Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಗಲಿಲಾಯದಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಗಲಿಲಾಯದಲ್ಲಿ

ಮನುಷ್ಯನನ್ನು ಅಶುದ್ಧಮಾಡುವುದು ಯಾವುದು

ಮತ್ತಾ 15:1–20 · ಮಾರ್ಕ 7:1–23

ಮತ್ತಾಯನು

ಮತ್ತಾ 15:1–20

1ತರುವಾಯ ಯೆರೂಸಲೇಮಿನಿಂದ ಫರಿಸಾಯರೂ, ಶಾಸ್ತ್ರಿಗಳೂ ಯೇಸುವಿನ ಬಳಿಗೆ ಬಂದು,

2“ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಅವರು ತಿನ್ನುವಾಗ ತಮ್ಮ ಕೈ ತೊಳೆದುಕೊಳ್ಳುವುದಿಲ್ಲ” ಎಂದು ಕೇಳಿದರು.

3ಅದಕ್ಕೆ ಆತನು ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ಏಕೆ ಉಲ್ಲಂಘಿಸುತ್ತೀರಿ?

4ಹೇಗೆಂದರೆ ‘ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂ ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನು ಸಾಯಲೇಬೇಕೆಂತಲೂ’ ದೇವರು ಹೇಳಿದ್ದಾನೆ.

5ನೀವೋ, ‘ಯಾವನಾದರೂ ತನ್ನ ತಂದೆಯನಾಗಲಿ, ತಾಯಿಯನ್ನಾಗಲಿ, ನೋಡಿ ನಾನು ನಿಮ್ಮ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ದೇವರಿಗೆ ಮುಡಿಪುಮಾಡಿದ್ದೇನೆ’ ಎಂದು ಹೇಳಿದರೆ,

6ಅವನು ‘ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕಾಗಿಲ್ಲ’ ಅನ್ನುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ಸಲುವಾಗಿ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ.

7ಕಪಟಿಗಳೇ, ನಿಮ್ಮ ಕುರಿತು ಯೆಶಾಯನು ಸರಿಯಾಗಿ ಪ್ರವಾದಿಸಿ, ಅವನು ಹೇಳಿರುವುದೇನೆಂದರೆ,

8“ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.

9ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಉಪದೇಶವಾಗಿ ಬೋಧಿಸುತ್ತಿರುವುದರಿಂದ ನನ್ನನ್ನು ವ್ಯರ್ಥವಾಗಿ ಆರಾಧಿಸುವರು” ಎಂಬುದೇ.

10ಆ ಮೇಲೆ ಯೇಸು ಜನರ ಗುಂಪನ್ನು ಹತ್ತಿರಕ್ಕೆ ಕರೆದು ಅವರಿಗೆ, “ಕೇಳಿ ತಿಳಿದುಕೊಳ್ಳಿರಿ,

11ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ. ಬಾಯೊಳಗಿಂದ ಹೊರಗೆ ಬರುವಂಥ ಮಾತು ಮನುಷ್ಯನನ್ನು ಅಶುದ್ಧಗೊಳಿಸುವುದು” ಎಂದು ಹೇಳಿದನು.

12ಆಗ ಶಿಷ್ಯರು ಬಂದು ಆತನನ್ನು, “ಫರಿಸಾಯರು ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿನಗೆ ಗೊತ್ತಾಯಿತೋ” ಎಂದು ಕೇಳಿದರು.

13ಅದಕ್ಕೆ ಆತನು “ಪರಲೋಕದ ನನ್ನ ತಂದೆಯು ನೆಡದೆ ಇರುವ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು.

14ಅವರನ್ನು ಬಿಡಿರಿ, ಅವರು ಕುರುಡರಿಗೆ ದಾರಿ ತೋರಿಸುವವರು ಕುರುಡರ ಹಾಗಿದ್ದಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಕುಣಿಯೊಳಗೆ ಬೀಳುವರು” ಅಂದನು.

15ಆಗ ಪೇತ್ರನು, “ಈ ಸಾಮ್ಯವನ್ನು ನಮಗೆ ವಿವರಿಸಿ ಹೇಳು” ಅಂದನು,

16ಅದಕ್ಕೆ ಯೇಸು, “ನೀವೂ ಕೂಡಾ ಇನ್ನೂ ತಿಳಿವಳಿಕೆ ಇಲ್ಲದವರಾಗಿದ್ದೀರಾ?

17ಬಾಯೊಳಕ್ಕೆ ಹೋಗುವಂಥದ್ದು ಹೊಟ್ಟೆಯಲ್ಲಿ ಸೇರಿ ವಿಸರ್ಜಿತವಾಗುತ್ತದೆಂದು ನಿಮಗೆ ತಿಳಿಯಲಿಲ್ಲವೋ?

18ಆದರೆ ಬಾಯೊಳಗಿಂದ ಹೊರ ಬರುವಂಥವುಗಳು ಹೃದಯದಿಂದ ಬರುತ್ತವೆ. ಇವೇ ಮನುಷ್ಯನನ್ನು ಅಶುದ್ಧಿಮಾಡುವವು.

19ಏಕೆಂದರೆ ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಜಾರತ್ವ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೂಷಣೆಗಳು ಹೊರಟು ಬರುತ್ತವೆ.

20ಇಂಥವುಗಳೇ ಮನುಷ್ಯನನ್ನು ಅಶುದ್ಧಿಗೊಳಿಸುತ್ತವೆ. ಆದರೆ ಕೈ ತೊಳೆದುಕೊಳ್ಳದೆ ಊಟಮಾಡುವುದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ” ಅಂದನು.

ಮಾರ್ಕನು

ಮಾರ್ಕ 7:1–23

1ತರುವಾಯ ಯೆರೂಸಲೇಮಿನಿಂದ ಬಂದಿದ್ದ ಫರಿಸಾಯರೂ ಶಾಸ್ತ್ರಿಗಳಲ್ಲಿ ಕೆಲವರೂ ಯೇಸುವಿನ ಬಳಿಗೆ ಕೂಡಿ ಬಂದರು.

2ಆಗ ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ ಅಂದರೆ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಕಂಡರು.

3ಫರಿಸಾಯರೂ ಯೆಹೂದ್ಯರೆಲ್ಲರೂ ಹಿರಿಯರಿಂದ ಬಂದ ಪದ್ಧತಿಯಂತೆ ತಮ್ಮ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ.

4ಮತ್ತು ಸಂತೆಗೆ ಹೋಗಿ ಬಂದರೆ ನೀರನ್ನು ಪ್ರೋಕ್ಷಿಸಿಕೊಳ್ಳದೆ ಇರುತ್ತಿರಲಿಲ್ಲ. ಬಹು ಸ್ವಚ್ಛವಾಗಿ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದುವು.

5ಆದುದರಿಂದ ಫರಿಸಾಯರೂ ಶಾಸ್ತ್ರಿಗಳೂ ಯೇಸುವನ್ನು, “ನಿನ್ನ ಶಿಷ್ಯರು ಹಿರಿಯರ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟಮಾಡುತ್ತಿದ್ದಾರಲ್ಲಾ?” ಎಂದು ಕೇಳಿದರು.

6ಅದಕ್ಕೆ ಆತನು, “ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ಸರಿಯಾಗಿ ಪ್ರವಾದಿಸಿದ್ದಾನೆ; ಅವನು ಬರೆದಿರುವಂತೆ: “‘ಈ ಜನರು ಮಾತಿನಿಂದ ನನ್ನನ್ನು ಗೌರವಿಸುತ್ತಾರೆ, ಆದರೆ ಅವರ ಹೃದಯ ನನ್ನಿಂದ ದೂರವಾಗಿದೆ.

7ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಉಪದೇಶವನ್ನಾಗಿ ಅವರು ಬೋಧಿಸುವುದರಿಂದ ನನಗೆ ಆರಾಧನೆ ಮಾಡುವುದು ವ್ಯರ್ಥ’ ಎಂಬುದೇ.

8ನೀವು ದೇವರ ಆಜ್ಞೆಯನ್ನು ಬಿಟ್ಟು ಮನುಷ್ಯರು ನೇಮಿಸಿದ ಸಂಪ್ರದಾಯಗಳನ್ನು ಬಿಡದೆ ಹಿಡಿದುಕೊಂಡಿದ್ದೀರಿ” ಎಂದು ಹೇಳಿದನು.

9ಆತನು ಇನ್ನೂ ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಬಹು ಜಾಣತನದಿಂದ ದೇವರ ಆಜ್ಞೆಯನ್ನು ನಿರ್ಲಕ್ಷಿಸುತ್ತೀರಿ;

10‘ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’ ಮತ್ತು ‘ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂತಲೂ’ ಮೋಶೆಯು ಹೇಳಿದ್ದಾನೆ.

11ನೀವಾದರೋ ‘ಒಬ್ಬನು ತನ್ನ ತಂದೆಯನ್ನಾಗಲಿ, ತಾಯಿಯನ್ನಾಗಲಿ ನೋಡಿ, ನಾನು ನಿನ್ನ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ಕೊರ್ಬಾನ್ (ಅಂದರೆ ದೇವರಿಗೆ ಮುಡಿಪು) ಮಾಡಿದ್ದೇನೆ’ ಎಂದು ಹೇಳುವುದಾದರೆ

12ಅವನು ತನ್ನ ತಂದೆಗಾಗಲಿ, ತಾಯಿಗಾಗಲಿ ಇನ್ನೇನೂ ಸಹಾಯ ಮಾಡಬೇಕಾಗಿಲ್ಲ ಎಂದು ಹೇಳುತ್ತೀರಿ.

13ಹೀಗೆ ನೀವು ಕಲಿಸುತ್ತಾ ಬಂದಿರುವ ಸಂಪ್ರದಾಯದಿಂದ ದೇವರ ವಾಕ್ಯವನ್ನು ನಿರರ್ಥಕಮಾಡುತ್ತಿದ್ದೀರಿ, ಮತ್ತು ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ” ಎಂದು ಹೇಳಿದನು.

14ಆ ಮೇಲೆ ಯೇಸು ಜನರ ಗುಂಪನ್ನು ಪುನಃ ಹತ್ತಿರಕ್ಕೆ ಕರೆದು, “ಎಲ್ಲರೂ ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ ಮತ್ತು ಅರ್ಥ ಮಾಡಿಕೊಳ್ಳಿರಿ.

15ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದು ಅವನನ್ನು ಮೈಲಿಗೆ ಮಾಡುವುದಿಲ್ಲ; ಆದರೆ ಮನುಷ್ಯನೊಳಗಿನಿಂದ ಹೊರಗೆ ಬರುವಂಥದು ಮನುಷ್ಯನನ್ನು ಮೈಲಿಗೆ ಮಾಡುವಂಥವುಗಳಾಗಿವೆ” ಎಂದು ಹೇಳಿದನು.

16“ಯಾರಿಗಾದರೂ ಕೇಳುವುದಕ್ಕೆ ಕಿವಿಯಿದ್ದರೆ ಕೇಳಲಿ” ಅಂದನು.

17ತರುವಾಯ ಆತನು ಜನರನ್ನು ಬಿಟ್ಟು ಮನೆಯೊಳಗೆ ಹೋದಾಗ ಆತನ ಶಿಷ್ಯರು ಆ ಸಾಮ್ಯದ ಅರ್ಥವೇನೆಂದು ಆತನನ್ನು ಕೇಳಲು

18ಆತನು ಅವರಿಗೆ, “ನಿಮಗೆ ಇನ್ನೂ ತಿಳಿವಳಿಕೆಯಿಲ್ಲವೇ? ಹೊರಗಿನಿಂದ ಮನುಷ್ಯನೊಳಗೆ ಹೋಗುವಂಥದು,

19ಅವನ ಹೃದಯದೊಳಕ್ಕೆ ಸೇರದೆ ಹೊಟ್ಟೆಯಲ್ಲಿ ಸೇರಿ, ಬಳಿಕ ಹೊರಗೆ ವಿಸರ್ಜಿಸಲ್ಪಡುತ್ತದೆ. ಅವು ಅವನನ್ನು ಅಶುದ್ಧ ಮಾಡಲಾರದೆಂದು ನಿಮಗೆ ಅರ್ಥವಾಗುವುದಿಲ್ಲವೋ?” ಎಂದು ಹೇಳಿದನು. ಹೀಗೆ ಹೇಳಿದ್ದರಿಂದ ಆಹಾರ ಪದಾರ್ಥಗಳೆಲ್ಲಾ ಶುದ್ಧವೆಂದು ಯೇಸು ಸೂಚಿಸಿದನು.

20ಆತನು ಮತ್ತೆ ಹೇಳಿದ್ದೇನೆಂದರೆ, “ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮುವಂಥವುಗಳೇ ಅವನನ್ನು ಅಶುದ್ಧಗೊಳಿಸುತ್ತವೆ;

21ಒಳಗಿನಿಂದ ಅಂದರೆ ಮನುಷ್ಯರ ಹೃದಯದೊಳಗಿನಿಂದ ಬರುವ ದುರಾಲೋಚನೆಗಳು, ಹಾದರ, ಕಳ್ಳತನ, ಕೊಲೆ,

22ವ್ಯಭಿಚಾರ, ದುರಾಶೆ, ಕೆಡುಕುತನ, ಮೋಸ, ಕಾಮಾಭಿಲಾಷೆ, ಹೊಟ್ಟೆಕಿಚ್ಚು, ಅಪನಿಂದೆ, ಗರ್ವ, ಬುದ್ಧಿಗೇಡಿತನ ಇವೇ ಮೊದಲಾದವುಗಳು ಹೊರಡುತ್ತವೆ.

23ಈ ಎಲ್ಲಾ ಕೆಡುಕುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ ಅವನನ್ನು ಅಶುದ್ಧ ಮಾಡುತ್ತವೆ.”

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು