ತರವನ್ನೂ ಕೊಡಬಾರದೆಂದು ಅರಸನು ತನ್ನ ಪ್ರಜೆಗಳಿಗೆ ಆಜ್ಞಾಪಿಸಿದ್ದರಿಂದ ಅವರು ಸುಮ್ಮನಿದ್ದರು. ಏನೂ ಹೇಳಲಿಲ್ಲ.

18:37ಹಿಲ್ಕೀಯನ ಮಗನೂ, ರಾಜಗೃಹಾಧಿಪತಿಯೂ ಆಗಿದ್ದ ಎಲ್ಯಾಕೀಮ್ ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬುವವರು ತಮ್ಮ ಬಟ್ಟೆಗಳನ್ನು ಹರಿದುಕೊಂಡು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು.

19:1ಅರಸನಾದ ಹಿಜ್ಕೀಯನು ಅದನ್ನು ಕೇಳಿ, ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಕಟ್ಟಿಕೊಂಡು ಯೆಹೋವನ ಆಲಯಕ್ಕೆ ಹೋದನು.

19:2ಇದಲ್ಲದೆ, ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಕಾರ್ಯದರ್ಶಿಯೂ, ಲೇಖಕನಾದ ಶೆಬ್ನ, ವೃದ್ಧ ಯಾಜಕರು ಇವರನ್ನು ಕರೆಯಿಸಿ ಅವರಿಗೆ ಆಜ್ಞಾಪಿಸಿದ್ದೇನೆಂದರೆ, ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನೂ, ಪ್ರವಾದಿಯೂ ಆಗಿರುವ ಯೆಶಾಯನ ಬಳಿಗೆ ಹೋಗಿರಿ.

19:3ಅವರು ಹಿಜ್ಕೀಯನಿಗೆ, “ಈ ದಿನದಲ್ಲಿ ನಮಗೆ ಮಹಾಕಷ್ಟವು ಸಂಭವಿಸಿರುತ್ತದೆ. ನಾವು ಅಪಮಾನವನ್ನು, ನಿಂದೆಯನ್ನು ಅನುಭವಿಸಬೇಕಾಗಿ ಬಂದಿದೆ. ಹೆರಿಗೆಯ ಕಾಲ ಬಂದಿದೆ; ಆದರೆ ಹೆರುವುದಕ್ಕೆ ಬಲ ಸಾಲದು.

19:4ಜೀವಸ್ವರೂಪನಾದ ದೇವರನ್ನು ದೂಷಿಸುವುದಕ್ಕಾಗಿ ತನ್ನ ಯಜಮಾನನಾದ ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದನೆಯ ಮಾತುಗಳನ್ನು, ನಿನ್ನ ದೇವರಾದ ಯೆಹೋವನು ಕೇಳಿರುವನು. ನಿನ್ನ ದೇವರಾದ ಯೆಹೋವನು ತಾನು ಹೇಳಿದ ಮಾತುಗಳ ನಿಮಿತ್ತ ಮುಯ್ಯಿತೀರಿಸುವನು. ಆದುದರಿಂದ ಉಳಿದಿರುವ ಸ್ವಲ್ಪ ಜನರಿಗಾಗಿಯಾದರೂ ಆತನನ್ನು ಪ್ರಾರ್ಥಿಸು ಎಂಬುದಾಗಿ ಹಿಜ್ಕೀಯನು ಹೇಳುತ್ತಾನೆ” ಎಂದು ಹೇಳಿರಿ ಅಂದನು.

19:5ಅರಸನಾದ ಹಿಜ್ಕೀಯನ ಸೇವಕರು ಯೆಶಾಯನ ಬಳಿಗೆ ಬಂದಾಗ,

19:6ಯೆಶಾಯನು ಅವರಿಗೆ, “ನೀವು ಹಿಂತಿರುಗಿ ಹೋಗಿ ನಿಮ್ಮ ರಾಜನಿಗೆ, ‘ಯೆಹೋವನು ಹೀಗೆ ಹೇಳುತ್ತಾನೆ, ನೀನು ಕೇಳಿದ ಮಾತುಗಳ ದೆಸೆಯಿಂದ ಹೆದರಬೇಡ, ಅಶ್ಶೂರದ ಅರಸನ ಸೇವಕರು ಆ ಮಾತುಗಳಿಂದ ನನ್ನನ್ನೇ ದೂಷಿಸಿದ್ದಾರೆ.

19:7ಆದುದರಿಂದ, ನಾನು ಅವನ ಮೇಲೆ ಭಯದ ಆತ್ಮವನ್ನು ಬರಮಾಡುವೆನು. ಅವನು ಒಂದು ಸುದ್ದಿಯನ್ನು ಕೇಳಿ ಸ್ವದೇಶಕ್ಕೆ ಹಿಂದಿರುಗಿ ಹೋಗಿ ಅಲ್ಲಿ ಕತ್ತಿಯಿಂದ ನಾಶವಾಗುವಂತೆ ಮಾಡುವೆನು’ ಎಂಬುದಾಗಿ ಯೆಹೋವನು ನಿಮ್ಮ ಯಜಮಾನನಿಗೆ ಹೇಳುತ್ತಾನೆ” ಎಂದು ಉತ್ತರಕೊಟ್ಟನು.

19:8ರಬ್ಷಾಕೆಯು ಹಿಂದಿರುಗಿ ಹೋಗುವಾಗ ದಾರಿಯಲ್ಲಿ ಅಶ್ಶೂರದ ಅರಸನು ಲಾಕೀಷನ್ನು ಬಿಟ್ಟು ಹೋದನೆಂಬ ವರ್ತಮಾನ ಕೇಳಿ ಲಿಬ್ನಕ್ಕೆ ಹೋಗಿ, ಅಲ್ಲಿ ಅವನನ್ನು ಕಂಡನು. ಆಗ ಅವನು ಆ ಪಟ್ಟಣಕ್ಕೆ ವಿರುದ್ಧವಾಗಿ ಯುದ್ಧಮಾಡುತ್ತಾ ಇದ್ದನು.

19:9ಅಷ್ಟರಲ್ಲಿ ಐಗುಪ್ತದ ಅರಸನೂ ಮತ್ತು ಕೂಷಿನ ಅರಸನಾದ ತಿರ್ಹಾಕನು ತನಗೆ ವಿರೋಧವಾಗಿ ಯುದ್ಧಮಾಡಲು ಹೊರಟಿದ್ದಾನೆ ಎಂಬ ಸುದ್ದಿಯನ್ನು ಸನ್ಹೇರೀಬನು ಕೇಳಿದಾಗ, ಯೆಹೂದದ ಅರಸನಾದ ಹಿಜ್ಕೀಯನ ಬಳಿಗೆ ಪುನಃ ದೂತರನ್ನು ಕಳುಹಿಸಿ,

19:10ಅವರ ಮುಖಾಂತರ, “ಯೆಹೂದದ ಅರಸನಾದ ಹಿಜ್ಕೀಯನಿಗೆ, ‘ಯೆರೂಸಲೇಮನ್ನು ಅಶ್ಶೂರದ ಅರಸನಿಗೆ ಒಪ್ಪಿಸುವುದಿಲ್ಲವೆಂದು ನೀನು ನಂಬಿರುವ ನಿನ್ನ ದೇವರು ನಿನ್ನನ್ನು ಮೋಸಗೊಳಿಸದಿರಲಿ

19:11ಅಶ್ಶೂರದ ಅರಸುಗಳು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಮಾಡಿರುವರೆಂದು ಕೇಳಿರುವೆಯಲ್ಲಾ. ಹೀಗಿದ್ದ ಮೇಲೆ ನೀನು ತಪ್ಪಿಸಿಕೊಳ್ಳುವೆಯೋ?

19:12ನನ್ನ ಪೂರ್ವಿಕರು ಗೋಜಾನ್, ಖಾರಾನ್, ರೆಚೆಫ್ ಎಂಬ ಪಟ್ಟಣಗಳ ಜನರನ್ನೂ ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಎದೆನಿನ ಜನರನ್ನೂ ನಾಶಮಾಡುವುದಕ್ಕೆ ಹೋದಾಗ ಅವರ ದೇವತೆಗಳು ಅವರನ್ನು ಕಾಪಾಡಿದವೋ?

19:13ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ ಎಂಬ ಪಟ್ಟಣಗಳ ಅರಸರು ಏನಾದರು? ಎಂದು ನಿನಗೆ ತಿಳಿಯದೋ ಎಂದು ಪತ್ರವನ್ನು ದೂತರ ಮೂಲಕ ಕಳುಹಿಸಿದ.’”

19:14ಹಿಜ್ಕೀಯನು ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ ಯೆಹೋವನ ಆಲಯಕ್ಕೆ ಹೋಗಿ ಅದನ್ನು ಯೆಹೋವನ ಮುಂದೆ ತೆರೆದಿಟ್ಟನು.

19:15ಹಿಜ್ಕೀಯನು ಯೆಹೋವನ ಮುಂದೆ ಪ್ರಾರ್ಥನೆ ಮಾಡಿ ಹೇಳಿದ್ದೇನೆಂದರೆ, “ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲರ ದೇವರೇ, ಯೆಹೋವನೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀನೊಬ್ಬನೇ, ಪರಲೋಕಭೂಲೋಕಗಳನ್ನು ಉಂಟುಮಾಡಿದವನು ನೀನೇ.

19:16ಯೆಹೋವನೇ, ಕಿವಿಗೊಟ್ಟು ಕೇಳು; ಯೆಹೋವನೇ, ಕಣ್ಣಿಟ್ಟು ನೋಡು. ಸನ್ಹೇರೀಬನು ಜೀವಸ್ವರೂಪದೇವರಾದ ನಿನ್ನನ್ನು ನಿಂದಿಸುವುದಕ್ಕೋಸ್ಕರ ಹೇಳಿ ಕಳುಹಿಸಿದ ಮಾತುಗಳನ್ನು ಮನಸ್ಸಿಗೆ ತಂದುಕೋ.

19:17ಯೆಹೋವನೇ, ಅಶ್ಶೂರದ ಅರಸರು ದೇಶಗಳನ್ನೂ ಜನಾಂಗಗಳನ್ನೂ ಹಾಳುಮಾಡಿದರು.

19:18ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದ್ದು ನಿಜ. ಅವು ದೇವತೆಗಳಲ್ಲ. ಮನುಷ್ಯರು ಕೆತ್ತಿದ ಕಲ್ಲು ಮತ್ತು ಮರಗಳ ಬೊಂಬೆಗಳಷ್ಟೇ. ಆದುದರಿಂದ ಅವುಗಳನ್ನು ಹಾಳುಮಾಡುವುದು ಅವರಿಗೆ ಸಾಧ್ಯವಾಯಿತು.

19:19ಯೆಹೋವನೇ, ನಮ್ಮ ದೇವರೇ, ನೀನೊಬ್ಬನೇ ದೇವರೆಂಬುದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು” ಎಂದು ಪ್ರಾರ್ಥಿಸಿದನು.

19:20ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ, “ಇಸ್ರಾಯೇಲರ ದೇವರಾದ ಯೆಹೋವನು ಹೀಗೆ ಅನ್ನುತ್ತಾನೆ, ‘ನೀನು ಅಶ್ಶೂರದ ಅರಸನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹವನ್ನು ಕೇಳಿದ್ದೇನೆ.’

19:21ಯೆಹೋವನು ಅವನನ್ನು ಕುರಿತು, “ಕನ್ನಿಕೆಯಾಗಿರುವ ಚೀಯೋನಿನ ಕುಮಾರ್ತೆಯು ನಿನ್ನನ್ನು ತಿರಸ್ಕರಿಸಿ ಪರಿಹಾಸ್ಯಮಾಡುತ್ತಾಳೆ. ಯೆರೂಸಲೇಮಿನ ಕುಮಾರ್ತೆಯು ನಿನ್ನ ಹಿಂದಿನಿಂದ ತಲೆಯಾಡಿಸುತ್ತಾಳೆ.

19:22ನೀನು ಯಾರನ್ನು ನಿಂದಿಸಿ ಯಾರನ್ನು ದೂಷಿಸಿದ್ದೀ? ಯಾರ ವಿರುದ್ಧವಾಗಿ ಬಾಯ್ದೆರೆದು ಹೀಯಾಳಿಸಿದ್ದಿ? ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾಯೇಲರ ಸದಮಲಸ್ವಾಮಿಯನ್ನಲ್ಲವೇ!

19:23ನೀನು ನಿನ್ನ ದೂತರ ಮುಖಾಂತರವಾಗಿ ಕರ್ತನನ್ನು ನಿಂದಿಸಿ, ರಥಸಮೂಹದೊಡನೆ ಪರ್ವತಶಿಖರಗಳನ್ನು ಹತ್ತಿದ್ದೇನೆ. ಲೆಬನೋನಿನ ದುರ್ಗಮಸ್ಥಳಗಳಿಗೆ ಹೋಗಿದ್ದೇನೆ. ಅದರ ಎತ್ತರವಾದ ದೇವದಾರುವೃಕ್ಷಗಳನ್ನೂ ಶ್ರೇಷ್ಠವಾದ ತುರಾಯಿಮರಗಳನ್ನೂ ಕಡಿದುಬಿಟ್ಟಿದ್ದೇನೆ. ಅಲ್ಲಿನ ಬಹು ದೂರ ನಿವಾಸಸ್ಥಳಗಳನ್ನೂ, ಉದ್ಯಾನವನಗಳನ್ನೂ ಪ್ರವೇಶಿಸಿದ್ದೇನೆ.

19:24ನಾನು ಅನ್ಯದೇಶದಲ್ಲಿ ಬಾವಿಗಳನ್ನು ಅಗೆದು ನೀರು ತೆಗೆದು ಕುಡಿದಿದ್ದೇನೆ! ನನ್ನ ಪಾದಗಳಿಂದ ಐಗುಪ್ತದ ಎಲ್ಲಾ ನದಿಗಳನ್ನು ಬತ್ತಿಸಿದ್ದೇನೆ ಎಂಬುದಾಗಿ ನೀನು ಕೊಚ್ಚಿಕೊಂಡಿದ್ದೀಯಲ್ಲವೇ?”

19:25ಬಹು ಕಾಲದ ಹಿಂದೆಯೇ ಇದನೆಲ್ಲ ಗೊತ್ತುಮಾಡಿದವನು ನಾನಲ್ಲವೇ? ಪೂರ್ವಕಾಲದಲ್ಲಿ ನಿರ್ಣಯಿಸಿದ್ದನ್ನು ಈಗ ನೆರವೇರಿಸಿದ್ದೇನೆ. ಆದುದರಿಂದ ಕೋಟೆ, ಕೊತ್ತಲುಗಳುಳ್ಳ ಪಟ್ಟಣಗಳನ್ನು ಹಾಳುದಿಬ್ಬಗಳನ್ನಾಗಿ ಮಾಡುವುದು ನಿನಗೆ ಸಾಧ್ಯವಾಯಿತೋ?

19:26ಅವುಗಳ ನಿವಾಸಿಗಳು ಬಲವಿಲ್ಲದವರಾಗಿ ಹೆದರಿ ಆಶಾಭಂಗಪಟ್ಟು ಕಳವಳಗೊಂಡರು; ಅವರು ಹೊಲದ ಗಿಡಕ್ಕೂ ಕಾಯಿ ಪಲ್ಯಕ್ಕೂ ಹಸಿರು ಹುಲ್ಲಿಗೂ, ಮನೆಯ ಮೇಲೆ ಬೆಳೆಯುವ ಹಾಗೂ, ಹೊಲದ ಹುಲ್ಲಿನ ಹಾಗೆ ಬೆಳೆಯುವುದಕ್ಕಿಂತ ಮೊದಲೇ ಸುಟ್ಟುಹೋದ ಪೈರಿಗೆ ಸಮಾನರಾದರು.

19:27“ನೀನು ಕುಳಿತುಕೊಳ್ಳುವುದು, ಹೋಗುವುದು, ಬರುವುದೂ ನನಗೆ ಗೊತ್ತುಂಟು. ನೀನು ನನ್ನ ಮೇಲೆ ರೌದ್ರಾವೇಷವಾಗಿರುವುದನ್ನು ಬಲ್ಲೆನು.

19:28ನೀನು ನನಗೆ ವಿರುದ್ಧವಾಗಿ ಉಬ್ಬಿಕೊಂಡಿರುವುದೂ, ಕೋಪವುಳ್ಳವನಾಗಿರುವುದೂ ನನಗೆ ತಿಳಿದು ಬಂದಿದೆ. ಆದುದರಿಂದ ನಿನ್ನ ಮೂಗಿಗೂ, ನಿನ್ನ ಬಾಯಿಗೂ ಕಡಿವಾಣವನ್ನೂ ಹಾಕಿ, ಬಂದ ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು” ಎಂಬುದಾಗಿ ಹೇಳಿದ್ದಾನೆ.

19:29ಈ ಮಾತುಗಳು ನೆರವೇರುವವು ಎಂಬುದಕ್ಕೆ ನೀವು ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ಮುಂದಿನ ವರ್ಷದಲ್ಲಿ ಮಿಕ್ಕಿರುವ ಬೆಳೆಯನ್ನೂ, ಮೂರನೆಯ ವರ್ಷ ನೀವು ಹೊಲಗಳಲ್ಲಿ ಬಿತ್ತಿ ಬೆಳೆದದ್ದನ್ನು, ದ್ರಾಕ್ಷಿತೋಟಗಳಲ್ಲಿ ವ್ಯವಸಾಯ ಮಾಡಿ ಕೂಡಿಸಿದ್ದನ್ನೂ ಅನುಭವಿಸುವುದೇ ಗುರುತಾಗಿರುವುದು.

19:30ತಪ್ಪಿಸಿಕೊಂಡು ಉಳಿದ ಯೆಹೂದ್ಯರು ದೇಶದಲ್ಲಿ ನೆಲೆಗೊಂಡು ಅಭಿವೃದ್ದಿಯಾಗುವರು.

19:31ಯೆರೂಸಲೇಮಿನಲ್ಲಿ ಉಳಿದವರು ಹಬ್ಬಿ ಹರಡಿಕೊಳ್ಳುವರು, ಚೀಯೋನ್ ಪರ್ವತದಲ್ಲಿ ತಪ್ಪಿಸಿಕೊಂಡವರು ಅಭಿವೃದ್ದಿಹೊಂದುವರು. ಸೇನಾಧೀಶ್ವರನಾದ ಯೆಹೋವನ ಅನುಗ್ರಹವೇ ಇದನ್ನು ನೆರವೇರಿಸುವುದು.

19:32ಯೆಹೋವನು ಅಶ್ಶೂರದ ಅರಸನ ವಿಷಯವಾಗಿ, “ನನ್ನ ಮಾತನ್ನು ಕೇಳು ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ. ಅದಕ್ಕೆ ಬಾಣವನ್ನೆಸೆಯುವುದಿಲ್ಲ. ಗುರಾಣಿ ಹಿಡಿದಿರುವವರನ್ನು ಕಳುಹಿಸುವುದಿಲ್ಲ. ಅದನ್ನು ಕೆಡವಿಬಿಡುವುದಕ್ಕೋಸ್ಕರ ಅದರ ಎದುರಾಗಿ ಮಣ್ಣಿನ ದಿಬ್ಬವನ್ನು ಸೃಷ್ಟಿಸುವುದಿಲ್ಲ.

19:33ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು. ಈ ಪಟ್ಟಣಕ್ಕೆ ಬರುವುದೇ ಇಲ್ಲ ಎಂದು ಹೇಳಿದ್ದಲ್ಲದೆ

19:34ನನಗಾಗಿಯೂ, ನನ್ನ ಸೇವಕನಾದ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು” ಎಂದು ವಾಗ್ದಾನ ಮಾಡಿದ್ದಾನೆ.

19:35ಅದೇ ರಾತ್ರಿಯಲ್ಲಿ ಯೆಹೋವನ ದೂತನು ಹೊರಟು ಬಂದು ಅಶ್ಶೂರ್ಯದ ಪಾಳೆಯದಲ್ಲಿ ಒಂದು ಲಕ್ಷದ ಎಂಭತ್ತೈದು ಸಾವಿರ ಸೈನಿಕರನ್ನು ಸಂಹರಿಸಿದನು. ಅಶ್ಶೂರ್ಯರು ಬೆಳಿಗ್ಗೆ ಎದ್ದು ನೋಡಿದಾಗ ಪಾಳೆಯದ ತುಂಬಾ ಹೆಣಗಳು ಬಿದ್ದಿದ್ದವು.

19:36ಆಗ ಅಶ್ಶೂರ್ಯರ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಮಾಡಿದನು.

19:37ಅವನು ಒಂದು ದಿನ ದೇವಾಲಯಕ್ಕೆ ಹೋಗಿ ತನ್ನ ದೇವರಾದ ನಿಸ್ರೋಕನನ್ನು ಆರಾಧಿಸುತ್ತಿದ್ದಾಗ ಅದ್ರಮ್ಮೆಲೆಕ್, ಸರೆಚೆರ್ ಎಂಬುವವರು ಅವನನ್ನು ಕತ್ತಿಯಿಂದ ಕೊಂದು ಅರರಾಟ್ ದೇಶಕ್ಕೆ ಓಡಿಹೋದರು. ಅವನ ನಂತರ ಅವನ ಮಗನಾದ ಏಸರ್ ಹದ್ದೋನನು ಅರಸನಾದನು.

2 ಪೂರ್ವಕಾಲವೃತ್ತಾಂತ

2 ಪೂರ್ವ 32:1–23

1ಈ ಭಕ್ತಿ ಕಾರ್ಯಗಳಾದ ನಂತರ ಅಶ್ಶೂರದ ಅರಸನಾದ ಸನ್ಹೇರೀಬನು ಯುದ್ಧಕ್ಕೆ ಹೊರಟು ಯೆಹೂದದಲ್ಲಿ ನುಗ್ಗಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿ ಕೊಳ್ಳಬೇಕೆಂದು ಅವುಗಳಿಗೆ ಮುತ್ತಿಗೆ ಹಾಕಿದನು.

2ದೇಶದೊಳಗೆ ನುಗ್ಗಿದ ಸನ್ಹೇರೀಬನು ಯೆರೂಸಲೇಮಿನ ಮೇಲೆಯೂ ಯುದ್ಧಕ್ಕಾಗಿ ಬರಬೇಕೆಂದಿರುವುದು ಹಿಜ್ಕೀಯನಿಗೆ ತಿಳಿದುಬಂದಿತು.

3ಅವನು ಪಟ್ಟಣದ ಹೊರಗಿರುವ ಎಲ್ಲಾ ಒರತೆಗಳನ್ನು ಮುಚ್ಚಿಸಬೇಕೆಂದು ಮನಸ್ಸು ಮಾಡಿ ತನ್ನ ಸರದಾರರ ಮತ್ತು ಶೂರರ ಮುಂದೆ ಆ ಪ್ರಸ್ತಾಪವನ್ನೆತ್ತಿ ಅವರ ಸಹಾಯವನ್ನು ಪಡೆದುಕೊಂಡನು.

4ಆಗ ಅನೇಕರು ಸೇರಿ, “ಇಲ್ಲಿಗೆ ಬರುವ ಅಶ್ಶೂರದ ರಾಜರು ಬೇಕಾದಷ್ಟು ನೀರನ್ನು ನೋಡುವುದೇತಕ್ಕೆ?” ಎಂದುಕೊಂಡು ಎಲ್ಲಾ ಒರತೆಗಳನ್ನೂ ದೇಶದ ಮಧ್ಯದಲ್ಲಿ ಹರಿಯುವ ಹೊಳೆಯನ್ನು ಮುಚ್ಚಿಬಿಟ್ಟರು.

5ಇದರಿಂದ ಅರಸನು ಧ್ಯೆರ್ಯಗೊಂಡು, ಅಲ್ಲಲ್ಲಿ ಬಿದ್ದುಹೋಗಿದ್ದ ಪೌಳಿಗೋಡೆಯನ್ನು ಜೀರ್ಣೋದ್ಧಾರ ಮಾಡಿಸಿ, ಅದರ ಮೇಲೆ ಗೋಪುರಗಳನ್ನೂ, ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿಸಿದನು. ದಾವೀದನಗರದ ಮಿಲ್ಲೋ ಕೋಟೆಯನ್ನು ಭದ್ರಪಡಿಸಿದಲ್ಲದೆ. ಅನೇಕ ಆಯುಧಗಳನ್ನೂ, ಗುರಾಣಿಗಳನ್ನೂ ಮಾಡಿಸಿದನು.

6ಅನಂತರ ಅವನು ಜನರನ್ನು ಮುನ್ನಡೆಸಲು ಸೇನಾಪತಿಗಳನ್ನು ನೇಮಿಸಿ ಅವರನ್ನು ಊರುಬಾಗಲಿನ ಬಯಲಿನಲ್ಲಿ ಒಟ್ಟಾಗಿ ಸೇರಿಸಿಕೊಂಡು ಅವರಿಗೆ,

7“ಶೂರರಾಗಿರಿ, ಧೈರ್ಯದಿಂದಿರಿ; ಅಶ್ಶೂರದ ಅರಸನಿಗೂ ಅವನೊಂದಿಗಿರುವ ಆ ದೊಡ್ಡ ಗುಂಪಿಗೂ ಅಂಜಬೇಡಿರಿ, ಕಳವಳಪಡಬೇಡಿರಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯವು ದೊಡ್ಡದ್ದು. ಅವನೊಂದಿಗಿರುವದಕ್ಕಿಂತ ದೊಡ್ಡವನಾಗಿರುವವನು ನಮ್ಮೊಂದಿಗಿದ್ದಾನೆ.

8ಅವನಿಗಿರುವ ಸಹಾಯವು ನಶ್ವರವಾದ ತೋಳುಬಲ; ನಮಗಾದರೋ ನಮ್ಮ ಸಹಾಯಕನು ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ, ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು” ಎಂದು ಹೇಳಿ ಧೈರ್ಯಪಡಿಸಿದನು. ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸೆಯುಳ್ಳವರಾದರು.

9ಇದಾದ ಮೇಲೆ, ಸರ್ವಸೇನೆಯೊಡನೆ ಲಾಕೀಷಿನ ಎದುರಿನಲ್ಲಿ ಪಾಳೆಯಮಾಡಿಕೊಂಡಿದ್ದ ಅಶ್ಶೂರದ ಅರಸನಾದ ಸನ್ಹೇರೀಬನು ತನ್ನ ಸೇವಕರನ್ನು ಯೆರೂಸಲೇಮಿಗೆ ಕಳುಹಿಸಿದನು. ಅವರ ಮುಖಾಂತರ ಯೆಹೂದದ ಅರಸನಾದ ಹಿಜ್ಕೀಯನಿಗೂ ಯೆರೂಸಲೇಮಿನಲ್ಲಿದ್ದ ಎಲ್ಲಾ ಯೆಹೂದ್ಯರಿಗೂ ಹೀಗೆ ಹೇಳಿ ಕಳುಹಿಸಿದನು,

10“ಅಶ್ಶೂರದ ಅರಸನಾದ ಸನ್ಹೇರೀಬನು ಈ ರೀತಿಯಾಗಿ ಹೇಳುತ್ತಿದ್ದಾನೆ: ನೀವು ಯಾವುದರ ಮೇಲೆ ಭರವಸೆಯಿಟ್ಟು ಮುತ್ತಿಗೆಗೆ ಗುರಿಯಾಗಲಿರುವ ಯೆರೂಸಲೇಮಿನಲ್ಲಿ ನಿಂತಿದ್ದೀರಿ?

11ಹಿಜ್ಕೀಯನು, ‘ನಮ್ಮ ದೇವರಾದ ಯೆಹೋವನು ಅಶ್ಶೂರದ ಅರಸನ ಕೈಯಿಂದ ನಮ್ಮನ್ನು ರಕ್ಷಿಸುವನು’ ಎಂಬ ನಂಬಿಕೆ ನಿಮ್ಮಲ್ಲಿ ಹುಟ್ಟಿಸುವುದಕ್ಕೆ ಪ್ರಯತ್ನಿಸುತ್ತಿರುವುದು ನಿಮ್ಮನ್ನು ಹಸಿವೆ ನೀರಡಿಕೆಗಳಿಂದ ಸಾಯಿಸುವುದಕ್ಕಾಗಿಯೇ ಅಲ್ಲದೆ ಮತ್ತ್ಯಾವುದಕ್ಕೂ ಅಲ್ಲ.

12ಹಿಜ್ಕೀಯನು ಒಂದೇ ಯಜ್ಞವೇದಿಯ ಮುಂದೆ ಆರಾಧನೆ ಮಾಡಿ ಅದರ ಮೇಲೆಯೇ ಧೂಪಹಾಕಬೇಕೆಂಬುದಾಗಿ ಯೆಹೂದ್ಯರಿಗೂ, ಯೆರೂಸಲೇಮಿನವರಿಗೂ ಆಜ್ಞಾಪಿಸಿ, ದೇವರ ಬೇರೆ ಎಲ್ಲಾ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಕೆಡವಿಸಿ ಬಿಟ್ಟನಲ್ಲವೆ?

13ನಾನೂ, ನನ್ನ ತಂದೆ, ತಾತಂದಿರೂ ಎಲ್ಲಾ ದೇಶಗಳ ಜನಾಂಗಗಳಿಗೆ ಮಾಡಿದ್ದನ್ನು ಕೇಳಲಿಲ್ಲವೋ? ಆ ಜನಾಂಗಗಳ ದೇವತೆಗಳಿಗೆ ಅವರ ದೇಶವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸುವುದಕ್ಕೆ ಸಾಧ್ಯವಾಯಿತೋ?

14ನನ್ನ ತಂದೆತಾತಂದಿರು ನಾಶಮಾಡಿಬಿಟ್ಟ ಆ ಜನಾಂಗಗಳ ದೇವರುಗಳಲ್ಲಿ ಯಾವನು ತಾನೆ ತನ್ನ ಪ್ರಜೆಯನ್ನು ನನ್ನ ಕೈಯಿಂದ ಬಿಡಿಸುವುದಕ್ಕೆ ಸಮರ್ಥನಾಗಿದ್ದನು? ಹೀಗಿರುವಲ್ಲಿ ನಿಮ್ಮ ದೇವರು ನಿಮ್ಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಯೋ

15ನೀವು ಹಿಜ್ಕೀಯನಿಂದ ಮರುಳಾಗಿ ಈ ರೀತಿಯಾಗಿ ಮೋಸಹೋಗಬೇಡಿರಿ, ಅವನನ್ನು ನಂಬಲೂ ಬೇಡಿರಿ. ಯಾವ ರಾಜ್ಯಜನಾಂಗಗಳ ದೇವತೆಗಳೂ ತನ್ನ ಪ್ರಜೆಗಳನ್ನು ನನ್ನ ಮತ್ತು ನನ್ನ ಪೂರ್ವಿಕರ ಕೈಯಿಂದ ಬಿಡಿಸಲಾರದೆ ಹೋದನು ಅಂದ ಮೇಲೆ, ನಿಮ್ಮ ದೇವರು ನಿಮ್ಮನ್ನು ನನ್ನ ಕೈಗೆ ಸಿಕ್ಕಿದಂತೆ ತಪ್ಪಿಸಬಲ್ಲನೇ?” ಎಂದು ಹೇಳಿಸಿದನು.

16ಸನ್ಹೇರೀಬನು ದೇವರಾದ ಯೆಹೋವನಿಗೂ ಆತನ ಸೇವಕನಾದ ಹಿಜ್ಕೀಯನಿಗೂ ವಿರುದ್ಧವಾಗಿ ಆಡಿದ ಈ ಮಾತುಗಳನ್ನು ತನ್ನ ಸೇವಕರ ಮುಖಾಂತರ ಹೇಳಿ ಕಳುಹಿಸಿದನು.

17ಅಷ್ಟು ಮಾತ್ರವಲ್ಲದೆ, ಇಸ್ರಾಯೇಲಿನ ದೇವರಾದ ಯೆಹೋವನನ್ನು ನಿಂದಿಸಿ ದೂಷಿಸುವುದಕ್ಕಾಗಿ, “ಅನ್ಯದೇಶಗಳವರ ದೇವರುಗಳು ತಮ್ಮ ಜನರನ್ನು ನನ್ನ ಕೈಯಿಂದ ಬಿಡಿಸಲಾರದೆ ಹೋದಂತೆ ಹಿಜ್ಕೀಯನ ದೇವರು ತನ್ನ ಪ್ರಜೆಗಳನ್ನು ನನ್ನ ಕೈಯಿಂದ ಬಿಡಿಸಲಾರನು” ಎಂಬುದಾಗಿ ಪತ್ರದಲ್ಲಿ ಬರೆದು ಕಳುಹಿಸಿದನು.

18ಯೆರೂಸಲೇಮಿಗೆ ಬಂದ ಆ ಅಶ್ಶೂರ್ಯರು ಗೋಡೆಯ ಮೇಲಿದ್ದ ಜನರನ್ನು ಬೆದರಿಸಿ, ದಿಗ್ಭ್ರಮೆಗೊಳಿಸಿ ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳುವುದಕ್ಕಾಗಿ ಗಟ್ಟಿಯಾಗಿ ಕೂಗುತ್ತಾ ಅವರೊಡನೆ ಯೆಹೂದ್ಯರ ಭಾಷೆಯಲ್ಲಿ ಅವರಿಗೆ

19ಯೆರೂಸಲೇಮಿನ ದೇವರಾದ ಯೆಹೋವನು ಮನುಷ್ಯರ ಕೈಕೆಲಸವಾಗಿರುವ ಅನ್ಯದೇಶಗಳವರ ದೇವತೆಗಳಿಗೆ ಸಮಾನನಾಗಿರುವನನು ಎಂದು ಅನ್ಯದೇವರುಗಳಿಗೆ ಹೋಲಿಸಿ ಮಾತನಾಡಿದರು.

20ಈ ಕಾರಣದಿಂದ ಅರಸನಾದ ಹಿಜ್ಕೀಯನು ಹಾಗು ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯು ಪರಲೋಕದ ದೇವರಿಗೆ ಮೊರೆಯಿಟ್ಟು ಪ್ರಾರ್ಥಿಸಿದರು.

21ಯೆಹೋವನು ದೂತನನ್ನು ಕಳುಹಿಸಿ ಅಶ್ಶೂರದ ಅರಸನ ದಂಡಿನಲ್ಲಿದ್ದ ಎಲ್ಲಾ ಶೂರರನ್ನೂ, ನಾಯಕರನ್ನೂ, ಅಧಿಪತಿಗಳನ್ನೂ ಸಂಹರಿಸಿದನು; ಅಶ್ಶೂರದ ಅರಸನು ನಾಚಿಕೆಯಿಂದ ತನ್ನ ದೇಶಕ್ಕೆ ಹಿಂದಿರುಗಿಹೋಗಬೇಕಾಯಿತು. ಅಲ್ಲಿ ಅವನು ತನ್ನ ದೇವರ ಗುಡಿಗೆ ಹೋಗಿದ್ದಾಗ ಅವನ ಸ್ವಂತ ಮಕ್ಕಳೇ ಅವನನ್ನು ಕತ್ತಿಯಿಂದ ಕೊಂದು ಹಾಕಿದರು.

22ಹೀಗೆ ಯೆಹೋವನು ಹಿಜ್ಕೀಯನನ್ನೂ ಯೆರೂಸಲೇಮಿನವರನ್ನೂ ಅಶ್ಶೂರ್ಯದ ಅರಸನಾದ ಸನ್ಹೇರೀಬನ ಕೈಗೂ ಸುತ್ತಲಿನ ಎಲ್ಲಾ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡುತ್ತಿದ್ದನು.

23ಅನೇಕರು ಯೆಹೋವನಿಗೋಸ್ಕರ ಕಾಣಿಕೆಗಳನ್ನೂ, ಯೆಹೂದ್ಯರ ಅರಸನಾದ ಹಿಜ್ಕೀಯನಿಗೋಸ್ಕರ ಶ್ರೇಷ್ಠ ವಸ್ತುಗಳನ್ನೂ ಯೆರೂಸಲೇಮಿಗೆ ತೆಗೆದುಕೊಂಡು ಬಂದರು. ಅಂದಿನಿಂದ ಎಲ್ಲಾ ಜನಾಂಗಗಳವರು ಹಿಜ್ಕೀಯನನ್ನು ಬಹಳ ದೊಡ್ಡವನೆಂದು ಪರಿಗಣಿಸುತ್ತಿದ್ದರು.

ಯೆಶಾಯನು

ಯೆಶಾ 36:1–22; 37:1–38

36:1ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಬಂದು ಯೆಹೂದ ಪ್ರಾಂತ್ಯದೊಳಗೆ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.

36:2ಆಗ ಅಶ್ಶೂರದ ಅರಸನು ಲಾಕೀಷಿನಿಂದ ಮಹಾಸೈನ್ಯ ಸಹಿತನಾದ ರಬ್ಷಾಕೆ ಎಂಬುವವನನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಇವನು ಅಗಸರ ಹೊಲದ ಕಡೆಯಿಂದ ಹೋಗುವ ರಾಜಮಾರ್ಗದ ಹತ್ತಿರ ಅಲ್ಲಿನ ಕೆರೆಯ ಕಾಲುವೆಯ ಬಳಿಯಲ್ಲಿ ಪಾಳೆಯಮಾಡಿಕೊಂಡನು.

36:3ಆ ಮೇಲೆ ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಆದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬುವವರು ಬಂದರು.

36:4ರಬ್ಷಾಕೆಯು ಅವರಿಗೆ, “ನೀವು ಹೋಗಿ, ಮಹಾರಾಜನಾದ ಅಶ್ಶೂರದ ಅರಸನ ಈ ಮಾತುಗಳನ್ನು ಹಿಜ್ಕೀಯನಿಗೆ ತಿಳಿಸಿರಿ, ‘ಈ ನಿನ್ನ ಭರವಸೆಗೆ ಯಾವ ಆಧಾರವುಂಟು?

36:5ಯುದ್ಧಕ್ಕೆ ಬೇಕಾದ ವಿವೇಕವೂ, ಬಲವೂ ಉಂಟು ಎಂಬ ನಿನ್ನ ಮಾತು ಬರೀ ಬಾಯಿ ಮಾತೇ ಎಂದು ನಾನು ಹೇಳಬಲ್ಲೆ, ನೀನು ಯಾರನ್ನು ನಂಬಿಕೊಂಡು ನನ್ನ ವಿರುದ್ಧವಾಗಿ ತಿರುಗಿಬಿದ್ದಿದ್ದೀ?’

36:6“‘ಜಜ್ಜಿದ ದಂಟಿಗೆ ಸಮಾನವಾದ ಐಗುಪ್ತವೆಂಬ ಕೋಲಿನ ಮೇಲೆ ಭರವಸವಿಟ್ಟಿರುತ್ತೀಯಷ್ಟೆ. ಒಬ್ಬನು ಅಂಥ ಕೋಲನ್ನು ಆಧಾರ ಮಾಡಿಕೊಳ್ಳುವುದಾದರೆ ಅದು ಅವನ ಕೈಯನ್ನು ತಿವಿದು ಒಳಕ್ಕೆ ಹೋಗುತ್ತದೆ! ಐಗುಪ್ತದ ಅರಸನಾದ ಫರೋಹನನಲ್ಲಿ ಭರವಸವಿಟ್ಟವರಿಗೆ ಅದೇ ಗತಿಯಾಗುವುದು.

36:7ಒಂದು ವೇಳೆ ನೀನು, ನಮ್ಮ ದೇವರಾದ ಯೆಹೋವನನ್ನು ನಂಬಿಕೊಂಡಿದ್ದೇವೆ’ ಎಂದು ಹೇಳಬಹುದು. ಹಿಜ್ಕೀಯನು, ‘ನೀವು ಯೆರೂಸಲೇಮಿನಲ್ಲಿರುವ ಇದೇ ಯಜ್ಞವೇದಿಯ ಮುಂದೆ ಆರಾಧನೆ ಮಾಡಬೇಕು’ ಎಂಬುದಾಗಿ ಯೆಹೂದ್ಯರಿಗೂ, ಯೆರೂಸಲೇಮಿನವರಿಗೂ ಆಜ್ಞಾಪಿಸಿ, ಆ ಯೆಹೋವನ ಪೂಜಾಸ್ಥಳಗಳನ್ನೂ ಬೇರೆ ಎಲ್ಲಾ ಯಜ್ಞವೇದಿಗಳನ್ನೂ ಹಾಳುಮಾಡಿದನಲ್ಲಾ!

36:8“ಆದುದರಿಂದ ಈಗ ನನ್ನ ಒಡೆಯನಾದ ಅಶ್ಶೂರದ ಅರಸನಿಗೆ ಸವಾಲು ಹಾಕುವುದಕ್ಕೆ ನಿನಗೆ ಮನಸ್ಸುಂಟೋ? ಹಾಗಾದರೆ ಅವನು ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತಾನೆ. ನೀನು ಅಷ್ಟು ಮಂದಿ ಸವಾರರನ್ನು ಅವುಗಳ ಮೇಲೆ ಕುಳ್ಳಿರಿಸುವಿಯೋ?

36:9“ಇದೂ ನಿನಗೆ ಅಸಾಧ್ಯವಾಗುವುದಾದರೆ ನನ್ನ ಒಡೆಯನ ಸೇನಾಧಿಪತಿಗಳಲ್ಲಿ ಅತ್ಯಲ್ಪನನ್ನಾದರೂ ಸೋಲಿಸುವುದು ನಿನ್ನಿಂದ ಹೇಗೆ ಸಾಧ್ಯವಾಗುತ್ತದೆ? ರಥಾಶ್ವಬಲಗಳಿಗಾಗಿ ನೀನು ಐಗುಪ್ತ್ಯರನ್ನು ನಂಬಿಕೊಂಡಿರುವಂತೆ ಕಾಣುತ್ತದೆ.

36:10ಈ ದೇಶವನ್ನು ಹಾಳುಮಾಡುವುದಕ್ಕೆ ಯೆಹೋವನ ಚಿತ್ತವಿಲ್ಲದೆ ಬಂದೆನೆಂದು ನೆನಸುತ್ತೀಯೋ? ‘ಇಲ್ಲಿಗೆ ಬಂದು ಇದನ್ನು ಹಾಳು ಮಾಡಿಬಿಡು’ ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು ಎನ್ನುವ ಅರಸನ ಮಾತುಗಳನ್ನು ತಿಳಿಸಿರಿ” ಎಂದು ಹೇಳಿದನು.

36:11ಆಗ ಎಲ್ಯಾಕೀಮ್, ಶೆಬ್ನ, ಯೋವ ಎಂಬುವವರು ರಬ್ಷಾಕೆಗೆ, “ನೀನು ಮಾತನಾಡುವುದು ಪೌಳಿಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ. ಆದುದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು; ಅದು ನಮಗೆ ತಿಳಿಯುತ್ತದೆ. ಆದರೆ ಯೂದಾಯ ಭಾಷೆಯಲ್ಲಿ ಮಾತನಾಡಬೇಡ” ಎಂದು ಹೇಳಿದರು.

36:12ಅದಕ್ಕೆ ರಬ್ಷಾಕೆಯು, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಒಡೆಯನ ಸಂಗಡವಾಗಲಿ ಈ ಮಾತುಗಳನ್ನು ಹೇಳುವುದಕ್ಕೆ ನನ್ನನ್ನು ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತಿರುವ ಜನರ ಸಂಗಡ ಮಾತನಾಡುವುದಕ್ಕೋಸ್ಕರ ಕಳುಹಿಸಿದ್ದಾನೆ. ಅವರು ನನ್ನ ವಿರುದ್ಧವಾಗಿ ನಿಂತರೆ ನಿಮ್ಮೊಡನೆ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕಾಗುವುದು” ಎಂದು ಉತ್ತರಕೊಟ್ಟನು.

36:13ಆಮೇಲೆ ರಬ್ಷಾಕೆಯು ಎದ್ದು ಗೋಡೆಯ ಮೇಲೆ ನಿಂತವರಿಗೆ ಯೂದಾಯ ಭಾಷೆಯಲ್ಲಿ, “ಅಶ್ಶೂರದ ಮಹಾರಾಜನ ಮಾತನ್ನು ಕೇಳಿರಿ.

36:14ಅರಸನು ನಿಮಗೆ, ‘ಹಿಜ್ಕೀಯನಿಂದ ಮೋಸ ಹೋಗಬೇಡಿರಿ. ಅವನು ನಿಮ್ಮನ್ನು ಬಿಡಿಸಲಾರನು.’

36:15ಹಿಜ್ಕೀಯನು ನಿಮಗೆ, ‘ಯೆಹೋವನನ್ನು ನಂಬಿರಿ; ಆತನು ನಮ್ಮನ್ನು ಹೇಗೋ ರಕ್ಷಿಸುವನು; ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವುದಿಲ್ಲ’” ಎಂಬುದಾಗಿ ಹೇಳಿದರೆ,

36:16ಹಿಜ್ಕೀಯನ ಮಾತಿಗೆ ಕಿವಿಗೊಡಬೇಡಿರಿ, ಏಕೆಂದರೆ ಅಶ್ಶೂರದ ಅರಸನು ಹೇಳುವುದೇನೆಂದರೆ, “ನನ್ನ ಮಾತನ್ನು ಕೇಳಿರಿ; ನನ್ನೊಡನೆ ಒಡಂಬಡಿಕೆ ಮಾಡಿಕೊಂಡು ನನ್ನ ಆಶ್ರಯದಲ್ಲಿ ಸೇರಿರಿ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಅಂಜೂರದ ಮರ, ದ್ರಾಕ್ಷಾಲತೆ ಇವುಗಳ ಹಣ್ಣುಗಳನ್ನು ತಿಂದು ತನ್ನ ಬಾವಿಯ ನೀರನ್ನು ಕುಡಿಯುವನು.

36:17ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು.”

36:18“ಯೆಹೋವನು ನಮ್ಮನ್ನು ರಕ್ಷಿಸುವನು ಎಂಬ ನಂಬಿಕೆಯನ್ನು ಹಿಜ್ಕೀಯನು ನಿಮ್ಮಲ್ಲಿ ಹುಟ್ಟಿಸಾನು ನೋಡಿಕೊಳ್ಳಿರಿ. ಯಾವ ಜನಾಂಗದ ದೇವತೆಯು ತನ್ನ ದೇಶವನ್ನು ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ಕಾಪಾಡಿತು?

36:19ಹಮಾತ್, ಅರ್ಪಾದ್, ಸೆಫರ್ವಯಿಮ್ ಎಂಬ ಪಟ್ಟಣಗಳ ದೇವತೆಗಳೇನಾದವು? ಅವು ಸಮಾರ್ಯವನ್ನು ನನ್ನ ಕೈಯಿಂದ ತಪ್ಪಿಸಿದವೋ?

36:20ಯಾವ ಜನಾಂಗದ ದೇವತೆಯಾದರೂ ತನ್ನ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದೆ ಹೋದ ಮೇಲೆ ಯೆಹೋವನು ಯೆರೂಸಲೇಮನ್ನು ನನ್ನ ಕೈಗೆ ತಪ್ಪಿಸಿ ಕಾಪಾಡುವನೋ? ಎನ್ನುತ್ತಾನೆ” ಎಂದು ಹೇಳಿದನು.

36:21ಆ ಸೇನಾಧಿಪತಿಗಳಿಗೆ ಯಾವ ಉತ್ತರವನ್ನೂ ಕೊಡಬಾರದೆಂದು ಅರಸನು ತನ್ನ ಪ್ರಜೆಗಳಿಗೆ ಆಜ್ಞಾಪಿಸಿದ್ದರಿಂದ ಅವರು ಸುಮ್ಮನಿದ್ದರು, ಏನು ಹೇಳಲಿಲ್ಲ.

36:22ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಆಗಿದ್ದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬುವವರು ತಮ್ಮ ಬಟ್ಟೆಗಳನ್ನು ಹರಿದುಕೊಂಡು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು.

37:1ಆಗ ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣೀತಟ್ಟನ್ನು ಕಟ್ಟಿಕೊಂಡು ಯೆಹೋವನ ಆಲಯಕ್ಕೆ ಹೋದನು.

37:2ಇದಲ್ಲದೆ ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಹಿರಿಯರಾದ ಯಾಜಕರು ಇವರನ್ನು ಕರೆಯಿಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನೂ, ಪ್ರವಾದಿಯೂ ಆಗಿರುವ ಯೆಶಾಯನ ಬಳಿಗೆ ಹೋಗಿ ಹೀಗೆ ಹೇಳಿರಿ” ಎಂದು ಆಜ್ಞಾಪಿಸಿದನು.

37:3ಆಗ ಅವರು ಯೆಶಾಯನಿಗೆ, “ಹಿಜ್ಕೀಯನು ಹೀಗೆ ಹೇಳುತ್ತಾನೆ, ‘ಈ ದಿನದಲ್ಲಿ ನಮಗೆ ಮಹಾಕಷ್ಟವೂ, ಶಿಕ್ಷೆಯೂ, ನಿಂದೆಯೂ ಸಂಭವಿಸಿರುತ್ತದೆ. ಹೆರಿಗೆಯ ಕಾಲ ಬಂದದೆ; ಆದರೆ ಹೆರುವುದಕ್ಕೆ ಬಲ ಸಾಲದು.

37:4ನಿನ್ನ ದೇವರಾದ ಯೆಹೋವನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದಾವಾಕ್ಯಗಳನ್ನು ಕೇಳಿರುವನು, ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿತೀರಿಸಾನು. ಆದುದರಿಂದ ಉಳಿದಿರುವ ಸ್ವಲ್ಪ ಜನರಿಗೋಸ್ಕರ ಯೆಹೋವನನ್ನು ಪ್ರಾರ್ಥಿಸು’” ಎಂದು ಹೇಳಿದರು.

37:5ಯೆಶಾಯನು ಅರಸನಾದ ಹಿಜ್ಕೀಯನ ಕಡೆಯಿಂದ ತನ್ನ ಬಳಿಗೆ ಬಂದ ಸೇವಕರಿಗೆ,

37:6“ಅಶ್ಶೂರದ ಅರಸನ ಸೇವಕರು ನನ್ನನ್ನು ದೂಷಿಸಿದ ಮಾತುಗಳನ್ನು ಕೇಳಿದ್ದೀ, ಅವುಗಳಿಗೆ ನೀನು ಹೆದರಬೇಡ.

37:7ಇಗೋ, ನಾನು ಅವನ ಮೇಲೆ ಭಯದ ಆತ್ಮವನ್ನು ಬರ ಮಾಡುವೆನು. ಅವನು ಒಂದು ಸುದ್ದಿಯನ್ನು ಕೇಳಿ ತಿರುಗಿಕೊಂಡು ಸ್ವದೇಶಕ್ಕೆ ಹೋಗಿ, ಅಲ್ಲಿ ಕತ್ತಿಯಿಂದ ಬೀಳುವಂತೆ ಮಾಡುವೆನು ಎಂಬ ಯೆಹೋವನ ಮಾತನ್ನು ನಿಮ್ಮ ಯಜಮಾನನಿಗೆ ಹೇಳಿರಿ” ಎಂಬುದಾಗಿ ಉತ್ತರಕೊಟ್ಟನು.

37:8ರಬ್ಷಾಕೆಯು ಹಿಂದಿರುಗಿ ಹೋಗುವಾಗ ದಾರಿಯಲ್ಲಿ ಅಶ್ಶೂರದ ಅರಸನು ಲಾಕೀಷನ್ನು ಬಿಟ್ಟು ಹೋದನೆಂಬ ವರ್ತಮಾನವನ್ನು ಕೇಳಿ ಲಿಬ್ನಕ್ಕೆ ಹೋಗಿ, ಅಲ್ಲಿ ಅವನನ್ನು ಕಂಡನು. ಆಗ ಅವನು ಆ ಪಟ್ಟಣದ ವಿರುದ್ಧವಾಗಿ ಯುದ್ಧಮಾಡುತ್ತಾ ಇದ್ದನು.

37:9ಅಷ್ಟರಲ್ಲಿ ಕೂಷಿನ ಅರಸನಾದ ತಿರ್ಹಾಕನು ತನ್ನ ವಿರುದ್ಧವಾಗಿ ಹೊರಟಿದ್ದಾನೆಂಬ ಸುದ್ದಿಯನ್ನು ಅಶ್ಶೂರದ ಅರಸನಾದ ಸನ್ಹೇರೀಬನು ಕೇಳಿ, ಹಿಜ್ಕೀಯನ ಬಳಿಗೆ ದೂತರನ್ನು ಕಳುಹಿಸಿ,

37:10“ಹಿಜ್ಕೀಯನೇ, ನೀನು ನಂಬುವ ದೇವರು, ‘ಯೆರೂಸಲೇಮು ಅಶ್ಶೂರದ ಅರಸನಿಗೆ ವಶವಾಗುವುದಿಲ್ಲವೆಂದು ಹೇಳಿ ನಿನ್ನನ್ನು ಮೋಸಗೊಳಿಸಾನು.’

37:11ಅಶ್ಶೂರದ ಅರಸರು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಮಾಡಿದರೆಂದು ಕೇಳಿದಿಯಲ್ಲಾ? ಹೀಗಿದ್ದ ಮೇಲೆ ನೀನು ಉಳಿಯುವಿಯೋ?

37:12ನನ್ನ ತಂದೆತಾತಂದಿರು ಗೋಜಾನ್, ಖಾರಾನ್, ರೆಚೆಫ್ ಎಂಬ ಪಟ್ಟಣಗಳ ಜನರನ್ನೂ ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಎದೆನಿನ ಜನರನ್ನೂ ನಾಶಮಾಡುವುದಕ್ಕೆ ಹೋದಾಗ ಅವರ ದೇವತೆಗಳು ಅವರನ್ನು ಕಾಪಾಡಿದವೋ?

37:13ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ ಎಂಬ ಪಟ್ಟಣಗಳ ಅರಸರು ಏನಾದರು ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ” ಎಂಬುದಾಗಿ ದೂತರನ್ನು ಹಿಜ್ಕೀಯನ ಬಳಿಗೆ ಕಳುಹಿಸಿದನು.

37:14ಹಿಜ್ಕೀಯನು ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ ಯೆಹೋವನ ಆಲಯಕ್ಕೆ ಹೋಗಿ ಅದನ್ನು ಯೆಹೋವನ ಮುಂದೆ ತೆರೆದಿಟ್ಟನು.

37:15ಹಿಜ್ಕೀಯನು ಯೆಹೋವನನ್ನು ಕುರಿತು

37:16“ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲ್ ದೇವರೇ, ಸೇನಾಧೀಶ್ವರನಾದ ಯೆಹೋವನೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀನೊಬ್ಬನೇ, ಪರಲೋಕ ಭೂಲೋಕಗಳನ್ನು ಉಂಟುಮಾಡಿದವನು ನೀನೇ.

37:17ಯೆಹೋವನೇ, ಕಿವಿಗೊಟ್ಟು ಕೇಳು. ಯೆಹೋವನೇ, ಕಣ್ಣಿಟ್ಟು ನೋಡು. ಸನ್ಹೇರೀಬನು ಜೀವಸ್ವರೂಪ ದೇವರಾದ ನಿನ್ನನ್ನು ನಿಂದಿಸುವುದಕ್ಕೋಸ್ಕರ ಹೇಳಿ ಕಳುಹಿಸಿದ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೋ.

37:18ಯೆಹೋವನೇ, ಅಶ್ಶೂರದ ಅರಸರು ಸಕಲ ಜನಾಂಗಗಳನ್ನೂ, ಅವರ ದೇಶಗಳನ್ನೂ ಹಾಳು ಮಾಡಿದ್ದು ನಿಜ.

37:19ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದರು, ಏಕೆಂದರೆ ಅವು ದೇವತೆಗಳಲ್ಲ, ಮನುಷ್ಯರು ಕೆತ್ತಿದ ಕಲ್ಲು ಮರಗಳ ಬೊಂಬೆಗಳಷ್ಟೆ. ಆದುದರಿಂದಲೇ ಅವು ಅವರಿಂದ ಹಾಳಾದವು.

37:20ಹೀಗಿರುವುದರಿಂದ ಯೆಹೋವನೇ, ನಮ್ಮ ದೇವರೇ, ನೀನೇ ಅದ್ವಿತೀಯನಾದ ಯೆಹೋವನೆಂಬುದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು ಎಂದು ಪ್ರಾರ್ಥಿಸಿದನು.”

37:21ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ, “ಇಸ್ರಾಯೇಲ್ ದೇವರಾದ ಯೆಹೋವನ ಈ ಮಾತುಗಳನ್ನು ಕೇಳು, ‘ನೀನು ಅಶ್ಶೂರದ ಅರಸನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳನ್ನು ಕೇಳಿದೆನು.’

37:22ಯೆಹೋವನು ಅವನನ್ನು ಕುರಿತು ಹೇಳುವುದೇನೆಂದರೆ, ‘ಕನ್ನಿಕೆಯಾಗಿರುವ ಚೀಯೋನ್ ಕುವರಿಯು ನಿನ್ನನ್ನು ತಿರಸ್ಕರಿಸಿ ಪರಿಹಾಸ್ಯಮಾಡುತ್ತಾಳೆ, ಯೆರೂಸಲೇಮ್ ಕುವರಿಯು ನಿನ್ನ ಹಿಂದೆ ತಲೆಯಾಡಿಸುತ್ತಾಳೆ.

37:23ನೀನು ಯಾರನ್ನು ನಿಂದಿಸಿ ಯಾರನ್ನು ದೂಷಿಸಿದ್ಡೀ? ಯಾರ ವಿರುದ್ಧವಾಗಿ ಬಾಯ್ದೆರೆದು ಧ್ವನಿಯೆತ್ತಿದ್ದೀ? ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾಯೇಲರ ಸದಮಲಸ್ವಾಮಿಯನ್ನಲ್ಲವೇ!’

37:24ನೀನು ನಿನ್ನ ಸೇವಕರ ಮುಖಾಂತರವಾಗಿ ಕರ್ತನನ್ನು ನಿಂದಿಸಿ, ‘ನನ್ನ ರಥಸಮೂಹದೊಡನೆ ಪರ್ವತಶಿಖರಗಳನ್ನು ಹತ್ತಿದ್ದೇನೆ. ಲೆಬನೋನಿನ ದುರ್ಗಮಸ್ಥಳಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರು ವೃಕ್ಷಗಳನ್ನೂ, ಶ್ರೇಷ್ಠವಾದ ತುರಾಯಿ ಮರಗಳನ್ನೂ ಕಡಿದು ಬಿಟ್ಟಿದ್ದೇನೆ; ಅಲ್ಲಿನ ಬಹುದೂರದ ಶಿಖರವನ್ನೂ, ಉದ್ಯಾನವನಗಳನ್ನೂ ಪ್ರವೇಶಿಸಿದ್ದೇನೆ.

37:25ಪರದೇಶಗಳಲ್ಲಿ ಅಗೆದು ನೀರು ತೆಗೆದುಕೊಂಡು ಕುಡಿದಿದ್ದೇನೆ; ನನ್ನ ಪಾದಗಳಿಂದ ಐಗುಪ್ತದ ಎಲ್ಲಾ ಹೊಳೆಗಳನ್ನು ಬತ್ತಿಸಿದ್ದೇನೆ’ ಎಂಬುದಾಗಿ ನೀನು ಕೊಚ್ಚಿಕೊಂಡಿದ್ದಿ.

37:26ಇದನ್ನು ನೀನು ಕೇಳಲಿಲ್ಲವೋ? ಹೀಗಾಗಬೇಕೆಂದು ಬಹುಕಾಲದ ಹಿಂದೆಯೇ ಗೊತ್ತುಮಾಡಿದೆನು. ಪೂರ್ವಕಾಲದಲ್ಲಿ ನಿರ್ಣಯಿಸಿದ್ದನ್ನು ಈಗ ನೆರವೇರಿಸಿದ್ದೇನೆ. ಆದುದರಿಂದ ಕೋಟೆಕೊತ್ತಲುಗಳ ಪಟ್ಟಣಗಳನ್ನು ಹಾಳುದಿಬ್ಬಗಳನ್ನಾಗಿ ಮಾಡುವುದು ನಿನಗೆ ಸಾಧ್ಯವಾಯಿತು.

37:27ಅವುಗಳ ನಿವಾಸಿಗಳು ಬಲವಿಲ್ಲದವರಾಗಿ ಆಶಾಭಂಗಪಟ್ಟು ಕಳವಳಗೊಂಡರು. ಅವರು ಹೊಲದ ಗಿಡಕ್ಕೂ, ಹಸಿರು ಹುಲ್ಲಿಗೂ, ಮಾಳಿಗೆಯ ಮೇಲಣ ಹುಲ್ಲಿಗೂ, ಹೊಡೆಯುವುದಕ್ಕಿಂತ ಮೊದಲೇ ಒಣಗಿ ಹೋದ ಪೈರಿಗೂ ಸಮಾನರಾದರು.

37:28ನೀನು ಕುಳಿತುಕೊಳ್ಳುವುದೂ, ಹೊರಗೆ ಹೋಗುವುದೂ, ಒಳಗೆ ಬರುವುದೂ ನನಗೆ ಗೊತ್ತುಂಟು. ನೀನು ನನ್ನ ಮೇಲೆ ರೌದ್ರಾವೇಶನಾಗಿರುವುದನ್ನೂ ಬಲ್ಲೆನು.

37:29ಏಕೆಂದರೆ ನೀನು ನನ್ನ ವಿರುದ್ಧ ಕೋಪಗೊಂಡಿರುವುದೂ, ಅಸಮಾಧಾನವಾಗಿರುವುದೂ ನನಗೆ ತಿಳಿದುಬಂತು. ಆದುದರಿಂದ ನಿನಗೆ ಮೂಗುದಾರವನ್ನೂ, ಕಡಿವಾಣವನ್ನೂ ಹಾಕಿ ಬಂದ ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು” ಎಂಬುದಾಗಿ ಹೇಳಿದ್ದಾನೆ.

37:30ಈ ಮಾತುಗಳು ನೆರವೇರುವುದು ಎಂಬುದಕ್ಕೆ, ನೀವು ಈ ವರ್ಷದಲ್ಲಿ ಕೂಳೆಬೆಳೆಯನ್ನೂ, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ, ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದದ್ದನ್ನೂ, ದ್ರಾಕ್ಷಿತೋಟಗಳಲ್ಲಿ ವ್ಯವಸಾಯಮಾಡಿ ಕೂಡಿಸಿದ್ದನ್ನೂ ಅನುಭವಿಸುವುದೇ ಗುರುತಾಗಿರುವುದು.

37:31ತಪ್ಪಿಸಿಕೊಂಡು ಉಳಿದ ಯೆಹೂದ್ಯರು ದೇಶದಲ್ಲಿ ನೆಲೆಗೊಂಡು ಅಭಿವೃದ್ಧಿಯಾಗುವರು.

37:32ಯೆರೂಸಲೇಮಿನಲ್ಲಿ ಉಳಿದವರು ಹರಡಿಕೊಳ್ಳುವರು, ಚೀಯೋನ್ ಪರ್ವತದಲ್ಲಿ ತಪ್ಪಿಸಿಕೊಂಡವರು ಅಭಿವೃದ್ಧಿಹೊಂದುವರು; ಸೇನಾಧೀಶ್ವರನಾದ ಯೆಹೋವನ ಅನುಗ್ರಹವು ಇದನ್ನು ನೆರವೇರಿಸುವುದು.

37:33ಆತನು ಅಶ್ಶೂರದ ಅರಸನನ್ನು ಕುರಿತು, “ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದಕ್ಕೆ ಬಾಣವನ್ನೆಸೆಯುವುದಿಲ್ಲ, ಗುರಾಣಿ ಹಿಡಿದಿರುವವರನ್ನು ಕಳುಹಿಸುವುದಿಲ್ಲ, ಅದನ್ನು ಕೆಡವಿ ಬಿಡುವುದಕ್ಕೋಸ್ಕರ ಅದರ ಎದುರಾಗಿ ಮಣ್ಣಿನ ದಿಬ್ಬವನ್ನು ಮಾಡುವುದಿಲ್ಲ.

37:34ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಈ ಪಟ್ಟಣಕ್ಕೆ ಬರುವುದೇ ಇಲ್ಲ.

37:35ನನಗೋಸ್ಕರವಾಗಿಯೂ, ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಪಟ್ಟಣವನ್ನು ಉಳಿಸಿ ಕಾಪಾಡುವೆನು” ಎಂದು ಹೇಳುತ್ತಾನೆ ಎಂಬುದೇ.

37:36ಆಗ ಯೆಹೋವನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು. ಬೆಳಿಗ್ಗೆ ಎದ್ದು ನೋಡುವಲ್ಲಿ ಅವರೆಲ್ಲರು ಹೆಣಗಳಾಗಿದ್ದರು.

37:37ಆಗ ಅಶ್ಶೂರ್ಯರ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು.

37:38ಅವನು ಒಂದು ದಿನ ಗುಡಿಗೆ ಹೋಗಿ ತನ್ನ ದೇವರಾದ ನಿಸ್ರೋಕನನ್ನು ಮನೆಯಲ್ಲಿ ಪೂಜಿಸುತ್ತಿರುವಾಗ ಅದ್ರಮ್ಮೆಲೆಕ್, ಸರೆಚೆರ್ ಎಂಬ ಅವನ ಮಕ್ಕಳು ಅವನನ್ನು ಕತ್ತಿಯಿಂದ ಕೊಂದು, ಅರರಾಟ್ ದೇಶಕ್ಕೆ ಓಡಿಹೋದರು. ಅವನಿಗೆ ಬದಲಾಗಿ ಅವನ ಮಗನಾದ ಏಸರ್ ಹದ್ದೋನನು ಅರಸನಾದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು