Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ › ಹಿಜ್ಕೀಯನಿಂದ ಯೋಷೀಯನವರೆಗೆ

ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ · ಹಿಜ್ಕೀಯನಿಂದ ಯೋಷೀಯನವರೆಗೆ

ಹಿಜ್ಕೀಯನ ಕಾಯಿಲೆ

2 ಅರಸು 20:1–11 · 2 ಪೂರ್ವ 32:24–26 · ಯೆಶಾ 38:1–8

2 ಅರಸುಗಳು

2 ಅರಸು 20:1–11

1ಆ ಕಾಲದಲ್ಲಿ ಹಿಜ್ಕೀಯನನ್ನು ಮರಣಕರವಾದ ರೋಗವು ಬಾಧಿಸಿತು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “‘ನಿನ್ನ ಮನೆಯ ಕಾರ್ಯಗಳನ್ನೆಲ್ಲಾ ಕ್ರಮಪಡಿಸಿ ಸೂಕ್ತಮಾಡಿಕೋ, ನೀನು ಮರಣ ಹೊಂದುವಿ’ ಎಂದು ಯೆಹೋವನು ತಿಳಿಸಿದ್ದಾನೆ” ಎಂದು ಹೇಳಿದನು.

2ಇದನ್ನು ಕೇಳಿದೊಡನೆ ಹಿಜ್ಕೀಯನು ಗೋಡೆಯ ಕಡೆಗೆ ತಿರುಗಿಕೊಂಡು ಯೆಹೋವನಿಗೆ ಪ್ರಾರ್ಥಿಸಿ, ಹೀಗೆ ವಿಜ್ಞಾಪಿಸಿಕೊಂಡನು.

3“ಯೆಹೋವನೇ, ದಯವಿಟ್ಟು ನಾನು ನಂಬಿಗಸ್ತನಾಗಿಯೂ ನಿನಗೆ, ಪ್ರಾಮಾಣಿಕನಾಗಿಯೂ ಶ್ರದ್ಧೆಯಿಂದಲೂ ನಡೆದುಕೊಂಡು ನಿನ್ನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದುದನ್ನು ನೆನಪುಮಾಡಿಕೋ” ಎಂದು ಹೇಳಿ ಹಿಜ್ಕೀಯನು ಬಹಳವಾಗಿ ಕಣ್ಣೀರಿಟ್ಟು ಪ್ರಾರ್ಥಿಸಿದನು.

4ಯೆಶಾಯನು ಅರಮನೆಯ ಮಧ್ಯಪ್ರಾಕಾರವನ್ನು ದಾಟುವುದಕ್ಕೆ ಮೊದಲು ಯೆಹೋವನಿಂದ ಅಪ್ಪಣೆಯಾಯಿತು.

5“ನೀನು ಹಿಂದಿರುಗಿ ಹೋಗಿ, ನನ್ನ ಜನಗಳ ಪ್ರಭುವಾಗಿರುವ ಹಿಜ್ಕೀಯನಿಗೆ, ‘ನಿನ್ನ ಪಿತೃವಾದ ದಾವೀದನ ದೇವರಾದ ಯೆಹೋವನು ಹೇಳಿದ್ದೇನೆಂದರೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ. ನೀನು ಗುಣಹೊಂದಿ ಮೂರನೆಯ ದಿನ ನನ್ನ ಆಲಯಕ್ಕೆ ಬರುವೆ.

6ಇದಲ್ಲದೆ, ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಹೆಚ್ಚಿಸಿದ್ದೇನೆ, ನಿನ್ನನ್ನೂ, ಈ ಪಟ್ಟಣವನ್ನೂ ಅಶ್ಶೂರನ ಅರಸನ ಕೈಗೆ ಬೀಳದಂತೆ ತಪ್ಪಿಸುವೆನು. ನನಗಾಗಿಯೂ, ನನ್ನ ಸೇವಕನಾದ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು’ ಎಂಬುದಾಗಿ ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನು ಹೇಳುತ್ತಾನೆ ಎಂದು ತಿಳಿಸು” ಅಂದನು.

7ಅನಂತರ ಯೆಶಾಯನು, ಒಂದು ಅಂಜೂರಹಣ್ಣನ್ನು ತೆಗೆದು ಅವನ ಗಾಯದ ಮೇಲೆ ಇಟ್ಟಾಗ ಹಿಜ್ಕೀಯನು ಗುಣಹೊಂದಿದನು.

8ಹಿಜ್ಕೀಯನು ಯೆಶಾಯನಿಗೆ, “ಯೆಹೋವನು ನನ್ನನ್ನು ಗುಣಪಡಿಸುವನೆಂಬುವುದಕ್ಕೂ, ನಾನು ಮೂರನೆಯ ದಿನ ಆತನ ಆಲಯಕ್ಕೆ ಹೋಗುವೆನೆಂಬುವುದಕ್ಕೂ, ಇರುವ ಗುರುತು ಏನು?” ಎಂದು ಕೇಳಿದನು.

9ಅದಕ್ಕೆ ಯೆಶಾಯನು, “ಯೆಹೋವನು ನುಡಿದಿದ್ದನ್ನು ನೆರವೇರಿಸುವನು ಎಂಬುದಕ್ಕೆ ಯೆಹೋವನಿಂದ ಉಂಟಾದ ಗುರುತು ಕೇಳುತ್ತಿರುವೆ, ಹಾಗಾದರೆ ನೆರಳು ಹತ್ತು ಮೆಟ್ಟಲು ಮುಂದೆ ಹೋಗಬೇಕೋ? ಹಿಂದೆ ಬರಬೇಕೋ? ಹೇಳು ಹಿಂದೆ ಹೋಗಬೇಕೋ ಹೇಳು?” ಎಂದು ಕೇಳಿದನು.

10ಅದಕ್ಕೆ ಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ, ಆದುದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು” ಎಂದು ಹೇಳಿದನು.

11ಆಗ ಪ್ರವಾದಿಯಾದ ಯೆಶಾಯನು ಯೆಹೋವನಿಗೆ ಮೊರೆಯಿಡಲು ಆತನು ಆಹಾಜನ ಗಡಿಯಾರದ ವೇಳಾನುಸಾರ ಹತ್ತು ಮೆಟ್ಟಲು ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡಿದನು.

2 ಪೂರ್ವಕಾಲವೃತ್ತಾಂತ

2 ಪೂರ್ವ 32:24–26

24ಆ ಕಾಲದಲ್ಲಿ ಹಿಜ್ಕೀಯನು ಮರಣಕರವಾದ ರೋಗಕ್ಕೆ ತುತ್ತಾದನು ಆಗ ಅವನು ಯೆಹೋವನಿಗೆ ಪ್ರಾರ್ಥಿಸಲು ಆತನು ಅದ್ಭುತವಾಗಿ ಸದುತ್ತರವನ್ನು ದಯಪಾಲಿಸಿ ಅವನಿಗೆ ಒಂದು ಗುರುತನ್ನು ಅನುಗ್ರಹಿಸಿದನು.

25ಆದರೆ ಹಿಜ್ಕೀಯನು ಈ ಉಪಕಾರಕ್ಕೆ ತಕ್ಕಂತೆ ನಡೆಯದೆ ಅಹಂಕಾರಿಯಾದನು. ಆದುದರಿಂದ ಯೆಹೂದದ ಮೇಲೆಯೂ ಯೆರೂಸಲೇಮಿನವರ ಮೇಲೆಯೂ ದೇವರ ಕೋಪವುಂಟಾಯಿತು.

26ಆಗ ಹಿಜ್ಕೀಯನ ತನ್ನ ಗರ್ವವನ್ನು ಬಿಟ್ಟು, ಯೆರೂಸಲೇಮಿನವರೊಡನೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ಅವನ ಉಳಿದ ಜೀವಮಾನದಲ್ಲಿ ಯೆಹೋವನ ಕೋಪವು ಅವನ ಮೇಲೆ ಬರಲಿಲ್ಲ.

ಯೆಶಾಯನು

ಯೆಶಾ 38:1–8

1ಆ ಕಾಲದಲ್ಲಿ ಹಿಜ್ಕೀಯನು ಮರಣಕರ ರೋಗದಲ್ಲಿ ಬಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡು. ಏಕೆಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬುದಾಗಿ ಯೆಹೋವನು ಹೇಳುತ್ತಾನೆ” ಎಂದು ಹೇಳಿದನು.

2ಇದನ್ನು ಕೇಳಿದೊಡನೆ ಹಿಜ್ಕೀಯನು ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ ಯೆಹೋವನನ್ನು ಪ್ರಾರ್ಥಿಸಿದನು.

3ಹಿಜ್ಕೀಯನು, “ಯೆಹೋವನೇ, ನಾನು ನಂಬಿಗಸ್ತನಾಗಿಯೂ, ಯಥಾರ್ಥಚಿತ್ತನಾಗಿಯೂ ನಿನಗೆ ನಡೆದುಕೊಂಡು ನಿನ್ನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನ್ನು ನೆನಪುಮಾಡಿಕೋ” ಎಂದು ಪ್ರಾರ್ಥಿಸಿ ಬಹಳವಾಗಿ ಅತ್ತನು.

4ಆಗ ಯೆಹೋವನು ಯೆಶಾಯನಿಗೆ,

5“ನೀನು ಹೋಗಿ ನನ್ನ ಪ್ರಜೆಗಳ ಪ್ರಭುವಾಗಿರುವ ಹಿಜ್ಕೀಯನಿಗೆ, ‘ದಾವೀದನ ಪೂರ್ವಿಕರಾದ ಯೆಹೋವನು ಹೀಗೆ ಹೇಳುತ್ತಾನೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಕೂಡಿಸುತ್ತೇನೆ.

6ನಿನ್ನನ್ನೂ, ಈ ಪಟ್ಟಣವನ್ನೂ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸುವೆನು, ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು.

7ಯೆಹೋವನು ನುಡಿದದ್ದನ್ನು ನೆರವೇರಿಸುವನು ಎಂಬುದಕ್ಕೆ ಒಂದು ಗುರುತನ್ನು ಕಾಣುವಿ.

8ಇಗೋ, ಸೂರ್ಯನ ಇಳಿತವನ್ನು ಆಹಾಜನ ಸೋಪಾನಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರಮಾಡುವೆನು’ ಎಂದು ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನು ಹೇಳುತ್ತಾನೆಂಬುದಾಗಿ ತಿಳಿಸು” ಎಂದು ಆಜ್ಞಾಪಿಸಿದನು. ಅದರಂತೆ ಸೋಪಾನಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂತು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು