Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ › ಸೌಲ ಮತ್ತು ದಾವೀದ

ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ · ಸೌಲ ಮತ್ತು ದಾವೀದ

ರೆಫಾಯೀಮ್ ತಗ್ಗಿನಲ್ಲಿ ಫಿಲಿಷ್ಟಿಯರ ಸೋಲು

2 ಸಮು 5:17–25 · 1 ಪೂರ್ವ 14:8–17

2 ಸಮುವೇಲನು

2 ಸಮು 5:17–25

17ಇಸ್ರಾಯೇಲರು ದಾವೀದನನ್ನು ಅಭಿಷೇಕಿಸಿ, ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ತಲುಪಿದಾಗ ಅವರು ಅವನನ್ನು ಸೆರೆಹಿಡಿಯುವುದಕ್ಕೆ ಹೊರಟರು. ದಾವೀದನು ಇದನ್ನು ಕೇಳಿ ದುರ್ಗಕ್ಕೆ ಹೋದನು.

18ಫಿಲಿಷ್ಟಿಯರು ದೇಶದೊಳಗೆ ನುಗ್ಗಿ ರೆಫಾಯೀಮ್ ತಗ್ಗಿಗೆ ಬಂದು ಅಲ್ಲಿ ಪಾಳೆಯಮಾಡಿಕೊಂಡಿದ್ದರು.

19ಅದನ್ನು ತಿಳಿದು ದಾವೀದನು ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ?” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು” ಎಂದು ಉತ್ತರಕೊಟ್ಟನು.

20ಆಗ ಅವನು ಹೋಗಿ ಅವರನ್ನು ಸೋಲಿಸಿ, “ಯೆಹೋವನು ಕಟ್ಟೆ ಒಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ಬಿದ್ದು, ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾನೆ” ಎಂದು ಹೇಳಿ ಆ ಯುದ್ಧ ಸ್ಥಳಕ್ಕೆ “ಬಾಳ್ ಪೆರಾಚೀಮ್” ಎಂದು ಹೆಸರಿಟ್ಟನು.

21ಫಿಲಿಷ್ಟಿಯರು ಅಲ್ಲಿ ಬಿಟ್ಟು ಹೋಗಿದ್ದ ವಿಗ್ರಹಗಳನ್ನು ದಾವೀದನೂ ಅವನ ಜನರೂ ತೆಗೆದುಕೊಂಡು ಬಂದರು.

22ಫಿಲಿಷ್ಟಿಯರು ಇನ್ನೊಮ್ಮೆ ಹೊರಟು ಬಂದು ರೆಫಾಯೀಮ್ ತಗ್ಗಿನಲ್ಲಿ ಇಳಿದುಕೊಂಡರು.

23ದಾವೀದನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದಾಗ ಆತನು ಅವನಿಗೆ, “ನೀನು ನೇರವಾಗಿ ಹೋಗಿ ಅವರನ್ನು ಮುತ್ತಿಗೆ ಹಾಕಬೇಡ. ಅವರಿಗೆ ತಿಳಿಯದಂತೆ ಸುತ್ತಿಕೊಂಡು ಹೋಗಿ ಹಿಂಬಾಲಿಸಿ, ಬಾಕಾ ಮರಗಳಿರುವ ಕಡೆಯಿಂದ ಅವರ ಮೇಲೆ ಬೀಳು.

24ಆ ಬಾಕಾ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸುವಾಗ ಯೆಹೋವನು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕೋಸ್ಕರ ನಿನ್ನ ಮುಂದಾಗಿ ಹೊರಟನೆಂದು ತಿಳಿದು ಅವರ ಮೇಲೆ ದಾಳಿಮಾಡು” ಎಂದನು.

25ದಾವೀದನು ಯೆಹೋವನ ಆಜ್ಞಾನುಸಾರವಾಗಿ ಮಾಡಿ, ಫಿಲಿಷ್ಟಿಯರನ್ನು ಗೆಬದಿಂದ ಗೆಜೆರಿನವರೆಗೂ ಸಂಹರಿಸಿದನು.

1 ಪೂರ್ವಕಾಲವೃತ್ತಾಂತ

1 ಪೂರ್ವ 14:8–17

8ಇಸ್ರಾಯೇಲ್ಯರೆಲ್ಲರೂ ದಾವೀದನನ್ನು ಅಭಿಷೇಕಿಸಿ ಅವನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ಮುಟ್ಟಿದಾಗ ಅವರು ಅವನನ್ನು ಹಿಡಿಯುವುದಕ್ಕೆ ಹೊರಟರು. ದಾವೀದನು ಇದನ್ನು ಕೇಳಿ ತಾನೂ ಅವರನ್ನೆದುರಿಸಲು ಹೋದನು.

9ಫಿಲಿಷ್ಟಿಯರು ದೇಶದೊಳಗೆ ನುಗ್ಗಿ, ರೆಫಾಯೀಮ್ ತಗ್ಗಿನಲ್ಲಿ ಸುಲಿಗೆಮಾಡುತ್ತಿದ್ದರು.

10ದಾವೀದನು ದೇವರಾದ ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಅವರನ್ನು ನಿನ್ನ ಕೈಗೆ ಒಪ್ಪಿಸುವೆನು” ಎಂದು ಉತ್ತರ ಕೊಟ್ಟನು.

11ಅಷ್ಟರಲ್ಲಿ ಬಾಳ್ ಪೆರಾಚೀಮಿಗೆ ಬಂದ ಅವರನ್ನು ದಾವೀದನು ಸೋಲಿಸಿ, “ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆ” ಎಂದು ಹೇಳಿದ್ದರಿಂದ ಆ ಯುದ್ಧ ಸ್ಥಳಕ್ಕೆ ಬಾಳ್ ಪೆರಾಚೀಮ್ ಎಂದು ಹೆಸರಾಯಿತು.

12ಫಿಲಿಷ್ಟಿಯರು ಅಲ್ಲಿ ಬಿಟ್ಟುಹೋಗಿದ್ದ ದೇವರುಗಳನ್ನು ಸುಟ್ಟುಬಿಡುವಂತೆ ದಾವೀದನು ಅಪ್ಪಣೆ ಕೊಟ್ಟನು.

13ಫಿಲಿಷ್ಟಿಯರು ಮತ್ತೊಮ್ಮೆ ಬಂದು ಅದೇ ತಗ್ಗಿನಲ್ಲಿ ಸುಲಿಗೆಮಾಡುತ್ತಿದ್ದರು.

14ದಾವೀದನು ಪುನಃ ದೇವರ ಸನ್ನಿಧಿಯಲ್ಲಿ ವಿಚಾರಿಸಿದಾಗ ಯೆಹೋವನು ಅವನಿಗೆ, “ನೀನು ಅವರನ್ನು ಬೆನ್ನಟ್ಟಬೇಡ, ಅವರ ಎದುರುಗಡೆಯಿಂದ ದಾಳಿಮಾಡದೆ ಹಿಂತಿರುಗಿ ಹೋಗಿ ಬಾಕಾಮರಗಳಿರುವ ಕಡೆಯಿಂದ ಅವರ ಮೇಲೆ ದಾಳಿಮಾಡು.

15ಬಾಕಾಮರಗಳ ತುದಿಯಲ್ಲಿ ಹೆಜ್ಜೆಗಳ ಶಬ್ದವು ಕೇಳಿಸುವಾಗಲೇ ದೇವರು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕೋಸ್ಕರ ನಿನ್ನನ್ನು ಮುನ್ನಡೆಸುತ್ತಿದ್ದಾನೆ ಎಂದು ತಿಳಿದುಕೊಂಡು ಯುದ್ಧಕ್ಕೆ ಹೊರಡು” ಎಂದನು.

16ದಾವೀದನು ದೇವರ ಆಜ್ಞಾನುಸಾರವಾಗಿ ಮಾಡಿದನು. ಇಸ್ರಾಯೇಲರು ಫಿಲಿಷ್ಟಿಯರ ಸೈನ್ಯವನ್ನು ಗಿಬ್ಯೋನಿನಿಂದ ಗೆಜೆರಿನ ವರೆಗೂ ಸಂಹರಿಸುತ್ತಾ ಹೋದರು.

17ದಾವೀದನ ಕೀರ್ತಿಯು ಎಲ್ಲಾ ದೇಶಗಳಲ್ಲಿ ಹಬ್ಬಿತು. ಯೆಹೋವನು ಅವನಿಗೆ ಎಲ್ಲಾ ಜನಾಂಗಗಳೂ ಹೆದರಿ ನಡೆಯುವಂತೆ ಮಾಡಿದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು