Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 28 ಏಪ್ರಿಲ್

ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 15 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 28 ಏಪ್ರಿಲ್ 2027

ಬುಧವಾರ · ಪವಿತ್ರ ವಾರ

ಹಬ್ಬಗಳು ಮತ್ತು ಸಂತರು

ಮಹಾ ಪವಿತ್ರ ಬುಧವಾರ

ಮಹಾ ಉಪವಾಸ ಕಾಲ

ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಸುವಾರ್ತೆ (ಮದಲಿಂಗನ ಉದಯಕಾಲದ ಪ್ರಾರ್ಥನೆ)

ಯೋಹಾ 12:17–50

17ಇದಲ್ಲದೆ ಆತನು ಲಾಜರನನ್ನು ಸಮಾಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಎಬ್ಬಿಸಿದಾಗ ಆತನ ಸಂಗಡ ಇದ್ದ ಜನರೇ ಈ ವಿಷಯಕ್ಕೆ ಸಾಕ್ಷಿಕೊಡುತ್ತಿದ್ದರು. 18ಆತನು ಈ ಸೂಚಕಕಾರ್ಯವನ್ನು ಮಾಡಿದನೆಂದು ಕೇಳಿದ ಕಾರಣದಿಂದಲೂ ಜನರು ಆತನನ್ನು ಸಂಧಿಸಲು ಬಂದರು. 19ಹೀಗಿರಲಾಗಿ ಫರಿಸಾಯರು, “ನಮ್ಮ ಯತ್ನವೇನೂ ನಡೆಯಲಿಲ್ಲ ನೋಡಿರಿ, ಲೋಕವೆಲ್ಲಾ ಆತನ ಹಿಂದೆ ಹೋಯಿತಲ್ಲಾ” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. 20ಇದಲ್ಲದೆ ಆರಾಧನೆ ಮಾಡಬೇಕೆಂದು ಹಬ್ಬಕ್ಕೆ ಬಂದವರಲ್ಲಿ ಕೆಲವು ಮಂದಿ ಗ್ರೀಕರಿದ್ದರು. 21ಇವರು ಗಲಿಲಾಯದಲ್ಲಿರುವ ಬೇತ್ಸಾಯಿದ ಊರಿನ ಫಿಲಿಪ್ಪನ ಬಳಿಗೆ ಬಂದು, “ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆಂದು” ಅವನನ್ನು ಬೇಡಿಕೊಂಡರು. 22ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು. ಅಂದ್ರೆಯನು ಹಾಗೂ ಫಿಲಿಪ್ಪನೂ ಬಂದು ಯೇಸುವಿಗೆ ಹೇಳಿದರು. 23ಆಗ ಯೇಸು ಅವರಿಗೆ, “ಮನುಷ್ಯಕುಮಾರನು ಮಹಿಮೆ ಹೊಂದುವ ಗಳಿಗೆಯು ಬಂದಿದೆ. 24ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂಟಿಯಾಗಿ ಉಳಿಯುವುದು. ಆದರೆ ಅದು ಸತ್ತರೆ ಬಹಳ ಫಲ ಕೊಡುವುದು 25ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುವನು. ಈ ಲೋಕದಲ್ಲಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಹಿಂಜರಿಯದವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು. 26ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನನ್ನು ಹಿಂಬಾಲಿಸಲಿ, ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನೂ ಸಹ ಇರುವನು. ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ತಂದೆಯು ಅವನನ್ನು ಸನ್ಮಾನಿಸುವನು. 27ಈಗ ನನ್ನ ಪ್ರಾಣವು ತತ್ತರಿಸುತ್ತಿದೆ. ನಾನೇನು ಹೇಳಲಿ? ‘ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸು.’ ಆದರೆ ಈ ಕಾರಣಕ್ಕಾಗಿಯೇ ಈ ಗಳಿಗೆಗೆ ಬಂದಿದ್ದೇನಲ್ಲಾ? 28ತಂದೆಯೇ ನಿನ್ನ ಹೆಸರನ್ನು ಮಹಿಮೆಪಡಿಸಿಕೋ” ಎಂದನು. ಅದಕ್ಕೆ, “ಮಹಿಮೆಪಡಿಸಿದ್ದೇನೆ ತಿರುಗಿ ಮಹಿಮೆಪಡಿಸುವೆನು” ಎಂಬ ಸ್ವರವು ಪರಲೋಕದಿಂದ ಬಂದಿತು. 29ಆಗ ಅಲ್ಲಿ ನಿಂತುಕೊಂಡಿದ್ದ ಜನರು ಅದನ್ನು ಕೇಳಿ, “ಗುಡುಗಿತು” ಎಂದರು. ಇನ್ನು ಕೆಲವರು “ದೇವದೂತನು ಈತನ ಸಂಗಡ ಮಾತನಾಡಿದನು” ಎಂದರು. 30ಯೇಸು ಅವರಿಗೆ, “ಈ ಶಬ್ದವು ನನಗಾಗಿ ಆಗಲಿಲ್ಲ, ನಿಮಗಾಗಿಯೇ ಆಯಿತು. 31ಈಗ ಈ ಲೋಕಕ್ಕೆ ನ್ಯಾಯತೀರ್ಪು ಆಗುತ್ತದೆ. ಈಗ ಇಹಲೋಕಾಧಿಪತಿಯು ಹೊರಗೆ ನೂಕಲ್ಪಡುವನು 32ಆದರೆ ನಾನು ಭೂಮಿಯಿಂದ ಮೇಲಕ್ಕೆ ಎಬ್ಬಿಸಲ್ಪಟ್ಟ ನಂತರ ಎಲ್ಲರನ್ನೂ ನನ್ನ ಬಳಿಗೆ ಸೆಳೆದುಕೊಳ್ಳುವೆನು” ಎಂದು ಹೇಳಿದನು. 33ತಾನು ಎಂಥಾ ಮರಣವನ್ನು ಹೊಂದುತ್ತೇನೆಂದು ಸೂಚಿಸಿ ಇದನ್ನು ಹೇಳಿದನು. 34ಅದಕ್ಕೆ ಆ ಜನರು, “ಕ್ರಿಸ್ತನು ಸದಾಕಾಲ ಇರುತ್ತಾನೆಂದು ಧರ್ಮಶಾಸ್ತ್ರದಲ್ಲಿ ಕೇಳಿದ್ದೇವೆ. ಹಾಗಾದರೆ ಮನುಷ್ಯಕುಮಾರನು ಮೇಲಕ್ಕೆ ಎತ್ತಲ್ಪಡಬೇಕೆಂದು ನೀನು ಹೇಳುವುದು ಹೇಗೆ? ಈ ಮನುಷ್ಯಕುಮಾರನು ಯಾರು?” ಎಂದರು. 35ಆಗ ಯೇಸು ಅವರಿಗೆ, “ಇನ್ನು ಸ್ವಲ್ಪ ಕಾಲವೇ ಬೆಳಕು ನಿಮ್ಮಲ್ಲಿ ಇರುತ್ತದೆ. ಕತ್ತಲೆಯು ನಿಮ್ಮನ್ನು ಮುಸುಕಿಕೊಳ್ಳದಂತೆ ಬೆಳಕು ಇರುವಾಗಲೇ ನಡೆಯಿರಿ. ಕತ್ತಲಿನಲ್ಲಿ ಒಬ್ಬನು ತಾನು ಎಲ್ಲಿಗೆ ಹೋಗುತ್ತಾನೆಂದು ತಿಳಿಯನು. 36ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ. ನಂಬಿದರೆ ನೀವು ಬೆಳಕಿನ ಮಕ್ಕಳಾರಾಗುವಿರಿ” ಎಂದು ಹೇಳಿದನು. ಇದನ್ನು ಯೇಸು ಹೇಳಿದ ಮೇಲೆ ಅವರನ್ನು ಬಿಟ್ಟುಹೋಗಿ ಅಡಗಿಕೊಂಡನು. 37ಯೇಸು ಅನೇಕ ಸೂಚಕಕಾರ್ಯಗಳನ್ನು ಅವರ ಎದುರಿನಲ್ಲಿ ಮಾಡಿದರೂ ಅವರು ಆತನನ್ನು ನಂಬಲಿಲ್ಲ. 38ಇದರಿಂದ, ಪ್ರವಾದಿಯಾದ ಯೆಶಾಯನು ನುಡಿದ ಮಾತು ನೆರವೇರಿತು, ಅದೇನೆಂದರೆ, “ಕರ್ತನೇ, ನಮ್ಮ ಉಪದೇಶವನ್ನು ಯಾರು ನಂಬಿದರು? ಕರ್ತನ ಭುಜ ಬಲವು ಯಾರಿಗೆ ಗೋಚರವಾಯಿತು?” ಎಂಬುದೇ. 39ಅವರು ನಂಬಲಾರದೇ ಹೋದುದ್ದಕ್ಕೆ ಯೆಶಾಯನು ಮತ್ತೊಂದು ಮಾತಿನಲ್ಲಿ ಕಾರಣವನ್ನು ಸೂಚಿಸಿದ್ದಾನೆ, ಅದೇನೆಂದರೆ, 40“ಅವರು ಕಣ್ಣಿನಿಂದ ಕಾಣದೆ, ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಹೇಗೂ ಸ್ವಸ್ಥತೆಯನ್ನು ಹೊಂದದೆ ಇರುವಂತೆ, ಆತನು ಅವರ ಕಣ್ಣುಗಳನ್ನು ಕುರುಡುಮಾಡಿ ಅವರ ಹೃದಯವನ್ನು ಕಠಿಣಮಾಡಿದನು” ಎಂಬುದೇ. 41ಯೆಶಾಯನು ಯೇಸುವಿನ ಮಹಿಮೆಯನ್ನು ನೋಡಿದ್ದರಿಂದ ಆತನ ವಿಷಯವಾಗಿ ಈ ಮಾತನ್ನು ಹೇಳಿದನು. 42ಆದರೂ ಹಿರೀಸಭೆಯವರಲ್ಲಿಯೂ ಸಹ ಅನೇಕರು ಆತನನ್ನು ನಂಬಿದರು, ಆದರೆ ತಮಗೆ ಸಭೆಯಿಂದ ಬಹಿಷ್ಕಾರವಾದೀತೆಂದು, ಫರಿಸಾಯರ ನಿಮಿತ್ತ ಅವರು ಬಹಿರಂಗವಾಗಿ ಅದನ್ನು ಜನರ ಮುಂದೆ ಅರಿಕೆಮಾಡಿಕೊಳ್ಳಲಿಲ್ಲ. 43ಅವರು ದೇವರಿಂದ ಬರುವ ಹೊಗಳಿಕೆಗಿಂತ ಮನುಷ್ಯರಿಂದ ಬರುವ ಹೊಗಳಿಕೆ ಅವರಿಗೆ ಇಷ್ಟವಾಗಿತ್ತು. 44ಯೇಸು ಕೂಗಿ ಹೇಳಿದ ಮಾತೇನಂದರೆ, “ನನ್ನನ್ನು ನಂಬುವವನು ನನ್ನನ್ನೇ ನಂಬುವವನಲ್ಲದೇ ನನ್ನನ್ನು ಕಳುಹಿಸಿಕೊಟ್ಟಾತನನ್ನು ಸಹ ನಂಬುವವನಾಗಿದ್ದಾನೆ. 45ಮತ್ತು ನನ್ನನ್ನು ನೋಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನು ನೋಡುವವನಾಗಿದ್ದಾನೆ. 46ನನ್ನನ್ನು ನಂಬುವ ಒಬ್ಬನಾದರೂ ಕತ್ತಲಲ್ಲಿ ಇರಬಾರದೆಂದು, ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ. 47ಯಾರಾದರೂ ನನ್ನ ಮಾತುಗಳನ್ನು ಕೇಳಿದರೂ ಅದನ್ನು ಕೈಕೊಂಡು ನಡೆಯದೆ ಹೋದರೆ, ನಾನು ಅವನಿಗೆ ತೀರ್ಪುಮಾಡುವುದಿಲ್ಲ. ಲೋಕಕ್ಕೆ ತೀರ್ಪುಮಾಡುವುದಕ್ಕಾಗಿ ನಾನು ಬಂದಿಲ್ಲ, ಆದರೆ ಲೋಕವನ್ನು ರಕ್ಷಿಸುವುದಕ್ಕಾಗಿ ಬಂದಿದ್ದೇನಷ್ಟೇ. 48ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಸ್ವೀಕರಿಸದೆ ಇರುವವನಿಗೆ ತೀರ್ಪುಮಾಡುವಂಥದ್ದು ಒಂದು ಇದೆ. ಅದು ನಾನು ಆಡುವ ಮಾತೇ, ಕಡೆಯ ದಿನದಲ್ಲಿ ಅದೇ ಅವನಿಗೆ ತೀರ್ಪುಮಾಡುವುದು. 49ಏಕೆಂದರೆ ಇದನ್ನು ನನ್ನಷ್ಟಕ್ಕೆ ನಾನೇ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿ ಕೊಟ್ಟ ತಂದೆಯೇ, ನಾನು ಏನು ಹೇಳಬೇಕು ಮತ್ತು ಹೇಗೆ ಮಾತನಾಡಬೇಕು, ಎಂಬುದಾಗಿ ನನಗೆ ಆಜ್ಞಾಪಿಸಿದ್ದಾನೆ. 50ಆತನ ಆಜ್ಞೆಯು ನಿತ್ಯಜೀವವಾಗಿದೆ ಎಂದು ನಾನು ಬಲ್ಲೆನು; ಆದುದರಿಂದ ನಾನು ಮಾತನಾಡುವುದನ್ನೆಲ್ಲಾ ತಂದೆ ನನಗೆ ಹೇಳಿದ ಮೇರೆಗೆ ಮಾತನಾಡುತ್ತಿದ್ದೇನೆ” ಎಂದನು.

ಆರನೆಯ ತಾಸು

ಯೆಹೆ 2:3–3:3

3ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನನ್ನ ವಿರುದ್ಧವಾಗಿ ತಿರುಗಿಬಿದ್ದು ದ್ರೋಹಮಾಡಿದ ಜನಾಂಗದವರಾದ ಇಸ್ರಾಯೇಲರ ಬಳಿಗೆ ನಿನ್ನನ್ನು ಕಳುಹಿಸುತ್ತೇನೆ; ಈ ದಿನದವರೆಗೆ ಅವರೂ, ಅವರ ಪೂರ್ವಿಕರೂ ನನ್ನ ವಿರುದ್ಧವಾಗಿ ಪಾಪಮಾಡುತ್ತಲೇ ಇದ್ದಾರೆ. 4“ನಾನು ಯಾವ ಸಂತಾನದವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಂತಾನದವರು ನಾಚಿಕೆಗೆಟ್ಟವರೂ, ಹಟಗಾರರೂ ಆಗಿರುತ್ತಾರೆ; ನೀನು ಅವರಿಗೆ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿ. 5ಅವರು ಕೇಳಲಿ ಅಥವಾ ಕೇಳದೇ ಇರಲಿ ಏಕೆಂದರೆ ಅವರು ತಿರುಗಿ ಬೀಳುವ ವಂಶದವರು. ಆದರೆ ಒಬ್ಬ ಪ್ರವಾದಿಯು ತಮ್ಮ ಮಧ್ಯದಲ್ಲಿ ಇದ್ದಾನೆಂದು ತಿಳಿದುಕೊಳ್ಳುವರು.” 6“ನರಪುತ್ರನೇ, ನೀನು ಮುಳ್ಳುಪೊದೆಗಳಲ್ಲಿ ಸಿಕ್ಕಿಕೊಂಡು, ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯದಲ್ಲಿದ್ದರೂ ಅವರಿಗೆ ಭಯಪಡಬೇಡ, ಅವರ ಗದರಿಕೆಗೆ ಹೆದರದಿರು; ಅವರು ತಿರುಗಿ ಬೀಳುವ ವಂಶದವರು; ಅವರ ಬಿರುನುಡಿಗೆ ಭಯಪಡಬೇಡ, ಅವರ ಬಿರುನೋಟಕ್ಕೆ ಹೆದರದಿರು. 7ಅವರು ಕೇಳಿದರೂ, ಕೇಳದೆ ಹೋದರೂ ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿ ದ್ರೋಹಿಗಳೇ.” 8ಇದಲ್ಲದೆ ಆತನು, “ನರಪುತ್ರನೇ, ನಾನು ನಿನಗೆ ಹೇಳುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿದೆರೆದು ತಿಂದುಬಿಡು” ಅಂದನು. 9ಇಗೋ, ನಾನು ನೋಡುತ್ತಿರಲಾಗಿ ಒಂದು ಕೈ ನನ್ನ ಕಡೆಗೆ ಚಾಚಿತ್ತು, ಇಗೋ ಅದರಲ್ಲಿ ಗ್ರಂಥದ ಸುರುಳಿಯು ಕಾಣಿಸಿತು. 10ಆತನು ಆ ಸುರುಳಿಯನ್ನು ನನ್ನೆದುರಿನಲ್ಲಿ ಬಿಚ್ಚಿದನು; ಅದರ ಎರಡು ಪಕ್ಕಗಳಲ್ಲಿಯೂ ಬರೆದಿತ್ತು; ಅದರಲ್ಲಿ ಬರೆದದ್ದು ಪ್ರಲಾಪ, ಗೋಳಾಟ, ಶೋಕ ಇವುಗಳೇ. 3:1ಆತನು ನನಗೆ, “ನರಪುತ್ರನೇ, ನಿನಗೆ ಸಿಕ್ಕಿದ ಈ ಸುರುಳಿಯನ್ನು ತಿನ್ನು; ಅನಂತರ ನೀನು ಹೋಗಿ (ಇದರಲ್ಲಿನ ಸಂಗತಿಗಳನ್ನು) ಇಸ್ರಾಯೇಲ್ ವಂಶದವರಿಗೆ ಸಾರು” ಎಂದು ಅಪ್ಪಣೆಕೊಟ್ಟನು. 2ನಾನು ಬಾಯಿ ತೆರೆದೆ, ಆತನು ಆ ಸುರುಳಿಯನ್ನು ನನಗೆ ತಿನ್ನಿಸಿದನು. 3ಆಗ ಆತನು ನನಗೆ, “ನರಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ” ಎಂದು ಹೇಳಲು ಅದನ್ನು ತಿಂದುಬಿಟ್ಟೆನು; ಅದು ನನ್ನ ಬಾಯಿಯಲ್ಲಿ ಜೇನಿನಂತೆ ಸಿಹಿಯಾಗಿತ್ತು.

ಸಂಧ್ಯಾ ಪ್ರಾರ್ಥನೆ: ವಾಚನ

ವಿಮೋ 2:11–22

11ಮೋಶೆಯು ದೊಡ್ಡವನಾದ ಮೇಲೆ, ಸ್ವಜನರ ಬಳಿಗೆ ಹೋಗಿ ಅವರ ಬಿಟ್ಟೀಕೆಲಸಗಳನ್ನು ನೋಡುತ್ತಿದ್ದನು. ಆಗ ಒಬ್ಬ ಐಗುಪ್ತ್ಯದವನು ತನ್ನ ಸ್ವಂತ ಜನರಾದ ಸಹೋದರರಲ್ಲಿ ಒಬ್ಬನಾದ ಇಬ್ರಿಯನನ್ನು ಹೊಡೆಯುವುದನ್ನು ಕಂಡನು. 12ಮೋಶೆ ಅತ್ತಿತ್ತ ನೋಡಿ, ಯಾರೂ ಇಲ್ಲವೆಂದು ತಿಳಿದು, ಆ ಐಗುಪ್ತ್ಯದವನನ್ನು ಹೊಡೆದು ಕೊಂದುಹಾಕಿ ಅವನ ಶವವನ್ನು ಮರಳಿನಲ್ಲಿ ಮುಚ್ಚಿಹಾಕಿದನು. 13ಮರುದಿನ ಅವನು ಮತ್ತೆ ಹೊರಗೆ ಹೋದಾಗ, ಇಬ್ರಿಯರಾದ ಇಬ್ಬರು ಜಗಳವಾಡುತ್ತಿದ್ದರು. ಅನ್ಯಾಯಮಾಡುತ್ತಿದ್ದವನಿಗೆ ಅವನು, “ಏನಯ್ಯಾ, ನೀನು ಯಾಕೆ ಸ್ವಕುಲದವರನ್ನು ಹೊಡೆಯುತ್ತೀ?” ಎಂದು ಕೇಳಿದನು. 14ಆ ಮನುಷ್ಯನು ಅವನಿಗೆ, “ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ, ನ್ಯಾಯಾಧಿಪತಿಯನ್ನಾಗಿಯೂ, ಇಟ್ಟವರು ಯಾರು? ಆ ಐಗುಪ್ತ್ಯನನ್ನು ಕೊಂದು ಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದಿಯೋ?” ಅಂದನು. ಈ ಮಾತನ್ನು ಕೇಳಿ ಮೋಶೆಯು ಭಯಪಟ್ಟು, “ನಿಶ್ಚಯವಾಗಿ ನಾನು ಮಾಡಿದ ಕಾರ್ಯವು ಬಯಲಿಗೆ ಬಂತಲ್ಲಾ” ಅಂದುಕೊಂಡನು. 15ನಡೆದ ಸಂಗತಿಯು ಫರೋಹನಿಗೆ ತಿಳಿದುಬಂದಾಗ, ಅವನು ಮೋಶೆಯನ್ನು ಕೊಲ್ಲಬೇಕೆಂದು ಆಲೋಚಿಸುತ್ತಿದ್ದನು. ಆದುದರಿಂದ ಮೋಶೆಯು ಫರೋಹನ ಬಳಿಯಿಂದ ಓಡಿಹೋಗಿ ಮಿದ್ಯಾನ್ ದೇಶದಲ್ಲಿದ್ದ ಒಂದು ಬಾವಿಯ ಬಳಿಯಲ್ಲಿ ಕುಳಿತುಕೊಂಡನು. 16ಮಿದ್ಯಾನರ ಯಾಜಕನಿಗೆ ಏಳು ಮಂದಿ ಹೆಣ್ಣು ಮಕ್ಕಳಿದ್ದರು. ಅವರು ಬಂದು ತಮ್ಮ ತಂದೆಯ ಕುರಿ ಮಂದೆಗಳಿಗೆ ನೀರು ಕುಡಿಸುವುದಕ್ಕಾಗಿ, ನೀರನ್ನು ಸೇದಿ ತೊಟ್ಟಿಗಳಲ್ಲಿ ತುಂಬಿಸುತ್ತಿದ್ದರು. 17ಕುರುಬರು ಬಂದು ಅವರನ್ನು ಬಾವಿಯ ಬಳಿಯಿಂದ ಓಡಿಸಲು, ಮೋಶೆಯು ಅವರಿಗೆ ಸಹಾಯಕನಾಗಿ ಬಂದು ಅವರ ಕುರಿಗಳಿಗೆ ನೀರನ್ನು ಕುಡಿಸಿದನು. 18ಆ ನಂತರ ಆ ಹೆಣ್ಣುಮಕ್ಕಳು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಬಂದಾಗ ಅವನು ಅವರಿಗೆ, “ಏಕೆ ಈ ಹೊತ್ತು ಬೇಗ ಬಂದಿದ್ದಿರಲ್ಲ?” ಎಂದು ಕೇಳಿದನು. 19ಅದಕ್ಕೆ ಅವರು, “ಐಗುಪ್ತದವನಾದ ಒಬ್ಬ ಮನುಷ್ಯನು ನಮ್ಮನ್ನು ಕುರುಬರ ಕೈಯಿಂದ ತಪ್ಪಿಸಿದಲ್ಲದೆ, ಅವನು ನಮಗೋಸ್ಕರ ನೀರು ಸೇದಿ ಕುರಿಗಳಿಗೆ ಕುಡಿಸಿದನು” ಅಂದರು. 20ಆಗ ಅವನು ತನ್ನ ಮಕ್ಕಳಿಗೆ, “ಅವನು ಎಲ್ಲಿದ್ದಾನೆ? ಏಕೆ ಆ ಮನುಷ್ಯನನ್ನು ಬಿಟ್ಟು ಬಂದಿರಿ? ಅವನನ್ನು ಕರೆಯಿರಿ, ಅವನು ನಮ್ಮೊಂದಿಗೆ ಊಟಮಾಡಲಿ” ಎಂದು ಹೇಳಿದನು. 21ಮೋಶೆಯು ಆ ಮನುಷ್ಯನೊಂದಿಗೆ ವಾಸಮಾಡಲು ಬಯಸಿದನು. ಅವನು ತನ್ನ ಮಗಳಾದ ಚಿಪ್ಪೋರಳನ್ನು ಮೋಶೆಗೆ ಮದುವೆಮಾಡಿ ಕೊಟ್ಟನು. 22ಆಕೆ ಗಂಡು ಮಗುವನ್ನು ಹೆರಲು ಮೋಶೆ ನಾನು ಅನ್ಯದೇಶದಲ್ಲಿ ಪ್ರವಾಸಿಯಾಗಿದ್ದೇನೆಂದು ಹೇಳಿ ಅದಕ್ಕೆ ಗೇರ್ಷೋಮ್ ಎಂದು ಹೆಸರಿಟ್ಟನು.

ಸಂಧ್ಯಾ ಪ್ರಾರ್ಥನೆ: ವಾಚನ

ಯೋಬ 2:1–10

1ದೇವದೂತರು ಇನ್ನೊಂದು ದಿನ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದಾಗ, ಸೈತಾನನೂ ಅವರ ಸಂಗಡ ಬಂದು ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಂಡನು. 2ಯೆಹೋವನು, “ಎಲ್ಲಿಂದ ಬಂದೆ?” ಎಂದು ಸೈತಾನನನ್ನು ಕೇಳಲು ಸೈತಾನನು ಯೆಹೋವನಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು” ಎಂದನು. 3ಆಗ ಯೆಹೋವನು ಸೈತಾನನಿಗೆ, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನನ್ನು ಕಾರಣವಿಲ್ಲದೆ ನಾಶಮಾಡುವುದಕ್ಕೆ ನೀನು ನನ್ನನ್ನು ಪ್ರೇರೇಪಿಸಿದರೂ ಅವನು ತನ್ನ ಯಥಾರ್ಥತ್ವವನ್ನು ಬಿಡದೆ ಇದ್ದಾನೆ” ಎಂದನು. 4ಯೆಹೋವನ ಆ ಮಾತಿಗೆ ಸೈತಾನನು, “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು. 5ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ. ಆಗ ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸದೆ ಬಿಡುವುದಿಲ್ಲ” ಎಂದನು. 6ಯೆಹೋವನು ಸೈತಾನನಿಗೆ, “ನೋಡು, ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸಿದ್ದೇನೆ. ಅವನ ಪ್ರಾಣವನ್ನು ಉಳಿಸಬೇಕು” ಎಂದು ಅಪ್ಪಣೆ ಕೊಟ್ಟನು. 7ಆಗ ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟು ಯೋಬನ ಅಂಗಾಲು ಮೊದಲುಗೊಂಡು ನಡುನೆತ್ತಿಯವರೆಗೂ ಕೆಟ್ಟ ಹುಣ್ಣುಗಳನ್ನು ಹುಟ್ಟಿಸಿ ಅವನನ್ನು ಬಾಧಿಸಿದನು. 8ಯೋಬನು ಒಂದು ಬೋಕಿಯನ್ನು ತೆಗೆದುಕೊಂಡು ತನ್ನ ಮೈಯನ್ನು ಕೆರೆದುಕೊಳ್ಳುತ್ತಾ ಬೂದಿಯಲ್ಲಿ ಕುಳಿತುಕೊಂಡಿದ್ದನು. 9ಹೀಗಿರುವಲ್ಲಿ ಅವನ ಹೆಂಡತಿ ಅವನಿಗೆ, “ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ಇದೆಲ್ಲವನ್ನು ಕೊಟ್ಟ ದೇವರನ್ನು ದೂಷಿಸಿ ಸಾಯಿ” ಎಂದು ಹೇಳಿದಳು. 10ಆಗ ಯೋಬನು ಆಕೆಗೆ, “ಮೂರ್ಖಳು ಮಾತನಾಡಿದಂತೆ ನೀನು ಮಾತನಾಡುತ್ತಿ. ದೇವರ ಹಸ್ತದಿಂದ ನಾವು ಒಳ್ಳೆಯದನ್ನು ಹೊಂದುವಾಗ ಕೆಟ್ಟದ್ದನ್ನು ಹೊಂದಬಾರದೋ?” ಎಂದು ಹೇಳಿದನು. ಈ ಸಂದರ್ಭದಲ್ಲಿಯೂ ಪಾಪದ ಮಾತು ಅವನ ತುಟಿಗಳಿಂದ ಹೊರಡಲಿಲ್ಲ.

ಸುವಾರ್ತೆ (ಪೂರ್ವಪವಿತ್ರೀಕೃತ ಕಾಣಿಕೆಗಳ ಆರಾಧನೆ)

ಮತ್ತಾ 26:6–16

6ಯೇಸು ಬೇಥಾನ್ಯದಲ್ಲಿ ಸೀಮೋನನೆಂಬ ಕುಷ್ಠರೋಗಿಯ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಒಬ್ಬ ಸ್ತ್ರೀಯು 7ಬಹು ಬೆಲೆಯುಳ್ಳ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಆತನ ಬಳಿಗೆ ಬಂದು ಆ ತೈಲವನ್ನು ಆತನ ತಲೆಯ ಮೇಲೆ ಸುರಿದಳು. 8ಶಿಷ್ಯರು ಇದನ್ನು ಕಂಡು ಕೋಪಗೊಂಡು, “ಹೀಗೆ ವ್ಯರ್ಥವಾಗಿ ಖರ್ಚುಮಾಡುವುದೇಕೆ? 9ಈ ತೈಲವನ್ನು ಬಹಳ ಹಣಕ್ಕೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ” ಅಂದರು. 10ಯೇಸು ಅದನ್ನು ತಿಳಿದು ಅವರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತಿದ್ದೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. 11ಬಡವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರಲ್ಲಾ, ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. 12ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಸುರಿದದ್ದು ನನ್ನ ಉತ್ತರಕ್ರಿಯೆಗಾಗಿಯೇ. 13ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವುದೋ ಅಲ್ಲೆಲ್ಲಾ ಈ ಸ್ತ್ರೀ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ” ಹೇಳುವರು. 14ಆ ಮೇಲೆ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನೆಂಬುವವನು ಮುಖ್ಯಯಾಜಕರ ಬಳಿಗೆ ಹೋಗಿ, 15“ನಾನು ಆತನನ್ನು ಹಿಡಿಯಲು ನಿಮಗೆ ಸಹಾಯಮಾಡಿದರೆ ನನಗೆ ಏನು ಕೊಡುತ್ತೀರಿ?” ಅಂದನು. ಅವರು ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ತೂಗಿ ಕೊಟ್ಟರು. 16ಅಂದಿನಿಂದ ಅವನು ಆತನನ್ನು ಹಿಡಿದುಕೊಡುವುದಕ್ಕಾಗಿ ಸಂದರ್ಭ ಹುಡುಕುತ್ತಿದ್ದನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 15 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 28 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು