Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೇಸುವಿನ ಶ್ರಮೆಗಳು

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೇಸುವಿನ ಶ್ರಮೆಗಳು

ಪೇತ್ರನು ಯೇಸುವನ್ನು ಅರಿಯೆನೆನ್ನುತ್ತಾನೆ

ಮತ್ತಾ 26:69–75 · ಮಾರ್ಕ 14:66–72 · ಲೂಕ 22:54–62 · ಯೋಹಾ 18:25–27

ಮತ್ತಾಯನು

ಮತ್ತಾ 26:69–75

69ಆಗ ಪೇತ್ರನು ಹೊರಗೆ ಅಂಗಳದಲ್ಲಿ ಕುಳಿತಿದ್ದನು. ಅಲ್ಲಿ ಒಬ್ಬಳು ದಾಸಿಯು ಅವನ ಬಳಿಗೆ ಬಂದು, “ನೀನೂ ಸಹ ಗಲಿಲಾಯದ ಯೇಸುವಿನ ಕೂಡ ಇದ್ದವನು” ಅಲ್ಲವೇ ಎನ್ನಲು.

70ಅವನು ನಿರಾಕರಿಸಿ, “ನೀನು ಏನು ಹೇಳುತ್ತಿರುವೆ ನನಗೆ ಗೊತ್ತಿಲ್ಲ” ಎಂದು ಎಲ್ಲರ ಮುಂದೆ ಹೇಳಿದನು.

71ಅವನು ಅಲ್ಲಿಂದ ಬಾಗಿಲಿನ ಕಡೆಗೆ ಹೋದಾಗ ಮತ್ತೊಬ್ಬ ದಾಸಿಯು ಅವನನ್ನು ಕಂಡು ಅಲ್ಲಿದ್ದವರಿಗೆ, “ಇವನೂ ನಜರೇತಿನ ಯೇಸುವಿನ ಜೊತೆಯಲ್ಲಿ ಇದ್ದವನು” ಎಂದು ಹೇಳಿದಳು.

72ಅವನು ತಿರುಗಿ ನಿರಾಕರಿಸಿ ಆಣೆಯಿಟ್ಟು, “ಆ ಮನುಷ್ಯನನ್ನು ನಾನರಿಯೆನು” ಎಂದು ಹೇಳಿದನು.

73ಸ್ವಲ್ಪ ಹೊತ್ತಿನ ನಂತರ ಅಲ್ಲಿ ನಿಂತಿದ್ದವರು ಮುಂದೆ ಬಂದು ಪೇತ್ರನಿಗೆ, “ನಿಶ್ಚಯವಾಗಿ ನೀನೂ ಸಹ ಅವರಲ್ಲಿ ಒಬ್ಬನು, ನಿನ್ನ ಭಾಷೆಯೇ ನಿನ್ನನ್ನು (ಗಲಿಲಾಯದವನೆಂದು) ತೋರಿಸಿಕೊಡುತ್ತದೆ” ಎಂದು ಹೇಳಲು

74ಅವನು, “ಶಾಪಹಾಕಿಕೊಳ್ಳುವುದಕ್ಕೆ ಪ್ರಾರಂಭಿಸಿ ಆಣೆಯಿಟ್ಟು, ಆ ಮನುಷ್ಯನನ್ನು ನಾನರಿಯೆನು” ಎಂದು ಹೇಳಿದನು. ಕೂಡಲೇ ಹುಂಜವೂ ಕೂಗಿತು.

75ಪೇತ್ರನಿಗೆ ಯೇಸು, “ಹುಂಜವೂ ಕೂಗುವುದಕ್ಕಿಂತ ಮೊದಲೇ ಮೂರು ಸಾರಿ ನನ್ನನ್ನು ನಿರಾಕರಿಸುವಿ” ಎಂದು ಹೇಳಿದ ಮಾತನ್ನು ನೆನಪಿಸಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.

ಮಾರ್ಕನು

ಮಾರ್ಕ 14:66–72

66ಇತ್ತಲಾಗಿ ಪೇತ್ರನು ಕೆಳಗೆ ಅಂಗಳದಲ್ಲಿ ಇದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಬಂದು ಅವನು ಚಳಿ ಕಾಯಿಸಿಕೊಳ್ಳುತ್ತಿರುವುದನ್ನು ಕಂಡು,

67ಅವನನ್ನು ದೃಷ್ಟಿಸಿ ನೋಡಿ, “ನೀನು ಸಹ ಆ ನಜರೇತಿನ ಯೇಸುವಿನೊಂದಿಗೆ ಇದ್ದವನು” ಎಂದಳು.

68ಆದರೆ ಅವನು ನಿರಾಕರಿಸಿ, “ನೀನು ಏನು ಹೇಳುತ್ತೀಯೋ ಅದು ನನಗೆ ಗೊತ್ತಿಲ್ಲ, ಅರ್ಥವಾಗುತ್ತಲೂ ಇಲ್ಲ!” ಎಂದು ಹೇಳಿ ಮುಖ್ಯದ್ವಾರದೊಳಗಿಂದ ಹೊರಾಂಗಣಕ್ಕೆ ಹೋದನು.

69ಆ ದಾಸಿಯು ಅವನನ್ನು ಪುನಃ ನೋಡಿ ಪಕ್ಕದಲ್ಲಿ ನಿಂತಿದ್ದವರಿಗೆ, “ಇವನು ಅವರಲ್ಲಿ ಒಬ್ಬನು” ಎಂದು ಹೇಳಲಾರಂಭಿಸಿದಳು.

70ಆಗ ಅವನು ಮತ್ತೆ ನಿರಾಕರಿಸಿದನು. ಸ್ವಲ್ಪ ಹೊತ್ತಿನ ಮೇಲೆ ಪಕ್ಕದಲ್ಲಿ ನಿಂತವರು ಪೇತ್ರನಿಗೆ, “ನಿಶ್ಚಯವಾಗಿಯೂ ನೀನು ಅವರಲ್ಲಿ ಒಬ್ಬನು, ಯಾಕೆಂದರೆ ನೀನು ಗಲಿಲಾಯದವನೇ” ಎಂದರು.

71ಆದರೆ ಅವನು, “ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ” ಎಂದು ಹೇಳಿ ತನ್ನನ್ನು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಆರಂಭಿಸಿದಾಗ, ಕೋಳಿ ಎರಡನೆಯ ಸಾರಿ ಕೂಗಿತು.

72ಆಗ ಪೇತ್ರನು, “ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ಮೂರು ಬಾರಿ ನಿರಾಕರಿಸುವೆ” ಎಂದು ಯೇಸು ತನಗೆ ಹೇಳಿದ ಮಾತನ್ನು ನೆನಪಿಗೆ ಬಂದ ಕಾರಣ, ವ್ಯಥೆಪಟ್ಟು ದುಃಖಭರಿತನಾಗಿ ಅತ್ತನು.

ಲೂಕನು

ಲೂಕ 22:54–62

54ಅವರು ಆತನನ್ನು ಹಿಡಿದು ಮಹಾಯಾಜಕನ ಮನೆಯೊಳಕ್ಕೆ ಕರೆದುಕೊಂಡು ಹೋದರು. ಪೇತ್ರನು ದೂರದಿಂದ ಅವರನ್ನು ಹಿಂಬಾಲಿಸುತ್ತಿದ್ದನು.

55ಅಂಗಳದ ನಡುವೆ ಅವರು ಬೆಂಕಿ ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡಿರಲು ಅವರ ನಡುವೆ ಪೇತ್ರನೂ ಕುಳಿತುಕೊಂಡನು.

56ಅವನು ಬೆಳಕಿಗೆ ಮುಖವಾಗಿ ಕುಳಿತಿರುವಾಗ ಒಬ್ಬ ದಾಸಿಯು ಅವನನ್ನು ಕಂಡು, ಅವನನ್ನು ದೃಷ್ಟಿಸಿ ನೋಡಿ, “ಇವನು ಸಹ ಅವನ ಸಂಗಡ ಇದ್ದವನು” ಅಂದಳು.

57ಆದರೆ ಅವನು, “ನಾನು ಅವನನ್ನು ಅರಿಯೆನಮ್ಮಾ” ಎಂದು ಹೇಳಿದನು.

58ಸ್ವಲ್ಪಹೊತ್ತಿನ ಮೇಲೆ ಮತ್ತೊಬ್ಬನು ಬಂದು ಅವನನ್ನು ಕಂಡು, “ನೀನೂ ಸಹ ಅವರಲ್ಲಿ ಒಬ್ಬನು” ಅನ್ನಲು ಪೇತ್ರನು, “ನಾನಲ್ಲಪ್ಪಾ” ಅಂದನು.

59ಹೆಚ್ಚು ಕಡಿಮೆ ಒಂದು ಘಂಟೆ ಹೊತ್ತಿನ ಮೇಲೆ ಇನ್ನೊಬ್ಬನು, “ನಿಶ್ಚಯವಾಗಿ ಇವನು ಸಹ ಅವನ ಸಂಗಡ ಇದ್ದವನು, ಇವನು ಗಲಿಲಾಯದವನಷ್ಟೆ” ಎಂದು ದೃಢವಾಗಿ ಹೇಳಿದನು.

60ಆದರೆ ಪೇತ್ರನು, “ನೀನು ಹೇಳುವುದೇನೋ ನಾನರಿಯೆನಪ್ಪಾ” ಅಂದನು. ಅವನು ಈ ಮಾತನ್ನು ಆಡುತ್ತಿರುವಾಗಲೇ ಕೋಳಿ ಕೂಗಿತು.

61ಕರ್ತನು ಹಿಂತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು. ಆಗ ಪೇತ್ರನು, “ಈಹೊತ್ತು ಕೋಳಿ ಕೂಗುವುದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅವನನ್ನು ಅರಿಯೆನೆಂಬದಾಗಿ ಹೇಳುವಿ” ಎಂದು ಕರ್ತನು ನುಡಿದ ಮಾತನ್ನು ನೆನಪಿಸಿಕೊಂಡು,

62ಹೊರಗೆ ಹೋಗಿ ತುಂಬಾ ವ್ಯಥೆಪಟ್ಟು ಅತ್ತನು.

ಯೋಹಾನನು

ಯೋಹಾ 18:25–27

25ಇತ್ತ, ಸೀಮೋನ್ ಪೇತ್ರನು ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಾ ಇದ್ದನು. ಆಗ ಅಲ್ಲಿದ್ದವರು ಅವನನ್ನು, “ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಕೇಳಲು, ಅವನು ಅದನ್ನು ನಿರಾಕರಿಸಿ, “ನಾನಲ್ಲ” ಎಂದನು.

26ಮಹಾಯಾಜಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು, ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಆತನ ಜೊತೆಯಲ್ಲಿ ನೋಡಿದೆನಲ್ಲವೇ?” ಎಂದನು.

27ಅದಕ್ಕೆ ಪೇತ್ರನು ಪುನಃ ನಿರಾಕರಿಸಿ “ನಾನಲ್ಲ” ಎಂದನು. ಆಗ ಕೂಡಲೇ ಕೋಳಿ ಕೂಗಿತು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು