Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ವಿಷಯಗಳು › ಹೊಟ್ಟೆಕಿಚ್ಚು ಮತ್ತು ಅಸೂಯೆ

ದೈನಂದಿನ ಜೀವನ

ಬೈಬಲಿನಲ್ಲಿ ಹೊಟ್ಟೆಕಿಚ್ಚು ಮತ್ತು ಅಸೂಯೆ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ ನ 26 ವಾಕ್ಯಭಾಗಗಳು, ಸಾಲು ಸಾಲಾಗಿ.

  • ಹೊಟ್ಟೆಕಿಚ್ಚು ಗಂಡನನ್ನು ರೌದ್ರಗೊಳಿಸುತ್ತದೆಜ್ಞಾನೋ 6:34
    ವಚನಗಳು
    ಜ್ಞಾನೋ 6:34ಏಕೆಂದರೆ ಮತ್ಸರವು ಪತಿಗೆ ಕ್ರೋಧವನ್ನು ಉಂಟುಮಾಡುತ್ತದೆ, ಅವನು ಮುಯ್ಯಿತೀರಿಸತಕ್ಕ ದಿನದಲ್ಲಿ ವ್ಯಭಿಚಾರಿಯನ್ನು ಉಳಿಸನು.
  • ಕೋಪವು ಪ್ರವಾಹದಂತಿದೆ, ಆದರೆ ಹೊಟ್ಟೆಕಿಚ್ಚಿನ ಮುಂದೆ ಯಾರು ನಿಲ್ಲಬಲ್ಲರು?ಜ್ಞಾನೋ 27:4
    ವಚನಗಳು
    ಜ್ಞಾನೋ 27:4ಕೋಪವು ಕ್ರೂರ, ಕ್ರೋಧವು ಪ್ರವಾಹ, ಮತ್ಸರಕ್ಕೆ ಎದುರಾಗಿ ಯಾರು ನಿಂತಾರು?
  • ಅಸೂಯೆಯು ಎಲುಬುಗಳಿಗೆ ಕೊಳೆತಜ್ಞಾನೋ 14:30
    ವಚನಗಳು
    ಜ್ಞಾನೋ 14:30ಶಾಂತಗುಣವು ದೇಹಕ್ಕೆ ಜೀವಾಧಾರವು, ಕ್ರೋಧವು ಎಲುಬಿಗೆ ಕ್ಷಯವು.
  • ದುಡಿಮೆಯೂ ಯಶಸ್ಸೂ ನೆರೆಯವನ ಮೇಲಿನ ಹೊಟ್ಟೆಕಿಚ್ಚಿನಿಂದ ಹುಟ್ಟುತ್ತವೆಪ್ರಸ 4:4
    ವಚನಗಳು
    ಪ್ರಸ 4:4ಆಗ ಸಮಸ್ತ ಪ್ರಯಾಸವನ್ನು, ಕೈಗೂಡುವ ಸಕಲ ಕಾರ್ಯವನ್ನು ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದು ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೇ.
  • ಪ್ರೀತಿಯು ಮರಣದಷ್ಟು ಬಲವಾದದ್ದು, ಅದರ ಹೊಟ್ಟೆಕಿಚ್ಚು ಪಾತಾಳದಷ್ಟು ಕಠಿಣವಾದದ್ದುಪ.ಗೀ 8:6
    ವಚನಗಳು
    ಪ.ಗೀ 8:6ನಿನ್ನ ಕೈಯಲ್ಲಿನ ಮುದ್ರೆಯ ಹಾಗೆ ನಿನ್ನ ಹೃದಯದ ಮೇಲೆ ನನ್ನನ್ನು ಧರಿಸಿಕೋ. ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ, ಪ್ರೀತಿದ್ರೋಹದಿಂದ ಹುಟ್ಟುವ ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯ ಉರಿ, ಧಗಧಗಿಸುವ ಕೋಪಾಗ್ನಿ.
  • ಹೊಟ್ಟೆಕಿಚ್ಚು ಎಲ್ಲಿದೆಯೋ ಅಲ್ಲಿ ಗಲಿಬಿಲಿ ಇರುತ್ತದೆಯಾಕೋ 3:16
    ವಚನಗಳು
    ಯಾಕೋ 3:16ಮತ್ಸರವೂ, ಹಗೆತನವೂ ಇರುವ ಕಡೆ ಗೊಂದಲಗಳೂ, ಸಕಲ ವಿಧದ ನೀಚ ಕೃತ್ಯಗಳೂ ಇರುವವು.
  • ಹೊಟ್ಟೆಕಿಚ್ಚಿನ ಗಂಡನು ಸಂಶಯಪಟ್ಟ ಹೆಂಡತಿಗಾಗಿ ಧರ್ಮಶಾಸ್ತ್ರದ ಪರೀಕ್ಷೆಅರಣ್ಯ 5:12–31
    ವಚನಗಳು
    ಅರಣ್ಯ 5:12–31“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು: ‘ಯಾರ ಹೆಂಡತಿ ತಪ್ಪು ದಾರಿ ಹಿಡಿದು ಗಂಡನಿಗೆ ಅಪನಂಬಿಗಸ್ತಳಾಗಿ, ಯಾರ ಕೈಗೆ ಸಿಕ್ಕದೆಯೂ ಸಾಕ್ಷಿ ಇಲ್ಲದೆಯೂ ರಹಸ್ಯವಾಗಿಯೇ ಪರಪುರುಷನೊಡನೆ ಸಂಗಮಿಸಿ ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾದ ಸಂದರ್ಭದಲ್ಲಿ, ಅಥವಾ ಅವಳು ಹಾಗೆ ಮಾಡದೆ ಅಶುದ್ಧಳಾಗದ ಸಂದರ್ಭದಲ್ಲಿಯೂ, ಆಕೆಯು ಕೆಟ್ಟುಹೋದಳೆಂಬ ಸಂಶಯ ಗಂಡನಿಗೆ ಬಂದರೆ, ಆಗ ಅವನು ಮಾಡಬೇಕಾದದ್ದೇನೆಂದರೆ, ಆ ಪುರುಷನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು ಮತ್ತು ಅವಳ ಸಂಗತಿಯನ್ನು ವಿಚಾರಿಸುವುದಕ್ಕಾಗಿ ಅವನು ಯಾಜಕನಿಗೆ ಮೂರು ಸೇರು ಜವೆಗೋದಿಯ ಹಿಟ್ಟನ್ನು ಕಾಣಿಕೆಯಾಗಿ ತಂದುಕೊಡಬೇಕು. ಅದು ವ್ಯಭಿಚಾರ ಸಂಶಯವನ್ನು ಸೂಚಿಸುವುದಕ್ಕೂ ಮತ್ತು ಪಾಪವನ್ನು ಹೊರಪಡಿಸುವುದಕ್ಕೂ ಯೆಹೋವನಿಗೆ ನೈವೇದ್ಯವಾದ ಕಾಣಿಕೆಯಾದುದರಿಂದ ಆ ಹಿಟ್ಟಿನ ಮೇಲೆ ಎಣ್ಣೆಯನ್ನು ಹೊಯ್ಯಲೂಬಾರದು, ಧೂಪವನ್ನು ಇಡಲೂಬಾರದು. “‘ಯಾಜಕನು ಅವಳನ್ನು ಕರೆದು ಯೆಹೋವನ ಸಮ್ಮುಖದಲ್ಲಿ ನಿಲ್ಲಿಸಬೇಕು. ಯಾಜಕನು ಮಣ್ಣಿನ ಪಾತ್ರೆಯಲ್ಲಿ ಪರಿಶುದ್ಧ ಜಲವನ್ನು ತೆಗೆದುಕೊಂಡು, ದೇವದರ್ಶನದ ಗುಡಾರದ ನೆಲದಿಂದ ಸ್ವಲ್ಪ ಧೂಳನ್ನು ಆ ನೀರಿನಲ್ಲಿ ಹಾಕಬೇಕು. ಯಾಜಕನು ಆ ಸ್ತ್ರೀಯನ್ನು ಯೆಹೋವನ ಸಮ್ಮುಖದಲ್ಲಿ ನಿಲ್ಲಿಸಿ, ಅವಳ ತಲೆಯ ಮೇಲಿರುವ ಮುಸುಕನ್ನು ತೆಗೆದು, ಕೂದಲನ್ನು ಕೆದರಿಸಿ ವ್ಯಭಿಚಾರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿ ಇಟ್ಟು, ಶಾಪವನ್ನುಂಟುಮಾಡುವ ವಿಷಕರವಾದ ಆ ನೀರನ್ನು ಯಾಜಕನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕು. ಯಾಜಕನೂ ಅವಳಿಂದ ಪ್ರಮಾಣಮಾಡಿಸಿ ಹೀಗೆ ಹೇಳಬೇಕು, “ಒಬ್ಬ ಪರಪುರುಷನ ಸಂಗಮಮಾಡದಿದ್ದರೆ, ನಿನ್ನ ಗಂಡನನ್ನು ಬಿಟ್ಟು ನೀನು ಜಾರತ್ವ ಮಾಡದೇ ನಿರಪರಾಧಿಯಾಗಿದ್ದರೆ ಶಪಿಸಲ್ಪಟ್ಟ ವಿಷಕರವಾದ ಈ ನೀರು ನಿನಗೆ ಯಾವ ಹಾನಿಯನ್ನು ಮಾಡುವುದಿಲ್ಲ. ಆದರೆ ನೀನು ನಿನ್ನ ಗಂಡನನ್ನು ಬಿಟ್ಟು ಪರಪುರುಷನೊಡನೆ ಜಾರತ್ವಮಾಡಿ ಅಶುದ್ಧಳಾಗಿದ್ದರೆ ನಿನ್ನ ಗಂಡನನ್ನು ಬಿಟ್ಟು ಮತ್ತೊಬ್ಬನೊಡನೆ ನೀನು ಸಂಗಮಿಸಿದ್ದರೆ,” “ಯೆಹೋವನು ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆ, ನಿನ್ನ ಹೊಟ್ಟೆಯು ಉಬ್ಬುವಂತೆ ಮಾಡಿ ನಿನ್ನನ್ನು ನಿನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳನ್ನಾಗಿ ನೇಮಿಸಲಿ. ಶಾಪವನ್ನುಂಟುಮಾಡುವ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆಯು ಉಬ್ಬುವಂತೆ ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆ ನಿನ್ನ ಜನನೇಂದ್ರಿಯಗಳು ಬತ್ತಿ ಹೋಗುವಂತೆ ಮಾಡುವುದು.” ಅದಕ್ಕೆ ಆ ಸ್ತ್ರೀಯು, “ನಾನು ಅಪರಾಧಿಯಾಗಿದ್ದರೆ ಹಾಗೆಯೇ ಆಗಲಿ” ಎಂದು ಹೇಳಬೇಕು. “‘ಇದಲ್ಲದೆ ಯಾಜಕನು ಈ ಶಾಪವಚನಗಳನ್ನು ಸುರುಳಿಯಲ್ಲಿ ಬರೆದು, ವಿಷಕರ ಜಲದಲ್ಲಿ ಆ ಶಾಪವಚನವನ್ನು ತೊಳೆಯಬೇಕು. ಶಾಪವನ್ನುಂಟುಮಾಡುವ ವಿಷಕರವಾದ ನೀರನ್ನು ಆ ಸ್ತ್ರೀಗೆ ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ವಿಷಕರವಾಗುವುದು. ಬಳಿಕ ಯಾಜಕನು ಆ ಸ್ತ್ರೀಯ ಕೈಯಿಂದ ವ್ಯಭಿಚಾರದ ಸಂಶಯ ಸೂಚಕವಾದ ಕಾಣಿಕೆಯನ್ನು ತೆಗೆದುಕೊಂಡು, ಆ ಕಾಣಿಕೆಯನ್ನು ಯೆಹೋವನ ಸಮ್ಮುಖದಲ್ಲಿ ನೈವೇದ್ಯಮಾಡಿ ಯಜ್ಞವೇದಿಯ ಹತ್ತಿರ ತರಬೇಕು. ಆಗ ಯಾಜಕನು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಕಾಣಿಕೆಯಿಂದ ಒಂದು ಹಿಡಿಯನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಟ್ಟು ಆ ನೀರನ್ನು ಸ್ತ್ರೀಗೆ ಕುಡಿಸಬೇಕು. ಅವಳು ಅಶುದ್ಧಳಾಗಿ ಗಂಡನಿಗೆ ದ್ರೋಹಮಾಡಿದವಳಾಗಿದ್ದರೆ ಆ ನೀರನ್ನು ಕುಡಿದ ನಂತರ ಆ ನೀರು ಅವಳೊಳಗೆ ಸೇರಿ ವಿಷವಾಗುವುದರಿಂದ ಅವಳ ಹೊಟ್ಟೆ ಉಬ್ಬುವುದು, ಅವಳ ತೊಡೆಗಳು ಕ್ಷೀಣವಾಗಿ ಹೋಗುವವು. ಆಗ ಆ ಸ್ತ್ರೀಯು ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗುವಳು. ಆದರೆ ಆ ಸ್ತ್ರೀಯು ಪರಿಶುದ್ಧಳಾಗಿ ನಿರಪರಾಧಿಯಾದ ಪಕ್ಷಕ್ಕೆ ಯಾವ ಹಾನಿಯನ್ನು ಅನುಭವಿಸದೆ ಸಂತಾನವನ್ನು ಪಡೆಯುವಳು. ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾದರೆ ಇಂತಹ ವ್ಯಭಿಚಾರದ ಸಂಶಯವನ್ನು ಪರಿಹರಿಸುವ ನಿಯಮ ಇದೇ. ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯ ಪಟ್ಟರೆ ಅವನು ಅವಳನ್ನು ಯೆಹೋವನ ಸಮ್ಮುಖದಲ್ಲಿ ತಂದು ನಿಲ್ಲಿಸಬೇಕು. ಯಾಜಕನು ಅವಳ ವಿಷಯದಲ್ಲಿ ಈ ವಿಧಿನಿಯಮವನ್ನು ನೆರವೇರಿಸಬೇಕು. ಆಗ ಗಂಡನು ನಿರಪರಾಧಿಯಾಗುವನು. ಆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು.’”

ಉದಾಹರಣೆಗಳು

  • ಹೇಬೆಲನ ಕಾಣಿಕೆ ಅಂಗೀಕಾರವಾದುದಕ್ಕೆ ಕೋಪಗೊಂಡ ಕಾಯಿನನು ಅವನನ್ನು ಕೊಲ್ಲುತ್ತಾನೆಆದಿ 4:4–8
    ವಚನಗಳು
    ಆದಿ 4:4–8ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮ ಮಾಡಿದನು, ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನು ಮೆಚ್ಚಿಕೊಂಡನು. ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು, ಅವನ ಮುಖವು ಸಿಟ್ಟಿನಿಂದ ಕಳೆಗುಂದಿತು. ಆಗ ಯೆಹೋವನು ಕಾಯಿನನಿಗೆ, “ನೀನು ಕೋಪಗೊಂಡಿದ್ದೇಕೆ? ನಿನ್ನ ಮುಖವು ಕಳೆಗುಂದಲು ಕಾರಣವೇನು? ನೀನು ತಲೆ ತಗ್ಗಿಸಲು ಕಾರಣವೇನು? ನೀನು ಒಳ್ಳೆಯ ಕೆಲಸ ಮಾಡಿದ್ದರೆ ನಿನ್ನ ತಲೆಯು ಎತ್ತಲ್ಪಡುವುದಲ್ಲವೇ? ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು, ಅದು ನಿನ್ನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಆದರೆ ನೀನು ಅದನ್ನು ಹಿಡಿತದಲ್ಲಿ ಇರಿಸಿಕೊಳ್ಳಬೇಕು” ಎಂದು ಹೇಳಿದನು. ತರುವಾಯ ಕಾಯಿನನು ತನ್ನ ತಮ್ಮನಾದ ಹೇಬೆಲನ ಸಂಗಡ ಮಾತನಾಡಿದನು. ಅವರು ಹೊಲದಲ್ಲಿದ್ದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು.
  • ಬಸುರಾದ ಹಾಗರಳು ಸಾರಯಳನ್ನು ತಾತ್ಸಾರ ಮಾಡುತ್ತಾಳೆ, ಸಾರಯಳು ಅವಳನ್ನು ಕಠಿಣವಾಗಿ ನಡೆಸುತ್ತಾಳೆಆದಿ 16:4–6
    ವಚನಗಳು
    ಆದಿ 16:4–6ಅವನು ಹಾಗರಳನ್ನು ಸಂಗಮಿಸಲು ಆಕೆಯು ಬಸುರಾದಳು. ತಾನು ಬಸುರಾದೆನೆಂದು ತಿಳಿದುಕೊಂಡಾಗ ಅವಳು ತನ್ನ ಯಜಮಾನಿಯನ್ನು ತಾತ್ಸಾರ ಮಾಡತೊಡಗಿದಳು. ಆಗ ಸಾರಯಳು ಅಬ್ರಾಮನಿಗೆ, “ನನ್ನ ಗೋಳು ನಿನಗೆ ತಟ್ಟಲಿ; ನನ್ನ ದಾಸಿಯನ್ನು ನಿನಗೆ ಹೆಂಡತಿಯಾಗಿ ಒಪ್ಪಿಸಿದೆನಷ್ಟೆ; ಅವಳು ತಾನು ಬಸುರಾದೆನೆಂದು ತಿಳಿದು ನನ್ನನ್ನು ತಾತ್ಸಾರಮಾಡುತ್ತಿದ್ದಾಳೆ; ನಿನಗೂ ನನಗೂ ನಡುವೆ ಯೆಹೋವನೇ ನ್ಯಾಯತೀರಿಸಲಿ” ಎಂದು ಹೇಳಿದಳು. ಆಗ ಅಬ್ರಾಮನು, “ನಿನ್ನ ದಾಸಿಯು ನಿನ್ನ ಕೈಯಲ್ಲೇ ಇದ್ದಾಳಲ್ಲಾ; ನಿನ್ನಗೆ ಮನಸ್ಸು ಬಂದಂತೆ ಮಾಡು” ಎಂದನು. ಆಗ ಸಾರಯಳು ಅವಳನ್ನು ಬಾಧಿಸಲು ಅವಳು ಓಡಿಹೋದಳು.
  • ಫಿಲಿಷ್ಟಿಯರು ಇಸಾಕನ ಕುರಿಹಿಂಡುಗಳನ್ನೂ ದನಗಳ ಮಂದೆಗಳನ್ನೂ ಕಂಡು ಹೊಟ್ಟೆಕಿಚ್ಚುಪಡುತ್ತಾರೆಆದಿ 26:14
    ವಚನಗಳು
    ಆದಿ 26:14ಅವನಿಗೆ ದನಕುರಿಗಳೂ, ಸಂಪತ್ತೂ, ಸೇವಕರು ಹೇರಳವಾಗಿದ್ದುದನ್ನು ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟರು.
  • ರಾಹೇಲಳು ಲೇಯಳ ಮೇಲೆ ಹೊಟ್ಟೆಕಿಚ್ಚುಪಡುತ್ತಾಳೆ: “ಮಕ್ಕಳನ್ನು ನನಗೆ ಕೊಡು, ಇಲ್ಲದಿದ್ದರೆ ಸಾಯುವೆನು”ಆದಿ 30:1
    ವಚನಗಳು
    ಆದಿ 30:1ರಾಹೇಲಳು ತಾನು ಯಾಕೋಬನಿಗೆ ಮಕ್ಕಳನ್ನು ಹೆರದೆ ಇರುವುದನ್ನು ನೋಡಿ ತನ್ನ ಅಕ್ಕನ ಮೇಲೆ ಹೊಟ್ಟೆಕಿಚ್ಚುಪಟ್ಟು, ಯಾಕೋಬನಿಗೆ, “ಮಕ್ಕಳನ್ನು ನನಗೆ ಕೊಡು, ಇಲ್ಲದಿದ್ದರೆ ಸಾಯುವೆನು” ಎಂದು ಹೇಳಿದಳು.
  • ಯೋಸೇಫನ ಅಣ್ಣಂದಿರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟು ಅವನನ್ನು ಮಾರುತ್ತಾರೆಆದಿ 37:4, ಆದಿ 37:11, ಆದಿ 37:18–28
    ವಚನಗಳು
    ಆದಿ 37:4ಅವನ ಅಣ್ಣತಮ್ಮಂದಿರು, ತಮ್ಮ ತಂದೆಯು ಎಲ್ಲಾ ಮಕ್ಕಳಿಗಿಂತಲೂ ಇವನನ್ನೇ ಹೆಚ್ಚಾಗಿ ಪ್ರೀತಿಸುತ್ತಿರುವುದನ್ನು ನೋಡಿ ಯೋಸೇಫನನ್ನು ಹಗೆಮಾಡಿ ಅವನೊಡನೆ ಸ್ನೇಹಭಾವದಿಂದ ಮಾತನಾಡಲಾರದೆ ಹೋದರು.
    ಆದಿ 37:11ಹೀಗೆ ಯೋಸೇಫನ ಅಣ್ಣಂದಿರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದರೆ ಅವನ ತಂದೆಯು ಅವನ ಮಾತುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡನು.
    ಆದಿ 37:18–28ಅವರು ಅವನನ್ನು ದೂರದಿಂದ ನೋಡಿ ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲುವುದಕ್ಕೆ ಒಳಸಂಚು ಮಾಡಿಕೊಂಡರು. ಅವರು ಒಬ್ಬರಿಗೊಬ್ಬರು, “ಅಗೋ ಆ ಕನಸುಗಾರನು ಬರುತ್ತಿದ್ದಾನೆ ನೋಡಿರಿ ಬನ್ನಿರಿ, ಈಗ ನಾವು ಅವನನ್ನು ಕೊಂದು ಈ ಗುಂಡಿಗಳಲ್ಲಿ ಒಂದರೊಳಗೆ ಹಾಕಿ, ಕಾಡುಮೃಗವು ಅವನನ್ನು ತಿಂದು ಬಿಟ್ಟಿತೆಂದು ಹೇಳೋಣ. ಆಗ ಅವನ ಕನಸುಗಳು ಏನಾಗುವವೋ? ನೋಡೋಣ” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ರೂಬೇನನು ಈ ಮಾತನ್ನು ಕೇಳಿ, “ನಾವು ಅವನ ಪ್ರಾಣವನ್ನು ತೆಗೆಯಬಾರದು” ಎಂದು ಹೇಳಿದನು. ರೂಬೇನನು ಅವನನ್ನು ಅವರ ಕೈಯಿಂದ ತಪ್ಪಿಸಿ ತಂದೆಗೆ ತಿರುಗಿ ಒಪ್ಪಿಸಬೇಕೆಂದು ನೆನಸಿ ಅವರಿಗೆ, “ಇವನ ರಕ್ತ ಸುರಿಸಬೇಡಿರಿ, ಅವನನ್ನು ಈ ಕಾಡಿನಲ್ಲಿರುವ ಈ ಗುಂಡಿಯೊಳಗೆ ಹಾಕಿರಿ, ಅವನ ಮೇಲೆ ಕೈಹಾಕಬೇಡಿರಿ” ಎಂದು ಹೇಳಿದನು. ಯೋಸೇಫನು ತನ್ನ ಅಣ್ಣಂದಿರ ಹತ್ತಿರಕ್ಕೆ ಬಂದಾಗ ಅವರು ಅವನ ಮೇಲಿದ್ದ ನಿಲುವಂಗಿಯನ್ನು ತೆಗೆದರು. ಅವನನ್ನು ಹಿಡಿದು ಆ ಗುಂಡಿಯೊಳಗೆ ಹಾಕಿದರು. ಆ ಗುಂಡಿ ನೀರಿಲ್ಲದೆ ಬರಿದಾಗಿತ್ತು. ಆ ಮೇಲೆ ಅವರು ಊಟಕ್ಕೆ ಕುಳಿತುಕೊಂಡಾಗ ಅವರು ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ, ಇಷ್ಮಾಯೇಲರ ಗುಂಪು ಒಂಟೆಗಳ ಮೇಲೆ ಪರಿಮಳ ದ್ರವ್ಯ, ಸುಗಂಧ ತೈಲ, ರಕ್ತಬೋಳ, ಇವುಗಳನ್ನು ಹೇರಿಕೊಂಡು ಗಿಲ್ಯಾದಿನಿಂದ ಐಗುಪ್ತದೇಶಕ್ಕೆ ಪ್ರಯಾಣಮಾಡುತ್ತಾ ಬರುವುದನ್ನು ಕಂಡರು. ಆಗ ಯೆಹೂದನು ತನ್ನ ಅಣ್ಣತಮ್ಮಂದಿರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಹಾಕಿ ಅವನ ರಕ್ತವನ್ನು ಮರೆಮಾಡಿದರೆ ಲಾಭವೇನು? ಬನ್ನಿರಿ, ಅವನನ್ನು ಆ ಇಷ್ಮಾಯೇಲ್ಯರಿಗೆ ಮಾರಿಬಿಡೋಣ. ನಾವು ಅವನ ಮೇಲೆ ಕೈಹಾಕಬಾರದು. ಅವನು ನಮ್ಮ ಒಡಹುಟ್ಟಿದ ತಮ್ಮನಲ್ಲವೇ” ಎಂದು ಹೇಳಿದನು. ಆ ಮಾತಿಗೆ ಅವನ ಅಣ್ಣಂದಿರು ಒಪ್ಪಿದರು. ಅಷ್ಟರಲ್ಲಿ ಮಿದ್ಯಾನ್ಯರಾದ ವರ್ತಕರು ಹಾದುಹೋಗುತ್ತಿದ್ದರು. ಅವರು ಯೋಸೇಫನನ್ನು ಗುಂಡಿಯೊಳಗಿಂದ ಮೇಲೆ ಎತ್ತಿ ಆ ಇಷ್ಮಾಯೇಲ್ಯರಿಗೆ ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಅವನನ್ನು ಮಾರಿದರು. ಅವರು ಅವನನ್ನು ಐಗುಪ್ತ ದೇಶಕ್ಕೆ ಕರೆದುಕೊಂಡು ಹೋದರು.
  • ಮೋಶೆಯು ಯೆಹೋಶುವನಿಗೆ: “ನನ್ನ ನಿಮಿತ್ತವಾಗಿ ನೀನು ಹೊಟ್ಟೆಕಿಚ್ಚುಪಡುತ್ತೀಯೋ?”ಅರಣ್ಯ 11:28–29
    ವಚನಗಳು
    ಅರಣ್ಯ 11:28–29ಮೋಶೆಯ ಶಿಷ್ಯನಾದ ನೂನನ ಮಗನಾದ ಯೆಹೋಶುವನು ಮೋಶೆಗೆ, “ಗುರುವೇ, ಅವರು ಪ್ರವಾದಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದನು. ಅದಕ್ಕೆ ಮೋಶೆ, “ನನ್ನ ನಿಮಿತ್ತವಾಗಿ ನೀನು ಹೊಟ್ಟೆಕಿಚ್ಚುಪಡುತ್ತೀಯೋ? ಯೆಹೋವನ ಅನುಗ್ರಹದಿಂದ ಆತನ ಜನರೆಲ್ಲರೂ ಆತ್ಮವನ್ನು ಹೊಂದಿದವರೂ, ಪ್ರವಾದಿಸುವವರೂ ಆದರೆ ಎಷ್ಟೋ ಒಳ್ಳೆಯದು” ಎಂದನು.
  • ಮಿರ್ಯಾಮಳೂ ಆರೋನನೂ: “ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತನಾಡುತ್ತಾನೋ?”ಅರಣ್ಯ 12:1–2
    ವಚನಗಳು
    ಅರಣ್ಯ 12:1–2ಮೋಶೆ ಕೂಷ್ ದೇಶದ ಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು. ಆ ಕಾರಣಕ್ಕಾಗಿ ಮಿರ್ಯಾಮಳೂ ಹಾಗೂ ಆರೋನನೂ ಅವನಿಗೆ ವಿರುದ್ಧವಾಗಿ ಮಾತನಾಡಿದರು. ಅವರು, “ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತನಾಡುತ್ತಾನೋ? ನಮ್ಮ ಮೂಲಕ ಆತನು ಮಾತನಾಡುವುದಿಲ್ಲವೇ?” ಎಂದು ಹೇಳಿಕೊಂಡರು. ಅವರು ಆಡಿದ ಮಾತು ಯೆಹೋವನಿಗೆ ಕೇಳಿಸಿತು.
  • ತಮ್ಮನ್ನು ಕರೆಯಲಿಲ್ಲವೆಂದು ಎಫ್ರಾಯೀಮ್ಯರು ಗಿದ್ಯೋನನ ಮೇಲೆಯೂ ಯೆಪ್ತಾಹನ ಮೇಲೆಯೂ ಅಸಮಾಧಾನಗೊಳ್ಳುತ್ತಾರೆನ್ಯಾಯ 8:1, ನ್ಯಾಯ 12:1
    ವಚನಗಳು
    ನ್ಯಾಯ 8:1ಅನಂತರ ಎಫ್ರಾಯೀಮ್ಯರು ಗಿದ್ಯೋನನಿಗೆ, “ನೀನು ಹೀಗೆ ಯಾಕೆ ಮಾಡಿದಿ? ಮಿದ್ಯಾನ್ಯರೊಡನೆ ಯುದ್ಧಮಾಡುವುದಕ್ಕೆ ಹೊರಟಾಗ ನಮ್ಮನ್ನೇಕೆ ಕರೆಯಲಿಲ್ಲ?” ಎಂದು ಉಗ್ರಕೋಪದಿಂದ ಜಗಳವಾಡಿದರು.
    ನ್ಯಾಯ 12:1ಎಫ್ರಾಯೀಮ್ಯರು ಒಟ್ಟಿಗೆ ಸೇರಿಕೊಂಡು ಯೊರ್ದನ್ ನದಿಯನ್ನು ದಾಟಿ ಉತ್ತರದಿಕ್ಕಿನಲ್ಲಿರುವ ಚಾಫೋನಿಗೆ ಹೋಗಿ ಯೆಪ್ತಾಹನಿಗೆ, “ನೀನು ಅಮ್ಮೋನಿಯರ ಸಂಗಡ ಯುದ್ಧಕ್ಕೆ ಹೋಗುವಾಗ ನಮ್ಮನ್ನು ಯಾಕೆ ಕರೆಯಲಿಲ್ಲ? ಈಗ ನಾವು ನಿನ್ನನ್ನೂ ನಿನ್ನ ಮನೆಯನ್ನೂ ಸುಟ್ಟುಬಿಡುತ್ತೇವೆ” ಅಂದರು.
  • “ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು” ಎಂಬ ಹಾಡಿನಿಂದ ಸೌಲನು ಅಸೂಯೆಪಡುತ್ತಾನೆ1 ಸಮು 18:7–9
    ವಚನಗಳು
    1 ಸಮು 18:7–9ಅವರು ಹಾಡುತ್ತಾ, ಕೊಂಡಾಡುತ್ತಾ, “ಸೌಲನು ಸಾವಿರ ಶತ್ರುಗಳನ್ನು ಕೊಂದನು. ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದರು. ಈ ಮಾತುಗಳ ದೆಸೆಯಿಂದ ಸೌಲನಿಗೆ ಬಹು ಅಸೂಯೆ ಉಂಟಾಗಿ ದಾವೀದನ ಮೇಲೆ ಕೋಪಗೊಂಡನು. ಅವನು “ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನೆಂದೂ, ನಾನು ಸಾವಿರಾರು ಶತ್ರುಗಳನ್ನು ಕೊಂದೆನೆಂದೂ ಹಾಡುತ್ತಾರಲ್ಲಾ, ರಾಜತ್ವದ ಹೊರತು ಅವನಿಗೆ ಇನ್ನೇನು ಕಡಿಮೆಯಾಯಿತು” ಅಂದುಕೊಂಡು ಅಂದಿನಿಂದ ಅವನು ದಾವೀದನನ್ನು ಸಂಶಯದಿಂದ ನೋಡುತ್ತಿದ್ದನು.
  • ದಾವೀದನು ಸಮಾಧಾನದಿಂದ ಕಳುಹಿಸಿದ್ದ ಅಬ್ನೇರನನ್ನು ಯೋವಾಬನು ಕೊಲ್ಲುತ್ತಾನೆ2 ಸಮು 3:24–27
    ವಚನಗಳು
    2 ಸಮು 3:24–27“ನೀನು ಮಾಡಿದ್ದೇನು? ಅಬ್ನೇರನು ನಿನ್ನ ಬಳಿಗೆ ಬಂದಿದ್ದನಂತೆ. ನೀನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದೇಕೆ? ನೇರನ ಮಗನಾದ ಅಬ್ನೇರನ ಸಂಗತಿ ನಿನಗೆ ಗೊತ್ತಿಲ್ಲವೋ? ಅವನು ನಿನ್ನನ್ನು ವಂಚಿಸುವುದಕ್ಕೂ ನಿನ್ನ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದಕ್ಕೂ ನೀನು ಏನೇನು ಮಾಡುತ್ತಿರುತ್ತೀ ಎಂಬುದನ್ನು ಕಂಡುಹಿಡಿಯುವುದಕ್ಕೂ ಬಂದಿದ್ದನಷ್ಟೇ” ಎಂದು ಹೇಳಿ, ಯೋವಾಬನು ದಾವೀದನನ್ನು ಬಿಟ್ಟು, ಹೊರಗೆ ಹೋಗಿ, ಅಬ್ನೇರನನ್ನು ಕರೆತರುವಂತೆ ದೂತರನ್ನು ಕಳುಹಿಸಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರೆದುಕೊಂಡು ಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ. ಅಬ್ನೇರನು ಹೆಬ್ರೋನಿಗೆ ಬಂದಾಗ ಯೋವಾಬನು ಅವನನ್ನು ರಹಸ್ಯ ಸಂಭಾಷಣೆಗೋ ಎಂಬಂತೆ ಊರಬಾಗಿಲಿನೊಳಗೆ ಕರೆದುಕೊಂಡು ಹೋಗಿ ತನ್ನ ತಮ್ಮನಾದ ಅಸಾಹೇಲನನ್ನು ಕೊಂದದ್ದಕ್ಕೆ ಪ್ರತಿಯಾಗಿ ಅವನನ್ನು ಹೊಟ್ಟೆಯಲ್ಲಿ ತಿವಿದು ಕೊಂದನು.
  • ಅರಸನನ್ನು ಹಿಂದಕ್ಕೆ ಕರೆತಂದವರು ಯಾರೆಂದು ಇಸ್ರಾಯೇಲ್ಯರೂ ಯೆಹೂದ್ಯರೂ ಜಗಳವಾಡುತ್ತಾರೆ2 ಸಮು 19:41–43
    ವಚನಗಳು
    2 ಸಮು 19:41–43ಆಗ ಇಸ್ರಾಯೇಲರೆಲ್ಲರೂ ಅರಸನ ಮುಂದೆ ಬಂದು ಅವನನ್ನು, “ನಮ್ಮ ಸಹೋದರರಾದ ಯೆಹೂದ್ಯರು ನಮಗೆ ತಿಳಿಸದೆ ತಾವೆ ಹೋಗಿ ಅರಸನನ್ನೂ, ಅವನ ಮನೆಯವರನ್ನೂ, ಅವನೊಡನೆ ಇದ್ದ ಜನರನ್ನೂ ಯೊರ್ದನ್ ನದಿ ದಾಟಿಸಿ ಕರೆದುಕೊಂಡು ಬಂದದ್ದೇಕೆ?” ಎಂದು ಕೇಳಿದರು. ಅದಕ್ಕೆ ಯೆಹೂದ್ಯರು ಇಸ್ರಾಯೇಲರಿಗೆ, “ಅರಸನು ನಮಗೆ ಸಮೀಪದ ಬಂಧು. ನೀವು ಅದಕ್ಕಾಗಿ ಕೋಪಗೊಳ್ಳುವುದೇಕೆ? ನಾವೇನು ಅರಸನ ಹಣದಿಂದ ಊಟಮಾಡಿದೆವೋ? ಅವನು ನಮಗೆ ಏನಾದರೂ ಕೊಟ್ಟನೋ?” ಎಂದು ಉತ್ತರ ಕೊಟ್ಟರು. ಆಗ ಇಸ್ರಾಯೇಲರು ಯೆಹೂದ್ಯರಿಗೆ, “ಅರಸನಲ್ಲಿ ನಮಗೆ ಹತ್ತು ಪಾಲು ಉಂಟಲ್ಲಾ, ದಾವೀದನ ವಿಷಯದಲ್ಲೂ ನಮಗೆ ಹೆಚ್ಚು ಹಕ್ಕು ಉಂಟು. ಹೀಗಿರುವುದರಿಂದ ನೀವು ನಮ್ಮನ್ನು ಕಡೆಗಾಣಿಸಿದ್ದೇಕೆ? ನಮ್ಮ ಅರಸನನ್ನು ಕರೆದುಕೊಂಡು ಬರುವ ವಿಷಯದಲ್ಲಿ ಮೊದಲು ಮಾತನಾಡಿದವರು ನಾವಲ್ಲವೋ?” ಎಂದರು. ಇಸ್ರಾಯೇಲರ ಮಾತುಗಳಿಗಿಂತ ಯೆಹೂದ್ಯರ ಮಾತುಗಳು ಕಠಿಣವಾಗಿದ್ದವು.
  • ದುಂದುಗಾರ ಮಗನ ಅಣ್ಣನು ಒಳಗೆ ಹೋಗಲು ಒಪ್ಪುವುದಿಲ್ಲಲೂಕ 15:25–30
    ವಚನಗಳು
    ಲೂಕ 15:25–30ಆದರೆ ಅವನ ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಯ ಸಮೀಪಕ್ಕೆ ಬರುತ್ತಿರುವಾಗ ವಾದ್ಯಘೋಷಗಳನ್ನೂ ನರ್ತನಗಳನ್ನು ಕೇಳಿ, ಆಳುಗಳಲ್ಲಿ ಒಬ್ಬನನ್ನು ತನ್ನ ಬಳಿಗೆ ಕರೆದು, ಇದೇನು ಎಂದು ವಿಚಾರಿಸಿದನು. ಆಳು ಅವನಿಗೆ, ‘ನಿನ್ನ ತಮ್ಮ ಬಂದಿದ್ದಾನೆ. ಇವನು ಸುರಕ್ಷಿತನಾಗಿ ಬಂದದ್ದರಿಂದ ನಿನ್ನ ತಂದೆಯು ಆ ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ’ ಎಂದು ಹೇಳಿದನು. ಇದನ್ನು ಕೇಳಿ ಹಿರಿಯ ಮಗನು ಕೋಪಗೊಂಡು ಮನೆ ಒಳಕ್ಕೆ ಹೋಗಲು ಇಷ್ಟಪಡಲಿಲ್ಲ. ಆಗ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು. ಆದರೆ ಅವನು ತನ್ನ ತಂದೆಗೆ, ‘ನೋಡು, ಇಷ್ಟು ವರ್ಷ ನಿನಗೆ ಸೇವೆ ಮಾಡಿದ್ದೇನೆ, ಮತ್ತು ನಾನು ನಿನ್ನ ಅಪ್ಪಣೆಗಳಲ್ಲಿ ಒಂದನ್ನಾದರೂ ಎಂದೂ ಮೀರಲಿಲ್ಲ. ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ. ಆದರೆ ಸೂಳೆಯರನ್ನು ಕಟ್ಟಿಕೊಂಡು ನಿನ್ನ ಬದುಕನ್ನು ಹಾಳುಮಾಡಿದ ಈ ನಿನ್ನ ಮಗನು ಬಂದಾಗ ಕೊಬ್ಬಿದ ಕರುವನ್ನು ಇವನಿಗೆ ಕೊಯ್ಸಿದಿಯಲ್ಲಾ’ ಎಂದು ಉತ್ತರಕೊಟ್ಟನು.
  • ಅವರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ಒಪ್ಪಿಸಿದರೆಂದು ಪಿಲಾತನಿಗೆ ತಿಳಿದಿತ್ತುಮತ್ತಾ 27:18
    ವಚನಗಳು
    ಮತ್ತಾ 27:18ಏಕೆಂದರೆ ಅವರು ಹೊಟ್ಟೆಕಿಚ್ಚಿನಿಂದಲೇ ಈ ರೀತಿಯಾಗಿ ಮಾಡಿದ್ದಾರೆಂದು ಅವನಿಗೆ ತಿಳಿದಿತ್ತು.
  • ಮಹಾಯಾಜಕನೂ ಸದ್ದುಕಾಯರೂ ಹೊಟ್ಟೆಕಿಚ್ಚಿನಿಂದ ತುಂಬಿಕೊಳ್ಳುತ್ತಾರೆಅ. ಕೃ 5:17
    ವಚನಗಳು
    ಅ. ಕೃ 5:17ಹೀಗಿರುವಲ್ಲಿ ಮಹಾಯಾಜಕನೂ, ಸದ್ದುಕಾಯರ ಮತಕ್ಕೆ ಸೇರಿದವರಾದ ಅವನ ಜೊತೆಯಲ್ಲಿದ್ದವರೆಲ್ಲರೂ ಎದ್ದು,
  • ಅಂತಿಯೋಕ್ಯದಲ್ಲಿಯೂ ಥೆಸಲೋನಿಕದಲ್ಲಿಯೂ ಹೊಟ್ಟೆಕಿಚ್ಚುಪಟ್ಟ ಜನರ ಗುಂಪುಗಳು ಪೌಲನನ್ನು ವಿರೋಧಿಸುತ್ತವೆಅ. ಕೃ 13:45, ಅ. ಕೃ 17:5
    ವಚನಗಳು
    ಅ. ಕೃ 13:45ಆದರೆ ಜನರು ಗುಂಪುಗುಂಪಾಗಿ ಬರುವುದನ್ನು ನೋಡಿ ಯೆಹೂದ್ಯರು ಮತ್ಸರವುಳ್ಳವರಾಗಿ ಪೌಲನು ಹೇಳಿದ ಮಾತುಗಳಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನಾಡುತ್ತಾ ಇದ್ದರು.
    ಅ. ಕೃ 17:5ನಂಬದಿರುವ ಯೆಹೂದ್ಯರು ಹೊಟ್ಟೆಕಿಚ್ಚುಪಟ್ಟು ಪೇಟೆಯಲ್ಲಿ ತಿರುಗಾಡುವ ಕೆಲವು ಪುಂಡರನ್ನು ಕರೆದುಕೊಂಡು ಬಂದು ಗುಂಪು ಕೂಡಿಸಿ ಊರಲ್ಲಿ ಗದ್ದಲ ಎಬ್ಬಿಸಿ ಪೌಲ ಮತ್ತು ಸೀಲರನ್ನು ಪಟ್ಟಣದ ಸಭೆ ಎದುರಿಗೆ ತರಬೇಕೆಂದು ಅವರನ್ನು ಹುಡುಕುತ್ತಾ ಯಾಸೋನನ ಮನೆಯನ್ನು ಮುತ್ತಿದರು.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು