Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಗಲಿಲಾಯದಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಗಲಿಲಾಯದಲ್ಲಿ

ಐದು ಸಾವಿರ ಜನರಿಗೆ ಊಟ

ಮತ್ತಾ 14:13–21 · ಮಾರ್ಕ 6:30–44 · ಲೂಕ 9:10–17 · ಯೋಹಾ 6:1–14

ಮತ್ತಾಯನು

ಮತ್ತಾ 14:13–21

13ಯೇಸು ಅದನ್ನು ಕೇಳಿ ದೋಣಿಯನ್ನು ಹತ್ತಿ ಆ ಸ್ಥಳವನ್ನು ಬಿಟ್ಟು ಅಡವಿಯ ಸ್ಥಳಕ್ಕೆ ಹೋದನು. ಇದನ್ನು ಕೇಳಿದ ಜನರು ಗುಂಪು ಗುಂಪಾಗಿ ತಮ್ಮ ತಮ್ಮ ಪಟ್ಟಣಗಳಿಂದ ಕಾಲುನಡಿಗೆಯಿಂದ ಆತನನ್ನು ಹಿಂಬಾಲಿಸಿದರು.

14ಆತನು ಅವರಿಗಿಂತ ಮುಂದಾಗಿ ಬಂದು ಬಹು ಜನರ ಗುಂಪನ್ನು ಕಂಡು ಅವರ ಮೇಲೆ ಕನಿಕರಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು.

15ಸಂಜೆಯಾದಾಗ ಶಿಷ್ಯರು ಆತನ ಬಳಿಗೆ ಬಂದು, “ಇದು ಅಡವಿಯ ಸ್ಥಳ ಈಗ ಹೊತ್ತು ಮುಳುಗಿಹೋಯಿತು. ಅವರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವಂತೆ ಕಳುಹಿಸಿಕೊಡು” ಎಂದು ಹೇಳಿದರು.

16ಆದರೆ ಯೇಸು, “ಅವರು ಹೋಗುವ ಅಗತ್ಯವಿಲ್ಲ. ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ” ಅಂದನು.

17ಅದಕ್ಕವರು, “ಇಲ್ಲಿ ಐದು ರೊಟ್ಟಿ ಎರಡು ಮೀನು ಮಾತ್ರ ಇವೆ” ಅನ್ನಲಾಗಿ,

18ಆತನು, “ಅವುಗಳನ್ನು ನನಗೆ ತಂದು ಕೊಡಿರಿ” ಅಂದನು.

19ತರುವಾಯ ಜನರ ಗುಂಪಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರಿಗೆ ಸ್ತೋತ್ರ ಮಾಡಿ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಜನರಿಗೆ ಕೊಟ್ಟರು.

20ಅವರೆಲ್ಲರೂ ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಕೂಡಿಸಲಾಗಿ ಹನ್ನೆರಡು ಪುಟ್ಟಿ ತುಂಬಿತು.

21ಊಟಮಾಡಿದವರು ಹೆಂಗಸರೂ ಮಕ್ಕಳನ್ನು ಬಿಟ್ಟು ಗಂಡಸರೇ ಸುಮಾರು ಐದು ಸಾವಿರವಿದ್ದರು.

ಮಾರ್ಕನು

ಮಾರ್ಕ 6:30–44

30ಅಪೊಸ್ತಲರು ಯೇಸುವಿನ ಬಳಿಗೆ ಕೂಡಿ ಬಂದು ತಾವು ಮಾಡಿದ್ದನ್ನೂ ಉಪದೇಶಿಸಿದ್ದನ್ನೂ ಆತನಿಗೆ ತಿಳಿಸಿದರು.

31ಆತನು ಅವರಿಗೆ, “ನೀವು ಮಾತ್ರ ಏಕಾಂತ ಸ್ಥಳಕ್ಕೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ” ಎಂದು ಹೇಳಿದನು. ಏಕೆಂದರೆ ಬಹಳ ಮಂದಿ ಬರುತ್ತಾ ಹೋಗುತ್ತಾ ಇದ್ದುದರಿಂದ ಅವರಿಗೆ ಊಟಮಾಡುವುದಕ್ಕೂ ಸಮಯವಿರಲಿಲ್ಲ.

32ಆಗ ಅವರು ತಾವಾಗಿಯೇ ದೋಣಿಯಲ್ಲಿ ಹೊರಟು ಏಕಾಂತ ಸ್ಥಳಕ್ಕೆ ಹೋದರು.

33ಆದರೆ ಅವರು ಹೋಗುವುದನ್ನು ಬಹು ಜನರು ನೋಡಿ ಅವರನ್ನು ಗುರುತಿಸಿ ಎಲ್ಲಾ ಊರುಗಳಿಂದ ಕಾಲುನಡಿಗೆಯಾಗಿ ಓಡಿ ಅವರಿಗಿಂತ ಮೊದಲೇ ಅಲ್ಲಿ ಸೇರಿದರು.

34ಯೇಸು ದೋಣಿಯಿಂದ ಇಳಿದಾಗ ದೊಡ್ಡ ಜನಸಮೂಹವನ್ನು ನೋಡಿ ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಅನೇಕ ವಿಷಯಗಳನ್ನು ಕುರಿತು ಬೋಧಿಸಲಾರಂಭಿಸಿದನು.

35ಅಷ್ಟರಲ್ಲಿ ಸಂಜೆ ಆಗಿದ್ದರಿಂದ ಆತನ ಶಿಷ್ಯರು ಆತನ ಬಳಿಗೆ ಬಂದು, “ಇದು ನಿರ್ಜನ ಸ್ಥಳ, ಈಗ ಹೊತ್ತು ಬಹಳವಾಯಿತು;

36ಈ ಜನರಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಸೀಮೆಗೂ ಹಳ್ಳಿಗಳಿಗೂ ಹೋಗಿ ತಮ್ಮ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ” ಎಂದು ಹೇಳಿದರು.

37ಅದಕ್ಕೆ ಯೇಸು, “ನೀವೇ ಅವರಿಗೆ ಊಟಕ್ಕೇನಾದರೂ ಕೊಡಿರಿ” ಎಂದು ಉತ್ತರಕೊಟ್ಟನು. ಅದಕ್ಕವರು, “ನಾವು ಹೋಗಿ ಇನ್ನೂರು ದಿನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುಕೊಂಡು ಅವರಿಗೆ ಊಟ ಕೊಡಬೇಕೋ?” ಎಂದು ಹೇಳಲು

38ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ” ಅಂದನು. ಅವರು ವಿಚಾರಿಸಿಕೊಂಡು ಬಂದು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ” ಅಂದರು.

39ಆಗ ಆತನು ಅವರಿಗೆ, ಎಲ್ಲರೂ ಹಸಿರುಹುಲ್ಲಿನ ಮೇಲೆ ಪಂಕ್ತಿಪಂಕ್ತಿಯಾಗಿ ಕುಳಿತುಕೊಳ್ಳಲಿ ಎಂದು ಅಪ್ಪಣೆಕೊಟ್ಟಾಗ,

40ಜನರು ಪಂಕ್ತಿಗೆ ನೂರರಂತೆ ಐವತ್ತರಂತೆ ಸಾಲುಸಾಲಾಗಿ ಕುಳಿತುಕೊಂಡರು.

41ಆ ಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ ದೇವರಿಗೆ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು ಇದನ್ನು ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟನು, ಅದೇ ರೀತಿಯಲ್ಲಿ ಆ ಎರಡು ಮೀನುಗಳನ್ನೂ ಆತನು ಎಲ್ಲರಿಗೂ ಹಂಚಿಸಿದನು.

42ಅವರೆಲ್ಲರೂ ತೃಪ್ತರಾಗುವವರೆಗೂ ಊಟಮಾಡಿದರು.

43ರೊಟ್ಟಿಯ ತುಂಡುಗಳನ್ನೂ ಮೀನಿನ ತುಂಡುಗಳನ್ನೂ ಕೂಡಿಸಲಾಗಿ ಹನ್ನೆರಡು ಪುಟ್ಟಿಗಳು ತುಂಬಿದವು.

44ಊಟಮಾಡಿದವರು ಐದು ಸಾವಿರ ಮಂದಿ ಗಂಡಸರು.

ಲೂಕನು

ಲೂಕ 9:10–17

10ಇತ್ತಲಾಗಿ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದ್ದನ್ನೆಲ್ಲಾ ಯೇಸುವಿಗೆ ವಿವರವಾಗಿ ಹೇಳಿದರು. ಆತನು ಅವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಬೇತ್ಸಾಯಿದವೆಂಬ ಊರಿಗೆ ಹೋದರು.

11ಜನರ ಗುಂಪು ಇದನ್ನು ತಿಳಿದು ಯೇಸುವಿನ ಹಿಂದೆ ಬರಲು ಆತನು ಅವರನ್ನು ಪ್ರೀತಿಯಿಂದ ಸೇರಿಸಿಕೊಂಡು ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ, ಸ್ವಸ್ಥತೆ ಅಗತ್ಯವಿದ್ದವರನ್ನು ಗುಣಪಡಿಸಿದನು.

12ಸಂಜೆಯಾಗುತ್ತಿರಲು, ಆ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಗುಂಪಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೋಸ್ಕರ ಊಟವಸತಿಗಳನ್ನು ಏರ್ಪಡಿಸಿಕೊಳ್ಳಲಿ; ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲಾ” ಎಂದು ಆತನಿಗೆ ಹೇಳಲಾಗಿ,

13ಆತನು, “ನೀವೇ ಅವರಿಗೆ ಊಟಕ್ಕೆ ಕೊಡಿರಿ” ಅಂದನು. ಅದಕ್ಕವರು, “ನಮ್ಮಲ್ಲಿ ಐದು ರೊಟ್ಟಿ ಎರಡು ಮೀನು ಹೊರತು ಹೆಚ್ಚೇನೂ ಇಲ್ಲ, ನಾವು ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡು ತರಬೇಕೋ?” ಅಂದರು.

14ಅಲ್ಲಿ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಮಂದಿಯಿದ್ದರು. ಆಗ ಯೇಸುವು ತನ್ನ ಶಿಷ್ಯರಿಗೆ, “ಇವರನ್ನು ಒಂದೊಂದು ಪಂಕ್ತಿಗೆ ಹೆಚ್ಚುಕಡಿಮೆ ಐವತ್ತೈವತ್ತರಂತೆ ಕೂರಿಸಿರಿ” ಎಂದು ಹೇಳಲು,

15ಅವರು ಅದರಂತೆ ಮಾಡಿ ಎಲ್ಲರನ್ನೂ ಕುಳ್ಳಿರಿಸಿದರು.

16ಆ ಮೇಲೆ ಯೇಸುವು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ, ಮುರಿದು ಶಿಷ್ಯರ ಕೈಗೆ ಕೊಟ್ಟು, ಇದನ್ನು ಜನರ ಗುಂಪಿಗೆ ಹಂಚಿರಿ ಅಂದನು.

17ಅವರೆಲ್ಲರು ಊಟಮಾಡಿ ತೃಪ್ತರಾದರು; ನಂತರ ಉಳಿದ ತುಂಡುಗಳನ್ನು ಕೂಡಿಸಲಾಗಿ ಅವು ಹನ್ನೆರಡು ಪುಟ್ಟಿ ಆದವು.

ಯೋಹಾನನು

ಯೋಹಾ 6:1–14

1ತರುವಾಯ ಯೇಸು ಗಲಿಲಾಯದ ಸಮುದ್ರವನ್ನು ದಾಟಿ, ಆಚೆ ದಡಕ್ಕೆ ಹೋದನು. ಅದಕ್ಕೆ ತಿಬೇರಿಯ ಸಮುದ್ರವೆಂತಲೂ ಹೇಳುತ್ತಾರೆ.

2ಬಹು ಜನರು ಆತನು ರೋಗಿಗಳಲ್ಲಿ ಮಾಡಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ, ಜನರ ದೊಡ್ಡಗುಂಪು ಆತನನ್ನು ಹಿಂಬಾಲಿಸುತ್ತಿತ್ತು.

3ಆದರೆ ಯೇಸು ಬೆಟ್ಟವನ್ನೇರಿ ಅಲ್ಲಿ ತನ್ನ ಶಿಷ್ಯರೊಂದಿಗೆ ಕುಳಿತುಕೊಂಡನು.

4ಆಗ ಯೆಹೂದ್ಯರ ಪಸ್ಕದ ಹಬ್ಬವು ಹತ್ತಿರವಾಗಿತ್ತು.

5ಹೀಗಿರಲಾಗಿ ಯೇಸು ಕಣ್ಣೆತ್ತಿ ನೋಡಿದಾಗ ಜನರ ದೊಡ್ಡಗುಂಪು ತನ್ನ ಕಡೆಗೆ ಬರುವುದನ್ನು ನೋಡಿ “ಇವರ ಊಟಕ್ಕೆ ನಾವು ಎಲ್ಲಿಂದ ರೊಟ್ಟಿ ಕೊಂಡು ತರೋಣ?” ಎಂದು ಫಿಲಿಪ್ಪನನ್ನು ಕೇಳಿದನು.

6ತಾನು ಮಾಡಲಿದ್ದಕಾರ್ಯ ಯೇಸುವಿಗೆ ತಿಳಿದಿದ್ದರೂ, ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ, ಆ ಪ್ರಶ್ನೆಯನ್ನು ಕೇಳಿದನು.

7ಅದಕ್ಕೆ ಫಿಲಿಪ್ಪನು, “ಪ್ರತಿಯೊಬ್ಬನಿಗೆ ಸ್ವಲ್ಪ ಸ್ವಲ್ಪ ಸಿಕ್ಕಬೇಕಾದರೂ ಇನ್ನೂರು ದಿನಾರಿ ಮೌಲ್ಯದ ರೊಟ್ಟಿಯಾದರೂ ಅವರಿಗೆ ಸಾಲುವುದಿಲ್ಲ” ಎಂದನು.

8ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಆತನಿಗೆ;

9“ಇಲ್ಲಿ ಒಬ್ಬ ಹುಡುಗನ ಬಳಿಯಲ್ಲಿ ಐದು ಜವೆಗೋದಿಯ ರೊಟ್ಟಿಗಳೂ, ಎರಡು ಮೀನುಗಳೂ ಇವೆ. ಆದರೆ ಇಷ್ಟೊಂದು ಜನರಿಗೆ ಅವು ಯಾತಕ್ಕಾದಾವು?” ಎಂದು ಹೇಳಲು,

10ಯೇಸು “ಆ ಜನರನ್ನು ಊಟಕ್ಕೆ ಕುಳ್ಳಿರಿಸಿರಿ” ಎಂದನು. ಆ ಸ್ಥಳದಲ್ಲಿ ಬಹಳ ಹುಲ್ಲು ಬೆಳೆದಿತ್ತು. ಜನರು ಹುಲ್ಲಿನ ಮೇಲೆ ಕುಳಿತುಕೊಂಡರು. ಗಂಡಸರ ಸಂಖ್ಯೆ ಹೆಚ್ಚುಕಡಿಮೆ ಐದು ಸಾವಿರವಿತ್ತು.

11ಆಮೇಲೆ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಕುಳಿತಿದ್ದವರಿಗೆ ಹಂಚಿದನು. ಅದೇ ರೀತಿ ಮೀನುಗಳನ್ನು ಅವರಿಗೆ ಬೇಕಾದಷ್ಟು ಹಂಚಿದನು.

12ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಮಿಕ್ಕ ತುಂಡುಗಳನ್ನು ಕೂಡಿಸಿರಿ, ಇದರಲ್ಲಿ ಯಾವುದೂ ವ್ಯರ್ಥವಾಗಬಾರದು” ಎಂದು ಹೇಳಿದನು.

13ಅವರು ಆ ಐದು ಜವೆಗೋದಿಯ ರೊಟ್ಟಿಗಳಲ್ಲಿ ಜನರು ತಿಂದು ಮಿಕ್ಕ ತುಂಡುಗಳನ್ನು ಕೂಡಿಸಿ, ಹನ್ನೆರಡು ಪುಟ್ಟಿಗಳಿಗೆ ತುಂಬಿಸಿದರು.

14ಆತನು ಮಾಡಿದ ಈ ಸೂಚಕಕಾರ್ಯವನ್ನು ಆ ಜನರು ನೋಡಿ, “ನಿಜವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿಯು ಈತನೇ” ಎಂದು ಹೇಳಿಕೊಂಡರು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು