ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 26 ಏಪ್ರಿಲ್
ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 13 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 26 ಏಪ್ರಿಲ್ 2027
ಸೋಮವಾರ · ಪವಿತ್ರ ವಾರ
ಹಬ್ಬಗಳು ಮತ್ತು ಸಂತರು
ಮಹಾ ಪವಿತ್ರ ಸೋಮವಾರ
ಮಹಾ ಉಪವಾಸ ಕಾಲ
ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸುವಾರ್ತೆ (ಮದಲಿಂಗನ ಉದಯಕಾಲದ ಪ್ರಾರ್ಥನೆ)
18ಬೆಳಗ್ಗೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಬರುತ್ತಿರುವಾಗ ಹಸಿದಿದ್ದನು. 19ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು ಅದರ ಹತ್ತಿರಕ್ಕೆ ಹೋಗಿ ಅದರಲ್ಲಿ ಬರೀ ಎಲೆಗಳು ಮಾತ್ರ ಇರುವುದನ್ನು ಕಂಡು ಅದಕ್ಕೆ, “ಇನ್ನು ಮೇಲೆ ನಿನ್ನಲ್ಲಿ ಎಂದೆಂದಿಗೂ ಫಲವು ಫಲಿಸದೆ ಹೋಗಲಿ” ಎಂದು ಹೇಳಿದನು. ಆ ಕ್ಷಣವೇ ಆ ಅಂಜೂರದ ಮರವು ಒಣಗಿಹೋಯಿತು. 20ಶಿಷ್ಯರು ಅದನ್ನು ನೋಡಿ ಬೆರಗಾಗಿ, “ಈ ಅಂಜೂರದ ಮರವು ಒಂದು ಕ್ಷಣದಲ್ಲೇ ಒಣಗಿಹೋಯಿತಲ್ಲಾ” ಎಂದು ಆಶ್ಚರ್ಯಗೊಂಡರು. 21ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನೀವು ಸಂಶಯಪಡದೆ ನಂಬಿದರೆ ಈ ಅಂಜೂರದ ಮರಕ್ಕೆ ಮಾಡಿದಂಥದನ್ನು ನೀವು ಮಾಡುವಿರಿ ಮಾತ್ರವಲ್ಲದೆ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೆ ಅದೂ ಆಗುವುದು. 22ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ” ಅಂದನು. 23ತರುವಾಯ ಯೇಸು ದೇವಾಲಯಕ್ಕೆ ಬಂದು ಬೋಧಿಸುತ್ತಿರುವಾಗ ಮುಖ್ಯಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು, “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಕೇಳಿದರು. 24ಯೇಸು ಅವರಿಗೆ ಹೇಳಿದ್ದೇನೆಂದರೆ, “ನಾನೂ ಸಹ ನಿಮ್ಮನ್ನು ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ನನಗೆ ಉತ್ತರಿಸಿದರೆ ಆಗ ನಾನು ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ. 25ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂದಿತು ಪರಲೋಕದಿಂದಲೋ ಅಥವಾ ಮನುಷ್ಯರಿಂದಲೋ?” ಅಂದನು. ಆಗ ಅವರು, “‘ಪರಲೋಕದಿಂದ ಬಂದಿತೆಂದು’ ನಾವು ಹೇಳಿದರೆ, ‘ಹಾಗಾದರೆ ನೀವು ಅವನನ್ನು ಏಕೆ ನಂಬಲಿಲ್ಲ’ ಎಂದು ನಮಗೆ ಕೇಳಿಯಾನು; 26‘ಮನುಷ್ಯರಿಂದ ಬಂದಿತೆಂದು’ ಹೇಳಿದರೆ, ನಮಗೆ ಜನರ ಭಯವಿದೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಒಪ್ಪಿಕೊಂಡಿದ್ದಾರಲ್ಲಾ” ಎಂಬುದಾಗಿ ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. 27ಅನಂತರ ಅವರು, “ನಾವರಿಯೆವು” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಆತನು ಅವರಿಗೆ, “ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೋ ಅದನ್ನು ನಾನು ಸಹ ನಿಮಗೆ ಹೇಳುವುದಿಲ್ಲ. 28ಆದರೆ ನಿಮಗೆ ಹೇಗೆ ತೋರುತ್ತದೆ? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವನು ಮೊದಲನೆಯವನ ಬಳಿಗೆ ಬಂದು, ‘ಮಗನೇ, ನೀನು ಹೋಗಿ ಈ ದಿನ ದ್ರಾಕ್ಷಾತೋಟದಲ್ಲಿ ಕೆಲಸ ಮಾಡು’ ಎಂದು ಹೇಳಲು 29ಅವನು ಪ್ರತ್ಯುತ್ತರವಾಗಿ, ‘ನಾನು ಹೋಗುವುದಿಲ್ಲವೆಂದು’ ಹೇಳಿದ್ದಾಗ್ಯೂ ತರುವಾಯ ತನ್ನ ಮನಸ್ಸನ್ನು ಬದಲಿಸಿ, ತೋಟಕ್ಕೆ ಹೋದನು. 30ಆಮೇಲೆ ಎರಡನೆಯವನ ಬಳಿಗೆ ಬಂದು ಅದೇ ಮಾತನ್ನು ಹೇಳಿದಾಗ ಅವನು, ‘ನಾನು ಹೋಗುತ್ತೇನಪ್ಪಾ’ ಎಂದು ಹೇಳಿದರೂ ಅವನು ಹೋಗಲೇ ಇಲ್ಲ. 31ಅವರಿಬ್ಬರಲ್ಲಿ ತಂದೆಯ ಚಿತ್ತದಂತೆ ನಡೆದವನು ಯಾರು? ಎಂದು ಕೇಳಿದ್ದಕ್ಕೆ ಅವರು, ‘ಮೊಲನೆಯವನೇ’” ಅಂದರು. ಆಗ ಯೇಸು ಅವರಿಗೆ, ಸುಂಕದವರೂ, ವೇಶ್ಯೆಯರೂ ನಿಮಗಿಂತ ಮೊದಲು ದೇವರ ರಾಜ್ಯವನ್ನು ಸೇರುವರು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 32ಯಾಕೆಂದರೆ, ಯೋಹಾನನು ನೀತಿಮಾರ್ಗವನ್ನು ಬೋಧಿಸುವವನಾಗಿ ನಿಮ್ಮ ಬಳಿಗೆ ಬಂದನು. ನೀವು ಅವನನ್ನು ನಂಬಲಿಲ್ಲ; ಸುಂಕದವರು, ವೇಶ್ಯೆಯರು ಅವನನ್ನು ನಂಬಿದರು; ನೀವು ಇದನ್ನು ನೋಡಿದ್ದಾಗ್ಯೂ ಪಶ್ಚಾತ್ತಾಪ ಪಡಲಿಲ್ಲ, ಅವನನ್ನು ನಂಬಲಿಲ್ಲ. 33“ಮತ್ತೊಂದು ಸಾಮ್ಯವನ್ನು ಕೇಳಿರಿ, ಒಬ್ಬ ಮನೆಯ ಯಜಮಾನನಿದ್ದನು. ಅವನು ಒಂದು ದ್ರಾಕ್ಷಾತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿಸಿ, ಅದರಲ್ಲಿ ದ್ರಾಕ್ಷಿಯ ಗಾಣವನ್ನು ಹಾಕಿಸಿ, ಕಾವಲು ಗೋಪುರವನ್ನು ಕಟ್ಟಿಸಿ, ದ್ರಾಕ್ಷಿಯ ತೋಟಗಾರರಿಗೆ ಅದನ್ನು ಗುತ್ತಿಗೆಗೆ ಕೊಟ್ಟು, ಅವನು ಬೇರೊಂದು ದೇಶಕ್ಕೆ ಹೋದನು. 34ಫಲಕಾಲ ಹತ್ತಿರವಾದಾಗ ತನಗೆ ಬರಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಆ ತೋಟಗಾರರ ಬಳಿಗೆ ತನ್ನ ಆಳುಗಳನ್ನು ಕಳುಹಿಸಲು, 35ತೋಟಗಾರರು ಅವನ ಆಳುಗಳನ್ನು ಹಿಡಿದು ಒಬ್ಬನನ್ನು ಹೊಡೆದರು, ಮತ್ತೊಬ್ಬನನ್ನು ಕಡಿದು ಹಾಕಿದರು, ಇನ್ನೊಬ್ಬನನ್ನು ಕಲ್ಲೆಸೆದು ಕೊಂದರು. 36ಆ ಯಜಮಾನನು ಪುನಃ ಮೊದಲಿನವರಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದನು, ಅವರು ಅವರಿಗೂ ಹಾಗೆಯೇ ಮಾಡಿದರು. 37ಕಡೆಯಲ್ಲಿ ‘ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು. 38ಆದರೆ ಆ ತೋಟಗಾರರು ಅವನ ಮಗನನ್ನು ಕಂಡು, ‘ಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣ’ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು 39ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು. 40ಹಾಗಾದರೆ ದ್ರಾಕ್ಷಾತೋಟದ ಧಣಿಯು ಬಂದಾಗ ಆ ತೋಟಗಾರರಿಗೆ ಏನು ಮಾಡುವನು?” ಅಂದನು. 41ಅವರು ಆತನಿಗೆ, “ಆ ಕೆಡುಕರನ್ನು ಕ್ರೂರವಾಗಿ ಸಂಹರಿಸಿ ತಕ್ಕಕಾಲಕ್ಕೆ ಹಣ್ಣುಗಳನ್ನು ತನಗೆ ಸಲ್ಲಿಸುವಂಥ ಬೇರೆ ತೋಟಗಾರರಿಗೆ ತನ್ನ ತೋಟವನ್ನು ಗುತ್ತಿಗೆಗೆ ಕೊಡುವನು” ಎಂದು ಹೇಳಿದರು. 42ಯೇಸು ಅವರಿಗೆ, “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ಮತ್ತು ನಮ್ಮ ಕಣ್ಣುಗಳಿಗೆ ಅದು ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ?’ 43ಆದುದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲಾಗುವುದು.
ಆರನೆಯ ತಾಸು
1ಕೆಬಾರ್ ನದಿಯ ಹತ್ತಿರ ಸೆರೆಯಾಗಿ ವಾಸಿಸುತ್ತಿದ್ದ ಯೆಹೂದ್ಯರ ಮಧ್ಯದಲ್ಲಿ ನಾನು ವಾಸಿಸುತ್ತಿದ್ದಾಗ, ಮೂವತ್ತನೆಯ ವರ್ಷದ, ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ ಆಕಾಶವು ತೆರೆಯಲ್ಪಟ್ಟಿತು, ನಾನು ದೇವ ದರ್ಶನಗಳನ್ನು ಕಂಡೆನು. 2ಅರಸನಾದ ಯೆಹೋಯಾಖೀನನು ಸೆರೆಯಾದ ಐದನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ, 3ಯೆಹೋವನ ವಾಕ್ಯವು ಕಸ್ದೀಯ ದೇಶದೊಳಗೆ ಕೆಬಾರ್ ನದಿಯ ಹತ್ತಿರ ಬೂಜಿಯ ಮಗನೂ, ಯಾಜಕನೂ ಆದ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಕೇಳಿಸಿತು; ಅಲ್ಲಿ ಯೆಹೋವನ ಹಸ್ತಸ್ಪರ್ಶದಿಂದ ಅವನು ಪರವಶನಾದನು. 4ಆಗ ನಾನು ನೋಡಲಾಗಿ; ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿಯು ಬೀಸಿತು, ಎಡೆಬಿಡದೆ ಝಗಝಗಿಸುವ ಜ್ವಾಲೆಯುಳ್ಳ ಮಹಾಮೇಘವು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು, ಅದರ ನಡುವೆ, ಆ ಜ್ವಾಲೆಯ ಮಧ್ಯೆ, ಸುವರ್ಣದಂಥ ಕಾಂತಿಯು ಉಂಟಾಯಿತು. 5ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ಆಕಾರಗಳು ಕಂಡುಬಂದವು; ಅವುಗಳ ರೂಪವು ಮನುಷ್ಯನ ರೂಪದಂತಿತ್ತು. 6ಒಂದೊಂದಕ್ಕೆ ನಾಲ್ಕು ನಾಲ್ಕು ಮುಖಗಳೂ ಮತ್ತು ನಾಲ್ಕು ನಾಲ್ಕು ರೆಕ್ಕೆಗಳೂ ಇದ್ದವು. 7ಅವುಗಳ ಕಾಲುಗಳು ನೆಟ್ಟಗಿದ್ದು; ಹೆಜ್ಜೆಗಳು ಕರುವಿನ ಗೊರಸಿನಂತಿದ್ದವು. ಅವುಗಳು ಬೆಳಗಿದ ತಾಮ್ರದ ಹಾಗೆ ಹೊಳೆಯುತ್ತಿದ್ದವು. 8ಒಂದೊಂದು ಜೀವಿಯ ನಾಲ್ಕು ಪಾರ್ಶ್ವಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯನ ಹಸ್ತದಂಥ ಹಸ್ತಗಳಿದ್ದವು; ಆ ನಾಲ್ಕು ಜೀವಿಗಳ ಮುಖಗಳೂ, ರೆಕ್ಕೆಗಳೂ ಹೇಗಿದ್ದವೆಂದರೆ, 9ರೆಕ್ಕೆಗಳು ಒಂದಕ್ಕೊಂದು ತಗಲುತ್ತಿದ್ದವು; ಆ ಜೀವಿಗಳು ಮುಂದೆ ಹೋಗುವಾಗ ತಿರುಗಿಕೊಳ್ಳದೆ ನೇರ ಮುಖವಾಗಿಯೇ ಹೋಗುತ್ತಿದ್ದವು. 10ಅವುಗಳ ಮುಖಗಳು ಹೀಗಿದ್ದವು: ಒಂದೊಂದರ ಮುಂದಿನ ಮುಖವು ಮನುಷ್ಯನ ಮುಖದಂತಿತ್ತು, ಬಲಗಡೆಯ ಮುಖವು ಸಿಂಹದ ಮುಖದಂತಿತ್ತು, ಎಡಗಡೆಯ ಮುಖವು ಹೋರಿಯ ಮುಖದಂತಿತ್ತು, ಹಿಂದಿನ ಮುಖವು ಗರುಡಪಕ್ಷಿಯ ಮುಖದಂತಿತ್ತು. 11ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಲ್ಪಟ್ಟಿದ್ದವು; ರೆಕ್ಕೆಗಳೂ ಮೇಲ್ಗಡೆ ಪ್ರತ್ಯೇಕಪ್ರತ್ಯೇಕವಾಗಿದ್ದವು; ಒಂದೊಂದು ಜೀವಿಯ ಎರಡು ರೆಕ್ಕೆಗಳು ಪಕ್ಕದ ಜೀವಿಗಳ ರೆಕ್ಕೆಗಳಿಗೆ ತಗಲುತ್ತಿದ್ದವು, ಇನ್ನೆರಡು ರೆಕ್ಕೆಗಳು ದೇಹವನ್ನು ಮುಚ್ಚಿಕೊಂಡಿದ್ದವು. 12ಆ ಜೀವಿಗಳೆಲ್ಲಾ ನೇರ ಮುಖವಾಗಿಯೇ ಹೋಗುತ್ತಿದ್ದವು, ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು; ಹಿಂತಿರುಗಿನೋಡದೆ ಮುಂದೆ ಹೋದವು. 13ಆ ಜೀವಿಗಳ ಮಧ್ಯದಲ್ಲಿ ಅದ್ಭುತಕಾಂತಿಯೊಂದು ಉರಿಯುವ ಕೆಂಡಗಳೋ, ಪಂಜುಗಳೋ ಎಂಬಂತೆ ಕಾಣಿಸಿತು; ಅದು ಜೀವಿಗಳ ನಡುವೆ ಓಲಾಡುತ್ತಿತ್ತು; ಆ ಉರಿಯು ತೇಜೋಮಯವಾಗಿತ್ತು, ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು. 14ಆ ಜೀವಿಗಳು ಮಿಂಚಿನಂತೆ ಮುಂದಕ್ಕೂ, ಹಿಂದಕ್ಕೂ ವೇಗವಾಗಿ ಚಲಿಸುತ್ತಿದ್ದವು. 15ಇಗೋ, ನಾನು ಆ ಜೀವಿಗಳನ್ನು ನೋಡುತ್ತಿರಲಾಗಿ ಒಂದೊಂದು ಕಡೆಯಲ್ಲಿಯೂ ಜೀವಿಗಳ ಪಕ್ಕದಲ್ಲಿ ಭೂಮಿಯ ಮೇಲೆ ಒಂದು ಚಕ್ರವು ಕಾಣಿಸಿತು. 16ಆ ಚಕ್ರಗಳ ವರ್ಣವೂ, ರಚನೆಯೂ ಹೇಗಿದ್ದವೆಂದರೆ, ಅವುಗಳ ವರ್ಣವು ಪೀತರತ್ನದ ಹಾಗೆ ಥಳಥಳಿಸುತ್ತಿತ್ತು. ಒಂದು ಚಕ್ರದೊಳಗೆ ಇನ್ನೊಂದು ಚಕ್ರವು ಅಡ್ಡವಾಗಿ ರಚಿಸಿದಂತಿತ್ತು; ಆ ನಾಲ್ಕು ಚಕ್ರಗಳು ಒಂದೇ ಮಾದರಿಯಾಗಿದ್ದವು. 17ಅವು ಚಲಿಸುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ತಿರುಗುತ್ತಿದ್ದವು; ಓರೆಯಾಗಿ ತಿರುಗುತ್ತಿರಲಿಲ್ಲ. 18ಗಾಲಿಗಳ ಸುತ್ತಣ ಭಾಗಗಳು ಎತ್ತರವಾಗಿಯೂ, ಭಯಂಕರವಾಗಿಯೂ ಇದ್ದವು; ಈ ಭಾಗಗಳ ಎಲ್ಲಾ ಕಡೆಯಲ್ಲಿಯೂ ತುಂಬಾ ಕಣ್ಣುಗಳಿದ್ದವು; 19ಜೀವಿಗಳು ಮುಂದೆ ಹೋಗುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಮುಂದೆ ಹೋಗುತ್ತಿದ್ದವು; ಆ ಜೀವಿಗಳು ಭೂಮಿಯಿಂದ ಮೇಲಕ್ಕೇಳುವಾಗ ಚಕ್ರಗಳೂ ಮೇಲೆ ಏಳುತ್ತಿದ್ದವು; 20ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು; ಜೀವಿಗಳ ಒಳಗಿನ ಆತ್ಮವು ಚಕ್ರಗಳಲ್ಲಿ ಇದ್ದ ಕಾರಣ ಚಕ್ರಗಳು ಅವುಗಳ ಪಕ್ಕದಲ್ಲಿ ಏಳುತ್ತಿದ್ದವು.
ಸಂಧ್ಯಾ ಪ್ರಾರ್ಥನೆ: ವಾಚನ
1ಯಾಕೋಬನೊಂದಿಗೆ ಐಗುಪ್ತದೇಶಕ್ಕೆ ತಮ್ಮತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲರ ಮಕ್ಕಳ ಹೆಸರುಗಳು: 2ರೂಬೇನ್, ಸಿಮೆಯೋನ್, ಲೇವಿ, ಯೆಹೂದ, 3ಇಸ್ಸಾಕಾರ್, ಜೆಬುಲೂನ್ ಮತ್ತು ಬೆನ್ಯಾಮೀನ್, 4ದಾನ್, ಗಾದ್, ನಫ್ತಾಲಿ ಮತ್ತು ಆಶೇರ್. 5ಯಾಕೋಬನ ಎಲ್ಲಾ ಸಂತತಿಯವರು ಒಟ್ಟು ಎಪ್ಪತ್ತು ಮಂದಿ. ಆದರೆ ಯೋಸೇಫನು ಮೊದಲೇ ಐಗುಪ್ತದೇಶದಲ್ಲಿದ್ದನು. 6ಆ ನಂತರ ಯೋಸೇಫನೂ, ಅವನ ಅಣ್ಣತಮ್ಮಂದಿರೂ, ಆ ಸಂತತಿಯವರೆಲ್ಲರೂ ಮರಣ ಹೊಂದಿದರು. 7ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು ಬಲ ಹೊಂದಿದರು. ಆ ದೇಶವು ಅವರಿಂದ ತುಂಬಿಹೋಯಿತು. 8ತರುವಾಯ ಯೋಸೇಫನನ್ನು ಅರಿಯದ ಹೊಸ ಅರಸನು ಐಗುಪ್ತದೇಶದ ಆಳ್ವಿಕೆಗೆ ಬಂದನು. 9ಅರಸನು ತನ್ನ ಜನರಿಗೆ, “ಇಸ್ರಾಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ನಮಗಿಂತ ಬಹಳ ಬಲಶಾಲಿಗಳೂ ಆಗಿದ್ದಾರೆ ನೋಡಿರಿ. 10ನಮಗೆ ಯುದ್ಧವೇನಾದರೂ ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಸೇರಿಕೊಂಡು, ನಮಗೆ ವಿರುದ್ಧವಾಗಿ ಹೋರಾಡಿ ದೇಶವನ್ನು ಬಿಟ್ಟುಹೋದಾರು. ಆದ್ದರಿಂದ ಅವರು ನಮ್ಮ ದೇಶವನ್ನು ಬಿಟ್ಟು ಹೋಗದಂತೆ ನಾವು ಉಪಾಯ ಮಾಡೋಣ” ಎಂದು ಹೇಳಿ 11ಅವರನ್ನು ಬಿಟ್ಟೀ ಕೆಲಸಗಳಿಂದ ಪೀಡಿಸುವುದಕ್ಕಾಗಿ, ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇರಿಸಿದನು. ಅವರು ಫರೋಹನನಿಗೆ ಪಿತೋಮ್ ಮತ್ತು ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದನು. 12ಐಗುಪ್ತರು ಇಸ್ರಾಯೇಲರನ್ನು ಉಪದ್ರವಪಡಿಸಿದಷ್ಟೂ, ಅವರು ಬಹಳವಾಗಿ ಹೆಚ್ಚಿ ಹರಡಿಕೊಂಡಿದ್ದರಿಂದ ಐಗುಪ್ತರು ಇಸ್ರಾಯೇಲರ ವಿಷಯದಲ್ಲಿ ಬಹಳ ಹೆದರಿಕೆಯುಳ್ಳವರಾದರು. 13ಐಗುಪ್ತರು ಇಸ್ರಾಯೇಲರಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡರು. 14ಮಣ್ಣಿನ ಕೆಲಸದಲ್ಲಿಯೂ, ಇಟ್ಟಿಗೆಮಾಡುವ ಕೆಲಸದಲ್ಲಿಯೂ, ವ್ಯವಸಾಯದ ಎಲ್ಲಾ ವಿಧವಾದ ಕೆಲಸದಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಐಗುಪ್ತರು ಇಸ್ರಾಯೇಲರಿಂದ ಮಾಡಿಸಿದ ಎಲ್ಲಾ ಕೆಲಸಗಳು ಬಹಳ ಕಠಿಣವಾಗಿದ್ದವು. 15ಇದಲ್ಲದೆ ಐಗುಪ್ತ ದೇಶದ ಅರಸನು “ಶಿಪ್ರಾ” ಮತ್ತು “ಪೂಗಾ” ಎಂಬ ಹೆಸರಿನ ಇಬ್ರಿಯ ಸೂಲಗಿತ್ತಿಯರೊಂದಿಗೆ ಮಾತನಾಡಿದನು. 16ಅವನು ಅವರಿಗೆ, “ನೀವು ಇಬ್ರಿಯ ಹೆಂಗಸರಿಗೆ ಹೆರಿಗೆ ಮಾಡಿಸುವಾಗ ಅವರು ಹೆರುವ ಮಗುವು ಗಂಡು ಮಗುವಾಗಿದ್ದರೆ ಕೊಂದುಹಾಕಿರಿ, ಹೆಣ್ಣಾಗಿದ್ದರೆ ಬದುಕಲು ಬಿಡಿ” ಎಂದು ಹೇಳಿದನು. 17ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತರ ಅರಸನ ಮಾತಿನಂತೆ ಮಾಡದೆ ಗಂಡು ಮಕ್ಕಳನ್ನು ಜೀವದಿಂದ ಉಳಿಸಿದರು. 18ಆಗ ಐಗುಪ್ತದ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ನೀವು ಅವರ ಗಂಡು ಮಕ್ಕಳನ್ನು ಉಳಿಸಿದ್ದೇನು? ಹೀಗೆ ಯಾಕೆ ಮಾಡಿದಿರಿ?” ಎಂದು ಕೇಳಿದನು. 19ಸೂಲಗಿತ್ತಿಯರು ಫರೋಹನಿಗೆ, “ಇಬ್ರಿಯರ ಸ್ತ್ರೀಯರು ಐಗುಪ್ತ ಸ್ತ್ರೀಯರಂತೆ ಅಲ್ಲ, ಅವರು ಬಹು ಚುರುಕು ಬುದ್ಧಿಯವರು. ಸೂಲಗಿತ್ತಿಯು ಅವರ ಹತ್ತಿರ ಬರುವುದಕ್ಕೆ ಮೊದಲೇ ಮಗುವನ್ನು ಹೆರುತ್ತಿದ್ದರು” ಎಂದು ಹೇಳಿದರು. 20ಆದ್ದರಿಂದ ದೇವರು ಆ ಸೂಲಗಿತ್ತಿಯರಿಗೆ ಒಳ್ಳೆಯದನ್ನು ಮಾಡಿದನು. ಇದರಿಂದ ಇಸ್ರಾಯೇಲ್ ಜನರು ಹೆಚ್ಚಾಗಿ ಬಹಳ ಬಲಗೊಂಡರು.
ಸಂಧ್ಯಾ ಪ್ರಾರ್ಥನೆ: ವಾಚನ
1ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ, ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದನು. 2ಅವನಿಗೆ ಏಳು ಮಂದಿ ಗಂಡುಮಕ್ಕಳೂ, ಮೂರು ಮಂದಿ ಹೆಣ್ಣುಮಕ್ಕಳೂ ಇದ್ದರು. 3ಅವನಿಗೆ ಏಳು ಸಾವಿರ ಕುರಿಗಳೂ, ಮೂರು ಸಾವಿರ ಒಂಟೆಗಳೂ, ಐನೂರು ಜೋಡಿ ಎತ್ತುಗಳೂ, ಐನೂರು ಹೆಣ್ಣು ಕತ್ತೆಗಳೂ, ಬಹುಮಂದಿ ಸೇವಕರೂ ಇದ್ದುದರಿಂದ ಅವನು ಮೂಡಣ ದೇಶದವರಲ್ಲೆಲ್ಲಾ ಹೆಚ್ಚು ಸ್ವತ್ತುಳ್ಳವನಾಗಿದ್ದನು. 4ಅವನ ಗಂಡು ಮಕ್ಕಳು ಒಂದೊಂದು ದಿನ ಒಬ್ಬೊಬ್ಬನ ಮನೆಯಲ್ಲಿ ಔತಣವನ್ನು ನಡೆಸುತ್ತಾ ಆ ಭೋಜನಕ್ಕೆ ತಮ್ಮ ಮೂವರು ಅಕ್ಕತಂಗಿಯರನ್ನೂ ಕರೆಕಳುಹಿಸುತ್ತಿದ್ದರು. 5ಔತಣದ ಸರದಿ ತೀರಿದ ನಂತರ ಯೋಬನು, “ನನ್ನ ಮಕ್ಕಳು ಒಂದು ವೇಳೆ ಹೃದಯದಲ್ಲಿ ದೇವರನ್ನು ದೂಷಿಸಿ ಪಾಪ ಮಾಡಿರಬಹುದು” ಎಂದು ಅವರನ್ನು ಕರೆಯಿಸಿ ಶುದ್ಧಿಪಡಿಸಿ, ಬೆಳಿಗ್ಗೆ ಎದ್ದು ಅವರ ಸಂಖ್ಯೆಗೆ ತಕ್ಕಂತೆ ಹೋಮಗಳನ್ನು ಅರ್ಪಿಸುತ್ತಿದ್ದನು. ಹೀಗೆ ಯೋಬನು ಕ್ರಮವಾಗಿ ಮಾಡುವುದು ದೈನಂದಿನ ಕ್ರಮವಾಗಿತ್ತು. 6ಒಂದು ದಿನ ದೇವದೂತರು ಯೆಹೋವನ ಸನ್ನಿಧಿಗೆ ಬರುವಾಗ ಸೈತಾನನು (ಆಪಾದಕ ದೂತನು) ಅವರ ಜೊತೆಯಲ್ಲಿ ಬಂದನು. 7ಯೆಹೋವನು ಸೈತಾನನನ್ನು, “ಎಲ್ಲಿಂದ ಬಂದೆ?” ಎಂದು ಕೇಳಲು ಸೈತಾನನು ಯೆಹೋವನಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು” ಎಂದು ಹೇಳಿದನು. 8ಆಗ ಯೆಹೋವನು, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ, ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ” ಎಂದು ಸೈತಾನನಿಗೆ ಹೇಳಿದನು. 9ಅದಕ್ಕೆ ಸೈತಾನನು, “ಯೋಬನು ನಿನ್ನಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ? 10ನೀನು ಅವನಿಗೂ, ಅವನ ಮನೆಗೂ, ಅವನ ಎಲ್ಲಾ ಸ್ವತ್ತಿಗೂ ಸುತ್ತು ಮುತ್ತಲು ನಿನ್ನ ಕೃಪೆಯ ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. 11ಆದರೆ ನಿನ್ನ ಕೈಚಾಚಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸದೇ ಬಿಡುವನೇ?” ಎಂದನು. 12ಯೆಹೋವನು ಸೈತಾನನಿಗೆ, “ನೋಡು, ಅವನ ಸ್ವಾಸ್ತ್ಯವೆಲ್ಲಾ ನಿನ್ನ ಕೈಯಲ್ಲಿದೆ. ಆದರೆ ಅವನ ಮೈಮೇಲೆ ಮಾತ್ರ ಕೈಹಾಕಬೇಡ” ಎಂದು ಅಪ್ಪಣೆಕೊಟ್ಟನು. ಆಗ ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟುಹೋದನು.
ಸುವಾರ್ತೆ (ಪೂರ್ವಪವಿತ್ರೀಕೃತ ಕಾಣಿಕೆಗಳ ಆರಾಧನೆ)
3ಬಳಿಕ ಆತನು ಎಣ್ಣೆಯ ಮರಗಳ ಗುಡ್ಡದ ಮೇಲೆ ಕುಳಿತಿದ್ದಾಗ ಶಿಷ್ಯರು ಆತನ ಬಳಿಗೆ ಪ್ರತ್ಯೇಕವಾಗಿ ಬಂದು, “ಇವೆಲ್ಲವೂ ಯಾವಾಗ ಸಂಭವಿಸುವುದು? ನಿನ್ನ ಬರೋಣಕ್ಕೂ ಲೋಕದ ಸಮಾಪ್ತಿಗೂ ಸೂಚನೆಯೇನು?” ನಮಗೆ ಹೇಳು ಅನ್ನಲು 4ಯೇಸು ಅವರಿಗೆ ಉತ್ತರವಾಗಿ ಹೇಳಿದ್ದೇನೆಂದರೆ, “ಯಾರೊಬ್ಬರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಿಂದಿರಿ. 5ಏಕೆಂದರೆ, ನನ್ನ ಹೆಸರಿನಲ್ಲಿ ಅನೇಕರು ಬಂದು, ‘ನಾನು ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು. 6ಇದಲ್ಲದೆ ಯುದ್ಧಗಳಾಗುವುದನ್ನೂ ಯುದ್ಧಗಳಾಗುವ ಸೂಚನೆಯ ಸುದ್ದಿಗಳನ್ನೂ ನೀವು ಕೇಳಬಹುದು. ಕಳವಳಪಡದಂತೆ ನೋಡಿಕೊಳ್ಳಿರಿ; ಏಕೆಂದರೆ ಹೀಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ. 7ಹೀಗಿರಲಾಗಿ ಜನರಿಗೆ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಅಲ್ಲಲ್ಲಿ ಭೂಕಂಪಗಳು ಆಗುವವು; 8ಇವೆಲ್ಲಾ (ನೂತನ ಕಾಲವು ಹುಟ್ಟುವ) ಪ್ರಸವವೇದನೆಯ ಪ್ರಾರಂಭ. 9“ಆಗ ನಿಮ್ಮನ್ನು ಕಷ್ಟಸಂಕಟಗಳಿಗೆ ಗುರಿಮಾಡಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ದ್ವೇಷಿಸುವರು. 10ಆಗ ಅನೇಕರು ಎಡವಿ ಹಿಂಜರಿದು ಒಬ್ಬರನ್ನೊಬ್ಬರು ಹಿಡಿದುಕೊಡುವರು; ಒಬ್ಬರ ಮೇಲೊಬ್ಬರು ದ್ವೇಷ ಮಾಡುವರು. 11ಬಹು ಮಂದಿ ಸುಳ್ಳುಪ್ರವಾದಿಗಳು ಸಹ ಎದ್ದು ಅನೇಕರನ್ನು ಮೋಸಗೊಳಿಸುವರು. 12ಇದಲ್ಲದೆ ಅಧರ್ಮವು ಹೆಚ್ಚಾಗುವುದರಿಂದ ಬಹು ಜನರ ಪ್ರೀತಿಯು ತಣ್ಣಗಾಗಿ ಹೋಗುವುದು. 13ಆದರೆ ಕಡೆಯವರೆಗೂ ತಾಳುವವನು ರಕ್ಷಣೆ ಹೊಂದುವನು. 14ಇದಲ್ಲದೆ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಆಗ ಅಂತ್ಯವು ಬರುವುದು. 15“ಪ್ರವಾದಿಯಾದ ದಾನಿಯೇಲನು ಹೇಳಿದ ಹಾಗೆ ವಿನಾಶಕಾರಕ, ವಿಕಾರ ವಸ್ತು ಪವಿತ್ರ ಸ್ಥಾನದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ತಿಳಿದುಕೊಳ್ಳಲಿ) 16ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; 17ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿರುವುದನ್ನು ತೆಗೆದುಕೊಳ್ಳುವುದಕ್ಕೆ ಹೋಗದಿರಲಿ, 18ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂತಿರುಗಿ ಹೋಗದಿರಲಿ. 19ಆದರೆ ಆ ದಿನದಲ್ಲಿ ಬಸುರಿಯರಿಗೂ, ಬಾಣಂತಿಯರಾಗಿರುವ ಹೆಂಗಸರಿಗೂ ಅಯ್ಯೋ ಕಷ್ಟ. 20ನಿಮ್ಮ ಪಲಾಯನವು ಚಳಿಗಾಲದಲ್ಲಾಗಲಿ ಸಬ್ಬತ್ ದಿನದಲ್ಲಿಯಾಗಲಿ ಆಗಬಾರದೆಂದು ಪ್ರಾರ್ಥಿಸಿರಿ. 21ಏಕೆಂದರೆ ಲೋಕದ ಅರಂಭದಿಂದ ಇಂದಿನವರೆಗೂ ಆಗದಿರುವಂಥದ್ದು, ಇನ್ನು ಮೇಲೆಯೂ ಆಗದಿರುವಂತಹ ಮಹಾ ಸಂಕಟವು ಅಂದು ಉಂಟಾಗುವುದು. 22ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಬ್ಬ ನರಪ್ರಾಣಿಯಾದರೂ ಉಳಿಯನು; ಆದರೆ ತಾನು ಆರಿಸಿಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡುವನು. 23ಆಗ ಯಾರಾದರು ನಿಮಗೆ, ‘ಇಗೋ ಕ್ರಿಸ್ತನು ಇಲ್ಲಿದ್ದಾನೆ, ಅಗೋ ಅಲ್ಲಿದ್ದಾನೆ’ ಎಂದು ಹೇಳಿದರೆ ನಂಬಬೇಡಿರಿ. 24ಸುಳ್ಳು ಕ್ರಿಸ್ತರೂ, ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನು ಸಹ ಮೋಸಗೊಳಿಸುವುದಕ್ಕೋಸ್ಕರ ಮಹಾ ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು. 25ನೋಡಿರಿ, ನಾನು ಮುಂಚಿತವಾಗಿಯೇ ನಿಮಗೆ ಇದನ್ನು ಹೇಳುತ್ತಿದ್ದೇನೆ. 26ಆದಕಾರಣ ಯಾರಾದರು ನಿಮಗೆ, ‘ಅಗೋ ಕ್ರಿಸ್ತನು ಅಡವಿಯಲ್ಲಿ ಇದ್ದಾನೆಂದು’ ಹೇಳಿದರೆ ಅಡವಿಗೆ ಹೊರಟುಹೋಗಬೇಡಿರಿ; ‘ಇಗೋ ಒಳಕೋಣೆಗಳಲ್ಲಿದ್ದಾನೆಂದು’ ಹೇಳಿದರೆ ನಂಬಬೇಡಿರಿ. 27ಹೇಗೆ ಮಿಂಚು ಪೂರ್ವದಲ್ಲಿ ಹುಟ್ಟಿ ಪಶ್ಚಿಮದ ವರೆಗೂ ಹೊಳೆಯುತ್ತದೋ ಹಾಗೆಯೇ ಮನುಷ್ಯಕುಮಾರನ ಬರುವಿಕೆಯೂ ಆಗುವುದು. 28ಹೆಣ ಬಿದ್ದಲ್ಲಿ ಹದ್ದುಗಳು ಬಂದು ಸೇರಿಕೊಳ್ಳುವವು. 29“ಆ ದಿನಗಳ ಸಂಕಟವು ಮುಗಿದಕೂಡಲೆ ಸೂರ್ಯನು ಕತ್ತಲಾಗಿ ಹೋಗುವನು, ಚಂದ್ರನು ಬೆಳಕು ಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು, ಆಕಾಶದ ಶಕ್ತಿಗಳು ಕದಲುವವು. 30ಆಗ ಮನುಷ್ಯಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವವು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು, ಮತ್ತು ಮನುಷ್ಯಕುಮಾರನು ಬಲದಿಂದಲೂ, ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವುದನ್ನು ಕಾಣುವರು. 31ಆತನು ತನ್ನ ದೂತರನ್ನು ತುತ್ತೂರಿಯ ಮಹಾ ಶಬ್ದದೊಂದಿಗೆ ಕಳುಹಿಸುವನು. ಅವರು ಆತನು ಆರಿಸಿಕೊಂಡವರನ್ನು ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ನಾಲ್ಕು ದಿಕ್ಕುಗಳಿಂದ ಒಟ್ಟುಗೂಡಿಸುವರು. 32“ಅಂಜೂರ ಮರದ ದೃಷ್ಟಾಂತದಿಂದ ಬುದ್ಧಿಕಲಿಯಿರಿ. ಅದರ ಕೊಂಬೆ ಇನ್ನು ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ತಿಳಿದುಕೊಳ್ಳುತ್ತೀರಲ್ಲಾ. 33ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗ ಆ ದಿನವು ಹತ್ತಿರವಿದೆ, ಹೊಸ್ತಿಲಲ್ಲೇ ಇದೆ ಎಂದು ತಿಳಿದುಕೊಳ್ಳಿರಿ. 34ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 35ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ವಾಕ್ಯಗಳೋ ಅಳಿದುಹೋಗುವುದೇ ಇಲ್ಲ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 13 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 26 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು