ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 25 ಏಪ್ರಿಲ್
ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 12 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 25 ಏಪ್ರಿಲ್ 2027
ಭಾನುವಾರ
ಹಬ್ಬಗಳು ಮತ್ತು ಸಂತರು
ಗರಿಗಳ ಭಾನುವಾರ. ನಮ್ಮ ಕರ್ತನ ಯೆರೂಸಲೇಮ್ ಪ್ರವೇಶ
ಮಹಾ ಉಪವಾಸ ಕಾಲ
ಮೀನಿಗೆ ಅನುಮತಿ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸಂಧ್ಯಾ ಪ್ರಾರ್ಥನೆ: ವಾಚನ
1ಯಾಕೋಬನು ತನ್ನ ಮಕ್ಕಳನ್ನು ಕರೆಯಿಸಿ ಅವರಿಗೆ, ನೀವೆಲ್ಲರೂ ಕೂಡಿ ಬನ್ನಿರಿ. ಮುಂದಿನ ದಿನಗಳಲ್ಲಿ ನಿಮಗೆ ಸಂಭವಿಸುವುದನ್ನು ನಿಮಗೆ ತಿಳಿಸುತ್ತೇನೆ. 2ಯಾಕೋಬನ ಮಕ್ಕಳೇ, ನೀವೆಲ್ಲರೂ ಕೂಡಿ ಬಂದು ಕೇಳಿರಿ. ನಿಮ್ಮ ತಂದೆಯಾದ ಇಸ್ರಾಯೇಲನ ಮಾತನ್ನು ಲಾಲಿಸಿರಿ. 8ಯೆಹೂದನೇ, ನಿನ್ನ ಅಣ್ಣತಮ್ಮಂದಿರು ನಿನ್ನನ್ನೇ ಸ್ತುತಿಸುವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವುದು. ನಿನ್ನ ಸಹೋದರರು ನಿನಗೆ ಆಡ್ಡ ಬೀಳುವರು. 9ಯೆಹೂದನು ಪ್ರಾಯದ ಸಿಂಹದಂತಿದ್ದಾನೆ. ನನ್ನ ಪುತ್ರನೇ, ನೀನು ಮೃಗವನ್ನು ಹಿಡಿದು ಕೊಂದು ಬೆಟ್ಟವನ್ನು ಸೇರಿದ ಸಿಂಹದೋಪಾದಿಯಲ್ಲಿದ್ದೀ. ಅವನು ಸಿಂಹದಂತೆ ಕಾಲು ಮುದುರಿ ಹೊಂಚುಹಾಕಿಕೊಂಡಿದ್ದಾನೆ. ಮೃಗ ರಾಜನಿಗೆ ಸಮನಾದ ಇವನನ್ನು ಕೆಣಕುವುದು ಯಾರಿಂದಾದೀತು? 10ರಾಜದಂಡವನ್ನು ಹಿಡಿಯತಕ್ಕವನು ಶಿಲೋವಿನಿಂದ ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವುದಿಲ್ಲ. ಮುದ್ರೆ ಕೋಲು ಅವನ ಪಾದಗಳ ಬಳಿಯಿಂದ ಕದಲುವುದಿಲ್ಲ. ಅನ್ಯಜನಾಂಗಗಳೂ ಅವನಿಗೆ ವಿಧೇಯರಾಗಿರುವರು. 11ಅವನು ತನ್ನ ವಾಹನ ಮೃಗವನ್ನು ವಿಶಿಷ್ಟವಾದ ದ್ರಾಕ್ಷಾಲತೆಗೆ ಕಟ್ಟುವನು. ದ್ರಾಕ್ಷಿಯ ಬಳ್ಳಿಗೆ ತನ್ನ ಕತ್ತೆಮರಿಯನ್ನು ಬಿಗಿಯುವನು; ದ್ರಾಕ್ಷಾರಸದಲ್ಲಿ ತನ್ನ ಅಂಗಿಗಳನ್ನು ಒಗೆಯುವನು; ದ್ರಾಕ್ಷಾರಸದಲ್ಲಿಯೇ ತನ್ನ ವಸ್ತ್ರಗಳನ್ನು ಅದ್ದಿ ತೊಳೆಯುವನು. 12ದ್ರಾಕ್ಷಾರಸದ ಸಮೃದ್ಧಿಯಿಂದ ಅವನ ಕಣ್ಣುಗಳು ಕೆಂಪಾಗಿ ಇರುವವು. ಹಾಲಿನ ಸಮೃದ್ಧಿಯಿಂದ ಅವನ ಹಲ್ಲುಗಳು ಬೆಳ್ಳಗಾಗಿ ಇರುವವು.
ಸಂಧ್ಯಾ ಪ್ರಾರ್ಥನೆ: ವಾಚನ
14ಚೀಯೋನ್ ಕುವರಿಯೇ, ಹರ್ಷಧ್ವನಿಗೈ! ಇಸ್ರಾಯೇಲೇ, ಜಯಘೋಷಮಾಡು! ಯೆರೂಸಲೇಮ್ ಕುವರಿಯೇ, ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು! 15ನಿನಗೆ ವಿಧಿಸಿದ ದಂಡನೆಯನ್ನು ಯೆಹೋವನು ತಪ್ಪಿಸಿದ್ದಾನೆ, ನಿನ್ನ ಶತ್ರುವನ್ನು ತಳ್ಳಿಬಿಟ್ಟಿದ್ದಾನೆ; ಇಸ್ರಾಯೇಲಿನ ಅರಸನಾದ ಯೆಹೋವನು ನಿನ್ನ ಮಧ್ಯದಲ್ಲಿದ್ದಾನೆ; ಇನ್ನು ಕೇಡಿಗೆ ಅಂಜದಿರುವಿ. 16ಆ ದಿನದಲ್ಲಿ ಯೆರೂಸಲೇಮಿಗೆ, “ಚೀಯೋನೇ, ಭಯಪಡಬೇಡ, ನಿನ್ನ ಕೈಗಳು ಜೋಲುಬೀಳದಿರಲಿ; 17ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು; ತನ್ನ ಪ್ರೀತಿಯಲ್ಲಿ ನಿನ್ನ ಜೀವನವನ್ನು ನೂತನಗೊಳಿಸುವನು; ನಿನ್ನಲ್ಲಿ ಆನಂದಿಸಿ ಹರ್ಷಧ್ವನಿಗೈಯುವನು. 18ಅವಮಾನವು ನಮ್ಮ ಪಟ್ಟಣದ ಮೇಲೆ ಹೊರೆಯಾಗಿ ಕಾಡುತ್ತಿದೆ ಎಂದು ತಿಳಿದು ಹಬ್ಬ ಉತ್ಸವಗಳಿಗೆ ದೂರವಾಗಿ ಶೋಕಿಸುತ್ತಿರುವ ನಿನ್ನವರನ್ನು ಒಟ್ಟಿಗೆ ಬರಮಾಡುವೆನು. 19ಆಹಾ, ಆ ಕಾಲದಲ್ಲಿ ನಿನ್ನನ್ನು ಬಾಧಿಸುವವರಿಗೆ ತಕ್ಕದ್ದನ್ನು ಮಾಡುವೆನು; ನಿನ್ನಲ್ಲಿ ಕುಂಟುವವರನ್ನು ರಕ್ಷಿಸುವೆನು, ಚದರಿ ಹೋದವರನ್ನು ಕೂಡಿಸುವೆನು; ಅಂತು ಲೋಕದಲ್ಲೆಲ್ಲಾ ಅವಮಾನಪಟ್ಟವರಿಗೆ ಸ್ತೋತ್ರ ಕೀರ್ತನೆಗಳನ್ನು ಉಂಟುಮಾಡುವೆನು.
ಸಂಧ್ಯಾ ಪ್ರಾರ್ಥನೆ: ವಾಚನ
9ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನೂ, ರಕ್ಷಿಸುವಾತನೂ, ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆ ಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ. 10ನಾನು ಎಫ್ರಾಯೀಮಿನ ರಥಬಲವನ್ನೂ, ಯೆರೂಸಲೇಮಿನ ಅಶ್ವಬಲವನ್ನೂ ನಿಶ್ಶೇಷಮಾಡುವೆನು; ಯುದ್ಧದ ಬಿಲ್ಲು ಇಲ್ಲವಾಗುವುದು; ಆತನು ಕೊಡುವ ಅಪ್ಪಣೆಯು ಜನಾಂಗಗಳಿಗೆ ಸಮಾಧಾನಕರವಾಗಿರುವುದು; ಆತನ ಆಳ್ವಿಕೆಯು ಸಮುದ್ರದಿಂದ ಸಮುದ್ರದವರೆಗೂ ಯೂಫ್ರೆಟಿಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಹರಡಿಕೊಂಡಿರುವುದು. 11ನನ್ನ ಜನರೇ, ನೀವು ಒಡಂಬಡಿಕೆ ಮಾಡಿಕೊಂಡಾಗ ಸುರಿಸಿದ ರಕ್ತವನ್ನು ನಾನು ಸ್ಮರಿಸಿ ಸೆರೆಯಾಗಿರುವ ನಿನ್ನವರನ್ನು ನೀರಿಲ್ಲದ ಆ ಬಾವಿಯೊಳಗಿಂದ ಬರಮಾಡುವೆನು. 12ನಿರೀಕ್ಷೆ ಹೊಂದಿದ ಸೆರೆಯವರೇ, ನಿಮ್ಮ ದುರ್ಗಕ್ಕೆ ಹಿಂದಿರುಗಿರಿ; ನಿಮಗೆ ಎರಡರಷ್ಟು ಸುಖವನ್ನು ದಯಪಾಲಿಸುವೆನೆಂದು ಈಗಲೂ ಪ್ರಕಟಿಸುತ್ತೇನೆ. 13ಯೆಹೂದವೆಂಬ ಬಿಲ್ಲನ್ನು ಬೊಗ್ಗಿಸಿಕೊಂಡಿದ್ದೇನೆ. ಅದರಲ್ಲಿ ಎಫ್ರಾಯೀಮ್ ಎಂಬ ಬಾಣವನ್ನು ಹೂಡಿದ್ದೇನೆ; ಚೀಯೋನೇ, ನಾನು ನಿನ್ನ ಸಂತಾನವನ್ನು ಗ್ರೀಕ್ ಸಂತಾನಕ್ಕೆ ವಿರುದ್ಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯನ್ನಾಗಿ ಮಾಡುವೆನು. 14ಯೆಹೋವನು ಸ್ವಜನರಿಗಾಗಿ ಅವರ ಮೇಲೆ ಕಾಣಿಸಿಕೊಳ್ಳುವನು; ಆತನ ಬಾಣವು ಸಿಡಿಲಿನಂತೆ ಹಾರುವುದು; ಕರ್ತನಾದ ಯೆಹೋವನು ತುತ್ತೂರಿಯನ್ನು ಊದಿ ದಕ್ಷಿಣ ಪ್ರಾಂತ್ಯದ ಬಿರುಗಾಳಿಗಳೊಡನೆ ನುಗ್ಗುವನು. 15ಸೇನಾಧೀಶ್ವರನಾದ ಯೆಹೋವನು ತನ್ನ ಜನರನ್ನು ಕಾಪಾಡುವನು; ಅವರು ಶತ್ರುಗಳನ್ನು ನುಂಗಿಬಿಡುವರು, ಕವಣೆಯ ಕಲ್ಲುಗಳನ್ನು ತುಳಿದುಹಾಕುವರು; ರಕ್ತವನ್ನು ಕುಡಿದು ಅಮಲೇರಿದವರಾಗಿ ಭೋರ್ಗರೆಯುವರು; ಬೋಗುಣಿಗಳಂತೆಯೂ, ಯಜ್ಞವೇದಿಯ ಮೂಲೆಗಳಂತೆ ರಕ್ತಪೂರ್ಣರಾಗಿರುವರು.
ಉದಯಕಾಲದ ಪ್ರಾರ್ಥನೆ: ಸುವಾರ್ತೆ
1ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿಗೆ ಸಮೀಪಿಸಿ ಆಲಿವ್ ಎಣ್ಣೆಯ ಮರಗಳ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೆ ಬಂದಾಗ 2ಆತನು ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಹೋದಕೂಡಲೆ ಅಲ್ಲಿ ಕಟ್ಟಿರುವ ಕತ್ತೆಯನ್ನೂ ಅದರೊಂದಿಗೆ ಇರುವ ಮರಿಯನ್ನೂ ಕಾಣುವಿರಿ; ಅವುಗಳನ್ನು ಬಿಚ್ಚಿ ನನ್ನ ಹತ್ತಿರಕ್ಕೆ ತನ್ನಿರಿ. 3ಯಾವನಾದರೂ ನಿಮಗೆ ಏನಾದರೂ ಹೇಳಿದರೆ, ‘ಇವು ನಮ್ಮ ಕರ್ತನಿಗೆ ಬೇಕಾಗಿವೆ’ ಎಂದು ನೀವು ಹೇಳಿರಿ; ಅವನು ಕೂಡಲೆ ಅವುಗಳನ್ನು ಬಿಟ್ಟು ಕೊಡುವನು” ಎಂದು ಹೇಳಿ ಕಳುಹಿಸಿದನು. 4ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದಾಯಿತು; ಅದೇನೆಂದರೆ, 5“ಚೀಯೋನ್ ಪುತ್ರಿಯೇ, ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಿದ್ದಾನೆ; ಆತನು ಸಾತ್ವಿಕ ಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆಂದು” ಹೇಳಿರಿ ಎಂಬುದು. 6ಆಗ ಶಿಷ್ಯರು ಹೋಗಿ ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿದರು. 7ಕತ್ತೆಯನ್ನೂ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಲು ಯೇಸು ಹತ್ತಿ ಕುಳಿತುಕೊಂಡನು. 8ಆಗ ಜನರ ಗುಂಪಿನಲ್ಲಿ ಬಹಳ ಮಂದಿ ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು; ಬೇರೆ ಕೆಲವರು ಮರಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು. 9ಆತನ ಹಿಂದೆ ಮುಂದೆ ಗುಂಪಾಗಿ ಹೋಗುತ್ತಿದ್ದ ಜನರು, “ದಾವೀದನ ಕುಮಾರನಿಗೆ ಹೊಸನ್ನ! ಕರ್ತನ ಹೆಸರಿನಲ್ಲಿ ಬರುವವನು ಧನ್ಯನು! ಮೇಲಣ ಲೋಕಗಳಲ್ಲಿ ಹೊಸನ್ನ!” ಎಂದು ಆರ್ಭಟಿಸಿದರು. 10ಯೇಸು ಯೆರೂಸಲೇಮನ್ನು ಪ್ರವೇಶಿಸಲು ಪಟ್ಟಣದಲ್ಲೆಲ್ಲಾ ಗದ್ದಲವಾಗಿ, “ಈತನು ಯಾರು?” ಅಂದರು. 11ಅದಕ್ಕೆ ಆ ಗುಂಪಿನ ಜನರು, “ಈತನು ಗಲಿಲಾಯದ ನಜರೇತಿನ ಪ್ರವಾದಿಯಾದ ಯೇಸು” ಅಂದರು. 15ಆದರೆ ಮುಖ್ಯಯಾಜಕರೂ ಶಾಸ್ತ್ರಿಗಳೂ ಆತನು ಮಾಡಿದ ಆಶ್ಚರ್ಯಕರವಾದ ಕಾರ್ಯಗಳನ್ನು ನೋಡಿ ಹಾಗು “ದಾವೀದನ ಕುಮಾರನಿಗೆ ಹೊಸನ್ನ” ಎಂದು ದೇವಾಲಯದಲ್ಲಿ ಹುಡುಗರು ಕೂಗುತ್ತಿರುವುದನ್ನು ಕೇಳಿ ಕೋಪಗೊಂಡರು. 16ಆತನಿಗೆ, “ಇವರು ಹೇಳುವುದನ್ನು ಕೇಳುತ್ತಿರುವೆಯಾ” ಎಂದು ಹೇಳಲು ಯೇಸು, “ಹೌದು, ಕೇಳುತ್ತಿದ್ದೇನೆ, ಆದರೆ ‘ಸಣ್ಣ ಮಕ್ಕಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿರುವಿ’ ಎಂಬುದನ್ನು ನೀವು ಎಂದಾದರೂ ಓದಲಿಲ್ಲವೋ?” ಎಂದು ಕೇಳಿದನು. 17ಬಳಿಕ ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಬಂದು ಅಲ್ಲಿ ರಾತ್ರಿ ಮಲಗಿದನು.
ಪತ್ರಿಕೆ
4ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ, ಸಂತೋಷಪಡಿರಿ ಎಂದು ಪುನಃ ಹೇಳುತ್ತೇನೆ. 5ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ, ಕರ್ತನು ಹತ್ತಿರವಾಗಿದ್ದಾನೆ. 6ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯಗಳಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ಕರ್ತನಿಗೆ ತಿಳಿಯಪಡಿಸಿರಿ. 7ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ, ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಪಾಡುವುದು. 8ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ. 9ನೀವು ಯಾವುದನ್ನು ನನ್ನಿಂದ ಕಲಿತು ಹೊಂದಿದ್ದೀರೋ, ಮತ್ತು ಯಾವುದನ್ನು ನನ್ನಲ್ಲಿ ಕೇಳಿ ಕಂಡಿರುವಿರೋ ಅದನ್ನೇ ಮಾಡುತ್ತಾ ಬನ್ನಿರಿ. ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.
ಸುವಾರ್ತೆ
1ಪಸ್ಕ ಹಬ್ಬಕ್ಕೆ ಇನ್ನು ಆರು ದಿನಗಳು ಇರಲಾಗಿ ಯೇಸುವು, ಸತ್ತವರೊಳಗಿಂದ ಎಬ್ಬಿಸಿದ ಲಾಜರನು ವಾಸವಾಗಿದ್ದ ಬೇಥಾನ್ಯಕ್ಕೆ ಬಂದನು. 2ಯೇಸುವಿಗೆ ಅಲ್ಲಿ ಔತಣವನ್ನು ಏರ್ಪಡಿಸಿದ್ದರು. ಮಾರ್ಥಳು ಉಪಚಾರ ಮಾಡುತ್ತಿದ್ದಳು. ಲಾಜರನು ಆತನ ಜೊತೆಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನಾಗಿದ್ದನು. 3ಆಗ ಮರಿಯಳು ಬಹು ಬೆಲೆಯುಳ್ಳ ಸ್ವಚ್ಛ ಜಟಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತ್ತು. 4ಆಗ ಆತನ ಶಿಷ್ಯರಲ್ಲಿ ಒಬ್ಬನು ಅಂದರೆ, ಆತನನ್ನು ಹಿಡಿದುಕೊಡುವುದಕ್ಕಿದ್ದ ಇಸ್ಕರಿಯೋತ ಯೂದನೆಂಬುವನು, 5“ಈ ತೈಲವನ್ನು ಮುನ್ನೂರು ಬೆಳ್ಳಿನಾಣ್ಯಕ್ಕೆ ಮಾರಿ ಬಡವರಿಗೆ ಕೊಡಬಹುದಿತ್ತಲ್ಲಾ?” ಎಂದನು. 6ಅವನು ಬಡವರ ಮೇಲಿನ ಕನಿಕರದಿಂದ ಹೀಗೆ ಹೇಳಲಿಲ್ಲ. ಆದರೆ ಅವನು ಕಳ್ಳನಾಗಿದ್ದು ಹಣದ ಚೀಲವನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡಿರಲಾಗಿ ಅದರಲ್ಲಿ ಹಾಕಿದ್ದನ್ನು ತನ್ನ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಳ್ಳುತ್ತಿದ್ದನು, ಆದುದರಿಂದಲೇ ಹೀಗೆ ಹೇಳಿದನು. 7ಆಗ ಯೇಸುವು, “ಈಕೆಯನ್ನು ಬಿಟ್ಟುಬಿಡಿರಿ, ನನ್ನನ್ನು ಸಮಾಧಿ ಮಾಡುವ ದಿನಕ್ಕಾಗಿ ಈಕೆಯು ಇದನ್ನು ಇಟ್ಟುಕೊಂಡಿದ್ದಳು ಎಂದಿರಲಿ. 8ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲವಲ್ಲಾ” ಎಂದನು. 9ಯೆಹೂದ್ಯರ ಗುಂಪು ಆತನು ಅಲ್ಲಿ ಇದ್ದಾನೆಂದು ತಿಳಿದು, ಯೇಸುವನ್ನು ನೋಡುವುದಕ್ಕಾಗಿ ಮಾತ್ರವಲ್ಲದೆ, ಆತನು ಸತ್ತವರೊಳಗಿಂದ ಎಬ್ಬಿಸಿದ ಲಾಜರನನ್ನೂ ಸಹ ನೋಡಬೇಕೆಂಬುದಾಗಿ ಅಲ್ಲಿಗೆ ಬಂದರು. 10ಆದರೆ ಮುಖ್ಯಯಾಜಕರು ಲಾಜರನನ್ನೂ ಸಹ ಕೊಲ್ಲಬೇಕೆಂದು ಆಲೋಚಿಸಿದರು. 11ಏಕೆಂದರೆ ಅವನ ನಿಮಿತ್ತ ಅನೇಕ ಯೆಹೂದ್ಯರು ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದರು. 12ಮರುದಿನ ಹಬ್ಬಕ್ಕೆ ಬಂದಿದ್ದ ಜನರ ಗುಂಪು ಯೇಸು ಯೆರೂಸಲೇಮಿಗೆ ಬರುತ್ತಾನೆಂಬ ಸುದ್ದಿ ಕೇಳಿ 13ಖರ್ಜೂರದ ಗರಿಗಳನ್ನು ತೆಗೆದುಕೊಂಡು, ಆತನನ್ನು ಎದುರುಗೊಳ್ಳುವುದಕ್ಕೆ ಊರಿನಿಂದ ಹೊರಗೆ ಬಂದು, “ಹೊಸನ್ನ! ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ; ಇಸ್ರಾಯೇಲಿನ ಅರಸನಿಗೆ ಶುಭವಾಗಲಿ” ಎಂದು ಆರ್ಭಟಿಸಿದರು. 14ಯೇಸು ದಾರಿಯಲ್ಲಿ ಪ್ರಾಯದ ಕತ್ತೆಯೊಂದನ್ನು ಕಂಡು ಅದರ ಮೇಲೆ ಕುಳಿತುಕೊಂಡನು. 15ಹೀಗೆ, “ಚೀಯೋನ್ ನಗರಿಯೇ, ಹೆದರಬೇಡ ಇಗೋ, ನಿನ್ನ ಅರಸನು ಕತ್ತೆಮರಿಯ ಮೇಲೆ ಕುಳಿತುಕೊಂಡು ಬರುತ್ತಿದ್ದಾನೆ” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು. 16ಇದು ಆತನ ಶಿಷ್ಯರಿಗೆ ಮೊದಲು ತಿಳಿಯಲಿಲ್ಲ. ಆದರೆ ಯೇಸು ತನ್ನ ಮಹಿಮೆಯನ್ನು ಹೊಂದಿದ ಮೇಲೆ ಇದು ಆತನ ವಿಷಯವಾಗಿ ಬರೆದಿರುವಂತೆಯೇ, ಇವುಗಳನ್ನು ಆತನಿಗೆ ಮಾಡಿದೆವೆಂದೂ ನೆನಪು ಮಾಡಿಕೊಂಡರು. 17ಇದಲ್ಲದೆ ಆತನು ಲಾಜರನನ್ನು ಸಮಾಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಎಬ್ಬಿಸಿದಾಗ ಆತನ ಸಂಗಡ ಇದ್ದ ಜನರೇ ಈ ವಿಷಯಕ್ಕೆ ಸಾಕ್ಷಿಕೊಡುತ್ತಿದ್ದರು. 18ಆತನು ಈ ಸೂಚಕಕಾರ್ಯವನ್ನು ಮಾಡಿದನೆಂದು ಕೇಳಿದ ಕಾರಣದಿಂದಲೂ ಜನರು ಆತನನ್ನು ಸಂಧಿಸಲು ಬಂದರು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 12 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 25 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು