Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ವಿಷಯಗಳು › ಸಹೋದರರು

ದೈನಂದಿನ ಜೀವನ

ಬೈಬಲಿನಲ್ಲಿ ಸಹೋದರರು

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ ನ 42 ವಾಕ್ಯಭಾಗಗಳು, ಸಾಲು ಸಾಲಾಗಿ.

  • ಅಬ್ರಾಮನು ತನ್ನ ತಮ್ಮನ ಮಗನಾದ ಲೋಟನಿಗೆ: “ನಾವು ಸಹೋದರರಲ್ಲವೇ”ಆದಿ 12:5, ಆದಿ 13:8
    ವಚನಗಳು
    ಆದಿ 12:5ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ, ತನ್ನ ತಮ್ಮನ ಮಗನಾದ ಲೋಟನನ್ನೂ, ತಾನೂ ಲೋಟನೂ ಹಾರಾನಿನಲ್ಲಿ ಸಂಪಾದಿಸಿದ್ದ ಎಲ್ಲಾ ಸೊತ್ತನ್ನೂ, ದಾಸ ದಾಸಿಯರನ್ನೂ ತೆಗೆದುಕೊಂಡು ಕಾನಾನ್ ದೇಶಕ್ಕೆ ಬಂದನು.
    ಆದಿ 13:8ಹೀಗಿರಲು ಅಬ್ರಾಮನು ಲೋಟನಿಗೆ, “ನನಗೂ ನಿನಗೂ, ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಾಗಬಾರದು; ನಾವು ಸಹೋದರರಲ್ಲವೇ.
  • ಕಾಯಿನನು ಹೇಬೆಲನನ್ನು ಕೊಲ್ಲುತ್ತಾನೆ: “ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ?”ಆದಿ 4:8–9
    ವಚನಗಳು
    ಆದಿ 4:8–9ತರುವಾಯ ಕಾಯಿನನು ತನ್ನ ತಮ್ಮನಾದ ಹೇಬೆಲನ ಸಂಗಡ ಮಾತನಾಡಿದನು. ಅವರು ಹೊಲದಲ್ಲಿದ್ದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು. ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನಾದ ಹೇಬೆಲನು ಎಲ್ಲಿ?” ಎಂದು ಕೇಳಲು ಅವನು, “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ?” ಎಂದು ಉತ್ತರ ಕೊಟ್ಟನು.
  • ಏಸಾವನು ಅಡಿಗೆಗಾಗಿ ತನ್ನ ಚೊಚ್ಚಲತನದ ಹಕ್ಕನ್ನು ಯಾಕೋಬನಿಗೆ ಮಾರುತ್ತಾನೆಆದಿ 25:29–34
    ವಚನಗಳು
    ಆದಿ 25:29–34ಒಂದು ದಿನ ಯಾಕೋಬನು ಅಡಿಗೆ ಮಾಡುತ್ತಿರುವಾಗ ಏಸಾವನು ಕಾಡಿನಿಂದ ದಣಿದು ಬಂದು ಅವನಿಗೆ, “ನಾನು ಬಹಳ ದಣಿದು ಬಂದಿದ್ದೇನೆ; ಆ ಕೆಂಪಾದ ರುಚಿ ಪದಾರ್ಥವನ್ನು ಈಗಲೇ ತಿನ್ನುವುದಕ್ಕೆ ಕೊಡು” ಎಂದು ಕೇಳಿದನು. ಈ ಸಂಗತಿಯಿಂದ ಏಸಾವನಿಗೆ “ಎದೋಮ್” ಎಂದು ಹೆಸರಾಯಿತು. ಯಾಕೋಬನು ಅವನಿಗೆ, “ನೀನು ಮೊದಲು ನಿನ್ನ ಚೊಚ್ಚಲತನದ ಹಕ್ಕನ್ನು ನನಗೆ ಮಾರಿ ಬಿಡು” ಅನ್ನಲು. ಏಸಾವನು, “ಆಗಲಿ” ನನ್ನಂಥ ಸಾಯುವವನಿಗೆ ಚೊಚ್ಚಲತನದಿಂದ ಪ್ರಯೋಜನವೇನು ಅಂದನು. ಆಗ ಯಾಕೋಬನು ಮೊದಲು ಪ್ರಮಾಣಮಾಡು ಅಂದಾಗ ಏಸಾವನು ಪ್ರಮಾಣಮಾಡಿ ಅವನಿಗೆ ತನ್ನ ಚೊಚ್ಚಲತನದ ಹಕ್ಕನ್ನು ಕೊಟ್ಟುಬಿಟ್ಟನು. ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿ ಗುಗ್ಗರಿಯ ಪಲ್ಯವನ್ನು ಕೊಟ್ಟನು. ಏಸಾವನು ತಿಂದು ಕುಡಿದು ಎದ್ದು ಹೋದನು. ಹೀಗೆ ಅವನು ತನ್ನ ಚೊಚ್ಚಲತನದ ಹಕ್ಕನ್ನು ತಾತ್ಸಾರ ಮಾಡಿ ಬಿಟ್ಟನು.
  • ತಂದೆಯ ಮರಣದ ನಂತರ ಯಾಕೋಬನನ್ನು ಕೊಲ್ಲಬೇಕೆಂದು ಏಸಾವನು ಯೋಚಿಸುತ್ತಾನೆಆದಿ 27:41
    ವಚನಗಳು
    ಆದಿ 27:41ತಂದೆಯು ಯಾಕೋಬನಿಗೆ ಮಾಡಿದ ಆಶೀರ್ವಾದದ ನಿಮಿತ್ತ ಏಸಾವನು ಯಾಕೋಬನನ್ನು ಹಗೆಮಾಡಿ ತನ್ನ ಮನಸ್ಸಿನೊಳಗೆ, “ತಂದೆಗೋಸ್ಕರ ದುಃಖಿಸುವ ಕಾಲ ಸಮೀಪಿಸಿತು. ತರುವಾಯ ನನ್ನ ತಮ್ಮನಾದ ಯಾಕೋಬನನ್ನು ಕೊಲ್ಲುವೆನು” ಎಂದುಕೊಂಡನು.
  • ಏಸಾವನಿಗೂ ಅವನ ನಾನೂರು ಜನರಿಗೂ ಯಾಕೋಬನು ಭಯಪಡುತ್ತಾನೆಆದಿ 32:6–7
    ವಚನಗಳು
    ಆದಿ 32:6–7ತರುವಾಯ ಆ ಸೇವಕರು ಯಾಕೋಬನ ಬಳಿಗೆ ಹಿಂತಿರುಗಿ ಬಂದು, “ನಾವು ನಿನ್ನ ಅಣ್ಣನಾದ ಏಸಾವನ ಹತ್ತಿರಕ್ಕೆ ಹೋಗಿ ಬಂದಿದ್ದೇವೆ, ಅವನು ನಾನೂರು ಜನರ ಸಮೇತ ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ” ಎಂದು ಹೇಳಿದಾಗ, ಯಾಕೋಬನಿಗೆ ಬಹು ಭಯವೂ ಕಳವಳವೂ ಉಂಟಾದವು. ಅವನು ತನ್ನೊಂದಿಗಿದ್ದ ಜನರನ್ನು, ಕುರಿದನಗಳನ್ನು ಹಾಗೂ ಒಂಟೆಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಿದನು.
  • ಏಸಾವನು ಯಾಕೋಬನನ್ನು ಅಪ್ಪಿಕೊಳ್ಳಲು ಓಡಿಬರುತ್ತಾನೆ, ಇಬ್ಬರೂ ಅಳುತ್ತಾರೆಆದಿ 33:4
    ವಚನಗಳು
    ಆದಿ 33:4ಆಗ ಏಸಾವನು ಅವನನ್ನು ಎದುರುಗೊಳ್ಳುವುದಕ್ಕೆ ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವರಿಬ್ಬರೂ ಅತ್ತರು.
  • ಸಿಮೆಯೋನನೂ ಲೇವಿಯೂ ತಮ್ಮ ತಂಗಿಯಾದ ದೀನಳಿಗಾಗಿ ಮುಯ್ಯಿತೀರಿಸುತ್ತಾರೆಆದಿ 34:25, ಆದಿ 34:31
    ವಚನಗಳು
    ಆದಿ 34:25ಮೂರನೆಯ ದಿನದಲ್ಲಿ ಅವರು ಗಾಯದಿಂದ ಬಹು ಬಾಧೆಪಡುತ್ತಿರುವಾಗ ಯಾಕೋಬನ ಮಕ್ಕಳೂ, ದೀನಳ ಅಣ್ಣಂದಿರಾದ ಸಿಮೆಯೋನ್, ಲೇವಿ ಎಂಬ ಇಬ್ಬರು ಕೈಯಲ್ಲಿ ಕತ್ತಿಯನ್ನು ತೆಗೆದುಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು ಗಂಡಸರನ್ನೆಲ್ಲಾ ಕೊಂದು ಹಾಕಿದನು.
    ಆದಿ 34:31ಅದಕ್ಕೆ ಅವರು, “ನಮ್ಮ ತಂಗಿಯನ್ನು ವೇಶ್ಯೆಯಂತೆ ಉಪಯೋಗಿಸಿಕೊಂಡಿದ್ದು ಸರಿಯೇ” ಎಂದು ಕೇಳಿದರು.
  • ರೂಬೇನನು ಯೋಸೇಫನನ್ನು ಗುಂಡಿಯಿಂದ ಕಾಪಾಡಲು ಪ್ರಯತ್ನಿಸುತ್ತಾನೆಆದಿ 37:21–22, ಆದಿ 37:29
    ವಚನಗಳು
    ಆದಿ 37:21–22ರೂಬೇನನು ಈ ಮಾತನ್ನು ಕೇಳಿ, “ನಾವು ಅವನ ಪ್ರಾಣವನ್ನು ತೆಗೆಯಬಾರದು” ಎಂದು ಹೇಳಿದನು. ರೂಬೇನನು ಅವನನ್ನು ಅವರ ಕೈಯಿಂದ ತಪ್ಪಿಸಿ ತಂದೆಗೆ ತಿರುಗಿ ಒಪ್ಪಿಸಬೇಕೆಂದು ನೆನಸಿ ಅವರಿಗೆ, “ಇವನ ರಕ್ತ ಸುರಿಸಬೇಡಿರಿ, ಅವನನ್ನು ಈ ಕಾಡಿನಲ್ಲಿರುವ ಈ ಗುಂಡಿಯೊಳಗೆ ಹಾಕಿರಿ, ಅವನ ಮೇಲೆ ಕೈಹಾಕಬೇಡಿರಿ” ಎಂದು ಹೇಳಿದನು.
    ಆದಿ 37:29ರೂಬೇನನು ತಿರುಗಿ ಆ ಗುಂಡಿಯ ಹತ್ತಿರಕ್ಕೆ ಬಂದು ಅದರಲ್ಲಿ ಯೋಸೇಫನು ಇಲ್ಲದೆ ಇರುವುದನ್ನು ಕಂಡು ತನ್ನ ಬಟ್ಟೆಗಳನ್ನು ಹರಿದುಕೊಂಡನು.
  • ಯೆಹೂದನು: “ಅವನನ್ನು ಆ ಇಷ್ಮಾಯೇಲ್ಯರಿಗೆ ಮಾರಿಬಿಡೋಣ” … “ಅವನು ನಮ್ಮ ಒಡಹುಟ್ಟಿದ ತಮ್ಮನಲ್ಲವೇ”ಆದಿ 37:26–27
    ವಚನಗಳು
    ಆದಿ 37:26–27ಆಗ ಯೆಹೂದನು ತನ್ನ ಅಣ್ಣತಮ್ಮಂದಿರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಹಾಕಿ ಅವನ ರಕ್ತವನ್ನು ಮರೆಮಾಡಿದರೆ ಲಾಭವೇನು? ಬನ್ನಿರಿ, ಅವನನ್ನು ಆ ಇಷ್ಮಾಯೇಲ್ಯರಿಗೆ ಮಾರಿಬಿಡೋಣ. ನಾವು ಅವನ ಮೇಲೆ ಕೈಹಾಕಬಾರದು. ಅವನು ನಮ್ಮ ಒಡಹುಟ್ಟಿದ ತಮ್ಮನಲ್ಲವೇ” ಎಂದು ಹೇಳಿದನು. ಆ ಮಾತಿಗೆ ಅವನ ಅಣ್ಣಂದಿರು ಒಪ್ಪಿದರು.
  • “ತಮ್ಮ ಸೇವಕರಾದ ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರು” … “ಮತ್ತೊಬ್ಬನು ಇಲ್ಲ”ಆದಿ 42:13
    ವಚನಗಳು
    ಆದಿ 42:13ಅದಕ್ಕೆ ಅವರು, “ತಮ್ಮ ಸೇವಕರಾದ ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರು, ನಾವು ಕಾನಾನ್ ದೇಶದವರು, ಒಬ್ಬ ತಂದೆಯ ಮಕ್ಕಳು. ನಮ್ಮಲ್ಲಿ ಚಿಕ್ಕವನು ತಂದೆಯ ಬಳಿಯಲ್ಲಿದ್ದಾನೆ. ಮತ್ತೊಬ್ಬನು ಇಲ್ಲ” ಎಂದರು.
  • ಬೆನ್ಯಾಮೀನನನ್ನು ಕಂಡು ಯೋಸೇಫನು ಅಳುವುದಕ್ಕಾಗಿ ಏಕಾಂತ ಕೋಣೆಗೆ ಹೋಗುತ್ತಾನೆಆದಿ 43:30
    ವಚನಗಳು
    ಆದಿ 43:30ಯೋಸೇಫನು ಅವಸರವಾಗಿ ಎದ್ದು ತನ್ನ ಕೋಣೆಯೊಳಗೆ ಹೋದನು. ಏಕೆಂದರೆ ತನ್ನ ಕರಳು ತಮ್ಮನ ಮೇಲೆ ಮರುಗಿದ್ದರಿಂದ ಅವನು ತನ್ನ ಕೋಣೆಯೊಳಗೆ ಹೋಗಿ ಅಲ್ಲಿ ಅತ್ತನು.
  • ಬೆನ್ಯಾಮೀನನಿಗೆ ಬದಲಾಗಿ ತಾನು ದಾಸನಾಗಿ ಉಳಿಯುವುದಾಗಿ ಯೆಹೂದನು ಹೇಳುತ್ತಾನೆಆದಿ 44:33–34
    ವಚನಗಳು
    ಆದಿ 44:33–34“ಆದುದರಿಂದ ಸೇವಕನಾದ ನಾನು ಈ ಹುಡುಗನ ಬದಲಾಗಿ ಸ್ವಾಮಿಗೆ ಗುಲಾಮನಾಗುವಂತೆಯೂ ಇವನು ತನ್ನ ಅಣ್ಣಂದಿರ ಸಂಗಡ ಹೋಗುವಂತೆಯೂ ಅನುಗ್ರಹ ಮಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ಹೋಗಲಿ? ಹೋದರೆ, ನನ್ನ ತಂದೆಗೆ ಆಗುವ ಆಘಾತ, ದುಃಖ ನನ್ನಿಂದ ನೋಡಲಾಗದು” ಎಂದನು.
  • “ಐಗುಪ್ತ ದೇಶಕ್ಕೆ ಮಾರಿಬಿಟ್ಟ ನಿಮ್ಮ ತಮ್ಮನಾದ ಯೋಸೇಫನು ನಾನೇ”ಆದಿ 45:3–4
    ವಚನಗಳು
    ಆದಿ 45:3–4ಅವನು, “ತನ್ನ ಅಣ್ಣತಮ್ಮಂದಿರಿಗೆ ನಾನು ಯೋಸೇಫನು, ನನ್ನ ತಂದೆ ಇನ್ನೂ ಇದ್ದಾನೋ?” ಎಂದು ಹೇಳಲು ಅವರು ಅವನ ಮುಂದೆ ತತ್ತರಗೊಂಡು ಉತ್ತರಕೊಡಲಾರದೆ ಹೋದರು. ಯೋಸೇಫನು, “ನನ್ನ ಹತ್ತಿರಕ್ಕೆ ದಯಮಾಡಿ ಬನ್ನಿರಿ” ಎಂದು ಅಣ್ಣಂದಿರಿಗೆ ಹೇಳಲು ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ “ಐಗುಪ್ತ ದೇಶಕ್ಕೆ ಮಾರಿಬಿಟ್ಟ ನಿಮ್ಮ ತಮ್ಮನಾದ ಯೋಸೇಫನು ನಾನೇ.
  • ಯೋಸೇಫನು ಬೆನ್ಯಾಮೀನನನ್ನು ಅಪ್ಪಿಕೊಂಡು ತನ್ನ ಅಣ್ಣಂದಿರೆಲ್ಲರಿಗೂ ಮುದ್ದಿಡುತ್ತಾನೆಆದಿ 45:14–15
    ವಚನಗಳು
    ಆದಿ 45:14–15ತನ್ನ ತಮ್ಮನಾದ ಬೆನ್ಯಾಮೀನನ ಕೊರಳನ್ನು ಅಪ್ಪಿಕೊಂಡು ಅತ್ತನು. ಬೆನ್ಯಾಮೀನನೂ ಅವನ ಕೊರಳನ್ನು ಅಪ್ಪಿಕೊಂಡು ಅತ್ತನು. ಇದಲ್ಲದೆ ಅವನು ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವರು ಅವನ ಸಂಗಡ ಮಾತನಾಡಿದರು.
  • ಯೋಸೇಫನು: “ನೀವು ದಾರಿಯಲ್ಲಿ ಜಗಳಮಾಡಬೇಡಿರಿ”ಆದಿ 45:24
    ವಚನಗಳು
    ಆದಿ 45:24ಆಗ ತನ್ನ ಅಣ್ಣತಮ್ಮಂದಿರಿಗೆ, “ನೀವು ದಾರಿಯಲ್ಲಿ ಜಗಳಮಾಡಬೇಡಿರಿ” ಎಂದು ಬುದ್ಧಿ ಹೇಳಿ ಅವರಿಗೆ ಹೋಗುವುದಕ್ಕೆ ಅಪ್ಪಣೆಕೊಟ್ಟನು. ಅವರು ಹೊರಟು ಹೋದರು.
  • ಯಾಕೋಬನ ಮರಣದ ನಂತರ ಹೆದರಿದ ಅಣ್ಣಂದಿರಿಗೆ ಯೋಸೇಫನು ಧೈರ್ಯ ತುಂಬುತ್ತಾನೆಆದಿ 50:15–21
    ವಚನಗಳು
    ಆದಿ 50:15–21ಯೋಸೇಫನ ಅಣ್ಣತಮ್ಮಂದಿರು ತಂದೆ ಸತ್ತದ್ದನ್ನು ಕಂಡು, “ಒಂದು ವೇಳೆ ಯೋಸೇಫನು ನಮ್ಮನ್ನು ದ್ವೇಷಿಸಿ ನಾವು ಅವನಿಗೆ ಮಾಡಿದ ಎಲ್ಲಾ ಕೇಡಿಗೆ ಪ್ರತಿಯಾಗಿ ನಮಗೆ ಶಿಕ್ಷೆಯನ್ನು ಕೊಡಬಹುದು” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಅವರು ಯೋಸೇಫನಿಗೆ, ನಿನ್ನ ತಂದೆಯು ಸಾಯುವುದಕ್ಕಿಂತ ಮೊದಲು ನಮಗೆ ಅಪ್ಪಣೆ ಮಾಡಿದ್ದೇನೆಂದರೆ, “ನಿನ್ನ ಅಣ್ಣಂದಿರಾದ ನಾವು ನಿನಗೆ ಕೇಡು ಮಾಡಿದ್ದು ನಿಜವೇ. ಆದರೂ ನಮ್ಮ ತಂದೆಯ ದೇವರನ್ನು ಆರಾಧಿಸುವವರು, ಸೇವಕರೂ ಆದ ನಮ್ಮ ಅಪರಾಧವನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇವೆ” ಎಂದು ಯೋಸೇಫನ ಬಳಿ ಬೇಡಿಕೊಳ್ಳಿರಿ ಎಂದು ಹೇಳಿದರು. ಯೋಸೇಫನು ಈ ಮಾತುಗಳನ್ನು ಕೇಳಿ ಕಣ್ಣೀರು ಸುರಿಸಿದನು. ಇದಲ್ಲದೆ ಅಣ್ಣಂದಿರು ತಾವೇ ಬಂದು ಅವನ ಮುಂದೆ ಅಡ್ಡಬಿದ್ದು, “ಇಗೋ ನಾವು ನಿನಗೆ ಗುಲಾಮರು” ಎಂದರು. ಯೋಸೇಫನು ಅವರಿಗೆ, “ಹೆದರಬೇಡಿರಿ, ನಾನೇನು ದೇವರ ಸ್ಥಾನದಲ್ಲಿ ಇದ್ದೇನೋ? ನೀವಂತೂ ನನಗೆ ಕೇಡಾಗಬೇಕೆಂದು ಎಣಿಸಿದಿರಿ. ಆದರೆ ದೇವರು ನನ್ನನ್ನು ಮೇಲಾಗಬೇಕೆಂದು ಸಂಕಲ್ಪಿಸಿದನು; ಆದುದರಿಂದ ಇಂದು ನೀವು ಕಾಣುವಂತೆ, ಅನೇಕ ಜನರ ಪ್ರಾಣವು ಸಂರಕ್ಷಿಸಲ್ಪಟ್ಟಿತ್ತು” ಎಂದನು. ಆದುದರಿಂದ ನೀವು ಸ್ವಲ್ಪವೂ ಭಯಪಡಬೇಡಿರಿ. ನಾನು ನಿಮ್ಮನ್ನೂ, ನಿಮಗೆ ಸೇರಿದವರೆಲ್ಲರನ್ನೂ ಪೋಷಿಸುವೆನು. ಎಂದು ಹೇಳಿ ಅವರನ್ನು ಸಂತೈಸಿ ಅವರ ಸಂಗಡ ಪ್ರೀತಿಯಿಂದ ಮಾತನಾಡಿದನು.
  • ಆರೋನನು ತನ್ನ ತಮ್ಮನಾದ ಮೋಶೆಯ ಪರವಾಗಿ ಜನರೊಂದಿಗೆ ಮಾತನಾಡಬೇಕುವಿಮೋ 4:14–16
    ವಚನಗಳು
    ವಿಮೋ 4:14–16ಆಗ ಯೆಹೋವನು ಮೋಶೆಯ ಮೇಲೆ ಕೋಪಗೊಂಡು ಅವನಿಗೆ, “ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡಬಲ್ಲವನೆಂದು ನನಗೆ ತಿಳಿದಿದೆ. ಅವನೇ ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿದಾಗ ಅವನು ತನ್ನ ಹೃದಯದಲ್ಲಿ ಸಂತೋಷಿಸುವನು. ನೀನು ಅವನ ಸಂಗಡ ಮಾತನಾಡಿ ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಿಕೊಡು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀವು ಮಾಡಬೇಕಾದದ್ದನ್ನು ಬೋಧಿಸುವೆನು. ಅವನು ನಿನಗೆ ಬದಲಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಂತಿರುವನು. ನೀನು ಅವನಿಗೆ ದೇವರಂತಿರುವಿ.
  • ಅಬೀಮೆಲೆಕನು ತನ್ನ ಸಹೋದರರನ್ನು ಕೊಲ್ಲುತ್ತಾನೆ; ಕಿರಿಯವನಾದ ಯೋತಾಮನು ಅಡಗಿಕೊಳ್ಳುತ್ತಾನೆನ್ಯಾಯ 9:5
    ವಚನಗಳು
    ನ್ಯಾಯ 9:5ಅವರ ನಾಯಕನಾಗಿ ಹೊರಟು, ಒಫ್ರದಲ್ಲಿದ್ದ ತನ್ನ ತಂದೆಯಾದ ಯೆರುಬ್ಬಾಳನ ಮನೆಗೆ ಹೋಗಿ, ಅವನ ಎಪ್ಪತ್ತು ಮಂದಿ ಮಕ್ಕಳನ್ನು ಹಿಡಿದು, ಒಂದೇ ಬಂಡೆಯ ಮೇಲೆ ಕೊಲ್ಲಿಸಿದನು. ಆದರೆ ಕಿರಿಯವನಾದ ಯೋತಾಮನೆಂಬವನು ಅಡಗಿಕೊಂಡು ಉಳಿದನು.
  • ಯೆಪ್ತಾಹನ ಸಹೋದರರು ಅವನನ್ನು ತಂದೆಯ ಮನೆಯಿಂದ ಹೊರಡಿಸುತ್ತಾರೆನ್ಯಾಯ 11:2–3
    ವಚನಗಳು
    ನ್ಯಾಯ 11:2–3ಗಿಲ್ಯಾದನಿಗೆ ಹೆಂಡತಿಗೂ ಮಕ್ಕಳು ಹುಟ್ಟಿದ್ದರು. ಇವರು ದೊಡ್ಡವರಾದ ಮೇಲೆ ಯೆಪ್ತಾಹನಿಗೆ, “ನೀನು ಪರಸ್ತ್ರೀಯಿಂದ ಹುಟ್ಟಿದವನು; ಆದುದರಿಂದ ನಿನಗೆ ನಮ್ಮ ತಂದೆಯ ಮನೆಯಲ್ಲಿ ಬಾಧ್ಯತೆ ಸಿಕ್ಕಲಾರದು” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು. ಅವನು ತನ್ನ ಸಹೋದರರನ್ನು ಬಿಟ್ಟು ಟೋಬ್ ದೇಶಕ್ಕೆ ಹೋಗಲು ಅಲ್ಲಿನ ಕಾಕಪೋಕರು ಕೂಡಿ ಅವನನ್ನು ಹಿಂಬಾಲಿಸಿದರು.
  • ಇಷಯನ ಮಕ್ಕಳು: ದಾವೀದನು ಏಳನೆಯವನು1 ಪೂರ್ವ 2:13–15
    ವಚನಗಳು
    1 ಪೂರ್ವ 2:13–15ಇಷಯನ ಚೊಚ್ಚಲ ಮಗನು ಎಲೀಯಾಬ್, ಎರಡನೆಯ ಮಗ ಅಬೀನಾದಾಬ್, ಮೂರನೆಯವನು ಶಿಮ್ಮ, ನಾಲ್ಕನೆಯವನು ನೆತನೇಲ್, ಐದನೆಯವನು ರದ್ದೈ. ಆರನೆಯವನು ಓಚೆಮ್, ಏಳನೆಯವನು ದಾವೀದ್.
  • ಹಿರಿಯವನಾದ ಎಲೀಯಾಬನು ತನ್ನ ತಮ್ಮನಾದ ದಾವೀದನನ್ನು ಗದರಿಸುತ್ತಾನೆ1 ಸಮು 17:28
    ವಚನಗಳು
    1 ಸಮು 17:28ದಾವೀದನು ಜನರ ಸಂಗಡ ಹೀಗೆ ಮಾತನಾಡುತ್ತಿರುವುದನ್ನು ಅವನ ಹಿರಿಯ ಅಣ್ಣನಾದ ಎಲೀಯಾಬನು ಕೇಳಿ ಕೋಪಗೊಂಡು, “ನೀನು ಇಲ್ಲಿಗೆ ಬಂದದ್ದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದಿರುವೆ. ನಿನ್ನ ಸೊಕ್ಕು, ತುಂಟತನವು ನನಗೆ ಗೊತ್ತಿದೆ. ನೀನು ಯುದ್ಧವನ್ನು ನೋಡುವುದಕ್ಕೆ ಬಂದಿದ್ದೀ” ಎಂದು ಅವನನ್ನು ಗದರಿಸಿದನು.
  • ಚೆರೂಯಳ ಮೂವರು ಮಕ್ಕಳಾದ ಯೋವಾಬ, ಅಬೀಷೈ ಮತ್ತು ಅಸಾಹೇಲ2 ಸಮು 2:18
    ವಚನಗಳು
    2 ಸಮು 2:18ಚೆರೂಯಳ ಮೂರು ಮಂದಿ ಮಕ್ಕಳಾದ ಯೋವಾಬ, ಅಬೀಷೈ, ಅಸಾಹೇಲ ಎಂಬುವರು ಅಲ್ಲಿಗೆ ಬಂದಿದ್ದರು. ಅಸಾಹೇಲನು ಅಡವಿಯ ಜಿಂಕೆಯಂತೆ ಚುರುಕು ಕಾಲಿನವನಾಗಿದ್ದನು.
  • ತಮ್ಮ ತಂಗಿಯಾದ ತಾಮಾರಳನ್ನು ಅವಮಾನಪಡಿಸಿದ್ದಕ್ಕಾಗಿ ಅಬ್ಷಾಲೋಮನು ಅಮ್ನೋನನನ್ನು ಕೊಲ್ಲಿಸುತ್ತಾನೆ2 ಸಮು 13:22, 2 ಸಮು 13:28–29
    ವಚನಗಳು
    2 ಸಮು 13:22ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೆಯ ಮಾತುಗಳನ್ನಾಗಲಿ ಕೆಟ್ಟ ಮಾತುಗಳನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.
    2 ಸಮು 13:28–29ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ, “ಕೇಳಿರಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದ ಕೂಡಲೆ ಅವನನ್ನು ಹೊಡೆದು ಕೊಂದುಹಾಕಿರಿ. ಹೆದರಬೇಡಿರಿ, ನಿಮಗೆ ಆಜ್ಞಾಪಿಸಿದವನು ನಾನಲ್ಲವೇ? ಧೈರ್ಯದಿಂದಿರಿ ಮತ್ತು ಶೂರರಾಗಿರಿ” ಎಂದು ಹೇಳಿದನು. ಅಬ್ಷಾಲೋಮನ ಆಳುಗಳು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದರು. ರಾಜಪುತ್ರರೆಲ್ಲರೂ ತಮ್ಮ ತಮ್ಮ ಹೇಸರಗತ್ತೆಗಳನ್ನು ಹತ್ತಿ ಓಡಿಹೋದರು.
  • ಸೊಲೊಮೋನನು ತನ್ನ ಅಣ್ಣನಾದ ಅದೋನೀಯನನ್ನು ಕೊಲ್ಲಿಸುತ್ತಾನೆ1 ಅರಸು 2:22–25
    ವಚನಗಳು
    1 ಅರಸು 2:22–25ಆಗ ಅರಸನಾದ ಸೊಲೊಮೋನನು ತನ್ನ ತಾಯಿಗೆ, “ಅದೋನೀಯನಿಗೋಸ್ಕರ ಶೂನೇಮ್ಯಳಾದ ಅಬೀಷಗ್ ಎಂಬಾಕೆಯನ್ನು ಮಾತ್ರ ಕೇಳುವುದೇಕೆ ಅವನಿಗೆ ರಾಜ್ಯವನ್ನೂ ಕೊಡಬೇಕೆಂದು ಕೇಳು. ಅವನು ನನ್ನ ಅಣ್ಣನಲ್ಲವೇ. ಯಾಜಕನಾದ ಎಬ್ಯಾತಾರನೂ ಚೆರೂಯಳ ಮಗನಾದ ಯೋವಾಬನೂ ಅವನ ಪಕ್ಷದವರಾಗಿದ್ದಾರೆ” ಎಂದು ಉತ್ತರಕೊಟ್ಟನು. ಇದಲ್ಲದೆ ಅರಸನಾದ ಸೊಲೊಮೋನನು, “ಯೆಹೋವನಾಣೆ, ಅದೋನೀಯನ ಈ ಮಾತಿಗೋಸ್ಕರ ನಾನು ಅವನನ್ನು ಮರಣಕ್ಕೆ ಪಾತ್ರನೆಂದು ಎಣಿಸದಿದ್ದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ. ನನ್ನ ತಂದೆಯಾದ ದಾವೀದನ ಸಿಂಹಾಸನದ ಮೇಲೆ ನನ್ನನ್ನು ಕುಳ್ಳಿರಿಸಿ, ಬಲಪಡಿಸಿ, ತಾನು ವಾಗ್ದಾನ ಮಾಡಿದಂತೆ ನನಗೆ ಮನೆಯನ್ನು ಕಟ್ಟಿದ ಯೆಹೋವನಾಣೆ, ಅದೋನೀಯನು ಈ ಹೊತ್ತೇ ಸಾಯಬೇಕು” ಎಂದು ಹೇಳಿದನು. ಆಮೇಲೆ ಅರಸನು ಯೆಹೋಯಾದಾವನ ಮಗನಾದ ಬೆನಾಯನಿಗೆ ಆಜ್ಞಾಪಿಸಿದ್ದರಿಂದ ಅವನು ಹೋಗಿ ಅದೋನೀಯನನ್ನು ಹೊಡೆದು ಕೊಂದುಹಾಕಿದನು.
  • ಯೆಹೋರಾಮನು ತನ್ನ ತಮ್ಮಂದಿರೆಲ್ಲರನ್ನೂ ಕತ್ತಿಯಿಂದ ಕೊಲ್ಲಿಸುತ್ತಾನೆ2 ಪೂರ್ವ 21:4
    ವಚನಗಳು
    2 ಪೂರ್ವ 21:4ಯೆಹೋರಾಮನು ತನ್ನ ತಂದೆಯ ರಾಜ್ಯವನ್ನು ಪಡೆದುಕೊಂಡು ತನ್ನ ಆಳ್ವಿಕೆಯನ್ನು ಸ್ಥಿರಗೊಳಿಸಿಕೊಂಡ ಮೇಲೆ, ತನ್ನ ಎಲ್ಲಾ ಸಹೋದರರನ್ನೂ ಕೆಲವು ಮಂದಿ ಇಸ್ರಾಯೇಲ್ ಪ್ರಧಾನರನ್ನೂ ಕತ್ತಿಯಿಂದ ಸಂಹರಿಸಿದನು.
  • ಗಲಿಲಾಯ ಸಮುದ್ರದ ಬಳಿ ಬೆಸ್ತರಾದ ಎರಡು ಜೋಡಿ ಅಣ್ಣತಮ್ಮಂದಿರುಮತ್ತಾ 4:18, ಮತ್ತಾ 4:21
    ವಚನಗಳು
    ಮತ್ತಾ 4:18ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದು ಹೋಗುವಾಗ ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ಸಹೋದರನಾದ ಅಂದ್ರೆಯನು ಸಮುದ್ರದಲ್ಲಿ ಬಲೆಬೀಸುವುದನ್ನು ಕಂಡನು; ಅವರು ಬೆಸ್ತರಾಗಿದ್ದರು.
    ಮತ್ತಾ 4:21ಯೇಸು ಅಲ್ಲಿಂದ ಮುಂದೆ ಹೋಗುತ್ತಿರುವಾಗ ಇನ್ನಿಬ್ಬರು ಅಣ್ಣ ತಮ್ಮಂದಿರನ್ನು ಅಂದರೆ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನ್ನೂ ಕಂಡನು; ಇವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಆತನು ಅವರನ್ನು ಕರೆದನು.
  • ಅಂದ್ರೆಯನು ಮೊದಲು ತನ್ನ ಅಣ್ಣನಾದ ಸೀಮೋನನನ್ನು ಕಂಡು ಅವನನ್ನು ಯೇಸುವಿನ ಬಳಿಗೆ ಕರೆತರುತ್ತಾನೆಯೋಹಾ 1:40–42
    ವಚನಗಳು
    ಯೋಹಾ 1:40–42ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ ಆ ಇಬ್ಬರಲ್ಲಿ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಒಬ್ಬನು. ಇವನು ಮೊದಲು ತನ್ನ ಅಣ್ಣನಾದ ಸೀಮೋನನನ್ನು ಕಂಡು ಅವನಿಗೆ “ನಾವು ಮೆಸ್ಸೀಯನನ್ನು ಕಂಡುಕೊಂಡೆವು” (ಮೆಸ್ಸೀಯನು ಎಂದರೆ ಕ್ರಿಸ್ತನು) ಎಂದು ಹೇಳಿ, ಅವನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಅವನನ್ನು ನೋಡಿ “ನೀನು ಯೋಹಾನನ ಮಗನಾದ ಸೀಮೋನನು. ಇನ್ನು ಮೇಲೆ ನೀನು ‘ಕೇಫ’ ಎಂದು ಕರೆಯಲ್ಪಡುವಿ” ಎಂದು ಹೇಳಿದನು. (ಕೇಫ ಎಂದರೆ ಪೇತ್ರ ಇಲ್ಲವೆ ಬಂಡೆ ಎಂದು ಅರ್ಥ)
  • ಮಾರ್ಥಳೂ ಮರಿಯಳೂ: “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ”ಯೋಹಾ 11:21, ಯೋಹಾ 11:32
    ವಚನಗಳು
    ಯೋಹಾ 11:21ಆಗ ಮಾರ್ಥಳು ಯೇಸುವಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ.
    ಯೋಹಾ 11:32ಮರಿಯಳು ಯೇಸು ಇದ್ದಲ್ಲಿಗೆ ಬಂದು ಆತನನ್ನು ಕಂಡು ಆತನ ಪಾದಗಳಿಗೆ ಅಡ್ಡಬಿದ್ದು ಆತನಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದಳು.
  • ಯೇಸುವಿನ ತಮ್ಮಂದಿರಾದ ಯಾಕೋಬ, ಯೋಸೆ, ಯೂದ ಮತ್ತು ಸೀಮೋನಮಾರ್ಕ 6:3
    ವಚನಗಳು
    ಮಾರ್ಕ 6:3ಈತನು ಆ ಬಡಗಿಯಲ್ಲವೇ? ಈತನು ಮರಿಯಳ ಮಗನಲ್ಲವೇ? ಈತನು ಯಾಕೋಬ, ಯೋಸೆ, ಯೂದ, ಸೀಮೋನ ಇವರ ಅಣ್ಣನಲ್ಲವೇ? ಈತನ ತಂಗಿಯರು ಇಲ್ಲಿ ನಮ್ಮಲ್ಲಿಯೇ ಇದ್ದಾರಲ್ಲವೇ?” ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು.
  • ಆತನ ತಮ್ಮಂದಿರು ನಂಬಲಿಲ್ಲ, ಆದರೆ ಆ ಮೇಲೆ ಶಿಷ್ಯರೊಂದಿಗೆ ಪ್ರಾರ್ಥಿಸಿದರುಯೋಹಾ 7:5, ಅ. ಕೃ 1:14
    ವಚನಗಳು
    ಯೋಹಾ 7:5ಏಕೆಂದರೆ ಆತನ ಸಹೋದರರು ಸಹ ಆತನನ್ನು ನಂಬಲಿಲ್ಲ.
    ಅ. ಕೃ 1:14ಅಲ್ಲಿ ಕೆಲವು ಮಂದಿ ಸ್ತ್ರೀಯರೂ, ಯೇಸುವಿನ ತಾಯಿಯಾದ ಮರಿಯಳೂ, ಆತನ ತಮ್ಮಂದಿರೂ ಅವರ ಸಂಗಡ ಇದ್ದರು, ಇವರೆಲ್ಲರೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿದ್ದರು.

ಧರ್ಮಶಾಸ್ತ್ರದಲ್ಲಿಯೂ ನುಡಿಗಳಲ್ಲಿಯೂ

  • ನಿನ್ನ ಸಹೋದರನ ಮೇಲೆ ಹಗೆಯನ್ನು ಇಟ್ಟುಕೊಳ್ಳಬೇಡಯಾಜ 19:17
    ವಚನಗಳು
    ಯಾಜ 19:17“‘ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು. ನೆರೆಯವನ ದೋಷಕ್ಕೆ ನೀವು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ತಿಳಿಸಲೇಬೇಕು.
  • ದಾರಿತಪ್ಪಿದ ನಿನ್ನ ಸಹೋದರನ ಎತ್ತನ್ನಾಗಲಿ ಕುರಿಯನ್ನಾಗಲಿ ಹಿಂದಿರುಗಿಸುಧರ್ಮೋ 22:1–2
    ವಚನಗಳು
    ಧರ್ಮೋ 22:1–2ಸ್ವದೇಶದವನ ಎತ್ತಾಗಲಿ ಅಥವಾ ಕುರಿಯಾಗಲಿ ದಾರಿ ತಪ್ಪಿ ಹೋಗಿರುವುದನ್ನು ನೀವು ನೋಡಿಯೂ ನೋಡದಂತೆ ಅದನ್ನು ಬಿಟ್ಟು ಹೋಗಬಾರದು; ಅದನ್ನು ಅಟ್ಟಿಸಿಕೊಂಡು ಹೋಗಿ ಅವನಿಗೆ ಕೊಡಲೇಬೇಕು. ಅವನು ನಿಮಗೆ ದೂರವಾಗಿದ್ದರೆ ಇಲ್ಲವೆ ಅವನು ಯಾರೋ ಎಂದು ನಿಮಗೆ ತಿಳಿಯದೆ ಹೋದರೆ, ಆ ಪಶುವನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು. ಅವನು ಅದನ್ನು ಹುಡುಕುತ್ತಾ ಬಂದಾಗ ನೀವು ಅದನ್ನು ಅವನಿಗೆ ಹಿಂತಿರುಗಿ ಕೊಡಬೇಕು.
  • ಸಹೋದರರು ಐಕ್ಯದಿಂದ ಒಟ್ಟಾಗಿ ವಾಸಿಸುವುದು ಎಷ್ಟೋ ಒಳ್ಳೆಯದುಕೀರ್ತ 133:1
    ವಚನಗಳು
    ಕೀರ್ತ 133:1ಯಾತ್ರಾಗೀತೆ; ದಾವೀದನದು. ಆಹಾ, ಸಹೋದರರು ಒಂದಾಗಿರುವುದು, ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು!
  • ನೋಯಿಸಲ್ಪಟ್ಟ ಸಹೋದರನನ್ನು ಒಲಿಸುವುದು ಕೋಟೆಯುಳ್ಳ ಪಟ್ಟಣವನ್ನು ಗೆಲ್ಲುವುದಕ್ಕಿಂತ ಕಷ್ಟಜ್ಞಾನೋ 18:19
    ವಚನಗಳು
    ಜ್ಞಾನೋ 18:19ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂತ ಅನ್ಯಾಯಹೊಂದಿದ ಸಹೋದರನನ್ನು ಗೆಲ್ಲುವುದು ಅಸಾಧ್ಯ, ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ.
  • ಮೊದಲು ನಿನ್ನ ಸಹೋದರನೊಂದಿಗೆ ಸಂಧಾನಮಾಡಿಕೋ, ಆ ಮೇಲೆ ನಿನ್ನ ಕಾಣಿಕೆಯನ್ನು ಅರ್ಪಿಸುಮತ್ತಾ 5:23–24
    ವಚನಗಳು
    ಮತ್ತಾ 5:23–24ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟು ಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು