ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 21 ಮಾರ್ಚ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 21 ಮಾರ್ಚ್ 2027
ಭಾನುವಾರ · ಪವಿತ್ರ ವಾರ
ಹಬ್ಬಗಳು ಮತ್ತು ಸಂತರು
ಗರಿಗಳ ಭಾನುವಾರ — ಕರ್ತನ ಕಷ್ಟಾನುಭವ
ಭಾನುವಾರ · ಆರಾಧನಾ ಬಣ್ಣ: ಕೆಂಪು
ದಿನದ ವಾಚನಗಳು
ಮೆರವಣಿಗೆಯ ಸುವಾರ್ತೆ
ಅಥವಾ: ಯೋಹಾ 12:12–16
1ಅವರು ಯೆರೂಸಲೇಮಿಗೆ ಸಮೀಪಿಸಿ ಬೆತ್ಫಗೆ ಹಾಗೂ ಬೇಥಾನ್ಯದ ಬಳಿಯಲ್ಲಿರುವ ಎಣ್ಣೆಮರಗಳ ಗುಡ್ಡಕ್ಕೆ ಬಂದಾಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, 2“ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಅದರೊಳಗೆ ಸೇರುತ್ತಿರುವಾಗಲೇ ಅಲ್ಲಿ ಕಟ್ಟಿರುವ ಒಂದು ಕತ್ತೆಮರಿಯನ್ನು ಕಾಣುವಿರಿ; ಇದುವರೆಗೂ ಅದರ ಮೇಲೆ ಯಾರೂ ಸವಾರಿ ಮಾಡಿಲ್ಲ; ಅದನ್ನು ಬಿಚ್ಚಿ ಇಲ್ಲಿಗೆ ತನ್ನಿರಿ. 3ಯಾರಾದರೂ ನಿಮ್ಮನ್ನು, ‘ಅದನ್ನೇಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ, ‘ಇದು ಕರ್ತನಿಗೆ ಅಗತ್ಯವಾಗಿದೆ’ ಅನ್ನಿರಿ, ಅವರು ಬೇಗನೆ ಅದನ್ನು ಕಳುಹಿಸಿಕೊಡುವರು” ಎಂದು ಹೇಳಿ ಕಳುಹಿಸಿದನು. 4ಆ ಶಿಷ್ಯರು ಹೋಗಿ ಬೀದಿಯಲ್ಲಿ ಹೊರಗೆ ಬಾಗಿಲಿನ ಹತ್ತಿರ ಕತ್ತೆಮರಿಯನ್ನು ಕಟ್ಟಿರುವುದನ್ನು ಕಂಡು ಅದನ್ನು ಬಿಚ್ಚಿದರು. 5ಅಲ್ಲಿ ನಿಂತಿದ್ದವರಲ್ಲಿ ಕೆಲವರು, “ಈ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಅವರನ್ನು ಕೇಳಿದರು. 6ಅದಕ್ಕೆ ಯೇಸು ಹೇಳಿದಂತೆಯೇ ಅವರು ಹೇಳಿದರು ಆಗ ಜನರು ಅದನ್ನು ತೆಗೆದುಕೊಂಡು ಹೋಗಲು ಬಿಟ್ಟುಕೊಟ್ಟರು. 7ಶಿಷ್ಯರು ಆ ಕತ್ತೆಮರಿಯನ್ನು ಯೇಸುವಿನ ಬಳಿಗೆ ತಂದು ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಕಲು ಆತನು ಅದನ್ನು ಹತ್ತಿ ಕುಳಿತುಕೊಂಡನು. 8ಆಗ ಅನೇಕರು ತಮ್ಮ ಮೇಲಂಗಿಗಳನ್ನು ದಾರಿಯಲ್ಲಿ ಹಾಸಿದರು. ಬೇರೆ ಕೆಲವರು ತೋಟಗಳಿಂದ ಎಳೆಯ ರೆಂಬೆಗಳನ್ನು ಕಡಿದು, ತಂದು ಹಾಸಿದರು. 9ಯೇಸುವಿನ ಹಿಂದೆ ಹಾಗೂ ಮುಂದೆ ಹೋಗುತ್ತಿದ್ದವರು: “ಹೊಸನ್ನ, ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ; 10ನಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತದೆ, ಅದಕ್ಕೆ ಆಶೀರ್ವಾದವುಂಟಾಗಲಿ; ಮೇಲಣ ಲೋಕಗಳಲ್ಲಿ ಹೊಸನ್ನ” ಎಂದು ಆರ್ಭಟಿಸಿದರು.
ಮೊದಲನೆಯ ವಾಚನ
4ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವುದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ. ಮುಂಜಾನೆಯಿಂದ ಮುಂಜಾನೆಗೆ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಎಚ್ಚರಗೊಳಿಸುತ್ತಾನೆ. 5ಕರ್ತನಾದ ಯೆಹೋವನು ನನ್ನ ಕಿವಿಯನ್ನು ತೆರೆದಿದ್ದಾನೆ. ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ. 6ನಾನು ಹೊಡೆಯುವವರಿಗೆ ಬೆನ್ನುಕೊಟ್ಟು, ಕೂದಲು ಕೀಳುವವರಿಗೆ ಗಡ್ಡವನ್ನು ಒಡ್ಡಿದೆನು. ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಿಕೊಳ್ಳಲಿಲ್ಲ. 7ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು. ಆದಕಾರಣ ನಾನು ನಾಚಿಕೆಯಿಂದ ಕೊರಗಲಿಲ್ಲ; ನನ್ನ ಮುಖವನ್ನು ಕಗ್ಗಲ್ಲಿನಂತೆ ಗಟ್ಟಿಮಾಡಿಕೊಂಡಿದ್ದೇನೆ. ಆಶಾಭಂಗಪಡಲಾರನೆಂದು ನನಗೆ ಗೊತ್ತು.
ಪ್ರತಿವಚನ ಕೀರ್ತನೆ
7ನನ್ನನ್ನು ನೋಡುವವರೆಲ್ಲರೂ ಹಾಸ್ಯಮಾಡುತ್ತಾರೆ; ಅವರು ಓರೇ ತುಟಿ ಮಾಡಿ ತಲೆ ಆಡಿಸುತ್ತಾ, 8“ಯೆಹೋವನು ತನ್ನನ್ನು ರಕ್ಷಿಸುವನೆಂದು ಆತನಲ್ಲಿ ಭರವಸವಿಟ್ಟಿದ್ದಾನಲ್ಲಾ; ಆತನು ಇವನನ್ನು ಮೆಚ್ಚಿದ್ದಾದರೆ ರಕ್ಷಿಸಲಿ” ಎಂದು ಹೇಳುತ್ತಾರೆ. 16ನಾಯಿಗಳು ನನ್ನನ್ನು ಸುತ್ತಿಕೊಂಡಿವೆ; ದುಷ್ಟರ ಗುಂಪು ನನ್ನನ್ನು ಆವರಿಸಿಕೊಂಡಿದೆ. ನನ್ನ ಕೈಕಾಲುಗಳನ್ನು ತಿವಿದಿದ್ದಾರೆ. 17ನನ್ನ ಎಲುಬುಗಳನ್ನೆಲ್ಲಾ ಎಣಿಸುವುದಕ್ಕಾಗುವುದು; ಅವರೋ ನನ್ನನ್ನು ನೋಡಿ ನೋಡಿ ಹಿಗ್ಗುತ್ತಾರೆ. 18ನನ್ನ ಮೇಲ್ಹೊದಿಕೆಯನ್ನು ತಮ್ಮಲ್ಲಿ ಪಾಲು ಮಾಡಿಕೊಳ್ಳುತ್ತಾರೆ; ನನ್ನ ಅಂಗಿಗಾಗಿ ಚೀಟುಹಾಕುತ್ತಾರೆ. 19ಯೆಹೋವನೇ, ನನ್ನ ರಕ್ಷಕನೇ, ನೀನಾದರೋ ದೂರವಾಗಿರಬೇಡ; ಬೇಗ ಬಂದು ಸಹಾಯಮಾಡು. 22ನಿನ್ನ ನಾಮ ಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. 23ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ; ಯಾಕೋಬ ವಂಶದವರೇ, ನೀವೆಲ್ಲರೂ ಆತನನ್ನು ಕೊಂಡಾಡಿರಿ. ಇಸ್ರಾಯೇಲ್ ವಂಶಸ್ಥರೇ, ನೀವೆಲ್ಲರೂ ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ.
ಎರಡನೆಯ ವಾಚನ
6ಆತನು ದೇವಸ್ವರೂಪನಾಗಿದ್ದರೂ, ದೇವರಿಗೆ ಸರಿಸಮಾನನಾಗಿರುವನೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ, 7ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸಮನಾದನು. ಮನುಷ್ಯನಾಕಾರದಲ್ಲಿ ಕಾಣಿಸಿಕೊಂಡನು. 8ಆತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. 9ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ, ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. 10ಆದ್ದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ ಅಡ್ಡಬಿದ್ದು, 11ತಂದೆಯಾದ ದೇವರ ಮಹಿಮೆಗಾಗಿ ಪ್ರತಿಯೊಂದು ನಾಲಿಗೆಯು ಯೇಸು ಕ್ರಿಸ್ತನನ್ನು ಕರ್ತನೆಂದು ಅರಿಕೆಮಾಡುವುದು.
ಸುವಾರ್ತೆ
1ಪಸ್ಕಹಬ್ಬ ಎಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವುದಕ್ಕೆ ಇನ್ನೂ ಎರಡು ದಿನಗಳಿದ್ದಾಗ ಮುಖ್ಯಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲುವುದಕ್ಕೆ ಮಾರ್ಗವನ್ನು ಹುಡುಕುತ್ತಿದ್ದರು. 2“ಆದರೆ ಹಬ್ಬದ ಸಂದರ್ಭದಲ್ಲಿ ಈ ಕಾರ್ಯವನ್ನು ಮಾಡಬಾರದು. ಏಕೆಂದರೆ ನಮ್ಮ ಮೇಲೆ ಜನರು ದಂಗೆ ಎದ್ದಾರು” ಎಂದು ಮಾತನಾಡಿಕೊಂಡರು. 3ಆತನು ಬೇಥಾನ್ಯದಲ್ಲಿದ್ದ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸ್ವಚ್ಛ ಜಟಮಾಂಸಿ ತೈಲದ ಭರಣಿಯನ್ನು ತೆಗೆದುಕೊಂಡು ಬಂದು ಅದನ್ನು ಒಡೆದು ತೈಲವನ್ನು ಯೇಸುವಿನ ತಲೆಯ ಮೇಲೆ ಸುರಿದಳು. 4ಆದರೆ ಕೆಲವರು ತಮ್ಮೊಳಗೆ ಕೋಪಗೊಂಡು, “ಈ ತೈಲವನ್ನು ಹೀಗೆ ವ್ಯರ್ಥಮಾಡಿದ್ದೇಕೆ? 5ಇದನ್ನು ಮುನ್ನೂರು ಬೆಳ್ಳಿನಾಣ್ಯಗಳಿಗಿಂತ ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ?” ಎಂದು ಹೇಳಿ ಆಕೆಯನ್ನು ದೂಷಿಸಿದರು. 6ಆದರೆ ಯೇಸು, “ಆಕೆಯನ್ನು ಬಿಟ್ಟುಬಿಡಿರಿ, ಆಕೆಗೆ ಏಕೆ ತೊಂದರೆ ಕೊಡುತ್ತೀರಿ? ಈಕೆಯು ನನಗೆ ಒಳ್ಳೆಯ ಕಾರ್ಯವನ್ನೇ ಮಾಡಿದ್ದಾಳೆ. 7ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ನಿಮಗೆ ಮನಸ್ಸು ಬಂದಾಗ ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ. 8ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ. ಈಕೆಯು ನನ್ನ ದೇಹವನ್ನು ಶವಸಂಸ್ಕಾರಕ್ಕೆ ಮುಂಚಿತವಾಗಿಯೇ ಈ ತೈಲದಿಂದ ಅಭಿಷೇಕಿಸಿ ಸಿದ್ಧಪಡಿಸಿದ್ದಾಳೆ. 9ಸುವಾರ್ತೆಯು ಲೋಕದಲ್ಲಿ ಎಲ್ಲೆಲ್ಲಿ ಸಾರಲ್ಪಡುವುದೋ ಅಲ್ಲೆಲ್ಲಾ ಈಕೆಯು ಮಾಡಿದ್ದನ್ನು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲಾಗುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಎಂದನು. 10ಆಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಯೇಸುವನ್ನು ಮುಖ್ಯಯಾಜಕರಿಗೆ ಹಿಡಿದುಕೊಡಲು ಅವರ ಬಳಿಗೆ ಹೋದನು. 11ಅವರು ಅದನ್ನು ಕೇಳಿ ಸಂತೋಷಪಟ್ಟು, ನಿನಗೆ ಹಣಕೊಡುತ್ತೇವೆ ಎಂದು ಮಾತುಕೊಟ್ಟರು. ಅಂದಿನಿಂದ ಯೂದನು ಯೇಸುವನ್ನು ಹಿಡಿದುಕೊಡುವುದಕ್ಕೆ ಅನುಕೂಲವಾದ ಸಂದರ್ಭವನ್ನು ಹುಡುಕುತ್ತಿದ್ದನು. 12ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ ಅಂದರೆ ಪಸ್ಕದ ಕುರಿಮರಿಯನ್ನು ಕೊಯ್ಯುವ ದಿನವಾಗಿತ್ತು. ಶಿಷ್ಯರು ಯೇಸುವಿಗೆ, “ನೀನು ಪಸ್ಕದ ಭೋಜನ ಮಾಡಲು ನಾವು ಎಲ್ಲಿ ಸಿದ್ಧಮಾಡಬೇಕೆಂದು ಹೇಳು” ಎಂದು ಕೇಳಿದರು. 13ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು ಅವರಿಗೆ, “ನೀವು ಪಟ್ಟಣದೊಳಗೆ ಹೋಗಿರಿ. ಅಲ್ಲಿ ತುಂಬಿದ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು. ಅವನನ್ನು ಹಿಂಬಾಲಿಸಿರಿ. 14ಅವನು ಯಾವ ಮನೆಯೊಳಗೆ ಹೋಗುವನೋ ಆ ಮನೆಯ ಯಜಮಾನನಿಗೆ, ‘ನಮ್ಮ ಗುರು, ತನ್ನ ಶಿಷ್ಯರ ಸಂಗಡ ಪಸ್ಕದ ಭೋಜನ ಮಾಡಲು ಕೊಠಡಿ ಎಲ್ಲಿದೆ?’ ಎಂಬುದಾಗಿ ಕೇಳುತ್ತಿದ್ದಾನೆ ಎಂದು ಹೇಳಿರಿ. 15“ಅವನು ಸಜ್ಜುಗೊಳಿಸಿ ಸಿದ್ಧಮಾಡಿರುವ ಮೇಲಂತಸ್ತಿನ ವಿಶಾಲವಾದ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ನಮಗೆ ಭೋಜನಕ್ಕೆ ಸಿದ್ಧಮಾಡಿರಿ” ಎಂದು ಹೇಳಿ ಅವರನ್ನು ಕಳುಹಿಸಿ ಕೊಟ್ಟನು. 16ಶಿಷ್ಯರು ಹೊರಟು ಪಟ್ಟಣದೊಳಗೆ ಹೋಗಿ ಯೇಸು ತಮಗೆ ಹೇಳಿದಂತೆ ಎಲ್ಲವನ್ನು ಕಂಡು ಪಸ್ಕವನ್ನು ಸಿದ್ಧಮಾಡಿದರು. 17ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದನು. 18ಅವರು ಕುಳಿತುಕೊಂಡು ಊಟಮಾಡುತ್ತಿದ್ದಾಗ ಯೇಸು, “ನನ್ನೊಂದಿಗೆ ಊಟಮಾಡುತ್ತಿರುವ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ” ಎಂದನು. 19ಆಗ ಅವರು ಬಹು ದುಃಖದಿಂದ ಒಬ್ಬೊಬ್ಬರಾಗಿ ಆತನಿಗೆ “ನಾನಲ್ಲವಲ್ಲಾ?” ಎಂದು ಕೇಳತೊಡಗಿದರು. 20ಆತನು ಉತ್ತರವಾಗಿ ಅವರಿಗೆ “ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು. ನನ್ನ ಸಂಗಡ ಬಟ್ಟಲಲ್ಲಿ ರೊಟ್ಟಿಯನ್ನು ಅದ್ದುವವನೇ. 21ಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ, ಆದರೆ ಯಾರು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ದುರ್ಗತಿಯನ್ನು ಏನೆಂದು ಹೇಳಲಿ? ಅವನು ಹುಟ್ಟದಿದ್ದರೆ ಅವನಿಗೆ ಎಷ್ಟೋ ಒಳ್ಳೆಯದಾಗಿತ್ತು” ಅಂದನು. 22ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಮುರಿದು ಶಿಷ್ಯರಿಗೆ ಕೊಡುತ್ತಾ “ಇದನ್ನು ತೆಗೆದುಕೊಳ್ಳಿರಿ, ಇದು ನನ್ನ ದೇಹ” ಎಂದನು. 23ತರುವಾಯ ಪಾನಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸುತ್ತಿ ಸಲ್ಲಿಸಿ, ಅದನ್ನು ಅವರಿಗೆ ಕೊಟ್ಟನು. ಅವರೆಲ್ಲರೂ ಅದರಿಂದ ಕುಡಿದರು. 24ಯೇಸು ಅವರಿಗೆ, “ಇದು ನನ್ನ ರಕ್ತ, ಬಹು ಜನರಿಗಾಗಿ ಸುರಿಸಲ್ಪಡುವ ಒಡಂಬಡಿಕೆಯ ರಕ್ತ. 25ನಿಮಗೆ ಸತ್ಯವಾಗಿ ಹೇಳುತ್ತೇನೆ; ನಾನು ದೇವರ ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದೇ ಇಲ್ಲ” ಎಂದನು. 26ಬಳಿಕ ಅವರು ಒಂದು ಕೀರ್ತನೆ ಹಾಡಿ ಎಣ್ಣೆಮರಗಳ ಗುಡ್ಡಕ್ಕೆ ಹೊರಟು ಹೋದರು. 27ಆಗ ಯೇಸು ಅವರಿಗೆ, “ನೀವೆಲ್ಲರೂ ನನ್ನನ್ನು ಬಿಟ್ಟು ಓಡಿಹೋಗುವಿರಿ. ಏಕೆಂದರೆ; “‘ನಾನು ಕುರುಬನನ್ನು ಹೊಡೆಯುವೆನು; ಕುರಿಗಳು ಚದರಿ ಹೋಗುವವು’ ಎಂದು ಬರೆದಿದೆಯಲ್ಲಾ ಅಂದನು. 28ಆದರೂ ನಾನು ಸತ್ತು ಜೀವಿತನಾಗಿ ಎದ್ದಮೇಲೆ ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುವೆನು” ಎಂದು ಹೇಳಿದನು. 29ಪೇತ್ರನು ಯೇಸುವಿಗೆ, “ಎಲ್ಲರೂ ಬಿಟ್ಟುಹೋದರೂ ನಾನು ನಿನ್ನನ್ನು ಬಿಟ್ಟುಹೋಗುವುದಿಲ್ಲ” ಎಂದು ಹೇಳಿದನು. 30ಯೇಸುವು ಆತನಿಗೆ, “ಸತ್ಯವಾಗಿ ಹೇಳುತ್ತೇನೆ ಇಂದು ಈ ರಾತ್ರಿಯಲ್ಲಿಯೇ ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ” ಎಂದನು. 31ಆದರೆ ಅವನು, “ನಾನು ನಿನ್ನ ಸಂಗಡ ಸಾಯಬೇಕಾಗಿ ಬಂದರೂ ನಿನ್ನನ್ನು ನಿರಾಕರಿಸುವುದೇ ಇಲ್ಲವೆಂದು” ಬಹು ಖಂಡಿತವಾಗಿ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು. 32ಅವರು ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದರು. ಆತನು ತನ್ನ ಶಿಷ್ಯರಿಗೆ, “ನಾನು ಪ್ರಾರ್ಥನೆ ಮಾಡುವ ತನಕ, ನೀವು ಇಲ್ಲೇ ಕುಳಿತುಕೊಂಡಿರಿ” ಎಂದು ಹೇಳಿದನು. 33ಪೇತ್ರ, ಯಾಕೋಬ, ಯೋಹಾನರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ಬಹು ಬೆಚ್ಚಿಬೆರಗಾಗಿ ಮನಗುಂದಿದವನಾದನು. 34ಮತ್ತು ಆತನು ಅವರಿಗೆ “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ ನೀವು ಇಲ್ಲೇ ಕಾದುಕೊಂಡಿದ್ದು ಎಚ್ಚರವಾಗಿರಿ” ಎಂದು ಹೇಳಿದನು. 35ಆತನು ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಬಿದ್ದು ಸಾಧ್ಯವಾದರೆ ಆ ಗಳಿಗೆಯು ತನ್ನಿಂದ ದಾಟಿಹೋಗುವಂತೆ ಪ್ರಾರ್ಥಿಸಿದನು. 36“ಅಪ್ಪಾ, ತಂದೆಯೇ, ನಿನಗೆ ಎಲ್ಲವೂ ಸಾಧ್ಯ. ಈ ಪಾನಪಾತ್ರೆಯನ್ನು ನನ್ನಿಂದ ತೆಗೆದುಬಿಡು ಆದರೂ ಇದು ನನ್ನ ಚಿತ್ತದಂತಲ್ಲ ನಿನ್ನ ಚಿತ್ತದಂತೆಯೇ ಆಗಲಿ” ಎಂದನು. 37ಆ ಮೇಲೆ ಆತನು ಬಂದು ಶಿಷ್ಯರು ನಿದ್ರೆ ಮಾಡುವುದನ್ನು ಕಂಡು ಪೇತ್ರನಿಗೆ, “ಸೀಮೋನನೇ, ನೀನು ನಿದ್ರೆಮಾಡುತ್ತಿರುವೆಯಾ? ಒಂದು ಗಳಿಗೆಯಾದರೂ ಎಚ್ಚರವಾಗಿರಲಾರೆಯಾ? 38ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಆತ್ಮವು ಸಿದ್ಧವಾಗಿದೆ; ಆದರೆ ದೇಹಕ್ಕೆ ಬಲ ಸಾಲದು” ಎಂದು ಹೇಳಿದನು. 39ಆ ಮೇಲೆ ಪುನಃ ಹೋಗಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದನು. 40ಯೇಸು ಹಿಂತಿರುಗಿ ಬಂದಾಗ ಅವರು ಪುನಃ ನಿದ್ರೆ ಮಾಡುವುದನ್ನು ಕಂಡನು ಯಾಕೆಂದರೆ ಅವರ ಕಣ್ಣುಗಳು ಭಾರವಾಗಿದ್ದವು. ಮತ್ತು ಆತನಿಗೆ ಏನು ಉತ್ತರ ಕೊಡಬೇಕೆಂದು ಅವರಿಗೆ ತಿಳಿಯಲಿಲ್ಲ. 41ಆತನು ಮೂರನೆಯ ಸಾರಿ ಅವರ ಬಳಿಗೆ ಬಂದು, “ನೀವು ಇನ್ನು ನಿದ್ರಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಿರಾ? ಸಾಕು, ಆ ಗಳಿಗೆ ಸಮೀಪಿಸಿದೆ; ಮನುಷ್ಯಕುಮಾರನು ಪಾಪಿಗಳ ಕೈಗೆ ಒಪ್ಪಿಸಲ್ಪಡುತ್ತಾನೆ. 42ಏಳಿರಿ, ಹೋಗೋಣ. ಇಗೋ, ನನ್ನನ್ನು ಪಾಪಿಗಳ ಕೈಗೆ ಹಿಡಿದುಕೊಡುವವನು ಸಮೀಪಕ್ಕೆ ಬಂದಿದ್ದಾನೆ ನೋಡಿರಿ” ಎಂದು ಹೇಳಿದನು. 43ಯೇಸು ಇನ್ನೂ ಮಾತನಾಡುತ್ತಾ ಇರುವಾಗಲೇ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು. ಮುಖ್ಯಯಾಜಕರೂ, ಶಾಸ್ತ್ರಿಗಳೂ ಮತ್ತು ಹಿರಿಯರ ಕಡೆಯಿಂದ ಒಂದು ಗುಂಪು ಖಡ್ಗ, ದೊಣ್ಣೆಗಳನ್ನು ಹಿಡಿದುಕೊಂಡು ಅವನೊಂದಿಗೆ ಬಂದರು. 44ಇದಲ್ಲದೆ ಆತನನ್ನು ಹಿಡಿದುಕೊಡುವವನು ಅವರಿಗೆ, “ನಾನು ಯಾರಿಗೆ ಮುದ್ದಿಡುವೆನೊ ಅವನೇ ಆತನು! ಅವನನ್ನು ಹಿಡಿದು ಭದ್ರವಾಗಿ ಕರೆದೊಯ್ಯಿರಿ” ಎಂದು ಮೊದಲೇ ಸೂಚನೆಕೊಟ್ಟಿದ್ದನು. 45ಅದರಂತೆಯೇ ಯೂದನು ಅಲ್ಲಿಗೆ ಬಂದಕೂಡಲೇ ಅವನು ಯೇಸುವಿನ ಬಳಿಗೆ ಹೋಗಿ, “ಗುರುವೇ” ಎಂದು ಹೇಳಿ ಆತನಿಗೆ ಮುದ್ದಿಟ್ಟನು. 46ಅವರು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು. 47ಆದರೆ ಹತ್ತಿರ ನಿಂತಿದ್ದವರಲ್ಲಿ ಒಬ್ಬನು ತನ್ನ ಖಡ್ಗವನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿ ಹಾಕಿದನು. 48ಅವರು ಯೇಸುವನ್ನು ಹಿಡಿದಾಗ ಆತನು ಅವರಿಗೆ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಖಡ್ಗಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ನನ್ನನ್ನು ಹಿಡಿಯುವುದಕ್ಕೆ ಬಂದಿರಾ? 49ನಾನು ಪ್ರತಿದಿನವು ನಿಮ್ಮ ಸಂಗಡ ಇದ್ದು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಶಾಸ್ತ್ರದಲ್ಲಿ ಬರೆದದ್ದು ನೆರವೇರುವಂತೆ ಹೀಗೆಲ್ಲಾ ಆಯಿತು” ಎಂದು ಉತ್ತರ ಕೊಟ್ಟನು. 50ಆಗ ಆತನ ಸಂಗಡವಿದ್ದವರೆಲ್ಲರು ಆತನನ್ನು ಬಿಟ್ಟು ಓಡಿಹೋದರು. 51ಆಗ ಯುವಕನೊಬ್ಬನು ಮೈಮೇಲೆ ನಾರುಮಡಿಯನ್ನು ಮಾತ್ರ ಸುತ್ತಿಕೊಂಡವನಾಗಿ ಯೇಸುವಿನ ಹಿಂದೆ ಬರುತ್ತಿದ್ದನು; 52ಅವರು ಅವನನ್ನು ಹಿಡಿಯಲೂ ಅವನು ಆ ನಾರುಮಡಿಯನ್ನು ಬಿಟ್ಟು ಬರೀ ಮೈಯಲ್ಲಿ ಓಡಿಹೋದನು. 53ಅವರು ಯೇಸುವನ್ನು ಮಹಾಯಾಜಕನ ಬಳಿಗೆ ಕರೆದುಕೊಂಡು ಹೋದರು. ಆತನ ಸಂಗಡ ಮುಖ್ಯಯಾಜಕರೆಲ್ಲರೂ, ಹಿರಿಯರು, ಶಾಸ್ತ್ರಿಗಳು ಕೂಡಿಬಂದರು. 54ಮತ್ತು ಪೇತ್ರನು ದೂರದಿಂದ ಆತನನ್ನು ಹಿಂಬಾಲಿಸುತ್ತಾ ಮಹಾಯಾಜಕನ ಅಂಗಳದೊಳಗೆ ಬಂದು ಕಾವಲುಗಾರರ ಸಂಗಡ ಸೇರಿ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದನು. 55ಆಗ ಮುಖ್ಯಯಾಜಕರು ಮತ್ತು ಹಿರೀಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಆತನ ವಿರುದ್ಧವಾಗಿ ಸಾಕ್ಷಿ ಹುಡುಕುತ್ತಾ ಇದ್ದರು. ಆದರೆ ಅವರಿಗೆ ಸರಿಯಾದ ಒಂದು ಸಾಕ್ಷ್ಯವೂ ದೊರಕಲಿಲ್ಲ. 56ಅನೇಕರು ಬಂದು ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಹೊಂದಲಿಲ್ಲ. 57ತರುವಾಯ ಕೆಲವರು ಎದ್ದು ನಿಂತು, “‘ಇವನು ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದು ಆಲಯವನ್ನು ಮೂರು ದಿನಗಳಲ್ಲಿ ಕಟ್ಟುವೆನು’ ಎಂದು ಈತನು ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ” ಎಂಬುದಾಗಿ ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರು. 59ಹೀಗೆ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಹೊಂದಲಿಲ್ಲ. 60ಆಗ ಮಹಾಯಾಜಕನು ಅವರ ಮಧ್ಯದಲ್ಲಿ ಎದ್ದು ನಿಂತು, “ನೀನೇನೂ ಉತ್ತರ ಹೇಳುವುದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಈ ಸಾಕ್ಷಿ ಏನು?” ಎಂದು ಯೇಸುವನ್ನು ಕೇಳಿದನು. 61ಆದರೆ ಯೇಸು ಏನೂ ಉತ್ತರ ಕೊಡದೆ ಮೌನವಾಗಿದ್ದನು. ಪುನಃ ಮಹಾಯಾಜಕನು, “ನೀನು ಕ್ರಿಸ್ತನೋ, ಸ್ತುತಿಗೆ ಪಾತ್ರನಾದ ದೇವರ ಕುಮಾರನೋ?” ಎಂದು ಆತನನ್ನು ಕೇಳಿದನು. 62ಯೇಸುವು “ಹೌದು ನಾನೇ! “ಇದಲ್ಲದೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ, ಆಕಾಶದ ಮೇಘಗಳಲ್ಲಿ ಬರುವುದನ್ನೂ ನೀವು ನೋಡುವಿರಿ” ಎಂದನು. 63ಇದನ್ನು ಕೇಳಿ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಇನ್ನೂ ನಮಗೆ ಸಾಕ್ಷಿಗಳ ಅಗತ್ಯವೇನಿದೆ? 64ಇವನು ಮಾಡಿದ ದೇವದೂಷಣೆಯನ್ನು ನೀವು ಕೇಳಿದಿರಲ್ಲಾ, ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಲು ಅವರೆಲ್ಲರೂ, ಇವನಿಗೆ ಮರಣದಂಡನೆ ಆಗಬೇಕು ಎಂದು ತೀರ್ಪು ಮಾಡಿದರು. 65ಅನಂತರ ಕೆಲವರು ಆತನ ಮೇಲೆ ಉಗುಳಿ, ಆತನ ಮುಖಕ್ಕೆ ಮುಸುಕನ್ನು ಹಾಕಿ, ಗುದ್ದಿ, ಈಗ “ಪ್ರವಾದಿಸು” ಎಂದರು. ಕಾವಲುಗಾರರು ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆತನಿಗೆ ಹೊಡೆದರು. 66ಇತ್ತಲಾಗಿ ಪೇತ್ರನು ಕೆಳಗೆ ಅಂಗಳದಲ್ಲಿ ಇದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಬಂದು ಅವನು ಚಳಿ ಕಾಯಿಸಿಕೊಳ್ಳುತ್ತಿರುವುದನ್ನು ಕಂಡು, 67ಅವನನ್ನು ದೃಷ್ಟಿಸಿ ನೋಡಿ, “ನೀನು ಸಹ ಆ ನಜರೇತಿನ ಯೇಸುವಿನೊಂದಿಗೆ ಇದ್ದವನು” ಎಂದಳು. 68ಆದರೆ ಅವನು ನಿರಾಕರಿಸಿ, “ನೀನು ಏನು ಹೇಳುತ್ತೀಯೋ ಅದು ನನಗೆ ಗೊತ್ತಿಲ್ಲ, ಅರ್ಥವಾಗುತ್ತಲೂ ಇಲ್ಲ!” ಎಂದು ಹೇಳಿ ಮುಖ್ಯದ್ವಾರದೊಳಗಿಂದ ಹೊರಾಂಗಣಕ್ಕೆ ಹೋದನು. 69ಆ ದಾಸಿಯು ಅವನನ್ನು ಪುನಃ ನೋಡಿ ಪಕ್ಕದಲ್ಲಿ ನಿಂತಿದ್ದವರಿಗೆ, “ಇವನು ಅವರಲ್ಲಿ ಒಬ್ಬನು” ಎಂದು ಹೇಳಲಾರಂಭಿಸಿದಳು. 70ಆಗ ಅವನು ಮತ್ತೆ ನಿರಾಕರಿಸಿದನು. ಸ್ವಲ್ಪ ಹೊತ್ತಿನ ಮೇಲೆ ಪಕ್ಕದಲ್ಲಿ ನಿಂತವರು ಪೇತ್ರನಿಗೆ, “ನಿಶ್ಚಯವಾಗಿಯೂ ನೀನು ಅವರಲ್ಲಿ ಒಬ್ಬನು, ಯಾಕೆಂದರೆ ನೀನು ಗಲಿಲಾಯದವನೇ” ಎಂದರು. 71ಆದರೆ ಅವನು, “ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ” ಎಂದು ಹೇಳಿ ತನ್ನನ್ನು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಆರಂಭಿಸಿದಾಗ, ಕೋಳಿ ಎರಡನೆಯ ಸಾರಿ ಕೂಗಿತು. 72ಆಗ ಪೇತ್ರನು, “ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ಮೂರು ಬಾರಿ ನಿರಾಕರಿಸುವೆ” ಎಂದು ಯೇಸು ತನಗೆ ಹೇಳಿದ ಮಾತನ್ನು ನೆನಪಿಗೆ ಬಂದ ಕಾರಣ, ವ್ಯಥೆಪಟ್ಟು ದುಃಖಭರಿತನಾಗಿ ಅತ್ತನು. 15:1ಬೆಳಗಾದ ಕೂಡಲೆ ಮುಖ್ಯಯಾಜಕರೂ, ಹಿರಿಯರೂ, ಶಾಸ್ತ್ರಿಗಳೂ, ಹಿರೀಸಭೆಯ ಸದಸ್ಯರೆಲ್ಲರೂ ಒಟ್ಟುಗೂಡಿ ಆಲೋಚನೆ ಮಾಡಿಕೊಂಡು ಯೇಸುವನ್ನು ಕಟ್ಟಿಸಿ ಕರೆದುಕೊಂಡು ಹೋಗಿ ಪಿಲಾತನಿಗೆ ಒಪ್ಪಿಸಿದರು. 2ಪಿಲಾತನು ಆತನನ್ನು, “ನೀನು ಯೆಹೂದ್ಯರ ಅರಸನೋ” ಎಂದು ಕೇಳಲು ಆತನು, “ನೀನೇ ಹೇಳಿದ್ದೀ” ಎಂದು ಉತ್ತರಕೊಟ್ಟನು. 3ಮುಖ್ಯಯಾಜಕರು ಆತನ ಮೇಲೆ ತುಂಬಾ ದೂರು ಹೇಳುತ್ತಿದ್ದರು. 4ಆಗ ಪಿಲಾತನು ಪುನಃ ಯೇಸುವನ್ನು, “ನೀನು ಏನೂ ಉತ್ತರಕೊಡುವುದಿಲ್ಲವೇ? ಇವರು ನಿನ್ನ ಮೇಲೆ ತುಂಬಾ ದೂರುಗಳನ್ನು ಹೇಳುತ್ತಿದ್ದಾರೆ ನೋಡು” ಎಂದು ಹೇಳಿದನು. 5ಆದರೆ ಯೇಸು ಏನೂ ಉತ್ತರಕೊಡಲಿಲ್ಲ. ಅದನ್ನು ನೋಡಿ ಪಿಲಾತನು ಆಶ್ಚರ್ಯಪಟ್ಟನು. 6ಪ್ರತಿ ಪಸ್ಕಹಬ್ಬದಲ್ಲಿ ಜನರು ಬೇಡಿದ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಅಧಿಕಾರಕ್ಕೆ ಸೇರಿದ ಪದ್ಧತಿಯಾಗಿತ್ತು. 7ಅಲ್ಲಿ ಬರಬ್ಬನೆಂಬುವನೊಬ್ಬನಿದ್ದನು; ಇವನನ್ನು ದಂಗೆಯಲ್ಲಿ ಕೊಲೆ ಮಾಡಿದ ದಂಗೆಗಾರರೊಂದಿಗೆ ಬಂಧಿಸಿದ್ದರು. 8ಜನರು ಪಿಲಾತನ ಬಳಿಗೆ ಹೋಗಿ, ನೀನು ನಮಗೆ ಮಾಡುತ್ತಾ ಬಂದ ಪದ್ಧತಿಯ ಪ್ರಕಾರ ಮಾಡು ಎಂದು ಕೇಳಿಕೊಳ್ಳುತ್ತಿದ್ದರು. 9ಮುಖ್ಯಯಾಜಕರು ಅಸೂಯೆಯಿಂದ ಯೇಸುವನ್ನು ಒಪ್ಪಿಸಿಕೊಟ್ಟಿದ್ದಾರೆಂದು ಪಿಲಾತನು ಗ್ರಹಿಸಿಕೊಂಡು, “ನಾನು ಯೆಹೂದ್ಯರ ಅರಸನನ್ನು ನಿಮಗೆ ಬಿಟ್ಟುಕೊಡಬೇಕನ್ನುತ್ತಿರೋ?” ಎಂದು ಅವರನ್ನು ಕೇಳಿದನು. 11ಆದರೆ ಮುಖ್ಯಯಾಜಕರು, ಬರಬ್ಬನನ್ನೇ ಬಿಟ್ಟುಕೊಡಬೇಕೆಂದು ಬೇಡಿಕೊಳ್ಳಿರಿ ಎಂಬುದಾಗಿ ಜನರನ್ನು ಪ್ರೇರೇಪಿಸಿದರು. 12ಅದಕ್ಕೆ ಪಿಲಾತನು ತಿರುಗಿ ಅವರನ್ನು, “ಹಾಗಾದರೆ ನೀವು ಹೇಳುವ ಯೆಹೂದ್ಯರ ಅರಸನನ್ನು ನಾನೇನು ಮಾಡಲಿ?” ಎಂದು ಕೇಳಿದನು. 13ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಮತ್ತಷ್ಟು ಕೂಗಿಕೊಂಡರು. 14ಪಿಲಾತನು, “ಏಕೆ? ಇವನು ಏನು ಅಪರಾಧ ಮಾಡಿದ್ದಾನೆ?” ಅಂದನು. ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಇನ್ನೂ ಹೆಚ್ಚಾಗಿ ಆರ್ಭಟಿಸಿ ಕೂಗಿಕೊಂಡರು. 15ಅದಕ್ಕೆ ಪಿಲಾತನು ಜನಸಮೂಹವನ್ನು ಮೆಚ್ಚಿಸಬೇಕೆಂದು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ, ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು. 16ಸಿಪಾಯಿಗಳು ಆತನನ್ನು ಅಧಿಪತಿಯ ಅರಮನೆಯ ಅಂಗಳದೊಳಗೆ ಕರೆದುಕೊಂಡು ಹೋಗಿ, ತಮ್ಮ ಪಡೆಯನ್ನೆಲ್ಲವನ್ನೂ ಒಟ್ಟಿಗೆ ಸೇರಿಸಿಕೊಂಡರು. 17ಯೇಸುವಿಗೆ ನಸುಗೆಂಪು ಮೇಲಂಗಿಯನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟರು. 18ಅನಂತರ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಆತನಿಗೆ ಅಪಹಾಸ್ಯಮಾಡಿ ವಂದಿಸಿದರು. 19ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು, ಆತನ ಮೇಲೆ ಉಗುಳಿ, ಆತನ ಮುಂದೆ ಮೊಣಕಾಲೂರಿ ನಮಸ್ಕರಿಸಿದರು. 20ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ನಸುಗೆಂಪು ಮೇಲಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಆತನಿಗೆ ತೊಡಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು. 21ಆಗ ಹೊಲದಿಂದ ಹೊರಟು ಆ ಮಾರ್ಗವಾಗಿ ಬರುತ್ತಿದ್ದ ಒಬ್ಬನನ್ನು ಆತನ ಶಿಲುಬೆಯನ್ನು ಹೊರುವುದಕ್ಕೆ ಒತ್ತಾಯಪಡಿಸಿದರು. ಅವನು ಯಾರೆಂದರೆ, ಅಲೆಕ್ಸಾಂದ್ರ ಹಾಗೂ ರೂಫ ಎಂಬುವರ ತಂದೆಯಾದ ಕುರೇನೆ ಪಟ್ಟಣದ ಸೀಮೋನನು. 22ಬಳಿಕ ಆತನನ್ನು ‘ಗೊಲ್ಗೊಥಾ’ ಎಂಬ ಸ್ಥಳಕ್ಕೆ ಕರೆದುಕೊಂಡು ಬಂದರು. ‘ಗೊಲ್ಗೊಥಾ’ ಅಂದರೆ “ತಲೆಬುರುಡೆಗಳು ಇರುವ ಸ್ಥಳ” ಎಂದರ್ಥ. 23ಅಲ್ಲಿ ಆತನಿಗೆ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು; ಆದರೆ ಆತನು ಅದನ್ನು ಕುಡಿಯಲಿಲ್ಲ. 24ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಲ್ಲಿ ಯಾವುದು ಯಾರಿಗೆ ಸಿಗಬೇಕೆಂದು ಚೀಟು ಹಾಕಿ ಪಾಲುಮಾಡಿಕೊಂಡರು. 25ಆತನನ್ನು ಶಿಲುಬೆಗೆ ಹಾಕುವಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು. 26“ಈತನು ಯೆಹೂದ್ಯರ ಅರಸನು” ಎಂದು ಆತನ ಮೇಲೆ ಹೊರಿಸಿದ್ದ ದೋಷಾರೋಪಣೆಯನ್ನು, ಶಿಲುಬೆಯ ಮೇಲೆ ಬರೆಯಲಾಗಿತ್ತು. 27ಅದಲ್ಲದೆ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಆತನ ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆಯಲ್ಲಿ ಆತನ ಸಂಗಡ ಶಿಲುಬೆಗೆ ಹಾಕಿದರು. 28ಆತನು ಅಧರ್ಮಿಗಳ ಸಂಗಡ ಎಣಿಸಲ್ಪಟ್ಟನು ಎಂಬ ಶಾಸ್ತ್ರವಚನವು ಹೀಗೆ ನೆರವೇರಿತು. ಅಲ್ಲಿ ಹಾದುಹೋಗುವವರು ತಲೆ ಆಲ್ಲಾಡಿಸಿ “ಆಹಾ, ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಪುನಃ ಕಟ್ಟುವವನೇ, 30ಶಿಲುಬೆಯಿಂದ ಇಳಿದು ನಿನ್ನನ್ನು ರಕ್ಷಿಸಿಕೋ” ಎಂದು ಆತನನ್ನು ಅಪಹಾಸ್ಯ ಮಾಡಿದರು. 31ಅದೇ ಮೇರೆಗೆ ಮುಖ್ಯಯಾಜಕರೂ ಶಾಸ್ತ್ರಿಗಳೂ, “ಅವನು ಮತ್ತೊಬ್ಬರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. 32ಇಸ್ರಾಯೇಲರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಇಳಿದು ಬಂದರೆ ನಾವು ನೋಡಿ ನಂಬುತ್ತೇವೆ” ಎಂದು ತಮ್ಮತಮ್ಮೊಳಗೆ ಅಣಕಿಸುತ್ತಾ ಮಾತನಾಡುತ್ತಿದ್ದರು. ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರು ಸಹ ಆತನನ್ನು ನಿಂದಿಸುತ್ತಿದ್ದರು. 33ಹನ್ನೆರಡು ಗಂಟೆಯಿಂದ ಮೂರು ಗಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. 34ಮೂರು ಗಂಟೆಗೆ ಯೇಸು, “ಎಲೋಹಿ, ಎಲೋಹಿ, ಲಮಾಸಬಕ್ತಾನೀ?” ಅಂದರೆ “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಮಹಾಧ್ವನಿಯಿಂದ ಕೂಗಿದನು. 35ಹತ್ತಿರ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ, “ನೋಡಿರಿ, ಆತನು ಎಲೀಯನನ್ನು ಕರೆಯುತ್ತಾನೆ” ಅಂದರು. 36ಆಗ ಒಬ್ಬನು ಓಡಿಹೋಗಿ ಸ್ಪಂಜಿನಿಂದ ಹುಳಿ ದ್ರಾಕ್ಷಾರಸವನ್ನು ತುಂಬಿ ಕೋಲಿನ ತುದಿಗೆ ಸಿಕ್ಕಿಸಿ, “ಇವನನ್ನು ಶಿಲುಬೆಯಿಂದ ಬಿಡುಗಡೆ ಮಾಡಿ ಇಳಿಸುವುದಕ್ಕೆ ಎಲೀಯನು ಬರುವನೋ, ಏನೋ ಕಾದು ನೋಡೋಣ” ಎಂದು ಹೇಳಿ ಅದನ್ನು ಕುಡಿಯುವುದಕ್ಕೆ ಆತನಿಗೆ ಕೊಟ್ಟನು. 37ಆದರೆ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣ ಬಿಟ್ಟನು. 38ಆಗ ದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು. 39ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರಿಗೆ ನಿಂತು ನೋಡುತ್ತಿದ್ದ ಶತಾಧಿಪತಿಯು, “ನಿಜವಾಗಿ ಈ ಮನುಷ್ಯನು ದೇವಕುಮಾರನೇ” ಅಂದನು. 40ಇದಲ್ಲದೆ ಅಲ್ಲಿ ಸ್ತ್ರೀಯರು ಸಹ ದೂರದಿಂದ ನೋಡುತ್ತಿದ್ದರು. ಅವರಲ್ಲಿ, ಆತನು ಗಲಿಲಾಯದಲ್ಲಿದ್ದಾಗ ಆತನನ್ನು ಹಿಂಬಾಲಿಸಿ ಸೇವೆಮಾಡುತ್ತಿದ್ದವರಾದ ಮಗ್ದಲದ ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯನ ತಾಯಿಯಾದ ಮರಿಯಳು, ಸಲೋಮೆ ಎಂಬುವರು ಹಾಗೂ ಆತನ ಸಂಗಡ ಯೆರೂಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರು ಇದ್ದರು. 42ಆಗಲೇ ಸಂಜೆಯಾಗಿತ್ತು; ಮತ್ತು ಆ ದಿನವು ‘ಸಿದ್ಧತೆಯ’ ದಿನ, ಅಂದರೆ ಸಬ್ಬತ್ ದಿನದ ಹಿಂದಿನ ದಿನವಾಗಿತ್ತು. 43ಹೀಗಿರಲಾಗಿ ಅರಿಮಥಾಯದ ಯೋಸೇಫನೆಂಬುವನು ಅಲ್ಲಿಗೆ ಬಂದನು. ಅವನು ಯೆಹೂದ್ಯರ ಹಿರೀಸಭೆಯ ಗೌರವಸ್ಥನಾದ ಸದ್ಯಸನೂ, ದೇವರ ರಾಜ್ಯವನ್ನು ಎದುರುನೋಡುತ್ತಿದ್ದವನು ಆಗಿದ್ದನು. ಅವನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡನು. 44ಪಿಲಾತನು, ಅವನು ಇಷ್ಟು ಬೇಗ ಸತ್ತು ಹೋದನೋ ಎಂದು ಹೇಳಿ ಆಶ್ಚರ್ಯಪಟ್ಟು ಶತಾಧಿಪತಿಯನ್ನು ಕರೆಸಿ, ಅವನು ಆಗಲೇ ಸತ್ತನೋ ಎಂದು ಅವನನ್ನು ಕೇಳಿದನು. 45ಆತನು ಸತ್ತದ್ದನ್ನು ಶತಾಧಿಪತಿಯಿಂದ ತಿಳಿದುಕೊಂಡು ಅವನ ಪಾರ್ಥಿವ ಶರೀರವನ್ನು ಯೋಸೇಫನಿಗೆ ಕೊಡಿಸಿದನು. 46ಯೋಸೇಫನು ನಾರುಮಡಿಯನ್ನು ಕೊಂಡುತಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು. 47ಮಗ್ದಲದ ಮರಿಯಳೂ ಮತ್ತು ಯೋಸೆಯನ ತಾಯಿ ಮರಿಯಳೂ ಯೇಸುವನ್ನಿಟ್ಟಿದ್ದ ಸ್ಥಳವನ್ನು ನೋಡಿದರು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು