Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಸೆಪ್ಟೆಂಬರ್ 2027 › 26 ಸೆಪ್ಟೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 26 ಸೆಪ್ಟೆಂಬರ್ 2027

ಭಾನುವಾರ · ಸಾಮಾನ್ಯ ಕಾಲದ 26ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 26ನೇ ಭಾನುವಾರ

ಭಾನುವಾರ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ಅರಣ್ಯ 11:25–29

25ಯೆಹೋವನು ಆ ಮೇಘದಲ್ಲಿ ಇಳಿದು ಬಂದು ಅವನ ಸಂಗಡ ಮಾತನಾಡಿದನು. ಮೋಶೆಯ ಮೇಲಿರುವ ಆತ್ಮದಲ್ಲಿ ಸ್ವಲ್ಪವನ್ನು ಆ ಎಪ್ಪತ್ತು ಮಂದಿ ಹಿರಿಯರಿಗೂ ಪಾಲುಕೊಟ್ಟನು. ಆ ಆತ್ಮವು ಅವರಿಗೆ ದೊರಕಿದಾಗ ಅವರು ಪರವಶರಾಗಿ ಆ ಸಂದರ್ಭದಲ್ಲಿ ಮಾತ್ರ ಪ್ರವಾದಿಸಿದರು. ಆ ಮೇಲೆ ಅವರು ಎಂದಿಗೂ ಪ್ರವಾದಿಸಲೇ ಇಲ್ಲ. 26ಆದರೆ ಎಲ್ದಾದ್, ಮೇದಾದ್ ಎಂಬ ಇಬ್ಬರು ಪಾಳೆಯದೊಳಗೆ ನಿಂತಿದ್ದರು. ಅವರ ಹೆಸರುಗಳು ಬರೆಯಲ್ಪಟ್ಟಿದ್ದಾಗ್ಯೂ ಅವರು ದೇವದರ್ಶನದ ಗುಡಾರಕ್ಕೆ ಹೋಗಲಿಲ್ಲ. ಆ ಆತ್ಮವು ಅವರ ಮೇಲೆ ಇಳಿದುಬಂದುದರಿಂದ ಅವರು ಪಾಳೆಯದೊಳಗೆ ಪರವಶರಾಗಿ ಪ್ರವಾದಿಸಿದರು. 27ಪಾಳೆಯದಿಂದ ಒಬ್ಬ ಹುಡುಗನು ಮೋಶೆಯ ಬಳಿಗೆ ಓಡಿ ಬಂದು, “ಎಲ್ದಾದ್ ಮತ್ತು ಮೇದಾದರು ಪಾಳೆಯದಲ್ಲಿ ಪರವಶರಾಗಿ ಪ್ರವಾದಿಸುತ್ತಿದ್ದಾರೆ” ಎಂದು ತಿಳಿಸಿದನು. 28ಮೋಶೆಯ ಶಿಷ್ಯನಾದ ನೂನನ ಮಗನಾದ ಯೆಹೋಶುವನು ಮೋಶೆಗೆ, “ಗುರುವೇ, ಅವರು ಪ್ರವಾದಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದನು. 29ಅದಕ್ಕೆ ಮೋಶೆ, “ನನ್ನ ನಿಮಿತ್ತವಾಗಿ ನೀನು ಹೊಟ್ಟೆಕಿಚ್ಚುಪಡುತ್ತೀಯೋ? ಯೆಹೋವನ ಅನುಗ್ರಹದಿಂದ ಆತನ ಜನರೆಲ್ಲರೂ ಆತ್ಮವನ್ನು ಹೊಂದಿದವರೂ, ಪ್ರವಾದಿಸುವವರೂ ಆದರೆ ಎಷ್ಟೋ ಒಳ್ಳೆಯದು” ಎಂದನು.

ಪ್ರತಿವಚನ ಕೀರ್ತನೆ

ಕೀರ್ತ 19:7, 9, 11–13

7ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆಗಳು ನಂಬಿಕೆಗೆ ಯೋಗ್ಯವಾದದ್ದು; ಅವು ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. 9ಯೆಹೋವನ ಭಯ ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದೇ. ಯೆಹೋವನ ಕಟ್ಟಳೆಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯವಾಗಿವೆ. 11ಅವುಗಳ ಮೂಲಕ ನಿನ್ನ ದಾಸನಿಗೆ ವಿವೇಚನೆ ಉಂಟಾಗುತ್ತದೆ; ಅವುಗಳನ್ನು ಕೈಕೊಳ್ಳುವುದರಿಂದ ಬಹಳ ಫಲ ದೊರೆಯುತ್ತದೆ. 12ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವವನು ಯಾರು? ಮರೆಯಾದ ದೋಷಗಳಿಂದ ನನ್ನನ್ನು ನಿರ್ಮಲಮಾಡು. 13ಅದಲ್ಲದೆ ಬೇಕೆಂದು ಪಾಪಮಾಡದಂತೆ ನಿನ್ನ ದಾಸನನ್ನು ಕಾಪಾಡು. ಅಂಥ ಪಾಪಗಳು ನನ್ನನ್ನು ಆಳದಿರಲಿ. ಆಗ ನಾನು ತಪ್ಪಿಲ್ಲದವನಾಗಿ ಮಹಾದ್ರೋಹಕ್ಕೆ ಒಳಗಾಗುವುದಿಲ್ಲ.

ಎರಡನೆಯ ವಾಚನ

ಯಾಕೋ 5:1–6

1ಐಶ್ವರ್ಯವಂತರೇ, ನಿಮಗೆ ಬರುವ ಸಂಕಟಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ. 2ನಿಮ್ಮ ಐಶ್ವರ್ಯ, ಸಂಪತ್ತು ನಾಶವಾಗಿದೆ. ನಿಮ್ಮ ಬಟ್ಟೆಗಳಿಗೆ ನುಸಿ ಹಿಡಿದಿದೆ. 3ನಿಮ್ಮ ಚಿನ್ನ, ಬೆಳ್ಳಿಗಳು ತುಕ್ಕು ಹಿಡಿದು ಮಣ್ಣಿಗೆ ಸಮವಾಗಿದೆ. ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು, ಬೆಂಕಿಯಂತೆ ನಿಮ್ಮ ಮಾಂಸವನ್ನು ದಹಿಸಿಬಿಡುವುದು. ಅಂತ್ಯಕಾಲ ಬಂದರೂ ಸಂಪತ್ತನ್ನು ಕೂಡಿಸಿ ಇಟ್ಟುಕೊಂಡಿದ್ದೀರಿ. 4ಇಗೋ, ನಿಮ್ಮ ಹೊಲದಲ್ಲಿನ ಪೈರುಗಳನ್ನು ಕೊಯ್ದದವರ ಕೂಲಿಯನ್ನು ಕೊಡದೆ ವಂಚಿಸಿದಿರಿ. ಆ ಕೂಲಿಯ ಕೂಗು ಹಾಗು ಪೈರು ಕೊಯ್ದದವರ ಕೂಗು ಸೇನಾಧೀಶ್ವರನಾದ ಕರ್ತನ ಕಿವಿಗಳನ್ನು ಮುಟ್ಟಿವೆ. 5ಭೂಲೋಕದಲ್ಲಿ ನೀವು ಸುಖಭೋಗಿಗಳಾಗಿ ನಿಮ್ಮ ಇಚ್ಛೆಪೂರೈಸಿಕೊಳ್ಳುವವರಾಗಿ ಜೀವಿಸಿದ್ದೀರಿ; ವಧೆಯ ದಿನಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಕೊಬ್ಬಿಸಿಕೊಂಡಿದ್ದೀರಿ. 6ನೀವು ನೀತಿವಂತನನ್ನು ಖಂಡಿಸಿ ಕೊಂದು ಹಾಕಿದ್ದೀರಿ; ಅವನಾದರೋ ನಿಮ್ಮನ್ನು ವಿರೋಧಿಸುತ್ತಿಲ್ಲ.

ಸುವಾರ್ತೆ

ಮಾರ್ಕ 9:38–48

38ಯೋಹಾನನು ಆತನಿಗೆ, “ಬೋಧಕನೇ, ಯಾರೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವ ಬಿಡಿಸುವುದನ್ನು ನಾವು ಕಂಡು ಅವನು ನಮ್ಮೊಂದಿಗೆ ಸೇರಿದವನಲ್ಲವಾದ್ದರಿಂದ ಅವನಿಗೆ ಅಡ್ಡಿಮಾಡಿದೆವು” ಎಂದು ಹೇಳಿದನು. 39ಅದಕ್ಕೆ ಯೇಸು, “ಅವನಿಗೆ ಅಡ್ಡಿಮಾಡಬೇಡಿರಿ; ನನ್ನ ಹೆಸರಿನಲ್ಲಿ ಮಹತ್ಕಾರ್ಯವನ್ನು ಮಾಡಿ ಏಕಾಏಕಿ ನನ್ನನ್ನು ದೂಷಿಸುವವನು ಒಬ್ಬನೂ ಇಲ್ಲ. 40ನಮಗೆ ವಿರುದ್ಧವಾಗಿಲ್ಲದವನು ನಮ್ಮ ಪಕ್ಷದವನೇ. 41ನೀವು ಕ್ರಿಸ್ತನವರೆಂದು ನಿಮಗೆ ಯಾರಾದರೂ ಒಂದು ತಂಬಿಗೆ ನೀರನ್ನು ಕುಡಿಯುವುದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ” ಹೇಳುತ್ತೇನೆ. 42ನನ್ನಲ್ಲಿ ನಂಬಿಕೆ ಇಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾರಾದರೂ ಪಾಪ ಮಾಡುವುದಕ್ಕೆ ಕಾರಣನಾದರೆ, ಅಂಥವನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಸಮುದ್ರದಲ್ಲಿ ಬಿಸಾಡಿಬಿಡುವುದು ಅವನಿಗೆ ಉತ್ತಮ. 43ಇದಲ್ಲದೆ ನಿನ್ನ ಕೈ ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕತ್ತರಿಸಿಬಿಡು; ಎರಡು ಕೈಯುಳ್ಳವನಾಗಿ ಆರದ ಬೆಂಕಿಯಾಗಿರುವ ನರಕದಲ್ಲಿ ಬೀಳುವುದಕ್ಕಿಂತ ಕೈಕಳೆದುಕೊಂಡವನಾಗಿ ನಿತ್ಯಜೀವದಲ್ಲಿ ಸೇರುವುದು ನಿನಗೆ ಉತ್ತಮ. 45ನಿನ್ನ ಕಾಲು ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕಡಿದುಬಿಡು; ಎರಡು ಕಾಲುಳ್ಳವನಾಗಿ ನರಕದಲ್ಲಿ ಬೀಳುವುದಕ್ಕಿಂತ ಕಾಲಿಲ್ಲದವನಾಗಿ ನಿತ್ಯಜೀವದಲ್ಲಿ ಸೇರುವುದು ನಿನಗೆ ಉತ್ತಮ. 47ನಿನ್ನ ಕಣ್ಣು ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕಿತ್ತುಬಿಸಾಡು; ಎರಡು ಕಣ್ಣುಳ್ಳವನಾಗಿ ನರಕಕ್ಕೆ ಬೀಳುವುದಕ್ಕಿಂತ ಒಂದು ಕಣ್ಣುಳ್ಳವನಾಗಿ ದೇವರ ರಾಜ್ಯದಲ್ಲಿ ಸೇರುವುದು ನಿನಗೆ ಉತ್ತಮ. 48ನರಕದಲ್ಲಿರುವ ಹುಳ ಸಾಯುವುದಿಲ್ಲ, ಬೆಂಕಿ ಆರುವುದಿಲ್ಲ.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು