ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 27 ಏಪ್ರಿಲ್
ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 14 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 27 ಏಪ್ರಿಲ್ 2027
ಮಂಗಳವಾರ · ಪವಿತ್ರ ವಾರ
ಹಬ್ಬಗಳು ಮತ್ತು ಸಂತರು
ಮಹಾ ಪವಿತ್ರ ಮಂಗಳವಾರ
ಮಹಾ ಉಪವಾಸ ಕಾಲ
ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸುವಾರ್ತೆ (ಮದಲಿಂಗನ ಉದಯಕಾಲದ ಪ್ರಾರ್ಥನೆ)
15ಅನಂತರ ಫರಿಸಾಯರು ಹೊರಟು ಯೇಸುವನ್ನು ಮಾತಿನಲ್ಲಿ ಹೇಗೆ ಸಿಕ್ಕಿಸೋಣ ಎಂದು ಕೂಡಿ ಆಲೋಚಿಸಿಕೊಂಡು 16ಆತನ ಬಳಿಗೆ ತಮ್ಮ ಶಿಷ್ಯರನ್ನು ಹೆರೋದ್ಯರ ಜೊತೆಮಾಡಿ ಕಳುಹಿಸಿದರು. ಇವರು ಯೇಸುವಿಗೆ, “ಗುರುವೇ, ನೀನು ಸತ್ಯವಂತನು, ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನು, ಯಾರಿಗೂ ಹೆದರದವನು; ನೀನು ಜನರ ದಾಕ್ಷಿಣ್ಯಕ್ಕೆ ತಕ್ಕಂತೆ ಮಾತನಾಡುವವನಲ್ಲ ಎಂದು ಬಲ್ಲೆವು. 17ಹೀಗಿರಲಾಗಿ ಕೈಸರನಿಗೆ ಸುಂಕ ಕೊಡುವುದು ನಿಯಮ ಬದ್ಧವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು” ಅಂದರು. 18ಯೇಸು ಅವರ ಕೆಡುಕನ್ನು ಅರಿತುಕೊಂಡವನಾಗಿ, “ಕಪಟಿಗಳೇ, ನನ್ನನ್ನು ಏಕೆ ಪರೀಕ್ಷೆಮಾಡುತ್ತೀರಿ? 19ಸುಂಕಕ್ಕೆ ಕೊಡುವ ನಾಣ್ಯವನ್ನು ನನಗೆ ತೋರಿಸಿರಿ” ಅನ್ನಲು ಅವರು ಆತನಿಗೆ ಒಂದು ನಾಣ್ಯವನ್ನು ತಂದು ಕೊಟ್ಟರು. 20ಆತನು, “ಈ ಸ್ವರೂಪವು ಈ ಮುದ್ರೆಯೂ ಯಾರದು?” ಎಂದು ಕೇಳಿದ್ದಕ್ಕೆ 21ಅವರು, “ಕೈಸರನದು” ಅಂದರು. ಆಗ ಆತನು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು. 22ಅವರು ಈ ಮಾತನ್ನು ಕೇಳಿ ಆಶ್ಚರ್ಯಪಟ್ಟು ಆತನನ್ನು ಬಿಟ್ಟು ಹೋದರು. 23ಅದೇ ದಿನದಲ್ಲಿ ಪುನರುತ್ಥಾನವಿಲ್ಲ ಎಂದು ವಾದಿಸುವ ಕೆಲವು ಸದ್ದುಕಾಯರು ಆತನ ಬಳಿಗೆ ಬಂದರು. 24ಇವರು ಆತನಿಗೆ, “ಬೋಧಕನೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಮಕ್ಕಳನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.’ 25ಆದರೆ ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆ ಆಗಿ ತೀರಿಹೋದನು. ಅವನಿಗೆ ಮಕ್ಕಳಿಲ್ಲದ ಕಾರಣ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು; 26ಅದರಂತೆ ಎರಡನೆಯವನೂ ಮೂರನೆಯವನೂ ಹಾಗೆಯೇ ಏಳನೆಯವನ ವರೆಗೂ ಮಾಡಿದರು. 27ಅವರೆಲ್ಲರು ಸತ್ತ ಮೇಲೆ ಆ ಹೆಂಗಸೂ ಸತ್ತಳು. 28ಹಾಗಾದರೆ ಪುನರುತ್ಥಾನದಲ್ಲಿ ಆಕೆ ಆ ಏಳು ಮಂದಿಯಲ್ಲಿ ಯಾರಿಗೆ ಹೆಂಡತಿಯಾಗಿರುವಳು? ಆಕೆಯನ್ನು ಅವರೆಲ್ಲರೂ ಮದುವೆಮಾಡಿಕೊಂಡಿದ್ದರಲ್ಲಾ” ಎಂದು ಪ್ರಶ್ನಿಸಿದರು. 29ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ನೀವು ದೇವರ ವಾಕ್ಯವನ್ನಾದರೂ ದೇವರ ಶಕ್ತಿಯನ್ನಾದರೂ ಸರಿಯಾಗಿ ತಿಳಿದುಕೊಳ್ಳದೆ ತಪ್ಪು ಅಭಿಪ್ರಾಯದಲ್ಲಿದ್ದೀರಿ; 30ಪುನರುತ್ಥಾನವಾದ ಮೇಲೆ ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಅವರು ಇರುತ್ತಾರೆ. 31ಸತ್ತವರ ಪುನರುತ್ಥಾನದ ವಿಷಯವಾಗಿ ಹೇಳಬೇಕಾದರೆ, 32‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’ ಎಂದು ದೇವರು ನಿಮಗೆ ನುಡಿದಿದ್ದನ್ನು ನೀವು ಓದಲಿಲ್ಲವೇ. ಆತನು ಸತ್ತವರಿಗೆ ದೇವರಲ್ಲ, ಆದರೆ ಜೀವಿಸುವವರಿಗೆ ದೇವರಾಗಿದ್ದಾನೆ” ಎಂದು ಹೇಳಿದನು. 33ಜನರ ಗುಂಪು ಅದನ್ನು ಕೇಳಿ ಆತನ ಬೋಧನೆಗೆ ಆಶ್ಚರ್ಯಪಟ್ಟರು. 34ಯೇಸು ಸದ್ದುಕಾಯರನ್ನು ಸದ್ದಿಲ್ಲದವರನ್ನಾಗಿ ಮಾಡಿದ್ದಾನೆಂದು ಫರಿಸಾಯರು ಕೇಳಿ ಅಲ್ಲಿಗೆ ಸೇರಿ ಬಂದರು. 35ಅವರಲ್ಲಿದ್ದ ಒಬ್ಬ ಧರ್ಮೋಪದೇಶಕನು ಆತನನ್ನು ಪರೀಕ್ಷೆ ಮಾಡಬೇಕೆಂದು, 36“ಗುರುವೇ, ಧರ್ಮಶಾಸ್ತ್ರದಲ್ಲಿ ಯಾವ ಆಜ್ಞೆ ಮುಖ್ಯವಾದದ್ದು” ಎಂದು ಆತನನ್ನು ಕೇಳಿದ್ದಕ್ಕೆ 37ಯೇಸು ಅವನಿಗೆ, “‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು’ 38ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. 39ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಯಾವುದೆಂದರೆ, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ. 40ಈ ಎರಡು ಆಜ್ಞೆಗಳಲ್ಲಿ ಎಲ್ಲಾ ಧರ್ಮನಿಯಮವೂ ಪ್ರವಾದನಾಗ್ರಂಥಗಳೂ ಆಧಾರವಾಗಿವೆ” ಎಂದು ಹೇಳಿದನು. 41ಫರಿಸಾಯರು ಕೂಡಿಬಂದಿರಲಾಗಿ ಯೇಸು ಅವರಿಗೆ, 42“ಬರಬೇಕಾದ ಕ್ರಿಸ್ತನ ವಿಷಯವಾಗಿ ನಿಮಗೆ ಹೇಗೆ ತೋರುತ್ತದೆ? ಆತನು ಯಾರ ಮಗನು?” ಎಂದು ಕೇಳಿದ್ದಕ್ಕೆ 43ಅವರು ಆತನಿಗೆ, “ದಾವೀದನ ಮಗನು” ಎಂದು ಹೇಳಿದರು. ಅದಕ್ಕೆ ಆತನು, “ಹಾಗಾದರೆ, ದಾವೀದನೇ ಪವಿತ್ರಾತ್ಮನ ಪ್ರೇರಣೆಯಿಂದ ಆತನನ್ನು ಕರ್ತನು ಎಂದು ಕರೆದಿದ್ದಾನಲ್ಲಾ, ಅದು ಹೇಗೆ? 44“‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು’ ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು. 45ಈ ಮಾತಿನಲ್ಲಿ ದಾವೀದನೇ ಆತನನ್ನು ‘ಕರ್ತನೆಂದು’ ಕರೆದ ಮೇಲೆ ಆತನು ಅವನಿಗೆ ಮಗನಾಗುವುದು ಹೇಗೆ?” ಅಂದನು. 46ಅದಕ್ಕೆ ಉತ್ತರವಾಗಿ ಯಾರೂ ಒಂದು ಮಾತನ್ನಾದರೂ ಆತನಿಗೆ ಹೇಳಲಾರದೆ ಹೋದರು. ಇದಲ್ಲದೆ ಅಂದಿನಿಂದ ಆತನನ್ನು ಪ್ರಶ್ನಿಸಲು ಯಾರೂ ಧೈರ್ಯಪಡಲಿಲ್ಲ. 23:1ತರುವಾಯ ಯೇಸು ಜನರ ಗುಂಪಿಗೂ ಹಾಗು ತನ್ನ ಶಿಷ್ಯರಿಗೂ ಹೇಳಿದ್ದೇನೆಂದರೆ, 2“ಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ; 3ಆದುದರಿಂದ ಅವರು ನಿಮಗೆ ಏನೆಲ್ಲಾ ಆಜ್ಞಾಪಿಸುತ್ತಾರೋ ಅದನ್ನೆಲ್ಲಾ ಕೈಕೊಂಡು ನಡೆಯಿರಿ; ಆದರೆ ಅವರ ಕ್ರಿಯೆಗಳ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೆಯೇ ಹೊರತು ಅದರಂತೆ ನಡೆಯುವುದಿಲ್ಲ. 4ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ; ಆದರೆ ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲೊಲ್ಲರು. 5ಅವರು ತಮ್ಮ ಕೆಲಸಗಳನ್ನೆಲ್ಲಾ ಜನರು ನೋಡಬೇಕೆಂದು ಮಾಡುತ್ತಾರೆ. ತಾವು ಕಟ್ಟಿಕೊಳ್ಳುವ ಜ್ಞಾಪಕಪಟ್ಟಿಗಳನ್ನು ಅಗಲಮಾಡುತ್ತಾರೆ. ತಮ್ಮ ವಸ್ತ್ರಗಳ ಗೊಂಡೆಗಳನ್ನು ಉದ್ದಮಾಡಿಕೊಳ್ಳುತ್ತಾರೆ. 6ಇದಲ್ಲದೆ ಔತಣ ಉತ್ಸವಗಳಲ್ಲಿ ಪ್ರಥಮಸ್ಥಾನ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು; 7ಅಂಗಡಿ ಬೀದಿಗಳಲ್ಲಿ ನಮಸ್ಕಾರಗಳು, ಜನರಿಂದ ‘ಗುರುಗಳೆನ್ನಿಸಿಕೊಳ್ಳುವುದು,’ ಇವುಗಳೇ ಅವರಿಗೆ ಇಷ್ಟ. 8ಆದರೆ ನೀವು ‘ಬೋಧಕರೆನ್ನಿಸಿಕೊಳ್ಳಬೇಡಿರಿ;’ ಏಕೆಂದರೆ ಕ್ರಿಸ್ತನೊಬ್ಬನೇ ನಿಮಗಿರುವ ಬೋಧಕನು ಮತ್ತು ನೀವೆಲ್ಲರೂ ಸಹೋದರರು. 9ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಿಮ್ಮ ತಂದೆ ಎಂದು ಕರೆಯಬೇಡಿರಿ; ಏಕೆಂದರೆ ಪರಲೋಕದಲ್ಲಿರುವಾತನೊಬ್ಬನೇ ನಿಮ್ಮ ತಂದೆ 10ಮತ್ತು ‘ಗುರುವೆಂದು’ ಅನ್ನಿಸಿಕೊಳ್ಳಬೇಡಿರಿ; ಏಕೆಂದರೆ, ಕ್ರಿಸ್ತನೊಬ್ಬನೇ ನಿಮಗಿರುವ ಗುರುವು 11ಆದರೆ ನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು. 12ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು. 13“ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ಪರಲೋಕ ರಾಜ್ಯದ ಬಾಗಿಲನ್ನು ಮನುಷ್ಯರ ಎದುರಿಗೆ ಮುಚ್ಚಿಬಿಡುತ್ತೀರಿ. ನೀವಂತೂ ಒಳಕ್ಕೆ ಪ್ರವೇಶಿಸುವುದಿಲ್ಲ, ಒಳಕ್ಕೆ ಪ್ರವೇಶಿಸಬೇಕೆಂದಿರುವವರನ್ನೂ ಪ್ರವೇಶಿಸಗೊಡಿಸುವುದೂ ಇಲ್ಲ. 14ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ ಜನರು ನೋಡಬೇಕೆಂದು ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತೀರೀ. ನೀವು ವಿಧವೆಯರ ಮನೆಗಳನ್ನು ನುಂಗಿ ನಟನೆಮಾಡುತ್ತೀರಿ. ಆದುದರಿಂದ ನೀವು ಹೆಚ್ಚಿನ ದಂಡನೆಯನ್ನು ಹೊಂದುವಿರಿ. 15“ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಒಬ್ಬ ಮನುಷ್ಯನನ್ನು ಮತಾಂತರಗೊಳ್ಳಿಸುವುದಕ್ಕಾಗಿ ಭೂಮಿಯನ್ನೂ ಸಮುದ್ರವನ್ನೂ ಸುತ್ತಾಡಿಕೊಂಡು ಬರುತ್ತೀರಿ; ಅವನು ನಿಮ್ಮ ಮತಕ್ಕೆ ಸೇರಿದ ಮೇಲೆ ಅವನನ್ನು ನಿಮಗಿಂತ ಎರಡರಷ್ಟು ನರಕಕ್ಕೆ ಪಾತ್ರನಾಗಮಾಡುತ್ತೀರಿ. 16“ಅಯ್ಯೋ, ಕುರುಡು ಮಾರ್ಗದರ್ಶಿಗಳೇ, ‘ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ ಅನ್ನುತ್ತೀರಿ. ಆದರೆ ಒಬ್ಬನು ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು’ ಎಂದು ಹೇಳುತ್ತೀರಿ. 17ಕುರುಡರೇ, ಮೂರ್ಖರೇ, ಯಾವುದು ಹೆಚ್ಚಿನದು? ಚಿನ್ನವೋ, ಚಿನ್ನವನ್ನು ಪ್ರತಿಷ್ಠೆ ಮಾಡುವ ದೇವಾಲಯವೋ? 18ಮತ್ತು ‘ಒಬ್ಬನು ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ ಅನ್ನುತ್ತೀರಿ, ಆದರೆ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು’ ಎಂದು ಹೇಳುತ್ತೀರಿ. 19ಕುರುಡರೇ, ಮೂರ್ಖರೇ, ಯಾವುದು ಹೆಚ್ಚಿನದು? ಕಾಣಿಕೆಯೋ, ಆ ಕಾಣಿಕೆಯನ್ನು ಪ್ರತಿಷ್ಠೆ ಮಾಡುವ ಯಜ್ಞವೇದಿಯೋ? 20ಹೀಗಿರುವುದರಿಂದ ಯಾವನಾದರೂ ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ, ಅದರಲ್ಲಿರುವ ಎಲ್ಲದರ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು. 21ಮತ್ತು ಯಾವನಾದರೂ ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ, ಅದರಲ್ಲಿ ವಾಸಮಾಡುವಾತನ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು. 22ಮತ್ತು ಪರಲೋಕದ ಮೇಲೆ ಆಣೆಯಿಟ್ಟುಕೊಂಡರೆ ದೇವರ ಸಿಂಹಾಸನದ ಮೇಲೆಯೂ ಅದರಲ್ಲಿ ಕುಳಿತಿರುವಾತನ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು. 23ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪುದೀನ, ಮರುಗಪತ್ರೆ, ಸಬಸಿಗೆಸೊಪ್ಪು, ಜೀರಿಗೆಗಳಲ್ಲಿ ದಶಮ ಭಾಗವನ್ನು ಕೊಡುತ್ತೀರಿ ಸರಿ, ಆದರೆ ಧರ್ಮಶಾಸ್ತ್ರದಲ್ಲಿ ಮುಖ್ಯವಾದುದನ್ನು ಅಂದರೆ ನ್ಯಾಯವನ್ನೂ, ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿದ್ದೀರಿ. ಇವುಗಳನ್ನು ಮಾಡಬೇಕು; ಅವುಗಳನ್ನೂ ಬಿಡಬಾರದು. 24ಕುರುಡ ಮಾರ್ಗದರ್ಶಿಗಳೇ, ನೀವು ಸೊಳ್ಳೇ ಸೋಸುವವರು, ಆದರೆ ಒಂಟೆ ನುಂಗುವವರು. 25“ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪಾತ್ರೆ, ಬಟ್ಟಲು ಇವುಗಳ ಹೊರಭಾಗವನ್ನು ಶುಚಿಮಾಡುತ್ತೀರಿ ಆದರೆ ಅವುಗಳ ಒಳಗೆ ಸುಲಿಗೆಯಿಂದಲೂ, ದುರಾಶೆಯಿಂದಲೂ ತುಂಬಿರುತ್ತವೆ. 26ಕುರುಡನಾದ ಫರಿಸಾಯನೇ, ಮೊದಲು ಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು, ಆಗ ಅವುಗಳ ಹೊರಭಾಗವೂ ಶುಚಿಯಾಗುವುದು. 27“ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಸುಂದರವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ. 28ಹಾಗೆಯೇ ನೀವು ಸಹ ಹೊರಗೆ ಜನರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ. ಆದರೆ ಒಳಗೆ ಕಪಟ ಮತ್ತು ಅಕ್ರಮದಿಂದ ತುಂಬಿದವರಾಗಿದ್ದೀರಿ. 29ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ, ನೀತಿವಂತರ ಗೋರಿಗಳನ್ನು ಅಲಂಕರಿಸಿ, 30‘ನಾವು ನಮ್ಮ ಹಿರಿಯರ ಕಾಲದಲ್ಲಿ ಇದ್ದಿದ್ದರೆ ಪ್ರವಾದಿಗಳನ್ನು ಕೊಂದ ಪಾಪದಲ್ಲಿ ಪಾಲುಗಾರರಾಗುತ್ತಿರಲಿಲ್ಲ’ ಅನ್ನುತ್ತೀರಿ. 31ಹಾಗಾದರೆ ನೀವು ಪ್ರವಾದಿಗಳನ್ನು ಕೊಂದವರ ಮಕ್ಕಳೇ ಹೌದು ಎಂಬುದಕ್ಕೆ ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ. 32ಒಳ್ಳೆಯದು, ನೀವು ನಿಮ್ಮ ಹಿರಿಯರ ಪಾಪದ ಅಳತೆಯನ್ನು ಪೂರ್ತಿಮಾಡುತ್ತೀರಿ. 33ಹಾವುಗಳೇ, ಸರ್ಪಜಾತಿಯವರೇ, ನರಕದಂಡನೆಯಿಂದ ಹೇಗೆ ನೀವು ತಪ್ಪಿಸಿಕೊಳ್ಳುವಿರಿ? 34ಆದುದರಿಂದ ನೋಡಿರಿ, ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ಕಳುಹಿಸುತ್ತೇನೆ; ಅವರಲ್ಲಿ ಕೆಲವರನ್ನು ನೀವು ಕೊಲ್ಲುವಿರಿ, ಶಿಲುಬೆಗೆ ಹಾಕುವಿರಿ; ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಚಾಟಿಗಳಿಂದ ಹೊಡೆದು ಊರಿಂದ ಊರಿಗೆ ಅಟ್ಟಿಕೊಂಡು ಹೋಗುವಿರಿ. 35ಹೀಗೆ ನೀತಿವಂತನಾದ ಹೇಬೆಲನ ರಕ್ತವು ಮೊದಲುಗೊಂಡು ನೀವು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತಸುರಿಸಿದ ಅಪರಾಧವು ನಿಮ್ಮ ತಲೆಯ ಮೇಲೆ ಬರುವುದು. 36ಇದೆಲ್ಲಾ ಈ ಸಂತತಿಯವರ ಮೇಲೆ ಬರುವುದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 37“ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ! ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಹುದುಗಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಸೇರಿಸಿಕೊಳ್ಳಲು ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು. 38ನೋಡಿರಿ, ನಿಮ್ಮ ಮನೆಯು ನಿಮಗೆ ಬರಿದಾಗಿ ಬಿಡುತ್ತದೆ. 39ಈಗಿಂದ, ‘ಕರ್ತನ ಹೆಸರಿನಲ್ಲಿ ಬರುವವನು ಧನ್ಯನು ಎಂದು ನೀವಾಗಿ ನೀವು ಹೇಳುವ ತನಕ ನೀವು ನನ್ನನ್ನು ನೋಡುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ’” ಅಂದನು.
ಆರನೆಯ ತಾಸು
21ಅವು ಮುಂದೆ ಹೋಗುವಾಗ ಇವೂ ಮುಂದೆ ಹೋಗುತ್ತಿದ್ದವು, ಅವು ನಿಂತು ಹೋಗುವಾಗ ಇವೂ ನಿಂತುಹೋಗುತ್ತಿದ್ದವು, ಅವು ನೆಲದಿಂದ ಮೇಲಕ್ಕೆ ಏಳುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಏಳುತ್ತಿದ್ದವು; ಏಕೆಂದರೆ ಜೀವಿಗಳ ಆತ್ಮವು ಚಕ್ರಗಳಲ್ಲಿಯೂ ಇತ್ತು. 22ಭೀಕರವಾದ ಮಂಜುಗಡ್ಡೆಯಂತೆ ಥಳಥಳಿಸುವ ಒಂದು ರೀತಿಯ ಗಗನಮಂಡಲ ಆ ಜೀವಿಗಳ ತಲೆಯ ಮೇಲ್ಗಡೆ ಹರಡಿತ್ತು. 23ಅದರ ಕೆಳಗೆ ಜೀವಿಗಳ ರೆಕ್ಕೆಗಳು ನೇರವಾಗಿ ಚಾಚಲ್ಪಟ್ಟು ಒಂದಕ್ಕೊಂದು ತಗಲುತ್ತಿದ್ದವು; ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು. 24ಅವು ಮುಂದೆ ಹೋಗುವಾಗ ಅವುಗಳ ರೆಕ್ಕೆಗಳ ಶಬ್ದವು ಜಲಪ್ರವಾಹದ ಘೋಷದಂತೆ ಸರ್ವಶಕ್ತನ ಧ್ವನಿಯಂತೆ, ಆರ್ಭಟಿಸುವ ಸೈನ್ಯದ ಕೋಲಾಹಲದಂತೆ ನನಗೆ ಕೇಳಿಸಿತು; ಅವು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು. 25ಅವುಗಳ ತಲೆಗಳ ಮೇಲ್ಗಡೆಯ ಗಗನಮಂಡಲದ ಮೇಲಿಂದ ಒಂದು ಧ್ವನಿಯು ಕಿವಿಗೆ ಬಿತ್ತು. ಜೀವಿಗಳು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು. 26ಅವುಗಳ ತಲೆಗಳ ಮೇಲ್ಗಡೆಯ ಗಗನಮಂಡಲ ಮೇಲೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನಾಕಾರವು ಕಾಣಿಸಿತು; ಅದರ ಮೇಲೆ ನರರೂಪದಂಥ ರೂಪವುಳ್ಳ ಒಬ್ಬಾತನು ಆಸೀನನಾಗಿದ್ದನು. 27ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತಕಾಂತಿಯನ್ನು ಕಂಡೆನು; ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಕೆಳಗಡೆ ಬೆಂಕಿಯು ಉರಿಯುತ್ತದೋ ಎಂಬಂತಿರುವ ಮಹಾ ತೇಜಸ್ಸನ್ನು ನೋಡಿದೆನು; ಮತ್ತು ಪ್ರಕಾಶವು ಆತನನ್ನು ಆವರಿಸಿಕೊಂಡಿತ್ತು. 28ಮಳೆಗಾಲದಲ್ಲಿ ಮೇಘಮಂಡಲದೊಳಗೆ ಕಾಮನ ಬಿಲ್ಲು ಹೊಳೆಯುವಂತೆ ಆತನ ಸುತ್ತಲೂ ಪ್ರಕಾಶವು ಹೊಳೆಯುತ್ತಿತ್ತು. ಹೀಗೆ ಯೆಹೋವನ ಮಹಿಮಾದ್ಭುತ ದರ್ಶನವು ಆಯಿತು. ಇದನ್ನು ಕಂಡಾಗ ನಾನು ಅಡ್ಡಬಿದ್ದೆ; ಮಾತನಾಡುವಾತನ ವಾಣಿಯನ್ನು ಕೇಳಿದೆ.
ಸಂಧ್ಯಾ ಪ್ರಾರ್ಥನೆ: ವಾಚನ
5ಅಷ್ಟರಲ್ಲಿ ಫರೋಹನ ಮಗಳು ಸ್ನಾನಕ್ಕಾಗಿ ನೈಲ್ ನದಿಯ ಬಳಿಗೆ ಬಂದಳು. ಆಕೆಯ ಸೇವಕಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಜಂಬುಹುಲ್ಲಿನ ಪೆಟ್ಟಿಗೆಯನ್ನು ಕಂಡು, ದಾಸಿಯೊಬ್ಬಳನ್ನು ಕಳುಹಿಸಿ ಅದನ್ನು ತರಿಸಿದಳು. 6ಪೆಟ್ಟಿಗೆಯನ್ನು ತೆರೆದು ನೋಡುವಾಗ, ಆಹಾ! ಅಳುವ ಕೂಸು. ಆಕೆಗೆ ಅದರ ಮೇಲೆ ಕನಿಕರಹುಟ್ಟಿ, “ಇದು ಇಬ್ರಿಯರ ಮಕ್ಕಳಲ್ಲಿ ಒಂದಾಗಿರಬಹುದು” ಎಂದುಕೊಂಡಳು. 7ಆಗಲೇ ಮಗುವಿನ ಅಕ್ಕ ಬಂದು, “ಫರೋಹನ ಮಗಳಿಗೆ ನಿನಗೋಸ್ಕರ ಈ ಕೂಸನ್ನು ಮೊಲೆಕೊಟ್ಟು ಸಾಕುವುದಕ್ಕೆ ಇಬ್ರಿಯ ಸ್ತ್ರೀಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಬಹುದೋ?” ಎಂದು ಕೇಳಿದಳು. 8ಫರೋಹನ ಮಗಳು ಆಕೆಗೆ, “ಹೋಗು ಕರೆದುಕೊಂಡು ಬಾ” ಎಂದಳು. ಆ ಹುಡುಗಿ ಹೋಗಿ ಕೂಸಿನ ತಾಯಿಯನ್ನೇ ಕರೆದುತಂದಳು. 9ಫರೋಹನ ಮಗಳು ಮಗುವಿನ ತಾಯಿಗೆ, “ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನಗೋಸ್ಕರ ಹಾಲುಕೊಟ್ಟು ಸಾಕಬೇಕು. ನಾನು ನಿನಗೆ ಸಂಬಳವನ್ನು ಕೊಡುವೆನು” ಎಂದು ಹೇಳಿದಳು. ಆ ಸ್ತ್ರೀಯು ಕೂಸನ್ನು ತೆಗೆದುಕೊಂಡು ಹೋಗಿ ಸಾಕಿದಳು. 10ಆ ಹುಡುಗನು ಬೆಳೆದಾಗ, ಅವನನ್ನು ಫರೋಹನ ಮಗಳ ಬಳಿಗೆ ತೆಗೆದುಕೊಂಡು ಬಂದಳು, ಅವನು ಆಕೆಗೆ ಮಗನಾದನು. “ಇವನನ್ನು ನೀರಿನೊಳಗಿನಿಂದ ಎಳೆದುಕೊಂಡಿದ್ದೇನೆ,” ಎಂದು ಹೇಳಿ ಆಕೆಯು ಅವನಿಗೆ “ಮೋಶೆ” ಎಂದು ಹೆಸರಿಟ್ಟಳು.
ಸಂಧ್ಯಾ ಪ್ರಾರ್ಥನೆ: ವಾಚನ
13ಇದಾದ ಬಳಿಕ ಒಂದು ದಿನ ಯೋಬನ ಗಂಡು ಹೆಣ್ಣು ಮಕ್ಕಳು ಹಿರಿಯವನ ಮನೆಯಲ್ಲಿ ಔತಣದಲ್ಲಿ ಊಟಮಾಡಿ ಕುಡಿಯುತ್ತಿರುವಾಗ, 14ಒಬ್ಬ ದೂತನು ಯೋಬನ ಬಳಿಗೆ ಬಂದು, “ನಿನ್ನ ಎತ್ತುಗಳು ಉಳುತ್ತಾ ಇರುವಾಗ ಅವುಗಳ ಹತ್ತಿರ ಕತ್ತೆಗಳು ಮೇಯುತ್ತಾ ಇದ್ದವು. 15ಶೆಬದವರು ಅವುಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಸಂಹರಿಸಿದರು. ಈ ಸುದ್ದಿಯನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದು ಹೇಳಿದನು. 16ಅವನು ಮಾತನಾಡುತ್ತಿರುವಾಗಲೇ ಮತ್ತೊಬ್ಬನು ಬಂದು, “ದೇವರ ಬೆಂಕಿ ಆಕಾಶದಿಂದ ಬಿದ್ದು ಕುರಿಗಳನ್ನೂ, ಆಳುಗಳನ್ನೂ ದಹಿಸಿ ನುಂಗಿಬಿಟ್ಟಿದೆ. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು. 17ಅಷ್ಟರಲ್ಲಿ ಇನ್ನೊಬ್ಬನು ಬಂದು, “ಕಸ್ದೀಯರು ಮೂರು ಗುಂಪುಗಳಾಗಿ ಬಂದು ಒಂಟೆಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಹತ್ಯೆ ಮಾಡಿದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು. 18ಅವನು ಇನ್ನು ಮಾತನಾಡುತ್ತಿರುವಾಗಲೆ ಬೇರೊಬ್ಬನು ಬಂದು, “ನಿನ್ನ ಗಂಡು, ಹೆಣ್ಣು ಮಕ್ಕಳು ತಮ್ಮ ಅಣ್ಣನ ಮನೆಯಲ್ಲಿ ತಿಂದು ಕುಡಿಯುತ್ತಿರುವಾಗ, 19ಅರಣ್ಯದ ಕಡೆಯಿಂದ ಬಿರುಗಾಳಿಯು ಬೀಸಿ ಮನೆಯ ನಾಲ್ಕು ಮೂಲೆಗಳಿಗೆ ಬಡಿದು, ಮನೆಯು ಯೌವನಸ್ಥರ ಮೇಲೆ ಬಿದ್ದಿತು. ಅವರೆಲ್ಲರು ಸತ್ತು ಹೋದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು. 20ಆಗ ಯೋಬನು ಎದ್ದು ಮೇಲಂಗಿಯನ್ನು ಹರಿದುಕೊಂಡು, ತಲೆ ಬೋಳಿಸಿಕೊಂಡು ನೆಲದ ಮೇಲೆ ಅಡ್ಡಬಿದ್ದು ದೇವರನ್ನು ಆರಾಧಿಸಿ, 21“ಏನೂ ಇಲ್ಲದವನಾಗಿ ತಾಯಿಯ ಗರ್ಭದಿಂದ ಬಂದೆನು; ಏನೂ ಇಲ್ಲದವನಾಗಿಯೇ ಗತಿಸಿಹೋಗುವೆನು; ನನಗಿರುವುದನ್ನೆಲ್ಲ ಯೆಹೋವನೇ ಕೊಟ್ಟನು, ಅವುಗಳನ್ನು ಯೆಹೋವನೇ ತೆಗೆದುಕೊಂಡನು; ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ” ಎಂದು ಹೇಳಿದನು. 22ಇದೆಲ್ಲದರಲ್ಲಿಯೂ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ.
ಸುವಾರ್ತೆ (ಪೂರ್ವಪವಿತ್ರೀಕೃತ ಕಾಣಿಕೆಗಳ ಆರಾಧನೆ)
36“ಇದಲ್ಲದೆ ಆ ದಿನವನ್ನು ಕುರಿತು ಆ ಗಳಿಗೆಯನ್ನು ಕುರಿತು, ನನ್ನ ತಂದೆಗೆ ಮಾತ್ರ ತಿಳಿದಿದೆಯೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ಕೂಡ ತಿಳಿಯದು, ಮಗನಿಗೂ ತಿಳಿಯದು, 37ನೋಹನ ದಿನಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಬರೋಣವು ಇರುವುದು. 38ಹೇಗೆಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆಮಾಡಿಕೊಳ್ಳುತ್ತಾ, ಮದುವೆಮಾಡಿಕೊಡುತ್ತಾ ಇದ್ದರು. 39ಪ್ರಳಯದ ನೀರು ಬಂದು ಎಲ್ಲರನ್ನು ಕೊಚ್ಚಿಕೊಂಡು ಹೋಗುವ ತನಕ ಅವರು ಏನೂ ತಿಳಿಯದೆ ಇದ್ದರಲ್ಲಾ. ಅದರಂತೆಯೇ ಮನುಷ್ಯಕುಮಾರನು ಬರುವ ಕಾಲದಲ್ಲಿಯೂ ಇರುವುದು. 40ಆಗ ಇಬ್ಬರು ಹೊಲದಲ್ಲಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಒಬ್ಬನು ಕೈ ಬಿಡಲ್ಪಡುವನು. 41ಇಬ್ಬರು ಹೆಂಗಸರು ಬೀಸುವ ಕಲ್ಲಿನ ಮುಂದೆ ಕುಳಿತು ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಇನ್ನೊಬ್ಬಳು ಕೈ ಬಿಡಲ್ಪಡುವಳು. 42“ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲದಿರುವುದರಿಂದ ಎಚ್ಚರವಾಗಿರಿ. 43ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ತನ್ನ ಮನೆಗೆ ಕನ್ನಾ ಹಾಕಗೊಡಿಸದೇ ಕಾಯುತ್ತಿದ್ದನೆಂದು ತಿಳಿದುಕೊಳ್ಳಿರಿ. 44ಆದಕಾರಣ ನೀವು ಸಹ ಸಿದ್ಧವಾಗಿರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ. 45ಹಾಗಾದರೆ ಯಜಮಾನನು ತನ್ನ ಮನೆಯವರಿಗೆ ಹೊತ್ತು ಹೊತ್ತಿಗೆ ಆಹಾರ ಕೊಡುವುದಕ್ಕಾಗಿ ಅವರ ಮೇಲಿರಿಸಿದ ನಂಬಿಗಸ್ತನೂ, ವಿವೇಕಿಯೂ ಆದಂಥ ಆಳು ಯಾರು? 46ಯಜಮಾನನು ಬರುವಾಗ ಯಾವ ಆಳು ಹೀಗೆ ಮಾಡುತ್ತಿರುವುದನ್ನು ಕಾಣುವನೋ ಆ ಆಳು ಧನ್ಯನು. 47ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲ್ವಿಚಾರಕನನ್ನಾಗಿ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 48ಆದರೆ ಆ ದುಷ್ಟ ಆಳು, ‘ನನ್ನ ಯಜಮಾನನು ಬರುವುದಕ್ಕೆ ತಡ ಮಾಡುತ್ತಾನೆ’ ಎಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು 49ತನ್ನ ಜೊತೆ ಆಳುಗಳನ್ನು ಹೊಡೆಯುವುದಕ್ಕೂ, ಕುಡುಕರ ಸಂಗಡ ತಿನ್ನುವುದಕ್ಕೂ, ಕುಡಿಯುವುದಕ್ಕೂ ಪ್ರಾರಂಭಿಸಿದಾದರೆ, 50ಅವನು ನೆನಸದ ದಿನದಲ್ಲಿಯೂ, ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾಗಿ ದಂಡಿಸಿ 51ಕಪಟಿಗಳಿಗೆ ಆಗತಕ್ಕ ಗತಿಯನ್ನು ಅವನಿಗೂ ಮಾಡುವನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು. 25:1“ಪರಲೋಕ ರಾಜ್ಯವು ತಮ್ಮ ದೀಪಾರತಿಗಳನ್ನು ತೆಗೆದುಕೊಂಡು ಮದಲಿಂಗನನ್ನು ಸಂಧಿಸುವುದಕ್ಕೆ ಹೊರಟಂತಹ ಹತ್ತು ಮಂದಿ ಕನ್ನಿಕೆಯರಿಗೆ ಹೋಲಿಕೆಯಾಗಿದೆ. 2ಅವರಲ್ಲಿ ಐದು ಮಂದಿ ಬುದ್ಧಿವಂತೆಯರು, ಐದು ಮಂದಿ ಬುದ್ಧಿಹೀನರು. 3ಅವಿವೇಕಿಗಳು ತಮ್ಮ ದೀಪಾರತಿಗಳನ್ನು ತೆಗೆದುಕೊಂಡರು, ಆದರೆ ತಮ್ಮೊಂದಿಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. 4ಆದರೆ ಬುದ್ಧಿವಂತರಾದ ಕನ್ನಿಕೆಯರು ತಮ್ಮ ದೀಪಾರತಿಗಳೊಂದಿಗೆ ಪಾತ್ರೆಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು. 5ಮದಲಿಂಗನು ಬರುವುದಕ್ಕೆ ತಡಮಾಡಲು ಅವರೆಲ್ಲರೂ ತೂಕಡಿಸಿ ನಿದ್ರಿಸಿದರು. 6ಆದರೆ ಅರ್ಧರಾತ್ರಿಯಲ್ಲಿ, ‘ಇಗೋ, ಮದಲಿಂಗನು ಬರುತ್ತಿದ್ದಾನೆ ಅವನನ್ನು ಎದುರುಗೊಳ್ಳಲು ಹೊರಡಿರಿ’ ಎಂಬ ಕೂಗು ಕೇಳಿಸಿತು. 7ಆಗ ಆ ಕನ್ನಿಕೆಯರೆಲ್ಲರು ಎಚ್ಚೆತ್ತು ತಮ್ಮ ದೀಪಾರತಿಗಳನ್ನು ಸರಿಮಾಡಿಕೊಂಡರು. 8ಆಗ ಬುದ್ಧಿಹೀನರಾದ ಕನ್ನಿಕೆಯರು ಬುದ್ಧಿವಂತರಾಗಿದ್ದ ಕನ್ನಿಕೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿರಿ. 9ಏಕೆಂದರೆ ನಮ್ಮ ದೀಪಗಳು ಆರಿಹೋಗುತ್ತವೆ’ ಎಂದು ಕೇಳಿದರು. ಅದಕ್ಕೆ ಆ ಬುದ್ಧಿವಂತರಾದ ಕನ್ನಿಕೆಯರು, ಆಗುವುದಿಲ್ಲ ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು’ ಅಂದರು. 10ಅವರು ಕೊಂಡುಕೊಳ್ಳುವುದಕ್ಕೆ ಹೊರಟುಹೋದಾಗ ಮದಲಿಂಗನು ಬಂದನು. ಸಿದ್ಧವಾಗಿದ್ದವರು ಅವನ ಸಂಗಡ ಮದುವೆಯ ಮನೆಯೊಳಗೆ ಹೋದರು, ಬಾಗಿಲನ್ನು ಮುಚ್ಚಲಾಯಿತು. 11ಅನಂತರ ಉಳಿದ ಕನ್ನಿಕೆಯರು ಸಹ ಬಂದು, ‘ಕರ್ತನೇ, ಕರ್ತನೇ, ನಮಗೆ ಬಾಗಿಲು ತೆರೆಯಿರಿ’ ಅಂದರು. 12ಆದರೆ ಆತನು ಅವರಿಗೆ ಉತ್ತರವಾಗಿ, ‘ನಿಮ್ಮನ್ನು ನಾನರಿಯೆನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅಂದನು. 13ಏಕೆಂದರೆ ಆ ದಿನವಾದರೂ ಗಳಿಗೆಯಾದರೂ ನಿಮಗೆ ತಿಳಿಯದು, ಆದಕಾರಣ ಎಚ್ಚರವಾಗಿರಿ. 14“ದೇವರ ರಾಜ್ಯವು ಹೇಗೆಂದರೆ ದೇಶಾಂತರಕ್ಕೆ ಹೊರಟ್ಟಿದ್ದ ಒಬ್ಬ ಮನುಷ್ಯನು ತನ್ನ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವುದು. 15ಅವನು ಒಬ್ಬನಿಗೆ ಐದು ತಲಾಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ತಲಾಂತನ್ನು ವಹಿಸಿಕೊಟ್ಟು ತನ್ನ ಪ್ರಯಾಣಕ್ಕೆ ಹೋದನು. 16ತಕ್ಷಣವೇ ಐದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಗಳಿಸಿಕೊಂಡನು. 17ಹಾಗೆಯೇ ಎರಡು ತಲಾಂತು ಹೊಂದಿದವನು ಇನ್ನೂ ಎರಡು ಸಂಪಾದಿಸಿಕೊಂಡನು. 18ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು. 19ಬಹುಕಾಲದ ಮೇಲೆ ಆ ಸೇವಕರ ಯಜಮಾನನು ಬಂದು ಅವರಿಂದ ಲೆಕ್ಕ ತೆಗೆದುಕೊಳ್ಳಲು 20ಐದು ತಲಾಂತುಗಳು ಹೊಂದಿದವನು ಮುಂದೆ ಬಂದು ಇನ್ನೂ ಐದು ತಲಾಂತುಗಳನ್ನು ತಂದು, ‘ಯಜಮಾನನೇ, ನೀನು ಐದು ತಲಾಂತಗಳನ್ನು ನನಗೆ ಕೊಟ್ಟಿದ್ದೆಯಲ್ಲಾ, ಇಗೋ, ಇನ್ನು ಐದು ತಲಾಂತು ಸಂಪಾದಿಸಿದ್ದೇನೆ’ ಅಂದನು. 21ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ; ನೀನು ಸ್ವಲ್ಪ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದಿ; ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಒಡೆಯನ ಸಂತೋಷದಲ್ಲಿ ಸೇರು’ ಅಂದನು. 22ಆಗ ಎರಡು ತಲಾಂತು ಹೊಂದಿದವನು ಮುಂದೆ ಬಂದು, ‘ಯಜಮಾನನೇ, ನೀನು ಎರಡು ತಲಾಂತನ್ನು ನನಗೆ ಒಪ್ಪಿಸಿದ್ದೆಯಲ್ಲಾ; ಇಗೋ, ಇನ್ನು ಎರಡು ತಲಾಂತು ಸಂಪಾದಿಸಿದ್ದೇನೆ’ ಅಂದನು. 23ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ; ನೀನು ಸ್ವಲ್ಪ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಒಡೆಯನ ಸಂತೋಷದಲ್ಲಿ ಸೇರು’ ಎಂದು ಹೇಳಿದನು. 24ತರುವಾಯ ಒಂದು ತಲಾಂತು ಹೊಂದಿದವನು ಸಹ ಮುಂದೆಬಂದು, ‘ಯಜಮಾನನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಆಗಿರುವ ಕಠಿಣ ಮನುಷ್ಯನು ಎಂದು ನಾನು ತಿಳಿದು 25ಹೆದರಿ, ಹೊರಟುಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೇ ಸಲ್ಲಿಸುತ್ತಿದ್ದೇನೆ’ ಅಂದನು. 26ಆಗ ಅವನ ಯಜಮಾನನು ಅವನಿಗೆ, ‘ಮೈಗಳ್ಳನಾದ ದುಷ್ಟ ಸೇವಕನೇ; ನೀನು ನನ್ನನ್ನು ಬಿತ್ತದಿರುವಲ್ಲಿ ಕೊಯ್ಯುವವನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದಿದ್ದೇಯಾ? 27ಹಾಗಾದರೆ, ನೀನು ನನ್ನ ಹಣವನ್ನು ಸಾಹುಕಾರರಲ್ಲಿ ಬಡ್ಡಿಗೆ ಹಾಕಬೇಕಾಗಿತ್ತು; ನಾನು ಬಂದು ನನ್ನದನ್ನು ಬಡ್ಡಿ ಸಹಿತ ಪಡೆದುಕೊಳ್ಳುತ್ತಿದ್ದೆನು ಎಂದು ಹೇಳಿ, 28ಅವನಿಂದ ಆ ತಲಾಂತನ್ನು ತೆಗೆದು ಹತ್ತು ತಲಾಂತು ಇರುವ ಸೇವಕನಿಗೆ ಕೊಟ್ಟನು. 29ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲ್ಪಡುವುದು, ಅವರಿಗೆ ಇನ್ನೂ ಹೆಚ್ಚಾಗುವುದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು. 30ಮತ್ತು ನಿಷ್ಪ್ರಯೋಜಕನಾದ ಈ ಸೇವಕನನ್ನು ಹೊರಗೆ ಕಗ್ಗತ್ತಲೆಗೆ ಹಾಕಿಬಿಡಿರಿ ಎಂದು ಅಪ್ಪಣೆಕೊಟ್ಟನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು.’ 31“ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಸಮಸ್ತ ದೇವದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು; 32ಆಗ ಎಲ್ಲಾ ದೇಶಗಳ ಜನರನ್ನೂ ಆತನ ಸಮ್ಮುಖದಲ್ಲಿ ತಂದು ಸೇರಿಸುವರು. ಕುರುಬನು ಕುರಿಗಳನ್ನೂ, ಆಡುಗಳನ್ನೂ ಬೇರ್ಪಡಿಸುವ ಪ್ರಕಾರ ಆತನು ಅವರನ್ನು ಬೇರ್ಪಡಿಸುವನು. 33ಕುರಿಗಳನ್ನು ತನ್ನ ಬಲಗಡೆಯಲ್ಲಿ ಮತ್ತು ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು. 34ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವತ್ತಾಗಿ ಪಡೆದುಕೊಳ್ಳಿರಿ. 35ನಾನು ಹಸಿದಿದ್ದೆನು, ನನಗೆ ಊಟ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವುದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನಗೆ ಆಶ್ರಯ ಕೊಟ್ಟಿರಿ; 36ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವುದಕ್ಕೆ ಕೊಟ್ಟಿರಿ; ಅಸ್ವಸ್ಥನಾಗಿದ್ದಾಗ, ನನ್ನನ್ನು ಆರೈಕೆ ಮಾಡಿದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುವನು. 37ಅದಕ್ಕೆ ಉತ್ತರವಾಗಿ ನೀತಿವಂತರು, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನು ಕಂಡು ನಿನಗೆ ಊಟ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವುದಕ್ಕೆ ಕೊಟ್ಟೆವು? 38ಯಾವಾಗ ನೀನು ಪರದೇಶಿಯಾಗಿರುವುದನ್ನು ಕಂಡು ಆಶ್ರಯ ನೀಡಿದೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವುದಕ್ಕೆ ಕೊಟ್ಟೆವು? 39ಯಾವಾಗ ನೀನು ಅಸ್ವಸ್ಥನಾಗಿದ್ದಾಗ ಅಥವಾ ಸೆರೆಮನೆಯಲ್ಲಿ ಇದ್ದುದನ್ನು ಕಂಡು ನಿನ್ನನ್ನು ನೋಡುವುದಕ್ಕೆ ಬಂದೆವು’ ಎಂದು ಕೇಳುವರು. 40ಅದಕ್ಕೆ ಉತ್ತರವಾಗಿ ಅರಸನು, ‘ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು. 41ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ. 42ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ. 43ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಡಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವುದಕ್ಕೆ ಬರಲಿಲ್ಲವೆಂದು’ ಹೇಳುವನು. 44ಅದಕ್ಕೆ ಉತ್ತರವಾಗಿ ಅವರೂ ಸಹ, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನೂ, ನೀನು ಬಾಯಾರಿದ್ದನ್ನೂ, ನೀನು ಪರದೇಶಿಯಾಗಿದ್ದನ್ನೂ, ಬಟ್ಟೆಯಿಲ್ಲದವನಾಗಿದ್ದನ್ನೂ, ಅಸ್ವಸ್ಥನಾಗಿದ್ದುದನ್ನೂ, ಸೆರೆಮನೆಯಲ್ಲಿದ್ದುದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು?’ ಅನ್ನುವರು. 45ಆಗ ಆತನು ಉತ್ತರವಾಗಿ ಅವರಿಗೆ, ‘ನೀವು ಈ ಕೇವಲ ಅಲ್ಪರಾದವರಲ್ಲಿ ಒಬ್ಬನಿಗೆ ಏನನ್ನು ಮಾಡದೆ ಹೋದಿರೋ ಅದನ್ನು ನನಗೂ ಮಾಡದೆ ಹೋದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು. 46ಮತ್ತು ಅನೀತಿವಂತರಾದ ಇವರು ನಿತ್ಯದಂಡನೆಗೆ ಹೋಗುವರು ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು” ಎಂದು ಹೇಳಿದನು. 26:1ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತನ್ನ ಶಿಷ್ಯರಿಗೆ, “ಎರಡು ದಿನಗಳಾದ ಮೇಲೆ ಪಸ್ಕಹಬ್ಬ ಬರುತ್ತದೆಂದು ನೀವು ಬಲ್ಲಿರಿ; 2ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿ ಕೊಡಲಾಗುವುದು” ಎಂದು ಹೇಳಿದನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 14 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 27 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು