ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 22 ಮಾರ್ಚ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 22 ಮಾರ್ಚ್ 2027
ಸೋಮವಾರ · ಪವಿತ್ರ ವಾರ
ಹಬ್ಬಗಳು ಮತ್ತು ಸಂತರು
ಪವಿತ್ರ ವಾರದ ಸೋಮವಾರ
ವಾರದ ದಿನ · ಆರಾಧನಾ ಬಣ್ಣ: ನೇರಳೆ
ದಿನದ ವಾಚನಗಳು
ಮೊದಲನೆಯ ವಾಚನ
1ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ. ಇವನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ. ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರಪಡಿಸುವನು. 2ಇವನು ಕೂಗಾಡುವುದಿಲ್ಲ, ಆರ್ಭಟಿಸುವುದಿಲ್ಲ, ಬೀದಿಗಳಲ್ಲಿ ಇವನ ಧ್ವನಿಯೇ ಕೇಳಿಸುವುದಿಲ್ಲ. 3ಜಜ್ಜಿದ ದಂಟನ್ನು ಮುರಿದು ಹಾಕದೆ, ಕಳೆಗುಂದಿದ ದೀಪವನ್ನು ನಂದಿಸದೆ, ಸದ್ಧರ್ಮವನ್ನು ಪ್ರಚುರಪಡಿಸಿ ಸಿದ್ಧಿಗೆ ತರುವನು. 4ಲೋಕದಲ್ಲಿ ಸದ್ಧರ್ಮವನ್ನು ಸ್ಥಾಪಿಸುವ ತನಕ ಇವನು ಕಳೆಗುಂದದೆಯೂ, ಜಜ್ಜಿಹೋಗದೆಯೂ ತನ್ನ ಕಾರ್ಯದಲ್ಲಿ ನಿರತನಾಗಿರುವನು. ದ್ವೀಪಗಳು ಇವನ ಧರ್ಮಪ್ರಮಾಣಕ್ಕೆ ಕಾದಿರುವವು. 5ಆಕಾಶಮಂಡಲವನ್ನು ಉಂಟುಮಾಡಿ ಹರಡಿ ಭೂಮಂಡಲವನ್ನೂ, ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, ಹೌದು, ಭೂಜನರಿಗೆ ಜೀವಾತ್ಮವನ್ನೂ ದಯಪಾಲಿಸುವ ಯೆಹೋವನೆಂಬ ದೇವರು ಹೀಗೆನ್ನುತ್ತಾನೆ, 6“ಯೆಹೋವನೆಂಬ ನಾನು ನನ್ನ ಧರ್ಮದ ಸಂಕಲ್ಪಾನುಸಾರವಾಗಿ ನಿನ್ನನ್ನು ಕೈಹಿಡಿದು, ಕಾಪಾಡಿ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ, ಅನ್ಯಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ. 7ನೀನು ಕುರುಡರಿಗೆ ಕಣ್ಣುಕೊಟ್ಟು, ಬಂದಿಗಳನ್ನು ಸೆರೆಯಿಂದಲೂ, ಕತ್ತಲಲ್ಲಿ ಬಿದ್ದವರನ್ನು ಕಾರಾಗೃಹದಿಂದಲೂ ಹೊರಗೆ ತರುವಿ.
ಪ್ರತಿವಚನ ಕೀರ್ತನೆ
1ದಾವೀದನ ಕೀರ್ತನೆ. ಯೆಹೋವನು ನನಗೆ ಬೆಳಕೂ, ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೆನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು? 2ನನ್ನನ್ನು ಬಾಧಿಸುತ್ತಿರುವ ದುರ್ವೈರಿಗಳು ನನ್ನನ್ನು ನುಂಗಿಬಿಡಬೇಕೆಂದು ಬಂದು, ತಾವೇ ನೆಲಕ್ಕೆ ಬಿದ್ದುಹೋದರು. 3ನನಗೆ ವಿರುದ್ಧವಾಗಿ ದಂಡು ಬಂದಿಳಿದರೂ ನನಗೇನೂ ಭಯವಿಲ್ಲ; ಚತುರಂಗಬಲವು ಯುದ್ಧಸನ್ನದ್ಧವಾಗಿ ನಿಂತರೂ, ಭರವಸವುಳ್ಳವನಾಗಿಯೇ ಇರುವೆನು. 13ಜೀವಲೋಕದಲ್ಲಿಯೇ ಯೆಹೋವನ ದಯೆಯನ್ನು ಅನುಭವಿಸುವೆನು ಎಂದು ದೃಢವಾಗಿ ನಂಬಿದ್ದೇನೆ. 14ಯೆಹೋವನನ್ನು ನಿರೀಕ್ಷಿಸಿಕೊಂಡಿರು, ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.
ಸುವಾರ್ತೆ
1ಪಸ್ಕ ಹಬ್ಬಕ್ಕೆ ಇನ್ನು ಆರು ದಿನಗಳು ಇರಲಾಗಿ ಯೇಸುವು, ಸತ್ತವರೊಳಗಿಂದ ಎಬ್ಬಿಸಿದ ಲಾಜರನು ವಾಸವಾಗಿದ್ದ ಬೇಥಾನ್ಯಕ್ಕೆ ಬಂದನು. 2ಯೇಸುವಿಗೆ ಅಲ್ಲಿ ಔತಣವನ್ನು ಏರ್ಪಡಿಸಿದ್ದರು. ಮಾರ್ಥಳು ಉಪಚಾರ ಮಾಡುತ್ತಿದ್ದಳು. ಲಾಜರನು ಆತನ ಜೊತೆಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನಾಗಿದ್ದನು. 3ಆಗ ಮರಿಯಳು ಬಹು ಬೆಲೆಯುಳ್ಳ ಸ್ವಚ್ಛ ಜಟಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತ್ತು. 4ಆಗ ಆತನ ಶಿಷ್ಯರಲ್ಲಿ ಒಬ್ಬನು ಅಂದರೆ, ಆತನನ್ನು ಹಿಡಿದುಕೊಡುವುದಕ್ಕಿದ್ದ ಇಸ್ಕರಿಯೋತ ಯೂದನೆಂಬುವನು, 5“ಈ ತೈಲವನ್ನು ಮುನ್ನೂರು ಬೆಳ್ಳಿನಾಣ್ಯಕ್ಕೆ ಮಾರಿ ಬಡವರಿಗೆ ಕೊಡಬಹುದಿತ್ತಲ್ಲಾ?” ಎಂದನು. 6ಅವನು ಬಡವರ ಮೇಲಿನ ಕನಿಕರದಿಂದ ಹೀಗೆ ಹೇಳಲಿಲ್ಲ. ಆದರೆ ಅವನು ಕಳ್ಳನಾಗಿದ್ದು ಹಣದ ಚೀಲವನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡಿರಲಾಗಿ ಅದರಲ್ಲಿ ಹಾಕಿದ್ದನ್ನು ತನ್ನ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಳ್ಳುತ್ತಿದ್ದನು, ಆದುದರಿಂದಲೇ ಹೀಗೆ ಹೇಳಿದನು. 7ಆಗ ಯೇಸುವು, “ಈಕೆಯನ್ನು ಬಿಟ್ಟುಬಿಡಿರಿ, ನನ್ನನ್ನು ಸಮಾಧಿ ಮಾಡುವ ದಿನಕ್ಕಾಗಿ ಈಕೆಯು ಇದನ್ನು ಇಟ್ಟುಕೊಂಡಿದ್ದಳು ಎಂದಿರಲಿ. 8ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲವಲ್ಲಾ” ಎಂದನು. 9ಯೆಹೂದ್ಯರ ಗುಂಪು ಆತನು ಅಲ್ಲಿ ಇದ್ದಾನೆಂದು ತಿಳಿದು, ಯೇಸುವನ್ನು ನೋಡುವುದಕ್ಕಾಗಿ ಮಾತ್ರವಲ್ಲದೆ, ಆತನು ಸತ್ತವರೊಳಗಿಂದ ಎಬ್ಬಿಸಿದ ಲಾಜರನನ್ನೂ ಸಹ ನೋಡಬೇಕೆಂಬುದಾಗಿ ಅಲ್ಲಿಗೆ ಬಂದರು. 10ಆದರೆ ಮುಖ್ಯಯಾಜಕರು ಲಾಜರನನ್ನೂ ಸಹ ಕೊಲ್ಲಬೇಕೆಂದು ಆಲೋಚಿಸಿದರು. 11ಏಕೆಂದರೆ ಅವನ ನಿಮಿತ್ತ ಅನೇಕ ಯೆಹೂದ್ಯರು ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದರು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು