Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೆರೂಸಲೇಮಿನಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೆರೂಸಲೇಮಿನಲ್ಲಿ

ಸಂಕಟದ ದಿನಗಳು

ಮತ್ತಾ 24:15–28 · ಮಾರ್ಕ 13:14–23 · ಲೂಕ 21:20–24

ಮತ್ತಾಯನು

ಮತ್ತಾ 24:15–28

15“ಪ್ರವಾದಿಯಾದ ದಾನಿಯೇಲನು ಹೇಳಿದ ಹಾಗೆ ವಿನಾಶಕಾರಕ, ವಿಕಾರ ವಸ್ತು ಪವಿತ್ರ ಸ್ಥಾನದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ತಿಳಿದುಕೊಳ್ಳಲಿ)

16ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ;

17ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿರುವುದನ್ನು ತೆಗೆದುಕೊಳ್ಳುವುದಕ್ಕೆ ಹೋಗದಿರಲಿ,

18ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂತಿರುಗಿ ಹೋಗದಿರಲಿ.

19ಆದರೆ ಆ ದಿನದಲ್ಲಿ ಬಸುರಿಯರಿಗೂ, ಬಾಣಂತಿಯರಾಗಿರುವ ಹೆಂಗಸರಿಗೂ ಅಯ್ಯೋ ಕಷ್ಟ.

20ನಿಮ್ಮ ಪಲಾಯನವು ಚಳಿಗಾಲದಲ್ಲಾಗಲಿ ಸಬ್ಬತ್ ದಿನದಲ್ಲಿಯಾಗಲಿ ಆಗಬಾರದೆಂದು ಪ್ರಾರ್ಥಿಸಿರಿ.

21ಏಕೆಂದರೆ ಲೋಕದ ಅರಂಭದಿಂದ ಇಂದಿನವರೆಗೂ ಆಗದಿರುವಂಥದ್ದು, ಇನ್ನು ಮೇಲೆಯೂ ಆಗದಿರುವಂತಹ ಮಹಾ ಸಂಕಟವು ಅಂದು ಉಂಟಾಗುವುದು.

22ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಬ್ಬ ನರಪ್ರಾಣಿಯಾದರೂ ಉಳಿಯನು; ಆದರೆ ತಾನು ಆರಿಸಿಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡುವನು.

23ಆಗ ಯಾರಾದರು ನಿಮಗೆ, ‘ಇಗೋ ಕ್ರಿಸ್ತನು ಇಲ್ಲಿದ್ದಾನೆ, ಅಗೋ ಅಲ್ಲಿದ್ದಾನೆ’ ಎಂದು ಹೇಳಿದರೆ ನಂಬಬೇಡಿರಿ.

24ಸುಳ್ಳು ಕ್ರಿಸ್ತರೂ, ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನು ಸಹ ಮೋಸಗೊಳಿಸುವುದಕ್ಕೋಸ್ಕರ ಮಹಾ ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.

25ನೋಡಿರಿ, ನಾನು ಮುಂಚಿತವಾಗಿಯೇ ನಿಮಗೆ ಇದನ್ನು ಹೇಳುತ್ತಿದ್ದೇನೆ.

26ಆದಕಾರಣ ಯಾರಾದರು ನಿಮಗೆ, ‘ಅಗೋ ಕ್ರಿಸ್ತನು ಅಡವಿಯಲ್ಲಿ ಇದ್ದಾನೆಂದು’ ಹೇಳಿದರೆ ಅಡವಿಗೆ ಹೊರಟುಹೋಗಬೇಡಿರಿ; ‘ಇಗೋ ಒಳಕೋಣೆಗಳಲ್ಲಿದ್ದಾನೆಂದು’ ಹೇಳಿದರೆ ನಂಬಬೇಡಿರಿ.

27ಹೇಗೆ ಮಿಂಚು ಪೂರ್ವದಲ್ಲಿ ಹುಟ್ಟಿ ಪಶ್ಚಿಮದ ವರೆಗೂ ಹೊಳೆಯುತ್ತದೋ ಹಾಗೆಯೇ ಮನುಷ್ಯಕುಮಾರನ ಬರುವಿಕೆಯೂ ಆಗುವುದು.

28ಹೆಣ ಬಿದ್ದಲ್ಲಿ ಹದ್ದುಗಳು ಬಂದು ಸೇರಿಕೊಳ್ಳುವವು.

ಮಾರ್ಕನು

ಮಾರ್ಕ 13:14–23

14“ಇದಲ್ಲದೆ ವಿನಾಶಕಾರಕ ಅಸಹ್ಯ ಮೂರ್ತಿಯು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ತಿಳಿದುಕೊಳ್ಳಲಿ). ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.

15ಮಾಳಿಗೆಯ ಮೇಲಿದ್ದವನು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದಿರಲಿ; ಮನೆಯೊಳಗಿಂದ ಏನನ್ನೂ ತೆಗೆದುಕೊಳ್ಳದಿರಲಿ.

16ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗಿ ಹೋಗದಿರಲಿ.

17“ಆದರೆ ಆ ದಿನಗಳಲ್ಲಿ ಗರ್ಭಿಣಿಯರಿಗೂ, ಹಾಲು ಕುಡಿಸುವ ತಾಯಂದಿರಿಗೂ ಆಗುವ ಕಷ್ಟ ಎಷ್ಟೆಂದು ಹೇಳಲಿ!

18ಆ ದಿನಗಳು ಸಂಕಟದ ದಿನಗಳಾಗಿರುವುದರಿಂದ ಇದೆಲ್ಲಾ ಚಳಿಗಾಲದಲ್ಲಿ ಆಗಬಾರದೆಂದು ಪ್ರಾರ್ಥನೆ ಮಾಡಿರಿ.

19ಅಂಥ ಸಂಕಟವು ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ದಿನದವರೆಗೂ ಆಗಲಿಲ್ಲ; ಇನ್ನು ಮುಂದೆ ಆಗುವುದೂ ಇಲ್ಲ.

20ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯುವುದಿಲ್ಲ. ಆದರೆ ತಾನು ಆರಿಸಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿದ್ದಾನೆ.

21“ಆಗ ಯಾರಾದರೂ ನಿಮಗೆ, ಇಗೋ, ಕ್ರಿಸ್ತನು ಇಲ್ಲಿದ್ದಾನೆ! ಅಗೋ, ಆತನು ಅಲ್ಲಿದ್ದಾನೆ! ಎಂದು ಹೇಳಿದರೆ ನಂಬಬೇಡಿರಿ.

22ಏಕೆಂದರೆ ಸುಳ್ಳು ಕ್ರಿಸ್ತರೂ, ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನು ಮೋಸಗೊಳಿಸುವುದಕ್ಕೋಸ್ಕರ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.

23ನೀವಂತೂ ಜಾಗರೂಕರಾಗಿರಿ. ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿಯೇ” ಹೇಳಿದ್ದೇನೆ.

ಲೂಕನು

ಲೂಕ 21:20–24

20“ಆದರೆ ಸೈನಿಕರ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವುದನ್ನು ನೀವು ಕಾಣುವಾಗ ಅದು ನಾಶವಾಗುವ ಕಾಲ ಸಮೀಪವಾಯಿತೆಂದು ತಿಳಿದುಕೊಳ್ಳಿರಿ.

21ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ. ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ. ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ.

22ಏಕೆಂದರೆ ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಅವು ದಂಡನೆಯ ದಿನಗಳಾಗಿವೆ.

23ಆ ದಿನಗಳಲ್ಲಿ ಗರ್ಭಿಣಿಯರಿಗೂ ಬಾಣಂತಿಯರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಈ ಸೀಮೆಯ ಮೇಲೆ ಮಹಾವಿಪತ್ತೂ ಈ ಜನರ ಮೇಲೆ ಕ್ರೋಧವು ಉಂಟಾಗುವವು.

24ಅವರು ಕತ್ತಿಯ ಬಾಯಿಗೆ ಗುರಿಯಾಗುವರು. ಅವರು ಸೆರೆಯಾಗಿ ಅನ್ಯದೇಶಗಳಿಗೆಲ್ಲಾ ಹಿಡಿದುಕೊಂಡು ಹೋಗುವರು. ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವುದು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು