ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಸೆಪ್ಟೆಂಬರ್ 2027 › 26 ಸೆಪ್ಟೆಂಬರ್
ಆರ್ಥೊಡಾಕ್ಸ್ ಪಂಚಾಂಗ · ಸೆಪ್ಟೆಂಬರ್ 13 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 26 ಸೆಪ್ಟೆಂಬರ್ 2027
ಭಾನುವಾರ · ಸ್ವರ 5
ಹಬ್ಬಗಳು ಮತ್ತು ಸಂತರು
ಪಂಚಾಶತ್ತಮದ ನಂತರದ 14ನೇ ಭಾನುವಾರ
ಶಿಲುಬೆಯ ಉನ್ನತೀಕರಣಕ್ಕೆ ಮುಂಚಿನ ಭಾನುವಾರ
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸಂಧ್ಯಾ ಪ್ರಾರ್ಥನೆ: ವಾಚನ
22ತರುವಾಯ ಸೊಲೊಮೋನನು ಎಲ್ಲಾ ಇಸ್ರಾಯೇಲರ ಎದುರಿನಲ್ಲಿ ಯೆಹೋವನ ಯಜ್ಞವೇದಿಯ ಮುಂದೆ ನಿಂತು ಆಕಾಶದ ಕಡೆಗೆ ಕೈಗಳನ್ನೆತ್ತಿ ಹೀಗೆ ಪ್ರಾರ್ಥಿಸಿದನು, 23“ಇಸ್ರಾಯೇಲ್ ದೇವರಾದ ಯೆಹೋವನೇ, ಭೂಲೋಕದಲ್ಲಿಯೂ, ಪರಲೋಕದಲ್ಲಿಯೂ ನಿನಗೆ ಸಮಾನನಾದ ದೇವರಿಲ್ಲ. ಪೂರ್ಣಮನಸ್ಸಿನಿಂದ ನಿನಗೆ ನಡೆದುಕೊಳ್ಳುವಂಥ ಸೇವಕರ ವಿಷಯದಲ್ಲಿ ನೀನು ನಿನ್ನ ಒಡಂಬಡಿಕೆಯನ್ನೂ, ಕೃಪೆಯನ್ನೂ ನೆರವೇರಿಸುವವನು. 27“ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವನೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲದು. ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ಸಾಕಾದೀತು? 28ಆದರೂ ನನ್ನ ದೇವರೇ, ಯೆಹೋವನೇ, ನಿನ್ನ ಸೇವಕನ ಪ್ರಾರ್ಥನೆಗೂ, ವಿಜ್ಞಾಪನೆಗೂ ಕಿವಿಗೊಡು. ಈ ಹೊತ್ತು ನಿನ್ನನ್ನು ಪ್ರಾರ್ಥಿಸುತ್ತಿರುವ ನಿನ್ನ ಸೇವಕನ ಮೊರೆಯನ್ನು ಲಾಲಿಸು. 29ಈ ಸ್ಥಳವನ್ನು ಕುರಿತು, ‘ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವುದು’ ಎಂದು ಹೇಳಿದವನೇ, ನಿನ್ನ ಕಟಾಕ್ಷವು ಹಗಲಿರುಳು ಈ ಮಂದಿರದ ಮೇಲಿರಲಿ. ಇಲ್ಲಿ ನಿನ್ನ ಸೇವಕರು ನಿನ್ನನ್ನು ಪ್ರಾರ್ಥಿಸುವಾಗೆಲ್ಲಾ ಅವರಿಗೆ ಸದುತ್ತರವನ್ನು ದಯಪಾಲಿಸು. 30ನಿನ್ನ ಸೇವಕನಾದ ನಾನಾಗಲಿ ನಿನ್ನ ಪ್ರಜೆಗಳಾದ ಇಸ್ರಾಯೇಲರಾಗಲಿ ಈ ಸ್ಥಳದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವುದಾದರೆ, ನಿನ್ನ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸು.
ಸಂಧ್ಯಾ ಪ್ರಾರ್ಥನೆ: ವಾಚನ
19ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸ್ಥಾಪಿಸಿ, ವಿವೇಕದ ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು. 20ಭೂಮಿಯ ಕೆಳಗಿನ ಸಾಗರವು ಒಡೆದದ್ದಕ್ಕೂ, ಆಕಾಶವು ಇಬ್ಬನಿಯನ್ನು ಸುರಿಸುವುದಕ್ಕೂ ಆತನ ತಿಳಿವಳಿಕೆಯೇ ಸಾಧನ. 21ನನ್ನ ಮಗನೇ, ಸುಜ್ಞಾನವನ್ನೂ ಮತ್ತು ಬುದ್ಧಿಯನ್ನೂ ಭದ್ರವಾಗಿಟ್ಟುಕೋ, ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದೇ ಇರಲಿ. 22ಅವು ನಿನಗೆ ಜೀವವೂ, ನಿನ್ನ ಕೊರಳಿಗೆ ಭೂಷಣವೂ ಆಗಿರುವವು. 23ಆಗ ನೀನು ಎಡವದೆ ನಿನ್ನ ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಿ. 24ನೀನು ಮಲಗುವಾಗ ಹೆದರಿಕೆ ಇರುವುದಿಲ್ಲ, ಮಲಗಿದ ಮೇಲೆ ಸುಖವಾಗಿ ನಿದ್ರೆಮಾಡುವಿ. 25ಪಕ್ಕನೆ ಬರುವ ಅಪಾಯಕ್ಕಾಗಲಿ ಅಥವಾ ದುಷ್ಟರಿಗೆ ಸಂಭವಿಸುವ ನಾಶನಕ್ಕಾಗಲಿ ನೀನು ಅಂಜುವುದೇ ಇಲ್ಲ. 26ಯೆಹೋವನು ನಿನ್ನ ಭರವಸಕ್ಕೆ ಆಧಾರನಾಗಿದ್ದು, ನಿನ್ನ ಕಾಲು ಮೋಸದ ಬಲೆಗೆ ಸಿಕ್ಕದಂತೆ ನಿನ್ನನ್ನು ಕಾಪಾಡುವನು. 27ಉಪಕಾರಮಾಡುವುದಕ್ಕೆ ನಿನ್ನಿಂದ ಸಾಧ್ಯವಾಗುವಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ. 28ಕೊಡತಕ್ಕದ್ದು ನಿನ್ನಲ್ಲಿದ್ದರೆ ನೆರೆಯವನಿಗೆ, “ಹೋಗಿ ಬಾ, ನಾಳೆ ಕೊಡುತ್ತೇನೆ” ಎಂದು ಹೇಳಬೇಡ. 29ನೆರೆಯವನಿಗೆ ಕೇಡನ್ನು ಕಲ್ಪಿಸಬಾರದು, ಅವನು ನಿನ್ನ ಪಕ್ಕದಲ್ಲಿ ನಂಬಿಕೆಯಿಂದ ವಾಸಮಾಡುತ್ತಾನಲ್ಲವೇ? 30ನಿನಗೆ ಅಪಕಾರ ಮಾಡದವನ ಸಂಗಡ ಸುಮ್ಮನೆ ಜಗಳವಾಡಬೇಡ. 31ಬಲಾತ್ಕಾರಿಯನ್ನು ನೋಡಿ ಹೊಟ್ಟೆಕಿಚ್ಚುಪಡದಿರು, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ. 32ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವುದು. 33ಯೆಹೋವನು ದುಷ್ಟನ ಮನೆಯನ್ನು ಶಪಿಸುವನು, ನೀತಿವಂತರ ನಿವಾಸವನ್ನೋ ಆಶೀರ್ವದಿಸುವನು. 34ಯಾರು ಧರ್ಮವನ್ನು ತಿರಸ್ಕರಿಸುವರೋ ಅವರನ್ನು ಆತನು ತಿರಸ್ಕರಿಸುವನು. ದೀನರಿಗಾದರೋ ತನ್ನ ಕೃಪೆಯನ್ನು ಅನುಗ್ರಹಿಸುವನು.
ಸಂಧ್ಯಾ ಪ್ರಾರ್ಥನೆ: ವಾಚನ
1ಜ್ಞಾನವೆಂಬಾಕೆಯು ಏಳು ಕಂಬಗಳನ್ನು ಕಡಿದು, ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ. 2ಆಕೆ ಪಶುಗಳನ್ನು ಕೊಯಿಸಿ ಪಾನದ್ರವ್ಯಗಳೊಡನೆ ದ್ರಾಕ್ಷಾರಸವನ್ನು ಬೆರಸಿ, ಔತಣವನ್ನು ಸಿದ್ಧಪಡಿಸಿದ್ದಾಳೆ. 3ಆಕೆಯು ತನ್ನ ದಾಸಿಯರನ್ನು ಕಳುಹಿಸಿ, ಪಟ್ಟಣದ ರಾಜಮಾರ್ಗಗಳ ಮುಖ್ಯಸ್ಥಾನಗಳಲ್ಲಿ ಪ್ರಕಟಿಸುತ್ತಾಳೆ. 4ಆಕೆಯು ಬುದ್ಧಿಹೀನರಿಗೆ, “ಮೂಢನಾಗಿರುವವನು ಈ ಕಡೆಗೆ ತಿರುಗಲಿ, 5ಬನ್ನಿರಿ, ನಾನು ಬಡಿಸುವ ಆಹಾರವನ್ನು ಉಣ್ಣಿರಿ, ನಾನು ಬೆರೆಸಿರುವ ದ್ರಾಕ್ಷಾರಸವನ್ನು ಕುಡಿಯಿರಿ. 6ಮೂಢರೇ ಮೂಢತ್ವವನ್ನು ಬಿಟ್ಟು ಬಾಳಿರಿ, ವಿವೇಕಮಾರ್ಗದಲ್ಲಿ ನೆಟ್ಟಗೆ ನಡೆಯಿರಿ” ಎಂದು ಪ್ರಬೋಧಿಸುತ್ತಾಳೆ. 7ಧರ್ಮನಿಂದಕನನ್ನು ಶಿಕ್ಷಿಸುವವನು ತನ್ನನ್ನು ಅವಮಾನಕ್ಕೆ ಗುರಿಮಾಡಿಕೊಳ್ಳುವನು, ಕೆಟ್ಟವನನ್ನು ಗದರಿಸುವವನಿಗೇ ಕಳಂಕವಾಗುವುದು. 8ಧರ್ಮನಿಂದಕನನ್ನು ಗದರಿಸಬೇಡ, ನಿನ್ನನ್ನು ಹಗೆಮಾಡುವನು. ಜ್ಞಾನವಂತನನ್ನು ಗದರಿಸಿದರೆ ನಿನ್ನನ್ನು ಪ್ರೀತಿಸುವನು. 9ಜ್ಞಾನಿಗೆ ಉಪದೇಶಿಸಿದರೆ ಹೆಚ್ಚು ಜ್ಞಾನವನ್ನು ಹೊಂದುವನು, ನೀತಿವಂತನಿಗೆ ಬೋಧಿಸಿದರೆ ಹೆಚ್ಚು ತಿಳಿವಳಿಕೆಯನ್ನು ಪಡೆಯುವನು. 10ಯೆಹೋವನ ಭಯವೇ ಜ್ಞಾನಕ್ಕೆ ಮೂಲವು, ಪರಿಶುದ್ಧ ದೇವರ ತಿಳಿವಳಿಕೆಯೇ ವಿವೇಕವು. 11ನನ್ನಿಂದ ನಿನ್ನ ದಿನಗಳು ಹೆಚ್ಚುವವು, ನಿನ್ನ ಆಯುಷ್ಯದ ವರ್ಷಗಳು ವೃದ್ಧಿಯಾಗುವವು.
ಉದಯಕಾಲದ ಮೂರನೆಯ ಸುವಾರ್ತೆ
9ವಾರದ ಮೊದಲನೆಯ ದಿನ ಬೆಳಿಗ್ಗೆ ಯೇಸು ಜೀವಿತನಾಗಿ ಎದ್ದ ಮೇಲೆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. ಆತನು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದ್ದನು. 10ಆಕೆ ಹೋಗಿ ಆತನು ಕಾಣಿಸಿಕೊಂಡದ್ದನ್ನು ಆತನ ಜೊತೆಯಲ್ಲಿದ್ದವರಿಗೆ ತಿಳಿಸಿದಳು; ಅವರು ಶೋಕಿಸುತ್ತಾ ಅಳುತ್ತಿದ್ದರು. 11“ಆತನು ಬದುಕಿದ್ದಾನೆ ನನಗೆ ಕಾಣಿಸಿಕೊಂಡನು” ಎಂದು ಅವಳು ಹೇಳಿದ ಮಾತನ್ನು ಅವರು ನಂಬಲಿಲ್ಲ. 12ಇದಾದ ಮೇಲೆ ಶಿಷ್ಯರಲ್ಲಿ ಇಬ್ಬರು ಊರಿಗೆ ಪ್ರಯಾಣ ಮಾಡುತ್ತಿರುವಾಗ ಆತನು ಅವರಿಗೆ ಬೇರೆ ರೂಪದಲ್ಲಿ ಕಾಣಿಸಿಕೊಂಡನು. 13ಅವರು ಹೋಗಿ ಉಳಿದ ಶಿಷ್ಯರಿಗೆ ತಿಳಿಸಿದರು. ಆದರೆ ಶಿಷ್ಯರು ಅವರನ್ನೂ ನಂಬಲಿಲ್ಲ. 14ಅನಂತರ ಹನ್ನೊಂದು ಮಂದಿ ಶಿಷ್ಯರು ಊಟಕ್ಕೆ ಕುಳಿತಿದ್ದಾಗ ಆತನು ಅವರಿಗೂ ಕಾಣಿಸಿಕೊಂಡನು. ತಾನು ಜೀವಿತನಾಗಿ ಎದ್ದು ಬಂದ ಮೇಲೆ ತನ್ನನ್ನು ನೋಡಿದವರ ಮಾತನ್ನು ಅವರು ನಂಬಲಿಲ್ಲವಾದ ಕಾರಣ ಆತನು ಅವರ ಅಪನಂಬಿಕೆಗೂ ಅವರ ಮನಸ್ಸಿನ ಕಾಠಿಣ್ಯಕ್ಕೂ ಅವರನ್ನು ಗದರಿಸಿದನು. 15ಆ ಮೇಲೆ ಅವರಿಗೆ, “ನೀವು ಲೋಕದ ಎಲ್ಲಾ ಕಡೆಗಳಿಗೂ ಹೋಗಿ ಸೃಷ್ಟಿಗಳಿಗೆಲ್ಲಾ ಸುವಾರ್ತೆಯನ್ನು ಸಾರಿರಿ. 16ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು; ನಂಬದೇ ಹೋಗುವವನು ದಂಡನೆಗೆ ಗುರಿಯಾಗುವನು. 17“ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು, ಹೊಸ ಭಾಷೆಗಳಲ್ಲಿ ಮಾತನಾಡುವರು; 18ಹಾವುಗಳನ್ನು ಕೈಗಳಿಂದ ಎತ್ತಿಕೊಳ್ಳುವರು; ವಿಷಪದಾರ್ಥಗಳನ್ನೇನಾದರು ಕುಡಿದರೂ ಅವರಿಗೆ ಯಾವ ಹಾನಿಯೂ ಆಗುವುದಿಲ್ಲ. ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಸ್ವಸ್ಥವಾಗುವುದು” ಎಂದು ಹೇಳಿದನು. 19ಕರ್ತನಾದ ಯೇಸು ಅವರೊಂದಿಗೆ ಮಾತನಾಡಿದ ಮೇಲೆ ಪರಲೋಕಕ್ಕೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಆಸನಾರೂಢನಾದನು. 20ಅನಂತರ ಅವರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು; ಮತ್ತು ಕರ್ತನು ಅವರ ಸಂಗಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ದೃಢಪಡಿಸುತ್ತಾ ಇದ್ದನು.
ಪತ್ರಿಕೆ (ಶಿಲುಬೆಯ ಉನ್ನತೀಕರಣಕ್ಕೆ ಮುಂಚಿನ ಭಾನುವಾರ)
11ಇಗೋ ನೋಡಿರಿ, ಸ್ವಂತ ಕೈಯಿಂದ ಎಂಥಾ ದೊಡ್ಡ ಅಕ್ಷರಗಳಲ್ಲಿ ನಿಮಗೆ ಬರೆಯುತ್ತಾ ಇದ್ದೇನೆ. 12ದೈಹಿಕವಾಗಿ ಪ್ರಶಂಸೆಯನ್ನು ಹೊಂದಬೇಕೆಂದಿರುವವರು ಸುನ್ನತಿ ಮಾಡಿಸಿಕೊಳ್ಳಿರಿ ಎಂಬುದಾಗಿ ನಿಮ್ಮನ್ನು ಒತ್ತಾಯಿಸುತ್ತಾರೆ. ಏಕೆಂದರೆ ಕ್ರಿಸ್ತನ ಶಿಲುಬೆಯ ದೆಸೆಯಿಂದ ತಮಗೆ ಹಿಂಸೆಯಾಗಬಾರದೆಂಬುದೇ ಅವರ ಉದ್ದೇಶ. 13ಸುನ್ನತಿ ಮಾಡಿಸಿಕೊಂಡವರೇ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತಿಲ್ಲವಲ್ಲಾ. ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳಪಡುವುದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ. 14ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿಯೇ ಹೊರತು ಬೇರೆ ಯಾವ ವಿಷಯದಲ್ಲಿಯೂ ಹೆಚ್ಚಳಪಡುವುದು ಬೇಕಾಗಿಲ್ಲ. ಆತನ ಮೂಲಕ ನಾನು ಲೋಕಕ್ಕೂ, ಲೋಕವು ನನಗಾಗಿಯೂ ಶಿಲುಬೆಗೆ ಹಾಕಿಕೊಂಡು ಸತ್ತಿತು. 15ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಏನು ಅಲ್ಲ, ಆದರೆ ಹೊಸ ಸೃಷ್ಟಿಯಾಗುವುದೇ ಪ್ರಮುಖವಾದುದು. 16ಈ ನಿಯಮಗಳನ್ನು ಸರಿಯಾಗಿ ನಡೆಯುವವರೆಲ್ಲರಿಗೂ ಮತ್ತು ದೇವರ ಇಸ್ರಾಯೇಲ್ಯರಿಗೆ ಶಾಂತಿಯೂ, ಕರುಣೆಯೂ ಉಂಟಾಗಲಿ. 17ಇನ್ನು ಮೇಲೆ ಯಾರೂ ನನಗೆ ತೊಂದರೆಪಡಿಸಬಾರದು, ನನ್ನ ದೇಹದಲ್ಲಿ ಯೇಸುಕ್ರಿಸ್ತನ ಗುರುತುಗಳನ್ನು ಮುದ್ರಿಸಿಕೊಂಡಿದ್ದೇನೆ. 18ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್.
ಪತ್ರಿಕೆ
21ನಮ್ಮನ್ನು ಅಭಿಷೇಕಿಸಿ ಕ್ರಿಸ್ತನ ಅನ್ಯೋನ್ಯತೆಯಲ್ಲಿ ಸೇರಿಸಿ ನಮ್ಮನ್ನು ನಿಮ್ಮೊಂದಿಗೆ ಸ್ಥಿರಪಡಿಸುವವನು ದೇವರೇ. 22ಆತನು ನಮ್ಮ ಮೇಲೆ ತನ್ನ ಮುದ್ರೆಯನ್ನೊತ್ತಿ ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನನ್ನು ಖಾತರಿಯಾಗಿ ಅನುಗ್ರಹಿಸಿದ್ದಾನೆ. 23ನಿಮಗೆ ತೊಂದರೆ ಆಗಬಾರದೆಂದೇ ನಾನು ಇದುವರೆಗೆ ಕೊರಿಂಥಕ್ಕೆ ಬರಲಿಲ್ಲ. ಇದನ್ನು ಹೃದಯ ಪೂರ್ವಕವಾಗಿ ಹೇಳುತ್ತಿದ್ದೇನೆ. ಇದಕ್ಕೆ ದೇವರೇ ಸಾಕ್ಷಿ. 24ನಿಮ್ಮ ನಂಬಿಕೆಯ ವಿಷಯದಲ್ಲಿಯೂ ನಾವು ನಿಮ್ಮ ಮೇಲೆ ದೊರೆತನಮಾಡುವವರೆಂಬುದಾಗಿ ಅಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿರುವಂತೆ ನಿಮ್ಮ ಸಂತೋಷಕ್ಕೆ ನಾವು ಸಹಾಭಾಗಿಗಳಾಗಿದೇವಷ್ಟೇ. 2:1ಇನ್ನೊಮ್ಮೆ ನಿಮ್ಮ ಬಳಿಗೆ ಬಂದು, ನಿಮ್ಮನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ನಿರ್ಧರಿಸಿಕೊಂಡೆ. 2ನಾನೇ ನಿಮ್ಮನ್ನು ದುಃಖಪಡಿಸಿದರೆ, ನನ್ನನ್ನು ಸಂತೋಷಪಡಿಸುವವರು ಯಾರು? ನನ್ನಿಂದ ದುಃಖಕ್ಕೆ ಒಳಗಾದ ನೀವೇ ಅಲ್ಲವೇ? 3ಆದಕಾರಣ ನಾನು ಆ ಪತ್ರವನ್ನು ಬರೆದದ್ದು: ನನ್ನನ್ನು ಸಂತೋಷಪಡಿಸಬೇಕಾದವರೇ ನನ್ನನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ಬರಲಿಲ್ಲ. ನನ್ನ ಸಂತೋಷವೇ ನಿಮ್ಮೆಲ್ಲರ ಸಂತೋಷವೆಂದು ನೀವು ಭಾವಿಸುತ್ತೀರೆಂದು ನಂಬಿದ್ದೇನೆ. 4ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದುಕೊಳ್ಳಬೇಕೆಂತಲೇ ನಾನು ಬಹಳವಾಗಿ ಕಣ್ಣೀರಿಡುತ್ತಾ ಹೃದಯದ ಬಹು ಸಂಕಟದಿಂದಲೂ ವ್ಯಾಕುಲದಿಂದಲೂ ನಿಮಗೆ ಬರೆದೆನೇ ಹೊರತು ನಿಮ್ಮನ್ನು ನೋಯಿಸುವುದಕ್ಕಾಗಿಯಲ್ಲ.
ಪತ್ರಿಕೆ (ಪವಿತ್ರ ಸಮಾಧಿಯ ದೇವಾಲಯ)
1ಆದ್ದರಿಂದ ಪರಿಶುದ್ಧರಾದ ಸಹೋದರರೇ, ಪರಲೋಕದ ಕರೆಯುವಿಕೆಗೆ ಪಾಲುಗಾರರಾಗಿರುವವರೇ, ನಾವು ಒಪ್ಪಿಕೊಂಡಿರುವ ಅಪೊಸ್ತಲನೂ ಮತ್ತು ಮಹಾಯಾಜಕನೂ ಆಗಿರುವ ಯೇಸುವನ್ನು ಗಮನವಿಟ್ಟು ಯೋಚಿಸಿರಿ. 2ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ, ಯೇಸುವೂ ತನ್ನನ್ನು ನೇಮಕ ಮಾಡಿರುವಾತನಿಗೆ ನಂಬಿಗಸ್ತನಾಗಿದ್ದಾನೆ. 3ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ ಮೋಶೆಗಿಂತ ಯೇಸು ಹೆಚ್ಚಾದ ಗೌರವಕ್ಕೆ ಯೋಗ್ಯನೆಂದೆಣಿಸಲ್ಪಟ್ಟಿದ್ದಾನೆ. 4ಪ್ರತಿಯೊಂದು ಮನೆಯನ್ನು ಯಾರೊಬ್ಬನು ಕಟ್ಟಿರುವನು, ಆದರೆ ಸಮಸ್ತವನ್ನು ಕಟ್ಟಿದಾತನು ದೇವರೇ.
ಸುವಾರ್ತೆ (ಶಿಲುಬೆಯ ಉನ್ನತೀಕರಣಕ್ಕೆ ಮುಂಚಿನ ಭಾನುವಾರ)
13ಪರಲೋಕದಿಂದ ಇಳಿದು ಬಂದವನೇ, ಅಂದರೆ, ಮನುಷ್ಯಕುಮಾರನೇ ಹೊರತು ಮತ್ತಾರು ಪರಲೋಕಕ್ಕೆ ಏರಿ ಹೋದವರಿಲ್ಲ. 14ಇದಲ್ಲದೆ ಮೋಶೆಯು ಅಡವಿಯಲ್ಲಿ ಕಂಚಿನ ಸರ್ಪವನ್ನು ಮೇಲೆ ಎತ್ತಿ ನಿಲ್ಲಿಸಿದ ಹಾಗೆಯೇ ಮನುಷ್ಯಕುಮಾರನು ಸಹ ಮೇಲಕ್ಕೆ ಎತ್ತಲ್ಪಡಬೇಕು. 15ಹೀಗೆ ಆತನನ್ನು ನಂಬುವವರೆಲ್ಲರೂ ನಿತ್ಯಜೀವವನ್ನು ಹೊಂದುವರು. 16“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. 17ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ಅಪರಾಧಿಯೆಂದು ಖಂಡಿಸಲಿಕ್ಕೆ ಕಳುಹಿಸಲಿಲ್ಲ.
ಸುವಾರ್ತೆ
1ಯೇಸು ಪುನಃ ಅವರ ಸಂಗಡ ಮಾತನಾಡುತ್ತಾ ಸಾಮ್ಯರೂಪವಾಗಿ ಅವರಿಗೆ ಹೇಳಿದ್ದೇನೆಂದರೆ, 2“ಪರಲೋಕ ರಾಜ್ಯವು ತನ್ನ ಮಗನ ಮದುವೆಯ ಔತಣವನ್ನು ಏರ್ಪಡಿಸಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. 3ಅವನು ಮದುವೆಗೆ ಆಹ್ವಾನಿತರಾಗಿದ್ದವರನ್ನು ಕರೆಯುವುದಕ್ಕೆ ತನ್ನ ಆಳುಗಳನ್ನು ಕಳುಹಿಸಿದನು, ಆದರೆ ಬರುವುದಕ್ಕೆ ಅವರಿಗೆ ಮನಸ್ಸಿರಲಿಲ್ಲ. 4ಅರಸನು ತಿರುಗಿ ಬೇರೆ ಆಳುಗಳನ್ನು ಕರೆದು, ‘ನೀವು ಊಟಕ್ಕೆ ಆಹ್ವಾನಿತರ ಬಳಿಗೆ ಹೋಗಿ ಇಗೋ, ಔತಣ ಸಿದ್ಧವಾಗಿದೆ; ನನ್ನ ಎತ್ತುಗಳನ್ನೂ, ಕೊಬ್ಬಿದ ಹೋರಿಗಳನ್ನೂ ವಧಿಸಿದ್ದೇನೆ; ಎಲ್ಲಾ ಸಿದ್ಧವಾಗಿದೆ; ಮದುವೆಯ ಔತಣಕ್ಕೆ ಬನ್ನಿರಿ’ ಎಂಬುದಾಗಿ ಅವರಿಗೆ ಹೇಳಿರೆಂದು ಅಪ್ಪಣೆ ಕೊಟ್ಟು ಕಳುಹಿಸಿದನು. 5ಆದರೆ ಅವರು ಆಹ್ವಾನವನ್ನು ಅಲಕ್ಷ್ಯಮಾಡಿ, ಒಬ್ಬನು ತನ್ನ ಹೊಲಕ್ಕೆ ಒಬ್ಬನು ತನ್ನ ವ್ಯಾಪಾರಕ್ಕೆ ಹೋಗಿಬಿಟ್ಟರು; 6ಉಳಿದವರು ಅವನ ಆಳುಗಳನ್ನು ಹಿಡಿದು ಅವಮಾನಮಾಡಿ ಕೊಂದು ಹಾಕಿದರು. 7ಅರಸನು ಅದನ್ನು ಕೇಳಿ, ಸಿಟ್ಟುಗೊಂಡು, ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು. 8ಆಗ ತನ್ನ ಆಳುಗಳಿಗೆ, ‘ಮದುವೆಯ ಔತಣವು ಸಿದ್ಧವಾಗಿದೆ ಸರಿ, ಆದರೆ ಆಹ್ವಾನಿತರು ಯೋಗ್ಯರಾಗಿರಲಿಲ್ಲ. 9ಆದುದರಿಂದ ನೀವು ಈಗ ಮುಖ್ಯರಸ್ತೆಗೆ ಹೋಗಿ ಕಂಡ ಕಂಡವರನ್ನೆಲ್ಲಾ ಮದುವೆಯ ಔತಣಕ್ಕೆ ಕರೆಯಿರಿ’ ಎಂದು ಹೇಳಿದನು. 10ಆ ಆಳುಗಳು ಮುಖ್ಯರಸ್ತೆಗಳಿಗೆ ಹೋಗಿ ಕೆಟ್ಟವರು ಒಳ್ಳೆಯವರೆನ್ನದೇ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುಕೊಂಡು ಬಂದರು. ಹೀಗೆ ಮದುವೆಯ ಮಂಟಪವು ಅತಿಥಿಗಳಿಂದ ತುಂಬಿಹೋಯಿತು. 11ಆಮೇಲೆ ಅರಸನು ಅತಿಥಿಗಳನ್ನು ನೋಡುವುದಕ್ಕಾಗಿ ಒಳಗೆ ಬಂದನು, ಮದುವೆಯ ಔತಣಕ್ಕೆ ತಕ್ಕ ವಸ್ತ್ರವನ್ನು ಹಾಕಿಕೊಳ್ಳದ ಒಬ್ಬನನ್ನು ಕಂಡು ಅರಸನು, 12ಅವನಿಗೆ ‘ಸ್ನೇಹಿತನೇ, ಮದುವೆಯ ಬಟ್ಟೆ ಇಲ್ಲದೆ ನೀನಿಲ್ಲಿ ಹೇಗೆ ಒಳಕ್ಕೆ ಬಂದೆ?’ ಎಂದು ಕೇಳಲು ಅವನು ಮೌನವಾಗಿದ್ದನು. 13ಆಗ ಅರಸನು ಸೇವಕರಿಗೆ, ‘ಅವನ ಕೈಕಾಲು ಕಟ್ಟಿ ಅವನನ್ನು ಹೊರಗೆ ಕತ್ತಲೆಗೆ ನೂಕಿರಿ ಎಂದು ಹೇಳಿದನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.’ 14ಹೀಗೆ ಕರೆಯಲ್ಪಟ್ಟವರು ಬಹು ಜನ, ಆರಿಸಲ್ಪಟ್ಟವರು ಸ್ವಲ್ಪ ಜನ” ಅಂದನು.
ಸುವಾರ್ತೆ (ಪವಿತ್ರ ಸಮಾಧಿಯ ದೇವಾಲಯ)
13ಯೇಸು ಫಿಲಿಪ್ಪನ ಕೈಸರೈಯ ಎಂಬ ಪಟ್ಟಣದ ಪ್ರಾಂತ್ಯಕ್ಕೆ ಬಂದಾಗ, “ಜನರು ಮನುಷ್ಯಕುಮಾರನಾದ ನನ್ನನ್ನು ಯಾರೆಂದು ಹೇಳುತ್ತಾರೆ” ಎಂದು ತನ್ನ ಶಿಷ್ಯರನ್ನು ಕೇಳಿದನು. 14ಅವರು, “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಲೀಯನು ಅನ್ನುತ್ತಾರೆ ಮತ್ತು ಬೇರೆಯವರು ಯೆರಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು” ಅನ್ನುತ್ತಾರೆ ಎಂದು ಹೇಳಿದರು. 15ಆತನು ಅವರನ್ನು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ ಎಂದು ಕೇಳಿದನು?” 16ಆಗ ಸೀಮೋನ ಪೇತ್ರನು, “ನೀನು ಜೀವವುಳ್ಳ ದೇವರ ಕುಮಾರನಾದ ಕ್ರಿಸ್ತನು” ಎಂದು ಉತ್ತರ ಕೊಟ್ಟನು. 17ಅದಕ್ಕೆ ಯೇಸು, “ಯೋನನ ಮಗನಾದ ಸೀಮೋನನೇ, ನೀನು ಧನ್ಯನು. ಏಕೆಂದರೆ ಇದು ಮನುಷ್ಯನಿಂದ ನಿನಗೆ ಪ್ರಕಟವಾಗಿಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನೂ ನಿನಗೆ ಪ್ರಕಟಪಡಿಸಿರುವನು” ಎಂದು ಹೇಳಿದನು. 18ನಾನು ಇದನ್ನು ಸಹ ನಿನಗೆ ಹೇಳುತ್ತೇನೆ, “ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ಶಕ್ತಿಗಳು ಅದನ್ನು ಸೋಲಿಸಲಾರವು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 13 ಸೆಪ್ಟೆಂಬರ್ ಎಂದರೆ ನಾಗರಿಕ ಪಂಚಾಂಗದ 26 ಸೆಪ್ಟೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು