Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೇಸುವಿನ ಶ್ರಮೆಗಳು

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೇಸುವಿನ ಶ್ರಮೆಗಳು

ಶಿಲುಬೆಗೆ ಹಾಕುವುದು

ಮತ್ತಾ 27:32–44 · ಮಾರ್ಕ 15:21–28, 30–32 · ಲೂಕ 23:26–43 · ಯೋಹಾ 19:17–27

ಮತ್ತಾಯನು

ಮತ್ತಾ 27:32–44

32ಅವರು ಹೊರಕ್ಕೆ ಹೋಗುತ್ತಿರುವಾಗ ಕುರೇನೆ ಪಟ್ಟಣದ ಸೀಮೋನನೆಂಬುವನನ್ನು ಕಂಡು ಅವನನ್ನು ಬಲವಂತವಾಗಿ ಆತನ ಶಿಲುಬೆಯನ್ನು ಹೊರುವುದಕ್ಕೆ ಕರೆದುಕೊಂಡರು.

33ಅವರೆಲ್ಲರೂ ಗೊಲ್ಗೊಥಾ ಅಂದರೆ “ಕಪಾಲಸ್ಥಳ” ಎಂಬ ಸ್ಥಾನಕ್ಕೆ ಬಂದಾಗ

34ಆತನಿಗೆ ಕಹಿ ಬೆರಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು; ಆತನು ಅದನ್ನು ರುಚಿ ನೋಡಿ ಕುಡಿಯಲಾರದೆ ಇದ್ದನು.

35ಬಳಿಕ ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಿಗಾಗಿ ಚೀಟು ಹಾಕಿ ಪಾಲುಮಾಡಿಕೊಂಡರು;

36ಮತ್ತು ಅಲ್ಲಿ ಕುಳಿತುಕೊಂಡು ಆತನನ್ನು ಕಾಯುತ್ತಾ ಇದ್ದರು.

37ಇದಲ್ಲದೆ ಆತನ ಮೇಲೆ ಹೊರಿಸಿದ ಅಪರಾಧವನ್ನು ಬರೆದು ಆತನ ತಲೆಯ ಮೇಲ್ಗಡೆ ಹಚ್ಚಿದರು; ಅದೇನೆಂದರೆ, “ಈತನು ಯೇಸು, ಯೆಹೂದ್ಯರ ಅರಸನು” ಎಂಬುದೇ.

38ಆಗ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆಯಲ್ಲಿ ಆತನ ಸಂಗಡ ಶಿಲುಬೆಗೆ ಹಾಕಿದರು.

39ಅಲ್ಲಿ ಹಾದುಹೋಗುತ್ತಿರುವವರು ತಲೆ ಅಲ್ಲಾಡಿಸಿ,

40“ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಕಟ್ಟುವವನೇ, ನಿನ್ನನ್ನು ರಕ್ಷಿಸಿಕೊ; ನೀನು ದೇವರ ಮಗನೇ ಆಗಿದ್ದರೆ ಶಿಲುಬೆಯಿಂದ ಇಳಿದು ಬಾ” ಎಂದು ಆತನನ್ನು ಹಂಗಿಸುತ್ತಿದ್ದರು.

41ಅದೇ ರೀತಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಹಿರಿಯರೂ, “ಅವನು ಮತ್ತೊಬ್ಬರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.

42ಅವನು ಇಸ್ರಾಯೇಲಿನ ಅರಸನಲ್ಲವೇ. ಈಗ ಶಿಲುಬೆಯಿಂದ ಇಳಿದು ಬರಲಿ, ಇಳಿದು ಬಂದರೆ ಅವನಲ್ಲಿ ನಂಬಿಕೆಯಿಡುತ್ತೇವೆ ಅಂದರು.

43ಅವನು ದೇವರಲ್ಲಿ ಭರವಸವಿಟ್ಟಿದ್ದಾನೆ, ದೇವರಿಗೆ ಇಷ್ಟವಿದ್ದರೆ ಈಗ ಅವನನ್ನು ಬಿಡಿಸಲಿ; ‘ತಾನು ದೇವರ ಮಗನಾಗಿದ್ದೇನೆಂದು ಹೇಳಿದನಲ್ಲಾ’” ಎಂದು ಅಣಕಿಸಿ ಮಾತನಾಡುತ್ತಿದ್ದರು.

44ಆತನ ಸಂಗಡ ಶಿಲುಬೆಗೆ ಹಾಕಲ್ಪಟ್ಟ ಕಳ್ಳರು ಸಹ ಆತನನ್ನು ಅದೇ ಪ್ರಕಾರ ನಿಂದಿಸುತ್ತಿದ್ದರು.

ಮಾರ್ಕನು

ಮಾರ್ಕ 15:21–28, 30–32

21ಆಗ ಹೊಲದಿಂದ ಹೊರಟು ಆ ಮಾರ್ಗವಾಗಿ ಬರುತ್ತಿದ್ದ ಒಬ್ಬನನ್ನು ಆತನ ಶಿಲುಬೆಯನ್ನು ಹೊರುವುದಕ್ಕೆ ಒತ್ತಾಯಪಡಿಸಿದರು. ಅವನು ಯಾರೆಂದರೆ, ಅಲೆಕ್ಸಾಂದ್ರ ಹಾಗೂ ರೂಫ ಎಂಬುವರ ತಂದೆಯಾದ ಕುರೇನೆ ಪಟ್ಟಣದ ಸೀಮೋನನು.

22ಬಳಿಕ ಆತನನ್ನು ‘ಗೊಲ್ಗೊಥಾ’ ಎಂಬ ಸ್ಥಳಕ್ಕೆ ಕರೆದುಕೊಂಡು ಬಂದರು. ‘ಗೊಲ್ಗೊಥಾ’ ಅಂದರೆ “ತಲೆಬುರುಡೆಗಳು ಇರುವ ಸ್ಥಳ” ಎಂದರ್ಥ.

23ಅಲ್ಲಿ ಆತನಿಗೆ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು; ಆದರೆ ಆತನು ಅದನ್ನು ಕುಡಿಯಲಿಲ್ಲ.

24ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಲ್ಲಿ ಯಾವುದು ಯಾರಿಗೆ ಸಿಗಬೇಕೆಂದು ಚೀಟು ಹಾಕಿ ಪಾಲುಮಾಡಿಕೊಂಡರು.

25ಆತನನ್ನು ಶಿಲುಬೆಗೆ ಹಾಕುವಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು.

26“ಈತನು ಯೆಹೂದ್ಯರ ಅರಸನು” ಎಂದು ಆತನ ಮೇಲೆ ಹೊರಿಸಿದ್ದ ದೋಷಾರೋಪಣೆಯನ್ನು, ಶಿಲುಬೆಯ ಮೇಲೆ ಬರೆಯಲಾಗಿತ್ತು.

27ಅದಲ್ಲದೆ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಆತನ ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆಯಲ್ಲಿ ಆತನ ಸಂಗಡ ಶಿಲುಬೆಗೆ ಹಾಕಿದರು.

28ಆತನು ಅಧರ್ಮಿಗಳ ಸಂಗಡ ಎಣಿಸಲ್ಪಟ್ಟನು ಎಂಬ ಶಾಸ್ತ್ರವಚನವು ಹೀಗೆ ನೆರವೇರಿತು. ಅಲ್ಲಿ ಹಾದುಹೋಗುವವರು ತಲೆ ಆಲ್ಲಾಡಿಸಿ “ಆಹಾ, ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಪುನಃ ಕಟ್ಟುವವನೇ,

30ಶಿಲುಬೆಯಿಂದ ಇಳಿದು ನಿನ್ನನ್ನು ರಕ್ಷಿಸಿಕೋ” ಎಂದು ಆತನನ್ನು ಅಪಹಾಸ್ಯ ಮಾಡಿದರು.

31ಅದೇ ಮೇರೆಗೆ ಮುಖ್ಯಯಾಜಕರೂ ಶಾಸ್ತ್ರಿಗಳೂ, “ಅವನು ಮತ್ತೊಬ್ಬರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.

32ಇಸ್ರಾಯೇಲರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಇಳಿದು ಬಂದರೆ ನಾವು ನೋಡಿ ನಂಬುತ್ತೇವೆ” ಎಂದು ತಮ್ಮತಮ್ಮೊಳಗೆ ಅಣಕಿಸುತ್ತಾ ಮಾತನಾಡುತ್ತಿದ್ದರು. ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರು ಸಹ ಆತನನ್ನು ನಿಂದಿಸುತ್ತಿದ್ದರು.

ಲೂಕನು

ಲೂಕ 23:26–43

26ಅವರು ಯೇಸುವನ್ನು ಕರೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ, ಕುರೇನೆ ಪಟ್ಟಣದ ಸೀಮೋನನೆಂಬುವನನ್ನು ಕರೆದು, ಶಿಲುಬೆಯನ್ನು ಅವನ ಮೇಲೆ ಹೊರಿಸಿ ಯೇಸುವಿನ ಹಿಂದೆ ಹೊತ್ತುಕೊಂಡು ಬರುವ ಹಾಗೆ ಮಾಡಿದರು.

27ಜನರ ದೊಡ್ಡ ಗುಂಪು ಯೇಸುವಿನ ಹಿಂದೆ ಹೊರಟಿತು. ಆ ಗುಂಪಿನಲ್ಲಿ ಕೆಲವು ಸ್ತ್ರೀಯರು ಎದೆಬಡಿದುಕೊಳ್ಳುತ್ತಾ ಯೇಸುವಿಗಾಗಿ ಗೋಳಾಡುತ್ತಾ ಇದ್ದರು.

28ಯೇಸು ಅವರ ಕಡೆಗೆ ತಿರುಗಿಕೊಂಡು, “ಯೆರೂಸಲೇಮಿನ ಸ್ತ್ರೀಯರೇ ನನಗೋಸ್ಕರ ಅಳಬೇಡಿರಿ, ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ.

29ಏಕೆಂದರೆ ‘ಬಂಜೆಯರೂ, ಬಸುರಾಗದವರೂ, ಮೊಲೆಕುಡಿಸದವರೂ ಧನ್ಯರು’ ಎಂದು ಜನರು ಹೇಳುವ ದಿನಗಳು ಬರುತ್ತವೆ.

30ಆ ಕಾಲದಲ್ಲಿ ಜನರು, ‘ಬೆಟ್ಟಗಳೇ ನಮ್ಮ ಮೇಲೆ ಬೀಳಿರಿ. ಗುಡ್ಡಗಳೇ ನಮ್ಮನ್ನು ಮುಚ್ಚಿಕೊಳ್ಳಿರಿ’ ಅನ್ನುವರು.

31ಹಸಿ ಮರಕ್ಕೆ ಇಷ್ಟೆಲ್ಲಾ ಮಾಡಿದರೆ ಒಣ ಮರದ ಗತಿ ಏನಾಗಬಹುದು?” ಅಂದನು.

32ಆತನ ಸಂಗಡ ಶಿಲುಬೇಗೆರಿಸುವುದಕ್ಕಾಗಿ ದುಷ್ಕರ್ಮಿಗಳಾಗಿದ್ದ ಬೇರೆ ಇಬ್ಬರನ್ನೂ ಕರೆದುಕೊಂಡು ಹೋದರು.

33ಅವರು ಕಪಾಲವೆಂಬ ಸ್ಥಳಕ್ಕೆ ಬಂದಾಗ ಅಲ್ಲಿ ಯೇಸುವನ್ನೂ ದುಷ್ಕರ್ಮಿಗಳನ್ನೂ ಶಿಲುಬೆಗೆ ಹಾಕಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯಲ್ಲಿಯೂ ಹಾಕಿದರು.

34ಆಗ ಯೇಸು, “ತಂದೆಯೇ, ಅವರನ್ನು ಕ್ಷಮಿಸು ತಾವು ಏನು ಮಾಡುತ್ತೇವೆಂಬುದನ್ನು ಅವರು ಅರಿಯರು” ಅಂದನು. ಆ ಮೇಲೆ ಚೀಟು ಹಾಕಿ ಯೇಸುವಿನ ಬಟ್ಟೆಗಳನ್ನು ಪಾಲು ಮಾಡಿದರು.

35ಜನರೆಲ್ಲರೂ ನೋಡುತ್ತಾ ನಿಂತರು. ಇದಲ್ಲದೆ ಅಧಿಕಾರಿಗಳು “ಅವನು ಮತ್ತೊಬ್ಬರನ್ನು ರಕ್ಷಿಸಿದನು, ಅವನು ದೇವರು ಆರಿಸಿಕೊಂಡ ಕ್ರಿಸ್ತನೇ ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ” ಎಂದು ಗೇಲಿಮಾಡಿದರು.

36ಸಿಪಾಯಿಗಳೂ ಆತನನ್ನು ಪರಿಹಾಸ್ಯ ಮಾಡಿದರು. ಅವರು ಯೇಸುವಿನ ಹತ್ತಿರ ಬಂದು ಹುಳಿಮದ್ಯವನ್ನು ನೀಡಿ,

37“ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನು ರಕ್ಷಿಸಿಕೋ” ಅಂದರು.

38ಇದಲ್ಲದೆ ಆತನ ಶಿಲುಬೆಯ ಮೇಲೆ “ಇವನು ಯೆಹೂದ್ಯರ ಅರಸನು” ಎಂಬುದಾಗಿ ಲಿಖಿತವಾದ ಸೂಚನೆಯನ್ನು ಹಾಕಲಾಗಿತ್ತು.

39ಶಿಲುಬೇಗೆರಿಸಿದ್ದ ಆ ದುಷ್ಕರ್ಮಿಗಳಲ್ಲಿ ಒಬ್ಬನು ಯೇಸುವನ್ನು ದೂಷಿಸುತ್ತಾ, “ನೀನು ಬರಬೇಕಾದ ಕ್ರಿಸ್ತನಲ್ಲವೇ? ನಿನ್ನನ್ನು ರಕ್ಷಿಸಿಕೋ, ನಮ್ಮನ್ನು ರಕ್ಷಿಸು” ಎಂದು ಹೇಳಿದನು.

40ಅದಕ್ಕೆ ಎರಡನೆಯವನು ಅವನನ್ನು ಗದರಿಸಿ, “ನೀನು ಇದೇ ದಂಡನೆಯಲ್ಲಿರುವಾಗಲೂ ದೇವರಿಗೆ ಹೆದರುವುದಿಲ್ಲವೋ?

41ನಾವಂತೂ ನ್ಯಾಯವಾಗಿ ದಂಡನೆಯಲ್ಲಿದ್ದೇವೆ, ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತೇವೆ. ಈತನಾದರೋ ಅಂತಹದ್ದೇನನ್ನೂ ಮಾಡಲಿಲ್ಲ” ಎಂದು ಹೇಳಿ,

42“ಯೇಸುವೇ ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಪಿಸಿಕೋ” ಅಂದನು.

43ಅದಕ್ಕೆ ಯೇಸು, “ಈ ಹೊತ್ತೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ” ಎಂದು ಉತ್ತರಕೊಟ್ಟನು.

ಯೋಹಾನನು

ಯೋಹಾ 19:17–27

17ಆತನು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು “ಕಪಾಲಸ್ಥಳ” ಎಂಬ ಸ್ಥಳಕ್ಕೆ ಹೋದನು. ಇದನ್ನು ಇಬ್ರಿಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಕರೆಯುತ್ತಾರೆ.

18ಅಲ್ಲಿ ಆತನನ್ನೂ ಆತನ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಆ ಕಡೆ ಒಬ್ಬನನ್ನು, ಈ ಕಡೆ ಒಬ್ಬನನ್ನು, ನಡುವೆ ಯೇಸುವನ್ನು ಇಟ್ಟರು.

19ಇದಲ್ಲದೆ ಪಿಲಾತನು “ನಜರೇತಿನ ಯೇಸು, ಯೆಹೂದ್ಯರ ಅರಸನು” ಎಂದು ಒಂದು ಫಲಕವನ್ನು ಬರೆದು ಅದನ್ನು ಆತನ ಶಿಲುಬೆಯ ಮೇಲಿಡಿಸಿದ್ದನು.

20ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದುದರಿಂದ ಯೆಹೂದ್ಯರಲ್ಲಿ ಅನೇಕರು ಆ ಫಲಕವನ್ನು ಓದಿದರು. ಅದು ಇಬ್ರಿಯ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು.

21ಹೀಗಿರಲಾಗಿ ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ, “‘ಯೆಹೂದ್ಯರ ಅರಸನು’ ಎಂದು ಬರೆಯಬೇಡ, ‘ನಾನು ಯೆಹೂದ್ಯರ ಅರಸನೆಂದು ಹೇಳಿದ್ದಾನೆ’ ಎಂಬುದಾಗಿ ಬರೆಯಬೇಕು” ಎಂದು ಹೇಳಿದರು.

22ಅದಕ್ಕೆ ಪಿಲಾತನು, “ನಾನು ಬರೆದದ್ದು ಬರೆದಾಯಿತು” ಎಂದು ಉತ್ತರ ಕೊಟ್ಟನು.

23ಸಿಪಾಯಿಗಳು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರು ಆತನ ವಸ್ತ್ರಗಳನ್ನು ತೆಗೆದುಕೊಂಡು ನಾಲ್ಕು ಪಾಲು ಮಾಡಿ ಒಬ್ಬೊಬ್ಬ ಸಿಪಾಯಿಗೆ ಒಂದೊಂದು ಭಾಗದಂತೆ ಹಂಚಿಕೊಂಡರು. ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಆದರೆ ಆ ಅಂಗಿಗೆ ಹೊಲಿಗೆ ಇರಲಿಲ್ಲ. ಅದು ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು.

24ಆಮೇಲೆ ಅವರು, “ನಾವು ಇದನ್ನು ಹರಿಯಬಾರದು ಚೀಟು ಹಾಕಿ, ಇದು ಯಾರಿಗೆ ಬರುವುದೋ ನೋಡೋಣ” ಎಂದು ಮಾತನಾಡಿಕೊಂಡರು. ಇದರಿಂದ “ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು. ನನ್ನ ಅಂಗಿಗೋಸ್ಕರ ಚೀಟು ಹಾಕಿದರು” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು. ಸಿಪಾಯಿಗಳು ಇದನ್ನೆಲ್ಲಾ ಮಾಡಿದರು.

25ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ, ಆತನ ತಾಯಿಯ ತಂಗಿಯೂ, ಕ್ಲೋಪನ ಹೆಂಡತಿಯಾದ ಮರಿಯಳೂ, ಮಗ್ದಲದ ಮರಿಯಳೂ ನಿಂತಿದ್ದರು.

26ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ, ಇಗೋ, ನಿನ್ನ ಮಗನು” ಎಂದು ಹೇಳಿದನು.

27ತರುವಾಯ ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲೇ ಇರಿಸಿಕೊಂಡನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು