Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ › ಯೆಹೂದದ ಅರಸರು

ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ · ಯೆಹೂದದ ಅರಸರು

ಅತಲ್ಯ ಮತ್ತು ಬಾಲಕ ಯೆಹೋವಾಷ

2 ಅರಸು 11:1–21 · 2 ಪೂರ್ವ 22:10–12; 23:1–21

2 ಅರಸುಗಳು

2 ಅರಸು 11:1–21

1ಅಹಜ್ಯನು ಮರಣಹೊಂದಿದನೆಂದು ಅವನ ತಾಯಿಯಾದ ಅತಲ್ಯಳು ಕೇಳಿದಾಗ ಪಕ್ಕನೆ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.

2ಆದರೆ ಅರಸನಾದ ಯೆಹೋರಾಮನ ಮಗಳೂ, ಅಹಜ್ಯನ ತಂಗಿಯೂ ಆದ ಯೆಹೋಷೆಬಳೆಂಬಾಕೆಯು ಯಾರಿಗೂ ತಿಳಿಯದಂತೆ ತನ್ನ ಅಣ್ಣನ ಮಗನಾದ ಯೆಹೋವಾಷನನ್ನು ಅತಲ್ಯಳಿಂದ ಹತರಾಗಿದ್ದ ರಾಜಪುತ್ರರ ಮಧ್ಯದಿಂದ ಅವನ ದಾದಿಯರೊಡನೆ ಅವನನ್ನು ತೆಗೆದುಕೊಂಡು ಹೋಗಿ, ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು

3ಹೀಗೆ ಅವನು ಅತಲ್ಯಳಿಂದ ಹತವಾಗದಂತೆ ತಪ್ಪಿಸಿ ಕೊಂಡು ಆರು ವರ್ಷಗಳವರೆಗೂ ಯೆಹೋಷೆಬಳೊಡನೆ ಗುಪ್ತವಾಗಿ ಯೆಹೋವನ ಆಲಯದಲ್ಲಿದ್ದನು. ಆ ಆರು ವರ್ಷಗಳಲ್ಲಿ ಅತಲ್ಯಳೇ ದೇಶವನ್ನು ಆಳುತ್ತಿದ್ದಳು.

4ಏಳನೆಯ ವರ್ಷದಲ್ಲಿ, ಯೆಹೋಯಾದಾವನು ಕಾರಿಯರ ಎಂಬ ಸಿಪಾಯಿಗಳ ಮತ್ತು ಕಾವಲುದಂಡಿನವರ ಶತಾಧಿಪತಿಗಳನ್ನು ತನ್ನ ಹತ್ತಿರ ಯೆಹೋವನ ಆಲಯಕ್ಕೆ ಕರೆಯಿಸಿದನು. ಅಲ್ಲಿ ಅವನು ಅವರ ಸಂಗಡ ಆಪ್ತನಾಗಿದ್ದು ಪ್ರಮಾಣಪೂರ್ವಕವಾದ ಒಡಂಬಡಿಕೆಯನ್ನು ಮಾಡಿಕೊಂಡ ನಂತರ ರಾಜಕುಮಾರನನ್ನು ತೋರಿಸಿದನು.

5ಯೆಹೋಯಾದಾವನು ಅವರಿಗೆ, “ಸಬ್ಬತ್ ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗವು ರಾಜರ ಅರಮನೆಯನ್ನು ಕಾಯಬೇಕು,

6ಮೂರರಲ್ಲೊಂದು ಭಾಗವು ಸೂರ್ ಬಾಗಿಲಿನಲ್ಲಿಯೂ, ಮತ್ತೊಂದು ಭಾಗವು ಕಾವಲುದಂಡಿನ ಹಿಂದಿನ ಬಾಗಿಲಿನಲ್ಲಿಯೂ ಇರಬೇಕು. ಈ ಪ್ರಕಾರ ನೀವು ಅರಮನೆಯನ್ನು ಭದ್ರವಾಗಿ ಕಾಯಬೇಕು.

7ಇದಲ್ಲದೆ, ಸಬ್ಬತ್ ದಿನದಲ್ಲಿ ಅರಸನೊಂದಿಗೆ ಯೆಹೋವನ ಆಲಯವನ್ನು ಕಾಯುವುದಕ್ಕಾಗಿ ಬರುವ ಸೈನ್ಯವು ಇಬ್ಬಗೆಯಾಗಿದ್ದುಕೊಂಡು ಯೆಹೋವನ ಆಲಯವನ್ನು ಕಾಯಬೇಕು.

8ನೀವು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅವನ ಸುತ್ತಲೂ ನಿಂತು, ಅವನ ಗುಂಪಿನಲ್ಲಿ ನುಗ್ಗುವಂತವನನ್ನು ಸಂಹರಿಸಬೇಕು. ಅರಸನು ಹೊರಗೆ ಹೋಗಿ ಬರುವಾಗಲೆಲ್ಲಾ ನೀವು ಅವನ ಜೊತೆಯಲ್ಲೇ ಇರಬೇಕು. ಇದೇ ನನ್ನ ಅಪ್ಪಣೆ” ಎಂದು ಹೇಳಿದನು.

9ಯಾಜಕನಾದ ಯೆಹೋಯಾದಾಮನು ಆಜ್ಞಾಪಿಸಿದಂತೆ, ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ರಾಜಪುತ್ರನ ಬಳಿಗೆ ಬಂದರು.

10ಯಾಜಕನಾದ ಯೆಹೋಯಾದಾವನು ಆ ಶತಾಧಿಪತಿಗಳಿಗೆ ಯೆಹೋವನ ಆಲಯದಲ್ಲಿ ಇಡಲ್ಪಟ್ಟಿದ್ದ ರಾಜನಾದ ದಾವೀದನ ಬರ್ಜಿಯನ್ನೂ, ಗುರಾಣಿಗಳನ್ನೂ ಕೊಟ್ಟನು.

11ಕಾವಲುದಂಡಿನವರು ಆಯುಧ ಹಿಡಿದುಕೊಂಡು ಅರಸನನ್ನು ಕಾಯುವುದಕ್ಕೋಸ್ಕರ ದೇವಾಲಯದ ದಕ್ಷಿಣ ದಿಕ್ಕಿನ ಮೂಲೆಯಿಂದ ಯಜ್ಞವೇದಿಯವರೆಗೂ, ಅಲ್ಲಿಂದ ಉತ್ತರ ದಿಕ್ಕಿನ ಮೂಲೆಯವರೆಗೂ ಸಾಲಾಗಿ ನಿಂತರು.

12ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು, ಅವನ ತಲೆಯ ಮೇಲೆ ಕಿರೀಟವನ್ನು ಇಟ್ಟು ಕೈಯಲ್ಲಿ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜ್ಯಾಭಿಷೇಕ ಮಾಡಿದನು. ಕೂಡಲೆ ಜನರು ಚಪ್ಪಾಳೆ ತಟ್ಟುತ್ತಾ, “ಅರಸನು ಚಿರಂಜೀವಿಯಾಗಿರಲಿ” ಎಂದು ಕೂಗಿದರು.

13ಅತಲ್ಯಳು ಕಾವಲುದಂಡಿನವರ ಮತ್ತು ಇತರ ಜನರ ಗದ್ದಲವನ್ನು ಕೇಳಿ ಅವರು ಸೇರಿ ಬಂದಿದ್ದ ಯೆಹೋವನ ಆಲಯಕ್ಕೆ ಬಂದಳು.

14ಅಲ್ಲಿ ಅರಸನು ಪದ್ದತಿಯ ಪ್ರಕಾರ ಸ್ತಂಭದ ಬಳಿಯಲ್ಲಿ ನಿಂತಿದ್ದನು. ಅಧಿಪತಿಗಳೂ, ತುತ್ತೂರಿಯನ್ನು ಊದುವವರೂ ಅರಸನ ಹತ್ತಿರ ನಿಂತಿದ್ದರು. ದೇಶದ ಜನರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ಬಟ್ಟೆಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು.

15ಆಗ ಯಾಜಕನಾದ ಯೆಹೋಯಾದಾವನು ಸೇನಾನಿಗಳಾದ, ಶತಾಧಿಪತಿಗಳಿಗೆ, “ಈಕೆಯನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿರಿ ಸಿಪಾಯಿಗಳ ಮಧ್ಯದಲ್ಲಿ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿರಿ ಮತ್ತು ಆಕೆಯನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಲ್ಲಿರಿ” ಎಂದು ಆಜ್ಞಾಪಿಸಿದನು.

16ಅವರು ಆಕೆಯನ್ನು ಹಿಡಿದು ಕುದುರೆಗಳ ಬಾಗಿಲಿನಿಂದ ರಾಜನ ಅರಮನೆಗೆ ಕರೆದೊಯ್ದು ಅಲ್ಲಿ ಹತ್ಯೆ ಮಾಡಿದರು.

17ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ, ಪ್ರಜೆಗಳೂ ತಾವು ಯೆಹೋವನ ಪ್ರಜೆಗಳಾಗಿರುವುದಾಗಿ ಅಲ್ಲಿ ಪ್ರಮಾಣ ಮಾಡಿದರು. ಇದಲ್ಲದೆ ರಾಜಪ್ರಜೆಗಳೂ ಒಡಂಬಡಿಕೆಮಾಡಿಕೊಂಡರು.

18ಯೆಹೂದ್ಯರೆಲ್ಲರೂ ಬಾಳನ ದೇವಸ್ಥಾನಕ್ಕೆ ಹೋಗಿ ಬಾಳನ ಪೂಜಾರಿಯಾದ ಮತ್ತಾನನನ್ನು ಬಲಿಪೀಠಗಳ ಎದುರಿನಲ್ಲಿಯೇ ಕೊಂದು, ದೇವಸ್ಥಾನವನ್ನೂ ಅದರಲ್ಲಿದ್ದ ಬಲಿಪೀಠಗಳನ್ನೂ, ವಿಗ್ರಹಗಳನ್ನೂ ಸಂಪೂರ್ಣವಾಗಿ ಹಾಳುಮಾಡಿದರು. ಯೆಹೋಯಾದಾವನು ಯೆಹೋವನ ದೇವಾಲಯಕ್ಕೆ ಕಾವಲಿಟ್ಟನು.

19ಅಲ್ಲದೆ ಯೆಹೋಯಾದಾವನು ಶತಾಧಿಪತಿಗಳನ್ನು, ಕಾರಿಯರು ಎನ್ನಿಸಿಕೊಳ್ಳುವ ಸೈನ್ಯಗಳ ಕಾವಲುದಂಡನ್ನು, ಸಾಧಾರಣ ಜನರನ್ನು ಅವರೊಡನೆ ಅರಸನಾದ ಯೆಹೋವಾಷನನ್ನು ಯೆಹೋವನ ಆಲಯದಲ್ಲಿ ಕಾವಲುದಂಡಿನವರ ಬಾಗಿಲಿನ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು.

20ದೇಶದವರೆಲ್ಲರೂ ಬಹಳವಾಗಿ ಸಂತೋಷಪಟ್ಟರು. ಪಟ್ಟಣದಲ್ಲಿ ಶಾಂತಿ ನೆಲೆಸಿತು. ಅತಲ್ಯಳನ್ನು ರಾಜನ ಅರಮನೆಯ ಸಮೀಪದಲ್ಲಿ ಕತ್ತಿಯಿಂದ ಸಂಹರಿಸಿದರು.

21ಯೆಹೋವಾಷನು ಅರಸನಾದಾಗ ಅವನು ಏಳು ವರ್ಷದವನಾಗಿದ್ದನು.

2 ಪೂರ್ವಕಾಲವೃತ್ತಾಂತ

2 ಪೂರ್ವ 22:10–12; 23:1–21

22:10ಅಹಜ್ಯನು ಮರಣ ಹೊಂದಿದನೆಂದು ಅವನ ತಾಯಿಯಾದ ಅತಲ್ಯಳು ಕೇಳಿದ ಕೂಡಲೆ ಯೆಹೂದ ರಾಜ ಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.

22:11ಆದರೆ ರಾಜಪುತ್ರಿಯಾದ ಯೆಹೋಷಬತ್ ಎಂಬಾಕೆಯು, ಹತರಾಗುತ್ತಿದ್ದ ರಾಜಪುತ್ರರ ಮಧ್ಯದಿಂದ ಅಹಜ್ಯನ ಮಗನಾದ ಯೆಹೋವಾಷನನ್ನು, ಯಾರಿಗೂ ತಿಳಿಯದಂತೆ ಅವನ ದಾದಿಯೊಡನೆ ತೆಗೆದುಕೊಂಡು ಹೋಗಿ ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು. ಅರಸನಾದ ಯೆಹೋರಾಮನ ಮಗಳೂ, ಅಹಜ್ಯನ ಸಹೋದರಿಯೂ, ಯಾಜಕನಾದ ಯೆಹೋಯಾದನ ಹೆಂಡತಿಯೂ, ಆಗಿದ್ದ ಯೆಹೋಷಬತಳು ಹೀಗೆ ಅವನನ್ನು ಅತಲ್ಯಳಿಂದ ಹತನಾಗದಂತೆ ರಕ್ಷಿಸಿದಳು.

22:12ಅವನು ಆರು ವರ್ಷಗಳವರೆಗೂ ಅವರೊಡನೆ ಗುಪ್ತವಾಗಿ ದೇವಾಲಯದಲ್ಲಿ ಇದ್ದನು. ಆಗ ಅತಲ್ಯಳೇ ದೇಶವನ್ನಾಳುತ್ತಿದ್ದಳು.

23:1ಏಳನೆಯ ವರ್ಷದಲ್ಲಿ ಯೆಹೋಯಾದನು ಧೈರ್ಯತಂದುಕೊಂಡು ಯೆರೋಹಾಮನ ಮಗನಾದ ಅಜರ್ಯ, ಯೆಹೋಹಾನಾನನ ಮಗನಾದ ಇಷ್ಮಾಯೇಲ್, ಓಬೇದನ ಮಗನಾದ ಅಜರ್ಯ, ಅದಾಯನ ಮಗನಾದ ಮಾಸೇಯ, ಜಿಕ್ರಿಯ ಮಗನಾದ ಎಲೀಷಾಫಾಟ್ ಎಂಬ ಶತಾಧಿಪತಿಗಳೊಡನೆ ಒಪ್ಪಂದ ಮಾಡಿಕೊಂಡನು.

23:2ಇವರು ಯೆಹೂದದಲ್ಲೆಲ್ಲಾ ಸಂಚರಿಸಿ ಎಲ್ಲಾ ಪಟ್ಟಣಗಳಿಂದ ಲೇವಿಯರನ್ನೂ, ಇಸ್ರಾಯೇಲರ ಗೋತ್ರ ಪ್ರಧಾನರನ್ನೂ ಒಟ್ಟುಗೂಡಿಸಲು ಅವರು ಯೆರೂಸಲೇಮಿಗೆ ಬಂದರು.

23:3ಹೀಗೆ ಕೂಡಿ ಬಂದವರೆಲ್ಲರೂ ದೇವಾಲಯದಲ್ಲಿ ಅರಸನೊಂದಿಗೆ ಒಪ್ಪಂದ ಮಾಡಿಕೊಂಡರು. ಯೆಹೋಯಾದನು ಅವರಿಗೆ, “ಇಗೋ, ರಾಜಪುತ್ರನು, ಯೆಹೋವನು ದಾವೀದನ ಸಂತಾನದವರಿಗೆ ಮಾಡಿದ ವಾಗ್ದಾನಕ್ಕೆ ಅನುಸಾರವಾಗಿ ಅರಸನಾಗತಕ್ಕವನು ಇವನೇ.

23:4ಈಗ ನೀವು ಮಾಡತಕ್ಕದ್ದು ಏನೆಂದರೆ: ಸಬ್ಬತ್ ದಿನದಂದು ದೇವಾಲಯದ ಸೇವೆಗೆ ಬರಬೇಕಾದ ಲೇವಿಯರಲ್ಲೂ, ಯಾಜಕರಲ್ಲೂ ಮೂರರಲ್ಲೊಂದು ಭಾಗದವರು ದೇವಸ್ಥಾನದ ದ್ವಾರಪಾಲಕರಾಗಿ ನಿಲ್ಲಬೇಕು.

23:5ಇನ್ನೊಂದು ಭಾಗದವರು ಅರಸನ ಅರಮನೆಯನ್ನೂ, ಮತ್ತೊಂದು ಭಾಗದವರು ಯೆಸೋದ್ ಬಾಗಿಲನ್ನೂ ಕಾಯಬೇಕು. ಇತರ ಜನರೆಲ್ಲರೂ ಯೆಹೋವನ ಆಲಯದ ಪ್ರಾಕಾರದಲ್ಲೇ ಇರಬೇಕು.

23:6ಯಾಜಕರೂ ಹಾಗು ಸೇವೆಯಲ್ಲಿರುವ ಲೇವಿಯರು ಹೊರತಾಗಿ ಯಾರೂ ಆಲಯದೊಳಗೆ ಬರಬಾರದು. ಏಕೆಂದರೆ ಅವರು ಪರಿಶುದ್ಧರಾಗಿರುವುದರಿಂದ ಬರಬಹುದು. ಉಳಿದ ಜನರೆಲ್ಲರೂ ಯೆಹೋವನ ಅಜ್ಞಾನುಸಾರವಾಗಿ ಹೊರಗಿರಬೇಕು.

23:7ಲೇವಿಯರು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅರಸನ ಸುತ್ತಲೂ ನಿಂತು ಆಲಯದೊಳಕ್ಕೆ ನುಗ್ಗುವವರನ್ನು ಸಂಹರಿಸಬೇಕು. ಅರಸನು ಹೋಗಿ ಬರುವಾಗಲೆಲ್ಲಾ ಅವರು ಅವನ ಜೊತೆಯಲ್ಲೇ ಇರಬೇಕು” ಎಂದು ಹೇಳಿದನು.

23:8ಲೇವಿಯ ಎಲ್ಲಾ ಯೆಹೂದ್ಯರೂ ಯಾಜಕನಾದ ಯೆಹೋಯಾದನ ಆಜ್ಞೆಯಂತೆ ನಡೆದುಕೊಂಡರು. ಅವನು ಸಬ್ಬತ್ ದಿನದಲ್ಲಿ ಸೇವಾ ವಿಮುಕ್ತರಾದ ವರ್ಗಗಳವರನ್ನು ಕಳುಹಿಸಿಬಿಡಲಿಲ್ಲ; ಆದುದರಿಂದ ಪ್ರತಿಯೊಬ್ಬನು ಸಬ್ಬತ್ ದಿನ ಮನೆಗೆ ಹೋಗಬೇಕಾಗಿದ್ದ ಮತ್ತು ಬರಬೇಕಾಗಿದ್ದ ತನ್ನ ಕೈಕೆಳಗಿನವರನ್ನು ಸೇರಿಸಿಕೊಂಡನು.

23:9ದೇವಾಲಯದಲ್ಲಿಟ್ಟಿದ್ದ ಅರಸನಾದ ದಾವೀದನ ಬರ್ಜಿ, ಗುರಾಣಿ, ಖೇಡ್ಯಗಳೇ ಮುಂತಾದ ಆಯುಧಗಳನ್ನು ಯಾಜಕನಾದ ಯೆಹೋಯಾದನು ಶತಾಧಿಪತಿಗಳಿಗೆ ಕೊಟ್ಟನು.

23:10ಆಯುಧಪಾಣಿಗಳಾದ ಎಲ್ಲಾ ಜನರನ್ನು ಅರಸನ ಸುತ್ತಲೂ ದೇವಾಲಯದ ದಕ್ಷಿಣ ದಿಕ್ಕಿನ ಮೂಲೆಯಿಂದ ಯಜ್ಞವೇದಿಯ ವರೆಗೂ ಸಾಲಾಗಿ ನಿಲ್ಲಿಸಿದನು.

23:11ಆಮೇಲೆ ಯೆಹೋಯಾದನ ಮಕ್ಕಳು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ಅಭಿಷೇಕ ಮಾಡಿದರು. ಕೂಡಲೆ ಜನರು, “ಅರಸನು ಚಿರಂಜೀವಿಯಾಗಿರಲಿ” ಎಂದು ಹರಸಿದರು.

23:12ಜನರು ಅತ್ತಿತ್ತ ಓಡಾಡುತ್ತಾ ಅರಸನನ್ನು ಹರಸುವ ಗದ್ದಲವನ್ನು ಅತಲ್ಯಳು ಕೇಳಿ ಅವರು ಇದ್ದ ಯೆಹೋವನ ಆಲಯಕ್ಕೆ ಬಂದಳು.

23:13ಅಲ್ಲಿ ಅರಸನು ಬಾಗಿಲಿನ ಬಳಿಯಲ್ಲಿರುವ ರಾಜಸ್ತಂಭದ ಹತ್ತಿರ ನಿಂತಿದ್ದನು. ಅಧಿಪತಿಗಳು ಹಾಗೂ ತುತ್ತೂರಿಗಳನ್ನು ಊದುವವರೂ ಅರಸನ ಹತ್ತಿರ ಇದ್ದರು; ಸಾಧಾರಣ ಜನರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಗಾಯಕರು ವಾದ್ಯಗಳನ್ನು ನುಡಿಸುತ್ತಾ ಕೀರ್ತನೆಗಳನ್ನು ಹಾಡುತ್ತಿದ್ದರು. ಇದನ್ನು ಕಂಡಕೂಡಲೆ ಅತಲ್ಯಳು ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಂಡು, “ದ್ರೋಹ, ದ್ರೋಹ” ಎಂದು ಕೂಗಿದಳು.

23:14ಆಗ ಯಾಜಕನಾದ ಯೆಹೋಯಾದನು ಸೇನಾನಿಗಳಾದ ಶತಾಧಿಪತಿಗಳನ್ನು ಹೊರಗೆ ಕರೆದುಕೊಂಡು ಹೋಗಿ ಅವರಿಗೆ, “ಈಕೆಯನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿರಿ; ಎರಡು ಸಾಲು ಸಿಪಾಯಿಗಳು ಈಕೆಯನ್ನು ನಡುವೆ ಸಾಗಿಸಿಕೊಂಡು ಹೊರಗೆ ತಳ್ಳಲಿ; ಮತ್ತು ಈಕೆಯನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಲ್ಲಿರಿ” ಎಂದು ಆಜ್ಞಾಪಿಸಿದನು.

23:15ಅವರು ಆಕೆಯನ್ನು ಹಿಡಿದು ಅರಸನ ಅರಮನೆಗೆ ಹೋಗುವ ಕುದುರೆ ಬಾಗಿಲಿನ ತನಕ ಒಯ್ದು, ಅವಳನ್ನು ಕೊಂದು ಹಾಕಿದರು.

23:16ಆ ನಂತರ ಯೆಹೋಯಾದನು ಎಲ್ಲಾ ಜನರನ್ನೂ, ಅರಸನನ್ನೂ ಪ್ರೇರೇಪಿಸಿ ತಾವೆಲ್ಲರೂ ಯೆಹೋವನ ಪ್ರಜೆಗಳಾಗಿರುವೆವೆಂದು ಅವರೊಡನೆ ಪ್ರಮಾಣ ಮಾಡಿದನು.

23:17ತರುವಾಯ ಜನರೆಲ್ಲರೂ ಬಾಳನ ಕ್ಷೇತ್ರಕ್ಕೆ ಹೋಗಿ ಪೂಜಾರಿಯಾದ ಮತ್ತಾನನನ್ನು ಯಜ್ಞವೇದಿಗಳ ಎದುರಿನಲ್ಲಿಯೇ ಕೊಂದುಹಾಕಿದನು; ಆ ಕ್ಷೇತ್ರವನ್ನೂ ಅದರಲ್ಲಿದ್ದ ಯಜ್ಞವೇದಿ ಹಾಗೂ ವಿಗ್ರಹಗಳನ್ನೂ ಒಡೆದುಹಾಕಿ ಹಾಳುಮಾಡಿ ಬಿಟ್ಟರು.

23:18ಯೆಹೋಯಾದನು ಲೇವಿಯರಾದ ಯಾಜಕರ ಕೈಕೆಳಗೆ ಯೆಹೋವನ ಆಲಯದ ಕಾವಲುಗಾರರನ್ನು ನೇಮಿಸಿದನು. ದಾವೀದನು ಆ ಯಾಜಕರನ್ನು ಯೆಹೋವನ ಆಲಯದ ಸೇವೆಗಾಗಿ ವರ್ಗವರ್ಗಗಳಾಗಿ ವಿಭಾಗಿಸಿದ್ದನು. ದಾವೀದನು ನೇಮಿಸಿದ್ದ ಉತ್ಸಾಹ ಗಾಯನದೊಡನೆ ಮೋಶೆಯ ಧರ್ಮಶಾಸ್ತ್ರಾನುಸಾರ ಯೆಹೋವನಿಗೆ ಸರ್ವಾಂಗಹೋಮ ಸಮರ್ಪಣೆ ಮಾಡುವುದೇ ಅವರ ಕರ್ತವ್ಯವಾಗಿತ್ತು.

23:19ಯಾವ ವಿಷಯದಲ್ಲಾದರೂ ಅಶುದ್ಧನಾದವನು ಯೆಹೋವನ ಆಲಯವನ್ನು ಪ್ರವೇಶಿಸದಂತೆ ಯೆಹೋಯಾದನು ಆಯಾ ಬಾಗಿಲುಗಳಲ್ಲಿ ದ್ವಾರಪಾಲಕರನ್ನಿರಿಸಿದನು.

23:20ಆಮೇಲೆ ಅವನು ಶತಾಧಿಪತಿಗಳು, ಶ್ರೀಮಂತರು, ಜನನಾಯಕರು ಹಾಗೂ ಸಾಧಾರಣ ಜನರು ಇವರೊಡನೆ ಅರಸನನ್ನು ಯೆಹೋವನ ಆಲಯದಿಂದ ಮೇಲಣ ಬಾಗಿಲಿನ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು.

23:21ದೇಶದವರೆಲ್ಲರೂ ಬಹಳವಾಗಿ ಸಂತೋಷಪಟ್ಟರು; ಪಟ್ಟಣವು ಶಾಂತವಾಯಿತು; ಅತಲ್ಯಳನ್ನು ಕತ್ತಿಯಿಂದ ಸಂಹರಿಸಿದರು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು