ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ › ಸೌಲ ಮತ್ತು ದಾವೀದ
ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ · ಸೌಲ ಮತ್ತು ದಾವೀದ
ದಾವೀದನು ಯೆರೂಸಲೇಮನ್ನು ವಶಪಡಿಸಿಕೊಳ್ಳುತ್ತಾನೆ
2 ಸಮು 5:6–10 · 1 ಪೂರ್ವ 11:4–9
2 ಸಮು 5:6–106ದಾವೀದನು ತನ್ನ ಜನರನ್ನು ಕರೆದುಕೊಂಡು ಯೆರೂಸಲೇಮಿನಲ್ಲಿದ್ದ ದೇಶದ ಮೂಲನಿವಾಸಿಗಳಾದ ಯೆಬೂಸಿಯರಿಗೆ ವಿರೋಧವಾಗಿ ಹೊರಟನು. ಅವರು ಇವನು ಒಳಗೆ ಬರುವುದಿಲ್ಲವೆಂದು ತಿಳಿದು ದಾವೀದನಿಗೆ, “ನೀನು ಒಳಗೆ ಬರಲಾರೆ, ಕುರುಡರು ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು” ಎಂದು ಹೇಳಿದರು.
7ಅದರೂ ದಾವೀದನು ದಾವೀದನಗರ ಎನ್ನಿಸಿಕೊಳ್ಳುವ ಚೀಯೋನಿನ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು.
8ಆ ದಿನ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನು ಮತ್ತು ಕುಂಟರನ್ನು ಕಂದಕದಲ್ಲಿ ನಾಶಪಡಿಸಬೇಕು” ಎಂದು ಹೇಳಿದನು. ಆದುದರಿಂದ “ಕುರುಡರೂ ಕುಂಟರೂ ಅರಮನೆಯ ಒಳಗೆ ಬರಲಾಗದು” ಎಂಬ ಗಾದೆಯುಂಟು.
9ದಾವೀದನು ಆ ಕೋಟೆಗೆ ದಾವೀದ ನಗರವೆಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಾ, ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ, ಒಳಗಣ ಪೌಳಿಗೋಡೆಯನ್ನು ಕಟ್ಟಿಸಿದನು.
10ಸೇನಾಧೀಶ್ವರನಾದ ಯೆಹೋವ ದೇವರು ಅವನ ಸಂಗಡ ಇದ್ದುದರಿಂದ ಅವನು ಆಧಿಕ ಪ್ರಬಲಗೊಳ್ಳುತ್ತಾ ಬಂದನು.
1 ಪೂರ್ವ 11:4–94ದಾವೀದನು ಇಸ್ರಾಯೇಲರನ್ನು ಕರೆದುಕೊಂಡು ಅಂದಿನಕಾಲದಲ್ಲಿ ಯೆಬೂಸೆನಿಸಿಕೊಂಡಿದ್ದ ಯೆರೂಸಲೇಮಿಗೆ ಮುತ್ತಿಗೆ ಹಾಕಲು ಹೊರಟನು. ಆ ಪ್ರಾಂತ್ಯದ ಮೂಲನಿವಾಸಿಗಳು ಯೆಬೂಸಿಯರು.
5ಯೆಬೂಸಿಯರು ದಾವೀದನಿಗೆ, “ನೀನು ಒಳಗೆ ಬರಲು ಸಾಧ್ಯವಿಲ್ಲ” ಎಂದು ಹೇಳಿದರು. ಆದರೂ ಅವನು ದಾವೀದನಗರವೆನಿಸಿಕೊಳ್ಳುವ ಚೀಯೋನ್ ಕೋಟೆಯನ್ನು ಸ್ವಾಧೀನಮಾಡಿಕೊಂಡನು.
6ಆ ದಿನ ದಾವೀದನು ತನ್ನೊಂದಿಗೆ ಬಂದಿದ್ದ ಇಸ್ರಾಯೇಲರನ್ನು ಕುರಿತು “ಯಾರು ಯೆಬೂಸಿಯರನ್ನು ಮೊದಲು ಸೋಲಿಸುವನೋ ಅವನು ದಳಾಧಿಪತಿ ಆಗುವನು” ಎಂದು ಹೇಳಿದನು. ಚೆರೂಯಳ ಮಗನಾದ ಯೋವಾಬನು ಮೊದಲು ದಾಳಿ ಮಾಡಿದ್ದರಿಂದ ಅವನೇ ದಳಾಧಿಪತಿ ಆದನು.
7ದಾವೀದನು ಆ ಕೋಟೆಯನ್ನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದರಿಂದ ಅದಕ್ಕೆ ದಾವೀದನಗರ ಎಂದು ಹೆಸರಾಯಿತು.
8ಅವನು ಮಿಲ್ಲೋವಿನಿಂದ ಪ್ರಾರಂಭಿಸಿ ಸುತ್ತಲೂ ಪಟ್ಟಣವನ್ನು ಭದ್ರಪಡಿಸಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಭದ್ರಪಡಿಸಿದನು.
9ಸೇನಾಧೀಶ್ವರನಾದ ಯೆಹೋವನು ದಾವೀದನ ಸಂಗಡ ಇದ್ದುದರಿಂದ ಅವನು ಅಭಿವೃದ್ಧಿಯಾಗುತ್ತಾ ಹೋದನು.
ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.