3ಬಳಿಕ ಆತನು ಎಣ್ಣೆಯ ಮರಗಳ ಗುಡ್ಡದ ಮೇಲೆ ಕುಳಿತಿದ್ದಾಗ ಶಿಷ್ಯರು ಆತನ ಬಳಿಗೆ ಪ್ರತ್ಯೇಕವಾಗಿ ಬಂದು, “ಇವೆಲ್ಲವೂ ಯಾವಾಗ ಸಂಭವಿಸುವುದು? ನಿನ್ನ ಬರೋಣಕ್ಕೂ ಲೋಕದ ಸಮಾಪ್ತಿಗೂ ಸೂಚನೆಯೇನು?” ನಮಗೆ ಹೇಳು ಅನ್ನಲು
4ಯೇಸು ಅವರಿಗೆ ಉತ್ತರವಾಗಿ ಹೇಳಿದ್ದೇನೆಂದರೆ, “ಯಾರೊಬ್ಬರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಿಂದಿರಿ.
5ಏಕೆಂದರೆ, ನನ್ನ ಹೆಸರಿನಲ್ಲಿ ಅನೇಕರು ಬಂದು, ‘ನಾನು ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
6ಇದಲ್ಲದೆ ಯುದ್ಧಗಳಾಗುವುದನ್ನೂ ಯುದ್ಧಗಳಾಗುವ ಸೂಚನೆಯ ಸುದ್ದಿಗಳನ್ನೂ ನೀವು ಕೇಳಬಹುದು. ಕಳವಳಪಡದಂತೆ ನೋಡಿಕೊಳ್ಳಿರಿ; ಏಕೆಂದರೆ ಹೀಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ.
7ಹೀಗಿರಲಾಗಿ ಜನರಿಗೆ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಅಲ್ಲಲ್ಲಿ ಭೂಕಂಪಗಳು ಆಗುವವು;
8ಇವೆಲ್ಲಾ (ನೂತನ ಕಾಲವು ಹುಟ್ಟುವ) ಪ್ರಸವವೇದನೆಯ ಪ್ರಾರಂಭ.
9“ಆಗ ನಿಮ್ಮನ್ನು ಕಷ್ಟಸಂಕಟಗಳಿಗೆ ಗುರಿಮಾಡಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ದ್ವೇಷಿಸುವರು.
10ಆಗ ಅನೇಕರು ಎಡವಿ ಹಿಂಜರಿದು ಒಬ್ಬರನ್ನೊಬ್ಬರು ಹಿಡಿದುಕೊಡುವರು; ಒಬ್ಬರ ಮೇಲೊಬ್ಬರು ದ್ವೇಷ ಮಾಡುವರು.
11ಬಹು ಮಂದಿ ಸುಳ್ಳುಪ್ರವಾದಿಗಳು ಸಹ ಎದ್ದು ಅನೇಕರನ್ನು ಮೋಸಗೊಳಿಸುವರು.
12ಇದಲ್ಲದೆ ಅಧರ್ಮವು ಹೆಚ್ಚಾಗುವುದರಿಂದ ಬಹು ಜನರ ಪ್ರೀತಿಯು ತಣ್ಣಗಾಗಿ ಹೋಗುವುದು.
13ಆದರೆ ಕಡೆಯವರೆಗೂ ತಾಳುವವನು ರಕ್ಷಣೆ ಹೊಂದುವನು.
14ಇದಲ್ಲದೆ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಆಗ ಅಂತ್ಯವು ಬರುವುದು.