ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 29 ಏಪ್ರಿಲ್
ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 16 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 29 ಏಪ್ರಿಲ್ 2027
ಗುರುವಾರ · ಪವಿತ್ರ ವಾರ
ಹಬ್ಬಗಳು ಮತ್ತು ಸಂತರು
ಮಹಾ ಪವಿತ್ರ ಗುರುವಾರ
ಮಹಾ ಉಪವಾಸ ಕಾಲ
ಉಪವಾಸ: ಎಣ್ಣೆಯೊಂದಿಗೆ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸುವಾರ್ತೆ (ಮದಲಿಂಗನ ಉದಯಕಾಲದ ಪ್ರಾರ್ಥನೆ)
1ಪಸ್ಕವೆಂದು ಕರೆಯಲ್ಪಡುವ ಹುಳಿಯಿಲ್ಲದ ರೊಟ್ಟಿಯ ಹಬ್ಬವು ಹತ್ತಿರವಾದಾಗ, 2ಮುಖ್ಯಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಕೊಲ್ಲಬೇಕೆಂದಿದ್ದರು. ಆದರೆ ಜನರಿಗೆ ಹೆದರಿ ತಕ್ಕ ಮಾರ್ಗವನ್ನು ಹುಡುಕುತ್ತಿದ್ದರು. 3ಆಗ ಸೈತಾನನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತನೆಂಬ ಯೂದನಲ್ಲಿ ಪ್ರವೇಶಿಸಲು, 4ಅವನು ಮುಖ್ಯಯಾಜಕರ ಬಳಿಗೂ ಕಾವಲಿನ ದಳವಾಯಿಗಳ ಬಳಿಗೂ ಹೋಗಿ ತಾನು ಯೇಸುವನ್ನು ಹಿಡಿದುಕೊಡುವ ಉಪಾಯವನ್ನು ಕುರಿತು ಅವರ ಸಂಗಡ ಮಾತನಾಡಿದನು. 5ಅವರು ಸಂತೋಷಪಟ್ಟು ನಿನಗೆ ಹಣ ಕೊಡುತ್ತೇವೆಂದು ಒಪ್ಪಂದ ಮಾಡಲು, 6ಅವನು ಒಪ್ಪಿಕೊಂಡು, ಜನಸಮೂಹವಿಲ್ಲದಿರುವಾಗ ಆತನನ್ನು ಅವರಿಗೆ ಹಿಡಿದುಕೊಡುವುದಕ್ಕೆ ಅನುಕೂಲವಾದ ಸಂದರ್ಭವನ್ನು ನೋಡುತ್ತಿದ್ದನು. 7ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯತಕ್ಕ ದಿನ ಬಂದಾಗ, 8ಯೇಸು ಪೇತ್ರನಿಗೂ ಯೋಹಾನನಿಗೂ, “ನೀವು ಹೋಗಿ ನಾವು ಪಸ್ಕದ ಊಟಮಾಡುವಂತೆ ಸಿದ್ಧಮಾಡಿರಿ” ಎಂದು ಹೇಳಿ ಅವರನ್ನು ಕಳುಹಿಸಿದನು. 9ಅವರು, “ನಾವು ಎಲ್ಲಿ ಸಿದ್ಧಮಾಡಬೇಕನ್ನುತ್ತೀ?” ಎಂದು ಆತನನ್ನು ಕೇಳಲು, 10ಆತನು ಅವರಿಗೆ, “ನೋಡಿರಿ, ನೀವು ಪಟ್ಟಣದೊಳಕ್ಕೆ ಹೋದ ಮೇಲೆ ಒಬ್ಬ ಮನುಷ್ಯನು ತುಂಬಿದ ಕೊಡವನ್ನು ಹೊತ್ತುಕೊಂಡು ನಿಮ್ಮೆದುರಿಗೆ ಬರುವನು. ಅವನು ಹೋಗುವ ಮನೆಗೆ ನೀವು ಅವನ ಹಿಂದೆ ಹೋಗಿ, 11ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರ ಸಂಗಡ ಪಸ್ಕದ ಊಟವನ್ನು ಮಾಡುವುದಕ್ಕಾಗಿ ವಿಶೇಷವಾದ ಕೊಠಡಿ ಎಲ್ಲಿ?’ ಎಂದು ನಿನ್ನನ್ನು ವಿಚಾರಿಸಲು ನಮ್ಮ ಗುರು ಹೇಳಿದ್ದಾನೆ, ಎಂದು ಹೇಳಿರಿ. 12ಅವನು ತಕ್ಕ ಪೀಠೋಪಕರಣಗಳಿಂದ ಅಲಂಕೃತವಾದ ಮೇಲ್ಮಾಳಿಗೆಯಲ್ಲಿ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ನೀವು ಭೋಜನಕ್ಕೆ ಸಿದ್ಧ ಮಾಡಿರಿ” ಎಂದು ಹೇಳಿ ಕಳುಹಿಸಿದನು. 13ಅವರು ಹೊರಟು ಆತನು ತಮಗೆ ಹೇಳಿದಂತೆ ಕಂಡು ಪಸ್ಕ ಹಬ್ಬಕ್ಕೆ ಸಿದ್ಧಮಾಡಿದರು. 14ಆ ಸಮಯ ಬಂದಾಗ ಆತನು ತನ್ನ ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಊಟಕ್ಕೆ ಕುಳಿತುಕೊಂಡನು. 15ಆಗ ಆತನು ಅವರಿಗೆ, “ನಾನು ಯಾತನೆಯನ್ನು ಅನುಭವಿಸುವುದಕ್ಕಿಂತ ಮೊದಲೇ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವುದಕ್ಕೆ ಮನಃಪೂರ್ವಕವಾಗಿ ಬಯಸಿದ್ದೇನೆ. 16ಇನ್ನು ದೇವರ ರಾಜ್ಯದಲ್ಲಿ ಇದು ನೆರವೇರುವ ತನಕ ನಾನು ಇನ್ನು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಎಂದು ಹೇಳಿದನು. 17ಆ ಮೇಲೆ ಆತನು (ದ್ರಾಕ್ಷಾರಸದ) ಪಾತ್ರೆಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ, “ಇದನ್ನು ತೆಗೆದುಕೊಂಡು ಹಂಚಿಕೊಂಡು ಕುಡಿಯಿರಿ. 18ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ” ಅಂದನು. 19ಬಳಿಕ ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ” ಅಂದನು. 20ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ, ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. 21“ಆದರೂ ನೋಡಿರಿ, ನನ್ನನ್ನು ಹಿಡಿದುಕೊಡುವವನು ನನ್ನೊಡನೆ ಮೇಜಿನ ಮೇಲೆ ಕೈಯಿಟ್ಟು ಊಟಮಾಡುತ್ತಿದ್ದಾನೆ. 22ನಿರ್ಣಯವಾಗಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ, ಆದರೆ ಆತನನ್ನು ಹಿಡಿದುಕೊಡುವ ಮನುಷ್ಯನ ಗತಿಯನ್ನು ಏನು ಹೇಳಲಿ” ಅಂದನು. 23ಇದನ್ನು ಕೇಳಿ ಅವರು, ಇಂಥ ಕೆಲಸವನ್ನು ಮಾಡಬೇಕೆಂದಿರುವವನು ನಮ್ಮಲ್ಲಿ ಯಾವನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು. 24ಇದಲ್ಲದೆ ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು. 25ಆಗ ಆತನು ಅವರಿಗೆ, “ಅನ್ಯಜನಾಂಗದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮೇಲೆ ಅಧಿಕಾರದಿಂದ ಆಡಳಿತ ನಡಿಸುವವರು ಉಪಕಾರಿಗಳೆಂದು ಕರೆಸಿಕೊಳ್ಳುತ್ತಾರೆ. 26ನೀವು ಹಾಗಿರಬಾರದು, ನಿಮ್ಮಲ್ಲಿ ದೊಡ್ಡವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು. 27ಯಾರು ದೊಡ್ಡವನು? ಊಟಕ್ಕೆ ಕುಳಿತವನೋ ಸೇವೆಮಾಡುವವನೋ? ಊಟಕ್ಕೆ ಕುಳಿತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ. 28ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. 29ಆದುದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿರುವ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ; 30ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರ್ಪುಮಾಡುವಿರಿ. 31“ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿನ್ನನ್ನು ಗೋದಿಯಂತೆ ಕೇರಬೇಕೆಂದು ಅಪ್ಪಣೆ ಕೇಳಿಕೊಂಡನು. 32ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು” ಎಂದು ಹೇಳಿದನು. 33ಆದರೆ ಅವನು, “ಕರ್ತನೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಅನ್ನಲು, 34ಆತನು, “ಪೇತ್ರನೇ, ನನ್ನ ವಿಷಯದಲ್ಲಿ ಇವನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವ ತನಕ ಈಹೊತ್ತು ಕೋಳಿ ಕೂಗುವುದಿಲ್ಲವೆಂದು ನಿನಗೆ ಹೇಳುತ್ತೇನೆ” ಅಂದನು. 35ಮತ್ತು ಆತನು, “ನಿಮ್ಮನ್ನು ನಾನು ಹಣ, ಕೈಚೀಲ ಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ?” ಎಂದು ಕೇಳಲು ಅವರು ಏನೂ ಇಲ್ಲವೆಂದು ಉತ್ತರಕೊಟ್ಟರು. 36ಅದಕ್ಕೆ ಆತನು, “ಈಗಲಾದರೋ ಹಣವಿದ್ದವನು ಅದನ್ನು ತೆಗೆದುಕೊಳ್ಳಲಿ, ಕೈಚೀಲವಿರುವವನು ಅದನ್ನು ತೆಗೆದುಕೊಳ್ಳಲಿ, ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ. 37ಏಕೆಂದರೆ, ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ. ನನ್ನ ವಿಷಯದಲ್ಲಿ ಬರೆಯಲ್ಪಟ್ಟಿರುವ ಎಲ್ಲವು ನೆರವೇರಬೇಕು” ಎಂದು ಹೇಳಿದನು. 38ಅವರು, “ಕರ್ತನೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ” ಅನ್ನಲು, ಆತನು ಅವರಿಗೆ, “ಅಷ್ಟು ಸಾಕು” ಅಂದನು. 39ತರುವಾಯ ಆತನು ಪ್ರತಿದಿನದಂತೆ ಹೊರಟು ಎಣ್ಣೆಮರಗಳ ಗುಡ್ಡಕ್ಕೆ ಹೋದನು. ಶಿಷ್ಯರೂ ಆತನ ಹಿಂದೆ ಹೋದರು.
ಮೊದಲನೆಯ ತಾಸು
18ಯೆಹೋವನು ತಿಳಿಸಿದ್ದರಿಂದ ಅವರ ಕುತಂತ್ರವು ನನಗೆ ಗೊತ್ತಾಯಿತು; ಆಗಲೇ ಅವರ ಕೃತ್ಯಗಳನ್ನು ನನಗೆ ತೋರಿಸಿದಿ. 19ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಗೆ ಸಮಾನನಾಗಿದ್ದೆನು. “ಮರವನ್ನು ಫಲಸಹಿತವಾಗಿ ನಾಶಪಡಿಸೋಣ, ಇವನು ನಿರ್ನಾಮವಾಗುವಂತೆ ಜೀವಲೋಕದಿಂದ ಇವನನ್ನು ನಿರ್ಮೂಲಮಾಡೋಣ” ಎಂದು ಅವರು ನನಗೆ ವಿರುದ್ಧವಾಗಿ ಕುಯುಕ್ತಿಗಳನ್ನು ಕಲ್ಪಿಸಿದ್ದು ನನಗೆ ತಿಳಿದಿರಲಿಲ್ಲ. 20ಹೃದಯವನ್ನೂ, ಅಂತರಿಂದ್ರಿಯವನ್ನೂ ಪರೀಕ್ಷಿಸಿ, ನ್ಯಾಯವಾಗಿ ತೀರ್ಪುಮಾಡುವ ಸೇನಾಧೀಶ್ವರನಾದ ಯೆಹೋವನೇ, ನೀನು ಅವರಿಗೆ ಕೊಡುವ ಪ್ರತಿಫಲವನ್ನು ನಾನು ಕಾಣುವೆನು; ನನ್ನ ವ್ಯಾಜ್ಯವನ್ನು ನಿನಗೇ ಅರಿಕೆಮಾಡಿದ್ದೇನಷ್ಟೆ ಎಂದು ಹೇಳಿದೆನು. 21ಹೀಗಿರಲು ಸೇನಾಧೀಶ್ವರನಾದ ಯೆಹೋವನು ನನಗೆ, “ನಮ್ಮ ಕೈಯಿಂದ ನೀನು ಸಾಯಬಾರದೆಂದರೆ ಯೆಹೋವನ ಹೆಸರೆತ್ತಿ ಪ್ರವಾದಿಸಬೇಡ ಎಂದು ನಿನ್ನ ಪ್ರಾಣಕ್ಕೆ ಹೊಂಚುಹಾಕುತ್ತಿರುವ ಅನಾತೋತಿನವರ ವಿಷಯದಲ್ಲಿ ನನ್ನ ತೀರ್ಮಾನವು ಇದೇ. 22ಇಗೋ, ಅವರನ್ನು ದಂಡಿಸುವೆನು, ಯೌವನಸ್ಥರು ಖಡ್ಗದಿಂದ ನಾಶವಾಗುವರು. ಅವರ ಗಂಡು ಮತ್ತು ಹೆಣ್ಣುಮಕ್ಕಳು ಕ್ಷಾಮದಿಂದ ಸಾಯುವರು. 23ದಂಡನೆಯ ವರ್ಷದಲ್ಲಿ ಅನಾತೋತಿನವರಿಗೆ ಕೇಡನ್ನು ಬರಮಾಡುವೆನು, ಅವರಲ್ಲಿ ಯಾರೂ ಉಳಿಯರು” ಎಂದು ಹೇಳಿದ್ದಾನೆ. 12:1ಯೆಹೋವನೇ, ನೀನು ಧರ್ಮಸ್ವರೂಪನಾಗಿರುವುದರಿಂದ ನಾನು ನಿನ್ನೊಡನೆ ವ್ಯಾಜ್ಯವಾಡಲಾರೆನು. ಆದರೂ ನಿನ್ನ ಸಂಗಡ ನ್ಯಾಯವನ್ನು ಚರ್ಚಿಸುವೆನು. ದುಷ್ಟರ ನಡತೆ ಏಕೆ ಸಫಲವಾಗುತ್ತದೆ? 2ದ್ರೋಹಿಗಳೆಲ್ಲರೂ ನೆಮ್ಮದಿಯಾಗಿರುವುದೇಕೆ? ನೀನು ಅವರನ್ನು ನೆಟ್ಟಿದ್ದಿ, ಅವರು ಬೇರೂರಿ ಬೆಳೆದು ಹಣ್ಣು ಬಿಟ್ಟಿದ್ದಾರೆ. ನೀನು ಅವರ ಬಾಯಿಗೆ ಸಮೀಪ, ಅಂತರಿಂದ್ರಿಯಕ್ಕೆ ದೂರ. 3ಯೆಹೋವನೇ, ನೀನು ನನ್ನನ್ನು ತಿಳಿದಿದ್ದಿ, ನನ್ನನ್ನು ನೋಡುತ್ತಾ ನಿನ್ನೊಂದಿಗೆ ಅನ್ಯೋನ್ಯವಾಗಿರುವ ನನ್ನ ಹೃದಯವನ್ನು ಪರೀಕ್ಷಿಸುತ್ತಿ. ಅವರನ್ನು ಕುರಿಗಳನ್ನೋ ಎಂಬಂತೆ ಕೊಲೆಗೆ ಎಳೆದು ವಧೆಯ ದಿನಕ್ಕೆ ಗೊತ್ತುಮಾಡು. 4ಇನ್ನೆಷ್ಟರವರೆಗೆ ಎಲ್ಲಾ ಸೀಮೆಯ ಹುಲ್ಲುಸೊಪ್ಪು ಒಣಗಿ ದೇಶವು ದುಃಖಿಸುತ್ತಿರುವುದು? ಅಲ್ಲಿನ ನಿವಾಸಿಗಳು ದುಷ್ಟರಾಗಿರುವುದರಿಂದ ಮೃಗ ಹಾಗು ಪಕ್ಷಿಗಳು ಬಡಿದುಕೊಂಡು ಹೋಗಿವೆ. “ಆಹಾ, ಅವನು ನಮ್ಮ ಅಂತ್ಯಗತಿಯನ್ನು ನೋಡುವುದೇ ಇಲ್ಲ” ಎಂದು ಹೇಳಿದ್ದಾರಷ್ಟೆ. 5ಇಂತೆನ್ನುವ ಯೆಹೋವನು ನನಗೆ, “ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿದ್ದರೆ ಕುದುರೆಗಳೊಂದಿಗೆ ಓಡಿ ಹೇಗೆ ಮುಂದಾಗುವಿ? ಅಪಾಯವಿಲ್ಲದ ದೇಶದಲ್ಲಿ ನೀನು ನಿರ್ಭಯವಾಗಿದ್ದರೂ ಯೊರ್ದನಿನ ದಟ್ಟಡವಿಯಲ್ಲಿ ಏನು ಮಾಡುವಿ? 9ನನ್ನ ಸ್ವಾಸ್ತ್ಯವಾದ ಜನವು ನನ್ನ ದೃಷ್ಟಿಗೆ ಬೇಟೆಯ ಹಕ್ಕಿಯಂತಿದೆ, ಹದ್ದುಗಳು ಅದರ ಸುತ್ತಲೂ ವಿರುದ್ಧವಾಗಿ ಕುಳಿತಿವೆಯೋ? ಹೋಗಿರಿ, ಅದನ್ನು ತಿಂದುಬಿಡುವುದಕ್ಕೆ ಎಲ್ಲಾ ಕಾಡುಮೃಗಗಳನ್ನು ಕರೆತನ್ನಿರಿ. 10ಬಹು ಮಂದಿ ಮಂದೆಗಾರರು ನನ್ನ ದ್ರಾಕ್ಷಿತೋಟವನ್ನು ಕೆಡಿಸಿದ್ದಾರೆ; ನನ್ನ ಸ್ವತ್ತನ್ನು ತುಳಿದು ನನಗೆ ಇಷ್ಟವಾದ ಆ ಸೊತ್ತನ್ನು ಹಾಳು ಕಾಡನ್ನಾಗಿ ಮಾಡಿದ್ದಾರೆ. 11ಹೌದು, ಹಾಳುಮಾಡಿದ್ದಾರೆ, ಅದು ಹಾಳಾಗಿ ನನಗೆ ಗೋಳಿಡುತ್ತದೆ; ಯಾರೂ ಗಮನಿಸದೆ ಇರುವುದರಿಂದ ದೇಶವೆಲ್ಲಾ ಹಾಳುಬಿದ್ದಿದೆ. 14ಯೆಹೋವನು ತನ್ನ ಜನರಾದ ಇಸ್ರಾಯೇಲರಿಗೆ ದಯಪಾಲಿಸಿದ ಸ್ವತ್ತಿಗೆ ಕೈಹಾಕುವ ತನ್ನ ಕೆಟ್ಟ ನೆರೆಯವರ ವಿಷಯದಲ್ಲಿ, “ಆಹಾ, ಅವರನ್ನು ಅವರವರ ಸೀಮೆಗಳೊಳಗಿಂದ ಕಿತ್ತುಹಾಕಿ, ಅವರ ಮಧ್ಯದಲ್ಲಿನ ಯೆಹೂದ ವಂಶವನ್ನೂ ಕಿತ್ತುಹಾಕುವೆನು. 15ನೋಡಿರಿ, ನಾನು ಅವರನ್ನು ಕಿತ್ತುಹಾಕಿದ ಮೇಲೆ ತಿರುಗಿ ಅವರ ಮೇಲೆ ಕನಿಕರಪಟ್ಟು ಪ್ರತಿಯೊಬ್ಬನನ್ನೂ ಅವನವನ ಸ್ವತ್ತಿಗೂ, ಅವನವನ ದೇಶಕ್ಕೂ ಪುನಃ ಬರಮಾಡುವೆನು.
ಸಂಧ್ಯಾ ಪ್ರಾರ್ಥನೆ: ವಾಚನ
10ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು ಜನರ ಬಳಿಗೆ ಹೋಗಿ, ಈ ದಿನ ಮತ್ತು ನಾಳೆ ಅವರನ್ನು ಶುದ್ಧಗೊಳಿಸು. ನನ್ನ ಬರುವಿಕೆಗಾಗಿ ಅವರನ್ನು ಸಿದ್ಧಗೊಳಿಸು. ಅವರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು, 11ಮೂರನೆಯ ದಿನದಲ್ಲಿ ಅವರು ಸಿದ್ಧರಾಗಿರಬೇಕು. ಮೂರನೆಯ ದಿನದಲ್ಲಿ ಯೆಹೋವನು ಸಮಸ್ತ ಜನರಿಗೂ ಪ್ರತ್ಯಕ್ಷನಾಗಿ ಸೀನಾಯಿ ಬೆಟ್ಟದ ಮೇಲೆ ಇಳಿದು ಬರುವನು. 12ಜನರು ಹತ್ತಿರ ಬಾರದಂತೆ ನೀನು ಬೆಟ್ಟದ ಸುತ್ತಲೂ ಗಡಿಯನ್ನು ಮಾಡಿಸಿ ಜನರಿಗೆ, ‘ಎಚ್ಚರಿಕೆಯಾಗಿರಿ, ನೀವು ಈ ಬೆಟ್ಟವನ್ನು ಏರದಂತೆಯೂ ಅದರ ಗಡಿಯನ್ನು ಮುಟ್ಟದಂತೆಯೂ ಜಾಗ್ರತೆಯಿಂದಿರಬೇಕು. ಬೆಟ್ಟವನ್ನು ಮುಟ್ಟಿದವರೆಲ್ಲಾ ಖಂಡಿತವಾಗಿ ಸತ್ತುಹೋಗುವರು.’ 13ಅಂಥವನನ್ನು ಯಾರೂ ಮುಟ್ಟಬಾರದು. ಕಲ್ಲೆಸೆದು ಅಥವಾ ಬಾಣವನ್ನು ಎಸೆದು ಖಂಡಿತವಾಗಿ ಅವನನ್ನು ಕೊಲ್ಲಬೇಕು. ಮನುಷ್ಯನಾಗಲಿ, ಪಶುಗಳಾಗಲಿ ಬೆಟ್ಟವನ್ನು ಮುಟ್ಟಿದರೆ ಸಾಯಲೇಬೇಕು. ಕೊಂಬಿನ ಧ್ವನಿ ದೀರ್ಘವಾಗಿ ಕೇಳಿಸಿದಾಗ ಅವರು ಬೆಟ್ಟದ ಸಮೀಪಕ್ಕೆ ಬರಬೇಕು” ಎಂದು ಹೇಳು ಎಂದನು. 14ಮೋಶೆ ಬೆಟ್ಟದಿಂದಿಳಿದು ಜನರ ಬಳಿಗೆ ಬಂದು, ಅವರನ್ನು ಶುದ್ಧಗೊಳಿಸಿದನು. ಅವರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು ಶುದ್ಧರಾದರು. 15ಆಗ ಮೋಶೆ ಜನರಿಗೆ, “ಮೂರನೆಯ ದಿನದಲ್ಲಿ ಸಿದ್ಧವಾಗಿರಿ. ಯಾವ ಪುರುಷನೂ ಸ್ತ್ರೀಸಂಗ ಮಾಡಬಾರದು” ಎಂದು ಹೇಳಿದನು. 16ಮೂರನೆಯ ದಿನದಲ್ಲಿ ಸೂರ್ಯೋದಯವಾಗಲು ಆ ಬೆಟ್ಟದ ಮೇಲೆ ಗುಡುಗು, ಮಿಂಚೂ, ಕಾರ್ಮುಗಿಲೂ, ತುತ್ತೂರಿಯ ಮಹಾಧ್ವನಿಯೂ ಉಂಟಾಗಲು ಪಾಳೆಯಲ್ಲಿದ್ದ ಜನರೆಲ್ಲರೂ ನಡುಗಿದರು. 17ದೇವದರ್ಶನಕ್ಕಾಗಿ ಮೋಶೆ ಜನರನ್ನು ಪಾಳೆಯದ ಹೊರಕ್ಕೆ ಕರೆದುಕೊಂಡು ಬರಲು, ಅವರು ಬೆಟ್ಟದ ಕೆಳಗೆ ನಿಂತುಕೊಂಡರು. 18ಯೆಹೋವನು ಬೆಂಕಿಯೊಳಗೆ ಸೀನಾಯಿ ಬೆಟ್ಟದ ಮೇಲೆ ಇಳಿದು ಬಂದನು. ಆದುದರಿಂದ ಆ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು. ಅದಲ್ಲದೆ ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು. 19ತುತ್ತೂರಿಯ ಧ್ವನಿ ಹೆಚ್ಚಾಗುತ್ತಾ ಬಂದಾಗ, ಮೋಶೆಯು ದೇವರ ಸಂಗಡ ಮಾತನಾಡಿದನು. ಆಗ ದೇವರು ಎತ್ತರದ ಧ್ವನಿಯಲ್ಲಿ ಅವನಿಗೆ ಉತ್ತರಕೊಟ್ಟನು.
ಸಂಧ್ಯಾ ಪ್ರಾರ್ಥನೆ: ವಾಚನ
1ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು, 2“ಅಜ್ಞಾನದ ಮಾತುಗಳಿಂದ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು? 3ಶೂರನಂತೆ ನಡುಕಟ್ಟಿಕೋ; ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು. 4ನಾನು ಲೋಕಕ್ಕೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು. 5ಅದರ ಅಳತೆಗಳನ್ನು ಯಾರು ಗೊತ್ತುಮಾಡಿದರು? ನೀನೇ ಬಲ್ಲೆ. ಅದರ ಮೇಲೆ ನೂಲುಹಿಡಿದವರು ಯಾರು? 6ಭೂಲೋಕದ ಅಸ್ತಿವಾರವು ಯಾವುದರ ಮೇಲೆ ನೆಲೆಗೊಂಡವು? ಅದರ ಮೂಲೆಗಲ್ಲನ್ನು ಹಾಕಿದವರು ಯಾರು? 7ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹ ಧ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದ ಘೋಷಮಾಡುತ್ತಾ ಇರಲು, 8ಸಮುದ್ರವು ಭೂಗರ್ಭವನ್ನು ಭೇದಿಸಿಕೊಂಡು ಬರಲು, ಅದರ ದ್ವಾರಗಳನ್ನು ಮುಚ್ಚಿದವರು ಯಾರು? 9ಆ ಕಾಲದಲ್ಲಿ ನಾನು ಮೋಡಗಳನ್ನು ಅದಕ್ಕೆ ವಸ್ತ್ರವನ್ನಾಗಿಯೂ, ಕಾರ್ಗತ್ತಲನ್ನು ಸುತ್ತುಬಟ್ಟೆಯನ್ನಾಗಿಯೂ ಮಾಡಿದೆನಲ್ಲವೆ? 10ಇದಲ್ಲದೆ ಸಮುದ್ರಕ್ಕೆ ನನ್ನ ಇಷ್ಟದ ಮೇರೆಯನ್ನು ಕಟ್ಟಿ, ಅದಕ್ಕೆ ಅಗುಳಿ, ಕದಗಳನ್ನು ಹಾಕಿದೆನು 11‘ಇಲ್ಲಿಯ ತನಕ ಬರಬಹುದು; ಮೀರಿ ಬರಬೇಡ, ನಿನ್ನ ತೆರೆಗಳ ಹೆಮ್ಮೆಗೆ ಇಲ್ಲೇ ತಡೆಯಾಗುವುದು’ ಎಂದು ಅಪ್ಪಣೆಕೊಟ್ಟೆನು. 12ನಿನ್ನ ಜೀವಮಾನದಲ್ಲಿ ಎಂದಾದರೂ ‘ಅರುಣೋದಯವಾಗಲಿ’ ಎಂದು ಆಜ್ಞಾಪಿಸಿರುವೆಯೋ? ಮುಂಜಾನೆಯ ಬೆಳಗಿಗೆ ಇರತಕ್ಕ ಸ್ಥಳವನ್ನು ಗೊತ್ತುಮಾಡಿದೆಯಾ? 13ಭೂಮಿಯ ಅಂಚುಗಳನ್ನು ಹಿಡಿದು ದುಷ್ಟರನ್ನು ಅದರೊಳಗಿಂದ ಒದರಿಬಿಡು ಎಂದು ಉದಯಕ್ಕೆ ಅಪ್ಪಣೆಕೊಟ್ಟೆಯಾ? 14ಮುದ್ರೆ ಒತ್ತಿದ ಜೇಡಿಮಣ್ಣಿನಂತೆ ಬೆಳಗಾಗುವಾಗ ಭೂಮಿಯು ರೂಪ ತಾಳುತ್ತದೆ. ಎಲ್ಲಾ ವಸ್ತುಗಳು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುವವು. 15ಮತ್ತು ದುಷ್ಟರಿಗೆ ಬೆಳಕಿಲ್ಲವಾಗುವುದು, ಎತ್ತಿದ ಕೈ ಮುರಿಯುವುದು. 16ಎಂದಾದರೂ ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಭೂಮಿಯ ಕೆಳಗಣ ಸಾಗರದ ಗುಪ್ತ ಪ್ರದೇಶಗಳಲ್ಲಿ ತಿರುಗಾಡಿದ್ದೀಯೋ? 17ಮರಣದ ಬಾಗಿಲುಗಳು ನಿನಗೆ ಗೋಚರವಾದವೋ? ಘೋರಾಂಧಕಾರದ ಕದಗಳನ್ನು ಕಂಡೆಯಾ? 18ಭೂಮಿಯ ವಿಸ್ತಾರವನ್ನು ಗ್ರಹಿಸಿದ್ದೀಯೋ? ಇದೆಲ್ಲಾ ನಿನಗೆ ಗೊತ್ತಿದ್ದರೆ ತಿಳಿಸು. 19ಬೆಳಕಿನ ನಿವಾಸಕ್ಕೆ ಹೋಗುವ ದಾರಿ ಎಲ್ಲಿ? ಕತ್ತಲಿನ ಸ್ವಸ್ಥಳವು ಎಲ್ಲಿ? 20ನೀನು ಆ ಒಂದೊಂದನ್ನೂ ಅದರದರ ಪ್ರಾಂತ್ಯಕ್ಕೆ ಕರೆದುಕೊಂಡು ಹೋಗಿ, ಅವುಗಳ ಮನೆಯ ಹಾದಿಗಳನ್ನು ಕಂಡುಕೊಳ್ಳಬಲ್ಲೆಯಾ? 21ನಿನಗೆ ತಿಳಿದಿರಬೇಕು; ಆಗಲೂ ಹುಟ್ಟಿದ್ದಿಯಲ್ಲವೆ; ನಿನ್ನ ದಿನಗಳ ಸಂಖ್ಯೆ ಬಹಳ ದೊಡ್ಡದು! 22ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ, ಯುದ್ಧಕದನಗಳ ದಿನಕ್ಕಾಗಿಯೂ ಇಟ್ಟುಕೊಂಡಿರುವ, 23ಹಿಮದ ಭಂಡಾರಗಳನ್ನು ಪ್ರವೇಶಿಸಿದ್ದೀಯಾ? ಕಲ್ಮಳೆಯ ಬೊಕ್ಕಸಗಳನ್ನು ನೋಡಿದ್ದೀಯಾ? 42:1ಆಗ ಯೋಬನು ಯೆಹೋವನಿಗೆ ಪ್ರತ್ಯುತ್ತರವಾಗಿ ಹೀಗೆಂದನು, 2“ನೀನು ಸಕಲ ಕಾರ್ಯಗಳನ್ನು ನಡೆಸಬಲ್ಲೆಯೆಂತಲೂ, ಯಾವ ಸಂಕಲ್ಪವೂ ನಿನಗೆ ಅಸಾಧ್ಯವಲ್ಲವೆಂತಲೂ ತಿಳಿದುಕೊಂಡೇ ಇದ್ದೇನೆ. 3‘ಜ್ಞಾನವಿಲ್ಲದೆ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು?’ ಎಂಬ ನಿನ್ನ ಮಾತಿನಂತೆ ನಾನು ತಿಳಿಯದ ಸಂಗತಿಗಳನ್ನೂ, ನನಗೆ ಗೊತ್ತಿಲ್ಲದೆ ಬುದ್ಧಿಗೆ ಮೀರಿರುವ ಅದ್ಭುತಗಳನ್ನೂ ಕುರಿತು ಮಾತನಾಡಿದ್ದೇನೆ. 4ದಯಮಾಡಿ ಕೇಳು, ನಾನೇ ಮಾತನಾಡುವೆನು; ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು ಎಂದು ಅಪ್ಪಣೆಕೊಟ್ಟೆ. 5ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು, ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು.
ಸಂಧ್ಯಾ ಪ್ರಾರ್ಥನೆ: ವಾಚನ
4ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವುದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ. ಮುಂಜಾನೆಯಿಂದ ಮುಂಜಾನೆಗೆ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಎಚ್ಚರಗೊಳಿಸುತ್ತಾನೆ. 5ಕರ್ತನಾದ ಯೆಹೋವನು ನನ್ನ ಕಿವಿಯನ್ನು ತೆರೆದಿದ್ದಾನೆ. ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ. 6ನಾನು ಹೊಡೆಯುವವರಿಗೆ ಬೆನ್ನುಕೊಟ್ಟು, ಕೂದಲು ಕೀಳುವವರಿಗೆ ಗಡ್ಡವನ್ನು ಒಡ್ಡಿದೆನು. ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಿಕೊಳ್ಳಲಿಲ್ಲ. 7ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು. ಆದಕಾರಣ ನಾನು ನಾಚಿಕೆಯಿಂದ ಕೊರಗಲಿಲ್ಲ; ನನ್ನ ಮುಖವನ್ನು ಕಗ್ಗಲ್ಲಿನಂತೆ ಗಟ್ಟಿಮಾಡಿಕೊಂಡಿದ್ದೇನೆ. ಆಶಾಭಂಗಪಡಲಾರನೆಂದು ನನಗೆ ಗೊತ್ತು. 8ನನ್ನ ನೀತಿ ನಿರ್ಣಯಿಸುವಾತನು ಸಮೀಪದಲ್ಲಿದ್ದಾನೆ. ನನ್ನೊಡನೆ ಯಾರು ವ್ಯಾಜ್ಯವಾಡುವರು? ನಾವಿಬ್ಬರು ನ್ಯಾಯಾಸನದ ಮುಂದೆ ನಿಂತುಕೊಳ್ಳುವ. ನನಗೆ ಪ್ರತಿಕಕ್ಷಿಯು ಯಾರು? ಅವನು ನನ್ನ ಬಳಿಗೆ ಬರಲಿ. 9ಆಹಾ, ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು. ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ಹಳೆಯ ವಸ್ತ್ರದಂತಾಗುವರು. ಅವರನ್ನು ನುಸಿಯು ತಿಂದುಬಿಡುವುದು. 10ನಿಮ್ಮೊಳಗೆ ಯಾರು ಯೆಹೋವನಲ್ಲಿ ಭಯಭಕ್ತಿಯಿಟ್ಟು ಆತನ ಸೇವಕನ ಮಾತನ್ನು ಕೇಳುವರು? ಬೆಳಕಿಲ್ಲದೇ ಕತ್ತಲೆಯಲ್ಲಿ ನಡೆಯುವವನು ಯಾರು? ಅವನು ಯೆಹೋವನ ನಾಮದಲ್ಲಿ ಭರವಸವಿಟ್ಟು ತನ್ನ ದೇವರನ್ನು ಆಧಾರಮಾಡಿಕೊಳ್ಳಲಿ. 11ಓಹೋ, ಬೆಂಕಿಹಚ್ಚಿ ಸುತ್ತಮುತ್ತಲು ಉರಿಯನ್ನು ಹತ್ತಿಸಿಕೊಂಡಿರುವವರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ, ನೀವು ಹತ್ತಿಸಿದ ಕೊಳ್ಳಿಗಳ ನಡುವೆ ನಡೆದರೂ ನಡೆಯಿರಿ. ಇಗೋ, “ನನ್ನ ಹಸ್ತದಿಂದ ನಿಮಗಾಗುವ ಗತಿಯು ಇದೇ, ದುಃಖಕ್ಕೆ ಒಳಗಾಗಿ ಸಾಯುವಿರಿ.”
ಪತ್ರಿಕೆ
23ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನೆಂದರೆ, ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು, 24“ಇದು ನಿಮಗೋಸ್ಕರವಾಗಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ” ಅಂದನು. 25ಊಟವಾದ ಮೇಲೆ ಆತನು ಅದೇ ರೀತಿಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾನಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. ನೀವು ಇದರಲ್ಲಿ ಪಾನಮಾಡುವಾಗೆಲೆಲ್ಲಾ ನನ್ನನ್ನು ನೆನಪುಮಾಡಿಕೊಳ್ಳುವುದಕ್ಕೋಸ್ಕರ ಇದನ್ನು ಪಾನಮಾಡಿರಿ” ಅಂದನು. 26ನೀವು ಈ ರೊಟ್ಟಿಯನ್ನು ತಿಂದು ಈ ಪಾನಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ. 27ಹೀಗಿರುವುದರಿಂದ ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾನಪಾತ್ರೆಯಲ್ಲಿ ಪಾನ ಮಾಡಿದರೆ ಅವನು ಕರ್ತನ ದೇಹಕ್ಕೂ ಮತ್ತು ಕರ್ತನ ರಕ್ತಕ್ಕೂ ಸಂಬಂಧಿಸಿದಂತೆ ದ್ರೋಹಮಾಡಿದವನಾಗಿರುವನು. 28ಪ್ರತಿ ಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯನ್ನು ತೆಗೆದುಕೊಂಡು ತಿನ್ನಲಿ, ಆ ಪಾನಪಾತ್ರೆಯಲ್ಲಿ ಕುಡಿಯಲಿ. 29ಯಾಕೆಂದರೆ ಕರ್ತನ ದೇಹವೆಂದು ವಿವೇಚಿಸದೇ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವನು. 30ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರು ಮತ್ತು ರೋಗಿಗಳು ಆಗುತ್ತಾರೆ ಮತ್ತು ಅನೇಕರು ಸಾಯುತ್ತಾರೆ. 31ನಮ್ಮನ್ನು ನಾವೇ ಪರೀಕ್ಷಿಸಿಕೊಂಡರೆ ನ್ಯಾಯ ವಿಚಾರಣೆಗೊಳಗಾಗುವುದಿಲ್ಲ. 32ಆದರೆ ನಾವು ಕರ್ತನಿಂದ ನ್ಯಾಯವಿಚಾರಣೆಗೆ ಒಳಗಾಗಿರಲಾಗಿ ಆತನು, ನಮಗೆ ಲೋಕದವರ ಸಂಗಡ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ನಮ್ಮನ್ನು ದಂಡನೆಗೆ ಗುರಿಪಡಿಸುತ್ತಾನೆ.
ಸುವಾರ್ತೆ (ಜೋಡಿಸಿದ ವಾಚನ)
ಮತ್ತಾ 26:1–20 · ಯೋಹಾ 13:3–17 · ಮತ್ತಾ 26:21–39 · ಲೂಕ 22:43–45 · ಮತ್ತಾ 26:40–27:2
1ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತನ್ನ ಶಿಷ್ಯರಿಗೆ, “ಎರಡು ದಿನಗಳಾದ ಮೇಲೆ ಪಸ್ಕಹಬ್ಬ ಬರುತ್ತದೆಂದು ನೀವು ಬಲ್ಲಿರಿ; 2ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿ ಕೊಡಲಾಗುವುದು” ಎಂದು ಹೇಳಿದನು. 3ಆ ಕಾಲದಲ್ಲಿ ಮುಖ್ಯಯಾಜಕರೂ, ಜನರ ಹಿರಿಯರೂ ಕಾಯಫನೆಂಬ ಮಹಾಯಾಜಕನ ಭವನದಲ್ಲಿ ಕೂಡಿಬಂದು 4ಯೇಸುವನ್ನು ಗುಟ್ಟಾಗಿ ಹಿಡಿದು ಕೊಲ್ಲಬೇಕೆಂಬುದಾಗಿ ಒಳಸಂಚು ಮಾಡಿದರು. 5“ಆದರೂ ಹಬ್ಬದಲ್ಲಿ ಹಿಡಿಯಬಾರದು, ನಮ್ಮ ಜನರಲ್ಲಿ ಗದ್ದಲವಾದೀತು” ಎಂದು ಮಾತನಾಡಿಕೊಂಡರು. 6ಯೇಸು ಬೇಥಾನ್ಯದಲ್ಲಿ ಸೀಮೋನನೆಂಬ ಕುಷ್ಠರೋಗಿಯ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಒಬ್ಬ ಸ್ತ್ರೀಯು 7ಬಹು ಬೆಲೆಯುಳ್ಳ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಆತನ ಬಳಿಗೆ ಬಂದು ಆ ತೈಲವನ್ನು ಆತನ ತಲೆಯ ಮೇಲೆ ಸುರಿದಳು. 8ಶಿಷ್ಯರು ಇದನ್ನು ಕಂಡು ಕೋಪಗೊಂಡು, “ಹೀಗೆ ವ್ಯರ್ಥವಾಗಿ ಖರ್ಚುಮಾಡುವುದೇಕೆ? 9ಈ ತೈಲವನ್ನು ಬಹಳ ಹಣಕ್ಕೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ” ಅಂದರು. 10ಯೇಸು ಅದನ್ನು ತಿಳಿದು ಅವರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತಿದ್ದೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. 11ಬಡವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರಲ್ಲಾ, ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. 12ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಸುರಿದದ್ದು ನನ್ನ ಉತ್ತರಕ್ರಿಯೆಗಾಗಿಯೇ. 13ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವುದೋ ಅಲ್ಲೆಲ್ಲಾ ಈ ಸ್ತ್ರೀ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ” ಹೇಳುವರು. 14ಆ ಮೇಲೆ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನೆಂಬುವವನು ಮುಖ್ಯಯಾಜಕರ ಬಳಿಗೆ ಹೋಗಿ, 15“ನಾನು ಆತನನ್ನು ಹಿಡಿಯಲು ನಿಮಗೆ ಸಹಾಯಮಾಡಿದರೆ ನನಗೆ ಏನು ಕೊಡುತ್ತೀರಿ?” ಅಂದನು. ಅವರು ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ತೂಗಿ ಕೊಟ್ಟರು. 16ಅಂದಿನಿಂದ ಅವನು ಆತನನ್ನು ಹಿಡಿದುಕೊಡುವುದಕ್ಕಾಗಿ ಸಂದರ್ಭ ಹುಡುಕುತ್ತಿದ್ದನು. 17ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪಸ್ಕದ ಊಟಮಾಡುವುದಕ್ಕೆ ನಾವು ನಿನಗೆ ಎಲ್ಲಿ ಸಿದ್ಧಮಾಡಬೇಕನ್ನುತ್ತೀ” ಎಂದು ಕೇಳಿದರು. 18ಆತನು, “ನೀವು ಪಟ್ಟಣದೊಳಕ್ಕೆ ನಾನು ಸೂಚಿಸಿದವನ ಬಳಿಗೆ ಹೋಗಿ ಅವನಿಗೆ, ‘ನನ್ನ ಕಾಲ ಸಮೀಪವಾಯಿತು, ನಾನು ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬ ಮಾಡುತ್ತೇನೆ’ ಎಂಬುದಾಗಿ ಗುರುವು ಹೇಳುತ್ತಿದ್ದಾನೆ ಎಂದು ಹೇಳಿರಿ” ಅಂದನು. 19ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿ ಪಸ್ಕದ ಭೋಜನವನ್ನು ತಯಾರಿಸಿದರು. 20ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡನು. 13:3ತಂದೆಯು ತನ್ನ ಕೈಯಲ್ಲಿ ಎಲ್ಲದರ ಮೇಲೆ ಅಧಿಕಾರ ಕೊಟ್ಟಿದ್ದಾನೆಂದೂ, ತಾನು ದೇವರ ಬಳಿಯಿಂದ ಬಂದು, ತಿರುಗಿ ದೇವರ ಬಳಿಗೆ ಹೋಗುತ್ತೇನೆಂದೂ ಯೇಸುವಿಗೆ ತಿಳಿದಿತ್ತು. 4ಆತನು ಊಟದಿಂದ ಎದ್ದು ತನ್ನ ಮೇಲುಹೊದಿಕೆಯನ್ನು ತೆಗೆದಿಟ್ಟು ಅಂಗ ವಸ್ತ್ರವನ್ನು ತೆಗೆದುಕೊಂಡು ನಡುವಿಗೆ ಕಟ್ಟಿಕೊಂಡನು. 5ಅನಂತರ ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುತ್ತಾ, ತಾನು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರಸುವುದಕ್ಕೂ ಪ್ರಾರಂಭಿಸಿದನು. 6ಹೀಗೆ ಆತನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಆತನಿಗೆ, “ಕರ್ತನೇ, ನೀನು ನನ್ನ ಪಾದಗಳನ್ನು ತೊಳೆಯುತ್ತೀಯೋ?” ಎಂದು ಹೇಳಿದನು. 7ಅದಕ್ಕೆ ಯೇಸು “ನಾನು ಮಾಡುವುದು ಏನೆಂದು ಈಗ ನಿನಗೆ ತಿಳಿಯುವುದಿಲ್ಲ. ಆನಂತರ ನಿನಗೆ ತಿಳಿಯುವುದು” ಎಂದನು. 8ಪೇತ್ರನು ಆತನಿಗೆ, “ನೀನು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು” ಎಂದು ಹೇಳಿದ್ದಕ್ಕೆ, ಯೇಸು, “ನಾನು ನಿನ್ನನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇರುವುದಿಲ್ಲ” ಎಂದನು. 9ಸೀಮೋನ ಪೇತ್ರನು, “ಕರ್ತನೇ, ನನ್ನ ಪಾದಗಳನ್ನು ಮಾತ್ರವಲ್ಲದೆ, ಕೈಗಳನ್ನೂ, ತಲೆಯನ್ನೂ ಸಹ ತೊಳೆ” ಎಂದನು. 10ಯೇಸು ಅವನಿಗೆ, “ಸ್ನಾನಮಾಡಿಕೊಂಡವನಿಗೆ ತನ್ನ ಪಾದಗಳನ್ನು ಮಾತ್ರ ತೊಳೆದುಕೊಂಡರೆ ಸಾಕು, ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವೂ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದನು. 11ಯೇಸು ತನ್ನನ್ನು ಹಿಡಿದು ಕೊಡುವವನು ಯಾರೆಂದು ತಿಳಿದಿದ್ದರಿಂದ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದ್ದನು. 12ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲುಹೊದಿಕೆಯನ್ನು ಹಾಕಿಕೊಂಡು, ಪುನಃ ಕುಳಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ? 13ನೀವು ನನ್ನನ್ನು ಗುರುವೆಂದೂ ಮತ್ತು ಕರ್ತನೆಂದೂ ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ. 14ಹಾಗಾದರೆ ಕರ್ತನೂ, ಗುರುವೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ, ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು. 15ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ. 16ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ತನ್ನ ದಣಿಗಿಂತ ಆಳು ದೊಡ್ಡವನಲ್ಲ. ಹಾಗೆಯೇ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17ನೀವು ಇವುಗಳನ್ನು ತಿಳಿದುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು. 26:21ಅವರು ಊಟಮಾಡುತ್ತಿರುವಾಗ ಆತನು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು” ಅಂದನು. 22ಆಗ ಅವರು ಬಹಳ ದುಃಖಪಟ್ಟು, “ಕರ್ತನೇ, ನಾನಲ್ಲವಲ್ಲಾ?” ಎಂದು ಪ್ರತಿಯೊಬ್ಬರು ಕೇಳತೊಡಗಿದರು. 23ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಬಟ್ಟಲಲ್ಲಿ ನನ್ನ ಸಂಗಡ ಕೈ ಅದ್ದಿದವನೇ ನನ್ನನ್ನು ಹಿಡಿದುಕೊಡುವವನು. 24ಮನುಷ್ಯಕುಮಾರನು ಆತನ ವಿಷಯವಾಗಿ ಬರೆದಿರುವ ಹಾಗೆ ಹೊರಟುಹೋಗುತ್ತಾನೆ; ಆದರೆ ಯಾವನು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ಗತಿಯನ್ನು ಏನೆಂದು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು” ಅಂದನು. 25ಆಗ ಆತನನ್ನು ಹಿಡಿದುಕೊಡಬೇಕೆಂದಿದ್ದ ಯೂದನು, “ಗುರುವೇ, ನಾನೋ?” ಎಂದು ಕೇಳಲು ಯೇಸು ಅವನಿಗೆ, “ನೀನೇ ಹಾಗೆ ಹೇಳಿದ್ದೀ” ಎಂದು ಹೇಳಿದನು. 26ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಅಂದನು. 27ಆ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಸಲ್ಲಿಸಿ ಅವರಿಗೆ ಕೊಟ್ಟು, “ಇದರಲ್ಲಿರುವುದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, 28ಇದು ಬಹು ಜನರ ಪಾಪಗಳ ಕ್ಷಮಾಪಣೆಗಾಗಿ ಸುರಿಸಲ್ಪಡುವ ಹೊಸ ಒಡಂಬಡಿಕೆಯ ರಕ್ತ. 29ನಾನು ನನ್ನ ತಂದೆಯ ರಾಜ್ಯದಲ್ಲಿ ನಿಮ್ಮ ಸಂಗಡ ಹೊಸದಾಗಿ ದ್ರಾಕ್ಷಾರಸವನ್ನು ಕುಡಿಯುವ ದಿನದವರೆಗೂ ಇನ್ನು ಇದನ್ನು ಕುಡಿಯುವುದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ” ಅಂದನು. 30ಬಳಿಕ ಅವರು ಕೀರ್ತನೆಯನ್ನು ಹಾಡಿದ ಮೇಲೆ ಎಣ್ಣೆಯ ಮರಗಳ ಗುಡ್ಡಕ್ಕೆ ಹೊರಟು ಹೋದರು. 31ಆಗ ಯೇಸು, ಅವರಿಗೆ, “ಕುರುಬನನ್ನು ಹೊಡೆಯುವೆನು; ಹಿಂಡಿನ ಕುರಿಗಳು ಚದರಿಹೋಗುವವು ಎಂದು ಬರೆದಿರುವ ಹಾಗೆ ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಹಿಂಜರಿಯುವಿರಿ.” 32“ಆದರೆ ನಾನು ಜೀವಿತನಾಗಿ ಎದ್ದ ಮೇಲೆ ನಿಮಗಿಂತ ಮೊದಲೇ ಗಲಿಲಾಯಕ್ಕೆ ಹೋಗುವೆನು” ಎಂದು ಹೇಳಿದನು. 33ಆದರೆ ಪೇತ್ರನು ಆತನಿಗೆ, “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಮಾತ್ರ ಎಂದಿಗೂ ಹಿಂಜರಿಯುವುದಿಲ್ಲ” ಎಂದು ಉತ್ತರ ಕೊಟ್ಟನು. 34ಯೇಸು ಪೇತ್ರನಿಗೆ, “ನಿನಗೆ ಸತ್ಯವಾಗಿ ಹೇಳುತ್ತೇನೆ, ಇದೇ ರಾತ್ರಿಯಲ್ಲಿ ಕೋಳಿ ಕೂಗುವುದಕ್ಕಿಂತ ಮೊದಲೇ ನೀನು ನನ್ನನ್ನು ಮೂರು ಸಾರಿ ನಿರಾಕರಿಸುವಿ” ಅಂದನು. 35ಪೇತ್ರನು ಆತನಿಗೆ, “ನಾನು ನಿನ್ನ ಸಂಗಡ ಸಾಯಬೇಕಾಗಿಬಂದರೂ ನಿನ್ನನ್ನು ನಿರಾಕರಿಸುವುದಿಲ್ಲ” ಎಂದು ಹೇಳಿದನು. ಅದರಂತೆ ಶಿಷ್ಯರೆಲ್ಲರೂ ಹೇಳಿದರು. 36ಅನಂತರ ಯೇಸು ತನ್ನ ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ತೋಟಕ್ಕೆ ಬಂದು ಅವರಿಗೆ, “ಇಲ್ಲೇ ಕುಳಿತುಕೊಳ್ಳಿರಿ, ನಾನು ಅತ್ತ ಹೋಗಿ ಪ್ರಾರ್ಥಿಸುತ್ತೇನೆ” ಎಂದು ಹೇಳಿ, 37ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುಂದಕ್ಕೆ ಹೋಗಿ ದುಃಖಪಟ್ಟು ಮನಗುಂದಿದವನಾದನು. 38ಮತ್ತು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರಿ” ಎಂದು ಹೇಳಿದನು. 39ಆತನು ಸ್ವಲ್ಪ ಮುಂದೆ ಹೋಗಿ ಬೋರಲು ಬಿದ್ದು, “ನನ್ನ ತಂದೆಯೇ, ಸಾಧ್ಯವಾದರೆ ಈ ಪಾನಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು. 22:43ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು, ಆತನನ್ನು ಬಲಪಡಿಸಿದನು. 44ಯೇಸು ತೀವ್ರವಾದ ಮನೋವ್ಯಥೆಯುಳ್ಳವನಾಗಿ, ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ, ಆತನ ಬೆವರು ರಕ್ತದ ಹನಿಗಳೋಪಾದಿಯಲ್ಲಿ ನೆಲಕ್ಕೆ ಬೀಳುತ್ತಿತ್ತು. 45ಆತನು ಪ್ರಾರ್ಥನೆ ಮುಗಿಸಿ ಎದ್ದು ಶಿಷ್ಯರ ಬಳಿಗೆ ಬಂದು, ಅವರು ದುಃಖದಿಂದ ಬಳಲಿಹೋದವರಾಗಿ ನಿದ್ರೆಹತ್ತಿರುವುದನ್ನು ಕಂಡು, 26:40ಅನಂತರ ಆತನು ಶಿಷ್ಯರ ಬಳಿಗೆ ಬರಲು ಅವರು ನಿದ್ದೆಮಾಡುವುದನ್ನು ಕಂಡು ಪೇತ್ರನಿಗೆ, “ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ? 41ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ಸಿದ್ಧವಾಗಿದೆ ಆದರೆ ದೇಹವು ಬಲಹೀನವಾಗಿದೆ” ಎಂದು ಹೇಳಿದನು. 42ತಿರುಗಿ ಎರಡನೇ ಸಾರಿ ಹೋಗಿ, “ನನ್ನ ತಂದೆಯೇ, ನಾನು ಕುಡಿಯದ ಹೊರತು ಈ ಪಾತ್ರೆ ಬಿಟ್ಟುಹೋಗಲಾರದು ಎಂದಿದ್ದರೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು. 43ಆತನು ತಿರುಗಿ ಬಂದಾಗಲೂ ಅವರು ನಿದ್ದೆಮಾಡುವುದನ್ನು ಕಂಡನು; ಅವರ ಕಣ್ಣುಗಳು ಭಾರವಾಗಿದ್ದವು. 44ಅನಂತರ ಮತ್ತೆ ಅವರನ್ನು ಬಿಟ್ಟು ಹೊರಟುಹೋಗಿ ತಿರುಗಿ ಅದೇ ಮಾತುಗಳನ್ನು ಹೇಳುತ್ತಾ ಮೂರನೆಯ ಸಾರಿಯೂ ಪ್ರಾರ್ಥಿಸಿದನು. 45ತರುವಾಯ ಆತನು ಶಿಷ್ಯರ ಬಳಿಗೆ ಬಂದು ಅವರಿಗೆ, “ನೀವು ಇನ್ನು ನಿದ್ದೆ ಮಾಡಿ ವಿಶ್ರಮಿಸಿಕೊಳ್ಳುತ್ತಿದ್ದೀರೋ; ಇಗೋ, ಅ ಗಳಿಗೆ ಸಮೀಪಿಸಿತು, ಈಗ ಮನುಷ್ಯಕುಮಾರನು ಪಾಪಿಷ್ಠರ ಕೈಗೆ ಒಪ್ಪಿಸಲ್ಪಡುತ್ತಾನೆ. 46ಏಳಿರಿ, ಹೋಗೋಣ; ನನ್ನನ್ನು ಹಿಡಿದುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ ನೋಡಿರಿ” ಎಂದು ಹೇಳಿದನು. 47ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮುಖ್ಯಯಾಜಕರ ಹಾಗು ಜನರ ಹಿರಿಯರ ಕಡೆಯಿಂದ ಬಹು ಜನರ ಗುಂಪು ಕತ್ತಿ, ದೊಣ್ಣೆಗಳನ್ನು ಹಿಡಿದುಕೊಂಡು ಅವನ ಸಂಗಡ ಬಂದರು. 48ಇದಲ್ಲದೆ ಆತನನ್ನು ಹಿಡಿದುಕೊಡುವವನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿಯಿರಿ” ಎಂದು ಮುನ್ಸೂಚನೆ ನೀಡಿದ್ದನು. 49ಕೂಡಲೇ ಅವನು ಯೇಸುವಿನ ಬಳಿಗೆ ಬಂದು, “ಗುರುವೇ ನಮಸ್ಕಾರ” ಎಂದು ಹೇಳಿ ಆತನಿಗೆ ಮುದ್ದಿಟ್ಟನು. 50ಯೇಸು ಅವನಿಗೆ, “ಗೆಳೆಯನೇ, ನೀನು ಯಾಕೆ ಬಂದಿರುವೇ” ಎಂದು ಹೇಳಿದನು. ಅವರು ಹತ್ತಿರಕ್ಕೆ ಬಂದು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು. 51ಇಗೋ ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ಕೈಚಾಚಿ ತನ್ನ ಕತ್ತಿಯನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿ ಹಾಕಿದನು. 52ಆಗ ಯೇಸು ಅವನಿಗೆ, “ನಿನ್ನ ಕತ್ತಿಯನ್ನು ತಿರುಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರೂ ಕತ್ತಿಯಿಂದ ನಾಶವಾಗುವರು, 53ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆ, ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವುದಿಲ್ಲವೆಂದು ಭಾವಿಸುತ್ತೀಯೋ? 54ಕಳುಹಿಸಿಕೊಟ್ಟರೆ ನನಗೆ ಹೀಗೀಗೆ ಆಗಬೇಕೆಂಬ ಶಾಸ್ತ್ರದ ಮಾತುಗಳು ನೆರವೇರುವುದಾದರೂ ಹೇಗೆ?” ಎಂದು ಹೇಳಿದನು. 55ಅದೇ ಸಮಯದಲ್ಲಿ ಯೇಸು ಗುಂಪಾಗಿ ಕೂಡಿಬಂದಿದ್ದ ಜನರಿಗೆ, “ಕಳ್ಳನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನು ದೊಣ್ಣೆಗಳನ್ನು ತೆಗೆದುಕೊಂಡು ನನ್ನನ್ನು ಹಿಡಿಯುವುದಕ್ಕೆ ಬಂದಿರಾ? ನಾನು ಪ್ರತಿದಿನ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲವಲ್ಲಾ; 56ಆದರೆ ಪ್ರವಾದಿಗಳು ಬರೆದ ವಚನಗಳು ನೆರವೇರುವಂತೆ ಇದೆಲ್ಲಾ ಆಯಿತು” ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು. 57ಯೇಸುವನ್ನು ಹಿಡಿದವರು ಆತನನ್ನು ಮಹಾಯಾಜಕನಾದ ಕಾಯಫನ ಬಳಿಗೆ ಕರೆದುಕೊಂಡು ಹೋದರು, ಅಲ್ಲಿ ಶಾಸ್ತ್ರಿಗಳೂ ಹಿರಿಯರೂ ಒಟ್ಟಾಗಿ ಸೇರಿಬಂದಿದ್ದರು. 58ಆದರೆ ಪೇತ್ರನು ದೂರದಿಂದ ಆತನನ್ನು ಹಿಂಬಾಲಿಸುತ್ತಾ, ಮಹಾಯಾಜಕನ ಭವನದ ಅಂಗಳದ ಒಳಗೆ ನುಗ್ಗಿ ಬಂದು ಆತನಿಗೆ ಏನಾಗುವುದೋ ಎಂದು ನೋಡಬೇಕೆಂದು ಸೈನಿಕರ ಸಂಗಡ ಕುಳಿತುಕೊಂಡನು. 59ಆಗ ಮುಖ್ಯಯಾಜಕರೂ ಹಿರೀಸಭೆಯವರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಆತನ ಮೇಲೆ ಸುಳ್ಳುಸಾಕ್ಷಿಯನ್ನು ಹುಡುಕಿದರು; ಆದರೆ ಬಹು ಮಂದಿ ಸುಳ್ಳುಸಾಕ್ಷಿಗಳು ಮುಂದೆ ಬಂದರೂ ಏನೂ ಸಿಕ್ಕಲಿಲ್ಲ. 60ಅನಂತರ ಇಬ್ಬರು ಮುಂದೆ ಬಂದು, 61“ನಾನು ದೇವರ ಆಲಯವನ್ನು ಕೆಡವಿಬಿಟ್ಟು ಮೂರು ದಿನಗಳಲ್ಲಿ ತಿರುಗಿ ಕಟ್ಟಬಲ್ಲೆನೆಂದು ‘ಈ ಮನುಷ್ಯನು ಹೇಳಿದನು’” ಅಂದರು; 62ಆಗ ಮಹಾಯಾಜಕನು ಎದ್ದು ನಿಂತು, “ನೀನೇನೂ ಉತ್ತರಹೇಳುವುದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಆರೋಪಗಳು ನಿಜವೇನು?” ಎಂದು ಆತನನ್ನು ಕೇಳಿದನು. ಆದರೆ ಯೇಸು ಸುಮ್ಮನಿದ್ದನು. 63ಮಹಾಯಾಜಕನು ಯೇಸುವಿಗೆ, “ನಿನಗೆ ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದಾನೆ; ನೀನು ದೇವಕುಮಾರನಾದ ಕ್ರಿಸ್ತನಾದರೆ ನಮಗೆ ಹೇಳಬೇಕು” ಅಂದನು. 64ಯೇಸು ಪ್ರತ್ಯುತ್ತರವಾಗಿ, “ನೀನೇ ಹೇಳಿದ್ದೀ; ಆದರೆ ನಾನು ನಿಮಗೆ ಹೇಳುವುದೇನೆಂದರೆ, ಇನ್ನು ಮೇಲೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ, ಆಕಾಶದ ಮೇಘಗಳ ಮೇಲೆ ಕುಳಿತು ಬರುವುದನ್ನೂ ಕಾಣುವಿರಿ” ಅಂದನು. 65ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಇವನು ದೇವದೂಷಣೆಯ ಮಾತನಾಡಿದ್ದಾನೆ; ನಮಗೆ ಸಾಕ್ಷಿಗಳು ಇನ್ನು ಯಾತಕ್ಕೆ ಬೇಕು? ನೋಡಿ ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರಲ್ಲಾ; 66ನಿಮಗೆ ಹೇಗೆ ತೋರುತ್ತದೆ?” ಅನ್ನಲು, “ಇವನು ಮರಣದಂಡನೆಗೆ ಯೋಗ್ಯನು” ಎಂದು ಅವರು ಉತ್ತರಕೊಟ್ಟರು. 67ಆಗ ಅವರು ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಕೆಲವರು ಆತನ ಕೆನ್ನೆಗೆ ಹೊಡೆದು, 68“ಕ್ರಿಸ್ತನೇ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದನೆ ಹೇಳು” ಅಂದರು. 69ಆಗ ಪೇತ್ರನು ಹೊರಗೆ ಅಂಗಳದಲ್ಲಿ ಕುಳಿತಿದ್ದನು. ಅಲ್ಲಿ ಒಬ್ಬಳು ದಾಸಿಯು ಅವನ ಬಳಿಗೆ ಬಂದು, “ನೀನೂ ಸಹ ಗಲಿಲಾಯದ ಯೇಸುವಿನ ಕೂಡ ಇದ್ದವನು” ಅಲ್ಲವೇ ಎನ್ನಲು. 70ಅವನು ನಿರಾಕರಿಸಿ, “ನೀನು ಏನು ಹೇಳುತ್ತಿರುವೆ ನನಗೆ ಗೊತ್ತಿಲ್ಲ” ಎಂದು ಎಲ್ಲರ ಮುಂದೆ ಹೇಳಿದನು. 71ಅವನು ಅಲ್ಲಿಂದ ಬಾಗಿಲಿನ ಕಡೆಗೆ ಹೋದಾಗ ಮತ್ತೊಬ್ಬ ದಾಸಿಯು ಅವನನ್ನು ಕಂಡು ಅಲ್ಲಿದ್ದವರಿಗೆ, “ಇವನೂ ನಜರೇತಿನ ಯೇಸುವಿನ ಜೊತೆಯಲ್ಲಿ ಇದ್ದವನು” ಎಂದು ಹೇಳಿದಳು. 72ಅವನು ತಿರುಗಿ ನಿರಾಕರಿಸಿ ಆಣೆಯಿಟ್ಟು, “ಆ ಮನುಷ್ಯನನ್ನು ನಾನರಿಯೆನು” ಎಂದು ಹೇಳಿದನು. 73ಸ್ವಲ್ಪ ಹೊತ್ತಿನ ನಂತರ ಅಲ್ಲಿ ನಿಂತಿದ್ದವರು ಮುಂದೆ ಬಂದು ಪೇತ್ರನಿಗೆ, “ನಿಶ್ಚಯವಾಗಿ ನೀನೂ ಸಹ ಅವರಲ್ಲಿ ಒಬ್ಬನು, ನಿನ್ನ ಭಾಷೆಯೇ ನಿನ್ನನ್ನು (ಗಲಿಲಾಯದವನೆಂದು) ತೋರಿಸಿಕೊಡುತ್ತದೆ” ಎಂದು ಹೇಳಲು 74ಅವನು, “ಶಾಪಹಾಕಿಕೊಳ್ಳುವುದಕ್ಕೆ ಪ್ರಾರಂಭಿಸಿ ಆಣೆಯಿಟ್ಟು, ಆ ಮನುಷ್ಯನನ್ನು ನಾನರಿಯೆನು” ಎಂದು ಹೇಳಿದನು. ಕೂಡಲೇ ಹುಂಜವೂ ಕೂಗಿತು. 75ಪೇತ್ರನಿಗೆ ಯೇಸು, “ಹುಂಜವೂ ಕೂಗುವುದಕ್ಕಿಂತ ಮೊದಲೇ ಮೂರು ಸಾರಿ ನನ್ನನ್ನು ನಿರಾಕರಿಸುವಿ” ಎಂದು ಹೇಳಿದ ಮಾತನ್ನು ನೆನಪಿಸಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು. 27:1ಬೆಳಗಾಗಲು ಎಲ್ಲಾ ಮುಖ್ಯಯಾಜಕರೂ, ಜನರ ಹಿರಿಯರೂ ಯೇಸುವನ್ನು ಕೊಲ್ಲಿಸಬೇಕೆಂದು ಸಂಚುಮಾಡಿಕೊಂಡು, 2ಆತನನ್ನು ಕಟ್ಟಿಸಿ ಕರೆದುಕೊಂಡು ಹೋಗಿ ದೇಶಾಧಿಪತಿಯಾದ ಪಿಲಾತನಿಗೆ ಒಪ್ಪಿಸಿದರು.
ಸುವಾರ್ತೆ (ಪಾದ ತೊಳೆಯುವಿಕೆಯಲ್ಲಿ)
1ಪಸ್ಕಹಬ್ಬದ ಹಿಂದಿನ ದಿನ ಯೇಸು, ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆ ಬಂದಿತೆಂದು ತಿಳಿದುಕೊಂಡು, ಈ ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ, ಅವರನ್ನು ಕೊನೆಯವರೆಗೂ ಪ್ರೀತಿಸುತ್ತಾ ಬಂದನು. 2ಅವರು ಭೋಜನಕ್ಕೆ ಕುಳಿತುಕೊಂಡಿದ್ದರು, ಅಷ್ಟರೊಳಗೆ ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದನು. 3ತಂದೆಯು ತನ್ನ ಕೈಯಲ್ಲಿ ಎಲ್ಲದರ ಮೇಲೆ ಅಧಿಕಾರ ಕೊಟ್ಟಿದ್ದಾನೆಂದೂ, ತಾನು ದೇವರ ಬಳಿಯಿಂದ ಬಂದು, ತಿರುಗಿ ದೇವರ ಬಳಿಗೆ ಹೋಗುತ್ತೇನೆಂದೂ ಯೇಸುವಿಗೆ ತಿಳಿದಿತ್ತು. 4ಆತನು ಊಟದಿಂದ ಎದ್ದು ತನ್ನ ಮೇಲುಹೊದಿಕೆಯನ್ನು ತೆಗೆದಿಟ್ಟು ಅಂಗ ವಸ್ತ್ರವನ್ನು ತೆಗೆದುಕೊಂಡು ನಡುವಿಗೆ ಕಟ್ಟಿಕೊಂಡನು. 5ಅನಂತರ ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುತ್ತಾ, ತಾನು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರಸುವುದಕ್ಕೂ ಪ್ರಾರಂಭಿಸಿದನು. 6ಹೀಗೆ ಆತನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಆತನಿಗೆ, “ಕರ್ತನೇ, ನೀನು ನನ್ನ ಪಾದಗಳನ್ನು ತೊಳೆಯುತ್ತೀಯೋ?” ಎಂದು ಹೇಳಿದನು. 7ಅದಕ್ಕೆ ಯೇಸು “ನಾನು ಮಾಡುವುದು ಏನೆಂದು ಈಗ ನಿನಗೆ ತಿಳಿಯುವುದಿಲ್ಲ. ಆನಂತರ ನಿನಗೆ ತಿಳಿಯುವುದು” ಎಂದನು. 8ಪೇತ್ರನು ಆತನಿಗೆ, “ನೀನು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು” ಎಂದು ಹೇಳಿದ್ದಕ್ಕೆ, ಯೇಸು, “ನಾನು ನಿನ್ನನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇರುವುದಿಲ್ಲ” ಎಂದನು. 9ಸೀಮೋನ ಪೇತ್ರನು, “ಕರ್ತನೇ, ನನ್ನ ಪಾದಗಳನ್ನು ಮಾತ್ರವಲ್ಲದೆ, ಕೈಗಳನ್ನೂ, ತಲೆಯನ್ನೂ ಸಹ ತೊಳೆ” ಎಂದನು. 10ಯೇಸು ಅವನಿಗೆ, “ಸ್ನಾನಮಾಡಿಕೊಂಡವನಿಗೆ ತನ್ನ ಪಾದಗಳನ್ನು ಮಾತ್ರ ತೊಳೆದುಕೊಂಡರೆ ಸಾಕು, ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವೂ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದನು. 11ಯೇಸು ತನ್ನನ್ನು ಹಿಡಿದು ಕೊಡುವವನು ಯಾರೆಂದು ತಿಳಿದಿದ್ದರಿಂದ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದ್ದನು.
ಸುವಾರ್ತೆ (ಪಾದ ತೊಳೆಯುವಿಕೆಯ ನಂತರ)
12ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲುಹೊದಿಕೆಯನ್ನು ಹಾಕಿಕೊಂಡು, ಪುನಃ ಕುಳಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ? 13ನೀವು ನನ್ನನ್ನು ಗುರುವೆಂದೂ ಮತ್ತು ಕರ್ತನೆಂದೂ ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ. 14ಹಾಗಾದರೆ ಕರ್ತನೂ, ಗುರುವೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ, ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು. 15ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ. 16ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ತನ್ನ ದಣಿಗಿಂತ ಆಳು ದೊಡ್ಡವನಲ್ಲ. ಹಾಗೆಯೇ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17ನೀವು ಇವುಗಳನ್ನು ತಿಳಿದುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 16 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 29 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು